ನಾನು ನೇತ್ರಾವತಿ
– ಭರತೇಶ ಅಲಸಂಡೆಮಜಲು
ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ತುಂಬು ಸಂಸಾರ ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ಚೊಕ್ಕ ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ರಕ್ತಕ್ಕಿಂತಲೂ ಮೀರಿದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು ಅದೇ ನಿಮ್ಮ ನೇತ್ರಾವತಿ ನಾನು.
ನನ್ನ ಜೀವನವೇ ಹೀಗೆ ಎಲ್ಲಿಯೂ , ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಅದರಿಂದಲೇ ಪಾವನವಾಗಿ ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ, ಮಲೆನಾಡಿಗೆ ವರ್ಷಧಾರೆಯನ್ನು ಸಿಂಪಡಿಸುತ್ತಿದ್ದರೆ, ಹಿಮ್ಮೇಳದಲ್ಲಿ ಮಂದಗಾಳಿಗೆ ನೆಟ್ಟಿ ತೆಗೆಯುವ ಲೆಂಕಿರಿಗಳು, ತಂಗಾಳಿಗೆ ಮೈಯೊಡ್ಡಿ ವ್ಯಾಯಾಮ ಮಾಡುವ ಕೊಂಬೆಗಳು, ಬಿಸಿಲಿಗೆ ಬಾಯಾರಿದ ತರಗೆಳಲೆಗಳು ನೀರು ಕುಡಿಯುವುದು, ತೋಡಿನ ಬದುವಿನ ಕೇದಗೆಯ ಪರಿಮಳ, ಇನಿದನಿ ಪಕ್ಷಿಗಳ ರಸಮಂಜರಿ, ಬಳುಕುತ್ತಾ ನಡೆಯುವ ಪ್ರಾಣಿಗಳು ಹೀಗೆ … ಹೀಗೆ…ಇಂತಹ ಜೀವವೈವಿಧ್ಯದ ಪ್ರಾಕೃತಿಕ ಬಂಗುರವೇ ನನಗೆ ಆಹಾರ, ಕಣ್ಣಿಗೆ ಹಬ್ಬ, ಹೊಟ್ಟೆಗೂ ಖುಷಿ…