ಭಾರತವನ್ನು “ಕಾಂಗ್ರೆಸ್ಸ್ ಮುಕ್ತ”ವಾಗಿಸಲು,ಕರ್ನಾಟಕದಲ್ಲಿ “ಬಿಜೆಪಿಯೇ ಇಲ್ಲ”!
– ರಾಕೇಶ್ ಶೆಟ್ಟಿ
ಕುರುಕ್ಷೇತ್ರದ ಯುದ್ದಕ್ಕೆ ಬೆಂಬಲ ಕೋರಿ ಬಂದ ಅರ್ಜುನನಿಗೆ,”ನಾರಾಯಣ ಬೇಕೋ?”,”ನಾರಾಯಣಿ ಸೈನ್ಯ ಬೇಕೋ?” ಎಂದು ಕೇಳುತ್ತಾನೆ ಶ್ರೀಕೃಷ್ಣ.’ಸಂಖ್ಯೆ’ ಗಿಂತ ‘ವ್ಯಕ್ತಿ’ ಮತ್ತು ‘ವ್ಯಕ್ತಿ’ಗಿಂತ ‘ವ್ಯಕ್ತಿತ್ವ’ದ ಮಹತ್ವ ಅರಿತಿದ್ದ ಅರ್ಜುನ “ನಾರಾಯಣ” ಎನ್ನುತ್ತಾನೆ. ಅರ್ಜುನನೆಡೆಗೆ ಕನಿಕರ ತೋರಿದ ದುರ್ಯೋಧನ “ನಾರಾಯಣಿ ಸೈನ್ಯ” ಪಡೆದು ಹೋಗುತ್ತಾನೆ.ಕಡೆಗೆ ಯುದ್ಧದಲ್ಲಿ ಗೆದ್ದಿದ್ದು ಯಾರು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಇಲ್ಲಿ ನನ್ನ ಗಮನವಿರುವುದು ಯುದ್ಧದ ಮೇಲಲ್ಲ.ಯುದ್ಧಕ್ಕೆ ಹೊರಟು ನಿಂತವನು ಮಾಡಿಕೊಳ್ಳುವ ತಯಾರಿಯ ಮೇಲೆ.ಕುರುಕ್ಷೇತ್ರದ ಯುದ್ಧಕ್ಕೆ ಕಾರಣನಾದ ದುರ್ಯೋಧನ,ಯುದ್ಧಕ್ಕೆ ಬೇಕಾದ ಜನರನ್ನು (ಸಂಖ್ಯೆ) ಒಟ್ಟುಗೂಡಿಸಿಕೊಂಡು ಹೊರಟು ನಿಂತನೇ ಹೊರತು,ಯುದ್ದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ.
ಬಹುಷಃ, ತನ್ನ ಜೊತೆಗೆ ಭೀಷ್ಮ,ದ್ರೋಣಾಚರ್ಯರಂತ ಅಸಾಧಾರಣ ಸಾಮರ್ಥ್ಯದ “ವ್ಯಕ್ತಿ”ಗಳಿದ್ದಾರೆ ಎನ್ನುವ ಅಹಂ ದುರ್ಯೋಧನನಿಗಿದ್ದೀತು.ವ್ಯಕ್ತಿಗಳಿದ್ದರೇನಂತೆ “ವ್ಯಕ್ತಿತ್ವ” ಇರಲಿಲ್ಲವಲ್ಲ!
ಏನಿದು,ಭೀಷ್ಮನಂತ ಭೀಷ್ಮ,ದ್ರೋಣಾಚಾರ್ಯರಿಗೆ ವ್ಯಕ್ತಿತ್ವವಿರಲಿಲ್ಲ ಎನ್ನುತ್ತಿದ್ದೇನೆ ಎನ್ನಿಸಬಹುದು.ಧರ್ಮ-ಅಧರ್ಮದ ಪ್ರಶ್ನೆ ಬಂದಾಗ ಅದಿನ್ನೇನೋ ಸಬೂಬು ಕೊಟ್ಟು ಅಧರ್ಮದ ಪರ ನಿಲ್ಲುವ ವ್ಯಕ್ತಿಯ “ವ್ಯಕ್ತಿತ್ವ”ಕ್ಕೆ ಬೆಲೆ ಉಳಿಯುತ್ತದೆಯೇ? ಕಡೆಗೂ ಮಹಾಭಾರತದ ಯುದ್ಧದಲ್ಲಿ ಗೆದ್ದಿದ್ದು ಧರ್ಮದ ಪರನಿಂತ ವ್ಯಕ್ತಿಗಳೇ.