ಹುಣಸೆಮರ ಮತ್ತು ಪ್ರವೀಣ
ಪವನ್ ಪಾರುಪತ್ತೇದಾರ
ಯಾಕೋ ಈ ನಡುವೆ ಪ್ರವೀಣನಿಗೆ ದುಗುಡಗಳೇ ಹೆಚ್ಚಾಗಿತ್ತು, ಏನು ಕೆಲಸ ಮಾಡಬೇಕಾದರೂ ಭಯ, ಉತ್ಸಾಹವಿಲ್ಲ, ಜಗತ್ತಿನಲ್ಲಿ ತಾನೇನನ್ನೋ ಕಳೆದುಕೊಂಡವನ ಹಾಗೆ ಇರುತಿದ್ದ. ಯಾವಾಗಲೂ ಮನೆಯ ಜಗುಲಿಯ ಮೇಲೆ ಕೂತು ಮನೆ ಮುಂಭಾಗದ ಕಂಬವನ್ನೇ ದಿಟ್ಟಿಸಿ ನೋಡುತಿದ್ದ.ಅಕ್ಕ ಪಕ್ಕದ ಮನೆಯವರೆಲ್ಲ ಇವನಿಗ್ಯಾವುದೇ ಗರ ಬಡಿದಿರಬಹುದು ಎಂದುಕೊಂಡರು, ಬರು ಬರುತ್ತಾ ಮನೆಯವರಿಗೂ ಚಿಂತೆ ಅತಿಯಾಗಿ ಏನು ಮಾಡಲು ತೋಚದ ಸ್ಥಿತಿಯಲ್ಲಿರುವಾಗ ದೂರದ ನೆಂಟರೊಬ್ಬರು ಸಲಹೆ ಕೊಟ್ಟರು, ತಮ್ಮೂರಿನಲ್ಲೊಬ್ಬ ಭೂತ ಬಿಡಿಸುವವನಿದ್ದಾನೆ, ನಿಮ್ಮ ಮಗನಿಗೆ ಯಾವುದೋ ಭೂತ ಮೆಟ್ಟಿದೆ ಆದ್ದರಿಂದಲೇ ಹೀಗೆ ಇರುವುದು ಎಂದರು. ಹೆದರಿದ ಅಪ್ಪ ಅಮ್ಮ ಮಗನ ಭೂತ ಬಿಡಿಸಲು ಆ ನೆಂಟರ ಊರಿಗೆ ಹೊರಟರು.
ಭೂತ ಬಿಡಿಸುವ ಮಂತ್ರವಾದಿ ಬೇವಿನೆಲೆ, ತಲೆಬುರುಡೆ ಮುಂತಾದವುನೆಲ್ಲ ಹಿಡಿದು ವಿಚಿತ್ರವಾದ ಮಂತ್ರಗಳನ್ನೊದುರುತಿದ್ದ. ಈ ಮಂತ್ರವಾದಿಗಿಂತ ಪ್ರವೀಣನೆ ಮೇಲು ಸುಮ್ಮನೆ ಶಾಂತನಾಗಿ ಒಂದು ಕಡೆ ಕುಳಿತುಬಿಡುತಿದ್ದ ಅಂತ ಪ್ರವೀಣನ ಅಪ್ಪ ಗೊಣಗಿಕೊಂಡರು. ಪ್ರವೀಣನ ಅಮ್ಮ ಭಕ್ತಿ ಭಾವದಿಂದ ಮತ್ತು ಭಯದಿಂದ ಸ್ವಾಮಿ ನನ್ನ ಮಗ ತುಂಬಾ ಮಂಕಾಗಿ ಬಿಟ್ಟಿದ್ದಾನೆ, ಈ ನಡುವೆ ಯಾರ ಬಳಿಯೂ ಸರಿಯಾಗಿ ಮಾತಾಡೋಲ್ಲ. ಸುಮ್ಮನೆ ಕುಳಿತಿರುತ್ತಾನೆ, ಕೆಲಸಕ್ಕೂ ಹೋಗ್ತಿಲ್ಲ. ಏನಾದ್ರು ಬೈದರೂ ಸುಮ್ಮನೇ ಕೂರುತ್ತಾನೆ, ಏನು ಮಾಡೋದೋ ಗೊತ್ತಾಗ್ತಿಲ್ಲ ದಯವಿಟ್ಟು ನೀವೇ ಏನಾದ್ರು ಪರಿಹಾರ ಕೊಡಿ ಅಂತ ಬೇಡಿಕೊಂಡರು. ಮಂತ್ರವಾದಿ ಆಆಹಹಹ ಅಂತ ಅರಚುತ್ತಾ, ಬೇವಿನ ಸೊಪ್ಪನ್ನು ಒಂದೆರಡು ಬಾರಿ ಪ್ರವೀಣನೆ ಮೇಲೆ ಒದರಿ, ಕಪಾಲದಲ್ಲಿಂದ ತೀರ್ಥವನು ಪ್ರೋಕ್ಷಣೆ ಮಾಡಿ, ಪ್ರವೀಣನನ್ನೆ ದಿಟ್ಟಿಸಿ ನೋಡುತ್ತ, ನಿಮ್ಮ ಮಗನ ಮೇಲೆ ಯಾವುದೋ ಭೂತ ಹತ್ತಿದೆ, ಅವನ ಮುಖ ನೋಡಿದ್ರೆ ಗೊತ್ತಾಗುತ್ತೆ, ಖಂಡಿತ ಇದು ಮೋಹಿನಿಯೇ ಅಂದ. ಹೆದರಿದ ಪ್ರವೀಣನ ಅಪ್ಪ, ಸ್ವಾಮಿಗಳೇ ಈಗೇನು ಇದಕ್ಕೆ ಪರಿಹಾರ, ನಮಗಿರೋವ್ನು ಒಬ್ಬನೇ ಮಗ ನೀವೇ ದಾರಿ ತೋರಿಸ್ಬೇಕು ಅಂದ್ರು. ಆಗ ಮಂತ್ರವಾದಿ ಮನದಲ್ಲೇ ಏನೋ ಲೆಕ್ಕಾಚಾರ ಹಾಕಿಕೊಳ್ಳುತ್ತ, ಕಣ್ಣು ಗುಡ್ಡೆಯ ಮೇಲೆ ಮಾಡಿ ಯಾರ ಬಳಿಯೋ ಮಾತನಾಡಿದಂತೆ ಮಾಡಿ, ನಿಮ್ಮ ಮನೆ ಹತ್ರ ಯಾವುದಾದ್ರು ದೊಡ್ಡ ಮರ ಇದ್ಯ ಅಂದ. ಅದಕ್ಕೆ ಪ್ರವೀಣನ ಅಪ್ಪ ಹೌದು ಸ್ವಾಮಿ ನಮ್ಮ ತಾತನವರು ಹಾಕಿದ ಹುಣಸೆ ಮರ ಇದೆ, ನಮ್ಮ ಜಮೀನಲ್ಲೆ ಇದೆ ಅಂದ. ಥಟ್ಟನೆ ಮಂತ್ರವಾದಿ ಆ ಮರದಲ್ಲಿ ಅಡಗಿರೋ ದೆವ್ವಾನೆ ನಿಮ್ಮ ಮಗನ ಮೈ ಮೇಲೆ ಹೊಕ್ಕಿರೋದು. ಈಗ ಪರಿಹಾರ ಅಂದ್ರೆ ನಾನು ನಿಮ್ಮ ಮಗನಲ್ಲಿರುವ ದೆವ್ವಾನ ಮತ್ತೆ ಆ ಮರಕ್ಕೆ ಓಡುಸ್ತೀನಿ ಆಮೇಲೆ ನೀವು ಆ ಮರಾನ ಕಡಿದು ಹಾಕ್ಬೇಕು ಅಂದ.
ಪ್ರವೀಣನ ಅಪ್ಪನಿಗೆ ಚುರುಕು ಮುಟ್ಟಿದಂತಾಯಿತು. ಸುಮಾರು ೭೦ ರಿಂದ ೮೦ ವರ್ಷದ ಮರ ಅದು, ಪ್ರತಿ ವರ್ಷ ಮಣಗಟ್ಟಲೆ ಹುಣಸೆ ಹಣ್ಣು ನೀಡುತ್ತೆ. ನಮ್ಮನೆಯ ನಡೆಸುವುದಕ್ಕೆ ಬಹಳಾ ಸಹಾಯಕವಾಗಿದೆ, ನಮ್ಮ ಮನೆ ಆದಾಯದಲ್ಲಿ ಅದರ ಪಾಲೂ ತುಂಬಾ ಇದೆ,ಅಂತಹ ಮರಾನ ಹೊಡೆದು ಉರುಳಿಸೋದು ಹೇಗೆ, ಅದರೊಡನೆ ಆದಾಯಕ್ಕಿಂತ ಹೆಚ್ಚಾಗಿ ಒಂದು ರೀತಿಯ ಮಾನಸಿಕ ಸಂಬಂಧ ಕುದುರಿದೆ, ಆದ್ರು ಮಗನಿಗಿಂತ ಹೆಚ್ಚಿನದು ಏನು ಇಲ್ಲ ಅಂತ ಸರಿ ಸ್ವಾಮಿಗಳೆ ಬನ್ನಿ ಅಂತ ಒಬ್ಬಿ ಬಿಟ್ಟರು.ಅದಕ್ಕೆ ಮಂತ್ರವಾದಿ ಇದಕ್ಕೆಲ್ಲ ಬಹಳಾ ಖರ್ಚಾಗುತ್ತದೆ ಅಂತ ಹೇಳಿ ಈಗ ಮುಂಗಡ ಹಣ ಅಂತ ೧೦,೦೦೦ ಪಡೆದ, ಮುಂದಿನ ಅಮಾವಾಸ್ಯೆಗೆ ಭೂತ ಬಿಡಿಸಲು ಬರುವೆ ಅಂತ ಹೇಳಿ ಕಳುಹಿಸಿಕೊಟ್ಟ.
ಅಮಾವಾಸ್ಯೆ ಬಂತು ಸೂರ್ಯಾಸ್ತದ ನಂತರ ಮಂತ್ರವಾದಿ ತನ್ನ ಶಿಶ್ಯವೃಂದದೊಡನೆ ಬಂದ, ಬಂದು ಪ್ರವೀಣನ ಒಂದು ಮೂಲೆಯಲ್ಲಿ ಕೂಡಿಸಿ ಯಾವುದೋ ಬೂದಿಯನ್ನು ಮುಖಕ್ಕೆ ಹಚ್ಚಿ, ಬೇವಿನ ಸೊಪ್ಪಿನಿಂದ ಮುಖಕ್ಕೆ ಮೈಗೆ ಎಲ್ಲ ಹೊಡೆದು, ತನ್ನ ಕೈಲಿರುವ ತಲೆ ಬುರುಡೆಯ ಪ್ರವೀಣನ ಮುಂದೆ ಹಿಡಿದು, ಹೇ ಮೋಹಿನಿ ಬಂದು ಈ ತಲೆ ಬುರುಡೆ ಒಳಗೆ ಸೇರ್ಕೋ ಇಲ್ಲ ಅಂದ್ರೆ ನಿನ್ನ ಸುಟ್ಟು ಭಸ್ಮ ಮಾಡ್ತೀನಿ ಅಂದ, ಪಾಪ ಒದೆ ತಿಂತಿದ್ದ ಪ್ರವೀಣ, ಹೊಡಿಬೇಡಿ ನೋಯುತ್ತೆ ಅಂತ ಅರಚುತಿದ್ದ, ಅಲ್ಲೇ ಇವೆಲ್ಲ ನೋಡುತಿದ್ದ ಪ್ರವೀಣನ ಅಮ್ಮ ಅಯ್ಯೋ ನನ್ನ ಮಗ ಎಷ್ಟು ನೋವು ತಿಂತಿದ್ದಾನಲ್ಲ ಅಂತ ಮನಸಲ್ಲೇ ಕೊರಗಿ ಅಳುತಿದ್ದಳು. ಕೊನೆಗೆ ಏಟು ತಿಂದು ಸುಸ್ತಾದ ಪ್ರವೀಣ ಮೂರ್ಛೆ ಹೋದ, ಆಗ ಮಂತ್ರವಾದಿ ಹಾ.. ಬಂದ್ಯ ಹೊರಗೆ, ಬಾ ನಿಂಗೆ ಮಾಡ್ತೀನಿ ಅಂತ ಸೀದ ಹುಣಸೆ ಮರದ ಬಳಿ ಹೋಗಿ ಒಂದು ದೊಡ್ಡ ತಾಯತ ಕಟ್ಟಿ, ಪ್ರವೀಣನ ಅಪ್ಪನಿಂದ ೫೦,೦೦೦ ಹಣ ಪಡೆದು, ದೆವ್ವವನು ಈ ಮರದಲ್ಲಿ ಬಂಧಿಸಿದ್ದೇನೆ, ಸೂರ್ಯೋದಯ ಆದ ಮೇಲೆ ಈ ಮರಾನ ಹೊಡೆದು ಬಿಸಾಕಿ ನಿಮ್ಮಗ ಸರಿಹೋಗುತ್ತಾನೆ ಅಂದ. ಪ್ರವೀಣನ ಅಪ್ಪ ಸೂರ್ಯೋದಯ ಆಗೋದನ್ನೆ ಕಾದು ಕೂಲಿಯವರಿಂದ ಮರ ಹೊಡೆಸಿ ಉರುಳಿಸಿದ.
ಉರುಳುತಿದ್ದ ಮರದಿಂದ ಆರ್ತನಾದವೊಂದು ಹೊರಬಂತು, ಅಯ್ಯೋ ನನಗಿನ್ನು ವಯಸ್ಸಿದೆ, ನಿಮ್ಮಗಳ ಮನೆಗೆ ಎಷ್ಟೆಲ್ಲಾ ಸಹಾಯ ಮಾಡಿರುವೆ, ಪ್ರತಿ ವರ್ಷ ನನ್ನ ಮೈತುಂಬಾ ಹುಣಸೆ ನೀಡಿರುವೆ, ನನ್ನಿಂದ ಎಷ್ಟೆಲ್ಲಾ ಉಪಯೋಗ ಪಡೆದಿರುವಿರಿ, ಈಗಲೇ ನನ್ನ ಕೊಲ್ಲಬೇಡಿ, ಆಧುನಿಕತೆಗೆ ಅಮಾಯಕತೆಗೆ ಈಗಾಗಲೆ ನನ್ನಂತಹಾ ಎಷ್ಟೋ ಮರಗಳನ್ನು ನಾಶ ಮಾಡಿದ್ದೀರ, ಈಗ ಅದೇ ಗುಂಪಿಗೆ ನನ್ನನ್ನೂ ಸಹ ಸೇರಿಸದಿರಿ ಎಂದು ಅರಚಿಕೊಳ್ಳುತ್ತಾ ಹುಣಸೆ ಮರು ಉದ್ದಕೆ ಮಲಗಿತು, ಪುಟ್ಟ ಪುಟ್ಟ ಮಕ್ಕಳು ಬಿದ್ದ ಮರದಿಂದ ಅಲ್ಲಲ್ಲಿ ಕಂಡ ಹುಣಸೆ ಕಾಯಿ ಕೀಳುತಿದ್ದರು, ಯಾರೋ ಮುದುಕ, ಪ್ರವೀಣನ ಅಪ್ಪನ ನೋಡಿ, ನಿನ್ನಪ್ಪನಿಗೆ ನಾನೆ ಈ ಮರ ತಂದುಕೊಟ್ಟಿದ್ದು ಒಳ್ಳೆ ಫಲ ಕೊಡ್ತಿತ್ತು ಅನ್ಯಾಯ ಆಯ್ತು ಅಂದ. ಇನ್ಯಾರೋ ವಿದ್ಯಾವಂತ, ಮಗನಿಗೆ ಮಾನಸಿಕ ಸ್ಥಿಮಿತ ಇಲ್ಲ ಅಂದ್ರೆ ಆಸ್ಪತ್ರೆಗೆ ಸೇರಿಸಿ ಅದು ಬಿಟ್ಟು ಒಳ್ಳೆ ಮರಾನ ಹಾಳುಮಾಡಿದ್ರಲ್ಲ ಅಂದ.
ಮಂತ್ರವಾದಿಯ ಕೈಯಿಂದ ಏಟು ತಿಂದು ಸುಸ್ತಾಗಿ ಮಲಗಿದ್ದ ಪ್ರವೀಣನಿಗೆ ಎಚ್ಚರವಾಗಿತ್ತು, ಮರ ಬಿದ್ದಾಯ್ತಲ್ಲ ಇನ್ನೇನು ಮಗ ಲವಲವಿಕೆಯಾಗಿರುತ್ತಾನೆ ಎಂದು ಅಮ್ಮ ಪ್ರವೀಣನನ್ನು ಗಮನಿಸತೊಡಗಿದಳು, ಆದರೆ ಪ್ರವೀಣ ಮತ್ತೆ ಬಂದು ಮನೆಯ ಜಗುಲಿಯ ಮೇಲೆ ಕೂತು ಮುಂಭಾಗದ ಕಂಬವನ್ನೇ ದಿಟ್ಟಿಸಿ ನೋಡುತಿದ್ದ.
ಇಂದು ವಿಶ್ವ ಪರಿಸರ ದಿನ.ಮರಗಳನ್ನು ಉಳಿಸೋಣ ಬೆಳೆಸೋಣ, ಅಮಾಯಕತೆಗೆ ಆಧುನಿಕತೆಗೆ ನಾಶ ಆಗದಿರಲಿ ಸಸ್ಯ ಸಂಪತ್ತು.
ಚಿತ್ರಕೃಪೆ: flickr.com
****************************************************************************




