ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು -೨
– ಮು ಅ ಶ್ರೀರಂಗ ಬೆಂಗಳೂರು
(ನಿಲುಮೆಯಲ್ಲಿ ೫-೧೨-೨೦೧೩ರಂದು ಪ್ರಕಟವಾದ ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ’.……… . ನೆನಪುಗಳ ಮುಂದುವರೆದ ಭಾಗ)
ಪಿ ಯು ಸಿ ಯಲ್ಲಿ ನನಗೆ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳು ಕಷ್ಟವಾಗಿತ್ತು. ಅದರಿಂದ ಬಿಎಸ್ಸಿಯಲ್ಲಿ ಅದನ್ನು ಬಿಟ್ಟು ಫಿಸಿಕ್ಸ್ ಮ್ಯಾಥಮೆಟಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳನ್ನು ತೆಗೆದುಕೊಂಡಿದ್ದೆ. ಮೂರು ವರ್ಷಗಳು ಬಿಎಸ್ಸಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ಅನ್ನು ಓದಿದ್ದರಿಂದ ಆ ವಿಷಯದಲ್ಲೇ ಎಂಎಸ್ಸಿ ಮಾಡಲು ನಿರ್ಧರಿಸಿದೆ. ಕೋರ್ಸಿಗೆ ಸೇರಿದ್ದಾಯ್ತು. ಆದರೆ ತರಗತಿಯ ಪಾಠಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಮೂರ್ನಾಲಕ್ಕು ತಿಂಗಳ ನಂತರ ಓದನ್ನು ಬಿಟ್ಟು ಊರಿಗೆ ವಾಪಸ್ಸು ಬಂದುಬಿಟ್ಟೆ. ನಮ್ಮ ತಂದೆ ಸ್ಕೂಲಿನ ವೇಳೆ ಮುಗಿದ ನಂತರ ಹತ್ತು ಹದಿನೈದು ಹುಡುಗರಿಗೆ ಮನೆ ಪಾಠ ಮಾಡುತ್ತಿದ್ದರು. ಆಗ ತಿಂಗಳಿಗೆ ಒಬ್ಬ ಹುಡುಗನಿಗೆ ಹತ್ತು ರೂಪಾಯಿ ಫೀಸು. ಅದನ್ನು ಆ ಹುಡುಗರು ಕೊಡಲು ನಿಗದಿತ ದಿನಾಂಕ ಎಂಬುದೇನಿಲ್ಲ. ತಿಂಗಳ ಮೊದಲನೇ ತಾರೀಖಿನಿಂದ ಕೊನೆಯ ದಿನದ ತನಕ ಯಾವಾಗ ಅವರಿಗೆ ಅನುಕೂಲವೋ ಆಗ ಕೊಡುತ್ತಿದ್ದರು. ಜತೆಗೆ ಆ ಸಲ ಹಾಸ್ಟೆಲ್ ನಲ್ಲಿ ಬದಲಾದ ನಿಯಮಗಳಿಂದ ನನಗೆ ಶುಲ್ಕದಲ್ಲಿ ಅರ್ಧ ಮಾಫಿ ಸಿಗಲಿಲ್ಲ. ಎಷ್ಟೇ ಕಷ್ಟವಾದರೂ ನನ್ನ ಮೇಲೆ ಭರವಸೆಯಿಟ್ಟಿದ್ದ ನನ್ನ ಅಪ್ಪನ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡಿಕೊಂಡು ಬೆಂಗಳೂರಿನಲ್ಲಿರುವುದು ನನಗೆ ಇಷ್ಟವಾಗಲಿಲ್ಲ. ಬಹುಶಃ ನನ್ನ ಬುದ್ಧಿ ಶಕ್ತಿ ಪದವಿ ಮಟ್ಟದ್ದಷ್ಟೇ ಆಗಿರಬೇಕು. ಇದನ್ನೆಲ್ಲಾ ಯೋಚಿಸಿ ನನ್ನ ಅಪ್ಪನಿಗೆ ಒಂದು ಕಾಗದ ಬರೆದೆ. ಅದರಲ್ಲಿ ನನ್ನ ತಳಮಳ, ದುಃಖವನ್ನೆಲ್ಲಾ ವಿವರವಾಗಿ ತಿಳಿಸಿದೆ . ಅದು ತಲುಪಿದ ಮಾರನೇ ದಿನ ಮಧ್ಯಾನ್ಹದ ವೇಳೆಗೆ ನನ್ನ ಅಪ್ಪ ಬಂದರು. ನಮ್ಮ ಹಾಸ್ಟೆಲ್ ಹತ್ತಿರದಲ್ಲಿ ಒಂದು ಪಾರ್ಕಿತ್ತು. ಅಲ್ಲಿಗೆ ಹೋಗಿ ಕಲ್ಲು ಬೆಂಚೊಂದರ ಮೇಲೆ ಇಬ್ಬರೂ ಕುಳಿತೆವು. ತಮ್ಮ ಷರ್ಟಿನ ಜೇಬಿನಿಂದ ನಾನು ಬರೆದ ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ಓದಿಕೊಂಡು “ನಿನ್ನ ಇಷ್ಟ”ಎಂದು ಹೇಳಿ ಎದ್ದರು. ಹಾಸ್ಟೆಲ್ಲಿಗೆ ವಾಪಸ್ಸು ಬಂದು ಲೆಕ್ಕ ಚುಕ್ತಾ ಮಾಡಿ ನನ್ನ ಗಂಟು ಮೂಟೆಯೊಂದಿಗೆ ಊರಿಗೆ ವಾಪಸ್ಸು ಬಂದೆವು.