ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2014

2

ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆ,1989 – ಭಾಗ ೧

‍ನಿಲುಮೆ ಮೂಲಕ

– ಷಣ್ಮುಖ ಎ

ಸಹಪ್ರಾದ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ-577451

The Scheduled Castes and Scheduled Tribes (Prevention of Atrocities) Act, 1989ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಮೂಲಕ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಾ ಇವೆ. ಈ ರೀತಿಯ ದೌರ್ಜನ್ಯಗಳಿಂದ ದಲಿತರನ್ನು ರಕ್ಷಿಸಿ ಅವರನ್ನು ಅಸ್ಪೃಷ್ಯತೆಯ ಆಚರಣೆಗಳಿಂದ ಮುಕ್ತಿಗೊಳಿಸುವ ಒಂದು ಮಹಾಅಸ್ತ್ರವೆಂಬಂತೆ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯಿದೆಯನ್ನು ಭಾರತ ಸರ್ಕಾರ 1989ರಲ್ಲಿ ಜಾರಿಗೆ ತಂದಿದೆ. ಈ ಕಾಯಿದೆಯ ಜಾರಿಯಾದ ಎರಡು ದಶಕಗಳ ತರುವಾಯ ಈ ಕಾಯಿದೆಯ ಜಾರಿ ಮತ್ತು ಅದರ ಪರಿಣಾಮದ ಕುರಿತು ಚರ್ಚೆಗಳು ಮತ್ತು ಅಧ್ಯಯನಗಳು ನಡೆಯುತ್ತಿವೆ. ಬಹುತೇಕ ಈ ಚರ್ಚೆಗಳಲ್ಲಿನ ಸಾಮಾನ್ಯ ನಿಲುವೆಂದರೆ ಅಸ್ಪೃಷ್ಯತೆ ಆಚರಣೆಯ ವಿರುದ್ದ ಪ್ರಬಲವಾದ ಕಾಯಿದೆ ಇದ್ದರೂ ಇದರ ಪರಿಣಾಮಕಾರಿ ಜಾರಿಯಲ್ಲಿ ಅಧಿಕಾರಿಗಳು ಆಸಕ್ತಿವಹಿಸದಿರುವುದರಿಂದ ಈ ಕಾಯಿದೆಯಿಂದ ದಲಿತರಿಗೆ ಸಿಗಬೇಕಾದ ನ್ಯಾಯ ದೊರೆಯುತ್ತಿಲ್ಲ ಎನ್ನುವ ಸಾಮಾನ್ಯ ಆತಂಕ-ಕಾಳಜಿಗಳು ವ್ಯಕ್ತವಾಗುತ್ತಿವೆ.

ಪ್ರಸ್ತುತ ಲೇಖನವು ಈ ಆತಂಕಗಳ ವಾಸ್ತವತೆಯನ್ನು ಪರೀಕ್ಷಿಸಲು ಪ್ರಯತ್ನಿಸಿದೆ.ಸರ್ಕಾರವೇ ನಡೆಸಿರುವ ಈ ಕಾಯಿದೆಯ ಮೌಲ್ಯಮಾಪನ ಅಧ್ಯಯನ ವರಧಿಯ ಅಂಕಿಅಂಶಗಳು ಮತ್ತು ಅದರಲ್ಲಿನ ವಿವರಣೆಗಳನ್ನು ಆದರಿಸಿ ಈ ಕಾನೂನಿನಡಿಯಲ್ಲಿ ದಾಖಲಾಗಿರುವವ ಪ್ರಕರಣಗಳ ವಾಸ್ತವ ಸ್ಥಿತಿಯನ್ನು ಇಲ್ಲಿ ಪರೀಕ್ಷಿಸಲಾಗಿದೆ.

ಈ ವರದಿಯಲ್ಲಿ ಉಲ್ಲೇಖವಾಗಿರುವಂತೆ, ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ ದಲಿತರು ಈ ಕಾನೂನಿನಿಂದ ದೊರೆಯುವ ಪರಿಹಾರ ಪಡೆದ ನಂತರ ಪ್ರಕರಣದ ಕುರಿತು ಆಸಕ್ತಿಯನ್ನು ಕಳೆದುಕೊಳ್ಳುವುದೇ ಪ್ರಕರಣಗಳು ಇತ್ಯರ್ಥಗೊಳ್ಳದಿರಲು ಮುಖ್ಯ ಕಾರಣವೆಂದು ಗುರುತಿಸುತ್ತದೆ. ಜೊತೆಗೆ, ಈ ಕಾನೂನಿನಡಿಯಲ್ಲಿ ಅಸ್ಪೃಷ್ಯತೆಯ ಆಚರಣೆಯ ಕಾರಣಕ್ಕೆ ದಾಖಲಾಗುವ ಪ್ರಕರಣಗಳು ಅತಿಕಡಿಮೆ ಇದ್ದು ಇತರೇ ಜಗಳ-ವ್ಯಾಜ್ಯಗಗಳೇ ಈ ಕಾಯಿದೆಯಡಿಯಲ್ಲಿ ದಾಖಲಾಗುತ್ತಿರುವ ಅಂಶವನ್ನು ಎತ್ತಿ ತೋರಿಸುತ್ತವೆ.ಈ ರೀತಿಯಲ್ಲಿ ಈ ಕಾಯಿದೆಯು ಅಸ್ಪೃಷ್ಯತೆಯ ಆಚರಣೆಯಲ್ಲದ ವಿಚಾರಗಳಿಗೆ (ದುರು)ಉಪಯೋಗವಾಗುತ್ತಿರುವುದಕ್ಕೆ ಈ ಕಾಯಿದೆ ರೂಪುಗೊಂಡಿರುವ ಸೈದ್ಧಾಂತಿಕ ಚೌಕಟ್ಟಿನಲ್ಲಿಯೆ ಸಮಸ್ಯೆ ಇರಬೇಕೆಂದು ಈ ಲೇಖನವು ತರ್ಕಿಸುತ್ತದೆ.

ಮುಖ್ಯವಾಗಿ, ಭಾರತೀಯ ಸಮಾಜದ ಕುರಿತ ಜಾತಿವ್ಯವಸ್ಥೆಯ ಚೌಕಟ್ಟಿನ ಹಿನ್ನೆಲೆಯಲ್ಲಿ ಕೆಳಜಾತಿ-ಮೇಲ್ಜಾತಿಗಳ ಕುರಿತು ವಸಾಹತುಶಾಹಿ ಸ್ಟೀರಿಯೋಟೈಪುಗಳು ಸಮಾಜವಿಜ್ಞಾನದಲ್ಲಿ ಹರಡಿಕೊಂಡಿದೆ. ಜಾತಿಗಳ ಕುರಿತ ಈ ರೀತಿಯ ಸ್ಟೀರಿಯೋಟೈಪುಗಳನ್ನು ಆಧರಿಸಿದ ನಿರೂಪಣೆಗಳಿಂದ ಹುಟ್ಟಿಕೊಂಡಿರುವ ಬೌದ್ಧಿಕ ವಲಯದಲ್ಲಿನ ಸಾಮಾನ್ಯ ಗ್ರಹಿಕೆಗಳು ಈ ಕಾಯಿದೆ ರೂಪಿತಗೊಳ್ಳಲು ಕಾರಣವಾಗಿದೆ. ಈ ಸಾಮಾನ್ಯಗ್ರಹಿಕೆಗಳು ಇಲ್ಲಿಯ ವಾಸ್ತವ ಸ್ಥಿತಿಯಾಗಿರದೇ ಇರುವುದರಿಂದ ಈ ಕಾಯಿದೆಯಿಂದ ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನ್ಯಾಯಪಡೆಯುವುದಕ್ಕಿಂತ ಹೆಚ್ಚಾಗಿ ಲಾಭ ಪಡೆಯುವ ಕಡೆಗಷ್ಟೇ ಒಲವಿದೆ. ಅಲ್ಲದೆ ದಲಿತರ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಈ ಕಾಯಿದೆಯು ಹಲವು ಹೊಸ ರೀತಿಯ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ ಎಂದು ಈ ಲೇಖನವು ವಾದಿಸುತ್ತದೆ.

I

ನವದೆಹಲಿಯಲ್ಲಿ ಸೆಪ್ಟಂಬರ್ 7, 2009 ರಲ್ಲಿ ರಾಜ್ಯಗಳ ಸಮಾಜಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಮಂತ್ರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ ಕಾಯ್ದೆಯ ಸ್ಥಿತಿಗತಿಯ ಕುರಿತು ಮಾತನಾಡುತ್ತಾ ಪ್ರಧಾನಿ ಮನಮೋಹನ್ ಸಿಂಗ್‍ರವರು ಅತ್ಯಂತ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಅವರು “ಐಪಿಸಿ ಯಡಿಯಲ್ಲಿ ದಾಖಲಾಗಿರುವ ಎಲ್ಲಾ ಶಿಕ್ಷಾರ್ಹ ಅಪರಾಧಗಳಲ್ಲಿ ಶಿಕ್ಷೆಯಾಗಿದ್ದರ ಪ್ರಮಾಣಕ್ಕೆ (ಶೇಕಡ 42 ರಷ್ಟು) ಹೋಲಿಸಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ದದ ದೌರ್ಜನ್ಯಗಳ ಮೊಕದ್ದಮೆಗಳಲ್ಲೆ ಶಿಕ್ಷೆಯಾದ ಪ್ರಮಾಣ (ಶೇಕಡ 30) ವಿಪರೀತ ಕಡಿಮೆ ಇರುವುದು ನನಗೆ ಅತ್ಯಂತ ಆಘಾತಕಾರಿಯಾಗಿದೆ. ಈ ವಿಷಯಗಳಿಗೆ ಸಂಬಂಧಿಸಿದ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಆದ್ಯತೆಯ ಮೇರೆಗೆ ಪರಿಗಣಿಸಿ ರಾಜ್ಯಗಳು ಹೆಚ್ಚು ಕಾಳಜಿ ವಹಿಸಬೇಕು” ಎಂಬುದಾಗಿ ಕರೆ ನೀಡಿದರು.

ಇದಾದ ಮೂರು ವರ್ಷಗಳ ನಂತರ ಅಂದರೆ ಏಪ್ರಿಲ್ 17, 2012ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕೋರಿಕೆಯ ಮೇರೆಗೆ ಗೃಹಸಚಿವಾಲಯವು ಸಂಘಟಿಸಿದ ಸಮ್ಮೇಳನದಲ್ಲಿ ಮಾತನಾಡುತ್ತಾ ಸಮಾಜ ಕಲ್ಯಾಣ ಸಚಿವ ಮುಕುಲ್ ವಾಸ್ನಿಕ್ ರವರು ಭಾರತದ ಎಲ್ಲಾ ರಾಜ್ಯಗಳಲ್ಲಿ ದಾಖಲಾದ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ದಾಖಲಾದ ಮೊಕದ್ದಮೆಗಳ ಸ್ಥಿತಿ-ಗತಿಗಳ ವಿಶ್ಲೇಷಣೆ ಮಾಡುತ್ತಾರೆ.ಅದರಲ್ಲಿ ಅವರು ಹೇಳುವಂತೆ ‘ದಲಿತರು ಮತ್ತು ಆದಿವಾಸಿಗಳು ತಮ್ಮ ಜೀವನದ ಎಲ್ಲಾ ಮಜಲುಗಳಲ್ಲೂ ದೌರ್ಜನ್ಯ ಮತ್ತು ಜಾತಿಆಧಾರಿತ ತಾರತಮ್ಯಗಳನ್ನು ಎದುರಿಸುವುದು ಮುಂದುವರಿಯುತ್ತಿದೆ. ಭಾರತದಾದ್ಯಂತ 2010ರಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧ ಕನಿಷ್ಟ 32,712 ಅಪರಾಧ ಪ್ರಕರಣಗಳು ಮತ್ತು ಇದೇ ಅವಧಿಯಲ್ಲಿ ಆದಿವಾಸಿ ಬುಡಕಟ್ಟುಗಳ ವಿರುದ್ಧ 5885 ಅಪರಾಧ ಪ್ರಕರಣಗಳು ನಡೆದಿವೆ. ಒಟ್ಟು ಹತ್ತು ರಾಜ್ಯಗಳಲ್ಲಿ ಮುಖ್ಯವಾಗಿ ಉತ್ತರ ಪ್ರದೇಶ, ರಾಜಸ್ಥಾನ, ಆಂದ್ರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಮಾತ್ರವೇ ಶೇ. 93 ರಷ್ಟು ಪರಿಶಿಷ್ಟ ಜಾತಿಗಳ ವಿರುದ್ಧದ ಅಪರಾಧಗಳಲ್ಲಿ ದಾಖಲಾಗಿವೆ. ಅದೇ ರೀತಿ ಒಟ್ಟು 10 ರಾಜ್ಯಗಳಲ್ಲಿ ಮಧ್ಯಪ್ರದೇಶ ರಾಜಸ್ಥಾನ, ಆಂದ್ರಪ್ರದೇಶ, ಛತ್ತಿಸ್‍ಗರ್ ಮತ್ತು ಒರಿಸ್ಸಾ ಗಳಲ್ಲಿ ಮಾತ್ರವೇ ಶೇ 95 ರಷ್ಟು ಬುಡಕಟ್ಟು ವಿರೋಧಿ ದೌರ್ಜನ್ಯಗಳು ದಾಖಲಾಗಿದೆ. ಸಚಿವ ವಾಸ್ನಿಕ್ ರವರು ಹೇಳುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವ (ಕನ್ವಿಕ್ಷನ್ ರೇಟ್) ಶೇಕಡ 3 ರಿಂದ 8 ಮಾತ್ರ. ಅದೇ ಈ ರೀತಿಯ ಪ್ರಕರಣಗಳ ಪೆಂಡಿಂಗ್(pending) ಪ್ರಮಾಣ 80ರಿಂದ 90 ರಷ್ಟು ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಕನ್‍ವಿಕ್ಷನ್(conviction) ಪ್ರಮಾಣ ಕರ್ನಾಟಕದಲ್ಲಿ ಶೇ. 3.3, ಗುಜರಾತ್‍ನಲ್ಲಿ ಶೇ. 6.4, ಮಹಾರಾಷ್ಟ್ರದಲ್ಲಿ 6.6,ಅದೇ ಪೆಂಡಿಂಗ್ ಪ್ರಮಾಣ ಗುಜರಾತ್‍ನಲ್ಲಿ ಶೇ.90 ಪಶ್ಚಿಮ ಬಂಗಾಳದಲ್ಲಿ ಶೇ. 88, ಮಹಾರಾಷ್ಟ್ರದಲ್ಲಿ ಶೇ. 87 ರಷ್ಟು ಮತ್ತು ಬಿಹಾರದಲ್ಲಿ ಶೇ. 82 ರಷ್ಟು ಎಂದು ಕಳವಳ ವ್ಯಕ್ತಪಡಿಸುತ್ತಾರೆ.

ಪ್ರಧಾನ ಮಂತ್ರಿಗಳು ಮತ್ತು ಸಾಮಾಜಿಕ ನ್ಯಾಯ ಮಂತ್ರಿಗಳು ನೀಡಿರುವ ಮೇಲಿನ ಅಂಕಿ ಅಂಶಗಳು ಮತ್ತು ಅವರ ಕಳವಳ ಮೇಲ್ನೋಟಕ್ಕೆ ಆತಂಕ ಉಂಟುಮಾಡುವಂತದ್ದೇ ಆಗಿದೆ. ಅಂದರೆ ದೌರ್ಜನ್ಯಕ್ಕೊಳಗಾಗುವ ದುರ್ಬಲ ವರ್ಗದ ದಾಖಲಾಗುವ ಪ್ರಕರಣಗಳ ಪ್ರಮಾಣ ಮತ್ತು ಅವುಗಳಲ್ಲಿ ಶಿಕ್ಷೆಗೊಳಪಡುವ ಪ್ರಕರಣಗಳ ಪ್ರಮಾಣಗಳು ನಿಜಕ್ಕೂ ಭೀತಿ ಹುಟ್ಟಿಸುವಷ್ಟು ಅಂತರವಿರುವುದು ಎದ್ದು ಕಾಣುತ್ತದೆ. ಇದರಿಂದಾಗಿ ಈ ದೇಶದ ಸಮಾಜದಲ್ಲಿ ದೀನ ದುರ್ಬಲರಿಗೆ ದೌರ್ಜನ್ಯದಿಂದ ನ್ಯಾಯ ಸಿಗುವ ಮತ್ತು ದೌರ್ಜನ್ಯವೆಸಗುವವರಿಗೆ ಶಿಕ್ಷೆಯಾಗುವ ಭರವಸೆ ಇಲ್ಲವೇನೋ ಎಂಬಂತೆ ತೋರುವುದರಲ್ಲಿ ಅಚ್ಚರಿ ಏನೂ ಇಲ್ಲ.

ಈ ದೇಶದ ದಲಿತರ ಮೇಲಿನ ದೌರ್ಜನ್ಯಗಳನ್ನು ಸಂಪೂರ್ಣ ಕೊನೆಗಾಣಿಸಬೇಕೆಂಬ ಉದ್ದೇಶದಿಂದ 1989ರಲ್ಲಿ ಜಾರಿಗೆ ತಂದ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಗತಿ ಈ ರೀತಿಯಾದರೆ ಅದರ ಉದ್ದೇಶ ಈಡೇರುವುದಾದರೂ ಹೇಗೆ? ಮತ್ತು ದಲಿತರ ಮೇಲಿನ ದೌರ್ಜನ್ಯ ಕೊನೆಯಾಗುವುದಾದರೂ ಯಾವಾಗ? ಎಂಬ ಪ್ರಶ್ನೆಗಳು ಸಾಮಾಜಿಕ ಮತ್ತು ಮಾನವೀಯ ಕಳಕಳಿ ಹೊಂದಿರುವಂತಹ ಯಾವೊಬ್ಬ ಸಾಮಾನ್ಯ ಮನುಷ್ಯನಿಗೂ ಅನಿಸದಿರದು. ಹಾಗಾದರೆ ಇಂತಹ ಪರಿಸ್ಥಿತಿಗೆ ಕಾರಣವಾದರೂ ಏನು? ಅಥವಾ ಯಾರು?

ಈ ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ ದಲಿತರಿಗೆ ನ್ಯಾಯ ಸಿಗದಿರಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗದಿರಲು ಕಾರಣಗಳೇನು ಎಂದು ಮಂಥನಕ್ಕಿಳಿಯವ ಇದೇ ಮಂತ್ರಿಗಳನ್ನು ಒಳಗೊಂಡಂತೆ ರಾಜಕಾರಣಿಗಳು, ಪ್ರಗತಿಪರ ಬರಹಗಾರರೂ ಸಾಮಾಜಿಕ ಚಿಂತಕರು ಅನೇಕ ಅಂಶಗಳನ್ನು ಪಟ್ಟಿ ಮಾಡುತ್ತಾರೆ. ಅವುಗಳಲ್ಲಿ ಬಹುಮುಖ್ಯವಾಗಿ ಎಲ್ಲರೂ ಉಲ್ಲೇಖಿಸುವುದೆಂದರೆ, ಭಾರತವು ಜಾತಿಯ ಸಮಾಜವಾಗಿರುವುದರಿಂದ ಅಧಿಕಾರವರ್ಗದಲ್ಲಿ ಬಹುತೇಕ ಉನ್ನತ ಜಾತಿಗಳವರೇ ತುಂಬಿ ಕೊಂಡಿರುವುದರಿಂದ ಅವರು ಕೆಳಜಾತಿಗಳ ವಿರುದ್ಧದ ದೌರ್ಜನ್ಯ ಪ್ರಕರಣಗಳ ಕುರಿತು ಅಸಡ್ಡೆ ತೋರುತ್ತಾರೆ.

ಏಕೆಂದರೆ, ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಮೇಲ್ಜಾತಿಯವರಿಗೇ ಆದ್ದರಿಂದ ಅವರ ಹಿತ ಕಾಯಲು ಅಧಿಕಾರಸ್ಥ ಮೇಲ್ಜಾತಿಯ ಜನರು ಈ ಕಾಯಿದೆ ಯಶಸ್ವಿಯಾಗಿ ಅನುಷ್ಟಾನವಾಗದಂತೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬ ವಾದ ಸಾಮಾನ್ಯವಾಗಿ ಬಹುತೇಕ ಎಲ್ಲರಲ್ಲೂ ಇದೆ.ಈ ಕುರಿತು ನಡೆದ ಹಲವು ಸಂಶೋಧನ ಅಧ್ಯಯನಗಳೂ ಕೂಡ ಬಹುತೇಕ ಇದೇ ರೀತಿಯ ತೀರ್ಮಾನಗಳಿಗೆ ಬರುತ್ತವೆ. ಹಾಗಾದರೆ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯ್ದೆ ಯಶಸ್ವಿಯಾಗಿ ಜಾರಿಗೊಳ್ಳದಿರಲು ಮೇಲ್ಜಾತಿ ಅಧಿಕಾರಿ ವರ್ಗಗಳೇ ಕಾರಣವೇ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments