ನುಡಿಸಿರಿಯನ್ನು ವಿರೋಧಿಸುವ ನೈತಿಕತೆ ಇಂದಿನ ಸಾಹಿತಿಗಳಿಗಿದೆಯೇ?
– ಸಂತೋಷ್ ಕುಮಾರ್ ಪಿ.ಕೆ
ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವಾದ ಆಳ್ವಾಸ್ ನುಡಿಸಿರಿ 2014 ನ್ನು ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಸಲಾಯಿತು. ಕನ್ನಡ ಭಾಷೆ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಡಾ.ಮೋಹನ್ ಆಳ್ವರ ಶ್ರಮ ಶ್ಲಾಘನೀಯವಾದುದು. ನುಡಿಸಿರಿಯ ವೈಭವವು ಆಗಮಿಸಿದ ಎಲ್ಲಾ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರೇಮಿಗಳಿಗಳಿಗೆ ಮನತಣಿಸುವಷ್ಟು ವಿಷಯ, ಮನರಂಜನೆಗಳನ್ನು ನೀಡಿರುವುದು ಸುಳ್ಳಲ್ಲ. ಅತ್ಯದ್ಭುತ ಮೆರವಣಿಗೆಯ ಮೂಲಕ ಪ್ರಾರಂಭವಾಗುವ ನುಡಿಸಿರಿಯು ಪ್ರತಿಯೊಂದು ಹಂತದಲ್ಲಿಯೂ ಸಮಯ ಮತ್ತು ಶಿಸ್ತು ಪಾಲನೆಯ ಅಣತಿಯಂತೆ ಜರುಗುತ್ತಾ ಹೋಗುತ್ತದೆ.
ಕನ್ನಡವು ಕರ್ನಾಟಕದ ವ್ಯವಹಾರಿಕ ಮತ್ತು ಮುಖ್ಯವಾಹಿನಿಯ ಭಾಷೆಯಾಗಿದ್ದರೂ ಸಹ ಇತರ ಭಾಷೆಗಳಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ. ಉದಾಹರಣೆಗೆ, ತುಳು, ಕೊಂಕಣಿ, ಬ್ಯಾರಿ, ಬಂಜಾರ, ಕೊಡವ ಇನ್ನೂ ಮುಂತಾದ ಭಾಷೆಗಳು ಅಸ್ತಿತ್ವದಲ್ಲಿವೆ. ಈ ಬಾರಿಯ ನುಡಿಸಿರಿಯಲ್ಲಿ ಇಂತಹ ಪ್ರಾದೇಶಿಕ ಭಾಷೆಗಳಿಗೂ ಸಹ ಮನ್ನಣೆ ನೀಡುವ ಮೂಲಕ ಅವುಗಳಿಗೆ ಸಂಬಂಧಿಸಿದ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಲಾಗಿತ್ತು. ಪ್ರತ್ಯೇಕವಾಗಿ ಒಂದೊಂದು ದಿನವೂ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷಾ ಸಮ್ಮೇಳನಗಳೂ ಪ್ರತಿದಿನ ಸಂಜೆ ಜರುಗಿದವು. ಹಾಗೂ ಕೃಷಿ ಸಲಕರಣೆಗಳ ಮೇಳ, ಆಹಾರ ತಿಂಡಿತಿನಿಸುಗಳ ಮೇಳ ಹಾಗೂ ಪುಸ್ತಕ ಮೇಳ ಇವೆಲ್ಲವೂ ನುಡಿಸಿರಿಯ ವಿಶೇಷ ರಂಗುಗಳು.