ವೈಕುಂಠದಲ್ಲಿ ಕೋಲಾ(ಕ್ಲೋನಾ)ಹಲ-ವಿಡಂಬನಾ ಕಥೆ
– ಸುದರ್ಶನ್ ರಾವ್
ಕ್ಷೀರ ಸಾಗರದ ಮಧ್ಯದಲ್ಲಿ ಶೇಷ ಶಾಯಿಯಾಗಿ ಶ್ರೀ ಲಕ್ಷ್ಮಿಯ ಸೇವೆ ಪಡೆಯುತ್ತಿದ್ದ ಶ್ರೀಮನ್ನಾರಾಯಣನಿಗೆ ಡಿಸ್ಟರ್ಬ್ ಮಾಡುವ ಇರಾದೆ ಜಯ ವಿಜಯರಿಗೆ ಖಂಡಿತಾ ಇರಲಿಲ್ಲ. ತ್ರೇತಾ ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡಿದ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದ ಅವನು ಯಾವ ಕಿರಿ ಕಿರಿಯನ್ನೂ ನಿರೀಕ್ಷಿಸುತ್ತಿರಲಿಲ್ಲ. ಜಾಗತಿಕ ತಾಪಮಾನ ಏರುತ್ತಿರುವ ತೆರದಲ್ಲೇ ಮಾನವರ ಅನಾಚಾರಗಳೂ ಹೆಚ್ಚುತ್ತಿರುವುದು ಅವನಿಗೆ ತಿಳಿಯದ ವಿಷಯವಾಗಿರದಿದ್ದರೂ ಪ್ರಪಂಚವನ್ನು ಹಾಲು ಕಾಯಿಸಿದಂತೆ ತನ್ನಷ್ಟಕ್ಕೆ ತಾನು ಕಾಯ್ದು ಕೊಳ್ಳಲಿ, ಉಕ್ಕಿದಾಗ ನೋಡೋಣ ಎಂಬ ಎಣಿಕೆ ಅವನದು.ಅದೂ ಅಲ್ಲದೆ ದೇವಸ್ಥಾನಗಳ ಹುಂಡಿಯಲ್ಲಿ ಹಣದ ಮಹಾಪೂರವೇ ಹರಿಯುತ್ತಿರಲಾಗಿ ಧರ್ಮಕ್ಕೆ ಚ್ಯುತಿ ಬಂದಿರಲಾರದೆಂದು ಅವನ ಊಹೆ. ಇಷ್ಟಕ್ಕೂ ತಿರುಪತಿಯ ಹುಂಡಿಯಿಂದ ಕುಬೇರನ ಸಾಲಕ್ಕೆ ಹಣ ಚುಕ್ತಾ ಆಗುತ್ತಿರಲು ಒಂದು ರೀತಿಯ ನಿರಾಳವೇ ಅವನಲ್ಲಿತ್ತು.
ಆದರೆ ಅಂದು ಬೆಳ್ಳಂಬೆಳಿಗ್ಗೆಯೇ ಭೂದೇವಿ ಬಹಳ ಅಸ್ತವ್ಯಸ್ತ ವೇಷದಲ್ಲಿ ವಿಷ್ಣುದರ್ಶನಕ್ಕಾಗಿ ಬಂದಳು. ಸ್ವಾಮಿ ಇನ್ನೂ ಮಲಗಿರಬಹುದೆಂದೇ ದ್ವಾರಪಾಲಕರ ಎಣಿಕೆ. ತಾನು ತನ್ನ ಪತಿಯೊಡನೆ ಮಾತುಕತೆ ನಡೆಸಬೇಕಾಗಿದೆಯೆಂದೂ, ತುರ್ತಾಗಿ ತನಗೆ ಬಾಗಿಲು ತೆಗೆಯಬೇಕೆಂದೂ ಆಗ್ರಹಿಸಿದಳು. ಜಯ-ವಿಜಯರಿಗೆ ಧರ್ಮ ಸಂಕಟ. ಬಿಟ್ಟ್ರೂ ತೊಂದರೆ ಬಿಡದೇ ಇದ್ದರೂ ತೊಂದರೆ.’ಇತ್ತ ಹಾವು ಅತ್ತ ಹುಲಿ ’ ಎಂಬ ಪರಿಸ್ಥಿಗೆ ಸಿಲುಕಿ ಹಲುಬಿದರು. ಸನಕಾದಿ ಮುನಿಗಳ ಶಾಪಕ್ಕೆ ತುತ್ತಾಗಿ, ಭೂಭಾರ ಇಳಿಸಲು ದುಷ್ಟಾತಿ ದುಷ್ಟರಾಗಿ ಜನ್ಮ ತಾಳಿ ಹತರಾಗಿದ್ದ ನೆನಪು ಇನ್ನೂ ಮಾಸಿರಲಿಲ್ಲ. ಮುಖ ಮುಖ ನೋಡಿಕೊಂಡು ತಮ್ಮ ಹಣೆ ಬರಹವನ್ನು ಹಳಿಯುತ್ತಾ ಬಾಗಿಲು ತೆಗೆದು ಭೂದೇವಿಯನ್ನು ಒಳಗೆ ಬಿಟ್ಟರು.