ನಾಡು-ನುಡಿ: ಮರುಚಿಂತನೆ
ಸಮಾಜ ವಿಜ್ಞಾನದ ಪರಿಭಾಷೆಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಹಾಗೂ ಇದುವರೆಗೂ ಭಾರತೀಯ ಸಮಾಜ ಮತ್ತು ಸಂಸ್ಕೃತಿಯ ಕುರಿತ ಚಿತ್ರಣಗಳನ್ನು ಮರುಪರಿಶೀಲನೆ ಮಾಡುತ್ತಾ, ಭಾರತೀಯರ ಬದುಕನ್ನು ಪ್ರತಿನಿಧಿಸುವ ನೈಜ ವಿವರಣೆಗಳನ್ನು ಕಟ್ಟಲು ಸಾಧ್ಯವೇ ಎಂದು ಕಂಡುಕೊಳ್ಳುವ ಒಂದು ಚಿಕ್ಕ ಪ್ರಯತ್ನದ ಉದ್ದೇಶವನ್ನು ಹೊಂದಿರುವ “ನಾಡು-ನುಡಿ: ಮರುಚಿಂತನೆ” ಅಂಕಣ ನಿಲುಮೆಯ ಓದುಗರಿಗಾಗಿ – ನಿಲುಮೆ
ಒಂದು ವಿಷಯದ ಕುರಿತು ಸಾಮಾನ್ಯವಾಗಿ ಎರಡು ತರಹದ ಜ್ಞಾನವಿರುತ್ತದೆ. ಒಂದು, ಸಾಮಾನ್ಯ ಜ್ಞಾನ, ಎರಡು, ವಿಶಿಷ್ಟ ಜ್ಞಾನ ಅಥವಾ ಅಧ್ಯಯನದಿಂದ ಮೂಡಿಬರುವ ತಿಳುವಳಿಕೆ. ಸಾಮಾನ್ಯ ಜ್ಞಾನವು ಯಾವುದೋ ಒಂದು ಕಾಲಘಟ್ಟದಲ್ಲಿದ್ದ ವಿಶಿಷ್ಟ ಜ್ಞಾನದ ಪಲಶೃತಿಯೇ ಆಗಿರುತ್ತದೆ. ವಿಶಿಷ್ಟ ಜ್ಞಾನವು ಶೈಕ್ಷಣಿಕ ಕ್ಷೇತ್ರದಿಂದ ಹೊರಗೆ ಹೋಗುವಾಗ ಮತ್ತು ಶ್ರೀಸಾಮಾನ್ಯರ ಬಳಿ ಹರಡುವಾಗ ಅದು ಸಾಮಾನ್ಯಜ್ಞಾನದ ರೂಪವನ್ನು ತಳೆಯುತ್ತದೆ. ಆದರೆ ವಿಶಿಷ್ಟ ಜ್ಞಾನವು ತನ್ನ ಅಸ್ತಿತ್ವದಲ್ಲಿ ಮತ್ತು ಸ್ವಭಾವದಲ್ಲಿ ಸಾಮಾನ್ಯ ಜ್ಞಾನದಂತೆ ಸಾರ್ವಕಾಲಿಕವಾಗಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಏಕೆಂದರೆ ವಿಶಿಷ್ಟ ಜ್ಞಾನವು ಕಾಲದಿಂದ ಕಾಲಕ್ಕೆ ಪರಿಷ್ಕೃತಗೊಳ್ಳುತ್ತಾ ಹೋಗುತ್ತದೆ. ಆಗ ಮಾತ್ರವೇ ಅದು ವಿಶಿಷ್ಟ ಜ್ಞಾನವಾಗಿ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಅದು ಸಾಮಾನ್ಯಜ್ಞಾನವಾಗಿ ಬದಲಾಗುತ್ತದೆ. ಸಾಮಾನ್ಯಜ್ಞಾನವು ಪರಿಷ್ಕರಣೆಗೆ ಒಳಗಾಗದೆ ಯಾವುದೋ ಕಾಲದ ವಿಶಿಷ್ಟ ಜ್ಞಾನವನ್ನೇ ಸಾರ್ವಕಾಲಿಕ ಸತ್ಯ ಎಂಬಂತೆ ಪುನರುತ್ಪಾದಿಸುತ್ತಿರುತ್ತವೆ. ಇದೇ ರೀತಿ, ಭಾರತೀಯ ಸಮಾಜದ ಕುರಿತು ಸಾಮಾನ್ಯ ಜ್ಞಾನ ಹಾಗೂ ವಿಶೇಷ ಜ್ಞಾನಗಳಿಗೆ ವ್ಯತ್ಯಾಸವಿರದ ರೀತಿಯಲ್ಲಿ ಮಾತನಾಡುವ ಸಂದರ್ಭವೇರ್ಪಟ್ಟಿದೆ. ಇದಕ್ಕೆ ಕಾರಣವೆಂದರೆ ಸಮಾಜದ ಕುರಿತು ಮಾತನಾಡುವವರು ಸಾಮಾನ್ಯಜ್ಞಾನವನ್ನು ಆಧರಿಸಿ ಸಮಾಜವಿಜ್ಞಾನ ಎಂಬಂತೆ ಮಾತನಾಡುತ್ತಿರುತ್ತಾರೆ. ಸಮಾಜದಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ ಕೆಲವು ಹಿಂದಿನಿಂದ ಬಂದಂತಹ ತಿಳುವಳಿಕೆಯ ಆಧಾರದ ಮೇಲೆಯೇ ಅವುಗಳಿಗೆ ಸಮಜಾಯಶಿ ಕೊಡಲಾಗುತ್ತಿರುತ್ತದೆ. ನಡೆದ ಘಟನೆಯ ಕುರಿತು ಅಧ್ಯಯನ ನಡೆಸಿ ಮಾತನಾಡುವ ಕ್ರಮವನ್ನು ಸಾಮಾನ್ಯ ಜ್ಞಾನದ ಅರೆ ತಿಳುವಳಿಕೆಯು ಮೂಲೆಗುಂಪು ಮಾಡುತ್ತಿದೆ.