ವಿಷಯದ ವಿವರಗಳಿಗೆ ದಾಟಿರಿ

ಮೇ 11, 2011

2

ಬ್ಯಾಂಕಿನ ಹೆಸರಲ್ಲಿ ಬರೋ ಸಂದೇಶಗಳ ಬಗ್ಗೆ ಎಚ್ಚರ..!!

‍ನಿಲುಮೆ ಮೂಲಕ

– ಸತ್ಯ ಚರಣ

ಸಂದೇಶ ನನಗೆ ಬಂದು ಬಿದ್ದಿದ್ದ ಜಾಗವೇ.. ಸ್ಪ್ಯಾಮ್..! ಇದರ ಒಟ್ಟು ಕತೆ ಏನು ಗೊತ್ತಿದ್ದರೂ.. ಒಮ್ಮೆ ನೋಡಿ ಬಿಡೋಣ ಅಂತ ಅನ್ನಿಸಿತ್ತು.. ಹೆಚ್ಚಿನ ವಿಚಾರ, ಇದರ ಬಗ್ಗೆ ತಿಳಿಯುವುದು ಒಳ್ಳೆಯದೇ ಅನ್ನೋ ಉದ್ದೇಶದಿಂದ.. ಈ ಸಂದೇಶವನ್ನ ತೆರೆದು ನೋಡಿದೆ.. ಇದು ಒಂದು ಬ್ಯಾಂಕಿನ ಹೆಸರಿನಲ್ಲಿ ಬಂದ ಸ್ಪ್ಯಾಮ್..!

ಯಾವುದೇ ಸಂದೇಶ, “Netbanking Status”, “Need to update your netbanking account/password” ಅಥವಾ ಇದಕ್ಕೆ ಸಮೀಪದ/ಹೋಲಿಕೆಯ ವಿಷಯಗಳೊಂದಿಗೆ ಬಂದಾಗ, ಅದು ಖಂಡಿತ ಒಂದು “FAKE MAIL” “ಮೋಸದ ಸಂದೇಶ” ಅನ್ನೋದು ಖಚಿತ.. ಇದರ ಬಗ್ಗೆ ನನ್ನಲ್ಲಿದ್ದ ವಿಚಾರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವ ಅನ್ನೋ ಯೊಚನೆ ಈ ಬರಹಕ್ಕೆ ಕಾರಣ..

HDFC ಹೆಸರಲ್ಲಿ ಬಂದಿದ್ದ ಮೇಲ್ ಗೂಗಲ್‌ನ ಕೃಪೆಯಿಂದ ಬಂದು ಬಿದ್ದದ್ದು “ಸ್ಪ್ಯಾಮ್ ತೊಟ್ಟಿ”ಯಲ್ಲಿ ಅಂದಾಗಲೇ, ಇದು ಎಡವಟ್ಟಿನ ಸಂದೇಶ ಅಂತ ತಿಳಿದರೂ.. ತೆರೆದು ನೋಡಿದಾಗ ಅದರ ವಿವರ ಇಂತಿತ್ತು..

ಅಬ್ಬಾ..! ಎಷ್ಟು ಹುಷಾರಾಗಿದಾರಪ್ಪ ಈ ಜನ, ಈಗ..! ಅಂತನ್ನಿಸಿತು.. ಯಾಕೆಂದರೆ, ಹಿಂದೊಮ್ಮೆ ಇದೇ ರೀತಿಯಲ್ಲಿ ಸಂದೇಶವೊಂದು ಬಂದಾಗ, ನಾನು ಮೊದಲು ಮಾಡಿದ ಕೆಲಸ.. “Show Details” ಅನ್ನೋ ಆಯ್ಕೆಯನ್ನ ಒತ್ತಿದ್ದು.. ಅಲ್ಲೇ ನನಗೆ ತಿಳಿದಿತ್ತು ಇದು, ಬ್ಯಾಂಕಿನವರ ಸಂದೇಶವಲ್ಲ ಅಂತ..! ಆದರೆ, ಇಲ್ಲಿ ತಿಳಿಯಲು ಸಾಧ್ಯವೇ ಇಲ್ಲ.. ಎಲ್ಲಾ ರೀತಿಯಲ್ಲೂ ಅವರು ಬ್ಯಾಂಕನ್ನ ಹೋಲುವ ರೀತಿಯಲ್ಲಿ ತಯಾರಿ ನಡೆಸಿದ್ದಾರೆ.. (ಕೆಂಪು ರೇಖೆಯೊಂದಿಗಿನ ವೃತ್ತವನ್ನ ಗಮನಿಸಿ)

ಹಾಗಾದರೆ, ಈ ಸಂದೇಶಗಳನ್ನ ಹೇಗಪ್ಪಾ ಪತ್ತೆ ಹಚ್ಚೋದು…?

ಮೊದಲಿಗೆ.. ಮುಖ್ಯವಾಗಿ ನೆನಪಿಡಿ..

೧. ಯಾವುದೇ ಬ್ಯಾಂಕ್ ನಿಮ್ಮ ನೆಟ್‌ಬ್ಯಾಂಕಿಂಗ್‌ನ ವಿಚಾರದಲ್ಲಿ ನಿಮ್ಮಿಂದ “update” ಮಾಡಿ ಅಂತ ಯಾವುತ್ತೂ ಕೇಳಲ್ಲ..

೨. ನಿಮ್ಮ ನೆಟ್‌ಬ್ಯಾಂಕಿಂಗ್‌ನ ಗುಪ್ತಪದವನ್ನ ಈ ಮೂಲಕ “ಬದಲಾಯಿಸಿ” ಅಂತ ಎಂದಿಗೂ ಕೇಳಲ್ಲ.

೩. ಗುಪ್ತಪದವನ್ನ ಅತ್ಯಂತ ಗೋಪ್ಯವಾಗಿ ಇಡಿ.. ಕಾಲ ಕಾಲಕ್ಕೆ ಬದಲಾಯಿಸಿ ಅನ್ನ ಬಹುದೇ ವಿನಹ, ಈ ಕೆಳಗಿನ ಕೊಂಡಿಯ ಮೂಲಕ ಅಥವಾ ಈ ಕೆಳಗಿನ “ಫಾರ್ಮ್” ಉಪಯೋಗಿಸಿ.. ಬದಲಾಯಿಸಿ ಅನ್ನೋಲ್ಲ..

೪. ನಿಮ್ಮ ಅಕೌಂಟ್‌ನ ವಿವರ ಅಥವಾ ರಹಸ್ಯಪದವನ್ನ ಈ ಮೂಲಕ/ನೇರ ಅಂತರ್ಜಾಲದ ಮೂಲಕ ನೀಡಿ ಎಂದು, ಎಂದೂ ಕೇಳಲ್ಲ..

ಹಾಗೇ.. ಇಲ್ಲಿ ಕೊಟ್ಟಿದ್ದ ಲಗತ್ತನ್ನ ತೆರೆದು ನೋಡಿದ ನನಗೆ ಗಾಬರಿ ಕಾದಿತ್ತು.. ಅಬ್ಬಾ.. ಎನೇನು ವಿಚಾರ ಇವರು ನಮ್ಮಿಂದ ಎಷ್ಟು ಸಲೀಸಾಗಿ ತೆಗೆದುಕೊಳ್ಳೋ ಪ್ರಯತ್ನದಲ್ಲಿ ಇದ್ದಾರಪ್ಪಾ ಅಂತ ಹೆದರಿಕೆಯಾಯ್ತು.. ಹಾಗೇ.. ನಿಮಗೆಂದೇ.. ಇಲ್ಲಿ ಅದರ ಎರಡು ಚಿತ್ರಗಳು ಕೂಡ ಇದೆ.. ನೋಡಿ..

ಇನ್ನೂ ಇದೆ ನೋಡಿ.. ಇಲ್ಲಿ ಕೆಳಗೆ.. !

ನೋಡಿ ಸಾರ್..!! ಏನೇನು ವಿವರ ಕೇಳ್ತಾ ಇದಾರೆ ಅಂತ.. ಇನ್ನೇನು ಬೇಕು ಹೇಳಿ..

ಬಹುಶಃ ನೀವೆ ಎಲ್ಲವನ್ನೂ ಕೊಟ್ಟ ಮೇಲೆ ಮರೆಯುತ್ತೀರಾ.. ಅವರು ಮರೆಯಲ್ಲ..

ಏಕೆಂದರೆ, ನೀವು ಕೊಟ್ಟ ವಿವರ ಹೋಗ್ತಾ ಇರೋದು ಬ್ಯಾಂಕಿಗಲ್ಲ..

ಇದನ್ನ, ಈ ಸ್ಪ್ಯಾಮ್‌ಅನ್ನ ತಯಾರಿಸಿದ ಬುದ್ದಿವಂತ ಹಗಲು ದರೋಡೆಕೋರನ “ಸರ್ವರ್”ಗೆ.

ಅಲ್ಲಿ ನಿಮ್ಮ ಎಲ್ಲ ವಿವರಗಳು “ಸೇಫ್”.

ಹಾಗೇ.. ನಿಮ್ಮ ಹಣ ಕೂಡ ಕೆಲವೇ ಕ್ಷಣಗಳಲಿ ಅವನ ಬಳಿ “ಸೇಫ್”.

ಸೇಫ್ ಮಾಡಿಕೊಂಡವನೂ ಸೇಫ್..

ಏಕೆಂದರೆ, ಅವನ ವಿವರಗಳಾವುವು ನಿಮ್ಮಲ್ಲಿಲ್ಲ..!

ಬ್ಯಾಂಕಿಗೂ ಅವನಿಗೂ ಸಂಬಂಧವೇ ಇಲ್ಲ..!

ದೂರು ಯಾರ ಬಗ್ಗೆ ಕೊಡೋದು ಅಂತ ಗೊತ್ತಾಗೋದೇ ಇಲ್ಲ..!

ನಮ್ಮಿಂದ ಎಲ್ಲಾ ವಿವರಗಳನ್ನ ಅವರು ಇಷ್ಟು ಸುಲಭವಾಗಿ ಪಡೆದ ಮೇಲೆ, ಇನ್ನು ಎಲ್ಲವನ್ನೂ, ಆ ಅಕೌಂಟಿನಲ್ಲಿರೋ ಎಲ್ಲಾ ಹಣವನ್ನೂ ಪಡೆದಂತೆ, ನಾವಾಗಿಯೇ ಕೊಟ್ಟಂತೆ ಅಲ್ಲವೇ..!

ನನ್ನ ಪರಿಚಯದವರೊಬ್ಬರು ಹೇಳುತ್ತಿದ್ದ ಮಾತನ್ನ ಇಲ್ಲಿ ನಾನು ಹೇಳಲೇಬೇಕಾಗಿದೆ.. ಅಲ್ಲಾ ಸರ್.. ಈ ಆನಲೈನ್ ಟ್ರಾನ್ಸ್ಯಾಕ್ಷನ್ ಸೇಫ್ ಅಲ್ಲಾ ಅಲ್ವಾ?.. ತುಂಬಾ ಡೇಂಜರಸ್..ಅಲ್ವಾ..!” ನನಗೆ ಈಗ ಅದಕ್ಕೆ ಉತ್ತರ ಈ ರೀತಿಯಲ್ಲಿ ಹೇಳಬೇಕು ಅನಿಸುತ್ತಾ ಇದೆ..

“ಸರ್, ನಮ್ಮ ಮನೆಗಳಲ್ಲಿ ಇರೋ ಈ ಕತ್ತಿ, ಈಳಿಗೆ ಮಣೆ, ಕಾಯಿ ತುರಿಯೋ ಮಣೆ, ಚಾಕುಗಳು ತುಂಬಾ ಡೇಂಜರ್ ಅಲ್ವಾ..? ಮಕ್ಕಳ ಕೈಗೆ ಸಿಕ್ಕರೆ ಜೀವನೇ ಹೋಗಿಬಿಡುತ್ತೆ ಸರ್..!”

ಅಂದರೆ ನನ್ನ ಮಾತಿನ ಅರ್ಥ ನಿಮಗೆ ಆಗಿರಬಹುದು ಅನ್ಕೋತೀನಿ.. ಗೊತ್ತಿಲ್ಲದವರ ಕೈಗೆ ಸಿಕ್ಕರೆ, ಎಲ್ಲವೂ “ಡೇಂಜರಸ್ಸೇ”.. ಅಪಾಯ, ಎಚ್ಚರಿಕೆ ಇಂದ ಇದ್ದಾಗ ಕಮ್ಮಿ ಅಲ್ಲವೇ.. ಹಾಗೆಂದರೆ.. ರಸ್ತೆಯಲ್ಲಿ ನಡೆಯೋದು(ರಸ್ತೆ ಮಧ್ಯದಲ್ಲಿ ಅಲ್ಲ) ಅದೂ ಬೆಂಗಳೂರಿನಂತ ಊರಿನಲ್ಲಿ ತುಂಬಾ ಡೇಂಜರ್..!

ಇನ್ನೂ ಹೆಚ್ಚಿನ ವಿವರ, ಮತ್ತೆ ಸಮಯವಿದ್ದಾಗ ಹಂಚಿಕೊಳ್ಳುವ..!

ಹೇಳುತ್ತಾ ಹೋದಷ್ಟೂ.. ಮುಗಿಯದ ಕತೆಗಳು, ಈ ಕಾಲದ ಮೋಸದ ವಿವರಗಳು, ಘಟನೆಗಳು.

ನಿಮ್ಮ ಅನುಭವಗಳನ್ನ ಹಂಚಿಕೊಳ್ಳಿ.. ಇತರರಿಗೂ ಉಪಯೋಗವಾಗಲಿ..

ಒಲವಿಂದ,

ಸತ್ಯ..:-)

2 ಟಿಪ್ಪಣಿಗಳು Post a comment
  1. aparna's avatar
    aparna
    ಮೇ 11 2011

    thanks for information and warning

    ಉತ್ತರ
  2. amita ravikiran's avatar
    ಮೇ 11 2011

    ಇಂಥ ಅನುಭವ ನಮ್ಮೊಂದಿಗು ಘಟಿಸಿದೆ…
    ಮೊನ್ನೆ ಮೊನ್ನೆ ಯಷ್ಟೇ…ನಾವು ನಮ್ಮ ವೀಸಾ ಮುಂದುವರಿಕೆಗೆ ಅರ್ಜಿ ಸಲ್ಲಿಸಿದ್ದೆವು…ಜೊತೆಗೆ…ಅದರ ಶುಲ್ಕವನ್ನು ಆನ್ಲೈನ್ ಬ್ಯಾಂಕಿಂಗ್ ನಿಂದಲೇ ಪಾವತಿಸಬೇಕಾಗಿತ್ತು…ಯುರೋಪಿಯ ರಾಷ್ಟ್ರಗಳಲ್ಲಿ..ಹಣವನ್ನು ನೇರವಾಗಿ ಕೊಡುವುದು…ಪಡೆಯುವುದು ಅತಿ ಅಪರೂಪ ಎಂದರೆ ತಪ್ಪಲ್ಲ….ನಾವು ಅರ್ಜಿಯೊಂದಿಗೆ ನಮ್ಮ ಬ್ಯಾಂಕ್ ವಿವರಗಳನ್ನು ಲಗತ್ತಿಸಿದ್ದೆವು….ಮರುದಿನವೇ…ಸತ್ಯ ಅವರು ಉಲ್ಲೇಖಿಸಿದಂತಹ ಮೇಲ್ ನಮ್ಮ ಮಿಂಚಂಚೆ ವಿಳಾಸಕ್ಕೆ ಬಂದು ಬಿದ್ದಿತ್ತು…ನಿಮ್ಮ ವಿವರದಲ್ಲಿ ಕೆಲವು ತಪ್ಪುಗಳಿವೆ ದಯಮಾಡಿ ಸರಿಯಾದ ಮಾಹಿತಿ ಕೊಡಲು ಇಲ್ಲಿ ಕ್ಲಿಕ್ಕಿಸಿ…ಇಲ್ಲವಾದಲ್ಲಿ ನಿಮ್ಮ ವೀಸಾ ಮುಂದುವರಿಕೆಯಲ್ಲಿ ಅಡೆತಡೆ ಯಾಗುವ ಸಂಭವ ಜಾಸ್ತಿ…ಎಂದೂ ಬರೆಯಲಾಗಿತ್ತು…ಮತ್ತು ಯು.ಕೆ ಇ-ಬ್ಯಾಂಕಿಂಗ್ ವತಿಯಿಂದ ಬಂದ ಮೇಲ್ ಎಂದೂ ಒತ್ತಿ ಹೇಳಲಾಗಿತ್ತು….ಅನುಮಾನ ಬಂದು ಅಧಿಕೃತ ಸೈಟ್ ಗೆ ಹೋಗಿ ನೋಡಿದರೆ ಅವರು ಹೋಂ ಪೇಜ್ ನಲ್ಲಿಯೇ ಇಂಥ ಮೇಲ್ ಗಳ ಬಗ್ಗೆ ಎಚ್ಹರಿಕೆ ಕೊಟ್ಟಿದ್ದರು….
    ಪ್ರಶ್ನೆ ಅವರ ಜಾಣತನ ಅಥವಾ ನಮ್ಮ ಸಮಯಪ್ರಜ್ಞೆಯದ್ದಲ್ಲ….ಅಷ್ಟೊಂದು ಗೌಪ್ಯವಾದ ವಿಷಯಗಳು…ನಾವು ಅರ್ಜಿ ಸಲ್ಲಿಸಿದ ವಿಷಯ..ಜೊತೆಗೆ ನಮ್ಮ ಇ-ಮೇಲ್ ವಿಳಾಸ ಗಳು ಅವರ ದೊರೆಯುವುದಾದರು ಎಲ್ಲಿಂದ….?????ಎಂಬುದು ಮಾತ್ರ ಚಿಂತೆ -ಮತ್ತು ಚಿಂತನೆಗೆ ಹಚ್ಚುವ ವಿಚಾರ…
    ಸತ್ಯ ಅವರಿಗೆ ಧನ್ಯವಾದಗಳು…

    ಉತ್ತರ

Leave a reply to amita ravikiran ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments