ವಿಷಯದ ವಿವರಗಳಿಗೆ ದಾಟಿರಿ

Archive for

21
ಏಪ್ರಿಲ್

ದೀಪ. ಭಾಗ-೧

– ವಿಜಯ್ ಹೂಗಾರ್

ಸುಳಿಗಾಳಿಯಿಂದ ಹಗುರಾಗಿ ತೇಲಿದ ಮಣ್ಣು ಬಿಸಿಲಿನ ಪ್ರಭೆಗೆ ಮೊನಚಾಗಿ ಇಡೀ ಊರನ್ನ ಸಿಂಪಡಿಸಿದಂತೆ ಆವರಿಸಿತ್ತು.ಅಲ್ಲಲ್ಲಿ ತಲೆಯೆತ್ತಿದ ಮರಗಳು ತುಂಡು ತುಂಡಾಗಿ ನೆಲವನ್ನು ನೇವರಿಸುವಂತೆ ಬೇರುರಿದ್ದವು.ಊರ ಮಧ್ಯ ನಡುಗಡ್ದೆಯಂತೆ ಇರುವ ದೈತ್ಯ ಬೆಟ್ಟದ ಸುತ್ತಲೂ ಹರಿಯದ ನೀರಿನಂತೆ ಹರಿದ ಮನೆಗಳು ಕಲಸುಮೇಲೋಗರವಾಗಿ ಹರಡಿಕೊಂಡಿದ್ದವು.ಬೆಟ್ಟದ ಮೇಲೆ ಊರ ಕಾಯೋ ಪಹರೆದಾರನಂತೆ ಲಕ್ಷ್ಮಿ ದೇವತೆ ಭಕ್ತರ ಸೇವೆ ಸ್ವೀಕರಿಸುತ್ತಾ ವಾಸವಾಗಿದ್ದಳು.ಬೆಟ್ಟದ ಅಪರಭಾಗದಲ್ಲಿ ಬೀಕೋ ಅನ್ನುತ್ತಿರುವ ಬತ್ತಿ ಹಗುರಾದ ಕೆರೆ, ಆಡಿ ಹೋದ ಪುಟ್ಟ ಮಕ್ಕಳ ಹೆಜ್ಜೆಯ ಬರೆದಿಡುವ ಕಾಗದದಂತಿತ್ತು.ಬಿಸಿಲಿನ ಹೊಳೆಗೆ ತಟಸ್ಥವಾಗಿ ನಿಂತಿರುವ ಬೆವತ ಮನೆಗಳು ಶೋಕಸಾಗರದಲ್ಲಿ ಕಳೆದುಹೋದಂತೆ ಶಾಂತವಾಗಿದ್ದವು.

ಕಮಲಜ್ಜಿಗೆ ವಯಸ್ಸಾದರೂ ಈಗಲೂ ಚೂಟಿಯಾಗಿ ವಯಸ್ಸಿನ ಹುಡುಗಿಯರು ನಾಚುವಂತೆ ಕೆಲಸ ಮಾಡುತಿದ್ದಳು. ಮಗಳಮಗ ಹನುಮಂತನ ಮದುವೆಯಾಗಿ ಐದು ಸಂವತ್ಸರ ಕಳೆದರು ಮಕ್ಕಳಾಗಲಿಲ್ಲ ಅಂತ ತುಂಬಾ ಬೇಸರಿಸಿದ್ದಳು. ಮುತ್ತಜ್ಜಿಯಾಗಿ ಮರಿ ಮೊಮ್ಮಗನನ್ನು ಆಡಿಸಬೇಕೆಂದು ಬಲು ಆಸೆಯಿಂದ ಹನುಮಂತನ ಮದುವೆಯಾದ ಹೊಸತರಲ್ಲಿ ನವದಂಪತಿಗಳಿಗೆ ಖಾಸಗಿ ಕೋಣೆಯಲ್ಲಿ ಖಾಸಗಿಯಾಗಿ ಬಿಟ್ಟು ಕೊಟ್ಟಿಗೆಯಲ್ಲಿ ಇರುವ ಚಿಕ್ಕ ಕೋಣೆಯಲ್ಲಿ ಎಷ್ಟೋ ದಿವಸ ಒಬ್ಬಳೇ ಮಲಗಿದ್ದಳು.ಅದರಿಂದ ಫಲ ಕಾಣದೆ ಹೋದಾಗ ಪ್ಯಾಟೆಯಲ್ಲಿರುವ ದೊಡ್ಡ ಮಗ ರಾಮಪ್ಪನ ಹತ್ತಿರ ‘ಸೊಸೆಯನ್ನ ನೋಡಬೇಕೆನಿಸಿತು’ ಅಂತ  ಹೇಳಿ ಪದೇ ಪದೇ ಹೋಗಿ ಬರುತ್ತಿದ್ದಳು.’ಈ ಕೈಯ್ಯಾಗ ಎಷ್ಟು ಬಾಣಂತನ ಮಾಡಿಲ್ಲ ಲಕ್ಷ್ಮಿಯಕ್ಕ,ಆದರ ನಮ್ಮ ದೇವಕಿಯ (ಹನುಮಂತನ ಹೆಂಡತಿ) ಬಾಣಂತನ ನನ್ನ ಕೈಯಾರ ಮಾಡಬೇಕೆಂಬುದು ಬಕ್ಕುಳ್ ಆಸೆ ಆಗ್ಯದ ನೋಡು’ ಅಂತ ತನ್ನ ಸಂಕಟದ ಆಶಯ ಲಕ್ಷ್ಮಿಯಕ್ಕನ ಮುಂದೆ ತೋಡಿಕೊಳ್ಳುತ್ತಿದ್ದಳು.ಪರಾಗಸ್ಪರ್ಷದ ಅಮೃತ ಘಳಿಗೆಯ ಕಾಯುವ ಹೂವಾಡಗಿತ್ತಿಯಂತೆ ದೇವಕಿಯಿಂದ ಹೂವಿನಂಥ ಮಗು ಬಯಸುತ್ತಿದ್ದಳು.ಇವಳ ಕೊನೆಗಾಣದ ಕೊರಗು ಕಂಡು ಕಮಲಜ್ಜಿಯ ಗಂಡ ಪೂಜಾರಪ್ಪ ಮಾತ್ರ “ಸ್ವಲ್ಪ ದಮ್ ತಿನು,ಬಿತ್ತಿದ ಪ್ರತಿವರ್ಷ ಬೆಳೆ ಚನ್ನಾಗಿ ಬರಬೇಕು ಅಂತೇನಿಲ್ಲ….ಕೆಲವೊಂದುಸಲ ಮಳೆ ಬಿದ್ದಿಲ್ಲ ಅಂದ್ರೆ ಬಿತ್ತಿದೆಲ್ಲ ಲುಕ್ಸಾನು ಆಗ್ತದ” ಅಂತ ಸಮಾಧಾನ  ಮಾಡ್ತಿದ್ದ.ಅದಕ್ಕೆ ಕಮಲಜ್ಜಿ “ಹು ಲುಕ್ಸಾನ ಯಾಕ ಆಗ್ತದ,ಮಳಿ ಬರಾದ ನೋಡೇ ಬಿತ್ತೊಕೆನಾಗ್ತದ” ಅಂತ ಹೌಹಾರುತ್ತಿದ್ದಳು.

Read more »