ವಿಷಯದ ವಿವರಗಳಿಗೆ ದಾಟಿರಿ

ಮೇ 26, 2013

ಜಾತಿವ್ಯವಸ್ಥೆ ಇಲ್ಲ ಎಂದರೆ…

‍ನಿಲುಮೆ ಮೂಲಕ

-ಡಾ. ಷಣ್ಮುಖ ಮತ್ತು ಡಾ. ಪ್ರವೀಣ

vachana-charcheಜಾತಿಗಳಿವೆ ಜಾತಿವ್ಯವಸ್ಥೆ ಇಲ್ಲ ಎಂದರೆ ಏನು? ಹಾಗಾದರೆ ಈ ಮೇಲು-ಕೀಳು, ತಾರತಮ್ಯ, ಶೋಷಣೆಗಳು ಇಲ್ಲ ಅಂತ ಹೇಳ್ತಾ ಇದೀರಾ?  ಪದೇ ಪದೇ ನಮಗೆ ಇದುವರೆಗೂ ಎದುರಾಗಿರುವ (ಅಂತರ್ಜಾಲದ ಚರ್ಚೆಗಳಲ್ಲಿರಬಹುದು, ಸೆಮಿನಾರ್, ಕಾರ್ಯಾಗಾರಗಳಲ್ಲಿರಬಹುದು) ಕೆಲವೇ ಒಳ್ಳೆಯ ಪ್ರಶ್ನೆಗಳಲ್ಲಿ ಇವೂ ಕೂಡ. ಅವುಗಳ ಸುತ್ತ ಈ ಬರಹ ಚರ್ಚಿಸುವ ಪ್ರಯತ್ನ ಮಾಡುತ್ತದೆ.

ಜಾತಿಗಳಿಲ್ಲ ಎಂದು ವಾದಿಸುತ್ತಿರುವ ಮೂರ್ಖರ ಗುಂಪೊಂದು ಇದೆ ಎಂದು ಹೇಳುತ್ತಾ ಬಂದಿರುವುದನ್ನು ನೀವು ಕೇಳಿರುವ ಸಾಧ್ಯತೆ ಇದೆ. ಆಗ ನಿಮಗೂ ಅನಿಸಿರಬಹುದು -ಇವರೆಂಥ ಮೂರ್ಖರಯ್ಯ.! ಕಣ್ಮುಂದೆ ಕಾಣುವ ಸಂಗತಿಗಳನ್ನು ನಿರಾಕರಿಸುತ್ತಿರುವರಲ್ಲ! ಇದೆಂಥಾ ಸಂಶೋಧನೆ, ಇದರ ಹಿಂದೆ ಯಾವುದೋ ಹುನ್ನಾರ/ ಕುಯುಕ್ತಿ ಇದ್ದಿರಬಹುದು!     ಅಂತಹ ಯಾವುದೇ ಪ್ರಮೇಯಗಳನ್ನು, ಹೇಳಿಕೆಗಳನ್ನು ಮಾಡಿರುವ ಒಂದೇ ಒಂದು ಉದಾಹರಣೆ ಕೂಡ ನಮ್ಮ ಗುಂಪಿನ ಬರಹಗಳಿಂದ ತೆಗೆದು ತೋರಿಸಲು ಸಾಧ್ಯವಿಲ್ಲ. ಹಾಗಿದ್ದರೂ ಈ ರೀತಿಯ ಆರೋಪಗಳು ಎಲ್ಲಿಂದ ಹೊರಟಿತು? ಹಾಗಾದರೆ ಜಾತಿಗಳ ಕುರಿತು ನಮ್ಮ ವಾದವೇನು? ಎಂಬ ಪ್ರಶ್ನೆಗಳು ಏಳುವುದು ಸಹಜ.

ಜಾತಿಯ ಕುರಿತ ನಮ್ಮ ವಾದವನ್ನು ಸರಳವಾಗಿ ಸಾರಾಂಶೀಕರಿಸುವುದಾದರೆ, ಭಾರತದಲ್ಲಿ ವಸಾಹತು ಪೂರ್ವದಿಂದಲೂ ಜಾತಿಗಳಿದ್ದವು, ಈಗಲೂ ಇವೆ.. ಇವುಗಳನ್ನು ಯೂರೋಪಿಯನ್ನರು ತೆಗೆದುಕೊಂಡು ಬಂದರು, ಇಲ್ಲಿ ಸೃಷ್ಟಿ ಮಾಡಿದರು ಎಂಬುದು ಸರಿಯಾದ ವಿವರಣೆಯಲ್ಲ. ಆದರೆ ಭಾರತೀಯ ಸಮಾಜವನ್ನು ನೋಡುವ ಒಂದು ನಿರ್ದಿಷ್ಟ ಚೌಕಟ್ಟನ್ನು ಯೂರೋಪಿಯನ್ನರು ನಿರ್ಮಿಸಿದರು. ಅದುವೇ “ಜಾತಿವ್ಯವಸ್ಥೆ”.

ಹಾಗಾದರೆ,  ವ್ಯವಸ್ಥೆಎಂದರೇನು? ಅವುಗಳ ಲಕ್ಷಣಗಳಾವುವು ?

ವ್ಯವಸ್ಥೆ ಎಂದರೆ ಒಂದು ವ್ಯಾಖ್ಯಾನ ನೀಡುವುದರಿಂದ ಏನೂ ಲಾಭ ಇಲ್ಲ. ಬದಲಾಗಿ ವಿಜ್ಞಾನದ ಮಾದರಿಯಂತೆ ವ್ಯವಸ್ಥೆಯ property ಗಳನ್ನು ಗುರುತಿಸುವುದು. ಉದಾಹರಣೆಗೆ ನೀರಿನ property H2, O1, ಹೀಗೆ. ಈ property ಗಳಲ್ಲಿ ಒಂದು ವ್ಯತ್ಯಾಸ ಮಾಡಿ ಅರ್ಥಮಾಡಿಕೊಂಡರೂ ಆ ವಸ್ತುವನ್ನು ಗುರುತಿಸಲಾಗದು. ಅಂದರೆ ಯಾವುದು ಇದ್ದರೆ ಆ ವಸ್ತು ಇರುತ್ತದೆ ಯಾವುದು ಇಲ್ಲದಿದ್ದರೆ ಅದು ಇರಲಿಕ್ಕೆ ಸಾಧ್ಯವಿಲ್ಲ ಎನ್ನುವಂತೆ ನಾವು system ನ property ಗಳನ್ನು ಗುರುತಿಸಿಕೊಳ್ಳುವುದು ಸೂಕ್ತ. ಈಗ ನಮ್ಮ ಮುಂದೆ ಮೂರ್ತವಾಗಿರುವ system ಎನಿಸಿಕೊಳ್ಳುವ ಸಂಗತಿಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು (ಉದಾ: ಬ್ಯಾಂಕ್, ವಿಶ್ವವಿದ್ಯಾನಿಲಯ, ರಾಜಕೀಯ ವ್ಯವಸ್ಥೆ (ಪ್ರಭುತ್ವ) etc.,). ಮೂಲತಃ ಜೀವಶಾಸ್ತ್ರದಲ್ಲಿ ರಚನೆಯಾದ ಈಗ ರಾಜ್ಯಶಾಸ್ತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಸಿಸ್ಟಂ ಥಿಯರಿಯೇ ಇದೆ. ಅದರಂತೆ ನೋಡಿದರೆ, system ಎನಿಸಿಕೊಳ್ಳಬೇಕಾದರೆ ಅದರಲ್ಲಿ ಘಟಕ (unit) ಗಳಿರಬೇಕು, ಆ ಘಟಕಗಳ ನಡುವೆ ನಿರ್ಧಿಷ್ಟ ರೀತಿಯ (ಸಾಮಾನ್ಯವಾಗಿ hierarchical ಆದ) ನಿರಂತರ interaction ಮತ್ತು interrelation ಇರಬೇಕು. ಈ ಪ್ರತಿಯೊಂದು ಘಟಕಗಳಿಗೆ ಮತ್ತು ಈ ಘಟಕಗಳೆಲ್ಲವನ್ನೂ ಒಳಗೊಂಡ ಒಂದು ಎಲ್ಲೆ (Boundary) ಇರಬೇಕು. ಇವೆಲ್ಲವನ್ನೂ ಸೂಕ್ತವಾಗಿ ರಚಿಸಿ, ನಿರ್ದೇಶಿಸಿ ನಿಯಂತ್ರಿಸುವ ನಿಯಮಗಳು (Rules) ಇರಬೇಕು, ಈ ನಿಯಮಗಳನ್ನು ರೂಪಿಸಿ, ಅರ್ಥೈಸಿ, ಜಾರಿಗೊಳಿಸುವ ಅಧಿಕಾರವ್ಯವಸ್ಥೆಗಳಿರ ಬೇಕು. ಇವೆಷ್ಟು ಒಂದು system ನ ಪ್ರಾಪರ್ಟಿಗಳು.

ಇದರಂತೆ ಯಾವುದನ್ನೇ ಆದರೂ ನಾವು ಸಿಸ್ಟಂ ಎಂದು ಹೇಳಬೇಕಾದರೆ ಈ ಎಲ್ಲಾ ಪ್ರಾಪರ್ಟಿಗಳೂ ಅದರಲ್ಲಿ ಇರಲೇಬೇಕು. ಇವುಗಳಲ್ಲೆ ಯಾವುದೋ ಒಂದು ಇದ್ದರೆ ಆಗದು; ಇವೆಲ್ಲವೂ ಇರಲೇ ಬೇಕು. ಉಧಾ H2 ಮಾತ್ರ ಅಥವಾ O1 ಮಾತ್ರ ಇದ್ದರೆ, ಅಥವಾ ಅಂದರೆ H1, O1 ಮಾತ್ರ ಇದ್ದರೆ ಹೇಗೆ ನೀರಾಗಲಾರದೋ ಹಾಗೆ.

ಈಗ ಜಾತಿಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ,  ಘಟಕ (unit), ನಿರಂತರ interaction ಮತ್ತು interrelation (ಸಾಮಾನ್ಯವಾಗಿ hierarchical ಆದ) ,  ಘಟಕಗಳೆಲ್ಲವನ್ನೂ ಒಳಗೊಂಡ ಒಂದು ಎಲ್ಲೆ (Boundary),  ನಿಯಮಗಳು (Rules) , ಆ ನಿಯಮಗಳನ್ನು ರೂಪಿಸಿ, ಅರ್ಥೈಸಿ, ಜಾರಿಗೊಳಿಸುವ ಅಧಿಕಾರವ್ಯವಸ್ಥೆಗಳಿವೆಯೇ? ನಮ್ಮ ಉತ್ತರ ನಕಾರಾತ್ಮಕವಾಗಿದೆ. ಹಾಗಿದ್ದರೂ ಇದುವರೆಗಿನ ಚಿಂತಕರು ಕಾಸ್ಟ್ ಸಿಸ್ಟಂಎಂದು ಹೇಳಿರುವ ಕಲ್ಪಿತ system ಗೆ ಏನೇನು (ಕಲ್ಪಿತ) ಪ್ರಾಪರ್ಟಿಗಳಿವೆ ಹಾಗೂ ಆರೋಪಿಸಲಾದ ಪ್ರಾಪರ್ಟಿಗಳು ಸರಿಯಾದ ವಿವರಣೆಯೇ? ಎಂಬುದನ್ನು ಈ ಕೆಳಗಿನಂತೆ ಗುರುತಿಸೋಣ.

1) ಘಟಕಗಳು = ಜಾತಿಗಳು ಎನ್ನಬಹುದಾದರೂ ಅದರಲ್ಲಿ ತಾರ್ಕಿಕ ಸಮಸ್ಯೆ ಇದೆ. ಅದೇನೆಂದರೆ, ಉಪಜಾತಿಗಳು ಈ ಘಟಕಗಳ ಉಪಘಟಕಗಳಾಗುತ್ತವೆ. ಆದರೆ ಜಾತಿಗೆ ಯಾವ ಪ್ರಾಪರ್ಟಿಗಳನ್ನು ಗುರ್ತಿಸುತ್ತಾರೋ ಅದೇ ಪ್ರಾಪರ್ಟಿಗಳನ್ನೇ ಉಪಜಾತಿಗಳಿಗೂ ಗುರುತಿಸುತ್ತಾರೆ. ಹಾಗಾಗಿ ಜಾತಿ ಮತ್ತು ಉಪಜಾತಿಗಳ ಕುರಿತ ವಿವರಣೆಯಲ್ಲಿ ಸ್ಪಷ್ಟತೆ ಇಲ್ಲ. ಹೇಳಬೇಕೆಂದರೆ ಜಾತಿಗಳ ಪ್ರಾಪರ್ಟಿ ಎಂದು ಗುರುತಿಸುವ ಪ್ರಾಪರ್ಟಿಗಳೆಲ್ಲವೂ ಉಪಜಾತಿಗಳೆಂದು ಗುರುತಿಸುವ ಘಟಕಗಳಿಗೆ ಮಾತ್ರವೇ ಅನ್ವಯವಾಗುತ್ತವೆ.

2) interaction and Inter-relation = ಶ್ರೇಣೀಕೃತ ಸಂಬಂಧ ಎನ್ನುತ್ತಾರೆ. ಒಂದು ವ್ಯವಸ್ಥೆಯಲ್ಲಿ ಒಂದು ಘಟಕದ ಸ್ಥಾನ ಅಲ್ಲಿಯ ನಿಯಮಗಳಿಂದ ನಿರ್ಧಿಷ್ಟ ಪಡಿಸಲಾಗಿರುತ್ತದೆ. ಆ ಸ್ಥಾನಮಾನಕ್ಕೆ ತಕ್ಕ ಹಾಗೆ ಉಳಿದ ಘಟಕಗಳೊಂದಿಗಿನ ಈ ಘಟಕದ ಸಂಬಂಧದ ಸ್ವರೂಪ ನಿರ್ಣಯವಾಗುತ್ತದೆ. ಜಾತಿಗಳ ಸಂಧರ್ಭದಲ್ಲಿ ಈ ರೀತಿಯ ನಿಯಮಗಳು ಎಲ್ಲಿವೆ ಇದನ್ನು ಜಾತಿಗಳು ಹೇಗೆ ಅರಿತು ನಿರ್ಣಯಿಸಿಕೊಂಡು ವ್ಯವಹರಿಸುತ್ತವೆ? ಸ್ಪಷ್ಟವಿಲ್ಲ. ಶ್ರೇಣೀಕೃತವಾಗಿ ಜೋಡಣೆ ಗೊಂಡಿವೆಯೇ ಜಾತಿಗಳು?ಉತ್ತರಗಳು ವ್ಯತಿರಿಕ್ತ: ಒಬ್ಬೊಬ್ಬರು ಒಂದೊಂದು ರೀತಿ ಜೋಡಿಸುತ್ತಾರೆ; ಕೆಲವರು ಪ್ರಶ್ನೆಯೇ ತಪ್ಪಾದುದು ಎಂಬಂತೆ ಪ್ರತಿಕ್ರಿಯಿಸುತ್ತಾರೆ; ಒಂದೊಮ್ಮೆ ವ್ಯವಸ್ಥೆಯಾಗಿದ್ದರೆ ಗೊಂದಲಗಳಿಲ್ಲದೇ ಹೇಳಲು ಸಾಧ್ಯವಾಗಬೇಕಿತ್ತು. ನಮ್ಮ ಯಾವುದೇ ವ್ಯವಸ್ಥೆಯಲ್ಲಿ ಈ ರೀತಿಯ ಗೊಂದಲಗಳಿರುವುದನ್ನು ಕಾಣಲು ಸಾಧ್ಯವಿಲ್ಲ. ಪೋಲೀಸ್ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಇತ್ಯಾದಿ..

3) ಎಲ್ಲೆ= ಹಿಂದೂ ರಿಲಿಜನ್. ಅಸ್ಪಷ್ಟವಾಗಿ ಘಟಕಗಳಾದ ಜಾತಿ/ಉಪಜಾತಿಗಳಿಗೆ ಎಲ್ಲೆಗಳಿವೆ ಎನ್ನಬಹುದು(ಆಯಾ ಜಾತಿ/ಉಪಜಾತಿಗಳಿಗೆ ಸೇರಿರುವ ಜನರನ್ನು ಮಾತ್ರ ಈ ಎಲ್ಲೆ ಒಳಗೊಂಡಿರುತ್ತದೆ) ಎಂದಾದರೂ ಈ ಎಲ್ಲಾ ಘಟಕಳನ್ನೂ ಒಳಗೊಂಡ Boundary ಯಾವುದು? ಚಿಂತಕರ ವಿವರಣೆಯನ್ನು ನೋಡಿದರೆ ಹಿಂದೂ ರಿಲಿಜನ್ ಆ Boundary ಎನ್ನುವ ಹಾಗೆ ಕಾಣುತ್ತದೆ. ಅಂದರೆ ಹಿಂದೂ ರಿಲಿಜನ್ ಇದ್ದರೆ ಮಾತ್ರ ಈ ಜಾತಿಗಳೆಲ್ಲ ಸೇರಿ ಒಂದು system ಆಗುತ್ತದೆ. ವಿಪರ್ಯಾಸವೆಂದರೆ ಹಿಂದೂ ರಿಲಿಜನ್ (ಹಿಂದೂಯಿಸಂ     ಎಂಬ ರಿಲಿಜನ್‌ ಇದೆ ಎಂಬ ನಂಬಿಕೆಯನ್ನು ಎಲ್ಲಾ ವಲಯಗಳಲ್ಲಿ ಹರಡಲಾಗಿದೆ) ಇಲ್ಲದೇ ಹೋದರೆ ಈ ಎಲ್ಲಾ ಜಾತಿಗಳು ಸೇರಿ ಒಂದು ಸಿಸ್ಟಂ ಆಗುವುದಿಲ್ಲ ಮಾತ್ರವಲ್ಲ; ಈ ಜಾತಿಗಳೂ ಘಟಕಗಳಾಗಿರಲು ಸಾಧ್ಯವಿಲ್ಲ. ಅಂದರೆ ಯಾವುದಕ್ಕೆ ಇವು ಘಟಕಗಳು ಎನ್ನುವ ಪ್ರಶ್ನೆ ಉಳಿಯುತ್ತದೆ.

4)ನಿಯಮಗಳು= ಹಿಂದೂ ರಿಲಿಜನ್ ನ ಶಾಸ್ತ್ರಗಳು ಎನ್ನಲಾಗುತ್ತದೆ. ಸಾಮಾನ್ಯವಾಗಿ ಮನುಧರ್ಮಶಾಸ್ತ್ರ; ಪುರುಷಸೂಕ್ತ, ಭಗವಧ್ಗೀತೆ ಮುಂತಾದುವುಗಳನ್ನು ಉಲ್ಲೇಖಿಸಲಾಗುತ್ತದೆ. ಈ ಶಾಸ್ತ್ರಗಳಲ್ಲಿ ಇಂತಿತಹ ಜಾತಿಯವರು (ಸದ್ಯಕ್ಕೆ ವರ್ಣ ಮತ್ತು ಜಾತಿ ಒಂದೇ ಅಲ್ಲದಿದ್ದರೂ ಒಂದೇ ಎಂದು ಭಾವಿಸಿಕೊಳ್ಳುವ) ಹೀಗೆ ಹೀಗೆ ನಡೆದುಕೊಳ್ಳಬೇಕು ಎಂದಿವೆ ಎಂದಿಟ್ಟುಕೊಳ್ಳೋಣ. ಜಾತಿ ಎನ್ನುವ ಘಟಕಗಳಿಗೆ ನಿಯಮಗಳಾಗ ಬಲ್ಲವೇ? ಆಗದು ಏಕೆಂದರೆ ಯಾವುದೇ ನಿರ್ದೇಶನ ನಿಯಮವಾಗ ಬೇಕೆಂದರೆ ಅದಕ್ಕೆ ಮೂರು ಪ್ರಾಪರ್ಟಿಗಳಿರಲೇಬೇಕು:

1. ನಿಯಮಗಳನ್ನು ರೂಪಿಸುವ ಅಧಿಕಾರ ಇರುವ ಸಂಸ್ಥೆ

2. ಜಾರಿಗೊಳಿಸುವ ಸಂಸ್ಥೆ

3. ಉಲ್ಲಂಘಿಸುವವರನ್ನು ಶಿಕ್ಷಿಸುವ ಸಂಸ್ಥೆ ಇರಬೇಕು.

ಈ ಮೂರರಲ್ಲಿ ಒಂದಿಲ್ಲವೆಂದರೂ ಅದಕ್ಕೆ ನಿಯಮದ ಸ್ವರೂಪ ಬರುವುದಿಲ್ಲ (ಆಟದ ನಿಯಮಗಳಿಂದ ಚರ್ಚಿನ ನಿಯಮಗಳವರೆಗೂ ನೀವು ಉಧಾ. ತೆಗೆದು ಕೊಂಡು ಪರೀಕ್ಷಿಸಬಹುದು). ಆದರೆ ಧರ್ಮಶಾಸ್ತ್ರಗಳಲ್ಲಿ ಯಾರೋ ಒಬ್ಬ ಅವರು ಹೀಗೆ ಇರಬೇಕು; ಇವರು ಹಾಗೆ ಇರಬೇಕು ಎನ್ನುವಂತೆ ಬರೆದು ಬಿಟ್ಟರೆ ಅದು ನಿಯಮವಾಗುತ್ತದೆಯೇ? ಜನರ ಜೀವನದಲ್ಲಿ ಜಾತಿ ಜಾತಿ ಗಳೊಟ್ಟಿಗೆ ಮತ್ತು ಜಾತಿಗಳೊಳಗೆ ವ್ಯವಹರಿಸುವಾಗ ಯಾರು ಈ ನಿಯಮಗಳನ್ನು ಪಾಲಿಸುತ್ತಾರೆ/ಪಾಲಿಸುತ್ತಿದ್ದಾರೆ; ಅದನ್ನು ಜಾರಿಗೊಳಿಸುವವರು ಯಾರು? ಉಲ್ಲಂಘಿಸುವವರಿಗೆ ಶಿಕ್ಷೆ ಕೊಡುವವರು ಯಾರು? ಇದು ವಾಸ್ತವ ಜಗತ್ತಿನಲ್ಲಿ ಸಹಜವಾಗಿ ಕಾಣುವುದಿಲ್ಲ. ಸಾಮಾನ್ಯವಾಗಿ ಕೆಲವು ಚಿಂತಕರು ಬ್ರಾಹ್ಮಣ ಪುರೋಹಿತಶಾಹಿ ಎನ್ನುತ್ತಾರೆ.  ವಾಸ್ತವದಲ್ಲಿ (ನಿಮ್ಮ ಅನುಭವದಲ್ಲಿ) ಬ್ರಾಹ್ಮಣರಿಗೆ ಅಂತಹ ಅಧಿಕಾರ (ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ) ಇದೆಯೇ? ಸಾಧ್ಯವೇ ಇಲ್ಲ. ಆದರೆ ಮುಸ್ಲೀಂ ಸಮುದಾಯ ಮತ್ತು ಕ್ರಿಶ್ಚಿಯನ್ ಸಮುದಾಯದಲ್ಲಿ ಈ ರೀತಿಯ ನಿಯಮಗಳಿರುವುದನ್ನು, ಪಾಲಿಸುವುದನ್ನು, ಮತ್ತು ಉಲ್ಲಂಘಿಸಿದವರಿಗೆ ಶಿಕ್ಷಿಸುವ ವ್ಯವಸ್ಥೆಯನ್ನು ನೋಡಬಹುದು.

ಈ ನೆಲೆಯಲ್ಲಿ ಜಾತಿ ವ್ಯವಸ್ಥೆಯ ಪ್ರಾಪರ್ಟಿಯನ್ನು ಸಮಾಜದಲ್ಲಿ ಗುರುತಿಸಲು ಸಾಧ್ಯವೇ ಆಗುವುದಿಲ್ಲ!!! ಅಂದಮೇಲೆ “ಜಾತಿ ವ್ಯವಸ್ಥೆ” ಭಾರತದಲ್ಲಿ ಅಸ್ತಿತ್ವದಲ್ಲಿ ಇದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಿದ್ದರೂ ಏಕೆ ಇದುವರೆಗೂ ಅದನ್ನೇ ಪುನರುಚ್ಛರಿಸಲಾಗುತ್ತಿದೆ. ಅಥವಾ ಪ್ರಶ್ನೆಯನ್ನು ಬೇರೆ ರೀತಿ ಇಡುವುದಾದರೆ, “ಜಾತಿವ್ಯವಸ್ಥೆಯ ಸೃಷ್ಟಿಯಲ್ಲಿ ಪಾಶ್ಚಾತ್ಯರ ಪಾತ್ರವೇನು?

ಈ ಪ್ರಶ್ನೆಗೆ ಸರಳವಾಗಿ ಉತ್ತರಿಸುವ ಪ್ರಯತ್ನವನ್ನು ಮಾಡಲಾಗುತ್ತದೆ.  ಎಲ್ಲಾ ಸಂಸ್ಕೃತಿಗಳಲ್ಲಿಯೂ ರಿಲಿಜನ್ಇರುತ್ತದೆ; ರಿಲಿಜನ್ನಿನ ಸ್ಕ್ರಿಪ್ಚರ್ಗಳಲ್ಲಿ ಆ ಸಂಸ್ಕೃತಿಯ ಜನರು ಹೇಗೆ ಜೀವಿಸಬೇಕು, ಹೇಗೆ ಜೀವಿಸಬಾರದು ಎಂಬುದರ ಕುರಿತು ಹೇಳಲಾಗಿರುತ್ತದೆ; ಅದನ್ನು ರಿಲಿಜನ್ನಿನಲ್ಲಿರುವ ಪ್ರೀಸ್ಟ್ವರ್ಗದವರು  ಅರ್ಥೈಸುವ, ಜನರಿಗೆ ತಲುಪಿಸುವ (ಜಾರಿಗೊಳಿಸುವ) ಅಧಿಕಾರವನ್ನು ಮತ್ತು ತಪ್ಪಿನಡೆಯುವವರಿಗೆ ಶಿಕ್ಷೆ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ ಎಂಬುದನ್ನು ಯೂರೋಪಿಯನ್ನರು ಮೂಲತಃ ನಂಬಿಕೊಂಡಿದ್ದರು. ಅಲ್ಲದೇ ಅಲ್ಲಿಯ/ಯೂರೋಪಿನ ಸಾಮಾಜಿಕ ರಚನೆ ಕೂಡ ಹಾಗೆಯೇ ಇತ್ತು. ಪ್ರೀಸ್ಟ್ ವರ್ಗವು ಸಮಾಜದ ಉನ್ನತ ಸ್ಥಾನವನ್ನು ಅಲಂಕರಿಸಿದರೆ, ಪ್ರಭುತ್ವ/ರಾಜ ಆತನ ಕೆಳಗಿನ ಸ್ಥಾನವನ್ನು, ನಂತರ  ಉಳಿದ ವರ್ಗದವರು, ಕೊನೆಯಲ್ಲಿ ಗುಲಾಮರು. ಇಂತಹ ನಂಬಿಕೆ, ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ ಯೂರೋಪಿಯನ್ನರು ಭಾರತದಲ್ಲಿ ಹಿಂದೂಯಿಸಂ ಮತ್ತು ಜಾತಿವ್ಯವಸ್ಥೆಯ ಸೃಷ್ಟಿಗೆ ಕಾರಣರಾದರು. ಹಾಗೆಂದ ಮಾತ್ರಕ್ಕೆ ಅವುಗಳನ್ನು ಅಲ್ಲಿಂದ ಹಿಡ್ಕೊಂಡು ಬಂದರು ಎಂದಾಗಲೀ, ಇಲ್ಲಿ ಮಣ್ಣಿನ ಗೊಂಬೆಯನ್ನು ಸೃಷ್ಟಿಸಿದಂತೆ ಸೃಷ್ಟಿಸಿದರೂ ಎಂದಾಗಲೀ ಅರ್ಥವಲ್ಲ. ಭಾರತೀಯ ಸಮಾಜವನ್ನು ನಿರ್ಧಿಷ್ಟವಾಗಿ ಹಾಗೆಯೇ/ಅವರದೇ ಸಾಂಸ್ಕೃತಿಕ ಚೌಕಟ್ಟುನಲ್ಲಿ ಅರ್ಥಮಾಡಿಕೊಂಡರು(ಗಮನಿಸಬೇಕಾದ ಅಂಶವೆಂದರೆ ಉದ್ದೇಶಪೂರ್ವಕವಾಗಿ ಯೂರೋಪಿಯನ್ನರು ಈ ರೀತಿ ಮಾಡಿರುವುದಲ್ಲ). ಆ ಚೌಕಟ್ಟೇ ಹಿಂದೂಯಿಸಂ ಮತ್ತು ಜಾತಿವ್ಯವಸ್ಥೆ. ಹೇಗಿರಬಹುದು?

ಭಾರತಕ್ಕೆ ಬೇಟಿನೀಡಿದ ಯೂರೋಪಿಯನ್ನರಿಗೆ ಇಲ್ಲಿನ ಸಂಸ್ಕೃತಿ ಆರಂಭದಲ್ಲಿ ವಿಚಿತ್ರವೆನಿಸಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಲ್ಲಿನ ಜನರ ಆಚರಣೆ, ಜೀವನ ವಿಧಾನಗಳು ನಿಜವಾದ ರಿಲಿಜನ್ನಿನ ತತ್ವಗಳಿಂದ ಪ್ರೇರಿತವಾದಂತೆ ಕಾಣಿಸಲಿಲ್ಲ. ಆಗ ಅವರು ಇಲ್ಲಿನ ರಿಲಿಜನ್ನು ಭ್ರಷ್ಟಗೊಂಡಿದೆ ಎಂಬ ತೀರ್ಮಾನಕ್ಕೆ ಬಂದರು ಮಾತ್ರವಲ್ಲ ಅವರನ್ನು ಸರಿಮಾರ್ಗಕ್ಕೆ ಕೊಂಡೊಯ್ಯುವುದು ನಾವು ಇವರಿಗೆ ಮಾಡುವ ಉಪಕಾರವೆಂದು ಭಾವಿಸಿದರು. ಅದೇ ಸಂದರ್ಭದಲ್ಲಿ ಅವರ ಗಮನಕ್ಕೆ ಬಂದುದೆಂದರೆ, ಇಲ್ಲಿ ಹಲವು ಜಾತಿಗಳು, ಪಂಗಡಗಳು ಅಸ್ತಿತ್ವದಲ್ಲಿದ್ದುದು, ಹಾಗೆಯೇ ಕ್ರೈಸ್ತ ಮಿಶನರಿಗಳು ಕನ್ವರ್ಶನ್ ಮಾಡಲು ಯಶಸ್ವಿಯಾದ ಕೆಲವು ಜಾತಿಯ ಜನರು ಕನ್ವರ್ಶನ್ ನಂತರವೂ ತಮ್ಮ ಹಳೆಯ ಜಾತಿಯ ಆಚರಣೆಗಳನ್ನು ಮುಂದುವರೆಸುತ್ತಿದ್ದುದು. ಆಗ ಅವರು ಜಾತಿಯ ಕಟ್ಟುಪಾಡುಗಳು/ನಿಯಮಗಳು ತುಂಬಾ ರಿಜಿಡ್ ಆಗಿದ್ದು, ಅದನ್ನು ಮುರಿದರೆ ಶಿಕ್ಷೆ ವಿಧಿಸುವ ಅಧಿಕಾರಶಾಹಿ ಇರಬೇಕು, ಜಾತಿಗಳೆಲ್ಲ ವ್ಯವಸ್ಥಿತ ವಾಗಿ ಜೋಡಣೆಯಾಗಿದ್ದು, ನಿರ್ದಿಷ್ಟ ನಿಯಮಗಳನ್ನು ರೂಪಿಸಲಾಗಿದೆ ಎಂದು ಭಾವಿಸಿದರು. ಆಗ ಅಂತಹ ನಿಯಮಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿದರು. ಅದರ ಪ್ರತಿಫಲವಾಗಿ ಮನುಧರ್ಮಶಾಸ್ತ್ರವೇ ಹಿಂದೂ ಭ್ರಷ್ಟ ಕಾನೂನುಗಳೆಂದೂ, ಮನು ಜಾತಿ ವ್ಯವಸ್ಥೆಯ ನಿರ್ಮಾತೃ ಎಂದು ಅರ್ಥೈಸಿ ವಿವರಿಸಿದರು. ಈ ರೀತಿಯ ವಿವರಣೆಯೇ, ಮುಂದಿನ ಸಮಾಜ ಶಾಸ್ತ್ರೀಯ ಚಿಂತಕರು ಸಿದ್ಧಾಂತಗಳೆಂದು ಮಂಡಿಸಿದರು, ಸುಧಾರಣಾ ಚಳುವಳಿಕಾರರು ಇಂತಹ ವ್ಯವಸ್ಥೆಯನ್ನು ನಾಶಪಡಿಸಬೇಕೆಂದು ಹೊರಟರು. ಅಲ್ಲದೇ  ಈ ವ್ಯವಸ್ಥೆಯೇ ಭಾರತೀಯ ಸಾಮಾಜಿಕ ರಚನೆಯೆಂದು ನಿರೂಪಿಸಲ್ಪಟ್ಟಿತು. ಇದರ ಪರಿಣಾಮವಾಗಿ ಸಮಾಜದ ಎಲ್ಲಾ ಅನಿಷ್ಟಗಳಿಗೂ ಈ ಇಲ್ಲದ ವ್ಯವಸ್ಥೆಯನ್ನೇ ಕಾರಣವೆಂದು ಕೈ ಮಾಡಿ ತೋರಿಸಿದರು. “ಜಾತಿವ್ಯವಸ್ಥೆ”ಯ ಸೃಷ್ಟಿಯಲ್ಲಿ ಪಾಶ್ಚಾತ್ಯರು ಇಂತಹ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಜಾತಿಗಳ ನಡುವೆ ತಾರತಮ್ಯ(ಮೇಲುಕೀಳು) ಇಲ್ಲವೇ/ಇರಲಿಲ್ಲವೇ? ಸಮಾಜದಲ್ಲಿ ಶೋಷಣೆ ಇಲ್ಲವೇ/ಇರಲಿಲ್ಲವೇ? ಅಸ್ಪೃಶ್ಯತೆ ಇಲ್ಲವೇ/ಇರಲಿಲ್ಲವೇ? ಎಂಬ ಪ್ರಶ್ನೆಗಳು ಎದುರಾಗುತ್ತವೆ.

        ಇವುಗಳು ಈಗಲೂ ಇಲ್ಲ ಹಿಂದೆಯೂ ಇರಲಿಲ್ಲ ಎಂಬ ಕುರುಡುತನವನ್ನು ಪ್ರದರ್ಶಿಸುವುದಿಲ್ಲ. ಆದರೆ ಇವುಗಳಿಗೂ ಇಲ್ಲದ “ಜಾತಿವ್ಯವಸ್ಥೆ”ಗೂ ಸಂಬಂಧವಿಲ್ಲ. ಇದುವರೆಗಿನ ಚಿಂತಕರು ಮೇಲಿನ ಸಂಗತಿಗಳಿಗೆಲ್ಲಾ ಜಾತಿವ್ಯವಸ್ಥೆಯೇ ಕಾರಣ, ಅದನ್ನು ನಾಶಮಾಡದ ಹೊರತು ಈ ಸಮಸ್ಯೆಗಳಿಗೆ ಪರಿಹಾರವಿಲ್ಲ ಎಂದು ಹೇಳುತ್ತಾ ಬರುತ್ತಿದ್ದಾರೆ. ಹಾಗಾಗಿ ಈ ಸಂಗತಿಗಳನ್ನು/ಸಮಸ್ಯೆಗಳನ್ನು ಬೇರೆ ರೀತಿಯಲ್ಲಿ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ ಎಂಬುದನ್ನಷ್ಟೆ ನಮ್ಮ ಸಂಶೋಧನೆ ಗುರುತಿಸುತ್ತಿರುವುದು. ಈ ಯಾವ ಸಂಗತಿಗಳೂ ಯೂರೋಪಿನಿಂದ ಬಂದ ಸರಕುಗಳೆಂದು ಹೇಳುತ್ತಿಲ್ಲ, ಹಾಗೂ ಸಮಾಜದಲ್ಲಿಲ್ಲದ ಸಂಗತಿಗಳೆಂದು ನಿರಾಕರಿಸುತ್ತಿಲ್ಲ.

ಕೆಲವೊಬ್ಬರು ಪ್ರಾಮಾಣಿಕವಾಗಿ ಪ್ರಶ್ನೆಗಳನ್ನು ಎತ್ತುತ್ತಿರುವವರನ್ನು ಗಮನದಲ್ಲಿಟ್ಟುಕೊಂಡಿದ್ದು, ಅವರ ಪ್ರಶ್ನೆಗಳನ್ನು/ ಗೊಂದಲಗಳನ್ನು ಬಿಡಿಸುವ ಸಣ್ಣ ಪ್ರಯತ್ನವಾಗಿದೆ. ಬಾಲುರವರ ಪುಸ್ತಕಗಳಲ್ಲಿ ವಿಸ್ತ್ರತವಾಗಿರುವುದನ್ನು ಈ ರೀತಿಯಾಗಿ ಸರಳೀಕರಿಸಿ ಇಡಲಾಗಿದೆ. ಆ ಪುಸ್ತಕಗಳನ್ನು ಓದುವ ಮೂಲಕ ಸಂಪೂರ್ಣ ವಿಚಾರವನ್ನು ತಿಳಿಯುವುದು ಉತ್ತಮ. ಈ ಕುರಿತು ಪ್ರಶ್ನೆಗಳಿದ್ದರೆ, ಚರ್ಚೆಯನ್ನು ಮುಂದುವರೆಸಲು ಸದಾ ಸಿದ್ಧರಾಗಿದ್ದೇವೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments