ಕಾನೂನಿನ ಹೆಸರಲ್ಲಿ ಮರೆಯಾಗಲಿದೆಯೆ ಕರಾವಳಿಯ ಕಂಬಳ ಕ್ರೀಡೆ?
– ರಾಘವೇಂದ್ರ ಅಡಿಗ. ಹೆಚ್.ಎನ್
ಶತಮಾನಗಳ ಇತಿಹಾಸ ಹೊಂದಿರುವ ಕರ್ನಾಟಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಇದೀಗ ಕಂಟಕವು ಎದುರಾಗಿದೆ. ಹೋರಿಗಳನ್ನು ಹಿಂಸಾತ್ಮಕವಾಗಿ ಬೆದರಿಸುವ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆ ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಸುಪ್ರೀಂ ಕೋರ್ಟ್ 2014ರ ಮೇ 7ರಂದು ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರಾಣಿಗಳನ್ನು ಮನರಂಜನೆಗಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಬಾರದು ಎಂಬುದು ನ್ಯಾಯಾಲಯದ ತೀರ್ಪಿನ ತಾತ್ಪರ್ಯವಾಗಿತ್ತು. ಇದೀಗ ಸುಪ್ರೀಂ ಕೊರ್ಟ್ ತೀರ್ಪಿನ ಹಿನ್ನೆಲೆಯನ್ನಿಟ್ಟುಕೊಂಡು ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಂಬಳ ನಡೆಸದಂತೆ ಸೂಚಿಸಿದೆ. ಹೀಗಾಗಿ ದ.ಕ ಜಿಲ್ಲಾಡಳಿತದ ಕ್ರೀಡೆಗೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಕಂಬಳದ ಆಚರಣೆ, ಇತಿಹಾಸ, ಹಿನ್ನೆಲೆಯ ಮೇಲೆಂದು ಇಣುಕು ನೋಟವಿಲ್ಲಿದೆ.
ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಉತ್ತಿದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟ ‘ಕಂಬಳ’. ಕಂಬಳ ಅತವಾ ತುಳು ಭಾಷೆಯಲ್ಲಿ ಹೇಳುವಂತೆ ‘ಕಂಬುಲ’ ಎಂದರೆ ಉಳುವುದಕ್ಕೆ ಮತ್ತು ಬೀಜಗಳ ಬಿತ್ತನೆಗೆ ಸಿದ್ದವಾಗಿರುವ ಕೆಸರುಗದ್ದೆ ಎಂದೇ ಹುರುಳು. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ, ಕಂಬಳ ಗದ್ದೆಯಲ್ಲಿ ದಪ್ಪನೆ ಮಯ್ಯ, ಸಾಕಿದ ಕೋಣಗಳನ್ನು ಓಡಿಸುವುದು ಒಂದು ಮನೋರಂಜನೆ ಆಟ. ಹೀಗೆಂದ ಮಾತ್ರಕ್ಕೆ ಕಂಬಳವು ಕೇವಲ ಕೋಣಗಳ ಓಟದ ಸ್ಪರ್ಧೆಯು ಮಾತ್ರವೇ ಎಂದು ತಿಳಿಯಬೇಕಿಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿನ ರೈತರು ಭತ್ತದ ಕೊಯ್ಲಿನ ಬಳಿಕದಲ್ಲಿ ಮನರಂಜನೆಗಾಗಿ ಏರ್ಪಡಿಸುತ್ತಿದ್ದ ಆಟವಿದಾಗಿದ್ದು ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.