ನಂಬಿಕೆ-ಮೂಢನಂಬಿಕೆ ಗೆರೆ ಎಳೆಯುವುದು ಹೇಗೆ?
– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಬೆಂಗಳೂರಿನಲ್ಲಿ ಇನ್ನೂರಾ ಎಂಟು ಪ್ರಗತಿಪರ ಸ್ವಾಮೀಜಿಗಳೆಂದು ಕರೆದುಕೊಂಡಿರುವವರು ಮೂಢ ನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಸಂತೋಷ. ಯಾರಲ್ಲೂ ಮೌಢ್ಯ ಎಂಬುದು ಇರಬಾರದು. ಯಾಕೆಂದರೆ ನಾವೆಲ್ಲ ವೈಜ್ಞಾನಿಕ (ಹಾಗೆಂದರೇನು ಎಂಬುದೇ ಬೇರೆ ಚರ್ಚೆಯ ಸಂಗತಿ) ಯುಗದಲ್ಲಿದ್ದೇವೆ! ಈಗ ಧರಣಿ ಕುಳಿತಿದ್ದ ಸ್ವಾಮೀಜಿಗಳು ಕಾವಿ ಧರಿಸಿದ್ದಾರೆ, ಕೆಲವರು ವಿಭೂತಿಯನ್ನೂ ರುದ್ರಾಕ್ಷಿ ಮಾಲೆಯನ್ನೂ ಧರಿಸಿದ್ದಾರೆ. ಅನೇಕಾನೇಕ ಜನರ ನಂಬಿಕೆಯನ್ನು ಪ್ರತಿನಿಧಿಸುವ ಮಠಾಧೀಶರಾಗಿದ್ದಾರೆ. ಇವೆಲ್ಲದರ ಗೋಜಿಲ್ಲದೇ ಆರಾಮವಾಗಿ ದೇಶದ ಸಂವಿಧಾನಕ್ಕೆ ಅನುಸಾರವಾಗಿ ನಾನಂತೂ ಬದುಕುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ಈ ಸ್ವಾಮೀಜಿಗಳ ವೇಷವೇ ಮೌಢ್ಯ. ಅವರು ಪ್ರತಿನಿಧಿಸುವ ಮಠಗಳೂ ಮೌಢ್ಯ. ಆದರೂ ಅವರು ಇವುಗಳಿಗೆ ಹೊರತಾದ ಯಾವುದೋ ಮೌಢ್ಯ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ತಮಾಷೆ ಎಂದರೆ ನವೆಂಬರ್ ಎರಡನೆಯ ವಾರದಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ಸಂತರ ಸಮ್ಮೇಳನದಲ್ಲಿ ಪಾಲ್ಗೊಂಡು ಭಾರತೀಯ ಪ್ರಾಚೀನ ಪರಂಪರೆಯ ಉಳಿವಿನ ಪಣ ತೊಟ್ಟ ಕೆಲವು ಸ್ವಾಮೀಜಿಗಳೂ ಈ ಧರಣಿಯಲ್ಲಿದ್ದಾರೆ. ಮೂಢ ನಂಬಿಕೆ ನಿಷೇಧದ ಪಟ್ಟಿಯಲ್ಲಿರುವ ಪೂಜೆ, ಪಾದಪೂಜೆಯಾದಿಯಾಗಿ ಅನೇಕಾನೇಕ ಸಂಗತಿಗಳನ್ನು ಸದ್ಯ ಆಚರಿಸುತ್ತಿರುವ ಸ್ವಾಮೀಜಿಗಳು ಇವರು!
ಕೆಲವು ತಿಂಗಳುಗಳ ಹಿಂದೆ ರಾಜ್ಯದಲ್ಲಿ ಸರ್ಕಾರದಿಂದ ರಚಿತವಾದ ಸಮಿತಿಯೊಂದು ಮೂಢ ನಂಬಿಕೆ ನಿಷೇಧ ಕಾಯ್ದೆಯ ಕರಡು ಪ್ರತಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅದಿನ್ನೂ ಸರ್ಕಾರದ ಪರಿಶೀಲನೆಯ ಹಂತದಲ್ಲೇ ಇದೆ. ಸಾರ್ವಜನಿಕ ಚರ್ಚೆಗೆ ಅದಿನ್ನೂ ತೆರೆದುಕೊಂಡಿಲ್ಲ. ಅದರಲ್ಲಿ ಹೇಳಲಾದ ಕೆಲವು ಸಂಗತಿಗಳು ಅಂತರ್ಜಾಲದ ಕೆಲವು ಮೂಲಗಳಿಂದ ಅಷ್ಟಿಷ್ಟು ಲಭ್ಯವಾಗಿದೆ. ಹತ್ತಾರು ಬಗೆಯ ಆಚಾರ ವಿಚಾರಗಳನ್ನು, ನಂಬಿಕೆ ನಿಷೇಧಗಳನ್ನು ಅನುಸರಿಸುವ ಆದರೂ ಜೊತೆಯಲ್ಲೇ ಬದುಕುವ ವೈವಿಧ್ಯಮಯ ಸಮಾಜ ನಮ್ಮದು. ಸಾಲದ್ದಕ್ಕೆ ಜನತಂತ್ರ ವ್ಯವಸ್ಥೆ ಬೇರೆ ಇದೆ. ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಅಂದರೇನೆಂದು ನಾವು ಅನುಸರಿಸುವ ಸಂವಿಧಾನವೂ ಸ್ಪಷ್ಟವಾಗಿ ಹೇಳಿದೆ. ಇಂಥ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಮುಕ್ತ ಚರ್ಚೆಗೆ ಕರಡನ್ನು ತೆರೆದು ಕೂಲಂಕಷವಾಗಿ ತಿದ್ದುಪಡಿ ಮಾಡದೇ ಸರ್ಕಾರ ನೇಮಿಸಿದ ಸಮಿತಿಯ ಕೆಲ ಸದಸ್ಯರ ಹಾಗೂ ತಾವು ಸಂದರ್ಶಿಸಿದ್ದೇವೆ ಎಂದು ಹೇಳಲಾದ ಆಯ್ದ ಕೆಲವರ ಅಭಿಪ್ರಾಯವನ್ನು ಸಮಾಜದ ಸಕಲರ ಅಭಿಪ್ರಾಯ ಎಂದು ಸ್ವೀಕರಿಸುವುದಾದರೂ ಹೇಗೆ? ಇಂಥ ಮೂಲಭೂತ ಸಂಗತಿ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದಾಗಲೇ ಸಾಕಷ್ಟು ಚರ್ಚೆಯಾಗಿದೆ. ಅದಿರಲಿ.