ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!
– ವಿಷ್ಣುಪ್ರಿಯ
ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್ಅರ್ಥ್ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್ಗಳು ನಮ್ಮ ಕ್ಷೀರಪಥದಲ್ಲಿರಬೇಕು.
ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.





