ವಿಷಯದ ವಿವರಗಳಿಗೆ ದಾಟಿರಿ

ಮೇ 4, 2011

3

ನಿಮಗೆ ದೇವರ ಅಸ್ಥಿತ್ವದಲ್ಲಿ ನಂಬಿಕೆ ಇದೆಯೇ?

‍ನಿಲುಮೆ ಮೂಲಕ

– ಗೋವಿಂದ ರಾವ್

ವಿಜ್ಞಾನ ಮಾರ್ಗ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕತೆ ಮುಂತಾದ ವಿಷಯಗಳ ಕುರಿತು ನಾನು ಆಯೋಜಿಸುತ್ತಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ ಇದು. ಅಂಥ ಸಂದರ್ಭಗಳಲ್ಲಿ ನಾನು ನೀಡುತ್ತಿದ್ದ ಸ್ಪಷ್ಟ ಉತ್ತರ ಇಂತಿರುತ್ತಿತ್ತು – ‘ಖಂಡಿತ ಇದೆ. ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಪರಸ್ಪರ ವೈರುಧ್ಯಗಳಲ್ಲ, ಪೂರಕಗಳು. ವೈಜ್ಞಾನಿಕತೆ ಕಂದಾಚರಗಳನ್ನೂ ಯಾಂತ್ರಿಕ ಮತೀಯ ಆಚರಣೆಗಳನ್ನೂ ವಿರೋಧಿಸುತ್ತದೆಯೇ ವಿನಾ ಪ್ರಾಮಾಣಿಕ ಸತ್ಯಾನ್ವೇಷಣೆಯನ್ನಲ್ಲ, ಪ್ರಾಮಾಣಿಕ ಸತ್ಯಾನ್ವೇಷಕರನ್ನಲ್ಲ. ವೈಜ್ಞಾನಿಕ ಮನೋಧರ್ಮದ ಪ್ರವರ್ತಕರು ಇಂದಿನ ‘ಸ್ವಘೋಷಿತ ಜಗದ್ಗುರುಗಳು’ ‘ಧರ್ಮ’ದ ಹೆಸರಿನಲ್ಲಿ ಪೋಷಿಸುತ್ತಿರುವ ಮೌಢ್ಯವನ್ನೂ ಕಂದಾಚರಣೆಗಳನ್ನೂ ಪ್ರದರ್ಶಿಸುತ್ತಿರುವ ‘ಪವಾಡ’ಗಳನ್ನೂ ವಿರೋಧಿಸುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ಗೌತಮಬುದ್ಧನ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗಳನ್ನಲ್ಲ.’

ನಾನು ನಂಬಿರುವ ‘ದೇವರು’ ಯಾವುದು? (ಗಮನಿಸಿ: ಯಾರು? ಅಲ್ಲ). ಹಾಲಿ ಅಸ್ಥಿತ್ವದಲ್ಲಿ ಇರುವ ವಿಶ್ವ ಯಾವುದರಿಂದ ಮೂಡಿ ಬಂದಿತೋ ಅದೇ ನಾನು ನಂಬುವ ‘ದೇವರು’. ನಾನು ನೋಡದೇ ಇದ್ದರೂ ಇದೆಯೆಯೆಂದು ನಂಬಿರುವ ‘ದೇವರ’ ಕಿರು ಪರಿಚಯ ಈಗ ಮಾಡಿಕೊಡುತ್ತೇನೆ. ಈ ದೇವರ ವೈಜ್ಞಾನಿಕ ಹೆಸರು ‘ವಿಚಿತ್ರತೆ’. ‘ವೈಚಿತ್ರ್ಯ’ ಎಂದು ಕರೆದರೂ ಆದೀತು. ‘Singularity’ ಎಂಬ ಇಂಗ್ಲಿಷ್ ಪದದ ಭಾಷಾಂತರ ಇದು (ನೋಡಿ: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು). ಈ ದೇವರನ್ನು ಆವಿಷ್ಕರಿಸಿದವರು ವಿಶ್ವವಿಜ್ಞಾನಿಗಳು (Cosmologists).

ನಮಗೆ ಈಗ ತಿಳಿದಿರುವ ಭೌತದ್ರವ್ಯದ (Matter) ಯಾವುದೇ ಸ್ಥಿತಿ ಅಲ್ಲದ್ದು, ನಮಗೆ ತಿಳಿದಿರುವ ಶಕ್ತಿಪ್ರಭೇದಗಳೂ ಅಲ್ಲದ್ದು, ನಮಗೆ ತಿಳಿದಿರುವ ನಾಲ್ಕು ಮೂಲಭೂತ ಭೌತಬಲಗಳು, ಅರ್ಥಾತ್, ಗುರುತ್ವಬಲ, ಪ್ರಬಲ ಬಲ, ದುರ್ಬಲ ಬಲ, ವಿದ್ಯುತ್ಕಾಂತೀಯ ಬಲ – ಇವು ತಮ್ಮ ಪ್ರತ್ಯೇಕ ಅಸ್ಥಿತ್ವ ಪ್ರದರ್ಶಿಸಲಾಗದ ರೀತಿಯಲ್ಲಿ ಒಗ್ಗೂಡಿ ಆಗಿರುವ ಯಾವುದೋ ಒಂದು ಅಜ್ಞಾತ ಬಲದಿಂದ (ಆದಿಬಲ?) ಕೂಡಿದ ಸ್ಥಿತಿಯೇ ಈ ‘ವಿಚಿತ್ರತೆ’. ಈ ಸ್ಥಿತಿಯಲ್ಲಿ ವ್ಯೋಮ (ಅಂತರಿಕ್ಷ/ಆಕಾಶ/ದೇಶ – Space) ಮತ್ತು ಕಾಲ ಸೊನ್ನೆ ಆಗುವುದರಿಂದ ಅರ್ಥಾತ್ ಇಲ್ಲವಾಗುವುದರಿಂದ (!) ಇದರ ಗಾತ್ರ ಊಹಿಸಲಾಗದಷ್ಟು ಚಿಕ್ಕ ಬಿಂದು ಅಥವ ಅಸತ್ ಎಂದು ಪರಿಗಣಿಸಬಹುದಾದ ಸೂಕ್ಷ್ಮಾತಿಸೂಕ್ಷ್ಮ ಕಣದಷ್ಟು ಇರುತ್ತದೆ. ಇದರ ಗಾತ್ರವನ್ನು ‘ಅಣೋರಣೀಯಮ್’ ಎಂದು ವರ್ಣಿಸಬಹುದು. ಅರ್ಥಾತ್, ಅದರ ಹೊರತಾಗಿ ಬೇರೇನೂ ಇರುವುದಿಲ್ಲ, ನಾವು ಇಂದು ‘ಖಾಲಿ ಸ್ಥಳ’ ಎಂದು ಏನನ್ನು ಉಲ್ಲೇಖಿಸುತ್ತೇವೋ ಅದೂ ಇರುವುದಿಲ್ಲ. ಅಂದ ಮೇಲೆ ಈ ‘ವಿಚಿತ್ರತೆ’ಯ ಸುತ್ತಲೂ ಏನಿತ್ತು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಲಿ ವಿಶ್ವದ ಸೃಷ್ಟಿಯಾಗುವ ಮುನ್ನ ಇದ್ದದ್ದು ಈ ‘ವಿಚಿತ್ರತೆ’ ಒಂದೇ. ಎಂದೇ, ಅದು ‘ವಿಚಿತ್ರತೆ’. ನಾವು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲಾಗದ್ದು, ಅವರ್ಣನೀಯವಾದದ್ದು ಈ ‘ವಿಚಿತ್ರತೆ’. ಅನೂಹ್ಯ ಪರಿಮಾಣದ  ತಾಪ ಮತ್ತು ಸಾಂದ್ರತೆ-ಇವೆರಡು ಮಾತ್ರ ಅದರ ಲಕ್ಷಣಗಳಿರಬಹುದೆಂದು ವಿಶ್ವವಿಜ್ಞಾನಿಗಳು ತರ್ಕಿಸಿದ್ದಾರಾದರೂ ಈ ಕುರಿತು ಖಚಿತವಾಗಿ ಹೇಳಲಾಗುವುದಿಲ್ಲ ಎಂಬುದು ನನ್ನ ಅಭಿಮತ. ನಮಗೆ ತಿಳಿದಿರುವ ಭೌತದ್ರವ್ಯಗಳಿಗೆ ಈ ಗುಣಧರ್ಮಗಳು ಅನ್ವಯಿಸುತ್ತವೆಯೇ ವಿನಾ ನಮಗೆ ತಿಳಿಯದಿರುವುದಕ್ಕೆ ಅಲ್ಲ ಎಂಬುದು ನನ್ನ ವಾದ. ಈಗ ಲಭ್ಯವಿರುವ ವೈಜ್ಞಾನಿಕ ಮಾಹಿತಿಯ ಪ್ರಕಾರ ಈ ‘ವಿಚಿತ್ರತೆ’ಯ ಹುಟ್ಟು-ಸಾವುಗಳ ಕುರಿತು ಏನೂ ತಿಳಿಯಲು ಸಾಧ್ಯವಾಗಿಲ್ಲ. ಎಂದೇ, ಹೊಸ ಮಾಹಿತಿ ಲಭ್ಯವಾಗುವ ತನಕ ಅದು ಅನಾದಿ, ಅನಂತ್ಯ, ಶಾಶ್ವತ ಎಂದು ಹೇಳಲು ನನ್ನ ಅಭ್ಯಂತರವಿಲ್ಲ. ಅಂದ ಮೇಲೆ, ಅದರ ಹುಟ್ಟು ಎಂದಾಯಿತು ಎಂದು ಕೇಳುವುದರಲ್ಲಾಗಲೀ, ಅದನ್ನು ‘ಸ್ವಯಂಭು’ ಎಂದು ವರ್ಣಿಸುವುದರಲ್ಲಾಗಲೀ ಅರ್ಥವಿಲ್ಲ. ಈಗ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಆಧರಿಸಿ ತೀರ್ಮಾನಿಸುವುದಾದರೆ, ಅದು ನಿತ್ಯ, ಶಾಶ್ವತ, ನಿರ್ಗುಣ, ನಿರಾಕಾರ, ಅಚಿಂತ್ಯ, ಅದೃಶ್ಯ, ಅಗ್ರಾಹ್ಯ, ಅಶರೀರಿ, ಸೂಕ್ಷ್ಮಾತಿಸೂಕ್ಷ್ಮ, ಇಂಥ ‘ವಿಚಿತ್ರತೆ’ಯಿಂದ ನಮ್ಮ ವಿಶ್ವ ಸುಮಾರು ೧೩.೭೫ ±೦.೧೧ ಬಿಲಿಯನ್ ವರ್ಷಗಳ ಹಿಂದೆ (೧ ಬಿಲಿಯನ್ = ೧೦ವರ್ಷಗಳು) ಸೃಷ್ಟಿ ಆಯಿತು ಎಂದು ವಿಶ್ವವಿಜ್ಞಾನಿಗಳು ಅಂದಾಜಿಸಿದ್ದಾರೆ. ಎಂದೇ, ಈ ವಿಚಿತ್ರತೆಯನ್ನು ‘ದೇವರು’, ‘ಪರಬ್ರಹ್ಮ’ ಎಂದು ನಾನು ತಿಳಿಯುತ್ತೇನೆ.

ಸುಮಾರು ೧೩.೭೫ ±೦.೧೧ ಬಿಲಿಯನ್ ವರ್ಷಗಳ ಹಿಂದೆ ಯಾವುದೋ ಒಂದು ಸುಮುಹೂರ್ತದಲ್ಲಿ ‘ವಿಚಿತ್ರತೆ’ ಇದ್ದಕ್ಕಿದ್ದಂತೆ ಅನೂಹ್ಯ ವೇಗದಲ್ಲಿ ಉಬ್ಬಲಾರಂಭಿಸಿತಂತೆ (Inflate). ಈ ವಿದ್ಯಮಾನವನ್ನು ‘ಮಹಾಸ್ಫೋಟ (Big Bang)’ ಎಂದು ವಿಶ್ವವಿಜ್ಞಾನಿಗಳು ಉಲ್ಲೇಖಿಸುತ್ತಾರೆ. ‘ಮಹಾಸ್ಫೋಟ’ ಎಂಬ ಹೆಸರೇ ತಪ್ಪು ಎಂಬುದು ನನ್ನ ಅಭಿಪ್ರಾಯ. ಇಂದು ನಮಗೆ ತಿಳಿದಿರುವಂತೆ ಸ್ಫೋಟಗಳಾಗುವಾಗ ಕಿವಿಗಡಚಿಕ್ಕುವ ಶಬ್ದದೊಂದಿಗೆ ಬೃಹತ್ ಪರಿಮಾಣದಲ್ಲಿ ಉಷ್ಣಶಕ್ತಿ, ಹೊಗೆ ಇತ್ಯಾದಿಗಳೂ ಉತ್ಪತ್ತಿ ಆಗುತ್ತವೆ. ವಿಶ್ವದ ಹುಟ್ಟಿಗೆ ಕಾರಣವಾದ ‘ಮಹಾಸ್ಫೋಟ’ದಲ್ಲಿ ಇಂತಹುದೇನೂ ಆಗಲಿಲ್ಲ! ವಾಸ್ತವವಾಗಿ ‘ಮಹಾಸ್ಫೋಟ’ದ ನಂತರದ ೧೦-೪೩ ಸೆಕೆಂಡುಗಳಲ್ಲಿ ಏನು ಜರಗಿತೆಂಬುದು ಊಹಿಸಲೂ ಸಾಧ್ಯವಾಗಿಲ್ಲ. ತದನಂತರದ ವಿಶ್ವಸೃಷ್ಟಿಯ ಘಟನಾವಳಿಯ ಕಾಲರೇಖೆಯನ್ನು (ಟೈಮ್ ಲೈನ್) ವಿಶ್ವವಿಜ್ಞಾನಿಗಳು ನಿರ್ಮಿಸಿದ್ದಾರೆ. ಈ ಕುರಿತಾದ ಸಾಹಿತ್ಯ ಅಂತರ್ಜಾಲದಲ್ಲಿ ಸುಲಭಲಭ್ಯವಾದ್ದರಿಂದ ಇಲ್ಲಿ ಅದನ್ನು ತಿಳಿಸುವ ಶ್ರಮ ತೆಗೆದುಕೊಳ್ಳುವುದಿಲ್ಲ. ‘ಮಹಾಸ್ಫೋಟ’ದ ನಂತರದ ೩ ನಿಮಿಷಗಳ ಅವಧಿಯಲ್ಲಿ ಇಂದು ನಾವು ನೋಡುತ್ತಿರುವ, ವಾಸಿಸುತ್ತಿರುವ ವಿಶ್ವದ (ಸಕಲ ಜೀವರಾಶಿಯೂ ಸೇರಿದಂತೆ) ವಿಕಾಸಕ್ಕೆ ಅಗತ್ಯವಾದ ಎಲ್ಲ ಮೂಲದ್ರವ್ಯಗಳೂ, ಮೂಲಬಲಗಳೂ, ಶಕ್ತಿ ಪ್ರಭೇದಗಳೂ ಸೃಷ್ಟಿಯಾದವಂತೆ. ‘ಮಹಾಸ್ಫೋಟ’ದ ನಂತರದ ೧೦-೩೬ ರಿಂದ ೧೦-೩೨ ಸೆಕೆಂಡುಗಳ ಅವಧಿಯಲ್ಲಿ ಸೆಕೆಂಡುಗಳಲ್ಲಿ ಪ್ರೊಟಾನ್ ಗಾತ್ರದಷ್ಟಿದ್ದ ವಿಶ್ವ ದ್ರಾಕ್ಷಿ ಹಣ್ಣಿನ ಗಾತ್ರಕ್ಕೆ ಉಬ್ಬಿತಂತೆ (Inflate). ಅರ್ಥಾತ್, ಬೆಳಕಿನ ವೇಗವನ್ನು ಅನೇಕ ಪಟ್ಟು ಮೀರಿಸುವ ವೇಗದಲ್ಲಿ ಈ ಅವಧಿಯಲ್ಲಿ ವಿಶ್ವ ವಿಕಸಿಸಿದೆ. ಎಂದೇ, ವಿಶ್ವಸೃಷ್ಟಿಯ ಈ ವಾದಕ್ಕೆ (ಸಿದ್ಧಾಂತಕ್ಕೆ) ‘ಮಹಾಸ್ಫೋಟ ವಾದ’ ಎಂದು ಹೆಸರು. ಅಂದು ಆರಂಭವಾದ ವ್ಯಾಕೋಚನ (Expansion) ಇನ್ನೂ ಮುಂದುವರಿಯುತ್ತಿದೆ. ಆದ್ದರಿಂದಲೇ, ಹಾಲಿ ವಿಶ್ವವನ್ನು ‘ವ್ಯಾಕೋಚಿಸುತ್ತಿರುವ ವಿಶ್ವ’ ಎಂದು ಉಲ್ಲೇಖಿಸುವುದೂ ಉಂಟು. ಲಭ್ಯವಿರುವ ಮಾಹಿತಿಯನ್ನು ಆಧರಿಸಿ ರೂಪಿಸಿರುವುದರಿಂದಲೂ ಇದನ್ನು ಪುಷ್ಟೀಕರಿಸುವ ಹೊಸಹೊಸ ಸಾಕ್ಷ್ಯಾಧಾರಗಳು ದೊರೆಯುತ್ತಿರುವುದರಿಂದಲೂ ಇದರಿಂದ ನಿಗಮನ ಮಾಡಿದ ಕೆಲವು ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬಹುದಾದ್ದರಿಂದಲೂ ಬಹುತೇಕ ವಿಜ್ಞಾನಿಗಳು ಒಪ್ಪಿಕೊಂಡಿರುವ ವಾದ ಇದು.

ಅಸತ್ ಎಂದು ಪರಿಗಣಿಸಬಹುದಾದ ‘ವಿಚಿತ್ರತೆ’ ವ್ಯಾಕೋಚಿಸಿದರೆ ಸತ್ ಅನ್ನಬಹುದಾದ ವಿಶ್ವ (ಅರ್ಥಾತ್, ಭೌತದ್ರವ್ಯ, ಶಕ್ತಿ, ವ್ಯೋಮ, ಕಾಲ ಇತ್ಯಾದಿ) ಉತ್ಪತ್ತಿ ಆಗುತ್ತದೆ, ಸತ್ ಅನ್ನಬಹುದಾದ ವಿಶ್ವ ಪುನಃ ಸಂಕುಚಿಸಿದರೆ ತನ್ನ ಮೂಲಸ್ಥಿತಿ ‘ವಿಚಿತ್ರತೆ’ ಮರಳಿ ಅಸತ್ ಆಗುತ್ತದೆ ಎಂದು ಅರ್ಥೈಸಿದರೆ ತಪ್ಪಾಗುವುದಿಲ್ಲ. ವ್ಯಾಕೋಚಿಸುವಿಕೆ-ಸಂಕುಚಿಸುವಿಕೆ ‘ವಿಚಿತ್ರತೆ’ಯ ಅಂತಸ್ಥ ಸ್ವಭಾವ/ಧರ್ಮ(ವಿಶ್ವ ಇಂದಿನಂತೆ ನಿರಂತರವಾಗಿ ವ್ಯಾಕೋಚಿಸುತ್ತಲೇ ಇರುತ್ತದೆ ಎಂದು ವಾದಿಸುವವರೂ ಇದ್ದಾರೆ). ಈ ವ್ಯಾಕೋಚಿಸುವಿಕೆ- ಸಂಕುಚಿಸುವಿಕೆ ಚಕ್ರೀಯವಾಗಿ ನಮಗೆ ಇನ್ನೂ ತಿಳಿಯದ ಯಾವುದೋ ಅಂತಸ್ಥ ನಿಯಮಕ್ಕೆ ಒಳಪಟ್ಟು ಜರಗುತ್ತದೆಯೇ ವಿನಾ ಯಾದೃಚ್ಛಿಕವಾಗಿಯೇ ಆಗಲಿ ಅಥವ ‘ವಿಚಿತ್ರತೆ’ಯನ್ನು ಮೀರಿದ ಶಕ್ತಿಯೊಂದರ ಸಂಕಲ್ಪದಿಂದಾಗಿಯೇ ಆಗಲಿ ಅಲ್ಲ ಎಂಬುದು ನನ್ನ ಗುಮಾನಿ. ಬಹುಶಃ ಅದರ ಅಂತಸ್ಥ ನಿಯಮದನ್ವಯ ವರ್ತಿಸುವುದುರ ಹೊರತಾಗಿ ಅದು ಏನೂ ಮಾಡಲಾರದು. ಅಂತೆಯೇ, ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ. ಆದ್ದರಿಂದ ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ.

ವಿಶ್ವದಲ್ಲಿ ಇರುವುದೆಲ್ಲವೂ ನಾನು ನಂಬಿರುವ ‘ವಿಚಿತ್ರತೆ’ ದೇವರಿಂದಲೇ ಉತ್ಪತ್ತಿ ಆಗಿ ಅದರೊಳಗೇ ಇವೆ. ಅಂದ ಮೇಲೆ, ವಿಕಸಿತ ‘ವಿಚಿತ್ರತೆ’ಯೇ ವಿಶ್ವ ಎಂದು ಹೇಳಬಹುದಲ್ಲವೇ?. ಅರ್ಥಾತ್ ಹಾಲಿ ವಿಶ್ವದಲ್ಲಿ ಇರುವ ಎಲ್ಲವನ್ನು ವಿಘಟಿಸಿದರೆ ದೊರೆಯುವುದು ‘ವಿಚಿತ್ರತೆ’ಯಲ್ಲಿ ಏನಿತ್ತೋ ಅದೇ ಆಗಿರುತ್ತದೆ. ವಿಶ್ವಸೃಷ್ಟಿಗಿಂತ ಮುನ್ನ ‘ವಿಚಿತ್ರತೆ’ಯ ಹೊರತಾಗಿ ಬೇರೇನೂ ಇರಲಿಲ್ಲ ಎಂದೂ ಅದು ವ್ಯಾಕೋಚಿಸುವಾಗ ‘ವಿಚಿತ್ರತೆ’ಯಲ್ಲಿ ಏನಿತ್ತೋ ಅದರಿಂದಲೇ ಇವೆಲ್ಲವೂ ಉತ್ಪತ್ತಿ ಆಗಿದೆಯೆಂದು ಈ ಮುನ್ನವೇ ವಿವರಿಸಿದ್ದೇನೆ. ಅರ್ಥಾತ್, ಈಗಲೂ ವಿಶ್ವ ಎಲ್ಲಿಯ ವರೆಗೆ ವಿಸ್ತರಿಸಿದೆ? ಅದರ ಎಲ್ಲೆ ಎಲ್ಲಿದೆ? ಅದರಿಂದಾಚೆ ಏನಿದೆ? ಮುಂತಾದ ಪ್ರಶ್ನೆಗಳೇ ಅರ್ಥವಿಹೀನವಾದವು. ಇರುವುದೆಲ್ಲವೂ ವಿಶ್ವವೇ. ವಿಶ್ವದ ಹೊರತಾಗಿ ಬೇರೇನೂ ಇಲ್ಲ. ಅರ್ಥಾತ್, ‘ವಿಚಿತ್ರತೆ’ ಸರ್ವವ್ಯಾಪಿಯೂ ಸರ್ವಾಂತರ್ಯಾಮಿಯೂ ಆಗಿದೆ. ಈ ವಿಶ್ವದ ಗಾತ್ರ ಅನೂಹ್ಯ, ಆದ್ದರಿಂದ ಸಧ್ಯಕ್ಕೆ ನನ್ನ ‘ವಿಚಿತ್ರತೆ’ ದೇವರನ್ನು ಮಹತೋಮಹೀಯಾನ್ ಎಂದು ವರ್ಣಿಸಬಹುದು. [Pascal: “The whole visible world is only an imperceptible atom in the ample bosom of nature. No idea approaches it. We may enlarge our conceptions beyond all imaginable space; we only produce atoms in comparison with the reality of things. It is an infinite sphere, the centre of which is everywhere, the circumference nowhere. In short, it is the greatest sensible mark of the almighty power of God that imagination loses itself in that thought.”]

ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ೆಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು. ದುರದೃಷ್ಟವಶಾತ್, ಆಧುನಿಕ ವಿಜ್ಞಾನ ಭೌತಿಕ ಜಗತ್ತಿನ ಆಗುಹೋಗುಗಳ ನಿರ್ಧಾರಕ ನಿಯಮಗಳ ಹಾಗೂ ತತ್ಸಂಬಂಧಿತ ಸಿದ್ಧಾಂತಗಳ ಮೇಲೆ ಮಾತ್ರ ತನ್ನ ಗಮನವನ್ನು ಆಧುನಿಕ ವಿಜ್ಞಾನ ಕೇಂದ್ರೀಕರಿಸಿದೆ. ಜೀವಿವರ್ತನೆಯ ನಿರ್ಧಾರಕ ನಿಯಮಗಳನ್ನು ಉಪೇಕ್ಷಿಸಿದೆ. ದಾರ್ಶನಿಕರು ‘ಧರ್ಮ’ಕ್ಕೆ ನೀಡಿರುವ ವ್ಯಾಖ್ಯಾನಗಳು ‘ಶ್ರೀಸಾಮಾನ್ಯನಿಗೆ’ ಅರ್ಥವಾಗುವ ವಾಕ್ಯಗಳಲ್ಲಿ ಇಲ್ಲವಾದ್ದರಿಂದ (ಉದಾ: ೧. “ಯಾವುದು ಮಾತಿನಿಂದ ವ್ಯಕ್ತವಾಗುವುದಿಲ್ಲವೋ ಯಾವುದರಿಂದ ಮಾತು ವ್ಯಕ್ತವಾಗುವುದೋ ಅದು ಬ್ರಹ್ಮವೆಂದು ತಿಳಿ” —–. ೨. “ಅರಿತುಕೊಂಡಿಲ್ಲ ಎಂದು ಭಾವಿಸುವುದಿಲ್ಲ, ಅರಿತೂ ಇದ್ದೇನೆ ಎಂದು ನಮ್ಮಲ್ಲಿ ಯಾರು ಬಲ್ಲರೋ ಅವರೇ ಬಲ್ಲರು”. ೩. “ಯಾರಿಗೆ ತಿಳಿವಳಿಕೆ ಇಲ್ಲವೋ ಅವನಿಗೆ ತಿಳಿದಿದೆ. ಐಆರಿಗೆ ತಿಳಿವಳಿಕೆ ಇದೆಯೋ ಅವನಿಗೆ ತಿಳಿದಿಲ್ಲ. ತಿಳಿದವರಿಗೆ ತಿಳಿಯದೇ ಇದೆ. ತಿಳಿಯದವರಿಗೆ ತಿಳಿದಿದೆ. ೪. ಯಾವುದನ್ನು ಇದೆಂದು ಉಪಾಸನೆ ಮಾಡುತ್ತಾರೆಯೋ ಇದು ಬ್ರಹ್ಮವಲ್ಲ) ‘ಧರ್ಮ’ವನ್ನು ಅರ್ಥೈಸುವದನ್ನೇ ಜೀವನೋಪಾಯವಾಗಿ ಮಾಡಿಕೊಂಡು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಏನು ಮಾಡಬೇಕೋ ಅದನ್ನೇ ಮಾಡುವವರ ಮತ್ತು ‘ದೇವರನ್ನು’ ಓಲೈಸಲು ನೆರವು ನೀಡುವುದನ್ನೇ ಜೀವನೋಪಾಯವಾಗಿ ಮಾಡಿಕೊಂಡು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಏನು ಮಾಡಬೇಕೋ ಅದನ್ನೇ ಮಾಡುವವರ ವರ್ಗಗಳೇ ಸೃಷ್ಟಿಯಾಗಿವೆ.

“ಅಲ್ಲಿಗೆ ಕಣ್ಣು ಹೋಗುವುದಿಲ್ಲ, ವಾಕ್ಕು ಹೋಗುವುದಿಲ್ಲ, ಮನಸ್ಸು ಹೋಗುವುದಿಲ್ಲ, ನಾವು ಅರಿಯೆವು, ಇದನ್ನು ಹೇಗೆ ಕಲಿಸಿಕೊಡಬೇಕೋ ಅರಿಯೆವು” ಎಂದು ಕೇನೋಪನಿಷತ್ತಿನಲ್ಲಿ ಹೇಳಿರುವುದು ಪ್ರಾಮಾಣಿಕ ಹೇಳಿಕೆ. ಎಂದೇ, ಸ್ವಯಂ ಅಧ್ಯಯನದಿಂದ (ಇದನ್ನು ತಿಳಿದ ಗುರುಗಳು ಸೂಕ್ಷ್ಮದರ್ಶಕದ ನೆರವಿನಿಂದ ಹುಡುಕಿದರೂ ಇಂದು ಸುಲಭಲಭ್ಯರಲ್ಲದಿರುವುದರಿಂದ), ಅಧ್ಯಯಿಸಿದ್ದನ್ನು ಮನನ-ಮಂಥನ ಪ್ರಕ್ರಿಯೆಗೆ ಒಳಪಡಿಸುವುದರಿಂದ ‘ಇದರ’ ಮತ್ತು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡಬಲ್ಲ ‘ಧರ್ಮ’ದ ಅಸ್ಪಷ್ಟ ಪರಿಕಲ್ಪನೆ ರೂಪುಗೊಳ್ಳುವ ಸಾಧ್ಯತೆ ಇದೆಯೇ ವಿನಾ ಕೇವಲ ಬೂಟಾಟಿಕೆಯ ಸತ್ಸಂಗದಿಂದ ಅಥವ ಪುಸ್ತಕದ ಓದು ಮತ್ತು ಯಾಂತ್ರಿಕ ಮತಾಚರಣೆಗಳನ್ನು ಮಾಡುವುದರ ಮುಖೇನ ‘ದೈವಕೃಪೆ’ ಗಿಟ್ಟಿಸಿಕೊಡುವ ದಂಧೆಯವರ ನೆರವಿನಿಂದಲ್ಲ ಎಂಬುದು ನನ್ನ ನಿಲುವು.

ಕೊಸರು: ನಿಮ್ಮ ಭವಿಷ್ಯವನ್ನು ನಿರ್ಧರಿಸುವವರು ನೀವೇ, ದೇವರಲ್ಲ. ಇಂದು ನೀವೇನಾಗಿದ್ದೀರೋ ಅದಕ್ಕೆ ಕಾರಣರೂ ನೀವೇ, ದೇವರಲ್ಲ.

3 ಟಿಪ್ಪಣಿಗಳು Post a comment
  1. kpbolumbu's avatar
    ಮೇ 4 2011

    ಅಸ್ಥಿತ್ವ ಅಲ್ಲ ಅಸ್ತಿತ್ವ.
    ಅಸ್ಥಿ ಎನ್ದರೆ ಎಲುಬು. ಅಸ್ತಿತ್ವ = ಇರವು.

    [‘ಧರ್ಮ’ದ ಹೆಸರಿನಲ್ಲಿ ಪೋಷಿಸುತ್ತಿರುವ ಮೌಢ್ಯವನ್ನೂ ಕಂದಾಚರಣೆಗಳನ್ನೂ ಪ್ರದರ್ಶಿಸುತ್ತಿರುವ ‘ಪವಾಡ’ಗಳನ್ನೂ ವಿರೋಧಿಸುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ಗೌತಮಬುದ್ಧನ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗಳನ್ನಲ್ಲ.]
    ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಪರಸ್ಪರ ಪೂರಕವಾಗಿವೆಯೆಂಬುದು ಹೊಸತಲ್ಲ, ಆದರೆ ಅದನ್ನು ಬುದ್ಧಿಜೀವಿಗಳು ಪ್ರಸ್ತುತಪಡಿಸುವ ರೀತಿ ನಿಜಕ್ಕೂ ಹೊಸತು. ಒಮ್ಮೆ ವಿವೇಕಾನಂದರನ್ನು ಆದರ್ಶವೆನ್ದು ಕರೆಯುತ್ತ ಇನ್ನೊಮ್ಮೆ ಅವರನ್ನೇ ಹುಚ್ಚರೆನ್ದು ಕರೆಯುವ ಬುದ್ಧಿಜಿವಿಗಳ ರೀತಿ ಹೊಸತು. ಎಡಪಂಥೀಯ ಚಿಂತಕರೆನ್ದೋ ಬುದ್ಧಿಜೀವಿಗಳೆನ್ದೋ ತಮ್ಮನ್ನು ತಾವು ಕರೆದುಕೊಳ್ಳುವವರು ರಾಮಕೃಷ್ಣ ಪರಮಹಂಸರನ್ನೂ ಸ್ವಾಮಿ ವಿವೇಕಾನಂದರನ್ನೂ ಹುಚ್ಚರೆನ್ದು ಕರೆದಿರುವುದಕ್ಕೆ ನನ್ನಲ್ಲಿ ಪುರಾವೆಗಳಿವೆ. ಲಂಕೇಶ್ ಒಮ್ಮೆ ಹೀಗೆ ಬರೆದಿರುವುದನ್ನು ಓದಿದ ನೆನಪಿದೆ. ಲಂಕೇಶ್ ಸಾಹಿತ್ಯವನ್ನು ಮೆಚ್ಚುವವರು ಹುಡುಕಿಕೊಟ್ಟಾರು. ಇನ್ನೊನ್ದು ಪುರಾವೆಗಾಗಿ: Swami Vivekananda: a reassessment (Narasingha Prosad Sil – 1997). ಅಲ್ಲಿ ವಿವೇಕಾನನ್ದರ ಕುಱಿತು ವ್ಯಕ್ತವಾಗಿರುವ ಅಭಿಪ್ರಾಯಗಳು ಎಡಪಂಥೀಯ ಚಿಂತಕರು / ಮಾರ್ಕ್ಸ್ ವಾದಿಗಳು ಅವರ ಕುಱಿತಾಗಿ ನಿಜವಾಗಿ ಇಟ್ಟುಕೊಣ್ಡಿರುವಂಥವು. ರಾಜತಾಂತ್ರಿಕ ಸಮೌಚಿತ್ಯಕ್ಕಾಗಿ (ಪೊಲಿಟಿಕಲ್ ಅಪ್ರೋಪ್ರಿಯೇಷನಿಗಾಗಿ) ಹಲ ಬಗೆಯ ವಾದಗಳ ಹೂಡಬಹುದು, ಆದರೆ ಅವು ಯಾವುವೂ ಸಮರ್ಥನೀಯವೆನಿಸಿಕೊಳ್ಳವು.

    ನಿಮ್ಮ ವಾದಗಳೇ ವಿಚಿತ್ರಗಳೂ ವೈಚಿತ್ರ್ಯಗಳೂ ಆಗಿವೆ. ಶಬ್ದಗಳನ್ನು ಭಾಷಾವಿಜ್ಞಾನಿಗಳು ಆವಿಷ್ಕರಿಸಿದರೆ ಚೆನ್ನು.
    [ವಿಚಿತ್ರತೆ’ ಇದ್ದಕ್ಕಿದ್ದಂತೆ ಅನೂಹ್ಯ ವೇಗದಲ್ಲಿ ಉಬ್ಬಲಾರಂಭಿಸಿತಂತೆ (Inflate). ಈ ವಿದ್ಯಮಾನವನ್ನು ‘ಮಹಾಸ್ಫೋಟ (Big Bang)’ ಎಂದು ವಿಶ್ವವಿಜ್ಞಾನಿಗಳು ಉಲ್ಲೇಖಿಸುತ್ತಾರೆ.]
    ಇದು ತಪ್ಪು. ಉಬ್ಬುವಿಕೆಯನ್ನು ಮಹಾಸ್ಫೋಟವೆನ್ದು ಕರೆಯಲಾಗಿಲ್ಲ. ಸ್ಫೋಟವನ್ನೇ ಮಹಾಸ್ಫೋಟವೆನ್ದು ಕರೆಯಲಾಗಿದೆ. ಉಬ್ಬುವಿಕೆ ನಡೆದುದು ಸ್ಫೋಟದ ನನ್ತರವೆಂಬುದು ನಾನು ಕಲಿತ ವಿಜ್ಞಾನದ ಪಾಠ.
    [‘ಮಹಾಸ್ಫೋಟ’ದಲ್ಲಿ ಇಂತಹುದೇನೂ ಆಗಲಿಲ್ಲ!] ನಿಖರವಾಗಿ ಹೇೞುತ್ತಿದ್ದೀರಿ. ಅನ್ತರಜಾಲದಿನ್ದ ದೊರೆತಿರಬಹುದು. 🙂

    ಅಸತ್ = ವಿಚಿತ್ರತೆ, ಆದರೆ ವಿಚಿತ್ರತೆ = ದೇವರು. ಹಾಗೆನ್ದರೆ ಅಸತ್ = ದೇವರು ಎನ್ನಬೇಕಾಗುತ್ತದೆ. ನೀವು ಹೇೞುವನ್ತೆ ಗೌತಮಬುದ್ಧನವರೂ ಬಸವಣ್ಣನವರೂ ಹೀಗೆ ಹೇೞಿದ್ದಾರೆಯೇ?

    [ನಿಮ್ಮ ಭವಿಷ್ಯವನ್ನು ನಿರ್ಧರಿಸುವವರು ನೀವೇ, ದೇವರಲ್ಲ. ಇಂದು ನೀವೇನಾಗಿದ್ದೀರೋ ಅದಕ್ಕೆ ಕಾರಣರೂ ನೀವೇ, ದೇವರಲ್ಲ.]
    ಈ ಬಗೆಯ ದೈವವಾಣಿಯನ್ನೇ ಗೌತಮಬುದ್ಧನವರೂ ಬಸವಣ್ಣನವರೂ ಹೇೞಿದರೇ? [ಗೌತಮಬುದ್ಧನವರಿಗೆ ಮಾತ್ರ ಏಕವಚನ ನನಗೆ ಹಿಡಿಸದು.]
    ಹಾಗೆನ್ನುವಿರಾದರೆ ಅದಕ್ಕೆ ಸರಿಯಾದ ಪುರಾವೆಗಳನ್ನೂ ಒದಗಿಸಿರಿ.

    ಉತ್ತರ
  2. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಮೇ 4 2011

    ಒಳ್ಳೆಯ ಲೇಖನ. ನನ್ನ ಮನಸ್ಸಿಗೆ ತೋಚುತ್ತಿರುವ ಭಿನ್ನಾಭಿಪ್ರಾಯವೊಂದನ್ನು ಹೇಳಿಬಿಡುತ್ತೇನೆ. (ಲೇಖನದ ಬಗ್ಗೆ ಮೆಚ್ಚುಗೆಗಳನ್ನೆಲ್ಲ ಇಲ್ಲಿ ಬರೆಯಲು ಹೋಗುವುದಿಲ್ಲ. ಈ ಭಿನ್ನತೆಯೊಂದನ್ನು ಬಿಟ್ಟು ಉಳಿದುದಕ್ಕೆ ನನ್ನ ಮೆಚ್ಚುಗೆ ಇದೆ ಅಂತ ತಿಳಿದುಕೊಳ್ಳಿ).

    “ಅಧ್ಯಯಿಸಿದ್ದನ್ನು ಮನನ-ಮಂಥನ ಪ್ರಕ್ರಿಯೆಗೆ ಒಳಪಡಿಸುವುದರಿಂದ ‘ಇದರ’ ಮತ್ತು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡಬಲ್ಲ ‘ಧರ್ಮ’ದ ಅಸ್ಪಷ್ಟ ಪರಿಕಲ್ಪನೆ ರೂಪುಗೊಳ್ಳುವ ಸಾಧ್ಯತೆ ಇದೆಯೇ ವಿನಾ ಕೇವಲ ಬೂಟಾಟಿಕೆಯ ಸತ್ಸಂಗದಿಂದ ಅಥವ ಪುಸ್ತಕದ ಓದು ಮತ್ತು ಯಾಂತ್ರಿಕ ಮತಾಚರಣೆಗಳನ್ನು ಮಾಡುವುದರ ಮುಖೇನ ಸಾಧ್ಯವಿಲ್ಲ” ಎಂಬಂತೆ ಬರೆದಿದ್ದೀರಿ. ಇದು ಪೂರ್ತಿ ಸರಿ ಅಲ್ಲ ಅಂತ ನನ್ನ ತಿಳುವಳಿಕೆ. ಯಾಕೆಂದರೆ, ಉಪನಿಷತ್ತುಗಳಲ್ಲಿ “ಜಿಜ್ಞಾಸು” ಎಂಬ ಶಬ್ದ ಪ್ರಯೋಗ ಇದೆ. ಇದನ್ನು ಸ್ಥೂಲವಾಗಿ “ಸತ್ಯವನ್ನು (ಅಂದರೆ ಅಸತ್ ಅನ್ನು) ಹುಡುಕುವ, ಅದನ್ನು ತಿಳಿದುಕೊಳ್ಳುವ, ಮತ್ತು ಅಧ್ಯಾತ್ಮಿಕ ಸಾಧನೆ ಮಾಡುವ ಇಚ್ಚೆ” ಎಂದು ಹೇಳಬಹುದು. (ನನ್ನದೇ ಪದಪ್ರಯೋಗ ಬಳಸಿದ್ದೇನೆ. ಮೂಲ ಆಕರ ಈಗ ನಾನು ಬರೆಯುತ್ತಿರಲು ನನ್ನ ಬಳಿ ಲಭ್ಯವಿಲ್ಲ). ಅಂದರೆ ಇಂತಹಾ “ಜಿಜ್ಞಾಸು” ವಿಗೆ ಮಾತ್ರ “ಅರಿಯುವ” ಹುಚ್ಚಿರುತ್ತದೆ. ಈಗ ಈ ಜಿಜ್ಞಾಸೆ ಹೇಗೆ ಬರುತ್ತದೆ? ಯಾಕೆ ಬರುತ್ತದೆ? ಎಲ್ಲರಿಗೂ ಏಕೆ ಬರುವುದಿಲ್ಲ? ಎಂಬಿತ್ಯಾದೆ ಪ್ರಶೆಗಳು ಹುಟ್ಟುತ್ತವಷ್ಟೆ. ಅದಕ್ಕೆ ಉಪನಿಷತ್ತುಗಳು ಕೊಡುವ ಉತ್ತರ – ಯಾವನು ಸತ್ಕರ್ಮಗಳನ್ನು ಮಾಡಿ, ಸತ್ಸಂಗ, ಪೂಜೆ ಪುನಸ್ಕಾರ, ದಾನ ಧರ್ಮ ಇತ್ಯಾದಿಗಳನ್ನು ಮಾಡುತ್ತಾನೋ ಅಂಥಹವನಿಗೆ ಸಂಚಿತ ಪಾಪ ಕರ್ಮಗಳು ನಿವಾರಣೆಯಾಗಿ ಅವನ ಮನಸ್ಸಿನಲ್ಲಿ ಜಿಜ್ಞಾಸೆ ಹುಟ್ಟುತ್ತದೆ – ಎಂಬುದಾಗಿ. ಇಲ್ಲಿ ಪಾಪ ಎಂದರೆ ಕೆಟ್ಟದ್ದು ಎಂದರ್ಥವಲ್ಲ ಬದಲಾಗಿ “ವಾಸನೆ” ಎಂಬರ್ಥದ್ದು. ಅಂದ ಒಳ್ಳೆಯದು ಕೆಟ್ಟದು ಎನ್ನುವ ಸಂಶಯಗಳು (ಚಿತ್ತವೃತ್ತಿ) ನಿವಾರಣೆಯಾಗುತ್ತದೆ ಅಂತ.

    ಇದರಿಂದ ತಿಳಿದು ಬರುವುದೇನೆಂದರೆ ಜಿಜ್ಞಾಸುವೊಬ್ಬನಿಗೆ ನೀವು ಹೇಳಿದ ಧಾರ್ಮಿಕ ಆಚರಣೆಗಳು ಅಗತ್ಯವಿಲ್ಲದಿದ್ದರೂ ಜಿಜ್ಞಾಸುವಿನ ಹಂತ ತಲುಪಲು ಇವು ಖಂಡಿತಾ ಅವಶ್ಯಕವಾಗಿವೆ. ಇದೇ ಕಾರಣಕ್ಕೆ ಶಂಕರರು ಮೂರ್ತಿ ಪೂಜೆ ಇತ್ಯಾದಿಗಳನ್ನು ತಾತ್ವಿಕವಾಗಿ ಒಪ್ಪದಿದ್ದರೂ ತಾವೇ ಸ್ವತ: ಶಾರದಾ ಪೀಠ ಸ್ಥಾಪನೆ ಮಾಡುವುದರ ಮೂಲಕ ಮೂರ್ತಿ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಅಂತ ನನಗೆ ಅನಿಸುತ್ತದೆ. ಆ ಮೂಲಕವಾದರೂ ಧಾರ್ಮಿಕತೆ ಬೆಳೆದರೆ ಅದು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಆಧ್ಯಾತ್ಮಿಕ ಉನ್ನತಿಗೆ ಸಹಾಯವಾಗುತ್ತದೆ ಎಂದು ಅಂದುಕೊಂಡಿದ್ದರೋ ಏನೋ.

    ಇನ್ನು ಈ ಧಾರ್ಮಿಕತೆ ನಿಜವಾಗಿಯೂ ತನಗೆ ತಾನೇ ಅಪಾಯಕಾರಿಯಲ್ಲ. ಧಾರ್ಮಿಕತೆ ಮತಾಂಧತೆಯನ್ನೇ ಉಂಟುಮಾಡುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಇದಕ್ಕೆ ಉದಾಹರಣೆ ಕರ್ನಾಟಕದ ಭಕ್ತಿ ಪರಂಪರೆ ಮತ್ತು ಶರಣ ಪರಂಪರೆಗಳು. ಯಾವಾಗ ಧಾರ್ಮಿಕತೆ ಜೊತೆ ರಾಜಕೀಯ ಅನಿವಾರ್ಯತೆಗಳು ತಳುಕು ಹಾಕಿಕೊಳ್ಳುತ್ತವಯೋ ಆಗ ಮಾತ್ರ ಇದು ಮತಾಂಧತೆಯಾಗಿ ಪರಿವರ್ತನೆಯಾಗುತ್ತದೆ. (ಮತಾಂಧತೆಯನ್ನು ನಿಮ್ಮ ಲೇಖನದಲ್ಲಿ ಪ್ರಸ್ತಾಪಿಸಿಲ್ಲ, ಆದರೆ ಈ ಸಂವಾದದಲ್ಲಿ ಧಾರ್ಮಿಕತೆ ಎಂದು ಪ್ರಸ್ತಾಪವಾಗಿದ್ದರಿಂದ ಮತ್ತು ಧಾರ್ಮಿಕತೆಗ ಎನ್ನುವುದು ಇತ್ತೀಚೆಗೆ ಮತಾಂಧತೆ ಎನ್ನುವುದಕ್ಕೆ ಪರ್ಯಾಯವಾಗಿಯೇ ಏನೋ ಎಂಬಂತೆ ಉಪಯೋಗಿಸಲ್ಪಡುತ್ತಿರುವುದರಿಂದ ಇದನ್ನು ಬರೆದಿದ್ದು)

    ಉತ್ತರ
  3. Aryaan's avatar
    Aryaan
    ಸೆಪ್ಟೆಂ 23 2015

    ಇದೆಲ್ಲಾ ನಮ್ಮಂಥ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಬಿಡಿ, ದೇವರ ಮೇಲೆ ಭಾರ ಹಾಕಿ ನೆಮ್ಮದಿಯಾಗಿದ್ದೆವೆ, ನಮ್ಮ ನೆಮ್ಮದಿ ಕೀಳಬೇಡಿ, (ದೇವರ ಅಸ್ಥಿತ್ವದಲ್ಲಿ ನಂಬಿಕೆ ಇಲ್ಲ ಎನ್ನುವವರಿಗೆ)

    ಉತ್ತರ

Leave a reply to Aryaan ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments