ವಿಷಯದ ವಿವರಗಳಿಗೆ ದಾಟಿರಿ

ಜನವರಿ 16, 2014

ಉದಾರತೆಗೊಂದು ಉದಾಹರಣೆ

‍ನಿಲುಮೆ ಮೂಲಕ

– ಮಧು ಚಂದ್ರ ಎಚ್.ಬಿ , ಭದ್ರಾವತಿ

ಉದಾರತೆಗೊಂದು ಉದಾಹರಣೆ

ಉದಾರತೆಗೊಂದು ಉದಾಹರಣೆ

ವ್ಯಾಪಾರಿ ಮನೋಭಾವ ಇಂದಿನ ನಮ್ಮ ನಿಮ್ಮೆಲ್ಲರಲ್ಲಿ ಕಂಡುಬರುವ ಅತಿ ಪ್ರಮುಖ ಅಂಶ. ಏನಾದರೂ ಮಾಡಿ ಅವರಿಂದ ಅಥವಾ ಅದರಿಂದ ಹೆಚ್ಚು ಲಾಭ ಪಡೆಯಬೇಕು ಎನ್ನುವ ಮನೋಭಾವ ಇಂದು ಮನುಷ್ಯನ ವ್ಯಕ್ತಿತ್ವವನ್ನೇ ಮಾರಿ ಕೊಳ್ಳುವ ಹಾಗೆ ಮಾಡಿದೆ. ಇದರಿಂದ ಯೋಗ್ಯವಾದುದು ಸಹ ಅಯೋಗ್ಯವೆನಿಸಿಕೊಳ್ಳುತ್ತಿದೆ. ಹತ್ತಿಪ್ಪತ್ತು ವರ್ಷಗಳಿಂದ ಇಚೆ ಮಣ್ಣು, ನೀರು, ಗಾಳಿ ಮಾರಿ ಹಣ ಮಾಡಿಕೊಳ್ಳುವ ದಂಧೆ ಆರಂಭವಾಗಿ ಈಗ ವಿಷಮ ಪರಿಸ್ಥಿತಿಯಲ್ಲಿದೆ.ಇವೆಲ್ಲವೂ ಪ್ರಕೃತಿಯಲ್ಲಿ ಸಿಗುವ ಎಲ್ಲರ ಆಜನ್ಮ ಸಿದ್ಧ ಹಕ್ಕುಗಳು ಆದರು ಹಣ ಕೊಟ್ಟು ಪಡೆಯುವ ಪರಿಸ್ಥಿತಿಯೊದಗಿದೆ ನಮಗೆ. ಇದಕ್ಕೆ ಶಿಕ್ಷಣವೂ ಸಹ ಸೇರ್ಪಡೆಯಾಗಿದ್ದು ನಮ್ಮ ದೌರ್ಭಾಗ್ಯವೇ ಸರಿ. ಉತ್ತಮ ಶಿಕ್ಷಣ ಕೊಡುತ್ತೇವೆಂದು ಹೇಳಿ ಹಣ ಸುಲಿಗೆ ಮಾಡುವ ಶಿಕ್ಷಣ ಸಂಸ್ಥೆಗಳು ಅನೇಕ, ಆದರೆ ಅವರು ಕೊಡುವ ಗುಣಮಟ್ಟವು ಸಹ ಅಷ್ಟಕಷ್ಟೇ. ಅನಗತ್ಯವಾಗಿ ನೆರೆಯ ಶಿಕ್ಷಣ ಸಂಸ್ಥೆ ಒಂದು ರೂಪಾಯಿ ಹೆಚ್ಚಿಗೆ ಹಣ ಕೇಳುವುದು ಗೊತ್ತಾದರೆ ಮೊತ್ತೊಂದು ಸಂಸ್ಥೆ ಸಹ ಹೆಚ್ಚಿಗೆ ಹಣ ಕೇಳುತ್ತದೆ. ಕಡೆಗೆ ಉತ್ತಮ ನಾಗರಿಕರನ್ನು ಸೃಷ್ಟಿ ಮಾಡಬೇಕಾದ ಸಂಸ್ಥೆಗಳು ಸೃಷ್ಟಿ ಮಾಡುವುದು ಹೆಚ್ಚು ಹಣ ಕೀಳುವ ವ್ಯಾಪಾರಿ ಮನೋಭಾವದ ವೃತ್ತಿ ಪರರನ್ನೇ ಹೊರತು ಸಜ್ಜನರನ್ನು ಅಲ್ಲ. ಅದ್ದರಿಂದ ಎಲ್ಲರೂ ಉದಾರ ಮನೋಭಾವ ಬೆಳಸಿಕೊಳ್ಳುವ ಅವಶ್ಯಕತೆಯಿದೆ ಇಲ್ಲದಿದ್ದರೆ ಮಾನವ ಜನಾಂಗವೆಲ್ಲಾ ಪರಸ್ಪರ ಕಿತ್ತಾಡುವ ಸಮಯ ಈಗಾಗಲೇ ಬಂದಿದೆ. ಉದಾರ ಮನೋಭಾವಕ್ಕೆ ನಮ್ಮ ಹಿರಿಯರು ಮಾದರಿ ಎನ್ನುವುದಕ್ಕೆ ಒಂದು ನಿದರ್ಶನ ಇಲ್ಲಿದೆ.

ಹಿಂದೆ ಶೇಷಾದ್ರಿ ಅಯ್ಯರ್ ಅವರು ಮೈಸೂರಿನ ದಿವಾನರಾಗಿದ್ದ ಕಾಲ.

ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಒಮ್ಮೆ ಬ್ರಿಟೀಶ್ ರೆಸಿಡೆಂಟ್ ಲಿ ವಾರ್ನೆರ್ ಭೇಟಿ ಕೊಟ್ಟಿದ್ದ. ಅವನು ಅಲ್ಲಿ ನಡೆಯುತ್ತಿದ್ದ ತರಗತಿಗೆ ಭೇಟಿಕೊಟ್ಟು. ಅಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದ. ಹೀಗೆ ಅಲ್ಲಿದ್ದ ಒಬ್ಬ ಹುಡುಗನನ್ನು ಕುರಿತು

ವಾರ್ನೆರ್ : ” ನಿನ್ನ ಊರು ಯಾವುದು ? ”

ವಿದ್ಯಾರ್ಥಿ : ” ತಿರುಪ್ಪತ್ತುರು – ಮದರಾಸು ”

ವಾರ್ನೆರ್ : ” ಆಷ್ಟು ದೂರ , ಇಲ್ಲಿಗೆ ಯಾಕೆ ಬಂದೆ ?”

ವಿದ್ಯಾರ್ಥಿ : ” ಇಲ್ಲಿ ಫೀ ಕಡಿಮೆ ಇದೆ, ನಾನು ಬಡವ , ಎರಡು ಮೂ ರೂಪಾಯಿ ಉಳಿಸುವುದಕ್ಕೆ ಇಲ್ಲಿಗೆ ಬಂದೆ “.

ನಂತರ ವಾರ್ನರ್ ಮದರಾಸು ಪ್ರಾಂತ್ಯದಲ್ಲಿ ಹಣ ಹೆಚ್ಚೆಂದು , ಇಲ್ಲಿಯೂ ಹಣವನ್ನು ಹೆಚ್ಚಿಸಬೇಕೆಂದು ಮೈಸೂರಿನ ದೀವಾನರಾದ ಶೇಷಾದ್ರಿ ಅಯ್ಯರ್ ಅವರಿಗೆ ಪತ್ರ ಬರೆದ.

ಅದಕ್ಕೆ ಶೇಷಾದ್ರಿ ಅಯ್ಯರ್ ಬರೆದ ಉತ್ತರ ಹೀಗಿದೆ ನೋಡಿ :

” ಮೈಸೂರು ರಾಜ್ಯದ ಪ್ರಜೆಗಳು ವಿದ್ಯಾವಂತರಾಗ ಬೇಕೆಂಬುದು ಮಹಾರಾಜರ ಆಶಯ. ಮೈಸೂರಿಗರಿಗೆ ಎಷ್ಟು ಹಣದ ಅನುಕೂಲ ಇದೆ, ಕಲಿಯಲು ಎಷ್ಟು ಹಣ ವೆಚ್ಚ ಮಾಡಲು ಶಕ್ತಿಯಿದೆ ಎಂಬುದನ್ನು ಮೈಸೂರು ಸರಕಾರ ತಿಳಿದು ಕೊಂಡಿದೆ. ಜನರ ಶಕ್ತಿಗೆ ಫೀಸು ವಿಧಾಯಕವಾಗಿದೆ. ಹೀಗೆ ವಿಧಿಸುವುದರಲ್ಲಿ ಮಹಾರಾರಾಜರ ಸರಕಾರ ವಿದ್ಯಾಪ್ರಚಾರದ ಆಶಯವನ್ನು ಗಮನದಲ್ಲಿರಿಸಿಕೊಂಡಿದೆ. ಬೇರೆ ಕಡೆ ಯಾರು ಏನೇ ಫೀಸು ವಿಧಿಸಿರಲಿ, ಮೈಸೂರಿನಲ್ಲಿ ಮಾತ್ರ ಮಹಾರಾಜರವರ ಉದಾರನೀತಿಯನ್ನು ಬಿಡುವುದು ಸಾಧ್ಯವಿಲ್ಲ. ”

ಇಂತಹ ಉತ್ತರವನ್ನು ನಿರೀಕ್ಷಿಸದ ರೆಸಿಡೆಂಟ್ ವಾರ್ನರ್ ಹೆಚ್ಚು ಮಾತನಾಡದೆ ಸುಮ್ಮನಾದ.

ಇದೆ ರೀತಿಯ ಉದಾರ ಮನೋಭಾವ ನಮ್ಮ ಹಿರಿಯರು ಮೈಗೂಡಿಸಿ ಕೊಂಡಿದ್ದರು. ಹೀಗಾಗಿ ನಾವು ಇಂದು ಅಲ್ಪ ಸ್ವಲ್ಪ ನೆಮ್ಮದಿಯಿಂದ ಇದ್ದಿವಿ. ನಾವು ವ್ಯಾಪಾರಿ ಮನೋಭಾವದ ಕಟುಕ ವ್ಯಾಪಾರಿಯಾಗದೆ ಧರ್ಮವನ್ನು ಪಾಲಿಸಿ ನಡೆದು ಕೊಂಡು ಮಾನವೀಯತೆ , ಉದಾರತೆಯಿಂದ ನಡೆದು ಕೊಂಡರೆ ಮುಂದಿನ ಪೀಳಿಗೆಗೆ ಬದುಕುವುದಕ್ಕೆ ಅವಕಾಶವಾದಿತು. ಇಲ್ಲದಿದ್ದರೆ ಅದು ಮನು ಕುಲದ ಅಂತ್ಯವೆನ್ನಬಹುದು.

————————————————————————————————————————————————

ಚಿತ್ರ ಕೃಪೆ  :  ಅಂತರ್ಜಾಲ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments