ತುಳುವಿಗೆ ೮ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ…!
– ರಾಕೇಶ್ ಶೆಟ್ಟಿ
ಬೆಂಗಳೂರಿನ ಸಮಸ್ತ ತುಳು ಸಂಘಟನೆಗಳೂ ಒಗ್ಗೂಡಿ,ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವಂತೆ ಮತ್ತು ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದ ಸೆಪ್ಟಂಬರ್ ೨೮ ರ ಶನಿವಾರ ಕಳೆದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ’ಹಕ್ಕೊತ್ತಾಯ – ಪ್ರತಿಭಟನೆ’ಯನ್ನು ಮಾಡಿದ್ದವು.ಅಂದಿನ ಪ್ರತಿಭಟನೆಯ ನೇತೃತ್ವ ವಹಿಸಿದವರು ಹಿರಿಯ ಸಾಹಿತಿ ಡಾ|| ಡಿ.ಕೆ ಚೌಟ ಅವರು. ಚೌಟ ಅವರ ಭಾಷಣದಲ್ಲಿ ಇಷ್ಟು ವರ್ಷಗಳ ಕಾಯುವಿಕೆಯನ್ನು ಕಡೆಗಣಿಸಿದ ರಾಜಕಾರಣಿಗಳು,ವ್ಯವಸ್ಥೆಗಳ ಮೇಲೆ ಸಾತ್ವಿಕ ಕೋಪ ಎದ್ದು ಕಾಣುತಿತ್ತು.ಹಾಗೆಯೇ ತುಳುವಿಗೆ ಇರುವ ಅಪಾಯ, ನಮ್ಮ ಭೂಮಿ ಮಲಯಾಳಿಗಳ ಪಾಲಾಗುತ್ತಿರುವ ಬಗೆಗಿನ ಆತಂಕವಿತ್ತು.ಆ ದಿನ ಬಹಳಷ್ಟು ಜನ ಮಾತನಾಡಿದರು.ಆದರೆ ನಿಜವಾಗಿಯೂ ತುಳುವರ ಅಸ್ಮಿತೆಯನ್ನು ಬಡಿದ್ದೆಬ್ಬಿಸುವಂತ ಮಾತನಾಡಿದ್ದು ಚೌಟ ಅವರೊಬ್ಬರೇ.ಅವರ ಮಾತು ಮತ್ತದಕ್ಕೆ ವ್ಯಕ್ತವಾದ ಸ್ಪಂದನೆ ಕಂಡಾಗ ಏನಾದರೂ ಒಳ್ಳೆಯ ಬೆಳವಣಿಗೆಗಳು ಆಗಬಹುದು ಅಂದುಕೊಳ್ಳುತಿದ್ದೆ.ಅಷ್ಟರಲ್ಲೇ, ರಾಜಕಾರಣಿಗಳ ಆಗಮನವಾಯಿತು…!
ಒಬ್ಬರು ಚಿಕ್ಕಮಗಳೂರಿನ ಸಂಸದ ಜಯಪ್ರಕಾಶ್ ಹೆಗ್ಡೆ,ಮತ್ತೊಬ್ಬರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ ಕುಮಾರ್.ಇಂತ ಪ್ರತಿಭಟನಾ ಸಭೆಗಳಿಗೆ ರಾಜಕಾರಣಿಗಳನ್ನೇಕೆ ಕರೆಯುತ್ತಾರೆ ಅನ್ನುವುದು ನನಗೆ ಅರ್ಥವಾಗಲಿಲ್ಲ!
ಅದಕ್ಕೇ ಸರಿಯಾಗಿಯೇ ಈ ಇಬ್ಬರ ಮಾತುಗಳು ಸಾಗಿತ್ತು.ಪ್ರತಿಭಟನೆಗೆಂದು ಬಂದವರನ್ನು ತಮ್ಮ ಆಶ್ವಾಸನೆಗಳ ಮೂಲಕ,ಹಾಸ್ಯ ಚಟಾಕಿಗಳ ಮೂಲಕ ಸಮಾಧಾನಪಡಿಸುವ ಎಂದಿನ ರಾಜಕಾರಣಿಗಳ ಓಲೈಕೆಯ ಶೈಲಿಯ ಭಾಷಣ.೮ನೇ ಪರಿಚ್ಚೇದ ಬಿಟ್ಟು ಕೋರಿರೊಟ್ಟಿ,ನೀರ್ ದೋಸೆ ಇತ್ಯಾದಿ ಇತ್ಯಾದಿ.ಅನಂತ ಕುಮಾರ್ ಅವರು ನವೆಂಬರ್ ತಿಂಗಳಲ್ಲಿ ನೀವು ಒಂದು ತುಳು ನಿಯೋಗವನ್ನು ಕರೆದುಕೊಂಡು ದೆಹಲಿಗೆ ಬನ್ನಿ ಆ ಸಮಯಕ್ಕೆ ಶುರುವಾಗುವ ಸಂಸತ್ತಿನ ಅಧಿವೇಶನದಲ್ಲಿ ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಮಾತನಾಡುವ ಅಂತ ಹೇಳಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ್ದರು.ಅನಂತ ಕುಮಾರ್ ಅವರ ಮಾತನ್ನು ಹೆಗ್ಡೆಯವರು ಅನುಮೋದಿಸಿದ್ದರು.ವೇದಿಕೆಯಲ್ಲಿದ್ದವರೂ ಅದಕ್ಕೇ ಸಮ್ಮತಿಸುವುದರೊಂದಿಗೆ ಪ್ರತಿಭಟನಾ ಸಭೆ ’ಶಾಂತ’ವಾಯಿತು.