ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 11, 2012

1

ಬರದ ಸೀಮೆಯಿಂದ ಹೊರಟ ನೆನಪಿನ ಬಂಡಿ

‍ನಿಲುಮೆ ಮೂಲಕ
-ಕಾಲಂ ೯

ಇದೆಲ್ಲವೂ ೧೯೮೦ರ ದಶಕದ ಮಾತು. ಹೈದ್ರಾಬಾದ್ ಕರ್ನಾಟಕ ಸೀಮೆಯಲ್ಲಿ ಆಗಷ್ಟೇ ಎಂಎಸ್ಸಿ ಪೂರ್ಣಗೊಳಿಸಿದ ತರುಣನೊಬ್ಬ ಕೆಲಸ ಅರಸಿಕೊಂಡು ಬೆಂಗಳೂರಿನ ಶಾಸಕರ ಭವನಕ್ಕೆ ಬಂದಿಳಿಯುತ್ತಾನೆ. ತನ್ನೂರಿನ ಶಾಸಕನನ್ನು ಹಿಡಿದುಕೊಂಡು ನೌಕರಿ ಗಿಟ್ಟಿಸಿಕೊಳ್ಳುವ ಇರಾದೆ ಹೊಂದಿದ್ದ ಆ ಯುವಕ, ರಾಜ್ಯದ ಯಾವುದಾದರೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗಬೇಕೆಂಬ ಮಹಾ ಗುರಿಯನ್ನೂ ಮನಸ್ಸಿನಲ್ಲಿ ಹಾಕಿಕೊಂಡಿದ್ದ !

ಆದರೆ, ಯುವಕ ಹುಡುಕಿಕೊಂಡು ಬಂದಿದ್ದ ಆ ದಲಿತ ಶಾಸಕನ ಯೋಜನೆಯೇ ಬೇರೆ ಆಗಿತ್ತು. ಏನಾದರೂ ಮಾಡಿ ಯುವಕನನ್ನು ಪತ್ರಕರ್ತನನ್ನಾಗಿಸಬೇಕು ಎಂಬುದು ಆತನ ಗುರಿ. ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಓದುವ ಹುಡುಗರೇ ಕಡಿಮೆ. ಅದರಲ್ಲಿಯೂ ಓದಿದವರೆಲ್ಲರೂ ಮೇಷ್ಟ್ರು-ಕ್ಲರ್ಕ್ ಎಂದು ಕೆಲಸ ಹುಡುಕಿಕೊಂಡು ಹೋದರೆ, ಆ ಭಾಗದ ಸಂಕಟಗಳನ್ನು , ನೋವುಗಳನ್ನು ರಾಜ್ಯದ ಜನರಿಗೆ ಅರ್ಥೈಸುವವರು ಯಾರು ಎಂಬುದು ಶಾಸಕನ ಕಳಕಳಿ. ಹಾಗಾಗಿಯೇ ಏನೋ, ಕೆಲಸ ಹುಡುಕಿಕೊಂಡು ಬಂದಿದ್ದ ಯುವಕನಿಗೆ ತನ್ನ ಶಾಸಕರ ಕಚೇರಿಯಲ್ಲಿಯೇ ಅಶನ-ವಶನ ನೀಡಿದ್ದಲ್ಲದೇ, ತಲೆಯಲ್ಲಿ ಪತ್ರಕರ್ತನ ಕನಸನ್ನೂ ಬಿತ್ತಿದ. ಇದೊಂದು ನನಸಾಗದ ಕನಸು ಎಂದು ಕಲ್ಯಾಣ ಕರ್ನಾಟಕದ ಯುವಕ ಅಂದುಕೊಳ್ಳುತ್ತಿರುವಾಗಲೇ, ರಾಜಕಾರಣಿಯೊಬ್ಬರು ಇಂಗ್ಲಿಷ್ ಪತ್ರಿಕೆಯೊಂದನ್ನು ಆರಂಭಿಸಿದರು. ಕನಸು ಸಾಕಾರಗೊಂಡಿತು ಎನ್ನುವಷ್ಟರಲ್ಲಿ, ಪತ್ರಿಕೆಯೇ ಕಣ್ಮುಚ್ಚಿತು ! ಯುವಕನ ನಿರುದ್ಯೋಗ ಮುಂದುವರಿಯಿತು.

ಆ ದಿನಗಳಲ್ಲಿಯೇ ಟೈಂಸ್ ಆಫ್ ಇಂಡಿಯಾ ಪತ್ರಿಕೆ ವರದಿಗಾರರು ಬೇಕಿದ್ದಾರೆ ಎಂದು ತನ್ನ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿತು. ಪತ್ರಿಕೆ ಆಹ್ವಾನಿಸಿದ್ದ ಬಿಡಿ ವರದಿಗಾರ, ಹಿರಿಯ ವರದಿಗಾರ, ಉಪ ಸಂಪಾದಕ ಎಂಬ ಮೂರು ಹುದ್ದೆಗಳಿಗೂ ಕಲ್ಯಾಣ ಕರ್ನಾಟಕದ ಕಲಿ ಅರ್ಜಿ ಗುಜರಾಯಿಸಿದ. ಎಲ್ಲವಕ್ಕೂ ಅರ್ಜಿ ಹಾಕಲೇಬೇಕು ಎಂಬುದು ಶಾಸಕನ ಒತ್ತಾಯವಾಗಿತ್ತು. ಯಾವುದಾದರು ಒಂದು ಹುದ್ದೆಗಾದರೂ ಸಂದರ್ಶನ ಬರಲಿ ಎಂಬುದು ಒತ್ತಾಯದ ಹಿಂದಿನ ತಂತ್ರ.

ಅಂತೆಯೇ ಪತ್ರಿಕಾ ಕೆಲಸದ ಮೊದಲ ಮೆಟ್ಟಿಲು ಎನ್ನಬಹುದಾದ ಬಿಡಿ ವರದಿಗಾರ(ಸ್ಟ್ರಿಂಜರ್) ಹುದ್ದೆಗೆ ಸಂದರ್ಶನವೂ ಬಂತು. ಪತ್ರಿಕೆಯ ಸಂಪಾದಕ, ಮುಖ್ಯ ವರದಿಗಾರ, ಬ್ರಾಂಡ್ ಹೆಡ್ ಸೇರಿದಂತೆ ಹಲವು ಮಂದಿ ಕುಳಿತು, ಸಂದರ್ಶನಕ್ಕೆ ಬಂದ ಎಲ್ಲ ಅಭ್ಯರ್ಥಿಗಳ ಸಾಮಾನ್ಯ ಜ್ಞಾನಕ್ಕೆ ಸಾಣೆ ಹಿಡಿಯಲಾರಂಭಿಸಿದರು.
ಹೈದ್ರಾಬಾದ್ ಕರ್ನಾಟಕದ ಯುವಕನ ಸರದಿ ಬಂದಾಗ, ಸಂದರ್ಶಕರೊಬ್ಬರ ಪ್ರಶ್ನೆ. ಕ್ಯಾನು ಯು ಟೆಲ್ ಮೀ ದಿ ಪ್ಲೂರಲ್ ವರ‍್ಷನ್ ಆಫ್ ನ್ಯೂಸ್ !
ಯುವಕ ಒಂದಿಷ್ಟೂ ತಡ ಮಾಡಲಿಲ್ಲ. ‘ನ್ಯೂಸೆಸ್….’ ಎಂದು ಬಿಟ್ಟ. ಸಂದರ್ಶಕ ಕೊಠಡಿಯಲ್ಲಿ ದೊಡ್ಡ ಮಟ್ಟದ ಪರಸ್ಪರ ನಗು. ಇದು ಮುಖ್ಯ ವರದಿಗಾರರಿಗೆ ಸರಿ ಕಾಣಲಿಲ್ಲ. ‘ನಗುವುದು ಬೇಡ. ಆತ ಹಳ್ಳಿಯ ಹುಡುಗ. ಉತ್ತರದ ಸೀಮೆಯಿಂದ ಬಂದಿದ್ದಾನೆ. ಅವನಿಗೆ ನ್ಯೂಸ್‌ನ ಬಹುವಚನ ರೂಪ ಗೊತ್ತಿಲ್ಲದೇ ಇರಬಹುದು. ಆದರೆ, ಬಹಳ ಚೆನ್ನಾಗಿ ಓದಿದ್ದಾನೆ. ಕೈಯಲ್ಲಿ ಎಂಎಸ್ಸಿ ಇದೆ. ಇಂಗ್ಲಿಷ್ ಏನು ಈ ನೆಲದ ಭಾಷೆಯೇ. ಮುಂದೆ ಕಲಿಯುತ್ತಾನೆ. ಇವನಿಗೊಂದು ಅವಕಾಶ ನೀಡೋಣ….’ ಎಂದು ಮಾತನಾಡಲಾರಂಭಿಸಿದರು.

ಇಂಗ್ಲಿಷ್ ನಗುವಿಗೆ ಬೆವರಿ ಹೋಗಿದ್ದ ಯುವಕನ ಕಣ್ಣಲ್ಲಿ ಶಾಂತತೆಯ ಹೊಳಪು. ತನ್ನ ಇಂಗ್ಲಿಷ್ ಸಂಗಾತಿಗಳನ್ನು ಮನವೊಲಿಸಿದ ಮುಖ್ಯವರದಿಗಾರನ ಮುಖದಲ್ಲೂ ಸಮಾಧಾನ.
ಮೂರೂ ದಶಕಗಳ ಹಿಂದಿನ ಈ ಕಥೆಯಲ್ಲಿ ನಾಯಕನಂತೆ ಕಂಗೊಳಿಸುವ ಟೈಂಸ್ ಆಫ್ ಇಂಡಿಯಾದ ಮುಖ್ಯ ವರದಿಗಾರ ಎಂಬ ಪಾತ್ರದಾರಿಯ ಹೆಸರು ವಿ. ಕೆ. ರಾಘವನ್ ! ಉಪನ್ಯಾಸಕನಾಗಲು ರೈಲು ಹಿಡಿದು ರಾಜಧಾನಿಗೆ ಬಂದಿದ್ದ ಆ ಹೊತ್ತಿನ ಯುವಕ ಇಂದು ಒಂದು ಬ್ಯೂರೋ ಮುನ್ನಡೆಸುತ್ತಿರುವ ಹಿರಿಯ ಪತ್ರಕರ್ತ,

ರಾಘವನ್ ನಿಧನರಾದ ಬಳಿಕ ಇದೆಲ್ಲವೂ ನೆನಪಾಯಿತು.

ವೈಯಕ್ತಿಕ ಬದುಕಿನಲ್ಲಿ ಸರಳತನ; ಪತ್ರಕರ್ತನ ಪ್ರಾಮಾಣಿಕತೆ; ಸುದ್ದಿಯ ಸಾಚಾತನ; ಸುದ್ದಿ ಮೂಲದೊಂದಿಗೆ ಉತ್ತಮ ಬಾಂಧವ್ಯ ಹೊಂದಿಯೂ, ನಿರ್ವಹಿಸಬಹುದಾದ ನಿರ್ದಾಕ್ಷಿಣ್ಯ; ಪ್ರಸಿದ್ಧಿಯ ನಡುವೆಯೂ ಪ್ರಸಿದ್ಧಿಯಾಗದಂತೆ ತೋರಿಸಿಕೊಳ್ಳುವ ಸಂಕೋಚ; ದೇಶ-ಭಾಷೆಯಂತಹ ಭಾವನಾತ್ಮಕ ಸುದ್ದಿಗೆ ಪತ್ರಕರ್ತ(ಇಂಗ್ಲಿಷ್) ತೋರಿಸಬಹುದಾದ ನಿರ್ಭಾವುಕತೆ… ಹೀಗೆ ಉತ್ತಮ ಪತ್ರಕರ್ತ ಎನಿಸಿಕೊಳ್ಳಲು ಯೋಗ್ಯವಾದ ಎಲ್ಲ ಗುಣಗಳನ್ನು ರಾಘವನ್ ಹೊಂದಿದ್ದರು. ಇದೆಲ್ಲದಕ್ಕಿಂತ ಪ್ರಮುಖವಾಗಿ, ಅವರು ಇಷ್ಟವಾಗಬೇಕಿರುವುದು – ಗ್ರಾಮೀಣ ಮಟ್ಟದಿಂದ ಬರುವ ಹಿಂದುಳಿದ ವರ್ಗದ ಯುವಕರನ್ನು ಹುಡುಕಿ, ಅವರನ್ನು ಪತ್ರಿಕೋದ್ಯಮದ ಮುಖ್ಯವಾಹಿನಿಗೆ ಧಾರೆ ಎರೆದ ಸಾಮಾಜಿಕ ನ್ಯಾಯದ ಗುಣ ಸಂಪನ್ನತೆಯಿಂದ.

ಹೈದ್ರಾಬಾದ್ ಕರ್ನಾಟಕದ ಯುವಕ ಬೆಂಗಳೂರಿಗೆ ಬಂದಿದ್ದು; ಆತ ಪತ್ರಕರ್ತನೇ ಆಗಬೇಕೆಂದು ಆ ಭಾಗದ ಶಾಸಕನೊಬ್ಬ ಬಯಸಿದ್ದು; ಇಂಗ್ಲಿಷ್ ಬರುವುದಿಲ್ಲ ಎಂದು ಯುವಕ ಹಿಂದೇಟು ಹಾಕಿ, ಪತ್ರಕರ್ತನಾಗಲು ಒಲ್ಲೆ ಎಂದಿದ್ದು; ಇದ್ಯಾವುದರ ಅರಿವಿಲ್ಲದೇ, ರಾಘವನ್ ಆ ಯುವಕನನ್ನು ಗುರುತಿಸಿದ್ದು; ಇಂಗ್ಲಿಷ್ ಅನ್ನು ಗೇಲಿ ಮಾಡಿ, ಕನ್ನಡಿಗನಿಗೆ ಕೆಲಸ ನೀಡಿದ್ದು….- ಪರಸ್ಪರ ಸಂಬಂಧವೇ ಇಲ್ಲದ ಈ ಎಲ್ಲ ಬೆಳವಣಿಗೆಗಳು ಒಂದಕ್ಕೊಂದು ಪೂರಕ ಸಂಬಂಧದಂತೆ ಭಾಸವಾಗುತ್ತಾ, ಸುಸೂತ್ರವಾಗಿ ಸಂಭವಿಸುತ್ತಾ ಹೋಗಿವೆ. ಸಾಮಾಜಿಕ ನ್ಯಾಯ, ಜಾತ್ಯತೀತ ಗುಣಗಳು ಇದ್ದಾಗ ಮಾತ್ರ ಇಂತಹ ಸಾಮಾಜಿಕ ಪವಾಡ ನಡೆಯಲು ಸಾಧ್ಯ !

ಸಾಮಾನ್ಯವಾಗಿ ಟೈಂಸ್ ಆಫ್ ಇಂಡಿಯಾ ಅಂದ್ರೆ, ಅದು ಸಮಾಜದ ಕ್ರೀಮಿ ಲೇಯರ್ ವರ್ಗ ಹಾಗೂ ಯುವಕ/ಯುವತಿಯರಷ್ಟೇ ಇಷ್ಟ ಪಡುವ ಪತ್ರಿಕೆ ಎಂಬುದು ಸಾಮಾನ್ಯ ಗ್ರಹಿಕೆ. ಗೋಚರಿಸುವ ಪತ್ರಿಕೆಯ ಜಾಮಯಾನವೂ ಅದೇ ರೀತಿ ಇದೆ. ಅಂತಹ ಪತ್ರಿಕೆಯಲ್ಲಿ ಸಾಮಾಜಿಕ ನ್ಯಾಯದಂತಹ ಆಶಯಗಳನ್ನು, ಅದೂ ಪ್ರಜ್ಞಾಪೂರ್ವಕವಾಗಿ ಈಡೇರಿಸುವುದು ಹೊರಗಿನವರ ದೃಷ್ಟಿಯಲ್ಲಿ ಕಷ್ಟ ಸಾಧ್ಯ. ಆದರೆ, ಒಳಗಿನವರ ಮಾತೇ ಬೇರೆ. ‘ನಾವು ಸಮಾಜದ ಎಲ್ಲ ವರ್ಗದವರಿಗೆ ಸುದ್ದಿಯನ್ನು ನೀಡುವುದಷ್ಟೇ ಅಲ್ಲ, ಸಮಾಜದ ಎಲ್ಲ ವರ್ಗದವರಿಗೆ ಕೆಲಸ ನೀಡುತ್ತೇವೆ. ಬೇರೆ ಪತ್ರಿಕಾ ಸಂಸ್ಥೆಗಳಂತೆ, ಸಾಮಾಜಿಕ ನ್ಯಾಯವನ್ನೂ ಮೇಲ್ವರ್ಗದ ಮಂದಿಯಿಂದ ಆಡಿಸುವುದಿಲ್ಲ. ಅವರ ಸಬಲೀಕರಣದ ಬಗ್ಗೆಯೂ ನಮಗೆ ಆಸ್ಥೆ ಇದೆ….!’

ಇಂತಹ ಮಾತುಗಳಿಗೆ ರಾಘವನ್ ದೊಡ್ಡ ಸಮರ್ಥನೆ . ಟೈಂಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ, ವಿಜಯ ನೆಕ್ಸ್ಟ್‌ನಲ್ಲಿ ಮಾತ್ರವಲ್ಲ, ಇಡೀ ಪತ್ರಿಕೋದ್ಯಮದಲ್ಲಿ ಅಂತಹರ ಸಂತಾನ ಹೆಚ್ಚಾಗಬೇಕು. ರಾಘವನ್‌ಗೆ ಪತ್ರಕರ್ತರು ಸಲ್ಲಿಸಬಹುದಾದ ಅತಿದೊಡ್ಡ ಗೌರವ ಅದೊಂದೆ !

***********

1 ಟಿಪ್ಪಣಿ Post a comment
  1. Nanjundaraju's avatar
    ಏಪ್ರಿಲ್ 11 2012

    ಮಾನ್ಯರೇ, ಈಗ ಅಂಥಹ ಪತ್ರಿಕಾ ಕರ್ತರೆಲ್ಲಿ. ಎಲ್ಲವು ಅಯೋಮಯವಾಗಿದೆ. ಯಾವ ಪತ್ರಿಕಾ ಕರ್ತರು ನೋಡಿದರೂ ಕೇವಲ ಟೀಕೆ ಮಾಡುವವರಾಗಿದ್ದಾರೆ ಹೊರತು ಉತ್ತಮ ವರದಿ, ಮಾರ್ಗಧರ್ಶನ ಕಾಣುವುದಿಲ್ಲ. ಇದನ್ನು ಹಿರಿಯ ಪತ್ರಕರ್ತರು ಪರಿಸೀಲಿಸಿ. ಈಗಿನ ಬುದ್ದಿವಂತ ಯುವಕರನ್ನು ಉತ್ತಮ ವರದಿಗಾರರನ್ನಾಗಿ ರೂಪಿಸಬೇಕು. ಆಗ ಪತ್ರಿಕಾ ಮಧ್ಯಮ ಉಳಿಯುತ್ತದೆ. ಇಲ್ಲವಾದರೆ ಪತ್ರಿಕಾ ಮಧ್ಯಮವೆಂದರೆ. ಕೇವಲ ಪ್ರಚರಮಧ್ಯಮವಾಗಿ ಉಳಿಯುತ್ತದೆ. ಅಲ್ಲವೇ. ವಂದನೆಗಳೊಡನೆ

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments