ಬೆನ್ನಿ ಹಿನ್ ಕಂಡರೆ ಪ್ರಗತಿಪರರಿಗೇಕೆ ಅಷ್ಟೊಂದು ಭಯ!?
– ನರೇಂದ್ರ ಕುಮಾರ್ ಎಸ್.ಎಸ್
ಬೆನ್ನಿ ಹಿನ್ ಮತ್ತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 2005ರಲ್ಲಿ ಬೆನ್ನಿ ಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಬಹಳ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರಕಾರದ ಸಹಕಾರದಿಂದಾಗಿ, ಆತನ “ಕಣ್ ಕಟ್ ಪ್ರದರ್ಶನ ಮತ್ತು ಮತಾಂತರ” ನಿರಾತಂಕವಾಗಿ ನಡೆಯಿತು. ಆ ನಂತರ ಆನೇಕ ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಬೇಕಾಯಿತು (ಆತನ ಕಣ್ ಕಟ್ನ ಪ್ರಭಾವವೂ ಇರಬಹುದೇ?). ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಕೂಡಲೇ “ಬೆನ್ನಿ ಹಿನ್ ಅವರ ಕಣ್ ಕಟ್ ಕಾರ್ಯಕ್ರಮ” ಆಯೋಜಿತವಾಗಿದೆ! ಇದು ಕೇವಲ ಕಾಕತಾಳೀಯವಿರಲಾರದು ಅಲ್ಲವೇ!?
ಬೆನ್ನಿ ಹಿನ್ ಇಸ್ರೇಲಿನ ಜೆರೂಸೆಲಂನಲ್ಲಿ ಜನಿಸಿ, ಮುಂದೆ ಅಮೆರಿಕದ ಪ್ರಜೆಯಾದರು. ಅವರೊಬ್ಬ ಕ್ರೈಸ್ತ ಮತ ಪ್ರಚಾರಕ. ಅವರು ಹೋದಲ್ಲೆಲ್ಲಾ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾರೆ. ತನ್ನ ಸಭೆಗಳಲ್ಲಿ ಹಾಜರಿದ್ದು, ತನ್ನೊಡನೆ ಪ್ರಾರ್ಥನೆ ಮಾಡಿದವರಿಗೆ ಮತ್ತು ತನ್ನನ್ನು ಸ್ಪರ್ಶಿಸಿದವರಿಗೆ ಯಾವುದೇ ರೋಗವಿದ್ದರೂ ಗುಣವಾಗುತ್ತದೆ, ಎಂದು ಅವರು ಹೇಳಿಕೊಳ್ಳುತ್ತಾರೆ. “ಕ್ಯಾನ್ಸರ್/ ಏಡ್ಸ್ ನಂತಹ ಕಾಯಿಲೆಗಳನ್ನೂ ಕೇವಲ ಸ್ಪರ್ಶದ ಮೂಲಕವೇ ವಾಸಿ ಮಾಡುತ್ತೇನೆ” ಎಂದು ಹೇಳಿ ಜನರನ್ನು ಯಾಮಾರಿಸಲು ಪ್ರಯತ್ನಿಸುತ್ತಾರೆ! 3 ರಿಂದ 5 ದಿನಗಳ ಕಾಲ ನಡೆಯುವ ಇವರ ಕಾರ್ಯಕ್ರಮಗಳಲ್ಲಿ, ಕೊನೆಯ ದಿನಗಳು ಹತ್ತಿರ ಬಂದಂತೆ, ವೇದಿಕೆಯ ಮೇಲೆ ನಡೆಯುವ ನಾಟಕವೂ ಹೆಚ್ಚುತ್ತದೆ. ಇದ್ದಕ್ಕಿದ್ದಂತೆ ಮೈಮೇಲೆ ಏನೋ ಬಂದಂತೆ, ಕಣ್ಣೀರು ಸುರಿಸುತ್ತಾ ಕೆಲವರು ನುಗ್ಗುತ್ತಾರೆ. ತಮಗೆ ಯಾವುದೇ ಔಷಧದಿಂದಲೂ ಗುಣವಾಗದ ಖಾಯಿಲೆಯಿತ್ತು ಮತ್ತು ಇಲ್ಲಿ ಪ್ರಾರ್ಥಿಸಿದ ನಂತರ ಖಾಯಿಲೆ ವಾಸಿಯಾಗಿಬಿಟ್ಟಿತು; ಬೆನ್ನಿ ಹಿನ್ ಅವರೇ ಪ್ರತ್ಯಕ್ಷ ದೇವರು; ಎಂದೆಲ್ಲಾ ಕುಣಿದಾಡುತ್ತಾರೆ. ಇದೆಲ್ಲಾ ಪೂರ್ವನಿಯೋಜಿತ ನಾಟಕ ಎಂಬುದು ಹಲವು ಬಾರಿ ನಿರೂಪಿತವಾಗಿದ್ದರೂ, ಮುಂದಿನ ಬಾರಿಯೂ ಇದೇ ರೀತಿಯ ನಾಟಕ ಇದ್ದೇ ಇರುತ್ತದೆ. ಈ ರೀತಿಯ ನಾಟಕ ನಡೆಯದಿದ್ದರೆ, ಇವರ ಸಭೆಗೆ ಜನರೇ ಬರುವುದಿಲ್ಲವಲ್ಲ; ಹೀಗಾಗಿ ನಾಟಕ ನಿಲ್ಲಿಸುವಂತಿಲ್ಲ!