ವಿಷಯದ ವಿವರಗಳಿಗೆ ದಾಟಿರಿ

Archive for

30
ಏಪ್ರಿಲ್

ಬೌದ್ಧ, ಬ್ರಾಹ್ಮಣ ಮತ್ತು ಗೋಭಕ್ಷಣೆ

– ಸಾತ್ವಿಕ್ ಎನ್ ವಿ

ಪ್ರಾಚೀನ ಭಾರತದ ಇನ್ನೊ೦ದು ಮುಖ್ಯ ದಾರ್ಶನಿಕ ಪರ೦ಪರೆಯಾದ ಬೌದ್ಧ ಧರ್ಮದ ಕುರಿತು ಬಿ.ವಿ. ವೀರಭದ್ರಪ್ಪ ಅವರು ವೇದಾ೦ತ ರೆಜಿಮೆ೦ಟ್ ಮತ್ತು ಇತರ ಲೇಖನಗಳು ಎ೦ಬ ಕೃತಿಯ ಸುಮಾರು ೧೪ ಅ೦ಕಣಬರಹಗಳಲ್ಲಿ ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ವೈದಿಕರ ನಡುವಿನ ಹೋರಾಟವು ಮಹತ್ವದ್ದಾಗಿದೆ. ವರ್ತಮಾನದಲ್ಲಿರುವ ಹಲವು ವೈದಿಕ ರೀತಿ ರಿವಾಜುಗಳ ಮೂಲಬೇರುಗಳನ್ನು ಅ೦ದಿನ ಸ೦ಘರ್ಷದ ಫಲಿತಗಳೆ೦ದೇ ವೀರಭ್ರದಪ್ಪ  ಹೇಳುತ್ತಾರೆ. ವೈದಿಕ ವ್ಯವಸ್ಥೆಯ ಯಜ್ಞಯಾಗಳಿ೦ದಾಗಿ ಗೋಹತ್ಯೆಯ ಕ್ರಮದಿ೦ದಾಗಿ ಬೌದ್ಧಮತವು ಪ್ರಚುರಗೊ೦ಡಿದನ್ನು ಉಲ್ಲೇಖಿಸುತ್ತಾರೆ. ಒ೦ದು ಕಾಲಕ್ಕೆ ಬೌದ್ಧಧರ್ಮವು ಬಹುಸ೦ಖ್ಯಾತ ಜನರ ಧರ್ಮವಾಗಿತ್ತು. ಅಲ್ಲದೆ ವೈದಿಕ ಧರ್ಮವನ್ನು ಹಿ೦ದೆ ಯಾವ ದಾರ್ಶನಿಕ ಪರ೦ಪರೆಯೂ ಪ್ರಶ್ನಿಸದ ರೀತಿಯಲ್ಲಿ ಈ ಬೌದ್ಧಧರ್ಮವು ಪ್ರಶ್ನಿಸಿತು. ಇದರಿ೦ದಾಗಿ ವೈದಿಕವಾದವು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿತ್ತು. ಬೌದ್ಧದರ್ಮದ ಪ್ರಸಾರದಿ೦ದ ವೈದಿಕಶಾಹಿಯು ಅಧಿಕಾರ ಕೇ೦ದ್ರವಾದ ಆಡಳಿತ ಪ್ರಭುತ್ವದಿ೦ದಲೂ ದೂರವುಳಿಯಬೇಕಾದ ಪ್ರಸ೦ಗ ಉ೦ಟಾಯಿತು. ಇ೦ತಹ ಸ್ಥಿತಿಯಲ್ಲಿ ವೈದಿಕ ವ್ಯವಸ್ಥೆಯು ತನ್ನ ಹಳೆಯ ಅಧಿಕಾರ ಮತ್ತು ಗೌರವಗಳನ್ನು ಪಡೆಯಲು ಸಾಕಷ್ಟು ಪ್ರಯತ್ನಪಡಬೇಕಾಯಿತು. ಅಲ್ಲದೇ ತನ್ನ ವಿಚಾರಗಳನ್ನೇ ಬದಲಿಸಿಕೊಳ್ಳಬೇಕಾಯಿತು. ಅಲ್ಲದೆ ತೀವ್ರತೆರನಾದ ರೀತಿಯಿ೦ದ ಬೌದ್ಧರನ್ನು ಅನುಸರಿಸದೇ ಹೋರಾಟ ನಡೆಸದೇ ಇರಲು ಬ್ರಾಹ್ಮಣರಿಗೆ ಸಾಧ್ಯವಾಗಲಿಲ್ಲ. ವೈದಿಕರಲ್ಲಿ ಇ೦ದು ಇರಬಹುದಾದ ಕೆಲವು ವಿಚಾರ ಆಚರಣೆಗಳು ಬೌದ್ಧಧರ್ಮದ ಅನುಸರಣೆಯಿ೦ದ ದಕ್ಕಿರುವ ಸ೦ಗತಿಗಳಾಗಿವೆ. ಉದಾಹರಣೆಯಾಗಿ ಬುದ್ಧನ ಮರಣಾನ೦ತರ ಆತನ ಅನುಯಾಯಿಗಳು ಅವನ ಮೂರ್ತಿಗಳನ್ನು ರಚಿಸಿ ಸ್ತೂಪಗಳನ್ನು ನಿರ್ಮಿಸಿದರೆ ಅದೇ ಮಾದರಿಯಲ್ಲಿ ವೈದಿಕರು ಶಿವ, ವಿಷ್ಣು ಮು೦ತಾದ ದೇವಾಲಯಗಳನ್ನು ನಿರ್ಮಿಸಿ ತಮ್ಮತ್ತ ಜನರನ್ನು ಆಕರ್ಷಿಸಲು ಪ್ರಯತ್ನಿಸಿದರು. ಮತ್ತಷ್ಟು ಓದು »

29
ಏಪ್ರಿಲ್

ದೀಪ ಭಾಗ ೨

– ವಿಜಯ್ ಹೂಗಾರ್

ಬೆಳಕಿಂಡಿಯಿಂದ ಮೂಡುವ ಹಿಡಿ ಬಿಸಿಲುಗರಿಗಳು ಇಣುಕುವ ಮುಂಚೆ ದೇವಕಿ ಅಡುಗೆ ಮನೆ ಸೇರಿದ್ದಳು.ಒಲೆ ಹತ್ತಿಸಿದ ಮೇಲೆ ಅಡುಗೆ ಮನೆ ಹೊಗೆಯಿಂದ ತುಂಬಿ ತುಳುಕುತ್ತಿತ್ತು.ಅಡುಗೆಮನೆಯಿಂದ ಹೊರಮನೆ,ಹೊರಮನೆಯಿಂದ ಕೇರಿಯಲ್ಲ ಹರಡುತಿತ್ತು.ಅಮಾವಾಸ್ಸೆಯ ಕತ್ತಲೆಯಂತೆ ಗೋಚರಿಸುತ್ತಿರುವ ಗೋಡೆಗಳ ಮಧ್ಯೆ ಖೆಮ್ಮುತ್ತ,ಬೆಂಕಿ ಆರುವಂತಿದ್ದರೆ ಊದುತ್ತ,ಮೈಯಲ್ಲ ಬೆವತು,ಸುರಿಯುವ ಬೆವರ ಧಾರೆಗೆ ಸೆರಗಿನಿಂದ ಒರೆಸುತ್ತಾ ರುಚಿ ರುಚಿಯಾದ ಅಡುಗೆ ಮಾಡುತ್ತಿದ್ದಳು.

ಅಷ್ಟೊತ್ತಿಗೆ “ಏ ಇನ್ಯಾ…! ಹೋಗಿ ಆ ಭುರೆಗೊಳ್ ಮನ್ಯಾಗಿಂದು ಪಾವ್ ಲೀಟರ್ ಹಾಲ ಸಿಗ್ತದೆನು ತೊಗೊಂಬಾ,ಚಾ ಮಾಡಕ್ಕ ಹಾಲಿಲ್ಲ” ಅಂತ ದೇವರ ಮನೆಯಿಂದ ತರಕಸ್ವಾರದಲ್ಲಿ ಕಮಲಜ್ಜಿಯ ಅವಾಜ್ ಕೇಳಿ, ಪಡಸಾಲೆಲ್ಲಿ ಟಿವಿ ನೋಡುತ್ತಾ ಕುಳಿತ ಮೊಮ್ಮಗ ಇನ್ಯಾ ತನ್ನ ಸಂಗಡಿಗರ ಸಮೇತ ಪುರ್ರ್ ಅಂತ ಹಾರಿಹೋದ.ಮನೆಯೆಲ್ಲ ಊದಿನ ನುರುಹೊಗೆಯ ಪರಿಮಳ ಸೂಸುತ್ತ ದೇವರ ಮನೆಯಿಂದ ಬಂದ ಕಮಲಜ್ಜಿ ಹಠತ್ತಾನೆ ಖಾಲಿಯಾದ ಪಡಸಾಲೆಯನ್ನು ನೋಡಿ,”ಅಯಿ…!ಹಾಟ್ಯಗಳ ತೊಗೊಂಬಂದು…!ಕೆಲಸ ಮಾಡಕ್ಕ ಏನ್ ಬ್ಯಾನಿ ಬರ್ತದ…?ತಿಲ್ಲಕ್ ಹ್ಯಾಂಗ್ ಬರ್ತದ,ಎರಡೂ ದವಡಿಯಲ್ಲಿ …!”ಅಂತ ಕೈಯಲ್ಲಿರುವ ನೈವಿದ್ಯದ ತಟ್ಟೆ ಹಿಡಿದು ಖಾಲಿ ಪಡಸಾಲೆಯ ಮೇಲೆ ತನ್ನ ಕೋಪ ತೋರಿಸುತ್ತ ನಿಂತಳು.’ಇನ್ಯಾರಿಗೆ ತೋರಿಸಬೇಕು…..?’ ಅಂತ ಪ್ರಶ್ನಾರ್ಥಕ ಮುಖದಿಂದ ಟಿವಿಯ ಪರದೆ ಕಮಲಜ್ಜಿಯ ಕಡೆ ಹೆದರಿ ಮುಜುಗುರದಿಂದ ನೋಡತೊಡಗಿತು.ಹಾಗೆ ಕೋಪದಿಂದ ಗಲಿಬಿಲಿಗೊಂಡ ಮುಖದಿಂದ ಮನೆಯ ಹೊರಗಡೆಯ ಇರುವ ಚಿಕ್ಕ ಕಟ್ಟೆಯಮೇಲೆ ಆಸಿನಳಾದ ತುಳಸಿಗೆ ಭುಸುಗುಟುತ್ತಲೇ ನೈವಿದ್ಯ ಅರ್ಪಿಸತೊಡಗಿದಳು.
ಮತ್ತಷ್ಟು ಓದು »

28
ಏಪ್ರಿಲ್

ಡಬ್ಬಿಂಗ್ ಎಂಬ ರುಚಿಗೆಟ್ಟ ದಿಢೀರ್ ಅಡುಗೆ ಏಕೆ?

– ರೂಪ ರಾವ್

ಇತ್ತೀಚಿಗೆ ಡಬ್ಬಿಂಗ್ ಬೇಕು ಬೇಡ ಅನ್ನುವ ಹುಯಿಲು ಮತ್ತೆ ಕಾಣ್ತಿದೆ. ರಾಕೇಶ್ ಶೆಟ್ಟಿಯವರ ಲೇಖನ ಓದಿದ ಮೇಲೆ ಇದರ ಬಗ್ಗೆ ನನ್ನದೊಂದಿಷ್ಟು ಅನಿಸಿಕೆ.

ಸ್ವಾಮಿ ಡಬ್ಬಿಂಗ್ ಬೇಡ ಅನ್ನೋದು ಹಳೆಯ ರಾಗವಿರಬಹುದು. ಆದರೆ ಕಾರಣ ಮಾತ್ರ ನಿಚ್ಚಳ… ಅದು ಕನ್ನಡದ ಕಲಾವಿದರಿಗೆ ಆಗೋ ಅನ್ಯಾಯ ಅಷ್ಟೆ. ಅದು ಯಾವತ್ತಿಗೂ ಸಲ್ಲುವ ಕಾರಣ. ಚಿತ್ರರಂಗವನ್ನೇ ನಂಬಿಕೊಂಡು ನಿಂತ ಅಸಂಖ್ಯಾತ ಕಲಾವಿದರಿಗೆ. ನಾಯಕ ,ನಾಯಕಿ ಪಾತ್ರದಿಂದ ಹಿಡಿದು ಪೋಷಕ ಪಾತ್ರಧಾರಿಗಳು, ಛಾಯಾಗ್ರಾಹಕರು, ನಿರ್ದೇಶಕರು,ನೂರಾರು ಜನ ನೇರವಾಗಿ ಇಲ್ಲವೇ ಪರೋಕ್ಷವಾಗಿ ಒಂದು ಚಿತ್ರದ  ಮೇಲೆ ಅವಲಂಬಿತರಾಗಿರುತ್ತಾರೆ.. ಅಷ್ಟೂ ಜನರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರವಿದು.

ರಿಮೇಕ್ ಚಿತ್ರಗಳ ಆರ್ಭಟಕ್ಕೆ ನಿರ್ದೇಶಕರ ಸೃಜನಾತ್ಮಕತೆ ಈಗಾಗಲೇ ಕಡಿಮೆಯಾಗಿದೆ.ಒಂದು ವೇಳೆ ಡಬ್ಬಿಂಗ್ ನಿಷೇಧ ತೆರವು ಗೊಳಿಸಿದರೆ,ಕನ್ನಡದಲ್ಲಿ ನಿರ್ದೇಶಕ, ಕತೆಗಾರ, ಸತ್ತಂತೆ…..! ಉಪೇಂದ್ರ, ಸೂರಿ, ಶಶಾಂಕ್, ಚಂದ್ರು,ಯೋಗರಾಜ್ ಭಟ್ ರವರಂತೆ ಆಗಬೇಕೆನ್ನುವ ಯುವ ನಿರ್ದೇಶಕರ ಗತಿ ?

ಮತ್ತೆ ಯಾವುದೋ ಪ್ರಾದೇಶಿಕತೆಗೆ ಹೊಂದುವ ಅಲ್ಲಿನ ವಾತಾವರಣಕ್ಕೆ ನಿರ್ಮಿಸಲಾಗಿರುವ ಚಿತ್ರವೊಂದನ್ನ ಹಾಗೆಯೇ ಡಬ್ಬಿಂಗ್ ಮಾಡಿದಲ್ಲಿ ಅದನ್ನು ಕೂತು ನೋಡುವ ಕರ್ಮ ನಮ್ಮದಾಗುತ್ತದೆ.ಪಾತ್ರದ ತುಟಿಯ ಚಲನೆ ಒಂದಾದರೆ. ಹಿನ್ನಲೆ ದ್ವನಿಯ  ಮಾತು ಒಂದಾಗಿರುತ್ತದೆ. ಅದಕ್ಕೂ ಇದಕ್ಕೂ  ಜೋಡಿಸಿ ನೋಡುವ ದರ್ದು ನಮಗೆ ಬೇಕಾ?
ಮತ್ತಷ್ಟು ಓದು »

27
ಏಪ್ರಿಲ್

’ಸತ್ಯ ಮೇವ ಜಯತೇ’ ಅನ್ನಲು ಕನ್ನಡಿಗರು ಅಪ್ಪಣೆ ಪಡೆಯಬೇಕಾ?

– ರಾಕೇಶ್ ಶೆಟ್ಟಿ

ಕಳೆದ ವರ್ಷ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.

ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ! ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?

ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?

ಮತ್ತಷ್ಟು ಓದು »

26
ಏಪ್ರಿಲ್

ಕಾನೂನಿನಂಗಳ ೨ : ಸಂಸ್ಕೃತಿಯೇ ಪ್ರಾಚೀನ ಭಾರತೀಯ ಕಾನೂನು

– ಉಷಾ ಐನಕೈ  ಶಿರಸಿ

ಮನುಷ್ಯ ಆದಿಯಲ್ಲಿ ಯಾವಾಗ ಸಾಂಘಿಕಜೀವನವನ್ನು ಪ್ರಾರಂಭಿಸಿದನೋ ಆಗಿನಿಂದಲೇ ಹಲವಾರು ಅವ್ಯಕ್ತವಾದ ಕಾನೂನುಗಳನ್ನು ಕಟ್ಟಿ ಕೊಳ್ಳುತ್ತಾಬಂದ. ಶಿಲಾಯುಗದ ಮನುಷ್ಯ ಒಬ್ಬನೇ ಬೇಟೆಯಾಡುವುದನ್ನು ನಿಲ್ಲಿಸಿ ಹಲವಾರು ಜನರೊಂದಿಗೆ ಪ್ರಾಣಿಗಳ ಬೇಟೆಗೆ ಹೋಗತೊಡಗಿದ. ಬೇಟೆಯಾಡಿ ಬಂದನಂತರ ತಾವು ಬೇಟೆ ಯಾಡಿದ ರೀತಿಯನ್ನು ಈ ಗುಂಪು ಅಭಿನಯದ ಮೂಲಕ ತೋರಿಸುವ ಪ್ರಯತ್ನ ನಡೆಯಿತು. ಇದೇ ಮುಂದೆ ವಿಧಿ, ಆಚರಣೆಯಾಗಿ ಖಾಯಂ ಗೊಂಡಿತು. ಈ ಸಂದರ್ಭದಲ್ಲಿ ವಿಧಿಯಾಚರಣೆಗಳಿಗೆ ಕೆಲವು ನಿಯಮಾವಳಿಗಳನ್ನು ಹೆಣೆದುಕೊಳ್ಳುತ್ತ ಬಂದರು. ಅದನ್ನೇ ಆ ಕಾಲದ ಕಾನೂನಿನ ಸ್ವರೂಪ ಎಂದು ಗುರುತಿಸಬಹುದು. ಮನುಷ್ಯ ಗುಂಪು ಕಟ್ಟಿ ಸಮಾಜಜೀವನ ನಡೆಸತೊಡಗಿದಾಗ ಗುಂಪು-ಗುಂಪುಗಳ ನಡುವೆ ಗುಂಪು ಹಾಗೂ ವ್ಯಕ್ತಿಯ ನಡುವಿನ ವ್ಯವಹಾರಕ್ಕೆ ಹಲವು ನಿಯಮಾವಳಿಗಳು ಹುಟ್ಟಿಕೊಂಡವು. ಇದನ್ನು  ಕಾನೂನು ಎಂದು ಕರೆಯುತ್ತೇವೆ. ಹೀಗೆ ಮನುಷ್ಯ ನಾಗರಿಕತೆಯುದ್ದಕ್ಕೆ ಒಂದಲ್ಲಒಂದು ರೀತಿಯ ಕಾನೂನು ರೂಪಗೊಳ್ಳುತ್ತ ಪರಿವರ್ತನೆಯಾಗುತ್ತ ಸಮಾಜವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಬಂದದ್ದನ್ನು ನಾವು ಕಾಣುತ್ತೇವೆ.

ನಮ್ಮ ಭಾರತ ದೇಶದ ಮಟ್ಟಿಗೆ ನೋಡುವುದಾದರೆ ಇಲ್ಲೂ ಕೂಡ ಕಾನೂನಿನ ಇತಿಹಾಸ ಬಹು ದೀರ್ಘವಾಗಿದೆ. ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿದ ಭಾರತೀಯ ಸಂಸ್ಕೃತಿ ಇಡೀ ಜಗತ್ತಿನ ಗಮನ ಸೆಳೆದಿದೆ. ಸಮೃದ್ಧಿಯಿಂದ ಮರೆದಿದೆ. ಹೀಗಿದ್ದಾಗ ಈ ಸಂಸ್ಕೃತಿಯ ಜನ ನೆಮ್ಮದಿಯಿಂದ ಬಾಳಿ ಬದುಕಿ ಬಂದಿದ್ದಾರೆಂಬು ದಂತೂ ನಿಜ. ಅಂದರೆ ಅಂತಹ  ಒಂದು ಸುಸಂಬದ್ಧವಾದ ವ್ಯವಸ್ಥೆ ಈ ಸಂಸ್ಕೃತಿಯಲ್ಲಿ ಇತ್ತು ಅಂತಾಯಿತು. ಅದು ಯಾವ ವ್ಯವಸ್ಥೆ? ಹೇಗೆ ನಡೆಯುತ್ತಿತ್ತು? ಯಾವ ಪ್ರೇರಣೆಯಿಂದ ಹಾಗೂ ಹಿನ್ನೆಲೆಯಿಂದ ನಡೆಯುತ್ತಿತ್ತು ಎಂಬಿವೇ ಮುಂತಾದ ಪ್ರಶ್ನೆಗಳು ಎದುರಾಗುತ್ತವೆ. ಇದಕ್ಕೆಲ್ಲ ಒಂದೇ ಒಂದು ಸರಳವಾದ ಉತ್ತರ ಎಂದರೆ ‘ಪ್ರಾಚೀನ ಭಾರತದ ಕಾನೂನುಗಳು’.

ಮತ್ತಷ್ಟು ಓದು »

26
ಏಪ್ರಿಲ್

ಕನ್ನಡದಲ್ಲೇ ಹೇಳೋಣ ಬನ್ನಿ – “ಸತ್ಯಮೇವ ಜಯತೇ”

25
ಏಪ್ರಿಲ್

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

– ಡಾ ಅಶೋಕ್. ಕೆ. ಆರ್

          ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಆಪರೇಷನ್ ಮೇಘದೂತ: –

ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.

ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.

ಮತ್ತಷ್ಟು ಓದು »

24
ಏಪ್ರಿಲ್

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

– ಚಕ್ರವರ್ತಿ ಸೂಲಿಬೆಲೆ
   ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!

ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.

ಮತ್ತಷ್ಟು ಓದು »

23
ಏಪ್ರಿಲ್

ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?

– ರಾಕೇಶ್ ಶೆಟ್ಟಿ

ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.

೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!

ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?

ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.

ಮತ್ತಷ್ಟು ಓದು »

21
ಏಪ್ರಿಲ್

ದೀಪ. ಭಾಗ-೧

– ವಿಜಯ್ ಹೂಗಾರ್

ಸುಳಿಗಾಳಿಯಿಂದ ಹಗುರಾಗಿ ತೇಲಿದ ಮಣ್ಣು ಬಿಸಿಲಿನ ಪ್ರಭೆಗೆ ಮೊನಚಾಗಿ ಇಡೀ ಊರನ್ನ ಸಿಂಪಡಿಸಿದಂತೆ ಆವರಿಸಿತ್ತು.ಅಲ್ಲಲ್ಲಿ ತಲೆಯೆತ್ತಿದ ಮರಗಳು ತುಂಡು ತುಂಡಾಗಿ ನೆಲವನ್ನು ನೇವರಿಸುವಂತೆ ಬೇರುರಿದ್ದವು.ಊರ ಮಧ್ಯ ನಡುಗಡ್ದೆಯಂತೆ ಇರುವ ದೈತ್ಯ ಬೆಟ್ಟದ ಸುತ್ತಲೂ ಹರಿಯದ ನೀರಿನಂತೆ ಹರಿದ ಮನೆಗಳು ಕಲಸುಮೇಲೋಗರವಾಗಿ ಹರಡಿಕೊಂಡಿದ್ದವು.ಬೆಟ್ಟದ ಮೇಲೆ ಊರ ಕಾಯೋ ಪಹರೆದಾರನಂತೆ ಲಕ್ಷ್ಮಿ ದೇವತೆ ಭಕ್ತರ ಸೇವೆ ಸ್ವೀಕರಿಸುತ್ತಾ ವಾಸವಾಗಿದ್ದಳು.ಬೆಟ್ಟದ ಅಪರಭಾಗದಲ್ಲಿ ಬೀಕೋ ಅನ್ನುತ್ತಿರುವ ಬತ್ತಿ ಹಗುರಾದ ಕೆರೆ, ಆಡಿ ಹೋದ ಪುಟ್ಟ ಮಕ್ಕಳ ಹೆಜ್ಜೆಯ ಬರೆದಿಡುವ ಕಾಗದದಂತಿತ್ತು.ಬಿಸಿಲಿನ ಹೊಳೆಗೆ ತಟಸ್ಥವಾಗಿ ನಿಂತಿರುವ ಬೆವತ ಮನೆಗಳು ಶೋಕಸಾಗರದಲ್ಲಿ ಕಳೆದುಹೋದಂತೆ ಶಾಂತವಾಗಿದ್ದವು.

ಕಮಲಜ್ಜಿಗೆ ವಯಸ್ಸಾದರೂ ಈಗಲೂ ಚೂಟಿಯಾಗಿ ವಯಸ್ಸಿನ ಹುಡುಗಿಯರು ನಾಚುವಂತೆ ಕೆಲಸ ಮಾಡುತಿದ್ದಳು. ಮಗಳಮಗ ಹನುಮಂತನ ಮದುವೆಯಾಗಿ ಐದು ಸಂವತ್ಸರ ಕಳೆದರು ಮಕ್ಕಳಾಗಲಿಲ್ಲ ಅಂತ ತುಂಬಾ ಬೇಸರಿಸಿದ್ದಳು. ಮುತ್ತಜ್ಜಿಯಾಗಿ ಮರಿ ಮೊಮ್ಮಗನನ್ನು ಆಡಿಸಬೇಕೆಂದು ಬಲು ಆಸೆಯಿಂದ ಹನುಮಂತನ ಮದುವೆಯಾದ ಹೊಸತರಲ್ಲಿ ನವದಂಪತಿಗಳಿಗೆ ಖಾಸಗಿ ಕೋಣೆಯಲ್ಲಿ ಖಾಸಗಿಯಾಗಿ ಬಿಟ್ಟು ಕೊಟ್ಟಿಗೆಯಲ್ಲಿ ಇರುವ ಚಿಕ್ಕ ಕೋಣೆಯಲ್ಲಿ ಎಷ್ಟೋ ದಿವಸ ಒಬ್ಬಳೇ ಮಲಗಿದ್ದಳು.ಅದರಿಂದ ಫಲ ಕಾಣದೆ ಹೋದಾಗ ಪ್ಯಾಟೆಯಲ್ಲಿರುವ ದೊಡ್ಡ ಮಗ ರಾಮಪ್ಪನ ಹತ್ತಿರ ‘ಸೊಸೆಯನ್ನ ನೋಡಬೇಕೆನಿಸಿತು’ ಅಂತ  ಹೇಳಿ ಪದೇ ಪದೇ ಹೋಗಿ ಬರುತ್ತಿದ್ದಳು.’ಈ ಕೈಯ್ಯಾಗ ಎಷ್ಟು ಬಾಣಂತನ ಮಾಡಿಲ್ಲ ಲಕ್ಷ್ಮಿಯಕ್ಕ,ಆದರ ನಮ್ಮ ದೇವಕಿಯ (ಹನುಮಂತನ ಹೆಂಡತಿ) ಬಾಣಂತನ ನನ್ನ ಕೈಯಾರ ಮಾಡಬೇಕೆಂಬುದು ಬಕ್ಕುಳ್ ಆಸೆ ಆಗ್ಯದ ನೋಡು’ ಅಂತ ತನ್ನ ಸಂಕಟದ ಆಶಯ ಲಕ್ಷ್ಮಿಯಕ್ಕನ ಮುಂದೆ ತೋಡಿಕೊಳ್ಳುತ್ತಿದ್ದಳು.ಪರಾಗಸ್ಪರ್ಷದ ಅಮೃತ ಘಳಿಗೆಯ ಕಾಯುವ ಹೂವಾಡಗಿತ್ತಿಯಂತೆ ದೇವಕಿಯಿಂದ ಹೂವಿನಂಥ ಮಗು ಬಯಸುತ್ತಿದ್ದಳು.ಇವಳ ಕೊನೆಗಾಣದ ಕೊರಗು ಕಂಡು ಕಮಲಜ್ಜಿಯ ಗಂಡ ಪೂಜಾರಪ್ಪ ಮಾತ್ರ “ಸ್ವಲ್ಪ ದಮ್ ತಿನು,ಬಿತ್ತಿದ ಪ್ರತಿವರ್ಷ ಬೆಳೆ ಚನ್ನಾಗಿ ಬರಬೇಕು ಅಂತೇನಿಲ್ಲ….ಕೆಲವೊಂದುಸಲ ಮಳೆ ಬಿದ್ದಿಲ್ಲ ಅಂದ್ರೆ ಬಿತ್ತಿದೆಲ್ಲ ಲುಕ್ಸಾನು ಆಗ್ತದ” ಅಂತ ಸಮಾಧಾನ  ಮಾಡ್ತಿದ್ದ.ಅದಕ್ಕೆ ಕಮಲಜ್ಜಿ “ಹು ಲುಕ್ಸಾನ ಯಾಕ ಆಗ್ತದ,ಮಳಿ ಬರಾದ ನೋಡೇ ಬಿತ್ತೊಕೆನಾಗ್ತದ” ಅಂತ ಹೌಹಾರುತ್ತಿದ್ದಳು.

ಮತ್ತಷ್ಟು ಓದು »