ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 10, 2012

6

ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆಗಿದ್ದು!… ಮ್ಯಾಜಿಸ್ಟ್ರೇಟರೂ ಆಗಿದ್ದು!!

‍ನಿಲುಮೆ ಮೂಲಕ

– ಕವಿ ನಾಗರಾಜ್

ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ  ಜೈಲಿನಿಂದ ಹೊರಬಂದ  ಸುಮಾರು ನಾಲ್ಕು ವರ್ಷಗಳ ನಂತರ  ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.

      ಅವನು ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಂದಾಯ ಇಲಾಖೆಯ ಸೇವೆಗೆ ಪ್ರಥಮ ದರ್ಜೆ ರೆವಿನ್ಯೂ ಇನ್ಸ್ ಪೆಕ್ಟರ್ ಆಗಿ ೧೯೭೩ರಲ್ಲಿ ಕೆಲಸಕ್ಕೆ ಸೇರಿದ್ದ. ಅವನು ಎರಡು ವರ್ಷ ಸೇವೆ ಸಲ್ಲಿಸಿಬಹುದು. ೧೯೭೫ರಲ್ಲಿ ಕರಾಳ ತುರ್ತು ಪರಿಸ್ಥಿತಿ ಜಾರಿಗೆ ಬಂದು ಆಗ ಆರೆಸ್ಸೆಸ್ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಅವನನ್ನೂ ಆರೆಸ್ಸೆಸ್ ಕಾರ್ಯಕರ್ತನೆಂಬ ಕಾರಣದ ಮೇಲೆ ಬಂಧಿಸಿ ಭಾರತ ರಕ್ಷಣಾ ಕಾಯದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿದಾಗ ಅವನನ್ನು ಸೇವೆಯಿಂದ ಅಮಾನತ್ತಿನಲ್ಲಿ ಇರಿಸಲಾಯಿತು.
ಈ ಕಾರಣ ನೆಪಕ್ಕಾಗಿದ್ದು ನಿಜವಾದ ಕಾರಣ ಬೇರೆಯದೇ ಆಗಿತ್ತು. ಇದಕ್ಕಾಗಿ ಅವನು ಜಿಲ್ಲಾಧಿಕಾರಿಯವರೊಂದಿಗೆ ಜಗಳವಾಡಿದ. ಪರಿಣಾಮ, ಇನ್ನೂ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಅವನು ಆರೋಪಿಯಾಗಬೇಕಾಯಿತು. ಭಾರತ ರಕ್ಷಣಾ ಕಾಯದೆಯನ್ವಯ ಮೊಕದ್ದಮೆಗಳು ದಾಖಲಾಗಿದ್ದು, ಅವನೊಬ್ಬ ವಿಧ್ವಂಸಕ ಕೃತ್ಯಗಳನ್ನು ಎಸಗಿದ ಭಯೋತ್ಪಾದಕನೆಂದು ಬಿಂಬಿಸಲಾಗಿತ್ತು. ವಿಚಾರಣೆಯಿಲ್ಲದೆ ಎರಡು ವರ್ಷಗಳ ಕಾಲ ಬಂಧಿಸಿಡಲು ಅವಕಾಶವಿರುವ ಆಂತರಿಕ ಭದ್ರತಾ ಸಂರಕ್ಷಣಾ ಕಾಯದೆ   (M.I.S.A. – Maintenance of Inernal Security Act) ಪ್ರಕಾರ  ಜಿಲ್ಲಾ ಆರಕ್ಷಕ ಅಧಿಕಾರಿಯವರು ಅವನನ್ನು ಬಂಧಿಸಲು ಶಿಫಾರಸು ಮಾಡಿದ್ದರು. ಜೈಲಿನಿಂದ ಹೊರಗಿದ್ದಾಗ ಪ್ರತಿದಿನ ಪೋಲಿಸ್ ಠಾಣೆಗೆ ಹೋಗಿ ಹಾಜರಾತಿ ಹಾಕಬೇಕಾಗಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತ್ತಿನಲ್ಲಿ ಕಳೆದ ಅವನನ್ನು ವಿಚಾರಣೆ ಕಾಯ್ದಿರಿಸಿ ಪುನರ್ನೇಮಕ ಮಾಡಿ ಗುಲ್ಬರ್ಗ ಜಿಲ್ಲೆಗೆ ವರ್ಗಾಯಿಸಿದ್ದರು.  ಮತ್ತೆ ನೌಕರಿ ಸಿಗುವ ಆಸೆಯನ್ನೇ ಅವನು ಕೈಬಿಟ್ಟಿದ್ದ. ಮುಂದೆ ಜೀವನ ನಿರ್ವಹಣೆಗೆ ಏನು ಮಾಡಬೇಕೆಂದು ಜೈಲಿನ ಗೋಡೆಗೆ ಒರಗಿ ಚಿಂತಿಸುತ್ತಿದ್ದ.  ತುರ್ತು ಪರಿಸ್ಥಿತಿ ಹಿಂತೆಗೆತವಾದ ಮೇಲೆ ಇತ್ಯರ್ಥವಾಗದೇ ಇದ್ದ ಪ್ರಕರಣಗಳನ್ನು ಸರ್ಕಾರ ವಾಪಸು ಪಡೆದದ್ದರಿಂದ ಅವನು ದೋಷಮುಕ್ತನಾದ. ನ್ಯಾಯಾಲಯದ ಆದೇಶದಂತೆ ಅವನನ್ನು ಪುನಃ ಹಾಸನಕ್ಕೆ ಮರುವರ್ಗಾಯಿಸಿದರು. ಬರಬೇಕಾಗಿದ್ದ ಬಾಕಿ ವೇತನವೂ ಸಿಕ್ಕಿತು.
      ಉಪತಹಸೀಲ್ದಾರ್ ಆಗಿ ಬಡ್ತಿ ಹೊಂದಿದ ಆತ ಮೈಸೂರಿನಲ್ಲಿ ಒಂದು ವರ್ಷ ಕೆಲಸ ಮಾಡಿದ ನಂತರ ಅವನಿಗೆ ಹೊಳೆನರಸಿಪುರಕ್ಕೆ ವರ್ಗಾವಣೆಯಾಯಿತು. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೧ ಉಪಕಾರಾಗೃಹಗಳ ಮೇಲ್ವಿಚಾರಣೆ ಹೊಣೆಯನ್ನು ಕಂದಾಯ ಇಲಾಖೆಯ ಉಪತಹಸೀಲ್ದಾರರಿಗೆ ವಹಿಸಿದ್ದು, ಆ ಪೈಕಿ ಹೊಳೆನರಸಿಪುರದ ಉಪಕಾರಾಗೃಹವೂ ಒಂದಾಗಿತ್ತು. ಹೀಗಾಗಿ ಉಪತಹಸೀಲ್ದಾರನಾಗಿದ್ದ ಅವನು ಪದನಿಮಿತ್ತ ಅಲ್ಲಿನ ಜೈಲು ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುವ ಅವಕಾಶವೂ ಲಭ್ಯವಾಯಿತು. ಕೈದಿಯಾಗಿ ಅವರ ಕಷ್ಟ-ನೋವುಗಳ ಅರಿವಿದ್ದ ಅವನು ಅಲ್ಲಿನ ಒಳ್ಳೆಯ ಜೈಲು ಸೂಪರಿಂಟೆಂಡೆಂಟ್ ಅನ್ನಿಸಿಕೊಂಡು ನಾಲ್ಕು ವರ್ಷ ಕಾರ್ಯ ನಿರ್ವಹಿಸಿದ. ಆಗ ಅಲ್ಲಿದ್ದ ಹಲವಾರು ಕೈದಿಗಳು ಈಗಲೂ ಅವನನ್ನು ಗೌರವದಿಂದ ಕಾಣುತ್ತಾರೆ.
      ನಂತರದ ಹತ್ತು ವರ್ಷಗಳು ಉಪತಹಸೀಲ್ದಾರ್ ಆಗಿದ್ದ ಅವನಿಗೆ ಬಡ್ತಿ ಸಿಕ್ಕಿ ತಹಸೀಲ್ದಾರನೂ ಆದ. ತಾಲ್ಲೂಕು ದಂಡಾಧಿಕಾರಿಯಾಗಿ ಕಾನೂನು-ಸುವ್ಯವಸ್ಥೆ, ಶಾಂತಿಪಾಲನೆಯ ಹೊಣೆಗಾರಿಕೆ ಇದ್ದು, ಅಪರಾಧಗಳು ಘಟಿಸುವ ಮುನ್ನ ಅದನ್ನು ತಡೆಯುವ ಜವಾಬ್ದಾರಿ ಅವನ ಮೇಲಿತ್ತು. ಅಶಾಂತಿ ನಿರ್ಮಿಸುವವರ ವಿರುದ್ಧ, ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವವರ ವಿರುದ್ಧ ಕಠಿಣ ಮನೋಭಾವ ಹೊಂದಿದ್ದ ಆತ ಹಲವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಿದ್ದ. ರಾಷ್ಟ್ರೀಯ ಉತ್ಸವಗಳ ಸಂದರ್ಭದಲ್ಲಿ ರಾಷ್ಟ್ರದ್ವಜವನ್ನು ಹಾರಿಸಿ, ದ್ವಜವಂದನೆ ಮಾಡುವ, ಧ್ವಜವಂದನೆ ಸ್ವೀಕರಿಸುವ ಅವಕಾಶ ಒದಗಿಸಿದ್ದಕ್ಕಾಗಿ ಅವನು ದೇವರಿಗೆ ಆಭಾರಿಯಾಗಿದ್ದ, ಮಾಡಿದ ಕೆಲಸಗಳಲ್ಲಿ ಆತ್ಮತೃಪ್ತಿ ಹೊಂದಿದ್ದ. ೧೨ ವರ್ಷಗಳ ಕಾಲ ಆ ಹುದ್ದೆಯಲ್ಲಿ ಕೆಲಸ ಮಾಡಿ ಸೇವೆಯಿಂದ ಸ್ವ ಇಚ್ಛಾ ನಿವೃತ್ತಿ ಹೊಂದಿದ.
     ಆ ವ್ಯಕ್ತಿ ಬೇರಾರೂ ಅಲ್ಲ. . . . . . . . .ನಾನೇ! ನನಗೆ ಇಂತಹ ಅಪರೂಪದ ಅವಕಾಶಗಳನ್ನು ನೀಡಿ, ಅನೇಕ ಅನುಭವಗಳನ್ನು ಹೊಂದುವಂತೆ ಮಾಡಿದ ಆ ದೇವರಿಗೆ ಋಣಿ

6 ಟಿಪ್ಪಣಿಗಳು Post a comment
  1. ಸತ್ಯಚರಣ ಎಸ್. ಎಮ್. (Sathya Charana S.M.)'s avatar
    ಏಪ್ರಿಲ್ 10 2012

    ಹ..ಹ.. ಒಳ್ಳೇ ಸರ್ಪೈಸ್ ಕೊಟ್ರೀ ಸರ‍್.. 🙂
    ಇದ್ಯಾಕಪ್ಪಾ ಇಂತಹ ಮನುಷ್ಯರ ಬಗ್ಗೆ ಬರಹ ಪೂರಾ ಏಕವಚನವೇ ನಡೆದು ಹೋಗ್ತಾ ಇದೆಯಲ್ಲಾ ಅಂತ ಅನ್ಕೋತಾ ಇದ್ದೆ. ಕೊನೆಗೆ ಕತೆ ತಿರುವು ಪಡ್ಕೋತು. 🙂 ಸಕ್ಕತ್ತಾಗಿದೆ ನಿಮ್ಮ ಕ್ಲೈಮಾಕ್ಸ್. ನಿಮ್ಮ ಈಗಿನ ನಿವೃತ್ತ ಜೀವನ ಚೆನ್ನಾಗಿ ನಡೆಯಲಿ.. 🙂

    ಉತ್ತರ
  2. Punchline's avatar
    ಏಪ್ರಿಲ್ 10 2012

    ನಿಜಕ್ಕೂ ನೀವು ಅಭಿನಂದಾರ್ಹರು. 🙂
    ಗಣೇಶ್ ಕೆ.

    ಉತ್ತರ
  3. nandan's avatar
    nandan
    ಏಪ್ರಿಲ್ 10 2012

    good article sir .. thank u sir

    ಉತ್ತರ
  4. manjunatha.R's avatar
    manjunatha.R
    ಏಪ್ರಿಲ್ 11 2012

    ಸಾಮನ್ಯರಲ್ಲಿ ಅಸಾಮನ್ಯರು ಅಂದ್ರೆ ಇದೆನಾ ಗುರುಗಳೆ…………….. ನೀಮ್ಮ ದೂರವಾಣಿ ಸಂಖ್ಯೆ ನಮಗೆ ಬೇಕು.. ದಯಾವಿಟ್ಟು ನಮೂದಿಸಿ (ಸೇರಿಸಿ)……..

    ಉತ್ತರ
  5. Nanjundaraju's avatar
    ಏಪ್ರಿಲ್ 11 2012

    ಮಾನ್ಯರೆ, ಲೇಖನ ತುಂಬಾ ಚೆನ್ನಾಗಿದೆ. ಈ ಹಿಂದೆ ನಿಮ್ಮ ಕವಿ ಮನ ಬ್ಲಾಗಿನಲ್ಲಿ ಸೇವಾ ಪುರಾಣ ಎಂಬ ಶೀರ್ಷಿಕೆಯಡಿಯಲ್ಲಿ ಸವಿವರವಾಗಿ ಪ್ರಸಾರವಾಗಿತ್ತು. ಈಗ ಲೇಖನ ಚುಟುಕಾಯಿತು. ಒಂದು ರೀತಿಯಲ್ಲಿ ಲೇಖನ ಆಶ್ಚರ್ಯಕರವಾಗಿದೆ. ಯಾರು ನಂಬುವುದಿಲ್ಲ. ಆದರೆ ಇದು ನಾನು ಕಂಡ ಮಟ್ಟಿಗೆ, ಪ್ರಪಂಚದಲ್ಲಿ ಅಲ್ಲದಿದ್ದರೂ, ದೇಶದಲ್ಲಿ ಅಪರೂಪದ ಘಟನೆ ಎನಿಸುತ್ತದೆ. ಒಬ್ಬ ಸಾಮಾನ್ಯ ಸರಕಾರೀ ನೌಕರ ಜೈಲು ಸೇರಿ ಪುನ: ಒಬ್ಬ ಜೈಲು ಅಧಿಕಾರಿಯಾಗಿ, ನಂತರ ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು. ವಿಧಿ ವಿಲಾಸವೇ ಸರಿ. ಇದು ಗಿನ್ನಿಸ್ ಅಥವಾ ಲಿಮ್ಕಾ ದಾಖಲೆ ಅಗಬೇಕಿತ್ತಲ್ಲವೇ. ಹೋಗಲಿ ಬಿಡಿ ನಮ್ಮ ಮನಸಿನಲ್ಲಂತೂ ಶಾಶ್ವತವಾಗಿ ಉಳಿದಿದೆ. ವಂದನೆಗಳೊಡನೆ

    ಉತ್ತರ
  6. B.G.PRAVEEN KUMAR's avatar
    B.G.PRAVEEN KUMAR
    ಮೇ 12 2014

    wow sir wonderfull

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments