ವಿಷಯದ ವಿವರಗಳಿಗೆ ದಾಟಿರಿ

Archive for

18
ಜನ

ನಿಮ್ಮ ನಿಲುಮೆಗೆ ನಾಲ್ಕರ ಸಂಭ್ರಮ

ನಿಲುಮೆ - ನಾಲ್ಕರ ಸಂಭ್ರಮದಲ್ಲಿ

“ ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು…”

ಮೇಲಿನ ಮಾತುಗಳು ’ನಿಲುಮೆಯ ನಿಲುವಿನಲ್ಲಿ’ ನಾವು ಬರೆದುಕೊಂಡಿರುವುದು.ನಿಲುಮೆ ಮೂರು ವರುಷ ಪೂರೈಸಿ ನಾಲ್ಕನೇ ವರುಷಕ್ಕೆ ಕಾಲಿಟ್ಟಿರುವ ಈ ಅವಧಿಯಲ್ಲಿ ಮೇಲಿನ ಮಾತುಗಳಿಗೆ ನ್ಯಾಯ ಸಲ್ಲಿಸಿದ್ದೇವೆ ಅನ್ನುವ ಭಾವನೆ ನಮ್ಮದು.ಇದುವರೆಗೂ ನಿಲುಮೆಗೆ ಕಳಿಸಲ್ಪಟ್ಟ ಲೇಖನಗಳನ್ನು, ನಾವು ನಮ್ಮ ವಾದ,ನಂಬಿಕೆ,ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಅನ್ನುವ ಕಾರಣಕ್ಕೆ ಪ್ರಕಟಿಸದೇ ತಡೆ ಹಿಡಿದವರಲ್ಲ.ವಿಭಿನ್ನ ಸಂಸ್ಕೃತಿ,ಆಚಾರ,ವಿಚಾರ,ನಂಬಿಕೆಗಳನ್ನು ಗೌರವಿಸಬೇಕು ಅನ್ನುವುದು ಕೇವಲ ನಮ್ಮ ಮಾತಲ್ಲ,ಅದನ್ನು ಕಾರ್ಯಗತಗೊಳಿಸಿದ್ದೇವೆ ಕೂಡ.ಆದರೆ ಒಂದು ಮಾತು ನಿಜ.ಕೆಲವೊಂದು ಲೇಖನಗಳು ಯುನಿಕೋಡ್ನಲ್ಲಿರದ ಕಾರಣ, ಇನ್ನು ಕೆಲವು ಸಾಂಧರ್ಭಿಕ ಲೇಖನಗಳನ್ನ ನಾವು ನೋಡುವಷ್ಟರಲ್ಲೇ ತಡವಾಗಿದ್ದರಿಂದ ಕೆಲವು ಪ್ರಕಟವಾಗಿಲ್ಲ.(ನಿಲುಮೆ ನಮ್ಮ ಹವ್ಯಾಸದ ಭಾಗವಾಗಿರುವುದರಿಂದ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಾಗುವ ತಪ್ಪುಗಳಿವು, ಮನ್ನಿಸಿ).ಇವಿಷ್ಟು ಕಾರಣ ಬಿಟ್ಟರೆ ನಮಗೆ ಕಳಿಸಲ್ಪಟ್ಟ ಎಲ್ಲ ಲೇಖನಗಳನ್ನು ನಾವು ಪ್ರಕಟಿಸಿದ್ದೇವೆ.

೨೦೧೩ ನಿಲುಮೆಯ ಪಾಲಿಗೆ ಗಮನಾರ್ಹವಾಗಿಯೇ ಇತ್ತು.೨೦೧೩ ರಲ್ಲಿ ನಿಲುಮೆಯಲ್ಲಿ ನಡೆದ ಪ್ರಮುಖ ಚರ್ಚೆಗಳು/ಬರಹಗಳಿವು.

೧.ಕಾಮುಕರಿಗೆ ಬಲಿಯಾದ ಉಜಿರೆಯ ಸೌಜನ್ಯಪರವಾಗಿ ಮತ್ತು ದೌರ್ಜನ್ಯಕ್ಕೊಳಗಾದ ಛತ್ತೀಸಗಢದ ಆದಿವಾಸಿ ಮಹಿಳೆ ಸೋನಿ ಸೂರಿಯ ಬಗ್ಗೆ
೨.ವಚನ ಸಾಹಿತ್ಯ ಮತ್ತು ಜಾತಿ ಪದ್ಧತಿ
೩.ಶಂಕರ ಭಟ್ಟರ ಎಲ್ಲರ ಕನ್ನಡ
೪.ಬೌದ್ಧ ಧರ್ಮ ಮತ್ತು ಶಂಕರಚಾರ್ಯ
೫.ಟಿಪ್ಪು ವಿವಿಯ ವಿವಾದ
೬.ಮೂಡನಂಬಿಕೆ ವಿರೋಧಿ ಕರಡು
೭.ಜಮ್ಮು-ಕಾಶ್ಮೀರ ಮತ್ತು ಆರ್ಟಿಕಲ್ ೩೭೦ ಚರ್ಚೆ
೮.ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
೯.ರಾಜಕೀಯ ಸುದ್ದಿಗಳು

೨೦೧೩ರಲ್ಲಿ ನಡೆದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆ ಕರ್ನಾಟಕದ ಬುದ್ದಿಜೀವಿ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿತ್ತು.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು, ನಿಲುಮೆಯ ನಿಲುವಿಗೆ ಬದ್ಧವಾಗಿ ನಡೆದುಕೊಂಡು ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಅನ್ನುವ ಭಾವ ನಮ್ಮದು.ಆದರೆ, ಈ ಚರ್ಚೆಯ ಅವಧಿಯಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಹೀಗೆ ಒಂದೇ ರೀತಿಯ ಅಥವಾ ತಮಗೇ ಹೇಗೆ ಬೇಕೋ ಅಂತ ವಾದಗಳಿಗೆ,ಅಂತ ವಾದವನ್ನು ಮುಂದಿಡುವ ಜನರೆಲ್ಲ ಒಂದಾಗಿ ಉಳಿದವರನ್ನು ಅಸ್ಪೃಷ್ಯರನ್ನಾಗಿ ನೋಡುವ ಆರೋಗ್ಯಕರ ಸಮಾಜದ ನಿರ್ಮಾಣ ಮಾಡುವುದಿಲ್ಲ.ದುರಾದೃಷ್ಟವಶಾತ್ ನಮ್ಮಲ್ಲಿ ಈಗ ಇದೇ ರೀತಿಯ ಗುಂಪುಗೂಡುವಿಕೆ ನಡೆಯುತ್ತಿದೆಯೆನ್ನುವುದು.ಭಿನ್ನ ವಾದ,ಅಭಿಪ್ರಾಯಗಳನ್ನು ಹೀಗೆ ದೂರ ಮಾಡಿಕೊಳ್ಳುತ್ತ ನಾವೆಂತ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ಅನ್ನುವ ಆತ್ಮವಾಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದೆ ಅನ್ನುವುದು ನಿಲುಮೆಯ ಕಳಕಳಿ.

ಕೆಲವು ಲೇಖನಗಳಿಂದಾಗಿ, ಕೆಲವರು ನಮ್ಮನ್ನು ಬಲಪಂಥೀಯರನ್ನಾಗಿಯೂ ಮಾಡಿದರು. ಆದರೆ,ಎಡಪಂಥೀಯರನ್ನಾಗಿ ಮಾಡಿದ್ದು ಸ್ವಲ್ಪ ಕಡಿಮೆಯೇ ಅನ್ನಬಹುದು.ಇದಕ್ಕೆ ನಿಲುಮೆ ಕಾರಣರಲ್ಲ. “ನಿಲುಮೆ ಅನ್ನುವುದು ಒಂದು ವೇದಿಕೆ” ಎಂದು ನೋಡಿದಾಗ, ಈ ರೀತಿ ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಅನ್ನುವುದು ತಿಳಿಯುತ್ತದೆ.ನಿಲುಮೆಯ ನಿಲುವಿನಂತೆ ನಾವು ಎಲ್ಲಾ ರೀತಿಯ ಬರಹಗಳಿಗೂ ದನಿಯಾಗಿದ್ದೇವೆ,ದನಿಯಾಗುತ್ತಿದ್ದೇವೆ ಮತ್ತು ದನಿಯಾಗುತ್ತಲೇ ಇರುತ್ತೇವೆ.ಈ ಮೇಲೆ ಹೇಳಿದ ಹಾಗೆ ಬಂದಿದ್ದನ್ನೆಲ್ಲಾ ಯಾವುದೇ ಫಿಲ್ಟರ್ ಇಲ್ಲದೆ ನಿಮ್ಮ ಮುಂದೆ ಇಡುತ್ತಲೇ ಬಂದಿದ್ದೇವೆ. ಇನ್ನೂ ನಮ್ಮನ್ನ ಯಾವ ಪಂಥಕ್ಕೆ ಸೇರಿಸಬೇಕು ಅನ್ನುವುದು ನಿಮಗೇ ಬಿಟ್ಟದ್ದು.ಇದ್ದಿದ್ದು ಇದ್ದ ಹಾಗೇ ಹೇಳಿದ್ದರಿಂದಾಗಿಯೇ, ಕೆಲವು ಜನರ ಪಾಲಿಗೆ ನಾವು ಅಸ್ಪೃಷ್ಯರು ಆಗಿದ್ದೇವೆ, ಹಾಗೆಯೇ ಹಲವು ಜನರ ಸ್ನೇಹವು ನಮಗೆ ಸಿಕ್ಕಿದೆ. ಆ ಮಟ್ಟಿಗಿನ ತೃಪ್ತಿಯು ನಮಗಿದೆ. ಕೆಲವು ಬ್ಲಾಗುಗಳು ನಾವು ಅವರ ಬಗ್ಗೆ ಪ್ರೀತಿಯಿಂದ ಮಾತಾಡಿದ್ದನ್ನು ಪ್ರಕಟಿಸಿದರು. ನೇತ್ಯಾತ್ಮಕ ಅಂಶಗಳನ್ನು ಹೇಳಿದಾಗ ಮನಿಸಿಕೊಂಡಿದ್ದು ಉಂಟು. ಅದು ಅವವರ ಭಕುತಿಗೆ ಬಿಟ್ಟ ವಿಷಯ.ಇನ್ನು, ಇದುವರೆಗೂ ನಿಲುಮೆ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು.ಯಾವುದೇ ಹಿಡನ್ ಅಜೆಂಡವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ,ಅದಕ್ಕೆ ಕಾರಣ ನಾವು ಮೊದಲೇ ಹೇಳಿದಂತೆ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು.ಅಡ್ಮಿನ್ ತಂಡವಿಲ್ಲಿ ನಿಮಿತ್ತ ಮಾತ್ರ.

ನಿಲುಮೆ ಮೂರು ವರ್ಷ ಮುಗಿಸಿ ನಾಲ್ಕನೇ ವರ್ಷದ ಶುಭಾರಂಭವನ್ನು ಮಾಡಿದೆ.ಕನ್ನಡ ಯುವ ಸಮುದಾಯದ ವೈಚಾರಿಕ, ಸಾಹಿತ್ಯಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ವೇದಿಕೆಯ ರೂಪದಲ್ಲಿ ನಿಲುಮೆ ನಿಮ್ಮ ಮುಂದಿದೆ.ನಾಡಿನ ಅನೇಕ ಮಹತ್ವದ ವಿಷಯಗಳನ್ನು ಚರ್ಚಿಸುವಲ್ಲಿ, ಚಿಂತನೆಗಳನ್ನು ರೂಪಿಸುವಲ್ಲಿ ಇನ್ನೂ ಸಕ್ರಿಯವಾಗಿ ಪಾಲ್ಗೊಳ್ಳುವ ಆ ಮೂಲಕ ಸಮಾಜದ ಧನಾತ್ಮಕ ಮೌಲ್ಯಗಳನ್ನು ವೃದ್ಧಿಸುವಲ್ಲಿ ತನ್ನದೇ ಕೊಡುಗೆಗಳನ್ನು ನೀಡುವ ಮತ್ತು ಯಾವುದೇ ಪಂಥ,ವಾದ,ವಿಚಾರಗಳಿಗೆ ಅಂಟಿಕೊಳ್ಳದೇ ಎಲ್ಲ ನಿಲುವಿನ ವಿಚಾರಗಳಿಗೂ ಸಮಾನ ಪ್ರಾತಿನಿಧ್ಯ ನೀಡುತ್ತೇವೆ ಅನ್ನುವುದು ಓದುಗ ದೊರೆಗಳಿಗೆ ನಿಲುಮೆಯ ವಾಗ್ಧಾನ.

ನಿಲುಮೆಗೆ ನಾಡಿನ ಹಿರಿಯರು, ಗಣ್ಯರು ತಮ್ಮ ಸಲಹೆ, ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ. ಅಷ್ಟರಮಟ್ಟಿಗೆ ನಿಲುಮೆಯು ಬೆಳೆದುನಿಂತಿದೆ. ಆದರೆ ತಲುಪಬೇಕಾದ ಗಮ್ಯವು ಇನ್ನೂ ಬಹಳ ದೂರದಲ್ಲಿದೆ.

ಇದೆಲ್ಲ ಹೇಳಿದ ಮೇಲೆ ನಿಮ್ಮ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ. ನೀವು ನಮ್ಮ ಬೆನ್ನಿಗೆ ನಿಂತವರು. ನಿಮ್ಮಗಳ ಪ್ರೋತ್ಸಾಹ ನಿಲುಮೆಯನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಿರಿಯರ ಮಾರ್ಗದರ್ಶನ,ಕಿರಿಯರ ಪ್ರೀತಿ ಎರಡು ನಿಲುಮೆಯನ್ನು ಸಾಕಷ್ಟು ಪ್ರೋತ್ಸಾಹಿಸಿವೆ. ಅದಕ್ಕೆ ನಿಲುಮೆ ನಿಮಗೆ ಚಿರರುಣಿ. ಹಾಗೆ ಮತ್ತೊಮ್ಮೆ ನಿಮ್ಮನ್ನು ನಿಲುಮೆ ಭಿನ್ನವಿಸುವುದು ಏನೆಂದರೆ ಹೇಗೆ ನಿಲುಮೆಯನ್ನು ಇನ್ನಷ್ಟು ಜನರಿಗೆ ತಲುಪಿಸಬಹುದು ಎಂಬ ನಿಮ್ಮ ಅಭಿಪ್ರಾಯಕ್ಕಾಗಿ. ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಏನು ಎಂಬ ಪ್ರೀತಿಯ ಒತ್ತಾಯಕ್ಕಾಗಿ. ನಿಮ್ಮಗಳ ಪ್ರೀತಿಯೇ ನಿಲುಮೆಯ ಹರುಷ.ನಿಲುಮೆಯ ಸಂಕ್ರಮಣದ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ. ನಿಲುಮೆಯ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆ ಟಿಪ್ಪಣಿಗಳನ್ನು(baraha@nilume.netಗೆ) ಕಳಿಸಿಕೊಡಿ. ಸಹ್ಯ ಭಾಷೆಯಲ್ಲಿರುವ ಟೀಕೆ-ಟಿಪ್ಪಣಿಗಳನ್ನೂ, ಪ್ರೀತಿಯ ಮಾತುಗಳನ್ನೂ ಎಲ್ಲವನ್ನು ನಾವು ಇಲ್ಲೇ ಪ್ರಕಟಿಸುತ್ತೇವೆ.

ನಿಮ್ಮೊಲುಮೆಯ,

ನಿಲುಮೆ