ಸಾಸಿವೆ ತಂದ ಜೀವನ್ಮುಖಿ
-ಜಿ.ವಿ.ಜಯಶ್ರೀ,ಪರ್ತಕರ್ತೆ
“Where there’s a will, there’s a way” ಭಾರತಿ ಬಿ.ವಿ. ಅವರ ‘ಸಾಸಿವೆ ತಂದವಳು’ ಕೃತಿಯನ್ನು ಓದಿದಾಗ ಮೇಲಿನ ಸೂಕ್ತಿಗಳಿಗೊಂದು ಅರ್ಥ ಸಿಗುತ್ತದೆ. ಕ್ಯಾನ್ಸರ್ ಲೋಕದಲ್ಲಿ ಬಂಧಿ ಆದಾಗ ಎದುರಿಸಿದ ಕಷ್ಟ ಕೋಟಲೆಗಳನ್ನು ಸರಳವಾಗಿ ಬರೆದು, ಹದವಾದ ಹಾಸ್ಯದ ಸವಿ ನೀಡಿರುವ ಭಾರತಿಯ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ ಸಾಗುತ್ತದೆ. ಒಂದು ಸರಳ ಕಾಯಿಲೆಯನ್ನು ದೊಡ್ಡ ಕಾಯಿಲೆಯೆಂದು ಭ್ರಮಿಸುವ ಪೈಕಿಗಳಲ್ಲಿ ಭಾರತಿ ಸಹ ಸೇರಿದ್ದಾರೆ ಎಂದು ತಮ್ಮ ಬಗ್ಗೆ ಹಾಸ್ಯ ಬೆರಸಿ ಹೇಳುತ್ತಾರೆ. ಪೂರಕ ಉದಾಹರಣೆ ಗಳನ್ನು ನೀಡುತ್ತಾ ತಮಗೆ ಬಂದ ಗಂಟಲು ನೋವು ಕ್ಯಾನ್ಸರ್ ಆಗಿ ಮಾರ್ಪಟ್ಟಿರಬಹುದು ಎನ್ನುವ ಆತಂಕ, ತಲೆಸುತ್ತು ಟ್ಯೂಮರ್ ನಿಂದ ಬರುತ್ತಿದೆ ಎನ್ನುವ ಭ್ರಮೆಯಲ್ಲಿ ಮುಳುಗೇಳುವ ಲೇಖಕಿ ಓದಿಕೊಂಡ ಆಧುನಿಕ ಮನದ ಹೆಣ್ಣು ಮಕ್ಕಳ ಪ್ರತೀಕವಾಗಿದ್ದಾರೆ. ತುಂಬಾ ಅತಿ ಅನ್ನಿಸುವ ಭಯಾತಂಕಗಳು ಯಾವುದೇ ಬಗೆಯಲ್ಲೂ ತೊಂದರೆ ಎಸೆಗದ ಸಮಸ್ಯೆಗಳ ಬಗ್ಗೆ ಹೆದರಿಕೆ ಹೊಂದಿದ್ದವಳಿಗೆ ಸ್ತನ ಕ್ಯಾನ್ಸರ್ ತನ್ನ ದೇಹದ ಭಾಗವಾಗಿದೆ ಎಂದು ತಿಳಿದಾಗ ಎಂತಹ ಮನಸ್ಥಿತಿ ಉಂಟಾಗಿರ ಬಹುದು?
ಹುಟ್ಟಿದವನು ಸಾಯಲೇ ಬೇಕು ಎನ್ನುವುದು ಓದುವುದಕ್ಕೆ ಚಂದ. ಲೇಖಕಿ ಸ್ಥಿತಿಯೂ ಅಂತಹುದ್ದೇ ಆದಾಗ ತನ್ನನ್ನು ತಾನು ಕೌನ್ಸಿಲಿಂಗ್ ಮಾಡಿ ಕೊಂಡ ಬಗೆ ಮತ್ತು ಸಮಸ್ಯೆಯನ್ನು ಸರಳವಾಗಿ ತೆಗೆದು ಕೊಳ್ಳುವ ಮನಸ್ತತ್ವ ಬೆಳೆಸಿಕೊಂಡ ಪರಿ ನಿಜಕ್ಕೂ ಮಾದರಿ. ಈ ಪುಸ್ತಕ ಫ್ಯಾಂಟಸಿಗಳನ್ನು ಹೊಂದಿದೆ ಎಂಬ ಭಾವನೆ ಓದುಗನಲ್ಲಿ ಇದ್ದರೆ, ಅದನ್ನು ಆರಂಭಿಕ ಪುಟಗಳೇ ದೂರ ಮಾಡಿ ಬಿಡುತ್ತದೆ.ತನಗೆ ಸ್ತನ ಕ್ಯಾನ್ಸರ್ ಇರಬಹುದಾದ ಸಾಧ್ಯತೆಗಳ ಬಗ್ಗೆ ಹೆದರಿರುವಾಗ ಆಕೆಯನ್ನು ಪ್ರಾರಂಭದಲ್ಲೇ ಪರೀಕ್ಷಿಸಿದ ದಾದಿ ಮತ್ತು ವೈದ್ಯರ ವರ್ತನೆ ಈಗ ಸಾಮಾನ್ಯ . ನಂತರ ಅರ್ಬುದ ರೋಗ ಇದೆ ಎನ್ನುವುದು ತಿಳಿದ ಬಳಿಕ ಮುಂದಿನ ಪಯಣದ ಬಗ್ಗೆ ಬರೆಯುತ್ತಾ ಕೀಮೋ ಥೆರಪಿಯ ವರ್ಣನೆ ಮಾಡುತ್ತಾರೆ. ಅದರಲ್ಲಿ ನೀಡುವ ಔಷಧಿಯು ಆಕೆಯನ್ನು ಅಕ್ಷರಶಃ ಬಕಾಸುರಿಯನ್ನಾಗಿ ಮಾಡುವ ಬಗೆ, ಈ ಸಮಸ್ಯೆಯು ಆಕೆ ಸ್ವಾತಂತ್ರ ಮತ್ತು ದೇಹದ ಚೈತನ್ಯ ಕಸಿದ ರೀತಿ ಹೇಳುತ್ತಾ, ವೈದ್ಯರು ತನಗೆ ತಿಳಿಸಿದ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಹೇಳುವ ರೀತಿ ಕಿರಿಕಿರಿ ಉಂಟು ಮಾಡುವುದಿಲ್ಲ.