ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2012

6

ಧರ್ಮವೆಂಬ ಅಫೀಮು ಮತ್ತು ಜಾತಿಯೆಂಬ ಮರಿಜುವಾನ….

‍ನಿಲುಮೆ ಮೂಲಕ

– ಡಾ. ಅಶೋಕ್ ಕೆ.ಆರ್

ಮಾರ್ಕ್ಸ್ ವಾದ ಮತ್ತದರ ವಿವಿಧ ಸರಣಿವಾದಗಳು ಪದೇ ಪದೇ ವಿಫಲವಾದ ನಂತರೂ ಮತ್ತೆ ಮತ್ತೆ ಪ್ರಸ್ತುತವೆನ್ನಿಸುತ್ತಲೇ ಸಾಗುವುದಕ್ಕೆ ಕಾರಣಗಳೇನು? ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ “Religion is opium” ಎಂದು ದಶಕಗಳ ಹಿಂದೆ ಯಾವಗಲೋ ಮಾರ್ಕ್ಸ್ ಹೇಳಿದ್ದ ಮಾತುಗಳು ನೆನಪಾಗದೇ ಇರದು. ‘ಭಿನ್ನ’ ಪಕ್ಷವೆಂದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಭಾ.ಜ.ಪದ ಭಿನ್ನತೆ ಇಷ್ಟೊಂದು ಅಸಹ್ಯಕರವಾಗಿರಬಲ್ಲದು ಎಂದು ಸ್ವತಃ ಅದರ ಕಾರ್ಯಕರ್ತರೇ ನಿರೀಕ್ಷಿಸಿರಲಿಲ್ಲವೇನೋ?!

 ಮಾತೆತ್ತಿದರೆ ‘ಹಿಂದೂ’ವಾದದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಮಾಡುವ, ‘ಅಖಂಡ’ ಹಿಂದೂ ರಾಷ್ಟ್ರ ನಿರ್ಮಾಣವೇ ನಮ್ಮ ಗುರಿ ಎಂದು ಚುನಾವಣೆ ಸಮಯದಲ್ಲಿ ಅಬ್ಬರಿಸುವ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ‘ಹಿಂದೂ’ ಎಂಬ ಧರ್ಮದ ಒಳಗಿನ ಜಾತಿಯೆಂಬ ಅನಿಷ್ಟದ ಬಗ್ಗೆ ಪ್ರಜ್ಞಾಪೂರ್ವಕ ಮೌನಕ್ಕೆ ಶರಣಾಗುತ್ತಿತ್ತು. ಯಾರಾದರೂ ಜಾತಿಯಾಧಾರಿತ ‘ಹಿಂದೂ’ ಧರ್ಮದ ಬಗ್ಗೆ ಖಂಡನೀಯ ಮಾತುಗಳನ್ನಾಡಿದರೆ ಅವರನ್ನು ಸ್ಯೂಡೋ ಸೆಕ್ಯುಲರ್ ಎಂದು, ರಾಷ್ಟ್ರದ್ರೋಹಿಯೆಂದು ಪಟ್ಟ ಕಟ್ಟುವಲ್ಲಿ ಭಾ.ಜ.ಪ ಮತ್ತದರ ಅಂಗಸಂಸ್ಥೆಗಳದು ಎತ್ತಿದ ಕೈ. ‘ನಾವೆಲ್ಲರೂ ಒಂದು ನಾವು ಹಿಂದು’ ಎಂದು ಪ್ರಚಾರ ಮಾಡುತ್ತ ಜನರನ್ನು ನವ ಬ್ರಾಹ್ಮಣ್ಯದ ಕಡೆಗೆ ಆಕರ್ಷಿತರನ್ನಾಗಿ ಮಾಡಿ ದಲಿತ-ಶೂದ್ರ-ಬ್ರಾಹ್ಮಣ-ಅಬ್ರಾಹ್ಮಣ ಯುವಜನತೆಯಲ್ಲಿ ಕೋಮುದ್ವೇಷವನ್ನು ಬಿತ್ತುವಲ್ಲಿಯೂ ಭಾ.ಜ.ಪದ ಪಾತ್ರ ಹಿರಿದು.
ಜಾತಿ ಸಮಸ್ಯೆಯನ್ನು ಗಮನಿಸದೆ ಜಾತಿಯ ಅಸ್ತಿತ್ವವನ್ನೇ ನಿರಾಕರಿಸುವ ನಾಟಕವಾಡುತ್ತಿದ್ದ ಭಾ.ಜ.ಪ ಇಂದು ಜಾತಿ ಆಧಾರಿತ ಭಿನ್ನಮತೀಯ ಚಟುವಟಿಕೆಯ ಕೇಂದ್ರವಾಗಿಬಿಟ್ಟಿದೆ! ಎಲ್ಲ ರಾಜಕೀಯ ಪಕ್ಷಗಳು, ಬಹುತೇಕ ಎಲ್ಲ ಚುನಾವಣೆಗಳು ನಡೆಯುವುದು ಜಾತಿ ಆಧಾರಿತವಾಗಿಯೇ. ಆ ಪ್ರಾಂತ್ಯದ ಬಹುಸಂಖ್ಯಾತ ಜಾತಿಯ ಬೆಂಬಲಿತ ಅಭ್ಯರ್ಥಿಯೇ ಹೆಚ್ಚಿನ ಬಾರಿ ಗೆಲುವು ಸಾಧಿಸುವುದು. ಮತದಾರನ ಸುಪ್ತ ಮನಸ್ಸಿನಲ್ಲಿ ಅಡಕವಾಗಿದ್ದ ಈ ಜಾತಿ ರಾಜಕಾರಣವನ್ನು ಬಡಿದೆಬ್ಬಿಸಿದ ಕೀರ್ತಿ ಮಾತ್ರ ಭಾ.ಜ.ಪಕ್ಕೆ ಸಲ್ಲಬೇಕು. ಕರ್ನಾಟಕವೆಂದರೆ ಲಿಂಗಾಯತ ಮತ್ತು ಒಕ್ಕಲಿಗರ ನಡುವಿನ ರಣರಂಗ ಎಂದು ಬಿಂಬಿಸಿದ ಕೀರ್ತಿ ಕೂಡ ಭಾ.ಜ.ಪ ಮತ್ತು ಕೊಂಚ ಮಟ್ಟಿಗೆ ಜೆ.ಡಿ.ಎಸ್ ಗೆ ಸೇರಬೇಕು.

ಇವರಿಗೆ ಜಾತಿಯ ನೆನಪಾಗುವುದ್ಯಾವಾಗ?
          ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಯಡ್ಡಿಯ ದಶಕಗಳ ರಾಜಕೀಯ ಜೀವನ, ಕುಮಾರಸ್ವಾಮಿ ಮಾಡಿದ ವಚನಭಂಗ ಮೂಲ ಕಾರಣವೇ ಹೊರತು ಯಡ್ಡಿಯ ಜಾತಿಯಲ್ಲ. ಗೆದ್ದಾಗ ಜಾತಿಯ ಬಗ್ಗೆ ಮಾತನಾಡಲಿಲ್ಲ. ಕೋಟಿ ಕೋಟಿ ಅಕ್ರಮವಾಗಿ ದೋಚಿದಾಗ ಜಾತಿಯ ನೆನಪಾಗಲಿಲ್ಲ, ಕೊನೆಗೆ ಅನೈತಿಕ ರಾಜಕಾರಣ ಮಾಡುವಾಗಲೂ ಜಾತಿಯ ನೆನಪಾಗಲಿಲ್ಲ. ಜಾತಿಯ ನೆನಪಾಗಿದ್ದು ವಿರೋಧ ಪಕ್ಷದವರು, ಇತರರು ಇವರ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಲಾರಂಭಿಸಿದಾಗ! ‘ಅಯ್ಯಯ್ಯೋ ನಾನು ಲಿಂಗಾಯತ ಅಂತ ತುಳೀತಾವ್ರೆ ನೋಡ್ರಪ್ಪ’ ಎಂದು ಮಠದಂಗಳದಲ್ಲಿ ಗೋಳಾಡಿದರು. ಲಿಂಗಾಯತ ಮಠಾದೀಶರೂ ಜೈಲಿನವರೆಗೂ ಹೋಗಿ ಕ್ಷೇಮ ವಿಚಾರಿಸಿದರು. ವಿದ್ಯಾರ್ಥಿ ಜೀವನದಲ್ಲಿ ಕನಸು – ಆದರ್ಶಗಳನ್ನು ಹಂಚಿಕೊಂಡ ಗೆಳೆಯನೊಬ್ಬ ಕೂಡ “ನಿಮ್ಮ ದೇವೇಗೌಡ ಕುಮಾರಸ್ವಾಮಿ ದುಡ್ಡು ಮಾಡಿಲ್ವ? ನಮ್ಮ ಯಡ್ಡಿ ದುಡ್ಡು ಹೊಡೆದರೆ ತಪ್ಪೇನು? ಯಡ್ಡಿ ಮತ್ತೆ ಸಿಎಮ್ಮಾಗಬೇಕು” ಎಂದು ಹೇಳಿ ನೀನು ಒಕ್ಕಲಿಗ [ಒಂದು ದಿನಕ್ಕೂ ನೇಗಿಲು ಹಿಡಿದು ಉಳುಮೆ ಮಾಡದ ನಾನು ಯಾವ ರೀತಿಯಿಂದ ಒಕ್ಕಲಿಗ?!] ನಾನು ಲಿಂಗಾಯತ ಎಂದು ನೆನಪಿಸಿದ್ದ.
ಜಾತಿ ಮೇಲೆ ಅಷ್ಟೊಂದು ‘ಅಭಿಮಾನ’ವಿದ್ದ ಯಡಿಯೂರಪ್ಪ ಹೊಸ ಮುಖ್ಯಮಂತ್ರಿಯನ್ನಾರಿಸುವಾಗ ತಮ್ಮ ‘ಜಾತಿ’ಯ ಜಗದೀಶ್ ಶೆಟ್ಟರರನ್ನು ಬೆಂಬಲಿಸಲಿಲ್ಲ! ಬೆಂಬಲಿಸಿ ಗೆಲ್ಲಿಸಿದ್ದು ‘ಒಕ್ಕಲಿಗರ’ ಸದಾನಂದಗೌಡರನ್ನು! ಜಾತಿ ಮರೆತು ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ಅವರ ‘ಜಾತ್ಯತೀತ’ ಮನೋಭಾವ ಕಾರಣವಲ್ಲ, ನನ್ನ ಮಾತು ಕೇಳ್ಕೊಂಡು ಬಿದ್ದಿರ್ತಾನೆ ಎಂಬ ಮನೋಭಾವ. ಆದರೆ ಆಗಿದ್ದೇ ಬೇರೆ. ಗುರುವಿಗೇ ತಿರುಮಂತ್ರವಾಕಿದ ಸದು ಅವರ ಮಾತು ಕೇಳಲಿಲ್ಲ. ಗೊಂದಲಗೊಂಡ ಯಡ್ಡಿ ಕೋಪತಾಪ ಪ್ರದರ್ಶಿಸಲಾರಂಭಿಸಿದಾಗ ಸದು ಮೊರೆ ಹೋದದ್ದು ಜಾತಿಗೆ! ‘ಒಕ್ಕಲಿಗರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾದೆ’ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡಿದರು. ಲಿಂಗಾಯತರನ್ನು ಒಕ್ಕಲಿಗರು ತುಳೀತಾರ್ವೆ ಅನ್ನೋ ಯಡ್ಡಿಯ ಮಾತು ಒಂದು ವೃತ್ತ ಪೂರ್ಣಗೊಳಿಸಿ ಒಕ್ಕಲಿಗರನ್ನು ಲಿಂಗಾಯತರು ತುಳೀತಾರ್ವೆ ಅನ್ನೋ ಮಾತಾಯಿತು. ಲಿಂಗದೋರಿಗಿಂತ ನಾವೇನು ಕಡಿಮೆ ಎಂದ್ಹೇಳುತ್ತ ಒಕ್ಕಲಿಗ ಮಠಾಧಿಪತಿಗಳೂ ಖಾವಿ ಪಂಚೆ ಕೊಡವಿಕೊಳ್ಳುತ್ತಾ ‘ಫೀಲ್ಡಿಗಿಳಿದರು’.
 ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಯಡ್ಡಿಗಾಗಲೀ, ಸದುಗಾಗಲೀ ಜಾತಿಯ ನೆನಪಾಗಿದ್ದು ಅಧಿಕಾರ ಕಳೆದುಕೊಳ್ಳುವ ಘಳಿಗೆಯಲ್ಲಿ ಮಾತ್ರ. ಜಾತಿ ಸಮುದಾಯದ ಏಳಿಗೆಯ ಬಗ್ಗೆ ಮಾತನಾಡಲಿಲ್ಲ, ಆ ಸಮುದಾಯದ ಜನರ ಕಷ್ಟಸುಖದ ಬಗ್ಗೆ ವಿಚಾರಿಸಲಿಲ್ಲ. ಆದರೆ ಜಾತಿ ಹೆಸರಿಡಿದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ಹಿಂದೆ ಬೀಳಲಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಜನ ‘ನಮ್ಮ ನಾಯಕ’ರಷ್ಟೇ ನಾವೂ ನಿಕೃಷ್ಟರು ಎಂದು ನಿರೂಪಿಸುತ್ತಿರುವುದು ಕರ್ನಾಟಕದ ಸಾಂಸ್ಕೃತಿಕ, ರಾಜಕೀಯ ಅಧಃಪತನವೆಂಬುದರಲ್ಲಿ ಸಂಶಯವಿಲ್ಲ.
ಈ ಲಿಂಗದೋರು ಮತ್ತು ಗೌಡ್ರು ಗದ್ದಲದಲ್ಲಿ ಉಳಿದ ಜಾತಿ, ಧರ್ಮಗಳವರ ಪಾಡೇನು? ಕನ್ನಡಿಗರ ಪಟ್ಟಿಯಲ್ಲಿ ಎಲ್ಲ ಜಾತಿ ಧರ್ಮದವರೂ ಇದ್ದಾರಲ್ಲವೇ?!
6 ಟಿಪ್ಪಣಿಗಳು Post a comment
  1. anand prasad's avatar
    anand prasad
    ಜುಲೈ 10 2012

    ಬಿಜೆಪಿಯ ಹೈಕಮಾಂಡ್ ನೈತಿಕವಾಗಿ, ಬೌದ್ಧಿಕವಾಗಿ, ವೈಚಾರಿಕವಾಗಿ ಸಂಪೂರ್ಣ ದಿವಾಳಿಯಾಗಿರುವುದರ ಸಂಕೇತ ಭ್ರಷ್ಟಾಚಾರಿಗಳಿಗೆ ಸಂಪೂರ್ಣ ಶರಣಾಗಿರುವುದರಲ್ಲಿ ಕಂಡುಬರುತ್ತದೆ. ಮೌಲ್ಯಾಧಾರಿತ ರಾಜಕೀಯವನ್ನು ಸಂಪೂರ್ಣವಾಗಿ ತಿಪ್ಪೆಗೆಸೆದು ಸಮಯಸಾಧಕ ರಾಜಕೀಯವೇ ಪ್ರಧಾನ ಎಂದು ಸಂಘ ಪರಿವಾರದ ಹಿನ್ನೆಲೆಯ ಗಡ್ಕರಿ ನಿರೂಪಿಸುತ್ತಿರುವುದು ಬಿಜೆಪಿ ಮುಂದಿನ ದಿನಗಳಲ್ಲಿ ಎತ್ತ ಹೋಗಲಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಅಧಿಕಾರವು ಸಂಘ ಪರಿವಾರವನ್ನು ಭ್ರಷ್ಟನನ್ನಾಗಿ ಮಾಡಿದೆ. ಮೌಲ್ಯಗಳು ಬೇರೆಯವರಿಗೆ, ತಮಗೆ ಅನ್ವಯ ಆಗುವುದಿಲ್ಲ ಎಂಬುದನ್ನು ಸಂಘ ಪರಿವಾರ ತೋರಿಸುತ್ತಿದೆ. ಇಲ್ಲವಾದರೆ ಸಂಘದ ಹಿನ್ನೆಲೆಯ ಗಡ್ಕರಿ ಇಂಥ ಅತ್ಯಂತ ಜಾತಿವಾದಿ ನಿಲುವನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯವಾಗುತ್ತಿತ್ತು?

    ಉತ್ತರ
  2. SSNK's avatar
    Kumar
    ಜುಲೈ 10 2012

    ಯೆಡ್ಯೂರಪ್ಪನವರಿಂದ ಕರ್ನಾಟಕದ ರಾಜಕೀಯದಲ್ಲಿ ಜಾತಿ ರಾಜಕಾರಣ ಹೆಚ್ಚಾಗಿರುವುದು ನಿಜ.
    ಆದರೆ, ಭಾಜಪ ಪಕ್ಷವೇ ಜಾತಿ ರಾಜಕಾರಣಕ್ಕೆ ಕಾರಣ ಎಂದು ಬಿಂಬಿಸುವುದು ಸರಿಯಲ್ಲ.
    ಅದ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ಪ್ರಮೋದ್ ಮಹಾಜನ್, ಸುರೇಶ್ ಕುಮಾರ್, ಡಾ||ವಿ.ಎಸ್.ಆಚಾರ್ಯ, ಡಿ.ಎಚ್.ಶಂಕರಮೂರ್ತಿ ಮುಂತಾದವರೂ ಭಾಜಪ ಪಕ್ಷಕ್ಕೇ ಸೇರಿದವರು. ಇವರೆಲ್ಲರೂ ಅಧಿಕಾರದಲ್ಲಿದ್ದವರೇ, ರಾಜಕೀಯದಲ್ಲಿ ತಮ್ಮ ಪ್ರಭಾವವನ್ನು ಬೀರಿದವರೇ.
    ಭಾಜಪ ಪಕ್ಷವೇ ಜಾತಿ ರಾಜಕಾರಣಕ್ಕೆ ಕಾರಣವಾಗಿದ್ದಿದ್ದರೆ, ಇವರೆಲ್ಲರೂ ತಮ್ಮತಮ್ಮ ಜಾತಿಗಳನ್ನೇ ಮೇಲಕ್ಕೇರಿಸಬೇಕಿತ್ತು, ಭಾಜಪ ತುಂಬ ಜಾತಿಯ ಗಾಳಿಯನ್ನೇ ಹರಡಬೇಕಿತ್ತು.
    ಆದರೆ, ಇವರಾರೂ ಜಾತಿ ರಾಜಕಾರಣ ಮಾಡಲೇ ಇಲ್ಲವೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಮತ್ತು ಎಲ್ಲರೂ ಇವರನ್ನು ಬಹಳ ಗೌರವಿಸುತ್ತಾರೆ.
    ಭಾಜಪ ಎಂದರೆ ನಿಮಗೆ ಇಂತಹ ಮಹನೀಯರು ಕಾಣುವ ಬದಲು ಕೇವಲ ಯೆಡ್ಯೂರಪ್ಪನವರು ಮಾತ್ರ ಕಾಣುತ್ತಿರುವುದು, ನೀವು ಧರಿಸಿರುವ ಕನ್ನಡಕದ ಪರಿಣಾಮವಾಗಿರಬಹುದೇ!? ಹಾಗಾಗಿದ್ದಲ್ಲಿ, ನಿಮ್ಮ ಕನ್ನಡಕವನ್ನು ಬದಲಾಯಿಸುವುದೊಳ್ಳೆಯದು.
    ನೀವು ಕನ್ನಡಕವನ್ನೇ ಧರಿಸಿಲ್ಲವೆನ್ನುವುದಾದರೆ, ಇದು ನಿಜಕ್ಕೂ ದೃಷ್ಟಿದೋಷದ ಪರಿಣಾಮ – ಕಣ್ಣು ಪರೀಕ್ಷೆ ಮಾಡಿಸುವುದೊಳ್ಳೆಯದು.

    ಉತ್ತರ
    • ಅಶೋಕ್.ಕೆ.ಆರ್'s avatar
      ಜುಲೈ 10 2012

      ನನ್ನ ದೃಷ್ಟಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು! ಭಾಜಪ ಎಂದರೆ ನೀವು ಹೇಳುತ್ತಿರುವ ಮಹನೀಯರನ್ನು ಕಾಣುವ ಬದಲು ಕೇವಲ ಯಡ್ಯೂರಪ್ಪನವರನ್ನು ಕಾಣುತ್ತಿರುವುದಕ್ಕೆ ಖಂಡಿತ ನನ್ನ ದೃಷ್ಟಿ ದೋಷ ಕಾರಣವಲ್ಲ. ನೀವು ಮೇಲೆ ತಿಳಿಸಿದ ಮಹನೀಯರಿಗಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಭಾಜಪವನ್ನು ಬೆಳೆಸಿದ್ದು ಯಡ್ಡಿ. ಕೊನೆಗೆ ಅದರ ನೈತಿಕ ಅಧಃಪತನಕ್ಕೆ ಕಾರಣವಾಗಿರುವುದು ಕೂಡ ಯಡ್ಡಿಯೇ. ಈ ಲೇಖನ ಇವತ್ತಿನ ಕರ್ನಾಟಕದ ಭಾಜಪದ ಬೆಳವಣಿಗೆಗಳ ಬಗ್ಗೆಯೇ ಹೊರತು ಭಾಜಪದ ಮಹನೀಯರ ಬಗ್ಗೆಯಲ್ಲ. ಸುರೇಶ್ ಕುಮಾರ್ ಶಂಕರಮೂರ್ತಿಯವರು ಮಹನೀಯರಾಗಿದ್ದಲ್ಲಿ ಇಂದು ನಡೆಯುತ್ತಿರುವ ಜಾತಿ ರಾಜಕಾರಣವನ್ನು ಖಂಡಿಸಬೇಕಿತ್ತಲ್ಲವೇ?
      ಕೊನೆಯದಾಗಿ ಕುಮಾರ್ ರವರೇ ಯಾವುದೇ ಒಂದು ಲೇಖನ ನಿಮಗೆ ಇಷ್ಟವಾಗದಿದ್ದ ಪಕ್ಷದಲ್ಲಿ ಒಪ್ಪಿಗೆಯಾಗದಿದ್ದ ಪಕ್ಷದಲ್ಲಿ ಅದರಲ್ಲಿರುವ ತಪ್ಪು ಹುಳುಕುಗಳ ಬಗ್ಗೆ ಬರೆಯಿರಿ ಒಳ್ಳೆಯದು. ಲೇಖನದಲ್ಲಿ ಕೊರತೆ ಇದೆ ಎಂದ ಮಾತ್ರಕ್ಕೆ ಲೇಖಕನ ದೃಷ್ಟಿ ಮತ್ತೊಂದರ ಬಗ್ಗೆ ಮಾತನಾಡುತ್ತ ವೈಯಕ್ತಿಕ ಟೀಕೆಗೆ ಇಳಿಯಬೇಡಿ.

      ಉತ್ತರ
  3. ಬಿಜೆಪಿಯ ಇಂದಿನ ಸ್ಥಿತಿಗೆ ನೇರ ಕಾರಣ ’ಆರ್.ಎಸ್.ಎಸ್’ … ಅಡ್ವಾಣಿ ಅವರ ಕೈಯಿಂದ ಹೈಜಾಕ್ ಮಾಡಿ ಅವಸಾನದ ಅಂಚಿಗೆ ಕೊಂಡುಯ್ಯುತ್ತಿದೆ…

    ಉತ್ತರ
  4. ಕನ್ನಡಿಗ's avatar
    ಕನ್ನಡಿಗ
    ಜುಲೈ 12 2012

    ಮೂರ್ಖ , ಹಟಮಾರಿ ಯೆದ್ದಿಯನ್ನು ,ಕಿತ್ತೆಸೆದರೆ ಎಲ್ಲರಿಗೂ ನೆಮ್ಮದಿ. ಯೆದ್ದಿಗೆ ಸರಿಯಾಗಿ ಒಂದೇಟು ಬಾರಿಸಿದರೆ ಅವನ ಸೊ ಕಾಲ್ಡ್ ಚೇಲಾಗಳು ತಿರುಗಿ ಕೂಡ ನೋಡದೆ ನಾಪತ್ತೆ ಆಗುತ್ತಾರೆ ! ಅದಕ್ಕೆ ಬಿ ಜೆಪಿ ಹೈ ಕಮಾಂಡ್ ಧೈರ್ಯ ತೋರದಿದ್ದರೆ ,ಕರ್ನಾಟಕದ ಜನ ಕೋಲು ಹಿಡಿದು ತಯಾರಾಗುತ್ತಾರೆ ಖಂಡಿತ !! ಎಡ್ಡಿ ಜಾಗ್ರತೆ !

    ಉತ್ತರ
  5. ಗಿರೀಶ್'s avatar
    ಗಿರೀಶ್
    ಜುಲೈ 13 2012

    ಜಾತಿಯೆಂಬ ಅಫೀಮು ತಿಂದು ಬೆಳೆದಿದ್ದು ಭಾಜಪ. ಆದರೆ ನೀವು ಹೇಳಿದಂತೆ, ಜಾತಿಯೆಂಬ ಮರಿಜುವಾನವನ್ನು ಮೊದಲು ತಿನಿಸಿದ್ದು ಅತಿ ಧೀರ್ಘ ಕಾಲ ದೇಶ ರಾಜ್ಯವನ್ನಾಳಿದ ಪಕ್ಷ. ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬರಲು ಜಾತಿಯನ್ನು ಆಶ್ರಯಿಸ ಬೇಕಾಗುವಂತೆ ಮಾಡಿದ್ದು ಆ ಪಕ್ಷ. ಆದ್ದರಿಂದ ಅಧಿಕಾರ ಹಿಡಿಯಲು ಆ ಸೂತ್ರ ಬಳಸದೇ ಬೇರೆ ವಿಧಿಯೆಲ್ಲಿದೆ? ಇಲ್ಲದಿದ್ದರೆ ಅಧಿಕಾರವಿಲ್ಲ. ನೀವು ಹೇಳಬಹುದು ಅಧಿಕಾರ ಬೇಡ ಬರೀ ಸಿದ್ದಾಂತಗಳನ್ನೇ ನಂಬಿಕೊಂಡಿರಲಿ ಎಂದು ಬರೀ ಸಿದ್ದಾಂತಗಳ ಪ್ರತಿಪಾದನೆ ಮಾಡುತ್ತಲೇ ಬಂದಾಗ ಭಾಜಪಕ್ಕೆ ಸಿಕ್ಕಿದ್ದು ಕೇವಲ ಎರಡು ಸ್ಥಾನಗಳು ಮಾತ್ರ. ಬ್ರಷ್ಟ ರಾಜಕಾರಣಕ್ಕಿಳಿದಾಗಲೇ ಭಾಜಪಕ್ಕೂ ಅಧಿಕಾರದ ಗದ್ದುಗೆ ಹತ್ತಿರವಾಗಿದ್ದು. ಅಂದರೇ ಜಾತಿಯನ್ನು ಅನುಸರಿಸುತ್ತಿರುವ ಈ ಸಮಾಜವನ್ನು ದೂರಬೇಕು ಇಲ್ಲದಿದ್ದರೆ ಹಿಂದೂ ಸಮಾಜವು ಒಂದೆ ಪಕ್ಷದ ಕಡೆಗೆ ವಾಲಬಾರದೆಂದೆ ಹುನ್ನಾರ ನಡೆಸಿದ ಜಾತಿಯಾಧರಿಸಿ ಸಮಾಜ ಒಡೆದ ಆಂಗ್ಲರ ಶಿಶು ಪಕ್ಷ ಮುಂದುವರೆಸಿದ ಪರಿಣಾಮ ಇವತ್ತಿನ ಪರಿಸ್ಥಿತಿ. ತಾವು ಲೇಖನ ಬರೆಯುವಾಗ ಇದು ಗಮನಕ್ಕೆ ಬರಲಿಲ್ಲವೆ?
    ತಾವು ಅಪ್ಪಣೆ ಕೊಡಿಸಬಹುದು, ಅವರು ಮಾಡಿದ್ರು ಇವರ್ಯಾಕೆ ಮಾಡ್ಬೇಕು. ಇವರು ಸಿದ್ದಾಂತಗಳ ಪ್ರತಿಪಾದಕರಲ್ಲವೇ ಎಂದು ಅದು ಸರಿಯಾದ ಪ್ರಶ್ನೆಯಾಗುತ್ತದೆಯೆ? ಏಕೆಂದರೆ ಸಿದ್ದಾಂತವನ್ನು ಅಧಿಕಾರ ಬಂದ ನಂತರ ಆಚರಣೆಗೆ ತರಬಹುದು, ಆದರೆ ಅಧಿಕಾರಕ್ಕೆ ಬರಲು ಸಿದ್ದಾಂತಗಳಿಂದ ಸಾಧ್ಯವಿಲ್ಲವೆನ್ನುವುದು ಕಳೆದ ೭೦ ವರ್ಷಗಳಲ್ಲಿ ಅಪರೋಕ್ಷ ಪ್ರಜಾಪ್ರಭುತ್ವದ ಈ ದೇಶದಲ್ಲಿ ಮತ್ತೆ ಮತ್ತೆ ಅನುಭವಕ್ಕೆ ಬಂದಿದೆ.

    ಉತ್ತರ

Leave a reply to ರಾಕೇಶ್ ಶೆಟ್ಟಿ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments