ವಿಷಯದ ವಿವರಗಳಿಗೆ ದಾಟಿರಿ

ಮೇ 6, 2011

5

ಅಮೇರಿಕಾ ಕಲಿಸಿದ ಪಾಠ…?

‍ನಿಲುಮೆ ಮೂಲಕ

 ಅರೆಹೊಳೆ ಸದಾಶಿವ ರಾವ್

ಅಂತ:ಶಕ್ತಿ ಮತ್ತು ಅಂತರಿಕ ದೌರ್ಬಲ್ಯದ ಬಗ್ಗೆ ಒಂದು ಮಾತಿದೆ. ಅಂತ:ಶಕ್ತಿ ಲಾಭದಾಯಕವಾದರೆ, ಅಂತರಿಕ ದೌರ್ಬಲ್ಯ ಅಪಾಯಕಾರಿ. ವಿಶ್ವದ ಉಗ್ರರ ಪಟ್ಟಿಯಲ್ಲಿ ನಂ.೧ ನೆಯ ಸ್ಥಾನದಲ್ಲಿದ್ದವನು ಒಸಾಮಾ ಬಿನ್ ಲ್ಯಾಡೆನ್. ಅಮೇರಿಕಾ ಅವನನ್ನು ಹತ್ತುವರ್ಷಗಳ ಭೇಟೆಯ ನಂತರ ಕೊಂದು ಮುಗಿಸಿದೆ. ಗುಣಕ್ಕೆ ಮತ್ಸರವಿಲ್ಲದಂತೆ ಭಾವಿಸಿದರೆ, ಅಮೆರಿಕಾಕ್ಕೆ ಈ ವಿಷಯದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಹಾಗೇ ಸುಮ್ಮನೇ ಒಮ್ಮೆ ನಮ್ಮ ಪರಿಸ್ಥಿತಿಗೆ ಈ ಘಟನೆಯನ್ನು ಸಮೀಕರಿಸಿಕೊಳ್ಳೋಣ. ಭಾರತದ ಪವಿತ್ರ ಸಂಸತ್ತಿನ ಮೇಲೆ ಉಗ್ರ ಅಫ್ಜಲ್ ದಾಳಿ ಮಾಡಿದ ಮತ್ತು ಸಿಕ್ಕಿ ಬಿದ್ದ. ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿಯಲ್ಲಿ ಕಸಬ್ ಸಿಕ್ಕಿ ಬಿದ್ದ. ನಾವು, ಇಬ್ಬರನ್ನೂ ಕಟ Pಟೆಯಲ್ಲಿ ನಿಲ್ಲಿಸಿದೆವು. ಇಬ್ಬರಿಗೂ ಅವರ ಪರವಾಗಿ ವಾದ ಮಾಡಲೆಂದು, ಒಲ್ಲೆ ಒಲ್ಲೆನೆಂದರೂ ವಕೀಲರನ್ನು ಸರಕಾರಿ ಖರ್ಚಿನಲ್ಲಿ ಒದಗಿಸಿಕೊಟ್ಟೆವು. ವಾದ ವಿವಾದಗಳು ನಡೆದುವು. ಎಲ್ಲರೂ ನಿರೀಕ್ಷಿಸಿದ್ದಂತೆ, ನ್ಯಾಯಾಲಯ ನ್ಯಾಯ ನೀಡಿತು. ಜೊತೆಗಿದ್ದ ಕೆಲವರು ಆರೋಪ ಮುಕ್ತರಾದರೆ, ಈ ದಾಳಿಗಳ ರೂವಾರಿಗಳಾದ ಅಫ್ಜಲ್, ಕಸಬ್‌ರಿಗೆ ಮರಣದಂಡನೆಯನ್ನು ನ್ಯಾಯಾಲಯ ಘೋಷಿಸಿತು. ಈಗ ಕಸಬ್ ಕಾನೂನು ಸಮರ ಮುಂದುವರಿಸಿದ್ದರೆ, ಅಫ್ಜಲ್ ದಯಾ ಭಿಕ್ಷೆಯನ್ನುಕೇಳಿಕೊಂಡು, ಕೆಲವು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಅಫ್ಜಲ್‌ನ ಕಥೆ ಏನು ಎಂಬುದಕ್ಕೆ ಯಾವ ಸರಕಾರವೂ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ‘ರಾಜಕೀಯ’ ಲೆಕ್ಕಾಚಾರದಲ್ಲಿ ಸಿಗಬಹುದಾದ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.
ಹಲವು ಸಾವಿಗೆ ಕಾರಣರಾದ ಉಗ್ರರಾದ ಅಫ್ಜಲ್ ಮತ್ತು ಕಸಬ್‌ರ ‘ರಕ್ಷಣೆ’ಗಾಗಿ ನಮ್ಮ ಸರಕಾರಗಳು ಕೋಟಿ ಕೋಟಿ ವ್ಯಯಿಸುತ್ತಿವೆ. ಮತ್ತೊಂದರ್ಥದಲ್ಲಿ ನಮ್ಮ ಮೇಲೆ, ನಮ್ಮ ಸ್ವಾಭಿಮಾನದ ಮೇಲೆ ಮತ್ತು ತೀರಾ ನಮ್ಮ ಮಾತ್ರಭೂಮಿಯ ಮೇಲೆ, ದಾಳಿಯ ಮೂಲಕ ಅಕ್ಷಮ್ಯ ಅಪರಾಧವನ್ನು ಮಾಡಿದ ಈ ಉಗ್ರರನ್ನು ನಾವು ‘ರಕ್ಷಿ’ಸುತ್ತಿದ್ದೇವೆ.
ಇನ್ನು ಪಾಕಿಸ್ಥಾನದ ಮಾತು. ಈ ಎಲ್ಲದರ ಹಿಂದೆ ಇರುವುದು ಪಾಕಿಸ್ಥಾನವೇ ಎಂಬುದು ನಮಗೆ ಮತ್ತು ಜಗತ್ತಿಗೇ ಗೊತ್ತಿರುವ ಸತ್ಯ. ಇಡೀ ಪಾಕಿಸ್ಥಾನವೇ ಒಸಾಮಾ ತಮ್ಮಲ್ಲಿಲ್ಲ ಎಂದು ಹೇಳುತ್ತಿದ್ದಂತೆಯೇ, ಭಾರತಕ್ಕೆ ಅತಿಯಾಗಿ ಬೇಕಾಗಿರುವ ದಾವೂದ್‌ನನು ತಮ್ಮಲ್ಲಿಲ್ಲ ಎಂದೇ ಹೇಳುತ್ತಿದೆ. ಒಂದೆಡೆ ಕ್ರಿಕೆಟ್ ಪಂಧ್ಯದ ಮೂಲಕವೇ ಅದೇನೋ ಶಾಂತಿ ಸ್ಥಾಪನೆಗೆ ಯತ್ನಿಸುವ  ನಾಟಕವಾಡುವ ಪಾಕ್, ಒಳಗೊಳಗೇ ಭಾರತದ ವಿರುದ್ದ, ಪಾತಕಿ ಕೆಲಸ ಮಾಡುತ್ತಿದೆ. ಬಹುಶ: ಪಾಕಿಸ್ಥಾನ ಕ್ರಪಾಪೋಷಿತ ಭಯೋತ್ಪಾದಕತೆಯಿಂದ ಜೀವ ತೆತ್ತ ಭಾರತೀಯ ಜೀವಗಳು, ಇನ್ನೂ ಶಾಂತಿ ಸಿಗದೆ ಪರದಾಡುತ್ತಿರಬಹುದು!. ಆದರೂ   ಪಾಕ್ ಹೇಳುವ ಶಾಂತಿ ಮಂತ್ರವನ್ನು ನಾವು ಮತ್ತು ನಮ್ಮ ನಾಯಕರು ಕ್ರಿಕೆಟ್ ಮೈದಾನದಲ್ಲಿ ಸಿಗಬಹುದು ಎಂದು ‘ಹುಡುಕು’ತ್ತೇವೆ. ದುರಂತವೆಂದರೆ  ಈ ಹುಡುಕುವಿಕೆಯನ್ನು ನಾವು ‘ಪಾಕೋದಯದ’ ಇಷ್ಟೂ ವರ್ಷಗಳ ಕಾಲವೂ ಮುಂದುವರಿಸಿಕೊಂಡಿದ್ದೇವೆ.
ಇನ್ನು ಅಮೇರಿಕಾ. ಪಾಕ್ ಹೇಳುತ್ತಲೇ ಇತ್ತು, ಲಾಡೆನ್ ತಮ್ಮಲ್ಲಿಲ್ಲ ಎಂದು. ಗಮನಿಸಬೇಕಾದ ವಿಷಯವೆಂದರೆ ಈ ಪಾತಕಿ ಪಾಕ್ ನಲ್ಲೇ ಇದ್ದ ಎಂದು ಅಮೇರಿಕಾಕ್ಕೆ ಕಳೆದ ೮ ತಿಂಗಳಿಂದಲೇ ಗೊತ್ತಿತ್ತು ಎಂಬ ಸತ್ಯ ಆಶ್ಚರ್ಯ ಹುಟ್ಟಿಸುತ್ತದೆ. ಇಲ್ಲಿಯೂ ಈ ಸತ್ಯವನ್ನು ನಮ್ಮೊಡನೆ ಸಮೀಕರಿಸಿಕೊಂಡರೆ, ನಮಗೇನಾದರೂ ಇದು ಗೊತ್ತಾಗಿದ್ದರೆ, ಮರು ದಿನವೇ ಮಾದ್ಯಮಗಳು ಒಸಾಮಾ ಇರುವಿಕೆಯ ತಾಣವನ್ನು ವರದಿ ಮಾಡುತ್ತಿದ್ದುವು! ಬಹುಶ: ಲಾಡೆನ್‌ನ ಚಲನವಲನಗಳನ್ನೂ ಶೂಟ್ ಮಾಡಿ, ಚ್ಯಾನೆಲ್‌ಗಳು ಟಿಆರ್‌ಪಿ ಹೆಚ್ಚಿಸಕೊಳ್ಳುತ್ತಿದ್ದುವು. ಅವನನ್ನು ಕಂಡು ಹಿಡಿದಿದ್ದೇವೆ, ನಮಗೊಪ್ಪಿಸಿ ಎಂದು ಪಾಕಿಸ್ಥಾನಕ್ಕೆ ‘ಆರ್ಡಿನರಿ ಪೋಸ್ಟ್’ನಲ್ಲಿ ಪತ್ರ ವ್ಯವಹಾರ ಮಾಡುತ್ತಾ ಕಾಲ ತಳ್ಳುತ್ತಿದ್ದೆವೇನೋ. ಒಂದೊಮ್ಮೆ ಅಕಸ್ಮಾತ್ತಾಗಿ, ಆತನೇನಾದರೂ ನಮ್ಮ ಕೈಗೆ ಸಿಕ್ಕಿದ್ದರೆ, ಅವನ ಪರವಾಗಿ ವಕಾಲತ್ತು ಮಾಡಲು ವಕೀಲನನ್ನು ನೇಮಿಸಿ, ಒಂದಷ್ಟು ವರ್ಷಗಳ ಕಾಲ ಹಾಗೆ ಸುಮ್ಮನೇ ಕಾಲ ಕಳೆದು, ಕೊನೆಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿ, ದಯಾ ಭಿಕ್ಷೆಗೆ ನಾವೇ ಅರ್ಜಿ ಬರೆದುಕೊಟ್ಟು, ಮತ್ತೆ ಅವನನ್ನು ಬದುಕುಳಿಸುವ ಪ್ರಯತ್ನ ಮಾಡುತ್ತಿದ್ದೆವೇನೋ. ಆದರೆ ಅದೇ ಒಸಾಮಾ ವಿಷಯದಲ್ಲಿ ಅಮೇರಿಕಾ ಏನು ಮಾಡಿದೆ ಎಂಬುದು ಈಗ ಜಗಜ್ಜಾಹೀರು-ಮತ್ತೆ ವಿವರಣೆ ಬೇಡ ಅನಿಸುತ್ತದೆ
ಇವತ್ತು ನಮಗೆ ತೀರಾ ಬೇಕಾದ ದಾವೂದ್ ಪಾಕಿಸ್ಥಾನದ ನೆಲದಲ್ಲಿ ಮದುವೆಯ ಮನೆಯಲ್ಲೂ ಕಾಣಿಸಿಕೊಳ್ಳುತ್ತಾನೆ. ಅಲ್ಲಿನ ಕ್ರಿಕೆಟಿಗನೊಂದಿಗೆ ಸಂಬಂಧ ಗಟ್ಟಿಗೊಳಿಸಿಕೊಳ್ಳುತ್ತಾನೆ. ಅಲ್ಲಯೇ ಕುಳಿತು ಕ್ರಿಕೆಟ್ ಮ್ಯಾಚ್ ಫಿಕ್ಸ್‌ಗೊಳಿಸಿಕೊಳ್ಳುತ್ತಾನೆ. ಆದರೂ ಅವನು ಪಾಕಿಸ್ಥಾನದಲ್ಲಿ ಇಲ್ಲ ಎಂಬ ಮಾತನ್ನು ನಂಬಿ, ಅವನನ್ನು ಹುಡುಕಲು ಮತ್ತೆ ಮತ್ತೆ ಜನರ ಕೋಟಿಗಟ್ಟಲೇ ವ್ಯಯಿಸುತ್ತೇವೆ. ಇದಲ್ಲವೇ ಕುಚೋದ್ಯ?
ಒಸಾಮಾ ಬಿನ್ ಲ್ಯಾಡೆನ್ ಹತನಾದ ಎಂದು ಪ್ರಕಟವಾಗುತ್ತಲೇ, ಎಲ್ಲೋ ಒಂದು ಅಭಿಪ್ರಾಯ ಓದಿದೆ. ಲಾಡೆನ್ ಸತ್ತ ಆದರೆ ಅವನಿಗಿಂತ ಅಮೇರಿಕಾ ಜಗತ್ತಿಗೇ ದೊಡ್ಡ ಭಯೋತ್ಪಾದಕ ಎಂದು!. ಇದು ಪಾಕಿಸ್ಥಾನದ ಸಾವಭೌಮತ್ವದ ಉಲ್ಲಂಘನೆ ಎಂದು ಮುಶ್ಶರಫ್ ಎಂಬ ಉಗ್ರತ್ವ ಸೃಷ್ಟಿಕರ್ತ ಹೇಳಿದ್ದನ್ನೂ ಓದಿದ್ದೇವೆ. ಈ ಎರಡೂ ಹೇಳಿಕೆಗಳಿಗೆ ಕಾರಣಗಳಿರಬಹುದು. ಅಮೇರಿಕಾದಂತ ವಿಶ್ವದ ದೊಡ್ಡದೊಂದು ದೇಶ, ಪಾಕಿಸ್ಥಾನಕ್ಕೇ ಹೊಕ್ಕು, ಪಾಕ್‌ನ ಗಮನಕ್ಕೂ ತಾರದೇ ಲಾಡೆನ್‌ನನ್ನು ಹೊಡೆದುರುಳಿಸಿದ್ದು, ಶಕ್ತ ಅಮೇರಿಕಾ ಎಲ್ಲಿ ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವ ಅಹಂ ತೋರಿದೆ ಎಂಬುದು ಈ ಮಾತುಗಳ ಅಂತರಿಕ ಅರ್ಥಇರಬಹುದೇನೋ. ಆದರೆ ದುಷ್ಟ ದಮನವಾಗಬೇಕಾದರೆ, ದುಷ್ಟತನದ ಕ್ರಪಾಪೋಷಿತ ಶಕ್ತಿಗಳ ವಿಷಯದಲ್ಲಿ ಕೆಲವು ಅಪ್ರಿಯ, ಆದರೆ ಅನಿವಾರ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲೇ ಬೇಕಾಗುವುದು ರಾಜಕಾರಣದಲ್ಲಿ ಸಹ್ಯವೇ ಸರಿ ಎಂಬಲ್ಲಿಗೆ ಅಮೇರಿಕಾ, ಪಾಕಿಸ್ಥಾನವನ್ನೇ ಕಾದು ಕುಳಿತಿದ್ದರೆ, ಇನ್ನೂ ಹತ್ತು ವರ್ಷವಾದರೂ ಲಾಡೆನ್‌ನ್ನು ಕೊಲ್ಲಲೂ ಸಾದ್ಯವೇ ಆಗುತ್ತಿರಲಿಲ್ಲ. ಇದೇ ಮಾತು ಸದ್ದಾಂ ವಿಷಯದಲ್ಲೂ, ಈಗ ನಡೆಯುತ್ತಿರುವ ಗಡ್ಡಾಫಿ ವಿರುದ್ದದ ಯುದ್ದದಲ್ಲೂ, ಮುಂದೆ ನಡೆಯಲಿರುವ ಹತ್ತು ಹಲವಾರು ಘಟನೆಗಳಲ್ಲು ಸಾಧಿತವಾಗುತ್ತಲೇ ಇರುತ್ತದೆ.!
ಈ ಎಲ್ಲವನ್ನೂ ಇಂದು ಎಲ್ಲರಿಗಿಂತ ಹೆಚ್ಚು ಗಮನಿಸಬೇಕಾದ ಅನಿವಾರ್ಯತೆ ನಮಗಿದೆ, ನಮ್ಮ ದೇಶಕ್ಕಿದೆ. ಉಗ್ರತ್ವದಿಂದ  ಅತೀ ಹೆಚ್ಚು ನಲುಗಿದ ದೇಶಗಳಲ್ಲಿ ಭಾರತವೂ ಒಂದು. ನಮ್ಮಲ್ಲೂ ಆ ಸಾಮರ್ಥ್ಯವಿದೆ ಎಂದು, ಲಾಡೆನ್ ಹತ್ಯೆಯ ನಂತರ ಪ್ರಧಾನಿಗಳಾದಿಯಾಗಿ ಎಲ್ಲರೂ ಹೇಳುತ್ತಿದ್ದಾರೆ. ಮತ್ತು ಆ ಮಾತಿನಲ್ಲಿ ಪ್ರತೀ ಭಾರತೀಯನಿಗೂ ನಂಬಿಕೆಯೂ ಇದೆ. ನಂಬಿಕೆ ಇಲ್ಲದಿರುವ ವಿಷಯವೆಂದರೆ, ಆ ಸಾಮರ್ಥ್ಯವನ್ನು ಹೊರ ಜಗತ್ತಿಗೆ ತೋರಿಸಿ, ನಮಗೆ ದಕ್ಕಬೇಕಾದ ನ್ಯಾಯ ಪಡೆಯಲು ಬೇಕಾಗುವ  ನಮ್ಮ ಮನೋಬಲದ ಬಗ್ಗೆ! ಲಾಡೆನ್ ಹತ್ಯೆಯ ನಂತರ, ನಾವು ಗಮನಿಸಬೇಕಾದ ಮತ್ತೂ ಒಂದು ವಿಷಯವೆಂದರೆ, ಮುಖ್ಯವಾಗಿ ದೇಶವೊಂದಕ್ಕೆ ಶಕ್ತಿ ಇದ್ದರೆ ಸಾಲದು, ಇಚ್ಛಾಶಕ್ತಿಯೂ ಇರಬೇಕಾಗುತ್ತದೆ ಎಂಬುದು.
ಮೊದಲು ಜೈಲಿನಲ್ಲಿರುವ ಮತ್ತು ಆ ಮೂಲಕ ನಮ್ಮ ಕೋಟಿಗಟ್ಟಲೇ ಹಣವನ್ನು ರಕ್ಷಣೆಗೆ ನುಂಗಿ ನೀರುಕುಡಿಯುತ್ತಿರುವ ಅಫ್ಜಲ್, ಕಸಬ್‌ನಂತ ಪಾಕ್ ಪೋಷಿತ ಉಗ್ರರಿಗೆ ನಾವೇ ಪ್ರಕಟಿಸಿದ ಮರಣದಂಡನೆಯನ್ನು ಜಾರಿಗೊಳಿಸಿ, ಜಗತ್ತಿಗೇ ಒಂದು ಸಂದೇಶ ಕೊಡುವ ಮೂಲಕ, ನಮ್ಮ ನೆಲದ ರಕ್ಷಣೆಗೆ ನಾವು ಬದ್ದರು ಎಂಬುದನ್ನು ತೋರಿಸಿಕೊಡೋಣ. ಉಗ್ರತ್ವದ ವಿರುದ್ದದ ಹೆಜ್ಜೆಗಳಲ್ಲಿ ಇನ್ನೂ ಧ್ರಢತೆಯನ್ನು ಬೆಳೆಸಿಕೊಂಡು, ಪಾಕ್ ಮೇಲೆ ಒತ್ತಡ ಹೇರಲು ಇದು ತಕ್ಕ ಸಮಯವೆಂಬುದನ್ನು ಅರ್ಥ ಮಾಡಿಕೊಳ್ಳೋಣ. ಅಮೇರಿಕಾದಂತಹ ದೇಶ ಪಾಕ್‌ತನಕ ಹೊಕ್ಕು ಭಯೋತ್ಪಾದಕತೆ ದಮನಗೊಳಿಸುವಲ್ಲಿ ಸಫಲವಾಗುತ್ತದೆ ಎಂದಾದರೆ, ನಮ್ಮೊಳಗಿರುವ ಉಗ್ರ ಸಂಹಾರ ನಮಗೆ ಎಷ್ಟು ಮಾತ್ರಕ್ಕೂ ಕಠಿಣವಲ್ಲ ಎಂಬುದನ್ನು ಸಾಧಿಸಿತೋರಿಸೋಣ.
ಲಾಡೆನ್ ಹತ್ಯೆ ಭಾರತದ ಮಟ್ಟಿಗೆ ಉಗ್ರ ದಮನ ಮತ್ತು ಪಾಕ್ ಪಿತೂರಿಯ ವಿರುದ್ದದ ಹೋರಾಟಕ್ಕೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ಮನಗಂಡು, ನಮ್ಮ ಸರಕಾರ ಕಾರ್ಯಪೃವೃತ್ತವಾದರೆ, ಅದೇ ಅಮೇರಿಕಾದಿಂದ ನಾವು ಕಲಿತ ಬಹುದೊಡ್ಡ ಪಾಠವಾದೀತು. ಮುಖ್ಯವಾಗಿ ಈಗ ಬೇಕಾದ್ದು ರಾಜಕೀಯ ಇಚ್ಚಾಶಕ್ತಿ-ಮನೋಬಲ!.

*******

ಚಿತ್ರಕೃಪೆ: solcomhouse.com

5 ಟಿಪ್ಪಣಿಗಳು Post a comment
  1. Narendra Kumar.S.S's avatar
    Narendra Kumar.S.S
    ಮೇ 6 2011
  2. Pramod's avatar
    ಮೇ 6 2011
  3. ರವಿ's avatar
    Ravi
    ಮೇ 6 2011

    ನಂಬಿಕೆ ಇಲ್ಲದಿರುವ ವಿಷಯವೆಂದರೆ, ಆ ಸಾಮರ್ಥ್ಯವನ್ನು ಹೊರ ಜಗತ್ತಿಗೆ ತೋರಿಸಿ, ನಮಗೆ ದಕ್ಕಬೇಕಾದ ನ್ಯಾಯ ಪಡೆಯಲು ಬೇಕಾಗುವ ನಮ್ಮ ಮನೋಬಲದ ಬಗ್ಗೆ!

    ಮಾತು!

    ಉತ್ತರ
  4. Raghu idkidu's avatar
    Raghu idkidu
    ಮೇ 7 2011

    ಅರೆಹೊಳೆಯವರೇ…. ಸರಿಯಾಗಿಯೇ ಹೇಳಿದ್ದೀರಿ.

    ಉತ್ತರ
  5. ಸರಕಾರ ಮಾಡುತ್ತಿರುವುದಕ್ಕಿಂತ ದೊಡ್ಡ ತಪ್ಪನ್ನು ಪತ್ರಕರ್ತರು / ಬುದ್ಧಿಜೀವಿಗಳು ಮಾಡುತ್ತಿದ್ದಾರೆ. ಮುಂಬಯಿ ಮೂಲದ ಸುರೇಂದ್ರನ್ ಎಂಬವರು ಕಸಬ್ ಎಂಬ ದುಷ್ಟನನ್ನು ವೈಭವೀಕರಿಸಿ ಕಾದಂಬರಿಯನ್ನೂ ಬರೆದಿದ್ದಾರೆ.

    ಉತ್ತರ

Leave a reply to Raghu idkidu ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments