ವಿಷಯದ ವಿವರಗಳಿಗೆ ದಾಟಿರಿ

ಜೂನ್ 5, 2015

2

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೨

‍ನಿಲುಮೆ ಮೂಲಕ

– ವಿನಾಯಕ ಹಂಪಿಹೊಳಿ

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೧

ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ ರಿಲಿಜನ್ನುಗಳಲ್ಲಿ ತರ್ಕ:

ರಿಲಿಜನ್ನುಗಳಲ್ಲಿ ತರ್ಕಕ್ಕೆ ನಂಬಿಕೆಯ ನಂತರದ ಸ್ಥಾನವಿದೆ. ನಂಬಿಕೆಗೆ ಪ್ರಥಮ ಪ್ರಾಶಸ್ತ್ಯ. ನಂಬಿಕೆಗೂ ತರ್ಕಕ್ಕೂ ವಿರೋಧಾಭಾಸವಿದ್ದಲ್ಲಿ ನಂಬಿಕೆಯೇ ಸತ್ಯ. ತರ್ಕಕ್ಕೆ ಅಲ್ಲಿ ಜಾಗವಿಲ್ಲ. ತರ್ಕದಿಂದ ಭಗವಂತನ ದರ್ಶನವೂ ಆಗುವದಿಲ್ಲ ಮತ್ತು ತರ್ಕದಿಂದ ಸ್ವರ್ಗಪ್ರಾಪ್ತಿಯೂ ಇಲ್ಲ. ತರ್ಕವೇನಿದ್ದರೂ, ಉಳಿದ ರಿಲಿಜನ್ನುಗಳಿಗಿಂತ ತಮ್ಮ ರಿಲಿಜನ್ನು ಹೇಗೆ ಶ್ರೇಷ್ಠ ಎಂಬುದನ್ನು ತೋರಿಸಲು, ಮತ್ತು ತಮ್ಮ ರಿಲಿಜನ್ನುಗಳ ಮೂಲ ಕಲ್ಪನೆಗಳು ಮಾತ್ರ ಪರಮ ಸತ್ಯ ಎಂದು ಸಾಬೀತು ಪಡಿಸಲು ಅಷ್ಟೇ. ಉದಾಹರಣೆಗಾಗಿ ದೇವನು ಒಬ್ಬನೇ ಎಂಬುದನ್ನು ಸೆಮೆಟಿಕ್ ರಿಲಿಜನ್ನುಗಳು ನಂಬುತ್ತವೆ. ಮತ್ತು ಅದಕ್ಕೆ ಸಾಕಷ್ಟು ತರ್ಕಗಳನ್ನೂ ನೀಡುತ್ತವೆ. ಆದರೆ ದೇವನ ನಾಮ ಮತ್ತು ಗುಣಗಳ ಬಗ್ಗೆ ವಿರೋಧಾಭಾಸಗಳಿವೆ. ಪ್ರತಿಯೊಂದು ರಿಲಿಜನ್ನೂ ತಮ್ಮ ಪ್ರವಾದಿಗಳೇ ಸತ್ಯ ಎಂದು ಸಾರುತ್ತವೆ. ಮತ್ತು ಉಳಿದ ರಿಲಿಜನ್ನುಗಳ ಮುಂದೆ ಅದನ್ನೇ ತರ್ಕಬದ್ಧವಾಗಿ ಸಾಧಿಸುತ್ತವೆ.

ಆದರೂ ರಿಲಿಜನ್ನಿನ ಅನುಯಾಯಿಗಳು ತರ್ಕವನ್ನು ತಮ್ಮ ರಿಲಿಜನ್ನಿನ ಗ್ರಂಥಗಳ ಮೇಲೆ ಬಿಟ್ಟುಕೊಳ್ಳುವದಿಲ್ಲ. ಉದಾಹರಣೆಗೆ ಹಳೇ ಒಡಂಬಡಿಕೆಯೇ ಸತ್ಯ ಎಂಬುದು ಯಹೂದಿಗಳು ನಂಬುತ್ತಾರೆ ಅದಕ್ಕೆ ಅವರು ತರ್ಕವನ್ನು ಬೇಡುವದಿಲ್ಲ. ಆದರೆ ಹೊಸ ಒಡಂಬಡಿಕೆಯನ್ನು ಒಪ್ಪಿಕೊಳ್ಳಲು ತರ್ಕದ ಸಾಧನೆಯನ್ನು ಅಪೇಕ್ಷಿಸುತ್ತಾರೆ. ಮೊಹಮದ್ ಪೈಗಂಬರ್ ಅಂತಿಮ ಪ್ರವಾದಿ ಎಂಬುದನ್ನು ಮುಸ್ಲಿಮರು ತಮ್ಮ ಗ್ರಂಥದಿಂದಲೇ ಒಪ್ಪಿರುತ್ತಾರೆ. ಆದರೆ ಉಳಿದ ರಿಲಿಜನ್ನಿನವರಿಗೂ ಅದನ್ನು ಮನವರಿಕೆ ಮಾಡಲು ತರ್ಕವನ್ನಾಶ್ರಯಿಸುತ್ತಾರೆ. ಉಳಿದ ಗ್ರಂಥಗಳಲ್ಲಿನ ಇತಿಮಿತಿಗಳನ್ನು ತೋರಿಸಲು ತರ್ಕವನ್ನು ಹಿಡಿಯುತ್ತಾರೆ. ಆದರೆ ತಮ್ಮ ಗ್ರಂಥಗಳ ಇತಿಮಿತಿಗಳನ್ನು ತೋರಿಸುವ ಅದೇ ತರ್ಕವನ್ನು ಅಲ್ಲಗೆಳೆದು ತಮ್ಮ ಗ್ರಂಥವು ತರ್ಕಾತೀತವೆಂದು ಸಾರುತ್ತಾರೆ.

ಹೀಗಾಗಿಯೇ ಸೆಮೆಟಿಕ್ ರಿಲಿಜನ್ನು ಬೆಳೆದ ನಾಡುಗಳಲ್ಲಿ, ರಿಲಿಜನ್ನೇ ಬೇರೆ, ಫಿಲಾಸಫಿಯೇ ಬೇರೆ. ಫಿಲಾಸಫಿಯನ್ನು ರಿಲಿಜನ್ನಿನ ಗ್ರಂಥಗಳ ಆಧಾರದಲ್ಲಿ ಸಾಬೀತು ಮಾಡಲಾಗದು. ಅಂತೆಯೇ, ಫಿಲಾಸಫಿಯ ತತ್ತ್ವ ರಿಲಿಜನ್ನಿನೊಡನೆ ಬೆರೆಯುವದರಿಂದ ರಿಲಿಜನ್ನಿಗೆ ಹೆಚ್ಚಿನ ಮಾನ್ಯತೆಯೂ ಸಿಗದು. ಫಿಲಾಸಫಿ ತರ್ಕದಿಂದ ಸಿದ್ಧವೂ ಆಗಬಹದು, ಇಲ್ಲವೇ ತರ್ಕದಲ್ಲಿ ಸೋಲಲೂಬಹುದು. ಆದರೆ ರಿಲಿಜನ್ನಿನ ಗ್ರಂಥಗಳು ದೇವವಾಣಿಯಾಗಿರುವದರಿಂದ ಸೋಲಬಾರದು, ಹೀಗಾಗಿಯೇ ಅವುಗಳು ತರ್ಕದ ಹೊಡೆತಕ್ಕೆ ನಿಲ್ಲಲಿ ಬಿಡಲಿ, ಒಪ್ಪಿಕೊಳ್ಳಲೇಬೇಕು.

ಇದಕ್ಕೆ ಕಾರಣವಿದೆ. ಸೆಮೆಟಿಕ್ ರಿಲಿಜನ್ನುಗಳು ಅನುಭವ ಪ್ರಧಾನ ಅಲ್ಲ. ಮೊಹಮದ್ ನೇ ಅಂತಿಮ ಪ್ರವಾದಿ ಎಂಬುದು ಪುಸ್ತಕದಲ್ಲಿರುವದರಿಂದ ಸತ್ಯವೇ ಹೊರತು ಒಬ್ಬ ಮುಸ್ಲಿಮನು ಧ್ಯಾನಸ್ಥನಾಗಿ ಅಲ್ಲಾಹುವಿನ ಸನ್ನಿಧಿಯಲ್ಲಿ ಇದನ್ನರಿಯುವದಿಲ್ಲ. ಅಂಥ ಅನುಭವಗಮ್ಯ ಸಿದ್ಧಾಂತಗಳ ಕಲ್ಪನೆಯೇ ಸೆಮೆಟಿಕ್ ರಿಲಿಜನ್ನುಗಳಲ್ಲಿ ಕಾಣಬರುವದಿಲ್ಲ. ಹೀಗಾಗಿ ಅನುಭವ ವಿರುದ್ಧವಾದ ವಾಕ್ಯಗಳು ತಮ್ಮ ಗ್ರಂಥಗಳಲ್ಲಿ ಬಂದಾಕ್ಷಣ ತರ್ಕವನ್ನು ಕೈಬಿಟ್ಟು ಏಕಮಾನ್ಯತೆಯಿಂದ ಗ್ರಂಥಗಳನ್ನು ಒಪ್ಪಿಕೊಳ್ಳುತ್ತಾರೆ. ಇಲ್ಲಿ ಭಗವಂತನ ಇಚ್ಛೆಯನ್ನು ತರ್ಕವನ್ನು ಮೀರಿ ನಿಲ್ಲಲು ಉಪಯೋಗಿಸುತ್ತಾರೆ.

ಒಂದು ವಾದವನ್ನು ಇಲ್ಲಿ ಪರಿಗಣಿಸುವದಾದರೆ, ಇಲ್ಲಿ ಒಂದೇ ಜೀವನ ಅದು ಪರೀಕ್ಷೆಯ ತರಹ. ಭಗವಂತ ಹೇಳಿದ ರೀತಿಯಲ್ಲಿ ಬದುಕಿದರೆ ಸ್ವರ್ಗ ಇಲ್ಲವಾದಲ್ಲಿ ಶಾಶ್ವತ ನರಕ ಎಂದು ನಂಬುವ ಸೆಮೆಟಿಕ್ ರಿಲಿಜನ್ನಿನ ಅನುಯಾಯನ್ನೇ ಪ್ರಶ್ನಿಸೋಣ. ಇರುವದು ಒಂದೇ ಜೀವನ ಪರೀಕ್ಷೆಯಾಗಿದ್ದಲ್ಲಿ, ಎಲ್ಲರಿಗೂ ಸಿಲೆಬಸ್ ಸಿಕ್ಕಿರಬೇಕಿತ್ತಲ್ಲವೇ? ೧೭-೧೮ನೇ ಶತಮಾನದಲ್ಲಿಯೂ ಭಗವಂತ ತನ್ನ ಪ್ರವಾದಿಯ ಕೈಲಿ ಕಳಿಸಿದ ಸಂದೇಶ ಪುಸ್ತಕ ಭಾರತದ ಎಲ್ಲ ಕುಗ್ರಾಮಗಳನ್ನು ತಲುಪಲೇ ಇಲ್ಲ. ಅಂಥ ಕುಗ್ರಾಮಗಳಲ್ಲಿ ಜೀವನ ಮುಗಿಸಿದ ಜನರಿಗೆ ನರಕವನ್ನು ನೀಡುವದು ಯಾವ ನ್ಯಾಯ? ಈ ತರ್ಕಕ್ಕೆ ಆತನ ನಂಬಿಕೆ ಉತ್ತರಿಸಲು ಎಡುವುತ್ತದೆ. ಹೀಗಾಗಿ ತರ್ಕದ ಹೊಡೆತದಿಂದ ತಪ್ಪಿಸಿಕೊಳ್ಳಲು, ತನ್ನ ನಂಬಿಕೆಯನ್ನು ಉಳಿಸಿಕೊಳ್ಳಲು, ಸ್ವರ್ಗ-ನರಕಗಳ ನಿರ್ಧಾರ ಅಂತಿಮವಾಗಿ ಭಗವಂತ ಇಚ್ಛೆಗೇ ಸೇರಿದ್ದು, ಎಲ್ಲರಿಗೂ ಪವಿತ್ರ ಗ್ರಂಥವು ಸಿಗದೇ ಇದ್ದುದು ಕೇವಲ ಭಗವಂತನ ಇಚ್ಛೆ ಎಂದಷ್ಟೇ ಹೇಳಿ ಹೋಗಿ ಬಿಡುತ್ತಾರೆ. ಭಗವಂತನ ಇಚ್ಛೆ ಎಂಬ ಕವಚ ಸೆಮೆಟಿಕ್ ರಿಲಿಜನ್ನಿನ ಅನುಯಾಯಿಗಳನ್ನು ತರ್ಕದ ಬಾಣಗಳಿಂದ ರಕ್ಷಿಸುತ್ತದೆ.

ಎಲ್ಲ ರಿಲಿಜನ್ನುಗಳೂ ನಿಜವಾಗಿದ್ದರೆ ಭಗವಂತನ ಸ್ವರೂಪ ವರ್ಣನೆಯಲ್ಲಿ ಎಲ್ಲವುಗಳಲ್ಲಿಯೂ ಏಕತಾನತೆ ಇರಬೇಕಿತ್ತು. ಆದರೆ ಭಗವಂತನ ಹೆಸರುಗಳಿಂದ ಹಿಡಿದು ಅವನ ಗುಣಗಳು ಕಾರ್ಯಗಳಾದಿಯಾಗಿ ಎಲ್ಲದರಲ್ಲಿಯೂ ವೈವಿಧ್ಯತೆಯಿದೆ. ಈ ವೈವಿಧ್ಯತೆಯನ್ನೂ ಕೆಲವು ರಿಲಿಜನ್ನುಗಳು ಮಾನವನಿಂದಾದ ಮಾರ್ಪಾಟುಗಳು ಎಂದು ಹೇಳಿ ಜಾರಿಕೊಂಡಿವೆ. ಆದರೆ ಪ್ರತಿ ರಿಲಿಜನ್ನಿನ ಅನುಯಾಯಿಯೂ ತನ್ನ ಪವಿತ್ರ ಗ್ರಂಥ ಮಾರ್ಪಾಡಾಗದೇ ಇದ್ದದ್ದು ಎಂದೇ ವಾದಿಸುತ್ತಾರೆ. ಮತ್ತು ಪ್ರತಿ ರಿಲಿಜನ್ನು ತನ್ನ ಹಿಂದಿನ ರಿಲಿಜನ್ನಿನ ಪ್ರವಾದಿಗಳನ್ನು ಮಾನ್ಯ ಮಾಡುತ್ತಲೇ, ಅವರ ನಿಜವಾದ ಬೋಧನೆ ತಮ್ಮ ಗ್ರಂಥದಲ್ಲಿಯೇ ಇದೆ ಎಂದು ಸಾರುತ್ತಾರೆ. ಇಲ್ಲಿಯೂ ತರ್ಕವನ್ನು ಉಪಯೋಗಿಸುತ್ತಾರೆ.

ಜಗತ್ತು ಭಗವಂತನ ಅಂಶವಲ್ಲ ಎಂದು ಸೆಮೆಟಿಕ್ ರಿಲಿಜನ್ನುಗಳು ವಾದಿಸುತ್ತವೆ. ಆದರೆ ಜಗತ್ತು ಕೂಡ ಭಗವಂತನೇ ಅಥವಾ ಭಗವಂತನ ಅಂಶವೇ ಎಂದು ಭಾರತೀಯ ದರ್ಶನಗಳು ವಾದಿಸುತ್ತವೆ. ಭಾರತೀಯ ದರ್ಶನವೊಂದನ್ನು ಅನುಸರಿಸುವವನೊಬ್ಬ ಸೆಮೆಟಿಕ್ ರಿಲಿಜನ್ನಿನ ಅನುಯಾಯಿಯೊಬ್ಬನೊಡನೆ ತಾರ್ಕಿಕವಾಗಿ ವಾದ ಮಾಡುತ್ತಾನೆ ಎಂದಿಟ್ಟುಕೊಳ್ಳಿ. “ನೋಡಿ ಮಡಿಕೆ ಎಂಬ ಕಾರ್ಯಕ್ಕೆ ಎರಡು ಕಾರಣಗಳು. ಒಂದು ಮಣ್ಣು ಎಂಬ ಉಪಾದಾನ ಕಾರಣ ಮತ್ತು ಕುಂಬಾರ ಎಂಬ ನೈಮಿತ್ತಿಕ ಕಾರಣ ಎಂದು. ಮಣ್ಣಿನಿಂದ ಬೇರೆಯಾಗಿ ಮಡಿಕೆ ಇರಲಾರದು ಆದರೆ ಕುಂಬಾರನಿಂದ ಬೇರೆಯಾಗಿ ಸ್ವತಂತ್ರವಾಗಿ ಇರಬಲ್ಲದು ಮತ್ತು ಮಣ್ಣು ತನಗೆ ತಾನೇ ಸ್ವತಂತ್ರವಾಗಿ ಮಡಕೆಯಾಗಲಾರದು, ಹೀಗಾಗಿ ಭಗವಂತ ಉಪಾದಾನ ಕಾರಣವಲ್ಲದಿದ್ದರೆ ಯಾವುದರಿಂದ ಜಗತ್ತನ್ನು ನಿರ್ಮಿಸಿದ? ಆ “ಯಾವುದ”ನ್ನು ಯಾವುದರಿಂದ ನಿರ್ಮಿಸಿದ? ತನ್ನಿಂದಲೇ ಜಗತ್ತನ್ನು ನಿರ್ಮಿಸಿದ್ದರೆ ಅವನು ಉಪಾದಾನ ಕಾರಣವೂ ಎಂದಾಯಿತಲ್ಲವೇ, ಅಂದರೆ ಕಣಕಣವೂ ಭಗವಂತ ಅಂಶವೇ ಎಂದಾಯಿತಲ್ಲವೇ? ಅಲ್ಲಿಗೆ ಜಗತ್ತಿನ ವಸ್ತುಗಳೂ ಕೂಡ ಭಗವಂತನ ಸ್ವರೂಪವನ್ನೋ, ಭಗವಂತನ ಅಂಶವನ್ನೋ ಪಡೆದುಕೊಂಡಿದೆಯಲ್ಲವೇ?”

ಆದರೆ ಈ ವಾದಕ್ಕೆ ಪ್ರತಿ ತರ್ಕ ಹೂಡಿ ಸೋಲಿಸಲು ಸೆಮೆಟಿಕ್ ರಿಲಿಜನ್ನಿಗೆ ಸಾಧ್ಯವಿಲ್ಲ. ಹೀಗಾಗಿ ಅದರ ಅನುಯಾಯಿ ಅದರಿಂದ ತಪ್ಪಿಸಿಕೊಳ್ಳಲು, “ಭಗವಂತ ತನ್ನಿಷ್ಟದಂತೆ ಜಗತ್ತಿನ ನಿರ್ಮಾಣ ಮಾಡಿದ್ದಾನೆ. ಅದನ್ನು ಕೇವಲ ತರ್ಕದಿಂದ ಅರಿಯಲಾಗುವದಿಲ್ಲ. ಅವನ ಪ್ರೀತಿಯನ್ನು ಗಳಿಸಿದರೆ ಅರಿಯಲು ಸಾಧ್ಯ. ಹಾಗೆ ಅವನ ಪ್ರೀತಿ ಗಳಿಸಲು ಅವನು ಕಳಿಸಿದ ಕೊನೆಯ ಪ್ರವಾದಿಯ ಸಂದೇಶವನ್ನು ಸಾರುವ ಪುಸ್ತಕವನ್ನು ಓದಿ ಅದನ್ನು ಅನುಸರಿಸು” ಎಂದು ಭಗವಂತನ ಇಚ್ಛಾಕವಚವನ್ನು ಅಡ್ಡ ಹಿಡಿದು ತರ್ಕದ ಬಾಣದಿಂದ ತಪ್ಪಿಸಿಕೊಂಡುಬಿಡುತ್ತಾರೆ. ಹೀಗೆ ಸೆಮೆಟಿಕ್ ರಿಲಿಜನ್ನುಗಳು ಒಂದು ಹಂತದಲ್ಲಿ ತರ್ಕದಲ್ಲಿ ಬೀಳುತ್ತವೆ. ಮನುಷ್ಯನ ಕೆಲವು ಕಲ್ಪನೆ ಅನುಮಾನಗಳಿಂದಾಚೆ ಈ ರಿಲಿಜನ್ನುಗಳ ಪುಸ್ತಕಗಳು ತರ್ಕದ ಹೊಡೆತವನ್ನು ತಡೆಯಲಾರವು. ಹೀಗಾಗಿಯೇ, ಆ ತರ್ಕದಿಂದ ತಪ್ಪಿಸಿಕೊಳ್ಳಲೋಸುಗವೇ, ಆ ಪುಸ್ತಕಗಳಲ್ಲಿ ಅವಿಶ್ವಾಸಿಗಳಿಗೆ ಘೋರ ನರಕ, ಶಾಶ್ವತ ದುಃಖ ಹೀಗೆಲ್ಲ ಉಪದೇಶಗಳನ್ನು ನೀಡಿವೆ. ಸೆಮೆಟಿಕ್ ರಿಲಿಜನ್ನುಗಳ ಪ್ರಕಾರ ಭಗವಂತನಲ್ಲಿ ತನ್ನನ್ನು ಆರಾಧಿಸುವವರ ಮೇಲೆ ಪ್ರೀತಿ, ತನ್ನನ್ನು ಆರಾಧಿಸದವರ ಮೇಲೆ ಕ್ರೋಧ, ತನಗಿಷ್ಟ ಬಂದ ಹಾಗೆ ಮಾಡುವ ಸ್ವೇಚ್ಛೆ ಇವೆಲ್ಲವೂ ತುಂಬಿಕೊಂಡಿವೆ.

2 ಟಿಪ್ಪಣಿಗಳು Post a comment
  1. ಜೂನ್ 5 2015

    ಪರಗತಿಪರರು ಓದಬೇಕಾದ ಲೇಖನ

    ಉತ್ತರ

Trackbacks & Pingbacks

  1. ವಿಜ್ಞಾನ, ರಿಲಿಜನ್ನು ಮತ್ತು ದರ್ಶನಗಳಲ್ಲಿ ತರ್ಕದ ಸ್ಥಾನ – ಭಾಗ ೩ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments