ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦
– ಮು. ಅ. ಶ್ರೀರಂಗ ಬೆಂಗಳೂರು
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೩
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೪
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೫
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೬
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೭
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೮
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ ೯
ಕವಲು
ಆವರಣ ಕಾದಂಬರಿಗೆ ಬಂದಷ್ಟು ಪ್ರತಿರೋಧ, ಪ್ರತಿಭಟನೆಗಳು ಮತ್ತು ವಿಮರ್ಶಾ ಸಂಕಲನಗಳು ಕವಲು ಕಾದಂಬರಿಗೆ ಬರದೇ ಇದ್ದರೂ ಸಹ ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಯಾಯಿತು. ಆವರಣಕ್ಕೆ ಕೋಮುವಾದಿ ಕೃತಿ ಎಂದು ಹೆಸರಿಟ್ಟಹಾಗೆ ಕವಲು ಕಾದಂಬರಿಗೆ ಸ್ತ್ರೀವಾದದ ವಿರೋಧಿ ಎಂಬ ಲೇಬಲ್ ಹಚ್ಚಲಾಯಿತು. ಖ್ಯಾತ ಕತೆಗಾರ, ಪ್ರಭಂಧಕಾರ ಮತ್ತು ಪ್ರಕಾಶಕರಾದ (ಛಂದ ಪುಸ್ತಕ ಪ್ರಕಾಶನ ಬೆಂಗಳೂರು) ವಸುಧೇಂದ್ರ ಅವರು ಕನ್ನಡ ಪ್ರಭ ಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪ್ರಭದಲ್ಲಿ ಮಾಡಿದ ಕವಲು ಕಾದಂಬರಿಯ ವಿಮರ್ಶೆಗೆ ಪ್ರತಿಕ್ರಿಯೆಯಾಗಿ ನಾನು ಬರೆದದ್ದು ಈ ಪತ್ರ. .
ಶ್ರೀ ವಸುಧೇಂದ್ರ ಅವರಿಗೆ ನಮಸ್ಕಾರಗಳು, ದಿನಾಂಕ: ೧೩ ಜೂನ್ ೨೦೧೨
ಭೈರಪ್ಪನವರ ಕವಲು ಕಾದಂಬರಿಯ ಬಗ್ಗೆ ಸುಮಾರು ಎರಡು ವರ್ಷಗಳ ಹಿಂದೆ (೨೯–೮–೨೦೧೦) ಕನ್ನಡಪ್ರಭದ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾದ ತಮ್ಮ ವಿಮರ್ಶೆಯ ಬಗ್ಗೆ ನನ್ನ ಅನಿಸಿಕೆಗಳನ್ನು ಈಗ ತಿಳಿಸುತ್ತಿದ್ದೇನೆ. ಇದನ್ನು ಬರೆದಿಟ್ಟುಕೊಂಡು ಎರಡು ವರ್ಷಗಳಾಗಿದ್ದರೂ ಈಗ ಕಳಿಸುತ್ತಿರುವುದಕ್ಕೆ ಕಾರಣ ನಿಮ್ಮ ಅಂಚೆ ವಿಳಾಸ/ ಇ ಮೇಲ್ ಐಡಿ ಸಿಗದೇ ಇದ್ದದ್ದು. ಇತ್ತೀಚಿಗೆ ‘ಸಂಚಯ’ ಸಾಹಿತ್ಯಿಕ ಪತ್ರಿಕೆಯ ಪ್ರತಿಗಳನ್ನು ಒಂದೆಡೆ ನೀಟಾಗಿ ಜೋಡಿಸಿಡುತ್ತಾ ಹಾಗೆ ಅದರ ಪುಟಗಳ ಮೇಲೆ ಕಣ್ಣಾಡಿಸುತ್ತಿದ್ದಾಗ ಒಂದು ಸಂಚಿಕೆಯಲ್ಲಿ ನಿಮ್ಮ ವಿಳಾಸ ಸಿಕ್ಕಿತು. ಸಾಪ್ತಾಹಿಕ ಪ್ರಭದಲ್ಲಿ ಪ್ರಕಟವಾಗಿದ್ದ ನಿಮ್ಮ ಆ ವಿಮರ್ಶೆಯ ಜೆರಾಕ್ಸ್ ಪ್ರತಿಯನ್ನೂ ಇದರ ಜತೆ ಇಟ್ಟಿದ್ದೇನೆ.
ತಮಗೆ ತಿಳಿದಿರುವಂತೆ ಭೈರಪ್ಪನವರ ಕಾದಂಬರಿಗಳ ಬಗ್ಗೆ ನಮ್ಮ ವಿಮರ್ಶಾವಲಯದಲ್ಲಿ ಪರಸ್ಪರ ವಿರುದ್ಧವಾದ ಅಭಿಪ್ರಾಯಗಳು ಅವರ ಧರ್ಮಶ್ರೀ ಕಾಲದಿಂದ ಇಂದಿನ ಕವಲು ಕಾದಂಬರಿಯ ತನಕ ಇದ್ದೇ ಇದೆ. ಇದನ್ನು ನಾನು ಪುನಃ ವಿವರಿಸುವುದು ಅನವಶ್ಯ ಎಂದು ಭಾವಿಸಿದ್ದೇನೆ. ಈಗ ನೇರವಾಗಿ ಕವಲು ಕಾದಂಬರಿಯನ್ನು ಕುರಿತ ತಮ್ಮ ವಿಮರ್ಶೆಯ ಬಗ್ಗೆ ಹೋಗೋಣ. ನಾಲ್ಕು ಕಾಲಂಗಳ ಆ ವಿಮರ್ಶೆಯಲ್ಲಿ ಎರಡು ಕಾಲಂಗಳು ಆ ಕಾದಂಬರಿಯ ಕಥಾಸಾರಾಂಶವನ್ನು ಹೇಳುವುದಕ್ಕೆ ವಿನಿಯೋಗವಾಗಿದೆ. ಉಳಿದ ಎರಡು ಕಾಲಂಗಳ ಬಗ್ಗೆ ಹೇಳುವುದಾದರೆ—
(೧) ಭೈರಪ್ಪನವರು ಎಲ್ಲಾ ಸ್ತ್ರೀವಾದಿಗಳೂ ಕೆಟ್ಟ ಹೆಂಗಸರೆಂದು ಆ ಕಾದಂಬರಿಯಲ್ಲಿ ಎಲ್ಲಿ ಹೇಳಿದ್ದಾರೆ? ಕವಲು ಕಾದಂಬರಿಯಲ್ಲಿ ಚಿತ್ರಿತವಾಗಿರುವ ಇಬ್ಬರು ಹೆಂಗಸರ ಬಗ್ಗೆ, ಅವರ ನಡತೆಯ ಬಗ್ಗೆ ಬರೆದಿದ್ದಾರೆ. ಅವರಿಬ್ಬರು ಎಲ್ಲಾ ಸ್ತ್ರೀ ವಾದಿಗಳನ್ನು ಪ್ರತಿನಿಧಿಸುತ್ತಾರೆ ಎಂದು ಭಾವಿಸುವುದು ಸರಿಯೇ? ಓದು ಬರಹ ಬಲ್ಲ ಹೆಂಗಸರಿಂದ, ಸ್ತ್ರೀವಾದಿಗಳಿಂದ ಮಾತ್ರ ವರದಕ್ಷಿಣೆ ವಿರೋಧಿ ಕಾನೂನು, ವಿವಾಹ ವಿಚ್ಛೇದನದ ಕಾನೂನು ದುರುಪಯೋಗವಾಗುತ್ತಿಲ್ಲ: ಅದನ್ನು ಇತರರೂ ಮಾಡುತ್ತಿದ್ದಾರೆ ಎಂಬುದಕ್ಕೆ ಕವಲು ಕಾದಂಬರಿಯಲ್ಲೇ ಒಂದು ನಿದರ್ಶನವಿದೆ. ಜಯಕುಮಾರನ ಅಣ್ಣ ಕೇಶವಮೂರ್ತಿಯ ಹೆಂಡತಿ ಇಂದಿರಾ ತನ್ನ ಅತ್ತೆಯನ್ನು ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಜೈಲಿಗೆ ಹಾಕಿಸಲಿಲ್ಲವೇ? (ಪುಟ ೨೬೧ ಕವಲು) ತಾವೇ ಹೇಳಿರುವಂತೆ ಕಾನೂನಿನ ಲೂಪ್ ಹೋಲ್ ಗಳನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡವರ ಕಥೆ ಕವಲುವಿನದು. ಅಂತಹ ಒಂದು ಕಥೆಯನ್ನು ಹೇಳುವುದಕ್ಕೆ ಒಂದಷ್ಟು ಪಾತ್ರಗಳು ಬೇಕೇ ಬೇಕಲ್ಲವೇ? ಅಂತಹ ಪಾತ್ರಗಳು ಇಡೀ ಸಮಾಜದ ಪ್ರತಿಬಿಂಬವಾಗಲು ಹೇಗೆ ತಾನೇ ಸಾಧ್ಯ? ಜತೆಗೆ ಮರೆಯಬಾರದ ಸಂಗತಿ ಎಂದರೆ ಪ್ರಗತಿಪರ ,ಬಂಡಾಯ, ದಲಿತ ಸ್ತ್ರೀ ವಾದಿ ಇತ್ಯಾದಿ ಪ್ರಣಾಳಿಕೆಗಳು, ಇವುಗಳ ಬಗ್ಗೆ ಒಲವುಳ್ಳ ಅಷ್ಟನ್ನೇ high light ಮಾಡುವಂತಹ ಸಾಹಿತ್ಯ,ವಿಮರ್ಶೆಗಳು ಏಕಮುಖೀ ಧೋರಣೆ ಉದ್ದೇಶವಿಟ್ಟುಕೊಂಡು ರಚಿತವಾಗಿ ಜೀವನದ ಇತರೆ ಮಗ್ಗುಲುಗಳ ಬಗ್ಗೆ ಗಮನಹರಿಸದೇ ಇರುವುದು ತಿಳಿದ ವಿಷಯವೇ. ಒಬ್ಬ ಲೇಖಕ/ಸಾಹಿತಿ ಆಯಾ ಕಾಲದಲ್ಲಿ ಚಾಲ್ತಿಯಲ್ಲಿರುವಂತಹ ಸಾಮಾಜಿಕ/ರಾಜಕೀಯ ಸಿದ್ಧಾಂತ,ವಾದ ಇತ್ಯಾದಿಗಳ ಪರವಾಗಿ ಮತ್ತು ಅದರ ಚೌಕ್ಕಟ್ಟಿನೊಳಗೇ ಬರೆಯಬೇಕು ಎಂದು ನಿರೀಕ್ಷಿಸುವುದು/ಒತ್ತಾಯಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನೂ ಸಹ ನಾವು ಗಣನೆಗೆ ತೆಗೆದುಕೊಳ್ಳಬೇಕಲ್ಲವೇ? ಸಾಹಿತಿಗೆ ಆ ವಾದಗಳ ಸಾಧಕ ಬಾಧಕಗಳನ್ನು ತನ್ನ ಕೃತಿಯಲ್ಲಿ ಚರ್ಚಿಸುವ ಸೃಜನಶೀಲತೆಗೆ ಅವಕಾಶವಿರಬಾರದೆ?