ಪುಟ್ಟ ‘ಬೇಬಿ’ಯೊಳಗೆ ಎಷ್ಟೆಲ್ಲ ಕಥೆಗಳು…
– ಚಕ್ರವರ್ತಿ ಸೂಲಿಬೆಲೆ
‘ಬೇಬಿ’ ಚಿತ್ರ ಎರಡು ವಾರದಲ್ಲಿ ಹೆಚ್ಚುಕಡಿಮೆ ನೂ ರುಕೋಟಿ.ಕಾಲ್ಪನಿಕ ಕಥಾಹಂದರದ, ಹಿಂದೂದ್ವೇಷಿ ಹಣೆಪಟ್ಟಿಹೊತ್ತ ಪೀಕೆಗೆ ಸಿಕ್ಕ ಪ್ರಚಾರದ ಶೇಕಡಾ ಹತ್ತರಷ್ಟೂ ದೊರೆಯದ ಬೇಬಿಯ ಗೆಲುವು ಖುಷಿ ನೀಡುವಂತದ್ದೇ ಸರಿ. ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಭಾರತದ ಗೂಢಚಾರ ವ್ಯವಸ್ಥೆ, ಪೋಲೀಸರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಬೇಬಿ ನಿಜಕ್ಕೂ ವಿಶೇಷ ಚಿತ್ರ.
ಬೇಬಿ ಗುಪ್ತ ಕಾರ್ಯಾಚರಣೆಗೆಂದು ರೂಪುಗೊಂಡ ಪುಟ್ಟ ಪೋಲಿಸ್‌ಪಡೆ. ಭಯೋತ್ಪಾದಕರನ್ನು ಮಟ್ಟಹಾಕಲು ಕಟಿಬದ್ಧವಾದ ಈ ಪಡೆ ಟರ್ಕಿಯಲ್ಲಿ ಕಾರ್ಯಾಚರಣೆ ಮಾಡುವುದರೊಂದಿಗೆ ಸಿನಿಮಾ ಶುರು. ಅಲ್ಲಿಂದಾಚೆಗೆ ನೇಪಾಳ, ಪಾಕಿಸ್ತಾನ ಕೊನೆಗೆ ಸೌದಿ ಅರೇಬಿಯಾದಲ್ಲಿ ಭಿನ್ನಭಿನ್ನ ಕಾರ್ಯಾಚರಣೆಗಳು. ನೀರಜ್ ಪಾಂಡೆಯ ಚಿತ್ರಕಥೆ, ನಿರ್ದೇಶನ ಅದೆಷ್ಟು ಬಿಗಿಯಾಗಿದೆಯೆಂದರೆ ಪ್ರಾಣ ಕುತ್ತಿಗೆಗೆ ಬಂದು ಸಿಕ್ಕಿಹಾಕಿಕೊಂಡುಬಿಡುತ್ತದೆ.
ಭಾರತೀಯ ಪೊಲೀಸರನ್ನು ಗಲಾಟೆ ಮುಗಿದಮೇಲೆ ಬರುವ ಅಬ್ಬೇಪಾರಿಗಳಂತೆ ಸಿನಿಮಾದಲ್ಲಿ ಇಷ್ಟುದಿನ ತೋರಿಸಲಾಗುತ್ತಿತ್ತು. ಮೊದಲಬಾರಿಗೆ ಅಮೆರಿಕನ್ ಸಿನಿಮಾಗಳಿಗೆ ಸರಿಸಾಟಿಯಾಗಿ ನಿಲ್ಲುವ ಅತ್ಯಂತ ನಿರ್ಭಾವುಕ ಸಿನಿಮಾ ಇದು. ಇಡಿಯ ಚಿತ್ರದಲ್ಲಿ ಒಂದೇ ಹಾಡು, ಭರಪೂರ ಸಾಹಸ. ಥಿಯೇಟರ್‌ನಿಂದ ಹೊರಬರುವಾಗ ಮಗುವೊಂದು ಅಪ್ಪನ ಬಳಿ ಇಂತಹ ಪೊಲೀಸ್ ಆಗಬೇಕೆಂದರೆ ಏನು ಮಾಡಬೇಕಪ್ಪ? ಎಂದು ಕೇಳುತ್ತಿತ್ತು. ಅಷ್ಟರಮಟ್ಟಿಗೆ ಸಿನಿಮಾ ಸಾರ್ಥಕ.
ಈ ಸಿನಿಮಾ ನೋಡುತ್ತಿರುವಾಗ ನನ್ನೊಳಗೆ ಹತ್ತಾರು ಸಿನಿಮಾ ಓಡುತ್ತಿತ್ತು. ಕಳೆದ ಡಿಸೆಂಬರ್ ೧೬ಕ್ಕೆ ಪೇಷಾವರದ ಶಾಲೆಯೊಂದರಲ್ಲಿ ತೆಹರೀಶ್-ಎ-ತಾಲಿಬಾನ್ ತಂಡ ದಾಳಿಗೈದು ಮಕ್ಕಳನ್ನು ಹತ್ಯೆಗೈದದ್ದು ನೆನಪಿದೆಯಲ್ಲ, ಅವತ್ತು ಪರ್ವೆಜ್ ಮುಶರಫ್‌ರಿಂದ ಹಿಡಿದು ಸರ್ತಾಜ್ ಅಜೀಜ್‌ರ ವರೆಗೆ ಪ್ರತಿಯೊಬ್ಬರೂ ಈ ಕೃತ್ಯದ ಹಿಂದೆ ಭಾರತದ ಕೈವಾಡ ಇದೆ ಎಂದು ಕೂಗಾಡಿದ್ದರು. ೧೯೭೧ರ ಡಿಸೆಂಬರ್ ೧೬ರ ನಂತರ ೨೦೧೪ರ ಡಿಸೆಂಬರ್ ೧೬ ಎಂಬ ಅನೇಕ ಟ್ವೀಟ್‌ಗಳು ಹರಿದಾಡಿದ್ದವು. ಮೊದಲನೆಯದು ಬಾಂಗ್ಲಾ ವಿಮೋಚನೆಯ ದಿವಸ ನೆನಪಿರಬೇಕಲ್ಲ!