ವಿಷಯದ ವಿವರಗಳಿಗೆ ದಾಟಿರಿ

ಜೂನ್ 30, 2015

1

ಸೀಯೆನ್ನಾರ್ ನೆನಪಿನ ಬುತ್ತಿ ಆ(ಹಾ) ದಿನಗಳು!

‍ನಿಲುಮೆ ಮೂಲಕ

ಮೂಲ: ಸಿ.ಎನ್.ಆರ್.ರಾವ್
ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಸಿ.ಎನ್.ಆರ್.ರಾವ್ನನ್ನ ಬಾಲ್ಯದ ಜೀವನದಲ್ಲಿ ತುಂಬ ಪ್ರಭಾವ ಬೀರುವಂತಹ ಕೆಲ ಸಂಗತಿಗಳು ನಡೆದವು. ನನ್ನ ತಂದೆತಾಯಿಯರಿಗೆ ಆಚಾರ್ಯ ಮಧ್ವರ ಮೇಲೆ ಅಪಾರವಾದ ಭಕ್ತಿ-ವಿಶ್ವಾಸ ಇತ್ತು. ಮಾಧ್ವತತ್ವ ಮನುಷ್ಯನ ಜೀವನಕ್ಕೆ ಸರಿಯಾದ ದಾರಿ ತೋರಿಸುತ್ತದೆ ಅಂತ ನನ್ನ ತಂದೆ ಹೇಳ್ತಿದ್ದರು. ಮಧ್ವಾಚಾರ್ಯರ ಪ್ರಕಾರ – ಎರಡು ಜಗತ್ತುಗಳಿವೆ. ಒಂದು ಅಧ್ಯಾತ್ಮಿಕ ಜಗತ್ತು, ಇನ್ನೊಂದು ಲೌಕಿಕ ಜಗತ್ತು. ದೈವಚಿಂತನೆ ಮಾಡುತ್ತ ಅಧ್ಯಾತ್ಮದಲ್ಲಿ ಉನ್ನತಿ ಪಡೆಯುವುದು ಎಷ್ಟು ಮುಖ್ಯವೋ, ನಮ್ಮ ಇಹಲೋಕದ ಜೀವನದಲ್ಲಿ ಇದ್ದುಕೊಂಡೆ ಜನತಾಜನಾರ್ದನನ ಸೇವೆ ಮಾಡುವುದು ಕೂಡ ಅಷ್ಟೇ ಮುಖ್ಯ ಅನ್ನುತ ಸರಳ ತತ್ವ ಅದು. ಮಧ್ವರ ಈ ವಿಚಾರಧಾರೆ ನನ್ನ ಮೇಲೆ ಪ್ರಭಾವ ಬೀರಿತು ಎಂದು ಹೇಳಬಹುದು.

ಪ್ರಾಥಮಿಕ ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ನಾನು ಶಾಲೆಗೆ ಹೋಗಲಿಲ್ಲ! ಆಗ ನನಗೆ ಮನೆಯೇ ಶಾಲೆ, ತಾಯಿಯೇ ಗುರು. ಆಕೆ ಒಬ್ಬ ಒಳ್ಳೆಯ ಶಿಕ್ಷಕಿಯೂ ಆಗಿದ್ದಳು ಅಂತ ನಾನಂದುಕೊಂಡಿದ್ದೇನೆ. ದೊಡ್ಡ ಗಣಿತಸಮಸ್ಯೆಗಳನ್ನು, ಕ್ಲಿಷ್ಟವಾದ ಗುಣಾಕಾರಗಳನ್ನೆಲ್ಲ ಮನಸ್ಸಲ್ಲೇ ಮಾಡುತ್ತಿದ್ದ ಗಟ್ಟಿಗಿತ್ತಿ ಅವಳು. ನನಗೆ ಏಳೆಂಟು ವರ್ಷವಾಗಿದ್ದಾಗ, ಅವಳ ಬಾಯಿಂದಲೇ ರಾಮಾಯಣ, ಮಹಾಭಾರತದಂತಹ ಮಹಾಕಥಾನಕಗಳನ್ನೆಲ್ಲ ಕೇಳಿ ತಿಳಿದು ಮರುಪಾಠ ಒಪ್ಪಿಸುವುದನ್ನು ರೂಡಿಸಿಕೊಂಡಿದ್ದೆ. ಓರಗೆಯ ಹುಡುಗರಂತೆ ನನಗೆ ಮೈದಾನಕ್ಕೆ ಹೋಗಿ ಮೈಕೈ ಎಲ್ಲ ಮಣ್ಣು ಮೆತ್ತಿಕೊಂಡು ಆಡಿಕೊಂಡು ಬರುವುದು ಅಷ್ಟೇನೂ ಆಸಕ್ತಿ ಹುಟ್ಟಿಸುತ್ತಿರಲಿಲ್ಲ.

ಒಂದೆರಡು ವರ್ಷಗಳಾದ ಮೇಲೆ ಶಾಲೆ ಸೇರಿದೆ. ತರಗತಿಯಲ್ಲಿ ನನ್ನ ಜೊತೆ ಕಲಿಯುವವರೆಲ್ಲ ವಯಸ್ಸಿನಲ್ಲಿ, ಗಾತ್ರದಲ್ಲಿ ನನಗಿಂತ ದೊಡ್ಡವರೇ ಆಗಿದ್ದರು. ಆದರೆ ಅದಕ್ಕಾಗಿ ಮುಜುಗರ, ನಾಚಿಕೆ ಪಡುವ ಅಗತ್ಯ ನನಗೆ ಕಾಣಲಿಲ್ಲ. ಅವಶ್ಯಕತೆ ಬಿದ್ದಾಗೆಲ್ಲ ಅವರೇ ನನ್ನ ಬಳಿ ಬಂದು ಇಂಗ್ಲೀಷ್ ಮತ್ತು ಗಣಿತದ ಕಷ್ಟಭಾಗಗಳ ಅರ್ಥ ತಿಳಿದುಕೊಂಡು ಹೋಗುತ್ತಿದ್ದರು. ನಾನಾಗ ಹೆಚ್ಚು ಸಮಯ ಕಳೆಯುತ್ತಿದ್ದದ್ದು ಪಟ್ಟಾಂಗ ಹೊಡೆಯುವುದರಲ್ಲಿ. ಸಂಜೆವೇಳೆಗೆ ಮನೆಯ ಹತ್ತಿರ ಗೆಳೆಯರನ್ನು, ನೆರೆಹೊರೆಯ ನನ್ನ ವಯೋಮಾನಕ್ಕೆ ಹೊಂದುವ ಮಕ್ಕಳನ್ನು ಕೂರಿಸಿಕೊಂಡು ಹರಟೆ ಹೊಡೆಯುವುದರಲ್ಲಿ ಎತ್ತಿದ ಕೈ ಆಗಿದ್ದೆ. ಆದರೆ ಈ ವಾಚಾಳಿತನ ಅಧ್ಯಯನದ ಶಿಸ್ತಿಗೆ ತೊಡಕಾಗಲಿಲ್ಲ ಅನ್ನುವುದೇ ಸಂತೋಷದ ವಿಷಯ. ಕೊನೆಗೆ 1944ರಲ್ಲಿ ಲೋವರ್ ಸೆಕೆಂಡರಿ (ಈಗಿನ ಏಳನೇ ತರಗತಿ)ಯನ್ನು ಫಸ್ಟ್‍ಕ್ಲಾಸಿನಲ್ಲಿ ಪಾಸು ಮಾಡಿದೆ. ಖುಷಿಯಾದ ಅಪ್ಪ ನನ್ನ ಕೈಯಲ್ಲಿ ನಾಕಾಣೆ ಇಟ್ಟು ಎಮ್‍ಟಿಆರ್‍ನಲ್ಲಿ ಐಸ್‍ಕ್ರೀಂ ತಿನ್ನಲು ಕಳಿಸಿದರು! ನನ್ನ ಅಜ್ಜಿಯ ಅತ್ತೆ ಸುಂದರಕ್ಕ ಆಗಿನ ಕಾಲಕ್ಕೆ ದೊಡ್ಡ ಭಕ್ಷೀಸು ಎನ್ನಬಹುದಾದ ಒಂದು ರೂಪಾಯಿಯನ್ನು ನನ್ನ ಕೈಲಿಟ್ಟಾಗ ಖುಷಿಯಿಂದ ಮೂರ್ಛೆಹೋಗುವಂತಾಗಿತ್ತು ನನಗೆ!

ಅದಾಗಿ ಹೈಸ್ಕೂಲ್ ಸೇರಬೇಕಾದಾಗ ನನ್ನೆದುರು ಎರಡು ಆಯ್ಕೆಗಳಿದ್ದವು. ಕನ್ನಡ ಮತ್ತು ಇಂಗ್ಲೀಷ್. ಆದರೆ, ಮಾತೃಭಾಷೆಯಲ್ಲೇ ಮಗುವಿನ ಶಿಕ್ಷಣ ಆಗಬೇಕು ಎನ್ನುವುದನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ತಂದೆಗೆ ಇದೊಂದು ಆಯ್ಕೆಯ ಸಮಸ್ಯೆ ಅಂತ ಅನ್ನಿಸಲೇ ಇಲ್ಲ! ಅವರು ನೇರವಾಗಿ ನನ್ನನ್ನು ಕನ್ನಡಶಾಲೆಗೆ ಹಾಕಿಬಿಟ್ಟರು! ಮಗನಿಗೆ ಕೀಳರಿಮೆ ಕಾಡಬಾರದು ಎಂದು ಬಹಳ ಎಚ್ಚರ ವಹಿಸುತ್ತಿದ್ದ ಅಪ್ಪ ಮನೆಯಲ್ಲಿ ನನ್ನ ಜೊತೆ ಇಂಗ್ಲೀಷಿನಲ್ಲಿ ಮಾತಾಡುತ್ತ ಎರಡೂ ಭಾಷೆಗಳಲ್ಲಿ ಪ್ರಭುತ್ವ ಬರಲು ಸಹಾಯ ಮಾಡಿದರು. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನ ಉದ್ಯೋಗದ ದೆಸೆಯಿಂದ ನಾವು ಒಂದೆರಡು ವರ್ಷಗಳಿಗೊಮ್ಮೆ ವರ್ಗವಾಗಿ ಮನೆಮಠಗಳನ್ನು ಬದಲಿಸಬೇಕಾಗುತ್ತಿತ್ತು. ವರ್ಗಾವಣೆಯ ಕಾರಣದಿಂದಾಗಿ ಅವರು ಹೋದಲ್ಲೆಲ್ಲ ಬಿಡಾರ ಹೂಡಿದ ನಾನು ಬಾಲ್ಯದಲ್ಲೇ ಚಿಕ್ಕಮಗಳೂರು ಮತ್ತು ಶಿವಮೊಗ್ಗಗಳನ್ನು ನೋಡಿದೆ. ಬೆಂಗಳೂರ ಕಡೆಯ ಬಯಲುಪ್ರದೇಶದಿಂದ ಹೋದ ನನಗೆ ಹಚ್ಚಹಸಿರಿಂದ ತೊಯ್ದೇಳುತ್ತಿದ್ದ ಮಲೆನಾಡನ್ನು ಮೊದಲ ಬಾರಿಗೆ ಕಣ್ತುಂಬಿಕೊಂಡಾಗ ಆದ ಆನಂದ ಹೇಳಲು ಪದಗಳೇ ಇಲ್ಲ. ಅಪ್ಪನೊಂದಿಗೆ ಕಾಡುಗುಡ್ಡಗಳಲ್ಲಿ ಮೈಲಿಗಟ್ಟಲೆ ನಡೆಯುವುದೆಂದರೆ ನನಗೆ ಪಂಚಪ್ರಾಣ. ಆನೆ, ಕರಡಿ, ಹುಲಿಗಳನ್ನು ಅವುಗಳ ಆವಾಸದಲ್ಲೆ ನೋಡುವ ಅವಕಾಶ ಸಿಕ್ಕಿತು.

ಹೈಸ್ಕೂಲಿನ ವಿದ್ಯಾಭ್ಯಾಸದಲ್ಲಿ ಏನೇನೂ ತೊಡಕುಗಳಿರಲಿಲ್ಲ. ಶಿವರುದ್ರಪ್ಪ, ಪಿ.ಎನ್.ನಾರಾಯಣ ರಾವ್, ಎಸ್.ಕೃಷ್ಣಮೂರ್ತಿ ಮುಂತಾದ ಅಪ್ರತಿಮ ವಿಜ್ಞಾನಶಿಕ್ಷಕರಿಂದಾಗಿ ನನಗೆ ರಸಾಯನಶಾಸ್ತ್ರದಲ್ಲಿ ಅಭಿರುಚಿ ಹತ್ತಿತು. ಅವರು ಅಂದೊಮ್ಮೆ ತರಗತಿಯೊಳಗೆ ಮಾಡಿ ತೋರಿಸುತ್ತಿದ್ದ ಹತ್ತುಹಲವಾರು ಪ್ರಯೋಗಗಳು ಕಣ್ಣಮುಂದೆ ಈಗಷ್ಟೇ ನಡೆಯುತ್ತಿರುವಂತೆ ಹಚ್ಚಹಸುರಾಗಿದೆ. ಇವರೆಲ್ಲ ನನ್ನ ಜೀವನವನ್ನು ರೂಪಿಸಿದ ಪ್ರಮುಖ ಶಿಲ್ಪಿಗಳು ಎಂದೇ ಹೇಳಬೇಕು.

ಹೈಸ್ಕೂಲಿನಲ್ಲಿದ್ದಾಗ, ವಿಜ್ಞಾನದ ಹೊರತಾಗಿ ಬೇರೆ ಚಟುವಟಿಕೆಗಳಲ್ಲೂ ಮುಂದಿದ್ದೆ. ಚರ್ಚಾಕೂಟಗಳಲ್ಲಿ ಭಾಗವಹಿಸುವುದೆಂದರೆ ಸ್ವತಃ ಮಾತುಗಾರನಾದ ನನಗೆ ಪ್ರಿಯವಾದ ಕೆಲಸ. ಕನ್ನಡ ಮತ್ತು ಇಂಗ್ಲೀಷ್ – ಎರಡರಲ್ಲೂ ಪ್ರಬಂಧಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಕನ್ನಡ ನಾಟಕದಲ್ಲಿ ಪಾರ್ಟು ಹಾಕುತ್ತಿದ್ದೆ. ಶಾಲೆ ಓದುತ್ತಿದ್ದಾಗ ಅಂಟಿಕೊಂಡ ಇನ್ನೊಂದು ಗೀಳು ಅಂದರೆ ಕನ್ನಡ ಸಾಹಿತ್ಯದ್ದು. ಎತ್ತ ನಿಂತು ಕವಣೆ ಬೀಸಿದರೂ ಅದು ಹೋಗಿ ಸಾಹಿತಿಯ ಮನೆಮಾಡಿಗೆ ಬಡಿಯುತ್ತದೆ ಅನ್ನುವಂತಿದ್ದ ಬಸವನಗುಡಿಯಲ್ಲಿ ಹುಟ್ಟಿ ಬೆಳೆದದ್ದೂ ಅದಕ್ಕೆ ಕಾರಣವಿರಬಹುದು. ಅಲ್ಲದೆ ನನ್ನ ತಾಯಿಗೆ ಓದುವುದರಲ್ಲಿ ಅಮಿತ ಆಸಕ್ತಿ ಇತ್ತು. ಅದೇ ರಕ್ತಗುಣ ನನಗೂ ಬಂದಿರಬೇಕು. ಎಷ್ಟೋ ಸಲ ನಾವಿಬ್ಬರೂ ಜತೆಯಾಗಿ ಕೂತು ಕನ್ನಡಪುಸ್ತಕಗಳನ್ನು ಓದುತ್ತ, ಅಲ್ಲಲ್ಲಿ ಬರುವ ಸುಂದರಭಾಗಗಳನ್ನು ಚರ್ಚಿಸುತ್ತ ರಸಗ್ರಹಣ ಮಾಡುತ್ತಿದ್ದೆವು. ಹನ್ನೊಂದರ ಪುಟಾಣಿಯಾಗಿದ್ದಾಗ ದೊಡ್ಡ ಕವಿಯಂತೆ ನನಗೂ ಹುಕ್ಕಿ ಬಂದು ಒಂದು ಪದ್ಯ ಬರೆದು ಭಂಡಧೈರ್ಯದಿಂದ ಗವೀಪುರದಲ್ಲಿದ್ದ ಮಾಸ್ತಿಯವರ ಮನೆಗೆ ಓಡಿದೆ. ಇದನ್ನು ನಿಮ್ಮ ಜೀವನ ಪತ್ರಿಕೆಯಲ್ಲಿ ಪ್ರಕಟಿಸಿ ಅಂತ ದುಂಬಾಲು ಬಿದ್ದೆ! ಅದನ್ನು ಸಾದ್ಯಂತ ಓದಿನೋಡಿ (ಬಹುಶಃ ನನ್ನ ಎಳಸು ಭಾಷೆಗೆ ಒಳಗೊಳಗೆ ಮುಸಿಮುಸಿ ನಗುತ್ತ) “ಈ ಪದ್ಯ ಚಿಕ್ಕದಾಯ್ತಲ್ಲೊ! ನೀನಿನ್ನೂ ಬೆಳೆದು ಒಂದು ದೊಡ್ಡ ಪದ್ಯ ಬರೆದುತಂದಾಗ ಅದನ್ನು ಖಂಡಿತಾ ಪ್ರಕಟಿಸುತ್ತೇನೆ” ಎಂದು ಮಗುಮನಸ್ಸಿಗೆ ನೋವಾಗಬಾರದೆಂಬ ಭೂತದಯೆಯಿಂದ ತಲೆನೇವರಿಸಿ ಮಾತಾಡಿಸಿ ಕಳಿಸಿದರು.

ಶಾಲೆಯ ದಿನಗಳ ನೆನಪಿನ ಬುತ್ತಿಯಲ್ಲಿ ಎಲ್ಲಕ್ಕಿಂತ ಭಿನ್ನವಾಗಿ ವಿಶೇಷವಾಗಿ ಎದ್ದು ನಿಲ್ಲುವ ನೆನಪು ಎಂದರೆ, ನಮ್ಮ ಆಚಾರ್ಯ ಪಾಠಶಾಲೆಗೆ ಸರ್ ಸಿ.ವಿ. ರಾಮನ್ ಬಂದ ಘಟನೆಯದ್ದು. ಆಗ ನನ್ನ ಸಹಪಾಠಿಯಾಗಿದ್ದ ರೊದ್ದಂ ನರಸಿಂಹನಿಗೂ (ಇವರು ಕೂಡ ದೇಶದ ಖ್ಯಾತ ವಿಜ್ಞಾನಿ) ಇಂದಿಗೂ ನೆನಪಿರುವ ಮಧುರ ಘಟನೆಯಿದು. ನಮ್ಮ ಶಾಲೆಗೆ ಬಂದ ರಾಮನ್, ವಿಜ್ಞಾನದ ಬಗ್ಗೆ ಅದ್ಭುತ ಎನ್ನುವಂಥ ಒಂದು ಭಾಷಣ ಮಾಡಿ, ಮೇರಿಕ್ಯೂರಿಯ ಭಾವಚಿತ್ರವೊಂದನ್ನು ಅನಾವರಣಗೊಳಿಸಿದರು. ಅವರ ಮಾತು, ವರ್ಚಸ್ಸು, ಮೇಡಂ ಕ್ಯೂರಿಯ ಚಿತ್ರ, ಇವರೆಲ್ಲ ದುಡಿದು ನಿಸ್ವಾರ್ಥದಿಂದ ಬೆಳೆಸಿದ ವಿಜ್ಞಾನದ ಔನ್ನತ್ಯ – ಇವೆಲ್ಲ ನನ್ನೊಳಗೆ ಕಲಸುಮೇಲೋಗರವಾಗಿ ಹತ್ತುಹಲವು ವಿಚಿತ್ರ ಭಾವಗಳನ್ನು ಸ್ಫುರಿಸುವ ಜೊತೆಗೆ ಒಂದು ಧೃಡವಾದ ನಿರ್ಧಾರವನ್ನು ನನ್ನ ಹೃದಯದಲ್ಲಿ ಮಥಿಸಿ ತೆಗೆಯಿತು ಅಂತ ಕಾಣುತ್ತದೆ. ನಾನೂ ವಿಜ್ಞಾನಿಯಾಗಬೇಕು ಅನ್ನುವ ಸಂಕಲ್ಪಕ್ಕೆ ಬೀಜ ಬಿತ್ತಿದ್ದು ಇದೇ ಘಟನೆ ಅಂತ ನನ್ನ ಭಾವನೆ. ರಾಮನ್ ನಮ್ಮ ಗುರುಗಳ ಬಳಿ ನಿಮ್ಮ ಒಂದೆರಡು ಜಾಣ ಮಕ್ಕಳ ಜೊತೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್‍ಗೆ ಬನ್ನಿ ಎಂದು ಆಮಂತ್ರಣವನ್ನೂ ಕೊಟ್ಟರು. ಹಾಗೆ ಶಾಲೆಯಿಂದ ಆಯ್ಕೆಯಾಗಿ ಹೋಗಿ ರಾಮನ್ ಎಂಬ ಪ್ರಭೆಯೆದುರು ನಿಲ್ಲುವ, ಅವರನ್ನು ಹತ್ತಿರದಿಂದ ಕಾಣುವ, ಮಾತಾಡುವ, ಅವರ ವಿಜ್ಞಾನಿಬದುಕನ್ನು ಕುತೂಹಲದಿಂದ ಗಮನಿಸುವ ಅವಕಾಶಗಿಟ್ಟಿಸಿದ ಹುಡುಗರಲ್ಲಿ ನಾನೂ ಒಬ್ಬನಾಗಿದ್ದೆ. ರಾಮನ್ನರ ವ್ಯಕ್ತಿತ್ವದ ಚುಂಬಕಶಕ್ತಿ ನನ್ನ ಹುಡುಗುಮನಸ್ಸನ್ನು ಗಬಕ್ಕನೆ ಹಿಡಿದುಕೊಂಡುಬಿಟ್ಟಿತು.

ಪ್ರಥಮಶ್ರೇಣಿಯಲ್ಲಿ ಪಾಸಾಗಿ ಹೈಸ್ಕೂಲು ಮುಗಿಸಿ ಸೆಂಟ್ರಲ್ ಕಾಲೇಜು ಸೇರಿದೆ. ಅದೇ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೂಡ ಸಿಕ್ಕಿತು. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಬಂಗಾಳ ಮತ್ತು ಪಂಜಾಬ್‍ಗಳಲ್ಲಿ ಭೀಕರವಾದ ಹತ್ಯಾಕಾಂಡ ನಡೆಯಿತು ಅನ್ನುವುದನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡೆವೇ ಹೊರತು ಬೆಂಗಳೂರಲ್ಲಿ ಅಂಥಾದ್ದೇನೂ ಆಗದೆ ಪರಿಸ್ಥಿತಿ ಶಾಂತವಾಗಿಯೇ ಇತ್ತು. ಆದರೆ, ಭಾರತದ ಏಕೀಕರಣವಾಗಿ ಸಂಸ್ಥಾನಗಳೆಲ್ಲ ಭಾರತ ಸರಕಾರದೊಡನೆ ವಿಲೀನವಾಗಬೇಕು ಅನ್ನುವ ವಾದ ಒಂದೆಡೆ, ಸಂಸ್ಥಾನಗಳಿಗೆ ಸ್ವಾಯತ್ತೆ ಸಿಗಬೇಕೆಂಬ ವಾದ ಇನ್ನೊಂದು ಕಡೆ ನಡೆದು ಮೈಸೂರು ಸಂಸ್ಥಾನದ ಮುಂದಿನ ನಡೆಯೇನು ಎಂಬುದೇ ಗೊಂದಲದ ಗೂಡಾಗಿತ್ತು. ಈ ಗಲಿಬಿಲಿ, ಗೊಂದಲದ ಗೌಜಿಯಲ್ಲಿ ಕಾಲೇಜುಗಳು ಅನಿರ್ಧಿಷ್ಟಾವಧಿಗೆ ಮುಚ್ಚಿದವು. ನಾವು ಹುಡುಗರು ಬೀದಿಗಿಳಿದು ರ್ಯಾಲಿ, ಪ್ರತಿಭಟನೆ ಎಲ್ಲ ಮಾಡಿದೆವು. ಆಗ ನಾನೂ ಉಮ್ಮೇದಿ ಬಂದು ಕೆಲವೊಂದು ಸಾರ್ವಜನಿಕ ಭಾಷಣಗಳನ್ನೂ ಮಾಡಿದೆ!

ಕಾಲೇಜಲ್ಲೂ ನನ್ನ ಪಾಠೇತರ ಚಟುವಟಿಕೆಗಳು ಜೋರಾಗೇ ನಡೆದಿದ್ದವು. ಅಲ್ಲಿ ಏರ್ಪಡಿಸುವ ಪ್ರತಿಯೊಂದು ಚರ್ಚೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಕನ್ನಡದಲ್ಲಿ ಕತೆಗಳನ್ನು ಬರೆಯುತ್ತಿದ್ದೆ. ಕನ್ನಡ ನಾಟಕಗಳಲ್ಲಿ ಪಾರ್ಟು ಮಾಡುತ್ತಿದ್ದೆ. ಸಂಸ್ಕøತ ಕಲಿತ ದೆಸೆಯಿಂದಾಗಿ ಕಾಲೇಜಿನ ಸಂಸ್ಕøತ ಸಂಘದ ಕಾರ್ಯದರ್ಶಿಯೂ ಆದೆ. ನಾರ್ಮನ್ ಕಸಿನ್ಸ್ ಮತ್ತು ಎಸ್.ರಾಧಾಕೃಷ್ಣನ್ ಅವರು ಭಾಗವಹಿಸಿದ್ದ ಒಂದು ವಾಗ್ವಾದಕ್ಕೆ ಪ್ರೇಕ್ಷಕನಾಗಿ ಕೂರುವ ಅದ್ಭುತ ಅವಕಾಶ ಒಮ್ಮೆ ಬಂತು. ಇಂಗ್ಲೀಷ್ ದೇವಭಾಷೆಯೆಂದೂ ನಮಗೆ ಅನ್ನಿಸುವ ಪ್ರತಿಯೊಂದು ಭಾವ-ಭಾವನೆಗಳಿಗೂ ಇಂಗ್ಲೀಷ್ ಮೂಲಕ ನಾಲಿಗೆ ಕೊಡಬಹುದು ಎನ್ನುತ್ತ ಕಸಿನ್ಸ್, ನಿಮ್ಮ ಸಂಸ್ಕøತ ಭಾಷೆಯಲ್ಲಿ ‘ನಿಖರತೆ’ಗೆ ಸಮಾನಾರ್ಥಕ ಪದ ಇದೆಯೇ ಎಂದು ಕೇಳಿದರು. ತೀಕ್ಷ್ಣ ಪ್ರತ್ಯುತ್ಪನ್ನಮತಿಯಾಗಿದ್ದ ರಾಧಾಕೃಷ್ಣನ್ ಉಸಿರೆಳೆಯಲೂ ಸಮಯ ತೆಗೆದುಕೊಳ್ಳದೆ ತಕ್ಷಣ, ನಿಮ್ಮ ಇಂಗ್ಲೀಷಿನಲ್ಲಿ “ಧರ್ಮ”ಕ್ಕೆ ಸಂವಾದಿಯಾಗಬಲ್ಲ ಪದ ಇದೆಯೇ ಎಂದು ಮರುಸವಾಲು ಹಾಕಿದರು. ಮಾತ್ರವಲ್ಲ, ನಿಖರತೆಯ ಹಂಗಿಲ್ಲದೆ ಬದುಕಬಹುದು; ಆದರೆ ಧರ್ಮ ಬಿಟ್ಟು ಬದುಕಲಾದೀತೇ ಎಂದು ಎದಿರೇಟು ಕೊಟ್ಟು ಚುಚ್ಚಿದರು!

ಈ ನಾಲ್ಕು ವರ್ಷಗಳ ಕಾಲೇಜು ಜೀವನದಲ್ಲಿ, ಕಲಿಯುತ್ತಿದ್ದ ವಿಜ್ಞಾನದಲ್ಲಿ, ಕ್ಲಾಸಿನೊಳಗೆ ನಡೆದ ಸ್ವಾರಸ್ಯದ ಸಂಗತಿಗಳ್ಯಾವುವೂ ನೆನಪಿಗೆ ಬರುವುದಿಲ್ಲ ಎನ್ನುವುದು ಮಾತ್ರ ವಿಪರ್ಯಾಸ. ಆದರೂ ಅಲ್ಲಿಯೂ ಪ್ರಥಮಶ್ರೇಣಿಯಲ್ಲಿ ಪಾಸಾಗಿ ಬಿಎಸ್ಸಿ ಡಿಗ್ರಿಯೊಡನೆ ಕಾಲೇಜಿಂದ ಹೊರಬಂದೆ. ಶೇಕಡಾ ಅರುವತ್ತರ ಗಡಿ ಮುಟ್ಟುವುದೇ ಅಸಾಧ್ಯವಾಗಿದ್ದ ಆ ಕಾಲದಲ್ಲಿ ನಾನು ಆ ಅಭೇದ್ಯ ಕೋಟೆಯನ್ನು ಜಯಿಸಿ ಬಂದೆನಲ್ಲ ಎಂದು ತಂದೆ ಸಂತಸಗೊಂಡಿದ್ದರು. ಆದರೆ ನಾನೇನೂ ಓದುವ ಗೀಳಿನ ಪುಸ್ತಕದ ಹುಳುವಾಗಿರಲಿಲ್ಲ ಎಂದೇ ಈಗಲೂ ಅನ್ನಿಸುತ್ತದೆ. ಕಾಲೇಜಿನ ಎರಡನೇ ವರ್ಷದಲ್ಲಿದ್ದಾಗ ಮಹಾತ್ಮಾಗಾಂಧೀಜಿಯ ಹತ್ಯೆಯಾದ ಮೇಲೆ ಗಾಂಧೀಟೋಪಿ ಧರಿಸಲು ಶುರುಮಾಡಿದೆ. ದೇಶದ ದೊಡ್ಡದೊಡ್ಡ ನಾಯಕರು ಬೆಂಗಳೂರಿಗೆ ಬಂದು ಭಾಷಣ ಕೊಟ್ಟಾಗೆಲ್ಲ ಅಂಥವಕ್ಕೆ ಚಾಚೂ ತಪ್ಪದೆ ಹಾಜರಿ ಹಾಕುತ್ತಿದ್ದೆ. ಡಿವಿಜಿಯವರು ನಡೆಸುತ್ತಿದ್ದ ಗೋಖಲೆ ಸಾರ್ವಜನಿಕ ಸಂಸ್ಥೆ ಮತ್ತು ಗಾಂಧೀಬಜಾರದ ಉತ್ತರಕ್ಕಿದ್ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವಲ್ರ್ಡ್ ಕಲ್ಚರ್‍ಗಳಲ್ಲಿ ನಡೆಯುತ್ತಿದ್ದ ಪ್ರತಿಕಾರ್ಯಕ್ರಮದಲ್ಲೂ ಮಿಸ್ ಮಾಡದೆ ಭಾಗವಹಿಸುತ್ತಿದ್ದೆ. ನಮ್ಮ ಮನೆಯಿಂದ ಕೂಗಳತೆಯ ದೂರದಲ್ಲಿ ನ್ಯಾಷನಲ್ ಕಾಲೇಜು ಕಟ್ಟಿ ಬೆಳೆಸುತ್ತಿದ್ದ ಎಚ್.ನರಸಿಂಹಯ್ಯನವರ ವ್ಯಕ್ತಿತ್ವವೂ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿತೆಂದು ಹೇಳಬೇಕು. ಕಾಂಗ್ರೆಸ್‍ನ ಅಧಿವೇಶನಗಳು ನಡೆದಾಗೆಲ್ಲ ನಾವು ಒಂದಷ್ಟು ಹುಡುಗರು ಸೇರಿಕೊಂಡು ಸ್ವಯಂಸೇವಕರಾಗಿ ದುಡಿಯುತ್ತಿದ್ದೆವು. ಅಂಥದೊಂದು ಸಭೆಯಲ್ಲಿ ಯೂಸುಫ್ ಮೆಹ್‍ರೌಲಿ, ನರೇಂದ್ರ ಡೇ, ಜಯಪ್ರಕಾಶ ನಾರಾಯಣ ಮುಂತಾದವರನ್ನೆಲ್ಲ ತುಂಬ ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿತು. ಇವೆಲ್ಲದರ ಮಧ್ಯೆ ವಾರಕ್ಕೊಮ್ಮೆ ನಾವು ಯುವಕರು ಒಂದಷ್ಟು ಮಂದಿ ಜೊತೆಗೂಡಿ ಗೀತಾಪಾರಾಯಣವನ್ನೂ ಹಮ್ಮಿಕೊಂಡಿದ್ದೆವು.

ಇಷ್ಟೆಲ್ಲ ದೋಣಿಗಳಲ್ಲಿ ಕಾಲಿಟ್ಟು ಹೊಯ್ದಾಡುತ್ತಿದ್ದ ನನಗೆ, ಮುಂದೇನು ಮಾಡಬೇಕು ಅನ್ನುವುದರ ಸ್ಪಷ್ಟ ಚಿತ್ರಣ ಇತ್ತೆಂದು ಹೇಳಲು ಯಾವ ಧೈರ್ಯವೂ ಇಲ್ಲ. ಕೆಲವರು ಈ ಹುಡುಗ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯಲಿ ಎನ್ನುತ್ತಿದ್ದರು. ಇನ್ನು ಕೆಲವರು ಇಂಜಿನಿಯರಿಂಗ್ ಅಥವಾ ವೈದ್ಯವೃತ್ತಿಗೆ ಹೋಗಲಿ ಎನ್ನುತ್ತಿದ್ದರು. ನನ್ನ ಅದೃಷ್ಟಕ್ಕೆ, ಹುಟ್ಟಿಸಿದ ತಂದೆತಾಯಿಗಳು ಮಾತ್ರ, ನಿನಗೇನು ಆಗಬೇಕೆಂಬ ಬಯಕೆಯಿದೆಯೋ ಅದೇ ಆಗಪ್ಪ ಎಂದು ಹರಸಿ, ಬೆಟ್ಟದಂತೆ ಉದ್ಭವವಾಗಿದ್ದ ಸಮಸ್ಯೆಯನ್ನು ಮಂಜಿನಂತೆ ಕರಗಿಸಿಬಿಟ್ಟರು. ನನಗೇನು ಬೇಕು, ಏನು ಮಾಡಬೇಕು ಅನ್ನುವುದರ ಬಗ್ಗೆ ಸ್ವತಃ ಅವೆಲ್ಲದರ ಜವಾಬ್ದಾರಿ ಹೊರಬೇಕಿದ್ದ ನನಗೆ ಸ್ಪಷ್ಟ ಗುರಿ, ಯೋಚನೆಗಳು ಹರಳುಗಟ್ಟದೆ ಗೊಂದಲವೆದ್ದಿತ್ತು. ಆಗ ನೆರವಿಗೆ ಬಂದ, ಸೆಂಟ್ರಲ್ ಕಾಲೇಜಿನ ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ದ ಮಲ್ಲಿಕಾರ್ಜುನಪ್ಪ ಎಂಬವರು, ನೀನು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಸೇರು. ಅಲ್ಲಿ ಡಿಗ್ರಿಯ ಜೊತೆಗೇ ಸಂಶೋಧನೆಯನ್ನೂ ನಡೆಸಬಹುದು; ಅಂತಹ ಅವಕಾಶ ಬೇರೆಲ್ಲಿ ಸಿಗುತ್ತದೆ ಎಂದು ಆಸೆ ಹುಟ್ಟಿಸಿ ಬೆನ್ನುತಟ್ಟಿ ಹರಸಿದರು. ದೂಸ್ರಾ ಯೋಚನೆ ಮಾಡದೆ ಬನಾರಸಿನ ರೈಲು ಹತ್ತಿದೆ!

ಅಲ್ಲಿಂದ ಮುಂದೆ ಎಮ್‍ಎಸ್ಸಿ ಮುಗಿಸಿ ಬಂದದ್ದು, ಪಡ್ರ್ಯೂ ವಿವಿಗೆ ಉನ್ನತ ವ್ಯಾಸಂಗಕ್ಕೆ ಹೋದದ್ದು, ವಾಪಸು ಬಂದು ಐಐಟಿ ಮತ್ತು ಐಐಎಸ್ಸಿಗಳಲ್ಲಿ ದುಡಿದದ್ದು – ಇವೆಲ್ಲ ನೀವು ಹೇಳುವ ಹಾಗೆ – ಇತಿಹಾಸ! ಆದರೆ, ನನ್ನ ಬಾಲ್ಯ ಮತ್ತು ಯೌವನದ ದಿನಗಳಲ್ಲಿ ನನ್ನನ್ನು ರೂಪಿಸಿದ ಆ ಹಳೆಯ ಬೆಂಗಳೂರಿನ ಸೊಬಗು-ಸೊಗಡನ್ನು ಮರೆಯಲು ಸಾಧ್ಯವಿಲ್ಲ. ಮತ್ತೆಮತ್ತೆ ನನ್ನ ಮನಸ್ಸು ಮರಿದುಂಬಿಯಂತೆ ಬನವಾಸಿಯನ್ನು ನೆನೆಯುತ್ತದೆ ಎಂದ ಪಂಪನ ಹಾಗೆ, ನನ್ನ ಮನಸ್ಸು ಇಡೀ ಜಗತ್ತು ಸುತ್ತಾಡಿದರೂ ಮರಳಿ ಬರುವುದು ಆ ಗತಕಾಲದ ಬೆಂಗಳೂರಿನ ನೆನಪುಗಳ ಬುಟ್ಟಿಗೇನೇ. ಆ ಕಾಲದಲ್ಲಿ ಅಜ್ಜಅಜ್ಜಿಯರೊಂದಿಗೆ ಕಳೆದ ದಿನಗಳು, ರಾಜಾಜಿ ಬೆಂಗಳೂರಿಗೆ ಬಂದಾಗ ಅವರುಳಿದುಕೊಂಡ ಮನೆಗೇ ಡಿಕಾಕ್ಷನ್ ಕಾಫಿಯ ಬಟ್ಟಲು ತಗೊಂಡುಹೋಗಿ ಕಾಫಿ ಕುಡಿಸಿದ ಗಟ್ಟಿಗಿತ್ತಿ ಅಜ್ಜಿಯ ಸಾಹಸಗಳು, ಆಕೆಯ ಮಡಿಲಲ್ಲಿ ಮಲಗಿ ನಾನು ಕೇಳುತ್ತಿದ್ದ ಅಸಂಖ್ಯಾತ ಅಜ್ಜಿಕತೆಗಳು, ಹೊರನೋಟಕ್ಕೆ ಸಿಪಾಯಿಯಂತೆ ಭಯಹುಟ್ಟಿಸಿದರೂ ಒಳಗೆ ಬೆಣ್ಣೆಯಂತಿದ್ದ ಅಪ್ಪ, ಅವರೊಡನೆ ಕಂಡ ಆ ಕಾಲದ ಬೆಂಗಳೂರಿನ ದಟ್ಟಕಾಡಿನ ಮೈಮಾಟ – ಎಲ್ಲ ನೆನಪಿಗೆ ಬರುತ್ತವೆ.

ಆ ಕಾಲದಲ್ಲಿ ಬದುಕಿದ್ದ ಕೆಲವರ ವ್ಯಕ್ತಿತ್ವಗಳು ಇನ್ನೂ ಕಣ್ಣಮುಂದೆ ಹಾಗೇ ಉಳಿದಿವೆ. ನೆನಪಿನ ಈಸಿಚೇರಿನಲ್ಲಿ ಕೂತು ಹಾಗೇ ಅಡ್ಡಾಗಿ ಕಣ್ಣುಮುಚ್ಚಿ ಧೇನಿಸಿದಾಗ, ನನ್ನ ಹೆಗಲ ಮೇಲೆ ಕೈಹಾಕಿ ಬೆರಳಿಂದ ತಬಲ ಬಾರಿಸುತ್ತಿದ್ದ ಕಿಟ್ಟಿ ನೆನಪಾಗುತ್ತಾನೆ. ಮಕ್ಕಳನ್ನು ಹೆತ್ತುಹೆತ್ತು ಮನೆಯನ್ನೇ ಹಾಸ್ಟೆಲ್ ಮಾಡಿದ್ದವನಿಗೆ ಮಕ್ಕಳ ಹೆಸರೂ ನೆನಪಿರಲಿಲ್ಲ ಎಂದು ಕಾಣುತ್ತದೆ. “ನೋಡಯ್ಯ, ನನ್ನ ಈ ಆರನೆಯವನು ಏಳನೆಯವನಿಗಿಂತ ಜಾಣ” ಅಂತ ಅವನನ್ನುತ್ತಿದ್ದ ಮಾತುಗಳು ಕಿವಿಯಲ್ಲಿ ಅನುರಣಿಸುತ್ತವೆ. ನಮ್ಮ ನೆರೆಹೊರೆಯವರೇ ಆಗಿದ್ದ ನವರತ್ನ ರಾಮರಾವ್ (‘ರತ್ನ’) ನ್ಯಾಯಾಲಯದಲ್ಲಿ ಜಡ್ಜಿಗಳಾಗಿದ್ದವರು. ಒಮ್ಮೆ ಅವರು ಹೇಳಿದ ಘಟನೆಯೊಂದು ನೆನಪಾಗುತ್ತದೆ. ಕಳ್ಳನೊಬ್ಬನನ್ನು ಕಟಕಟೆಯಲ್ಲಿ ನಿಲ್ಲಿಸಿ ಬಾಯ್ಮಾತಿಗೆ ರತ್ನ, “ಯಾಕಪ್ಪ ಚಿಲ್ಲರೆ ಕಳ್ಳತನ ಮಾಡಿ ಸಿಕ್ಕಿಬಿದ್ದು ಹೀಗೆ ಕೋರ್ಟಿಗೆ ಬಂದು ನಿಲ್ಲುತ್ತೀಯ!” ಎಂದು ಕೇಳಿದರಂತೆ. ಬಾಯಾಡಿಕೆಯ ಮಾತಿಂದ ಕುಪಿತನಾದ ಕಳ್ಳ, “ಸಾಹೇಬ್ರೇ ಹಾಗೆಲ್ಲ ಮಾನ ಕಳೀಬ್ಯಾಡಿ. ಮಾಡೋದಿಕ್ಕೆ ನಾನೂ ದೊಡ್ಡದೊಡ್ಡ ಕಳ್ಳತನಾನೂ ಮಾಡಿವ್ನಿ. ನಮ್ಮ ವೃತ್ತಿಗೂ ಘನತೆ ಐತಿ, ಸಣ್ಣಪುಟ್ಟದಕ್ಕೆಲ್ಲಾ ನಾವು ಇಳಿಯೋರಲ್ಲ!” ಎಂದು ಹೇಳಿದನಂತೆ!

ಹಾಗೆಯೇ ಯೋಚಿಸುತ್ತ ಹೋದಾಗ ಅಜ್ಜನ ದೋಸ್ತರಾಗಿದ್ದ ಶಾಸ್ತ್ರಿಗಳ ಮುಖ ಕಣ್ಮುಂದೆ ಬರುತ್ತದೆ. ಯಾವತ್ತು ಸಿಕ್ಕಿದರೂ ನನ್ನ ಅಜ್ಜನ ಬಳಿ ತನ್ನ ಹೆಂಡತಿಯನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿದ್ದ ಮನುಷ್ಯ. “ಯಾವುದಕ್ಕೂ ಪ್ರಯೋಜನವಿಲ್ಲಯ್ಯ ಅವಳು. ಯಾವ ಕೆಲಸವನ್ನೂ ಸರಿಯಾಗಿ ಮಾಡೋಲ್ಲ” ಎಂದು ಪುರಾಣ ಬಿಚ್ಚುತ್ತಿದ್ದರು. ಪಾಪ, ಆ ಹೆಂಗಸು ಈ ದೂರುಗಂಟೆ ಗಂಡನಿಗೆ ವರ್ಷಕ್ಕೊಂದರಂತೆ ಹೆತ್ತುಕೊಡುವ ಕೆಲಸವನ್ನು ಮಾತ್ರ ಸರಿಯಾಗಿಯೇ ಮಾಡುತ್ತಿದ್ದಳು.

ಬಸವನಗುಡಿಯಲ್ಲಿ ಇದ್ದ ಇನ್ನೊಂದು ವಿಕ್ಷಿಪ್ತ ಜೀವಿ- ಟಿಪಿಕಲ್ ಕೈಲಾಸಂ! ಪಟ್ಟಾಪಟ್ಟಿ ಅಂಡರ್‍ವೇರಿನಲ್ಲಿ ಓಡಾಡುತ್ತ ಒಂದು ಕೈಯಲ್ಲಿ ಸಿಗರೇಟನ್ನು ಬಾಯಿಗಿಟ್ಟು ಪಫ್‍ಪಫ್ ಎಂದು ಹೊಗೆಬಿಡುತ್ತ ಇನ್ನೊಂದು ಕೈಯಲ್ಲಿ ಭಸ್ಮಕರಂಡಿಕೆಯನ್ನು ತುಂಬ ಪವಿತ್ರವಸ್ತು ಎನ್ನುವಂತೆ ಹಿಡಿದುಕೊಂಡು ಓಡಾಡುತ್ತಿದ್ದ ಅವರನ್ನು ಮರೆಯುವುದು ಹೇಗೆ ಸಾಧ್ಯ! ಬಸವನಗುಡಿಯ ಪರಿಸರದವರೇ ಆದ, ನಮಗೆಲ್ಲ ಸಾತ್ವಿಕವಾಗಿ ನಗಲು ಕಲಿಸಿದ ಕೊರವಂಜಿಯ ರಾಶಿಯನ್ನು ಕೂಡ ನೆನೆಯುತ್ತೇನೆ. ದೊಡ್ಡ ವ್ಯಕ್ತಿಗಳು ಮಾತ್ರವಲ್ಲ, ಜನಸಾಮಾನ್ಯರೂ ಕೆಲವೊಮ್ಮೆ ನನ್ನ ಮನಪಟಲದ ಮೇಲೆ ದೊಡ್ಡ ಪ್ರಭಾವವನ್ನೇ ಬೀರಿದ್ದಾರೆ. ಬಸವನಗುಡಿಯಲ್ಲಿ ನರಸಿಂಗ ಎಂಬ ಸಾಮಾನ್ಯರಲ್ಲಿ ಸಾಮಾನ್ಯನಾದ ಯುವಕನೊಬ್ಬ ಇದ್ದ. ರಸ್ತೆಯಲ್ಲಿ ಹೋಗಿಬರುವ ಯಾರೇ ಆಗಲಿ, ಎಲ್ಲರನ್ನೂ ವರ್ಷಗಳಿಂದ ಬಲ್ಲಂತೆ ಬಹಳ ಆತ್ಮೀಯವಾಗಿ ಮಾತಾಡಿಸುತ್ತಿದ್ದ ಈ ಮನುಷ್ಯ 1947ರ ಒಂದು ಗೋಲೀಬಾರಿನಲ್ಲಿ ಪೋಲೀಸರ ಗುಂಡಿಗೆ ಬಲಿಯಾಗಿ ನಮ್ಮ ಮಟ್ಟಿಗೆ ಹುತಾತ್ಮನಾದ. ನೆನಪುಗಳ ಸಂತೆಯಲ್ಲಿ ಇವೆಲ್ಲ ಚಿತ್ರಗಳೂ ಸಿನೆಮದ ರೀಲಿನಂತೆ ಬಂದುಹೋಗುತ್ತವೆ.

1 ಟಿಪ್ಪಣಿ Post a comment
  1. udaya dharmasthala
    ಜುಲೈ 1 2015

    * ಪರಕೆ ಕಟ್ಟೊನುಗ *

    ಮುಗ್ಯಂದಿ ಕತೆಕುಲು
    ಮೊಡೆನಾತ್ ತಿರ್ಲುಲು

    ಪುಡ್ಯ್ಂಡ್ಡ ತರೆಕಾಪು
    ಕೊಡಿಏರ್ದ್ ನೆರೆದೆರ್ಪು

    ನಿಸರುದಿತ್ ಉದಿಯಾವು
    ತಿಂಗೊಲುಲ ತಲ್ಮೆನವು

    ಚೆಂಡೇಲ್ ಬೊಂಡಾವು
    ಅಪ್ಪೆಮುಡಿ ಪರ್ಂದಾವು

    ಸಿನೆ ಪೇರ್ ಬಾರಾವು
    ಕಣೆಮುಲ್ಲು ಪೂವಾವು

    ಬಿತ್ತುಲವು ಕಾಡಾವು
    ನೀರಪನಿ ಮುತ್ತಾವು

    ಉಸುಲಾವು ನುಡಿತಭಯ
    ಎಸಲಾವು ಪರಕೆ ಸಂದಾಯ

    ಯಾನ್ ನಿಕುಲೆಗ್ ಆಂಡ
    ನಿಕುಲು ಎಂಕಾವೊಡೇ
    ಯಾನ್ ಎಂಕಾಂದಾಂಡ
    ನಿಕುಲು ನಿಕುಲಾವೊಡೇ

    ತಾರೆ ತಾರಿಲು ಬೂರು
    ಬುಡಿನ ಅಲಪಲಕುಲವು
    ಸೇರಿದೂರುದ ಆರ್
    ತಡೆಂಡ ಬುಲೆತ ತಿನಸಾವು

    ಬನತ ತೋಜಂದಿ ಪುರ್ಪ
    ದೆಂಗ್ ದಾಂಡಲ ಅರಲು
    ಮನತ ಮಾಜಂದಿ ಸುರ್ಪ
    ಅಂಗ್ ದಾಂತಿನ ಪೊರ್ಲು

    ಮನಸರಲಡ್ ಕನ ನಡಪಡ್
    ದಿನ ಗಮೆಲಡ್ ಜನ ನಲಿಪಡ್

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments