ಕಾನೂನಿನಂಗಳ ೧ : ಕಾನೂನಿನ ಸ್ವರೂಪ
– ಉಷಾ ಐನಕೈ ಶಿರಸಿ
ಪ್ರತೀ ಮನುಷ್ಯ ಹುಟ್ಟುವಾಗಲೇ ಆತನಿಗೆ ಅರಿವಿಲ್ಲದೇ ಹಲವಾರು ರೀತಿಯ ಕಾನೂನು ವ್ಯಾಪ್ತಿಗೆ ಸೇರಿಬಿಡುತ್ತಾನೆ. ಅದನ್ನು ಬೇಕಾದರೆ ಧರ್ಮ ಅನ್ನೋಣ. ನೈಸರ್ಗಿಕ ಕಾನೂನು ಅನ್ನೋಣ ಅಥವಾ ಪ್ರಭುತ್ವ ನಿಗದಿಪಡಿಸಿದ ಕಾನೂನು ಎಂದು ಕರೆಯೋಣ. ಒಟ್ಟಿನಲ್ಲಿ ಮನುಷ್ಯನಿಗೆ ಕಾನೂನಿನ ಆಶ್ರಯ ಬೇಕೇಬೇಕು. ಏಕೆಂದರೆ ಮನುಷ್ಯ ಸಂಘಜೀವಿ. ಅಷ್ಟೇ ಅಲ್ಲ, ಜೀವಿಗಳಲ್ಲೇ ಅತ್ಯಂತ ವಿಶಿಷ್ಟವಾದ ಮೆದುಳನ್ನು ಹೊಂದಿದ ಬುದ್ಧಿವಂತ ಈ ಮನುಷ್ಯ. ಇಂಥ ಮನುಷ್ಯರು ಸಾಮೂಹಿಕವಾಗಿ ಬಾಳಬೇಕಾದರೆ ಅದಕ್ಕೊಂದು ಚೌಕಟ್ಟು ಬೇಕು. ನಿಯಮಾವಳಿ ಬೇಕು. ಮಾರ್ಗದರ್ಶಿ ತತ್ವಗಳು ಬೇಕು. ಇದರಿಂದ ಇಡೀ ಸಮುದಾಯ ಆರೋಗ್ಯಕರವಾಗಿ ಪ್ರಗತಿಯತ್ತ ಸಾಗಲು ಸಾಧ್ಯ. ಹೀಗೆ ಮನುಷ್ಯ ಸಮೂಹವನ್ನು ನಿಯಂತ್ರಿಸಲು, ಚಾಲನೆಗೆ ತರಲು ಸೃಷ್ಟಿಸಿಕೊಂಡ ಚೌಕಟ್ಟನ್ನೇ ನಾವು ಕಾನೂನು ಎನ್ನಬಹುದು.
ಕಾನೂನು ಮನುಷ್ಯನಿಗೆ ಹಕ್ಕನ್ನು ನೀಡುತ್ತದೆ. ಹಕ್ಕಿಗೆ ಪ್ರತಿಯಾಗಿ ಕೆಲವು ಕರ್ತವ್ಯಗಳನ್ನು ಸೂಚಿಸುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳೇ ಮನುಷ್ಯನ ಆತ್ಮಗೌರವ, ಸದ್ವಿನಯ, ಪರೋಪಕಾರ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಸೃಷ್ಟಿಸುತ್ತವೆ ಮತ್ತು ನಿರ್ದೇಶಿಸುತ್ತವೆ.
ಕಾನೂನು ಎಂದರೆ ಏನು ಎನ್ನುವ ಪ್ರಶ್ನೆಗೆ ನಿಖರವಾದ ಒಂದು ವ್ಯಾಖ್ಯೆಯನ್ನು ಕೊಡುವುದು ಕಷ್ಟ. ಕಾನೂನು ಅನ್ನುವ ಪದ ಸರಳವಾಗಿ ಕಂಡರೂ ಅದರ ಅರ್ಥವ್ಯಾಪ್ತಿ ಬಹುವಿಸ್ತಾರವಾಗಿದೆ. ಹಾಗಾಗಿ ಮನುಷ್ಯನ ಹಕ್ಕು ಮತ್ತು ಕರ್ತವ್ಯಗಳ ಮೂಲಕವೇ ಕಾನೂನುಗಳನ್ನು ಅರ್ಥೈಸಿಕೊಳ್ಳುತ್ತ ಹೋಗಬೇಕು.