ವಿಷಯದ ವಿವರಗಳಿಗೆ ದಾಟಿರಿ

ಮೇ 4, 2011

6

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

‍ನಿಲುಮೆ ಮೂಲಕ

– ಚಾಮರಾಜ ಸವಡಿ

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.

ಅವನ ಉತ್ತರ ಕೇಳಿ ನನಗೆ ದಿಗ್ಭ್ರಮೆಯಾಯಿತು. ನಂತರ ಮರುಕ ಹುಟ್ಟಿತು. ಆತನ ಪ್ರಕಾರ, ಪತ್ರಿಕೆಗಳಲ್ಲಿ ಬರೆಯುವವರು ಮಾತ್ರ ಬರಹಗಾರರು. ಉಳಿದವರೆಲ್ಲ ತಮ್ಮ ತೆವಲಿಗೆ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವಕ್ಕೆ ಮೌಲ್ಯವಿಲ್ಲ.

ಆತನ ಜೊತೆ ವಾದಿಸುವುದು ವ್ಯರ್ಥ ಅನಿಸಿ ಸುಮ್ಮನಾದೆ. ಆದರೆ, ಈ ವಿಷಯ ಪ್ರಸ್ತಾಪಿಸುವುದು ಉತ್ತಮ ಅನಿಸಿ ಇಲ್ಲಿ ಬರೆಯುತ್ತಿದ್ದೇನೆ.

ಹಿಂದೊಮ್ಮೆ ಇಂಥದೇ ವಿಷಯದ ಬಗ್ಗೆ ಓದಿದ್ದು ನೆನಪಾಯಿತು. ಟಿವಿ ದಾಂಗುಡಿಯಿಡುತ್ತಿದ್ದ ದಿನಗಳವು. ಟಿವಿ ತಾರೆಯರು ಸಿನಿಮಾ ತಾರೆಯರಂತೆ ಜನಪ್ರಿಯತೆ ಗಳಿಸುತ್ತಿದ್ದರು. ಆಗ ಕೆಲ ನಟ, ನಟಿಯರು ಮೇಲಿನ ಅಭಿಪ್ರಾಯವನ್ನೇ ಬಿಂಬಿಸುವಂಥ ಮಾತು ಹೇಳಿದ್ದರು: ಸಿನಿಮಾ ನಟನೆಯೇ ನಿಜವಾದ ನಟನೆ. ಟಿವಿ ನಟನೆಗೆ ಮೌಲ್ಯವಿಲ್ಲ.

ಗಡಿಯಾರವನ್ನು ಇನ್ನೊಂಚೂರು ಹಿಂದಕ್ಕೆ ತಿರುಗಿಸೋಣ. ಸಿನಿಮಾ ಜನಪ್ರಿಯವಾಗುವುದಕ್ಕೂ ಮುನ್ನ ನಾಟಕ ರಂಗ ಕ್ರಿಯಾಶೀಲವಾಗಿತ್ತು. ಆಗ, ಸಿನಿಮಾ ನಟ-ನಟಿಯರ ಕುರಿತು ರಂಗಕರ್ಮಿಗಳು ಇಂಥದೇ ಮಾತು ಹೇಳಿದ್ದರು.

ಇದು ಏನನ್ನು ಸೂಚಿಸುತ್ತದೆ?

ಮಾಧ್ಯಮ ಬದಲಾದರೂ, ಅಭಿವ್ಯಕ್ತಿ ಎಂಬುದು ಹಾಗೇ ಉಳಿದಿದೆ ಅಂತ ಅಲ್ಲವೆ? ಬರಹಗಾರ ಪತ್ರಿಕೆಗಳಿಗೆ ಬರೆದಂತೆ ಅಂತರ್ಜಾಲ ವಾಹಿನಿಯಲ್ಲೂ ಬರೆಯಬಲ್ಲ. ನಟನೆ ಬಲ್ಲವ ಸಿನಿಮಾ, ಟಿವಿ, ರಂಗಭೂಮಿ ಎಂಬ ಭೇದವಿಲ್ಲದೇ ನಟಿಸಬಲ್ಲ. ಆ ಮಾಧ್ಯಮ ಅವನಿಗೆ ಒಗ್ಗದಿದ್ದರೆ ಬೇರೆ ಮಾತು. ಆದರೆ, ನಟಿಸಲು ಯಾವ ವೇದಿಕೆಯಾದರೇನು?

ಇದೇ ಮಾತನ್ನು ಬರವಣಿಗೆಗೂ ಹೇಳಬಹುದು. ವೈಯಕ್ತಿಕವಾಗಿ ನನಗೆ ಎಲ್ಲ ರೀತಿಯ ಬರವಣಿಗೆ ಒಗ್ಗಿದೆ. ಅಭ್ಯಾಸವಾಗಿದೆ. ಇಷ್ಟಪಟ್ಟಿದ್ದೇನೆ ಕೂಡಾ. ಟ್ಯಾಬ್ಲಾಯ್ಡ್‌, ದಿನಪತ್ರಿಕೆ, ವಾರಪತ್ರಿಕೆ, ಸಾಹಿತ್ಯಿಕ, ಟಿವಿ, ಈಗ ಅಂತರ್ಜಾಲ- ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದೇನೆ. ಯಾವೊಂದು ಮಾಧ್ಯಮವೂ ನನಗೆ ಕಡಿಮೆ ಎಂದು ಅನಿಸಿಲ್ಲ. ಪ್ರತಿಯೊಂದಕ್ಕೂ ಅದರದೇ ಮಹತ್ವವಿದೆ. ವ್ಯಾಪ್ತಿಯಿದೆ. ಓದುಗರಿದ್ದಾರೆ. ವಿಷಯಗಳಿವೆ. ಬರೆಯುವ ಆಸಕ್ತಿ ಮತ್ತು ವ್ಯಕ್ತಪಡಿಸುವ ರೀತಿ ಗೊತ್ತಿದ್ದವ ಸುಲಭವಾಗಿ ವ್ಯಕ್ತವಾಗುತ್ತ ಹೋಗುತ್ತಾನೆ.

ದುರಂತವೆಂದರೆ, ಬಹಳಷ್ಟು ಜನರಿಗೆ ಈ ಸೂಕ್ಷ್ಮ ಅರ್ಥವಾದಂತಿಲ್ಲ. ಅಥವಾ ಅರ್ಥವಾಗಿದ್ದರೂ ಅಸೂಯೆಗೆ ಹಾಗೆ ಹೇಳುತ್ತಾರೇನೋ. ನನಗೆ ಗೊತ್ತಿರುವಂತೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿರುವ ಬಹಳಷ್ಟು ಜನ ಅಕ್ಷರಶತ್ರುಗಳು. ಅವರಿಗೆ ಅದೊಂದು ವೃತ್ತಿ. ಅವರ ಬರವಣಿಗೆ ದೇವರಿಗೇ ಪ್ರೀತಿ. ಏಜೆನ್ಸಿಗಳಿಂದ ಬರುವ ಸುದ್ದಿಗಳನ್ನು ರೆಡಿಮೇಡ್‌ ಚೌಕಟ್ಟಿಗೆ ಬದಲಾಯಿಸದ ಮಾತ್ರಕ್ಕೆ ಪತ್ರಕರ್ತರಾದಂತೆ ಎಂಬುದು ಅವರ ಅಭಿಪ್ರಾಯ. ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಮಾತ್ರದ ಕೆಲಸ ಮಾಡಿದರೆ ಸಾಕು ಎನ್ನುವ ವಾತಾವರಣವೂ ಇದೆ. ಸುದ್ದಿ ಬರೆಯುವ ಬಹಳಷ್ಟು ಜನರಿಗೆ ಲೇಖನ ಬರೆಯಲು ಬರುವುದಿಲ್ಲ. ಸಾಹಿತ್ಯವಂತೂ ದೂರವೇ ಉಳಿಯಿತು. ಅದೆಲ್ಲ ಗೊತ್ತಿದ್ದರೆ ಮಾತ್ರ ಪತ್ರಕರ್ತನಾಗಬಹುದು ಎಂದಲ್ಲ. ಗೊತ್ತಿದ್ದರೆ ಉತ್ತಮ. ಅಷ್ಟೇ.

ಹೋಗಲಿ, ಸುದ್ದಿಯನ್ನಾದರೂ ಸರಿಯಾಗಿ ಬರೆಯುತ್ತಾರಾ? ವಿಷಯವನ್ನು ತುರುಕಿದ ಮಾತ್ರಕ್ಕೆ ಅದು ವರದಿಯಾದೀತೆ? ಅಂಕಿಅಂಶಗಳನ್ನು ಸೇರಿಸಿ, ಒಂದೆರಡು ಮಹನೀಯರ ಅಭಿಪ್ರಾಯ ದಾಖಲಿಸಿದ ಮಾತ್ರಕ್ಕೆ ಅದು ವರದಿಯಾ? ಉಪ್ಪು, ಹುಳಿ, ಖಾರ, ಒಗ್ಗರಣೆ, ಬೆಂದ ಬೇಳೆಯನ್ನು ಸುರಿದು ನೀರು ಹಾಕಿ ಕುದಿಸಿದರೆ ಹೇಗೆ ಅದು ಸಾರೋ ಸಾಂಬಾರೋ ಆಗುವುದಿಲ್ಲವೋ, ಹಾಗೆ ಮಾಹಿತಿ ತುರುಕಿದ ಮಾತ್ರಕ್ಕೆ ಅದು ವರದಿಯಾಗುವುದಿಲ್ಲ. ಈ ಸೂಕ್ಷ್ಮ ತುಂಬ ಜನರಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಃಸ್ಥಿತಿಯೂ ಇರುವುದಿಲ್ಲ.

ಇಂಥ ಸಂದರ್ಭದಲ್ಲಿ ಮೇಲೆ ಹೇಳಿದಂಥ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ನಾನು ಬರೆದಿದ್ದೇ ಸತ್ಯ ಎಂಬ ಧಾರ್ಷ್ಟ್ಯ ಹುಟ್ಟಿಕೊಳ್ಳುತ್ತದೆ. ಪತ್ರಕರ್ತರಿಗೆ ಕೋಡುಗಳು ಮೂಡುವುದೇ ಆವಾಗ. ಇಷ್ಟಾದರೆ ಮುಗೀತು, ಸಿಕ್ಕಸಿಕ್ಕವರನ್ನು ಇರಿಯಲು ಹೋಗುವುದೇ ವೃತ್ತಿಯಾಗುತ್ತದೆ. ಕ್ರಮೇಣ ಅದೇ ಪ್ರವೃತ್ತಿಯಾಗುತ್ತದೆ. ಇಂಥ ಕಡೆ ಅಧ್ಯಯನ, ಅಭಿವ್ಯಕ್ತಿ, ಕುಶಲತೆ, ವೃತ್ತಿಪರತೆ ಎಂಬ ಸೂಕ್ಷ್ಮಗಳು ಅರ್ಥ ಕಳೆದುಕೊಳ್ಳುತ್ತ ಹೋಗುತ್ತವೆ.

ಈ ಸಮಸ್ಯೆ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಬಹುತೇಕ ರಂಗಗಳಲ್ಲೂ ಇದೆ. ಸೂಕ್ಷ್ಮತೆ, ಸಂವೇದನೆ ಇಲ್ಲದ ಬಹಳಷ್ಟು ಜನ ತಮ್ಮವೇ ಆದ ರೀತಿ ವಿಶ್ಲೇಷಣೆ ನಡೆಸುತ್ತ, ತಮ್ಮ ಬೌದ್ಧಿಕಮಟ್ಟ ತೋರಿಸುತ್ತ ಹೋಗುತ್ತಾರೆ.

ಮೂಲ ವಿಷಯಕ್ಕೆ ಬರೋಣ. ಅಂತರ್ಜಾಲದಲ್ಲಿ ಬರುತ್ತಿರುವುದು ಬರವಣಿಗೆ ಅಲ್ಲವೆ? ಇಲ್ಲಿಯೂ ಸೊಗಸಾದ ಅಭಿವ್ಯಕ್ತಿ ಇಲ್ಲವೆ? ಸಾಹಿತ್ಯದ ಬಹುತೇಕ ಪ್ರಕಾರಗಳು ಇಲ್ಲಿ ತುಂಬ ಚೆನ್ನಾಗಿ ವ್ಯಕ್ತವಾಗುತ್ತಿಲ್ಲವೆ? ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೇ ಕೈ ಹಾಕಿದ ಅಂತರ್ಜಾಲ ಬರಹಗಾರರು ಅರಮರ್ಧ ಪತ್ರಕರ್ತರಲ್ಲಿ ಹುಟ್ಟಿಸಿದ ದಿಗಿಲಿನಿಂದಾಗಿ ಇಂಥ ಅಭಿಪ್ರಾಯಗಳು ಹೊಮ್ಮುತ್ತಿವೆ ಎಂದು ನಾನು ಭಾವಿಸಿದ್ದೇನೆ.

ಯಾವುದೇ ರಂಗವಿರಲಿ, ಅಲ್ಲಿ ಎಲ್ಲ ಬಲ್ಲವರಿಲ್ಲ. ಬಲ್ಲವರ ಸಂಖ್ಯೆ ಬಹಳಿಲ್ಲ. ಹಾಗಂದುಕೊಂಡು, ನಕ್ಕು ಸುಮ್ಮನಾಗುತ್ತೇನೆ.

6 ಟಿಪ್ಪಣಿಗಳು Post a comment
  1. ಹೌದ್ ಚಾಮರಾಜ್, ಇಂಥ ಸನ್ನಿವೇಶಗಳಲ್ಲಿ ನಕ್ಕು ಸುಮ್ಮನಾಗುವುದೇ ಉತ್ತಮ.

    “ಬರೆಯುವ ಆಸಕ್ತಿ ಮತ್ತು ವ್ಯಕ್ತಪಡಿಸುವ ರೀತಿ ಗೊತ್ತಿದ್ದವ ಸುಲಭವಾಗಿ ವ್ಯಕ್ತವಾಗುತ್ತ ಹೋಗುತ್ತಾನೆ” ಎನ್ನುವ ತಮ್ಮ ಮಾತು ನೂರಕ್ಕೆ ನೂರು ನಿಜ.

    ತನಗೆ, ತನ್ನ ಮನದ ಭಾವನೆಗಳಿಗೆ ಮತ್ತು ಓದುಗರಿಗೆ ಮೋಸಮಾಡದೇ ಬರೆಯುವವನೇ ಉತ್ತಮ ಬರಹಗಾರ.

    ಉತ್ತರ
  2. Arehole's avatar
    Arehole
    ಮೇ 4 2011

    ಹೌದು. ಎಲ್ಲರಿಗೂ ಅವರವರ ಕಾಯಕ, ಸಾಧನೆ ‘ಮಾತ್ರ’ ಮಹತ್ವದ್ದು ಎ೦ಬ ಭಾವನೆ ಇರುವ ತನಕ್ ಹೀಗೇ ಆಗುತ್ತದೆ. ಅಭಿಮಾನ ಅವಶ್ಯಕವಾಗಿಯೂ ಇರಬೇಕು ಆದರೆ ದುರಭಿಮಾನ ಸಲ್ಲದು.ಕಾಲ ತನ್ನದೇ ಆದ ನಿಖರ ಸಮಯದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವ೦ತೆ ಮಾಡುತ್ತದೆ. ಆ ಹಿನ್ನೆಲೆಯಲ್ಲಿ ನಕ್ಕು ಸುಮ್ಮನಾಗುವುದೇ ಲೇಸು.

    ಉತ್ತರ
  3. ಚಾಮರಾಜ್….

    ಹಲವಾರು ಪತ್ರಿಕೆಗಳಲ್ಲಿ ಹರಿದಾಡುವ ಸಾಹಿತ್ಯಕ್ಕೆ ಸಮವಾಗಿ ಅಥವಾ ಅದಕ್ಕೂ ಮಿಗಿಲಾಗಿ ಅಂತರ್ಜಾಲದ ತಾಣಗಳಲ್ಲಿ, ಬ್ಲಾಗ್ ಗಳಲ್ಲಿ ಉತ್ತಮ ಗುಣಮಟ್ಟದ ಸಾಹಿತ್ಯ ನಾವು ಕಾಣುತ್ತೇವೆ. ಮಾಧ್ಯಮಗಳು ಬದಲಾದರೆ ಸಾಹಿತ್ಯದ ಭಾವಾಭಿವ್ಯಕ್ತತೆ ಎಂದೂ ಬದಲಾಗದು. ಅದನ್ನೇ ನೀವು ಅತ್ಯಂತ ವಿಷದವಾಗಿ ಹೇಳಿದ್ದೀರಿ. ಪ್ರಾಯಶಃ ವಿಷಯದ ಕುರಿತಂತೆ, ಇದೇ ವಲಯದ ಹಲವರ ಮನದಾಳ ಮತ್ತು ನಿಮ್ಮ ಪ್ರತಿಕ್ರಿಯೆಯನ್ನೂ ಅವರು ಗೌಣವಾಗಿ ಪರಿಗಣಿಸಬಹುದು….. ಬಾವಿಯಲ್ಲಿನ ಕಪ್ಪೆಯ ಲೋಕ…. ಏನೂ ಮಾಡೋಕಾಗಲ್ಲ ಸಾಹಿತ್ಯಾಸಕ್ತರು ತಮಗೆ ಇಷ್ಟವಾಗುವ ಸರಕನ್ನು ಅರಸಿಕೊಂಡು ಸವಿಯುತ್ತಾರೆ ಎನ್ನುವುದು ಮೂಲಭೂತ ತತ್ವ.

    ಉತ್ತರ
  4. ravi murnad's avatar
    ಮೇ 5 2011

    ತಿಪ್ಪೆಗೆ ಹಾಕುವಂತಹ ಬರಹಗಳು ಇಂದಿನ ಪತ್ರಿಕೆಗಳಲ್ಲಿ ಬರುತ್ತವೆ.ಸಾಮಾನ್ಯವಾಗಿ ಹೆಚ್ಚು ಪ್ರಚಾರದಲ್ಲಿ ಇರುವವರ ಬರಹಗಳನ್ನೇ ತಿರುಳಿಲ್ಲದಿದ್ದರೂ ಪ್ರಕಟಿಸುತ್ತವೆ.ಪ್ರಶಸ್ತಿ- ಸಮ್ಮಾ ನಾಗಳೂ ಅಲ್ಲಿಗೆ ಸಂದಾಯವಾಗುತ್ತವೆ.ಪತ್ರಿಕೆಗಳ ವೇದಿಕೆಯಿಲ್ಲದೆ ಇರುವ ಅದೆಷ್ಟು ಮಂದಿ ಸೃಜನಶೀಲ ಬರಹಗಾರರಿಲ್ಲ ನಮ್ಮಲ್ಲಿ ? . ಒಂದು ಪ್ರೋತ್ಸಾಹ- ಮೆಚ್ಚುಗೆ ನುಡಿಗೆ ಅಂರ್ತಜಾಲ ಮಾಧ್ಯಮದಲ್ಲಿ ಇಂತಹ ಸೃಜನ ಶೀಲತೆಗೆ ಸಾಕ್ಷಿಗಳು ಸಿಗುತ್ತವೆ. ಯಾರ ಹಂಗಿಲ್ಲದೆ,ಭಾರವಿಲ್ಲದೆ ಬರೆಯುವುದು ಬರಹ.ಅದನ್ನು ಮೆಚ್ಚಿ ಪ್ರೋತ್ಸಾಹಿಸುವ ಓದುಗರಿದ್ದಾರೆ ಅಷ್ಟೇ ಸಾಕು. ಅದೇ ಬದುಕು.ನಿಮಗೆ ವಂದನೆಗಳು. ಉತ್ತಮ ಮಾಹಿತಿ ಕೊಟ್ಟಿದ್ದೀರಿ.

    ಉತ್ತರ
  5. ksraghavendranavada's avatar
    ಮೇ 5 2011

    ಒ೦ದೊಳ್ಳೆಯ ಲೇಖನ! ಉತ್ತಮ ಚಿ೦ತನೆ!!
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ

    ಉತ್ತರ
  6. venkatakrishna.kk's avatar
    ಮೇ 9 2011

    ಹಲವಾರು ಪತ್ರಿಕೆಗಳಲ್ಲಿ ಹರಿದಾಡುವ ಸಾಹಿತ್ಯಕ್ಕೆ ಸಮವಾಗಿ ಅಥವಾ ಅದಕ್ಕೂ ಮಿಗಿಲಾಗಿ ಅಂತರ್ಜಾಲದ ತಾಣಗಳಲ್ಲಿ, ಬ್ಲಾಗ್ ಗಳಲ್ಲಿ ಉತ್ತಮ ಗುಣಮಟ್ಟದ ಸಾಹಿತ್ಯ ನಾವು ಕಾಣುತ್ತೇವೆ. ಮಾಧ್ಯಮಗಳು ಬದಲಾದರೆ ಸಾಹಿತ್ಯದ ಭಾವಾಭಿವ್ಯಕ್ತತೆ ಎಂದೂ ಬದಲಾಗದು. ಅದನ್ನೇ ನೀವು ಅತ್ಯಂತ ವಿಷದವಾಗಿ ಹೇಳಿದ್ದೀರಿ…..”ಚಾಮರಾಜ್”ರವರ ನಿಲುವು ಸರಿಯಾಗಿದೆ..ನನ್ನದೂ ಇದೇ ಅಭಿಪ್ರಾಯ.

    ಉತ್ತರ

Leave a reply to ksraghavendranavada ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments