ಅಭಿವ್ಯಕ್ತಿ ಸ್ವಾತಂತ್ರವೆಂಬ ಕಪಟ ನಾಟಕ
– ಹೃಷಿಕೇಶ್ ಚಿಕ್ಕಮಗಳೂರು
ಇತ್ತೀಚೆಗೆ ಕಳೆದ ಸೋಮವಾರದಿಂದ ಟಿ.ವಿ9 ವಾಹಿನಿಯನ್ನು ಪ್ರಸಾರ ಮಾಡದಂತೆ ಘನ ಸರ್ಕಾರದ ಮುಖ್ಯಸ್ಥರು ಕೇಬಲ್ ಆಪರೇಟರ್ ಗಳಿಗೆ ಫತ್ವಾವನ್ನು ಹೊರಡಿಸಿದ್ದರು.ಅದರನ್ವಯ ಬಹುತೇಕ ಪ್ರದೇಶಗಳಲ್ಲಿ ಆ ವಾಹಿನಿಯು ಕೇಬಲ್ ವಾಹಿನಿಗಳ ಲಿಸ್ಟ್ ನಿಂದ ಮಾಯವಾಗಿತ್ತು.(ನಂತರ ಕೇಬಲ್ ಆಪರೇಟರುಗಳ ಜೊತೆ ಮತುಕತೆಯೆಂಬ ಕಾರ್ಯಕ್ರಮದ ನೆಪದಲ್ಲಿ ಈ ಫತ್ವಾವನ್ನು ಹಿಂಪಡೆದು,ವಾಹಿನಿಯ ಪ್ರಸಾರಕ್ಕೆ ಅವಕಾಶಕೊಡಲಾಯಿತು)ಆ ವಾಹಿನಿಯನ್ನು ನೋಡದೆ ಊಟ ನಿದ್ದೆ ಬಿಟ್ಟು ಯಾರೂ ಸಾಯದೇ ಇದ್ದರೂ ಸಹ ಒಂದು ಆಸಕ್ತದಾಯಕ ಬೆಳವಣಿಗೆಯೊಂದು ಕಂಡುಬರುತ್ತದೆ. ಅದೆಂದರೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿ, ಹಾಗೂ ಸರ್ಕಾರದ ನಾಲ್ಕನೇ ಅಂಗ ಎಂದೇ ಖ್ಯಾತಿ ಗಳಿಸಿದ ಮಾಧ್ಯಮದ ಮೇಲೆ ಒಂದು ಸುತ್ತಿನ ಬಿಗಿಹಿಡಿತ ಸಾಧಿಸಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿರುವುದು ಗೋಚರವಾಗುತ್ತಿದೆ.
ಹಾಲಿ ಸಚಿವರೊಬ್ಬರ ಸ್ಟಿಂಗ್ ಆಪರೇಷನ್ ಮಾಡಲು ಹೋಗಿ ಈ ವಾಹಿನಿಗೆ ವಕ್ರದೃಷ್ಟಿ ಬಿದ್ದಂತಾಗಿದೆ. ವಿಷಯ ಏನೇ ಇದ್ದಿರಿಲಿ, ಆದರೆ ಸರ್ಕಾರದ ವಿರುದ್ಧ ಕಾರ್ಯಕ್ರಮಗಳನ್ನು ಮಾಡಲೇಬಾರದು ಎಂಬುದು ದಾಷ್ಟ್ಯದ ಪರಮಾವಧಿ ಎಂದೇ ಹೇಳಬೇಕು. ಬ್ರಿಟೀಷರ ನಂತರ ಪತ್ರಿಕಾ ಸ್ವಾತಂತ್ಯದ ಮೇಲೆ ನಿರ್ಬಂಧವನ್ನು ಹೇರಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ತದ ನಂತರ ಆ ಕೀರ್ತಿ ಪ್ರಸ್ತುತ ಸರ್ಕಾರಕ್ಕೆ ಸಲ್ಲುತ್ತದೆ. ಎಲ್ಲಾ ಮಾಧ್ಯಮದ ಮೇಲೂ ನಿರ್ಬಂಧ ಹೇರದಿದ್ದರೂ ನಿರ್ದಿಷ್ಟವಾಗಿ ತನಗೆ ಆಗದವರ ಮೇಲೆ ನಿರ್ಬಂಧ ಹೇರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಯಲ್ಲದೆ ಮತ್ತೇನೂ ಅಲ್ಲ.