ವಿಷಯದ ವಿವರಗಳಿಗೆ ದಾಟಿರಿ

Archive for

8
ಏಪ್ರಿಲ್

ಮಂಕು ತಿಮ್ಮನ ಕಗ್ಗ – ರಸಧಾರೆ (೨೩)

ರವಿ ತಿರುಮಲೈ 

ಲೋಕಜೀವನ ಮಂಥನ

ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು 
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು 
ಮರಳಿ ಕೊರಗಾಡುವುದು, ಕೆರಳುವುದು ನರಳುವುದು 
ಇರವಿದೇನೊಣರಗಳೇ? – ಮಂಕುತಿಮ್ಮ 
 
ತಿರು ತಿರುಗಿ ತೊಳಲುವುದು ತಿರಿದು ಅನ್ನವನ್ನು ಉಣ್ಣುವುದು ಮೆರೆದು ಮೈ ಮರೆಯುವುದು ಹಲ್ಲ ಕಿರಿಯುವುದು. 
ಮರಳಿ ಕೊರಗಾಡುವುದು ಕೆರಳುವುದು ನರಳುವುದು ಇರವು ಇದೇನು ಒಣ ರಗಳೇ? ಮಂಕು ತಿಮ್ಮ 
 
ತಿರುದು= ಬಿಕ್ಷೆಯತ್ತಿ , ಉಣ್ಣುವುದು= ತಿನ್ನುವುದು, ಕೆರಳುವುದು= ಕೋಪಗೊಳ್ಳುವುದು, ರಗಳೆ= ಪರದಾಟ.   
 
ಮತ್ತೆ ಮತ್ತೆ ಮನುಷ್ಯ ಪರದಾಡುವುದು, ನಾವು ಎಲ್ಲ ಕಡೆಯೂ ಕಾಣಬಹುದು. ಪರದಾಡಿ ಅವರಿವರನ್ನು ಕಾಡಿ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವುದು. ಪಡೆದದ್ದು ಹೆಚ್ಚಾದರೆ ಮೆರೆದು ಅಹಂಕಾರ ತೋರಿಸುವುದು. ತಮ್ಮನ್ನು ತಾವು, ಬಹಳ ಸಾಧಿಸಿದೆವೆಂದು ಅಹಂಕಾರದಿಂದ ಮೆರೆಯುವುದು., ಪಡೆದದ್ದನ್ನು ಉಳಿಸಿಕೊಳ್ಳಲು ಅವರಿವರ ಮುಂದೆ ಹಲ್ಲು  ಕಿರಿಯುವುದು, ಗಿಂಜುವುದು, ಬೇಡುವುದು ನಾವು ಸರ್ವೇ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣುತ್ತೇವೆ. ತಾವು ಅಂದುಕೊಂಡದ್ದು ಸಿಗದಿದ್ದ್ದರೆ ಕೋಪಗೊಳ್ಳುವುದು,ಹಾಗೂ ಸಿಗದಿದ್ದರೆ, ಕೈಲಾಗತನದಿಂದ ಸಂಕಟಪಡುವುದು ಅಥವಾ ನರಳುವುದು, ಇದನೆಲ್ಲಾ ಮಾನ್ಯ ಡಿ.ವಿ.ಜಿ.ಯವರು ಸತ್ವವಿಲ್ಲದ ಒಣ ರಗಳೆ ಅಥವಾ ಸತ್ವವಿಲ್ಲದ ಜೀವನದ ಪರಿ ಎಂದು ಈ ಕಗ್ಗದಲ್ಲಿ ಸೂಚ್ಯವಾಗಿ ಹೇಳುತ್ತಾರೆ. 
 
ಹೊಟ್ಟೆಪಾಡಿಗಾಗಿಯೇ ಮತ್ತೆ ಮತ್ತೆ ಪರದಾಡುವುದು, ನಮಗೆ ಸೂಕ್ತವೋ ಅಲ್ಲವೋ , ನಾವು ಇಷ್ಟಪಟ್ಟು ಮಾಡುವ ಕೆಲಸವೋ ಅಲ್ಲವೋ, ಆ ಕೆಲಸದಲ್ಲಿ ನಮಗೆ ತೃಪ್ತಿ ಸಿಗುತ್ತದೆಯೋ ಇಲ್ಲವೋ, ಇವೆಲ್ಲವನ್ನೂ ಪರಿಗಣಿಸದೆ ಮಾತ್ರ ಉದರ ಫೋಷಣೆಗಾಗಿಯೇ ಕೆಲಸ ಮಾಡುವುದು. ಇದು ಅವಶ್ಯಕವೇ ಹೌದು. ಆದರೆ ಹೀಗೆ ಮಾಡುವ ಕೆಲಸದಲ್ಲಿ ಒಂದು ಉತ್ಸಾಹವಿಲ್ಲದೆ, ತೃಪ್ತಿಯಿಲ್ಲದೆ, ಕೇವಲ  ಯಾಂತ್ರಿಕವಾಗಿ ನಾವು ನಮ್ಮ ಕೆಲಸಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಗುಣಕ್ಕೆ,  ನಮ್ಮ ಸ್ವಭಾವಕ್ಕೆ ಹೊಂದುವ ಕೆಲಸ ನಾವು ಮಾಡಬೇಕೆಂದರೂ, ಆಗದೆ ಕೇವಲ  ಹೊಟ್ಟೆಪಾಡಿಗಾಗಿ ಕೆಲಸಮಾಡುತ್ತ ರಸಾನುಭವವಿಲ್ಲದೆ, ನೀರಸವಾದ ಜೀವನಮಾದುತ್ತೇವೆ. ಅದನ್ನೇ ಒಣ ರಗಳೆ ಎಂದು ಗುಂಡಪ್ಪನವರು ಹೇಳುತ್ತಾರೆ. 

” ಉದರ ವೈರಾಗ್ಯವಿದು  ” ಎಂದು ಹೇಳುವ ಪುರಂಧರ ದಾಸರ ಪದದಲ್ಲಿನ ಅಂತರ್ಯವೂ ಇದೆ ಆಗಿರುತ್ತೆ. ಹೀಗೆ ಹೊಟ್ಟೆಪಾಡಿಗಾಗಿ ಕೆಲಸಮಾಡುವಾಗ , ನಮಗೆ ಬೇಸರ, ಕೋಪ, ದ್ವೇಷ ಅಸೂಯೆ ಮುಂತಾದವುಗಳೆಲ್ಲ ಮನಸ್ಸಿಗೆ ಬಂದು ಒಂದು ರಸಾನುಭಾವವಿಲ್ಲದೆ ಅತೃಪ್ತಿಯ ಭಾವನೆಯೇ ಇರುವುದು ಹಾಗಾಗಿ ಈ ಜೀವನವೆಲ್ಲ ಒಂದು  ಒಣ ರಗಳೆ ಎಂದು ಹೇಳುತ್ತಾರೆ. 

ಇದು ಹೀಗೆ ಎಲ್ಲರಿಗೂ ಇರುವುದಿಲ್ಲ. ತಮ್ಮ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡುವವರೂ ತಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಆಸಕ್ತಿ ತನ್ಮಯತೆ ಮತ್ತು ತೃಪ್ತಿಯನ್ನು ಕಂಡುಕೊಳ್ಳುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಬಹಳ ಸಂಖ್ಯೆಯ  ಜನ, ಶ್ರೀ ಗುಂಡಪ್ಪನವರು ಹೇಳುವ ಹಾಗೆ  ನೀರಸವಾದ ಜೀವನವನ್ನೇ ನಡೆಸುತ್ತಾರೆ. ನಾವೂ ಸಹ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳಬಹುದೇನೋ ಎಂದು ಆಲೋಚಿಸುತ್ತಾ…………….

ಮುಂದಿನ ಕಗ್ಗಕ್ಕೆ ಹೋಗೋಣ,

 
ಇಂದಿನ ದಿನ ಎಲ್ಲರಿಗೂ ಶುಭವಾಗಲಿ
 
***************************************************