ವಿಷಯದ ವಿವರಗಳಿಗೆ ದಾಟಿರಿ

ಜುಲೈ 8, 2011

ಅಮಾಯಕರ ಜೀವಕ್ಕೆ ಬೆಲೆಯಿದೆಯೇ?

‍ನಿಲುಮೆ ಮೂಲಕ

– ಮುರುಳಿಧರ್ ದೇವ್

ಭಯಾನಕ ಭಾನುವಾರ, ನಿನ್ನೆಯ ಭಾನುವಾರ ನಿಜಕ್ಕೂ ತುಂಬಾ ಭಯಾನಕವಾಗಿತ್ತು. ಮನೆ ಮನೆಗೆ ಕೇಬಲ್ ಹಾಕುವ , ಕೆಟ್ಟರೆ ಅದನ್ನು ದುರಸ್ತಿ ಮಾಡುವ, ತಿಂಗಳಿಗೆ ಕೇಬಲ್ ಹಣವನ್ನು ಮಾಲೀಕನಿಗೆ ಒಪ್ಪಿಸುವ ಅಮಾಯಕ ಹುಡುಗನೊಬ್ಬ ಹೈ ಟೆನ್ಶನ್ (ವೋಲ್ಟೇಜ್)  ವಾಯರ್ ಗೆ ತಗುಲಿ ಚಿಂತಾ ಜನಕ  ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾನೆ. ಆತ ಮಾಡಿದ ತಪ್ಪೆಂದರೇ  ಹೈ ಟೆನ್ಶನ್ ವಾಯರ್ ಕೆಳೆಗೆ ಕಟ್ಟಿಕೊಂಡ ಎರಡು ಅಂತಸ್ತಿನ  ಮನೆಯ ಕೇಬಲ್ ದುರಸ್ತಿ ಮಾಡಲು  ಪ್ರಯತ್ನಿಸಿದ್ದು. ಈ ಮುಂಚೆ ಅದೇ ಮನೆಗೆ ಪೈಂಟ್ ಮಾಡುವಾಗ, ಪೇಂಟರ್ ಹುಡುಗನೊಬ್ಬ ಕೂದಲೇಳೆ ಅಂತರದಲ್ಲಿ ಇಂತಹ ಅನಾಹುತದಿಂದ ತಪ್ಪಿಸಿಕೊಂಡಿದ್ದ. ಅಂದು ಪೇಂಟರ್ ಹುಡುಗನ ಜೊತೆಗಿದ್ದ ಅದೃಷ್ಟ ಈ ಕೇಬಲ್ ಹುಡುಗನ ಜೊತೆಗಿರಲಿಲ್ಲ. ಈತನ ದೇಹ ಸಂಪೂರ್ಣ ಸುಟ್ಟು ಹೋಗಿದ್ದು ಬದುಕಿದ್ದಾನೆ ಅಂತ ಗುರುತಿಸಲು ಇರುವ ಅಂಶ ಎಂದರೆ ಆತನ ಕಣ್ಣುಗಳು. ಆತನನ್ನು ಎತ್ತಿ ಆಟೋದಲ್ಲಿ ಮಲಗಿಸಬೇಕಾದರೆ ಆತನ ಚರ್ಮ ಕಿತ್ತು ಕೈಗೆ ಬರ್ತಾ ಇತ್ತು. ಇಂತಹ ಸಮಯದಲ್ಲಿ ೧೦೮ ಆಂಬ್ಯುಲೆನ್ಸ್ ಗೆ ಕರೆ ಮಾಡಿದರೆ ಅವರು ಬರುವಷ್ಟರಲ್ಲಿ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಶುರುವಾಗಿತ್ತು. ಇನ್ನೂ ಆಂಬ್ಯುಲೆನ್ಸ್ ಬರುವ ವರೆಗೂ ಕಾದರೆ ಆತನ ಪ್ರಾಣಾಪಾಕ್ಷಿ ಆತನಲ್ಲಿ ಇರುತ್ತಿರಲಿಲ್ಲ.

ಇಷ್ಟಕ್ಕೆಲ್ಲ ಕಾರಣ ಆತ ಎರಡಂಟಸ್ತಿನ ಮನೆಯ ಕೇಬಲ್ ದೂರಸ್ತಿ ಮಾಡಲು ಹೋದದ್ದು, ಆದರೆ ಅಂತಹ ಅಸುರಕ್ಷಿತ ಸ್ಥಳದ ಕೆಳಗೆ ಮನೆ ಕಟ್ಟಲು, ವಿದ್ಯುತ್ ಸಂಪರ್ಕ ಪಡೆಯಲು ಅನುಮತಿ ನೀಡಿದವರಾರು? 440 volts ವೋಲ್ಟೇಜ್ ಇರುವ ಟ್ರ್ಯಾನ್ಸ್‌ಫಾರ್ಮರ್ ಸುತ್ತ ಬೇಲಿ ಹಾಕಿ ಅಪಾಯ ಅಂತ ಬರೆಸುವ ಅಧಿಕಾರಿಗಳಿಗೆ, ಇಂತಹ ಅಪಾಯದ ಸ್ಥಳದಲ್ಲಿ ಮನೆ ಕಟ್ಟೋಕೆ ಅನುಮತಿ ಕೊಡಬಾರದು ಅನ್ನೋ ಸಣ್ಣ ಪ್ರಜ್ಞೆ ಇಲ್ಲದೇ ಹೋಯ್ತೆ? ಮನೆ ಕಟ್ಟೋದು ಹೋಗಲಿ ವಿದ್ಯುತ ಸಂಪರ್ಕ ಕೊಡಬೇಕಾದರೆ BESCOM ನವರಿಗಾದರೂ ಬುದ್ದಿ ಬೇಡವೇ?
ಇಷ್ಟೆಲ್ಲಾ ಅನಾಹುತ ಆದ ಮೇಲೆ ಈಗ ಬಂದು ಆ ಮನೆಯ ವಿದ್ಯುತ್ ಸಂಪರ್ಕ ಕಡಿತ ಗೊಳಿಸಿದ್ದಾರೆ. ಈ ಕಣ್ಣೊರೆಸುವ ನಾಟಕ ಎಷ್ಟು ದಿನಾನೊ ನೋಡ್ಬೇಕು. ಸಣ್ಣ ಪುಟ್ಟ ತಪ್ಪಿಗೆ ಜನರನ್ನು ಅಲೆದಾಡಿಸುವ, ಪೇಚಿಗೆ ಸಿಲುಕಿಸುವ ಅಧಿಕಾರಿಗಳಿಗೆ ಇದೆಲ್ಲ ಕಾಣಿಸೋದಿಲ್ವಾ? ಅಥವಾ ಜಾಣ ಕುರುದುತನವೋ? ಏನು ತಪ್ಪು ಮಾಡದ ಆತನ ಜೀವಕ್ಕೆ ಬೆಲೆಯೇ ಇಲ್ಲವೇ? ಇನ್ನೂ ಈ ತರಹ ಎಷ್ಟು ಅಮಾಯಕರ ಪ್ರಾಣ ಹೋಗಬೇಕು? ಕೇಬಲ್ ಹುಡುಗನೋ ಪಾಪ ಈಗ್ಗೆ ಆರು ತಿಂಗಳ ಮದುವೆಯಾದವ ಆತನ ಪ್ರಾಣಕ್ಕೆ ಏನಾದರೂ ಹೆಚ್ಚು ಕಡಿಮೆ ಆದರೆ ಆತನ ಹೆಂಡತಿಯ, ವಯಸ್ಸಾದ ತಂದೆ ತಾಯಿಗಳ ಪರಿಸ್ಥಿತಿ ಏನಾಗಬೇಡ?
ಅದ್ಯಾಕೋ ಜನರಿಗೂ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ. ಈ ತಂತಿಯ ಕೆಳಗಡೆ ನೂರಾರು ಮನೆಗಳ ನಿರ್ಮಾಣವಾಗಿದೆ. ಕೆಲವರಂತೂ ಎರಡೆರಡು ಅಂತಸ್ತುಗಳನ್ನು ಕಟ್ಟಿಕೊಂಡು ಜೀವಗಳ ಜೊತೆಗೆ ಆಟ ಆಡ್ತಾ ಇದಾರೆ. ಇಂತಹ ಅಮಾಯಕರ ಜೀವಗಳಿಗೆ ರಕ್ಷಣೆ ನೀಡಬೇಕಾದವರು ಯಾರು?

(ಚಿತ್ರ ಕೃಪೆ : news.bbc.co.uk)

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments