ವಿಷಯದ ವಿವರಗಳಿಗೆ ದಾಟಿರಿ

ಜೂನ್ 23, 2012

2

ಖೆಡ್ಡಾ-೧ : ಪಡುವಣದಲ್ಲುದಯರವಿ!

‍ನಿಲುಮೆ ಮೂಲಕ

– ಹೇಮಂತ್ ಕುಮಾರ್

[ಗೆಳೆಯ ಹೇಮಂತ್ ಕುಮಾರ್ ರವರು ಇನ್ನು ಮುಂದೆ ಪ್ರತಿ ಶನಿವಾರ ನಮ್ಮ ನಿಲುಮೆ ಓದುಗರನ್ನ ತಮ್ಮ ಕಥೆಗಳ ಖೆಡ್ಡಾಗೆ ಬೀಳಿಸಲಿದ್ದಾರೆ, ಓದುಗರೆಲ್ಲ ಇವರ ಕಥೆಗಳನ್ನ ಓದಿ ಈ ಯುವ ಬರಹಗಾರನಿಗೆ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ]

ಅಪ್ಪ ನನಗೆ ವಯಸ್ಸಾಗ್ತಾ ಬಂತು ಕೂದಲು ಉದುರಿಹೋಗುವ ಮುನ್ನ ಮದುವೆ ಮಾಡಿಬಿಡಪ್ಪಾ! ಒಮ್ಮಿಂದೊಮ್ಮೆಗೆ ಇಪ್ಪತ್ತಾರು ವರ್ಷದ ತನ್ನ ಮಗ ಎದುರು ನಿಂತು ಹೀಗೆ ಕೇಳುವನೆಂದು ಯೋಚಿಸಿರಲಿಲ್ಲವೇನೋ ಮಂಜುನಾಥಯ್ಯನವರು. ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿದ್ದವರು ಕಾಲ್ಕುಲೇಟರನ್ನು ಕೆಳಗಿಟ್ಟು ಕನ್ನಡಕವನ್ನು ಕಣ್ಣಿನಿಂದ ತೆಗೆದು ಕೈಗೆ ಅಲಂಕರಿಸಿ ಮಗನನ್ನು ಕಾಲಿನಿಂದ ತಲೆಯವರೆಗೂ ಒಮ್ಮೆ ಸ್ಕಾನ್ ಮಾಡುವರು. ಏನಪ್ಪಾ, ನನಗೂ ಸಂಗಾತಿ ಬೇಕು ಅನ್ನಿಸ್ತಿದೆ ಇದೇ ಸರಿಯಾದ ಸಮಯ ಮದುವೆ ಮಾಡಿಬಿಡಿ, ಎಂದು ಮತ್ತೊಮ್ಮೆ ಹೇಳಿದ್ದನ್ನು ಕೇಳಿದ ನಂತರ ಲೆಕ್ಕಾಚಾರದಿಂದ ಸಂಪೂರ್ಣ ಹೊರಗೆ ಬಂದ ಮಂಜುನಾಥಯ್ಯನವರು, ನಿಧಾನಕ್ಕೆ ಕುರ್ಚಿಗೆ ಒರಗಿ ಹಾ ಆಗಪ್ಪಾ ಯಾರು ಬೇಡ ಅಂದ್ರು ಇವಾಗ, ಎನ್ನುವರು. ಅರೆ ಇದೇನು ಅಪ್ಪ ಹೀಗೆ ಹೇಳುತ್ತಿರುವರಲ್ಲಾ ಎಂದು ಅಚ್ಚರಿಯಾಗಿ ಹೆಣ್ಣು ಹುಡುಕಿ ಮತ್ತೆ ಎಂದು ಮತ್ತೆ ನಾಚಿಕೆ ಬಿಟ್ಟು ಹೇಳುವನು.

ಲೋ ನಿನಗೇನಾಗಿದೆ, ಹುಡುಗಿ ಹುಡುಕ್ಕೊಂಡು ಬಂದು ನಮಗೆ ಹೇಳಿದ್ರೆ ಮದುವೆ ಮಾಡ್ಸೊಲ್ಲ ಅಂದಿದ್ದೀವಾ? ಮೊದಲು ಯಾರನ್ನಾದರೂ ಲವ್ ಮಾಡು ಆಮೇಲೆ ಎಲ್ಲಾ ಓಕೆ ಸರಿ ಎಂದೆನಿಸಿದರೆ ಬಂದು ಹೇಳು ಮದುವೆ ಏರ್ಪಾಡು ಮಾಡೋಣಂತೆ ಎಂದು ಆರಾಮವಾಗಿ ಹೇಳಿ ಕಾಲ್ಕುಲೇಟರನ್ನು ಹಿಡಿದು ಕನ್ನಡಕ ಮತ್ತೆ ಕಣ್ಣಿಗೆ ಅಲಂಕರಿಸಿ ತಮ್ಮ ಕೆಲಸದಲ್ಲಿ ಮಗ್ನರಾಗಲು ಹೊರಟವರನ್ನು ತಡೆದು ಅಪ್ಪಾ ಏನ್ ಹೇಳ್ತಿದ್ದೀರಾ. ಈ ಲವ್ವು ಮಾಡು, ಹುಡುಗಿಗೆ ಮೆಸೇಜು ಮಾಡು, ಘಂಟೆಗಟ್ಟಲೆ ಫೋನಿನಲ್ಲಿ ಮಾತನಾಡು, ಜೊತೆ ಹಾಕೊಂಡು ಸುತ್ತು, ಗಿಫ್ಟ್ ಕೊಡಿಸು, ಜಗಳವಾಡು, ಅವಳ ಜುಟ್ಟು ಜನಿವಾರಗಳನ್ನ ನಾನು ತೊಗೋ, ನನ್ನದನ್ನ ಅವಳಿಗೆ ಕೊಡು, ಉಫ್!!! ಸುಮ್ಮನೆ ಕಾಲಹರಣನಪ್ಪಾ ನೀವೇ ಯಾವುದಾದರೂ ಹುಡುಗಿಯನ್ನ ನಿಮ್ಮ ಮತ್ತು ಅಮ್ಮನ ಅಭಿರುಚಿಗೆ ತಕ್ಕಂತೆ, ಈ ಮನೆಗೆ ಹೊಂದಿಕೊಂಡು ಹೋಗ್ತಾಳೆ, ಮತ್ತು ನನ್ನ ಗುಣಾವಗುಣಗಳಿಗೆ ಸರಿಯಾದ ಮ್ಯಾಚ್ ಅನ್ನಿಸೋ ಹುಡುಗಿ, ಮತ್ತು ಒಳ್ಳೆಯ ಮನೆತನ ಅನ್ನಿಸಿದ್ರೆ ಅವಳನ್ನು ನನಗೆ ನನ್ನನ್ನು ಅವಳಿಗೆ ತೋರಿಸಿ, ಅವಳನ್ನೇ ಕಣ್ಣುಮುಚ್ಚಿಕೊಂಡು ಮದುವೆ ಆಗಿಬಿಡ್ತೀನಿ ಎಂದು ಮಗ ಅಂದದ್ದಕ್ಕೆ ಕೊಂಚ ಹೊತ್ತು ಯೋಚಿಸಿ, ಲೋ ಅವೆಲ್ಲಾ ರಿಸ್ಕು ಕಣೋ, ಹೇಳಿದಷ್ಟು ಸುಲಭ ಅಲ್ಲ. ಅರೇಂಜ್ಡ್ ಮ್ಯಾರೇಜುಗಳು ಮುರಿದು ಬೀಳ್ತಾವೆ, ಮೆಂಟಾಲಿಟಿ ಹೊಂದಿಕೆಯಾಗೋಲ್ಲ ಹಲವು ಸಲ, ಮತ್ತೆ ಮನೆಗೆ ಬರುವವಳು ಹೊಂದಿಕೊಳ್ಳದೇ, ನಿಮ್ಮಮ್ಮನೊಂದಿಗೋ ಇಲ್ಲ ನಿನ್ನೊಂದಿಗೋ ಜಗಳ, ವೈಮನಸ್ಯ ಶುರುಮಾಡಿಕೊಂಡರೆ ಸುಮ್ಮನೆ ಎಲ್ಲರ ನೆಮ್ಮದಿ ಹಾಳು. ಇನ್ನು ನಿನ್ನ ತಮ್ಮ ಪಟ್ಟಕ್ಕೆ ಬಂದು ಅವನೂ ಅರೇಂಜ್ಡ್ ಮ್ಯಾರೇಜೇ ಮಾಡಿಸಿ ಅಂತ ಪಟ್ಟು ಹಿಡಿದು ನಂತರ ಇಬ್ಬರೂ ಸೊಸೆಯರು ಒಂದು ದಿನ ಜುಟ್ಟು ಹಿಡಿದು ಬೀದಿರಂಪ ಮಾಡಿದ್ರೆ ಮಾನ ಮರ್ಯಾದೆ ಎಲ್ಲಾ ಮೂರಾಬಟ್ಟೆಯಾಗಲ್ಲ ಅನ್ನೋದಕ್ಕೆ ಏನು ಗ್ಯಾರಂಟಿನಪ್ಪಾ ಸುಮ್ಮನೆ ನಿಮ್ಮ ನಿಮ್ಮ ಜೀವನ ಸಂಗಾತಿಗಳನ್ನ ನೀವೇ ಹುಡ್ಕೊಳ್ಳಿ ಎಂದು ಅಪ್ಪ ಕಡ್ಡಿ ಮುರಿದ ಹಾಗೆ ಹೇಳಿದ್ದನ್ನು ಕಂಡು ಮಗನೂ ತಲೆ ಕೆಡಿಸಿಕೊಳ್ಳುವನು! ಈ ಅಪ್ಪನಿಗೆ ಏನಪ್ಪಾ ಹೇಳುವುದು ಒಳ್ಳೇ ಹಳೇ ಸಿಡಿ ಪ್ಲೇಯರ್ ತರಹ ಅದೇ ಹಾಡಿಗೆ ಸಿಕ್ಕಾಕೊಂಡಿದ್ದಾರೆ, ಮುಂದೆ ಹೋಗಲ್ಲಾ ಹಿಂದೆ ಬರಲ್ಲಾ. ಏನು ಮಾಡೋದೀಗ, ಧಿಡೀರನೆ ಲವ್ ಮಾಡು ಅಂದ್ರೆ ಎಲ್ಲಿಂದ ಹುಡುಗಿ ಹುಡುಕೋದು, ಎಲ್ಲಾ ಹುಡುಗಿಯರು ಅರೇಂಜ್ಡ್ ಮ್ಯಾರೇಜೇ ಒಳ್ಳೆಯದು ಅಂತ ಕುಣೀತಿರ್ತಾರೆ.

ಹಯ್! ಈ ಮದುವೆ ಸಹವಾಸವೇ ಬೇಡಾ ಹಾಳಾಗೋಗ್ಲಿ ಎಂದು ಮಾತು ಮುಂದುವರೆಸದೇ ಹೋಗುತ್ತಿದ್ದ ಮಗನೆಡೆಗೆ ನೋಡಿ ಲೋ ಲೋ ಬಾರೋ ಇಲ್ಲಿ, ಏನಾಯ್ತು, ಏನು ನಿರ್ಧಾರ ಮಾಡಿದಿ? ಎಂದು ಎದುರಿಗೆ ಕೂರಲು ಕೈತೋರಿಸುವರು. ಮಗನೂ ಕೂತು ಇನ್ನೇನಪ್ಪಾ ನಿಮ್ಮದೊಳ್ಳೇ ಕಥೆ ಆಯ್ತು, ನನಗೆ ಈ ಮದುವೆ ಸಹವಾಸವೇ ಬೇಡ ಬಿಡಿ ಎಂದು ಎದ್ದು ಹೋಗಲು ಅನುವಾದವನಿಗೆ ಮುಚ್ಕೊಂಡ್ ಕೂತ್ಕೊಳ್ಳಪ್ಪಾ, ಅಲ್ವೋ ಕಾಲೇಜ್ ದಿನಗಳಲ್ಲಿ ಏನ್ ಮಣ್ಣು ಮುಕ್ತಿದ್ಯಾ? ಈ ವಯಸ್ಸಿನಲ್ಲಿ ಲವ್ ಮಾಡಲ್ಲಾ ಅಂದ್ರೆ ಹಲ್ಲುದುರಿದ ಮೇಲೆ ಮಾಡ್ತೀಯೇನೋ? ಹಾಳು ಮಾಡ್ಕೊಂಡಿದ್ಯ ಜೀವನಾನಾ ಹಾಗಾದ್ರೆ ನೀನು. ಏನೋ ಉದ್ಧಾರ ಮಾಡೋ ಹಾಗೆ ಹೊಸ ಹೊಸ ಬಟ್ಟೆ, ಕಿತ್ತೋಗಿರೋ ಸೌಂಡು ಮಾಡೋ ಗಾಡಿ, ಸೆಂಟು ಎಲ್ಲಾ ಮತ್ಯಾಕ್ ತೊಗೋತಿದ್ದೆ? ಎಂದು ನೇರವಾಗಿ ಪ್ರಶ್ನಿಸಿದ್ದನ್ನು ಕಂಡು ಅವಮಾನವೊಂದು ಕಡೆ, ಸಿಟ್ಟೊಂದು ಕಡೆ? ಇನ್ನ ಉತ್ತರಿಸುವುದೆಂತ? ತಲೆ ಬಗ್ಗಿಸಿ ಕಾಲ್ಕುಲೇಟರಿನೊಂದಿಗೆ ಬೆರಳಾಡಿಸುತ್ತಾ, ಏನು ಹೇಳುವುದೀಗ ಎಂದು ಯೋಚಿಸುವನು. ಥಟ್ಟನೆ ಹೊಳೆದು, ಯಾರನ್ನಾದರೂ ಇಷ್ಟ ಪಟ್ಟು, ಅವಳ ಹಿಂದೆ ಅಲೆದು, ಅವಳು ಅಕಸ್ಮಾತ್ ಒಪ್ಪಿಕೊಳ್ಳದೇ ಇನ್ನಾರ ಜೊತೆಗೋ ಹೋಗಿದ್ರೆ ವಿದ್ಯಾಭ್ಯಾಸ ಹಾಳಾಗ್ತಿರಲಿಲ್ವಾ, ಮಾರ್ಕ್ಸ್ ಗಳು ಹೊಗೆ ಹಾಕೊಂಡಿದ್ರೆ ಒಳ್ಳೇ ಕೆಲಸ ಸಿಗದೇ ಕೂಲಿ ಮಾಡಬೇಕಿತ್ತಷ್ಟೇ, ನೀವೂ ಸರಿಯಾಗಿ ಹೇಳ್ತೀರಾ ಬಿಡಿ ಎಂದು ಅಪ್ಪನನ್ನು ದಬಾಯಿಸಲು ಪ್ರಯತ್ನಿಸುವನು.

ಅದಕ್ಕೆ ಉತ್ತರ ಸಿದ್ಧವಾಗಿ ಇಟ್ಟುಕೊಂಡಿದ್ದರೇನೋ ಎಂಬಂತೆ, ಕೈ ತೋರಿಸುತ್ತಲೇ ಆಹಾ ಲೋ ಏನ್ ಭಾರೀ ಘನಂದಾರಿ ಕೆಲ್ಸಾನಪ್ಪಾ ನೀನು ಮಾಡ್ತಿರೋದು ಈಗ. ಆಯ್ತು ಏನೋ ಒಳ್ಳೇ ಸಂಬಳ ಬರ್ತಿದೆ ಅಂತಾನೇ ಇಟ್ಕೋ ಏನು ಉಪ್ಪಿನಕಾಯಿ ಹಾಕೊಂಡು ನೆಕ್ತೀಯಾ ದುಡ್ಡೊಂದನ್ನೇ ಇಟ್ಟುಕೊಂಡು? ಹಾ. ಧೈರ್ಯ ಇರಲಿಲ್ಲ ಅಂತ ಹೇಳು. ಇನ್ನೂ ದೇವ-ಡಿ ಕಾಲದಲ್ಲೇ ಇರು ನೀನು. ನಿನ್ನನ್ನ ನನ್ನ ಮಗ ಅಂತ ಹೇಳಿಕೊಳ್ಳೋದಕ್ಕೂ ನಾಚಿಕೆ ಆಗುತ್ತೆ ಕಣೋ ಥೂ ಎದ್ದೋಗು ಅದೇನ್ ಮಾಡ್ತೀಯೋ ಮಾಡ್ಕೋ, ಒಂದು ವಾರ ಸಮಯ ತೊಗೋ, ನಿನ್ನ ಕೈಯಲ್ಲಿ ಹುಡುಗಿ ಹುಡುಕಿಕೊಳ್ಳುವುದಕ್ಕೆ ಆಗಲ್ಲ ಅಂದ್ರೆ ಆಮೇಲೂ ಹೇಳು ನಿನ್ನ ಹಣೆಬರಹ ನಾವೇನ್ ಮಾಡೋಣ ಎನ್ನುವರು. ಅಲ್ಲಪ್ಪಾ ಅರೇಂಜ್ಡ್ ಮ್ಯಾರೇಜಂದ್ರೆ ಅಷ್ಟೋಂದು ನಕಾರಾತ್ಮಕವಾಗಿ ಯಾಕೆ ಮಾತನಾಡ್ತೀರಾ? ನನ್ನ ಸ್ನೇಹಿತರೆಲ್ಲಾ ಚೆನ್ನಾಗೇ ಇದ್ದಾರಪ್ಪಾ ಯಾವ ಸಮಸ್ಯೆನೂ ಇಲ್ಲ ಅವರ ಮಧ್ಯೆ, ಅನ್ಯೋನ್ಯವಾಗಿ ಒಂದು ಹೆತ್ತುಕೊಂಡು ಚೆನ್ನಾಗೇ ಇದ್ದಾರೆ ಎಂದು ಹೇಳಿ ಅಪ್ಪನ ಪ್ರತಿಕ್ರಿಯೆಗೂ ಕಾಯದೆ ನಡೆದುಹೋಗುವನು.

ಈಗಿನ ಮಕ್ಕಳೋ ಒಂದೂ ಹೇಳಿದ ಮೇತೇ ಕೇಳಲ್ಲಪ್ಪಾ! ಅವರು ನಡೆದಿದ್ದೇ ದಾರಿ ಎಂದು ಒಂದು ದೀರ್ಘ ನಿಟ್ಟುಸಿರು ಬಿಟ್ಟು, ಮತ್ತೆ ಲೆಕ್ಕಾಚಾರ ಶುರುಮಾಡುವರು!

ಚಿತ್ರಕೃಪೆ:mademan.com

*******************************************

Read more from ಲೇಖನಗಳು
2 ಟಿಪ್ಪಣಿಗಳು Post a comment
  1. ಧನ್ಯವಾದಗಳು ನಿರ್ವಾಹಕರಿಗೂ ಮತ್ತು ಆಸಕ್ತಿ ಓದಿದವರಿಗೂ ಮತ್ತು ಅಭಿಪ್ರಾಯ, ಅನಿಸಿಕೆಗಳನ್ನೇನಾದರೂ ತಿಳಿಸುವವರಿಗೂ, ಮತ್ತು ವಿಚಾರ ಮಾಡುವವರಿಗೂ.. 🙂

    ಉತ್ತರ
    • Yashawantha's avatar
      Yashawantha
      ಜುಲೈ 5 2012

      ಕಥೆ ಚೆನ್ನಾಗಿದೆ ಮುಂದ್ವರ್ಸಿ
      -ಯಶವಂತ

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments