ದಹಿಸಬೇಕಾಗಿರುವುದು ಧರ್ಮಗ್ರಂಥವನ್ನಲ್ಲ ಸಂಕುಚಿತ ಮನಸ್ಸಿನ ತ್ಯಾಜ್ಯವನ್ನು!
– ಸಂದೇಶ್.ಎಚ್.ನಾಯ್ಕ್ ಹಕ್ಲಾಡಿ,ಕುಂದಾಪುರ
ಯಾವ ದೇಶ ತನ್ನ ಸಂಸ್ಕೃತಿ,ಸಂಸ್ಕಾರ, ಆಚಾರ, ವಿಚಾರಗಳಂತಹ ಮೇರು ಮೌಲ್ಯಗಳ ಮೂಲಕ ಜಗತ್ತಿನ ಜನಮಾನಸದಲ್ಲಿ ವೈಶಿಷ್ಟ್ಯಪೂರ್ಣ ಹೆಗ್ಗಳಿಕೆಗೆ ಭಾಜನವಾಗಿದೆಯೋ ಅದೇ ದೇಶದಲ್ಲಿನ ಬಹುಪಾಲು ನಾಗರೀಕರ ಮನಸ್ಸಿನಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ಹಾಗೂ ಆಹ್ಲಾದತೆಗಳನ್ನು ಪಸರಿಸುವ ಧರ್ಮ, ಧಾರ್ಮಿಕತೆಯ ಅಂಶಗಳೆಂದರೆ ಕೆಲವು ವಿಚಾರವಾಧಿಗಳು ಹಾಗೂ ಪ್ರಗತಿಪರರಿಗೆ ಅದೇಕೋ ಕಡು ದ್ವೇಷ. ದೇವರು, ಆರಾಧನೆ, ಪೂಜೆ, ಪುನಸ್ಕಾರ, ಧರ್ಮಗ್ರಂಥಗಳೆಂಬ ಶಬ್ಧಗಳು ಅಂತಹವರ ಕಿವಿಗೆ ಬೀಳುತ್ತಲೇ ಕಾದ ಕಬ್ಬಿಣವನ್ನು ಕಿವಿಗೆ ಸುರಿದಂತೆ ವರ್ತಿಸಲಾರಂಭಿಸುತ್ತಾರೆ. ತಮ್ಮ ವೈಚಾರಿಕ ಹೊಳಹುಗಳಷ್ಟೇ ಸಾರ್ವಕಾಲಿಕವೆಂಬ ತಪ್ಪುಗ್ರಹಿಕೆಯನ್ನೇ ಸದಾ ಸಮಾಜದ ಮೇಲೆ ಹೇರುವ ಹಾಗೂ ಇನ್ನುಳಿದವೆಲ್ಲವೂ ದೋಷಪೂರಿತ, ಅಪಾಯಕಾರಿಯೆಂಬಂತೆ ಬಿಂಬಿಸುವ ನಿರಂತರ ಪ್ರಯತ್ನದಲ್ಲಿ ತೊಡಗಿರುವವರು ಕಟ್ಟುವುದಕ್ಕಿಂತಲೂ ಕೆಡವುದು, ಒಡೆಯುವುದು ಹಾಗೂ ಬೀದಿಗೆ ಬೀಳಿಸಿ ವಿಕೃತ ಖುಷಿ ಪಡುವುದರಲ್ಲೇ ತಮ್ಮ ಉದ್ಧೇಶ ಈಡೇರಿಸಿಕೊಳ್ಳಬಲ್ಲೆವೆಂಬ ಅನಾರೋಗ್ಯಕರ ಮನಸ್ಥಿತಿಯೊಂದನ್ನು ಬೆಳೆಸಿಕೊಂಡಿದ್ದಾರೆ ಹಾಗೂ ಅದನ್ನು ಒತ್ತಾಯಪೂರ್ವಕವಾಗಿ ಸಮಾಜದ ಮೇಲೆ ಹೇರುವ ವಿಫಲ ಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಒಂದು ಭಾಗವೇ ‘ಭಗವದ್ಗೀತೆ’ಗೆ ಬೆಂಕಿ ಇಡಲು ಮುಂದಾಗಿರುವ ಆಕ್ರಮಣಕಾರಿ ಮನೋಪ್ರವೃತ್ತಿಯ ದುರಹಂಕಾರಿ ವರ್ತನೆ.
ಸಿಕ್ಕ ವೇದಿಕೆಯ ಘನತೆ ಗಾಂಭೀರ್ಯತೆಗೆ ನ್ಯಾಯ ಒದಗಿಸದೆ ತಮ್ಮ ವೈಯಕ್ತಿಕ ಅಸ್ತಿತ್ವ ಹಾಗೂ ವೈಚಾರಿಕ ಧೋರಣೆಯ ಚಲಾವಣೆಯನ್ನು ಕಾಯ್ದುಕೊಳ್ಳಲೋಸುಗ ಸಮಾಜೋದ್ಧಾರದ ಸೋಗು ತೊಟ್ಟು ಸದಾ ಅನ್ಯರ ಭಾವನೆಗಳನ್ನು ಅಪಮಾನಿಸುತ್ತಾ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುವವರ ವರ್ತನೆಯಲ್ಲಿ ಢಾಳಾಗಿ ಗೋಚರಿಸುವುದು ವಿವೇಕ ಹಾಗೂ ವಿವೇಚನೆಗಳ ಕೊರತೆ. ಈ ಅಪಭ್ರಂಶ ವರ್ತನೆಯನ್ನು ಅನುಮೋದಿಸುವ, ಬೆಂಬಲಿಸುವ ಸಣ್ಣ ಹಿಂಬಾಲಕರ ಗುಂಪು ವೇದಿಕೆ ಮುಂದಿದ್ದರಂತೂ ಮುಗಿದೇ ಹೋಯಿತು. ಅವರ ಮಾತು, ಕೃತಿಗಳ ಮೇಲಿನ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಾರೆ. ಆ ಮೂಲಕ ತಮ್ಮಲ್ಲಡಗಿರುವ ಅಸಹಿಷ್ಣುತೆ, ಸಂಕುಚಿತತೆಗಳನ್ನು ಮತ್ತೆ ಮತ್ತೆ ಜಾಹೀರುಗೊಳಿಸುತ್ತಾರೆ.
ಮತ್ತಷ್ಟು ಓದು