ಕನ್ನಡದ ಇಲ್ಲಗಳು!
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಕನ್ನಡ ಸಾವಿರ ವರ್ಷಗಳಿಂದ ಉಳಿದು ಬಂದ ಬಗೆ ಬೆರಗು ಹುಟ್ಟಿಸುವಂಥದ್ದೇನಲ್ಲ. ಅದು ಎಲ್ಲ ಜೀವಂತ ಭಾಷೆಗಳಂತೆಯೇ ಸಹಜವಾಗಿ ಸವಾಲುಗಳನ್ನು ಎದುರಿಸಿ ತನ್ನೊಡಲೊಳಗೆ ಸೇರಿಸಿಕೊಂಡು, ತನ್ನದನ್ನಾಗಿ ಮಾಡಿಕೊಂಡಿದೆ. ಹೀಗೆಂದರೆ ಬಿಸಿಲು, ಮಳೆ ಗಾಳಿಗಳನ್ನು ಎದುರಿಸಿ ಸಾವಿರ ವರ್ಷಗಳಿಂದ ಜಗ್ಗದೇ ಈ ಕಲ್ಲು ನಿಂತಿದೆ ಎಂಬಂತೆ ಕನ್ನಡ ಎಂದರೆ ಯಾವುದೋ ಎರಡನೆಯ ವಸ್ತುವಲ್ಲ. ಕನ್ನಡ ದಕ್ಕಿಸಿಕೊಂಡಿದೆ ಎಂದರೆ ಕನ್ನಡ ಮಾತನಾಡುವ ಜನ ಹಾಗೆ ಮಾಡಿದ್ದಾರೆ ಎಂದರ್ಥ. ಆದರೆ ಇಂದೇನಾಗಿದೆ? ಕನ್ನಡಿಗರು ಕನ್ನಡವೇ ಬೇರೆ, ತಾವೇ ಬೇರೆ ಎಂಬಂತೆ ಇದ್ದಾರೆ. ಎಲ್ಲವನ್ನೂ ಸಿದ್ಧಮಾದರಿಯಲ್ಲಿ ಬಯಸುವ ನಮಗೆ ಕನ್ನಡವೂ ಸಿದ್ಧಮಾದರಿಯಲ್ಲಿ ಉದ್ಧಾರವಾಗಬೇಕು! ನಾನೊಬ್ಬ ಕನ್ನಡ ಮಾತಾಡದಿದ್ದರೆ ಏನಂತೆ? ನನ್ನ ಮಗ/ಮಗಳು ಕನ್ನಡ ಕಲಿಯದಿದ್ದರೆ ಏನಂತೆ? ಎಂದು ಒಬ್ಬೊಬ್ಬರೂ ಭಾವಿಸಿ ಅಂತೆಯೇ ವರ್ತಿಸುತ್ತಿರುವುದೇ ಕನ್ನಡದ ಇಂದಿನ ಸಮಸ್ಯೆಗೆ ಬಹುಪಾಲು ಕಾರಣ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಯಾದ ಭಾಷೆಯನ್ನು ಆರ್ಥಿಕ-ಔದ್ಯೋಗಿಕ ಮತ್ತು ರಾಜಕೀಯ ದೃಷ್ಟಿಯಿಂದ ನೋಡುವ ಪರಿಪಾಠ ಇನ್ನೊಂದು ಅಪಾಯ. ಕಾಲ ಕಾಲಕ್ಕೆ ಆಯಾ ಭಾಷಿಕ ಪರಿಸರದಲ್ಲಿ ಕಾಣಿಸುವ ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಮೊದಲಾದ ಸನ್ನಿವೇಶಗಳನ್ನು ಎದುರಿಸುತ್ತ, ಅದನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತ ಹೋಗಬೇಕಾದ ಸವಾಲು ಇರುವುದರಿಂದ ಕನ್ನಡ ಎಂದಲ್ಲ, ಎಲ್ಲ ಜೀವಂತ ಭಾಷೆಗಳೂ ಸದಾ ಕಾಲ ಸಂಕ್ರಮಣ ಸ್ಥಿತಿಯಲ್ಲೇ ಇರುತ್ತವೆ.
ಸದ್ಯದ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಕ್ಕಾಗಿ ಇರುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು ನೂರನ್ನೂ ಮೀರುತ್ತವೆ. ಇಷ್ಟಾದರೂ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಆಗುತ್ತಿರುವ ಬದಲಾವಣೆಗೆ ಸಿದ್ಧವಾಗುವಂತೆ ಕನ್ನಡವನ್ನು ಕಟ್ಟುವ ಮತ್ತು ರೂಪಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ. ಇದು ಆಕ್ಷೇಪವಲ್ಲ, ವಾಸ್ತವ. ಆಧುನಿಕ ತಂತ್ರಜ್ಞಾನದಿಂದ ಇಂದು ಭಾಷೆ, ಶಿಕ್ಷಣ ಮತ್ತು ಸಾಹಿತ್ಯದ ಸ್ವರೂಪವೇ ಬದಲಾಗಿಹೋಗಿದೆ. ಕಂಪ್ಯೂಟರ್, ಮೊಬೈಲ್ ತಂತ್ರಜ್ಞಾನಗಳು ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಹೊಸ ಜಗತ್ತಿನ ಈ ಹೊಸ ಸಂಪರ್ಕ ಮಾಧ್ಯಮಗಳು ಭಾಷೆಯನ್ನು ಬಳಸಿಕೊಳ್ಳುವ ಬಗೆಯೇ ಬೇರೆ. ಈ ತಂತ್ರಜ್ಞಾನಗಳಿಗೆ ಒಳಪಡದ ಭಾಷೆ ಅಳಿವು ಉಳಿವಿನ ಪ್ರಶ್ನೆಯನ್ನು ಎದುರಿಸುವುದು ಖಂಡಿತ. ಕನ್ನಡ ಈಗ ಈ ಸವಾಲು ಎದುರಿಸುತ್ತಿದೆ.





