ವರ್ಣಮಯ ಬದುಕಿಗೆ ಸಮಚಿತ್ತದ ವಿದಾಯ
ತನ್ನ ಎಂಬತ್ತೆರಡನೆ ವಯಸ್ಸಿನಲ್ಲಿ ಕ್ಯಾನ್ಸರ್‍ನಿಂದ ತೀರಿಕೊಂಡ ಜಗತ್ಪ್ರಸಿದ್ಧ ನರವಿಜ್ಞಾನಿ ಮತ್ತು ಜನಪ್ರಿಯ ವಿಜ್ಞಾನ ಬರಹಗಾರ ಆಲಿವರ್ ಸ್ಯಾಕ್ಸ್, ತನ್ನ ಇಳಿಗಾಲದಲ್ಲಿ ಬರೆದುಕೊಂಡ ಚರಮಗೀತೆ. ಡಾ. ಆಲಿವರ್ ಮತ್ತು ಡಾ. ಕಲ್ಬುರ್ಗಿ ತೀರಿಕೊಂಡದ್ದು ಒಂದೇ ದಿನ.
ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ
ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಾನು ಸುದೃಢ, ಗಟ್ಟಿಜೀವದ ಆರೋಗ್ಯವಂತನೆಂದು ಭಾವಿಸಿದ್ದೆ. 81ನೇ ಇಳಿವಯಸ್ಸಿನಲ್ಲೂ ಒಂದು ಮೈಲಿ ನೀರಲ್ಲಿ ಈಜಬಲ್ಲವನಾಗಿದ್ದೆ. ಆದರೆ, ಕೆಲವು ವಾರಗಳ ಹಿಂದೆಯಷ್ಟೇ ಪರೀಕ್ಷೆಯಲ್ಲಿ ತಿಳಿಯಿತು – ನನಗೆ ಯಕೃತ್ತಿನ ಕ್ಯಾನ್ಸರ್ ಬಂದಿದೆ. ಒಂಬತ್ತು ವರ್ಷಗಳ ಹಿಂದೆ ನನ್ನ ಕಣ್ಣುಗುಡ್ಡೆಯ ಮೇಲೊಂದು ಸಣ್ಣ ಟ್ಯೂಮರ್ ಬೆಳೆದಿತ್ತು. ಆಗ ಅದನ್ನು ಲೇಸರ್ ಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗಿ ಬಂದಿತ್ತು. ಅಲ್ಲದೆ, ಆ ಆಪರೇಶನ್ ಮಾಡಿಸಿಕೊಳ್ಳುವ ಮೂಲಕ ನಾನು ಆ ಕಣ್ಣಿನಲ್ಲಿ ಶಾಶ್ವತವಾದ ಅಂಧತ್ವವನ್ನೂ ಅನಪೇಕ್ಷಿತ ಉಡುಗೊರೆಯಾಗಿ ಪಡೆಯಬೇಕಾಯಿತು. ಅಂಥ ಆಪರೇಶನ್ ಮಾಡಿಸಿಕೊಳ್ಳುವ ಅರ್ಧಕ್ಕರ್ಧ ಜನರಿಗೆ ದೃಷ್ಟಿ ಹೋಗುವುದಿಲ್ಲ ಎಂದು ವೈದ್ಯರು ಭರವಸೆಯೇನೋ ಕೊಟ್ಟಿದ್ದರು. ಆದರೆ, ಅವರು ಹೇಳಿದ ಅರ್ಧ ಬಿಟ್ಟು ಮಿಕ್ಕರ್ಧ ಜನರ ಗುಂಪಿನಲ್ಲಿ ನಾನಿದ್ದೆನೆಂದು ನನಗಾಗ ಗೊತ್ತಿರಲಿಲ್ಲ. ಅದೃಷ್ಟಹೀನತೆ ಎನ್ನಬೇಕು!
ಆದರೇನಂತೆ, ನಾನೇನೂ ಸಾಯಲಿಲ್ಲವಲ್ಲ! ಅದಾಗಿ ಒಂಬತ್ತು ವರ್ಷಗಳ ಕಾಲ ಯಮನನ್ನು ವಂಚಿಸಿ ಬದುಕಿದ್ದೇನೆಂಬ ಹೆಮ್ಮೆಯಿದೆ ನನಗೆ. ಆದರೀಗ ಮತ್ತೆ ಮೃತ್ಯುವಿನ ಎದುರಾಎದುರು ಕೂತು ಸುಖಕಷ್ಟ ಕೇಳುವ ಪರಿಸ್ಥಿತಿ ಬಂದಿದೆ. ಕ್ಯಾನ್ಸರ್ ಗಡ್ಡೆ ಯಕೃತ್ತಿನ ಮೂರನೇ ಒಂದು ಭಾಗವನ್ನು ಆವರಿಸಿದೆ. ಅದರ ಬೆಳವಣಿಗೆಯನ್ನು ನಿಯಂತ್ರಿಸಬಹುದೇನೋ, ಆದರೆ, ಅದರ ಸಂಪೂರ್ಣ ನಾಶ ಈಗ ಸಾಧ್ಯವಿಲ್ಲದ ಹಂತಕ್ಕೆ ಬಂದುನಿಂತಿದೆ. ಸಾವು ಅನಿವಾರ್ಯ. ತಪ್ಪಿಸಿಕೊಳ್ಳುವಂತಿಲ್ಲ.
ಸಾವಿನ ಮನೆಯಲ್ಲಿ ಲಾಭದ ಲೆಕ್ಕಾಚಾರಗಳು
-ಡಾ. ಪ್ರವೀಣ ಟಿ. ಎಲ್. ಕುವೆಂಪು ವಿಶ್ವವಿದ್ಯಾನಿಲಯ
ನಾರಾಣಪ್ಪನ ಶವಸಂಸ್ಕಾರವನ್ನು ವಿರೋಧಿಸಿದ ಅಗ್ರಹಾರದವರು, ಆತನ ವೇಶ್ಯೆಯಾದ ಚಂದ್ರಿಯು ಆತನಿಗೆ ಸೇರಿದ ಬಂಗಾರವನ್ನು ತೆಗೆದುಕೊಟ್ಟ ತಕ್ಷಣ ಲಾಭದ ಲೆಕ್ಕಾಚಾರದಲ್ಲಿ ತೊಡಗುವ ಸನ್ನಿವೇಶವೊಂದನ್ನು ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಚಿತ್ರಿಸಿದ್ದಾರೆ. ಅವನು ಬ್ರಾಹ್ಮಣನೇ ಅಲ್ಲ, ವೈದಿಕ ರೀತಿಯ ಶವಸಂಸ್ಕಾರ ಮಾಡುವುದು ಸರಿಯಲ್ಲ ಎಂದವರೆಲ್ಲಾ, ಆತಕ್ಷಣದಿಂದ ಆತನು ಎಲ್ಲರಿಗಿಂತಲೂ ತಮಗೆ ಹತ್ತಿರದ ಸಂಬಂಧಿ ಎಂಬ ವರಸೆಯನ್ನು ಶುರುಮಾಡುತ್ತಾರೆ. ಅಲ್ಲಿ ನಡೆಯುವುದು ಸಾವಿನ ಕುರಿತ ಮರುಕವಲ್ಲ, ಬದಲಾಗಿ ತಮಗಾಗುವ ಲಾಭದ ಲೆಕ್ಕಾಚಾರ. ಇದೇ ಸನ್ನಿವೇಷ ಇಂದು ಕಲ್ಬುರ್ಗಿಯವರ ಹತ್ಯೆಯ ಸುತ್ತ ನಡೆಯುತ್ತಿರುವುದು ಗೋಚರವಾಗುತ್ತಿದೆ. ಅವರ ಹತ್ಯೆಯು ಅಮಾನವೀಯ ಕೃತ್ಯವಾಗಿದ್ದು, ಅದನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಿದೆ. ಈ ಕುರಿತು ಹಲವು ಲೇಖನಗಳು, ಚರ್ಚೆಗಳು ಈಗಾಗಲೇ ನಡೆದಿವೆ. ಈ ಹತ್ಯೆಯಿಂದ ಕನ್ನಡ ನಾಡಿನ ಚಿಂತನಾ ಪರಂಪರೆಗೆ ಬಹುದೊಡ್ಡ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ಆದರೆ ಈ ನಷ್ಟದ ನಡುವೆಯೂ ಕೆಲವರು ತಮ್ಮ ಲಾಭದ ಲೆಕ್ಕಾಚಾರದಲ್ಲಿ ಮುಳುಗಿರುವುದು ಕೆಟ್ಟ ಪರಂಪರೆಯೊಂದಕ್ಕೆ ನಾಂದಿಹಾಡುತ್ತಿರುವಂತಿದೆ.
ಮೊದಲನೆಯದಾಗಿ, ಹತ್ಯೆಯಾದ ತಕ್ಷಣವೇ ಕೆಲವು ಚಿಂತಕರು ಹಾಗೂ ಪ್ರಗತಿಪರ ಸಂಘಟನೆಗಳು ಹಿಂದೂ ಸಂಘಟನೆಗಳೇ ಈ ಕೃತ್ಯವನ್ನು ಎಸಗಿರುವುದೆಂದು ತೀರ್ಪಿಟ್ಟರು. ಕಲ್ಬುರ್ಗಿಯವರ ಜೊತೆ ವೈಮನಸ್ಸಿದ್ದವರೂ ಸಹ ಬಲಪಂಥೀಯರನ್ನು ಹಣಿಯಲು ಈ ಅವಕಾಶವನ್ನು ಬಳಸಿಕೊಂಡರು. ಆ ಮೂಲಕ ಉಗ್ರವಾದಕ್ಕಿಂತ ಹಿಂದೂ ಸಂಘಟನೆಗಳ ಕೃತ್ಯ ಹೀನವಾದುದು ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದರು. ಹಿರಿಯ ಚಿಂತಕರೊಬ್ಬರ ಹತ್ಯೆಯಾಗಿದ್ದರಿಂದ ಕನ್ನಡನಾಡು ದುಃಖತಪ್ತವಾಗಿದ್ದುದು ನಿಜ. ಆದರೆ ಅದನ್ನು ಯಾರು, ಯಾಕಾಗಿ ಮಾಡಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಬೇಕಿರುವ ವಿಚಾರ. ಇಂತಹ ಸೂಕ್ಷ್ಮವಿಚಾರಗಳ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಮರೆತು, ವಿರೋಧಿ ಪಂಥದವರ ಮೇಲೆ ಹಾಕಿ ಕೈತೊಳೆದುಕೊಂಡರು. ಅವರ ಈ ಪ್ರತಿಕ್ರಿಯೆಗಳು ಇಡೀ ಪ್ರಕರಣವನ್ನು ಬೇದಿಸಲು ದೊಡ್ಡ ಅಡ್ಡಿಯನ್ನುಂಟು ಮಾಡಿರುವುದು ಈಗಾಗಲೇ ವೇದ್ಯವಾಗಿದೆ. ಮತ್ತಷ್ಟು ಓದು
ಜಾತಿವಿನಾಶಕ್ಕಾಗಿ ಜಾತಿಸಂಘಟನೆಗಳೇ?
– ವೀಣಾ. E, ಕುವೆಂಪು ವಿಶ್ವವಿದ್ಯಾನಿಲಯ.
ಪ್ರಸ್ತುತ ಪ್ರತೀ ಜಾತಿಯೂ ಸಂಘಟನೆಯನ್ನು ಮಾಡಿಕೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ. ಈ ಜಾತಿ ಸಂಘಟನೆಯ ರಚನೆಗೆ ಎರಡು ಕಾರಣಗಳನ್ನು ನೀಡಲಾಗುತ್ತದೆ: 1. ಜಾತಿಗಳ ಅಸ್ಮಿತೆ(identity)ಯನ್ನು ಬಲಪಡಿಸಿಕೊಳ್ಳುವುದು. 2. ತಾರತಮ್ಯವನ್ನು ಹುಟ್ಟುಹಾಕುತ್ತಿರುವ ಜಾತಿವ್ಯವಸ್ಥೆಯನ್ನು ನಾಶಮಾಡುವುದು. ಆದರೆ ಮೇಲ್ನೋಟಕ್ಕೇ ಗೋಚರಿಸುವಂತೆ ಇವೆರಡೂ ಕಾರಣಗಳು ಪರಸ್ಪರ ತದ್ವಿರುದ್ಧವಾಗಿವೆ. ಅಂದರೆ ಜಾತಿ ಅಸ್ಮಿತೆಯನ್ನು ಬಲಪಡಿಸಿದರೆ ಜಾತಿವ್ಯವಸ್ಥೆ ನಾಶವಾಗುವುದಿಲ್ಲ. ಜಾತಿವ್ಯವಸ್ಥೆಯನ್ನು ನಾಶಮಾಡಬೇಕೆಂದರೆ ಜಾತಿ ಅಸ್ಮಿತೆಯನ್ನು ಬಲಪಡಿಸುವಂತಿಲ್ಲ. ಏಕೆಂದರೆ, ಜಾತಿಗಳ ಅಸ್ಮಿತೆಯನ್ನು ಗಟ್ಟಿಗೊಳಿಸುವುದು ಹೇಗೆ ಜಾತಿವ್ಯವಸ್ಥೆಯನ್ನು ನಾಶಾಮಾಡಿದಂತಾಗುತ್ತದೆ?
ಜಾತಿಸಂಘಟನೆಗಳ ರಚನೆಗೆ ಒತ್ತುಕೊಡುವ ಈ ಎರಡು ಅಂಶಗಳನ್ನು ಒಂದೊಂದಾಗಿ ಪರಿಶೀಲಿಸುವ. ಮೊದಲನೆಯದಾಗಿ, ಜಾತಿ ಅಸ್ಮಿತೆಯನ್ನು ಬಲಪಡಿಸುವುದು: ಒಂದು ಸಮುದಾಯಕ್ಕೆ ಸೇರಿದ ಹಲವಾರು ಜಾತಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳ ಮೂಲಕ ಗುರುತಿಸಿಕೊಳ್ಳುತ್ತಿವೆ. ಅವುಗಳನ್ನೆಲ್ಲಾ ಒಟ್ಟುಗೂಡಿಸಿ ಒಂದು ಪ್ರಬಲ ಅಸ್ಮಿತೆಯಾಗಿ ಬಲಪಡಿಸಲು ಸಂಘಟನೆಗಳು ಅಗತ್ಯ ಎನ್ನುತ್ತಾರೆ. ಉದಾಹರಣೆಗೆ ನೊಣಬ, ಸಾಧರು, ಪಂಚಮಸಾಲಿ, ಜಂಗಮ ಮುಂತಾದವುಗಳನ್ನು ಲಿಂಗಾಯತ ಎಂದು ಮತ್ತು ಬಿಲ್ಲವರು, ದೀವರು, ಪೂಜಾರಿಗಳು, ಗಮಲ್ಲಾ ಇನ್ನೂ ಕೆಲವು ಜಾತಿಗಳನ್ನು ಈಡಿಗ ಎಂಬ ಒಂದು ಅಸ್ಮಿತೆಯ ಅಡಿಯಲ್ಲಿ ಐಕ್ಯಗೊಳಿಸುವ ಯತ್ನಗಳು ನಡೆದಿವೆ. ಈ ರೀತಿಯಾಗಿ ಬ್ರಾಹ್ಮಣ, ಒಕ್ಕಲಿಗ, ಕುರುಬ, ದಲಿತ ಇತ್ಯಾದಿ ಜಾತಿಗಳು ಸಂಘಟನೆಗಯಾಗುತ್ತಿರುವ ಪ್ರಕ್ರಿಯೆ ಇತ್ತಿಚೆಗೆ ಸಾಮಾನ್ಯ ಎನಿಸಿಬಿಟ್ಟಿದೆ. ಆಯಾ ಜಾತಿಗಳ ವೃತ್ತಿ, ಕತೆ-ಪುರಾಣಗಳು, ಆಚರಣೆಗಳನ್ನು ಆಧಾರವಾಗಿ ಇಟ್ಟುಕೊಂಡು ಹಲವು ಜಾತಿಗಳನ್ನು ಒಂದು ಅಸ್ಮಿತೆಯ ಒಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಈ ಹಲವು ಜಾತಿಗಳು ನಿಜವಾಗಿಯೂ ಒಂದು ಅಸ್ಮಿತೆಗೆ ಬದ್ಧವಾಗಿವೆಯೇ? ಸಂಘಟನೆಗಳು ಇವುಗಳ ಅಸ್ಮಿತೆಯನ್ನು ಬಲಪಡಿಸಲು ಯಶಸ್ವಿಯಾಗಿವೆಯೇ? ಎಂದು ಪರಿಶೀಲಿಸದರೆ ಸಿಗುವ ಉತ್ತರ ಮಾತ್ರ ನಕಾರಾತ್ಮಕವಾಗಿದೆ. ಇದಕ್ಕೆ ಈಡಿಗ ಜಾತಿಸಮುದಾಯ ಒಂದು ದೃಷ್ಟಾಂತವಾಗಿದೆ. ಮತ್ತಷ್ಟು ಓದು
ಅಕಾಡೆಮಿ “ಗೌರವ” ಮೂರಾಬಟ್ಟೆ
– ರೋಹಿತ್ ಚಕ್ರತೀರ್ಥ
ಮೊನ್ನೆ ಸೆಪ್ಟೆಂಬರ್ 19ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೆ.ಎಸ್.ಭಗವಾನ್ ಸೇರಿದಂತೆ ಒಟ್ಟು ಐವರಿಗೆ ಗೌರವ ಪ್ರಶಸ್ತಿ ಕೊಟ್ಟಿತು. ಜೊತೆಗೆ ಇನ್ನೂ ಹಲವು ಸಾಹಿತಿಗಳಿಗೆ ಅವರ ಪುಸ್ತಕಗಳನ್ನು ಆಯ್ದು ಪ್ರಶಸ್ತಿ ಕೊಟ್ಟಿತು.
ಈ ಆಯ್ಕೆ ನಾಡಿನಾದ್ಯಂತ ಹಲವು ಜನರ ಹುಬ್ಬೇರುವಂತೆ ಮಾಡಿತು. ಸಿದ್ದರಾಮಯ್ಯ ಆಡಳಿತದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ದಿನಕ್ಕೊಂದರಂತೆ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತ, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವುದಕ್ಕಾಗಿಯೇ ತಾನು ಬದುಕಿದ್ದೇನೆ ಎನ್ನುವುದನ್ನು ಮತ್ತೆಮತ್ತೆ ಹೇಳುತ್ತಿರುವ ಭಗವಾನ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆ ಅವರನ್ನು ವಿರೋಧಿಸುವವರು ಮಾತ್ರವಲ್ಲ ಬೆಂಬಲಿಗರ ಮನಸ್ಸಲ್ಲೂ ಒಂದು ಕ್ಷಣ ಹಾದುಹೋದದ್ದು ಸುಳ್ಳಲ್ಲ. ಭಗವಾನ್ ಮತ್ತು ಅವರ ಎಲ್ಲ ಅಪದ್ಧಗಳನ್ನೂ ಬೆಂಬಲಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ರಾಡಿ ಎಬ್ಬಿಸುತ್ತಿರುವ ಶಿಷ್ಯರು ಕೂಡ ಈಗ “ಅವರ ಕಿರುಚಾಟಗಳನ್ನು ಪರಿಗಣ ಸಬಾರದು. ಕೇವಲ ಕೃತಿಗಳನ್ನಷ್ಟೇ ಎದುರಿಟ್ಟುಕೊಂಡು ಪ್ರಶಸ್ತಿ ಕೊಡಬೇಕು” ಎಂಬ ರಾಗ ಹಾಡಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಸಾಹಿತ್ಯ ಅಕಾಡೆಮಿಯ ಏಕಪಕ್ಷೀಯ ತೀರ್ಮಾನದ ವಿರುದ್ಧ ಜನಮತ ರೂಪಿಸುವ ಕೆಲಸ ಕೈಗೆತ್ತಿಕೊಂಡೆವು. ಈ ಒಟ್ಟು ಹೋರಾಟದ ಒಂದು ಸ್ಥೂಲಸ್ವರೂಪವನ್ನು ಕನ್ನಡಿಗರು ಅರಿಯಬೇಕು ಎಂಬ ಕಾರಣಕ್ಕೆ ಈ ಲೇಖನ ಬರೆಯುತ್ತಿದ್ದೇನೆ.
ನಮ್ಮ ಹೋರಾಟದ ರೂಪುರೇಷೆಗಳು:
ನಮ್ಮದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿರ್ಧಾರದ ವಿರುದ್ಧದ ಹೋರಾಟ. ಅಕಾಡೆಮಿ ಪ್ರಕಟಿಸಿರುವ ಪಟ್ಟಿಯು ಸಂಪೂರ್ಣವಾಗಿ ಏಕಪಕ್ಷೀಯವಾಗಿದೆ. ಇದನ್ನು ಸಿದ್ಧಪಡಿಸುವಾಗ ಯಾರ ಅಭಿಪ್ರಾಯವನ್ನೂ ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ. ಪಟ್ಟಿಯಲ್ಲಿ ನಕ್ಸಲ್ ಚಳವಳಿಗೆ ಬೆಂಬಲ ಕೊಟ್ಟವರು, ನೇರವಾಗಿ ನಕ್ಸಲ್ ಹೋರಾಟಗಳಲ್ಲಿ ಭಾಗಿಯಾಗಿದ್ದವರು, ಎಡಪಂಥೀಯ ಚಿಂತನೆ ಇರುವವರು, ಸರಕಾರದ ವಿವಿಧ ಸವಲತ್ತುಗಳನ್ನು ಈಗಾಗಲೇ ಅನುಭವಿಸಿರುವವರು ಮತ್ತು ಸರಕಾರಕ್ಕೆ ಸದಾ ಸರ್ವದಾ ಬೆಂಬಲ ಸೂಚಿಸುತ್ತ ಜನರ ದಾರಿ ತಪ್ಪಿಸುತ್ತಿರುವವರು ಪ್ರಮುಖವಾಗಿ ತುಂಬಿಕೊಂಡಿದ್ದಾರೆ. ಕೆಲವರಂತೂ ಏನು ಬರೆದಿದ್ದಾರೆ, ಎಂಥಾ ಸಾಹಿತ್ಯ ಕೊಟ್ಟಿದ್ದಾರೆ, ಅವರು ಬರೆದಿದ್ದನ್ನು ಓದಲು ಸಾಧ್ಯವೇ ಎನ್ನುವುದನ್ನೂ ಅಕಾಡೆಮಿ ಗಣನೆಗೆ ತೆಗೆದುಕೊಂಡಿಲ್ಲ. ಸರಕಾರದ ಹಿಂಬಾಗಿಲಿನಲ್ಲಿ ಸದಾ ಓಡಾಡಿಕೊಂಡಿರುವ ಹಲವುಹತ್ತು “ಗಣ್ಯ”ರಿಗೆ ಈ ಬಾರಿಯ ಪ್ರಶಸ್ತಿಗಳನ್ನು ಪ್ರಸಾದ ಎಂಬಂತೆ ಹಂಚಲಾಗಿದೆ. ಇದು ಮೇಲ್ನೋಟಕ್ಕೇ ಸಿದ್ಧವಾಗುವ ಸಂಗತಿ. ಹಾಗಾಗಿ, ಈ ಸಲದ ಪ್ರಶಸ್ತಿಪಟ್ಟಿಯನ್ನು ಬಿಡುಗಡೆ ಮಾಡುವುದರ ಜೊತೆಗೆ ಸಾಹಿತ್ಯ ಅಕಾಡೆಮಿ ತನ್ನ ಗೌರವವನ್ನೇ ಮಣ್ಣುಗೂಡಿಸಿಕೊಂಡಿದೆ ಎಂದರೆ ತಪ್ಪಲ್ಲ. ಅಕಾಡೆಮಿ ಯಾವ ಮಾನದಂಡಗಳನ್ನು ಇಟ್ಟುಕೊಂಡು ಸಾಹಿತಿಗಳನ್ನು ಆರಿಸಿದೆ? ಆಯ್ಕೆ ಸಮಿತಿಯನ್ನು ಆರಿಸಿದವರು ಯಾರು? ಈ ಆಯ್ಕೆ ಸಮಿತಿಯನ್ನು ಆರಿಸಲಿಕ್ಕೆ ಏನು ಮಾನದಂಡಗಳನ್ನು ಇಟ್ಟುಕೊಂಡಿದ್ದರು? ನಕ್ಸಲ್ ಚಳವಳಿ, ಸಾಮಾಜಿಕ ಅಶಾಂತಿ ಉಂಟುಮಾಡುವುದು, ಬಹುಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು – ಇವುಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಪ್ರಶಸ್ತಿ ಕೊಟ್ಟರೆ, ಮುಂದೆ ಇದೇ ದಾರಿ ಹಿಡಿದು ಪ್ರಶಸ್ತಿಗಾಗಿ ಹಂಬಲಿಸುವವರ ಸಂಖ್ಯೆ ಬೆಳೆಯುವುದಿಲ್ಲವೆ? ಸಾಹಿತ್ಯ ಅಕಾಡೆಮಿ ಯಾವ ಪರಂಪರೆಗೆ ನಾಂದಿ ಹಾಡುತ್ತಿದೆ? – ಇವು ನಮ್ಮ ಪ್ರಶ್ನೆಗಳು. ಇವನ್ನೇ ಮುಂದಿಟ್ಟುಕೊಂಡು ನಾವು ಪೆಟಿಶನ್ (ಸಹಿಸಂಗ್ರಹ ಅಭಿಯಾನ) ಪ್ರಾರಂಭಿಸಿದೆವು.
ಸಹಿ ಸಂಗ್ರಹ ಅಭಿಯಾನ:
ಚೇಂಜ್.ಆರ್ಗ್ ಎಂಬ ವೆಬ್‍ಸೈಟ್ ಮೂಲಕ ನಾವು “ಸಾಹಿತ್ಯ ಅಕಾಡೆಮಿ ತನ್ನ ಪಟ್ಟಿಯನ್ನು ಪರಿಷ್ಕರಿಸಬೇಕು” ಎಂಬ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆವು. ಅದು ಪ್ರಾರಂಭವಾಗಿ 24 ತಾಸುಗಳು ಕಳೆಯುವುದರೊಳಗೇ ಸುಮಾರು ಐದು ಸಾವಿರ ಜನ ಬೆಂಬಲ ಸೂಚಿಸಿ ಸಹಿ ಮಾಡಿದರು. ಹೀಗೆ ಸಹಿ ಮಾಡಿರುವ ಪ್ರತಿಯೊಬ್ಬರ ಹೆಸರಲ್ಲೂ ಒಂದೊಂದು ಪತ್ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ, ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ಕರ್ನಾಟಕ ರಾಜ್ಯಪಾಲರಿಗೆ ಹೋಗುತ್ತಿದೆ. ಸೆಪ್ಟೆಂಬರ್ 22ರ ಮುಂಜಾನೆ, ಈ ಅಭಿಯಾನ ಸುಮಾರು 8000 ಸಹಿಗಳನ್ನು ಸಂಗ್ರಹಿಸಿದೆ. ಅಂದರೆ ಇಷ್ಟೂ ಜನರ ಪತ್ರಗಳು ಈ ಮೇಲೆ ಹೇಳಿದ ಮೂರು ಜನಕ್ಕೆ ತಲುಪಿವೆ. ಆದರೆ, ನಮ್ಮ ಅಭಿಯಾನವನ್ನು ಲೇವಡಿ ಮಾಡಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿಯವರು “ಇದು ಪೂರ್ಣಯೋಚನೆ ಮಾಡದ, ಅರೆಬೆಂದ ಮನಸ್ಥಿತಿಯ ಯುವಕರ ಪ್ರಲಾಪ” ಎಂದಿದ್ದಾರೆ. ಮುಂದುವರೆದು “ಭಗವಾನರಿಗೆ ಪ್ರಶಸ್ತಿ ಕೊಟ್ಟಿರುವುದನ್ನು ಸಹಿಸದ ಕೆಲವರು ಇದ
ಕ್ಕೆ ರಾಜಕೀಯ ಬಣ್ಣ ಲೇಪಿಸುತ್ತಿದ್ದಾರೆ” ಎಂದೂ ಗಂಭೀರವಾದ ಆರೋಪ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯಿಂದ ನಾವು ಇಂಥ ಕೀಳುಮಟ್ಟದ ಭಾಷಾಪ್ರಯೋಗವನ್ನೂ ನಿಂದನೆಯನ್ನೂ ನಿರೀಕ್ಷಿಸಿರಲಿಲ್ಲ. ಆದರೆ, ಅವರ ಬಗ್ಗೆ ನಾವು ಯಾವ ಬಗೆಯ ಪ್ರತಿನಿಂದನೆಯನ್ನೂ ಮಾಡುವವರಲ್ಲ. ಮನುಷ್ಯರು ತಮ್ಮ ಸಂಸ್ಕøತಿಗೆ ತಕ್ಕಂತೆ ತಮ್ಮ ನಾಲಗೆಯನ್ನು ಬಳಸುವುದು ಸ್ವಾಭಾವಿಕ. ಎರಡೇ ದಿನಗಳಲ್ಲಿ ಸಹಿಸಂಗ್ರಹ ಅಭಿಯಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡತೊಡಗಿದೆ. ರಾಷ್ಟ್ರೀಯ ವೃತ್ತಪತ್ರಿಕೆಗಳು ಈ ಅಭಿಯಾನದ ಬಗ್ಗೆ ಸ್ವಯಂಪ್ರೇರಿತರಾಗಿ ಸುದ್ದಿ ಪಡೆದು ಪ್ರಕಟಿಸಲಾರಂಭಿಸಿವೆ. ದೆಹಲಿಯಲ್ಲಿರುವ ಕನ್ನಡಿಗರು ತಮ್ಮ ವಾಟ್ಸಾಪ್ ಗ್ರೂಪ್‍ಗಳಲ್ಲಿ ಅಭಿಯಾನದ ಲಿಂಕ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ದೂರದ ಅಮೆರಿಕದಲ್ಲಿರುವ ಕನ್ನಡಿಗರು ಇದನ್ನೊಂದು ಸ್ವಂತ ಜವಾಬ್ದಾರಿ ಎಂಬಂತೆ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ತಾವು ಸಹಿ ಮಾಡುವುದಲ್ಲದೆ ತಮ್ಮ ಎಲ್ಲ ಗೆಳೆಯರಿಗೂ ಮಾಹಿತಿ ನೀಡಿ ಅವರನ್ನೂ ಸಹಿ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸರಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆದ ಮೇಲೂ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರಾ? ಹಾಗಾದರೆ ಜನಾಭಿಪ್ರಾಯಕ್ಕೆ ಏನು ಬೆಲೆ? ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಪ್ರಶ್ನೆಗಳನ್ನು ಕೇಳಿದರೂ ಅವಾವುದಕ್ಕೂ ಉತ್ತರಿಸದೆ ತನ್ನ ಮೂಗಿನ ನೇರಕ್ಕೆ ನಡೆದರೆ ಸಾಹಿತ್ಯ ಅಕಾಡೆಮಿ ತನ್ನ ವಿಶ್ವಾಸಾರ್ಹತೆಯನ್ನು ನೆಲಕ್ಕೆ ಕೊಡವಿದ ಹಾಗೆ ಅಲ್ಲವೆ? ಪ್ರಜಾಪ್ರಭುತ್ವ ಎನ್ನುವುದಕ್ಕೆ ಅರ್ಥ ಏನು? ಇದು ನಮ್ಮ ಪ್ರಶ್ನೆ. ಸಹಿ ಸಂಗ್ರಹ ಅಭಿಯಾನದಲ್ಲಿ ಇನ್ನಷ್ಟು ಮತ್ತಷ್ಟು ಸಾವಿರಗಳು ಜಮೆಯಾಗುತ್ತಾ ಹೋದಂತೆಲ್ಲ ನಮ್ಮ ಪ್ರಶ್ನೆಗಳಿಗೂ ಹೆಚ್ಚುಹೆಚ್ಚಿನ ಬಲ ಬರುತ್ತಾ ಹೋಗುತ್ತದೆ.
ಇದು ಪ್ರಾರಂಭ:
ಕೆಲವರು ನಾವೇಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿದ್ದೇವೆ ಎನ್ನುವುದರ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ! “ಅಯ್ಯೋ ಬಿಡಿ ಸಾರ್, ನೀವು ಸುದ್ದಿ ಮಾಡದೇ ಹೋಗಿದ್ದರೆ ಈ ಪ್ರಶಸ್ತಿಪಟ್ಟಿ ಬಂದುಹೋದದ್ದೂ ನಮಗೆ ತಿಳಿಯುತ್ತಿರಲಿಲ್ಲ. ನೀವ್ಯಾಕೆ ಇದರ ಬಗ್ಗೆ ಚಿಂತೆ ಮಾಡುತ್ತೀರಿ. ಯಾರೋ ಒಂದಷ್ಟು ಜನ ಪಡೆಯುತ್ತಾರೆ, ಜನ ಮರೆಯುತ್ತಾರೆ. ಬಿಟ್ಟುಬಿಡಿ” ಎಂದು ಕೆಲವರು ಸಲಹೆ ಕೊಟ್ಟರು. ಆದಾಗ್ಯೂ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಲು ಯೋಚಿಸಿದ್ದೇವೆ. ಯಾಕೆಂದರೆ, ಈ ಪ್ರಶಸ್ತಿ, ಪದವಿ ಇತ್ಯಾದಿಗಳೆಲ್ಲವೂ ಒಂದು ದೊಡ್ಡ ಆಟದ ಸಣ್ಣಸಣ್ಣ ಭಾಗಗಳಷ್ಟೆ.
ಗಮನಿಸಿ:
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕ ಸರಕಾರ ಆರಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೇರವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕೈಕೆಳಗೆ ಬರುವ ಸಂಸ್ಥೆ. ಅಂದರೆ, ಇಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ನಮ್ಮ ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದಿದ್ದರೆ ನಿಮಗೆ, ಅಕಾಡೆಮಿ ವ್ಯವಹಾರದಲ್ಲಿ ಸರಕಾರ ಹೇಗೆ ಮೂಗು ತೂರಿಸಿರಬಹುದು ಎಂಬ ಅಂದಾಜು ಸಿಕ್ಕಿರಬಹುದು. ತಾನು ಅಧಿಕಾರದಲ್ಲಿರುವಾಗ ತನ್ನ ಹಿಂಬಾಲಕರಿಗೆ, ಹೊಗಳುಭಟರಿಗೆ ಪ್ರಶಸ್ತಿ-ಪುರಸ್ಕಾರ ಕೊಟ್ಟು ಸಂಪ್ರೀತಗೊಳಿಸಬೇಕೆನ್ನುವುದು ಈ ಸರಕಾರದ ಧೋರಣೆ. ಸಾಹಿತ್ಯ ಅಕಾಡೆಮಿಯನ್ನು ಅದಕ್ಕಾಗಿ ವೇದಿಕೆಯಾಗಿ ಬಳಸಿಕೊಳ್ಳುವ; ತನ್ನ ಬೆಂಬಲಕ್ಕೆ ನಿಂತಿರುವುದಕ್ಕಾಗಿ ಸಾಹಿತಿಗಳಿಗೆ ಅಕಾಡೆಮಿ ಪ್ರಶಸ್ತಿಗಳನ್ನು ಕೃತಜ್ಞತಾರೂಪದಲ್ಲಿ ಹಂಚುವ ಕೆಲಸವನ್ನು ಈ ಸರಕಾರ ಮಾಡುವುದು ನಿಚ್ಚಳ. ಭಗವಾನ್ ಮತ್ತಿತರಿಗೆ ಪ್ರಶಸ್ತಿ ಸಿಕ್ಕಿರುವುದು ಈ ಆಧಾರದ ಮೇಲೆ ಎನ್ನುವುದೇ ಬಹುಜನರ ಊಹೆ.
ಕಳೆದ ಎರಡು-ಮೂರು ವರ್ಷಗಳಿಂದಲೂ ಭಗವಾನ್ ನೀಡಿರುವ ಹೇಳಿಕೆಗಳೆಲ್ಲವೂ ರಾಮಾಯಣ, ಭಗವದ್ಗೀತೆ, ಮಹಾಭಾರತ ಮತ್ತು ಹಿಂದೂ ಧರ್ಮಕ್ಕೆ ಸಂಬಂಧಪಟ್ಟವು. ಒಂದು ಎಲೆಕ್ಟ್ರಾನಿಕ್ ಅಂಗಡಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದರೂ ಈ ವ್ಯಕ್ತಿ “ರಾಮಾಯಣ ಸುಳ್ಳು, ರಾಮನಿಗೆ ಅಪ್ಪ ಇಲ್ಲ, ಆತ ಹೆಂಗಸರೊಂದಿಗೆ ಮದ್ಯ ಸೇವಿಸುತ್ತಿದ್ದ, ಮಹಾಭಾರತ ವ್ಯಭಿಚಾರದ ಕೃತಿ, ಕೃಷ್ಣ ನಮ್ಮನ್ನು ಯುದ್ಧಕ್ಕೆ ಪ್ರೇರೇಪಿಸುತ್ತಾನೆ” ಇತ್ಯಾದಿ ವಿಷಯಗಳನ್ನೇ ಹೇಳುತ್ತಾರೆಂದು ಜನ ಊಹಿಸುವ ಮಟ್ಟಿಗೆ ಅವರು ಸಮಾಜದಲ್ಲಿ ಕುಖ್ಯಾತರಾಗಿದ್ದಾರೆ. ಅಂದರೆ, ಯಾವುದೋ ಒಂದು ನಿರ್ಧಿಷ್ಟ ಪಂಗಡ ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬಹುಸಂಖ್ಯಾತರ ಭಾವನೆಗಳ ಜೊತೆ ಆಟವಾಡುವುದನ್ನು ಉದ್ಯೋಗ ಮಾಡಿಕೊಂಡಿದೆ ಎಂದು ಹೇಳಬೇಕಾಗಿದೆ. ಪ್ರೊ. ನಾರಾಯಣಾಚಾರ್ಯರು ಬರೆದ “ವಾಲ್ಮೀಕಿ ಯಾರು?” ಪುಸ್ತಕವನ್ನು ನಿಷೇಧಿಸಬೇಕೇ ಬೇಡವೇ ಎಂದು ನಿರ್ಧರಿಸುವ ಸಮಿತಿಯಲ್ಲೂ ವಾಲ್ಮೀಕಿ ರಾಮಾಯಣ ಓದದ, ಸಂಸ್ಕøತ ಗೊತ್ತಿಲ್ಲದ ಮತ್ತು ರಾಮಾಯಣದ ಬಗ್ಗೆ ನಿತ್ಯನಿರಂತರ ದ್ವೇಷ ಕಾರುತ್ತಿರುವ ಭಗವಾನ್ ಸ್ಥಾನ ಪಡೆದಿದ್ದಾರೆ ಎಂದರೆ ನಮ್ಮ ಸರಕಾರ ಒಬ್ಬ ವಿಕೃತ ಚಿಂತನೆಯ ವ್ಯಕ್ತಿಯನ್ನು ಯಾವ ಪರಿಯಲ್ಲಿ ಬೆಂಬಲಿಸುತ್ತಿದೆ, ಜನಸಾಮಾನ್ಯರು ಗಮನಿಸಬಹುದು.
ಸರಕಾರದ ಜೊತೆ ಸೇರಿಕೊಂಡಿರುವ ಕೆಲವು ದುಷ್ಟಶಕ್ತಿಗಳು ಮಾಧ್ಯಮರಂಗವನ್ನು ತಮ್ಮ ಆಡುಂಬೊಲವಾಗಿ ಬಳಸಿಕೊಳ್ಳುತ್ತಿವೆ. ಜನ ಪೋಲೀಸ್ ಶಕ್ತಿಗೆ ಹೆದರುತ್ತಾರೆ ಎಂದು ನಂಬಿರುವ ಸರಕಾರ ಎಂದು ತನ್ನ ಮಾತಿನಲ್ಲಿ ಶಕ್ತಿ ಇಲ್ಲವೆಂದು ಮನವರಿಕೆ ಮಾಡಿಕೊಳ್ಳುತ್ತದೋ ಅಂದಿನಿಂದ ಪೋಲೀಸ್ ಭಾಷೆಯಲ್ಲಿ ಮಾತಾಡತೊಡಗುತ್ತದೆ. ಸಾರ್ವಜನಿಕ ವೇದಿಕೆಯಲ್ಲಿ ಅಸಹ್ಯ ಹುಟ್ಟಿಸುವ ಶಬ್ದಗಳನ್ನು ಬಳಸಿದ್ದ ಸರಕಾರದ ಒಬ್ಬ ಮುಖ್ಯ ಅಧಿಕಾರಿ, ನಿಲುಮೆ ಫೇಸ್‍ಬುಕ್ ಪೇಜಿನಲ್ಲಿ ನಡೆದ ಚರ್ಚೆಯನ್ನೇ ಆಧಾರವಾಗಿಟ್ಟುಕೊಂಡು ಹಲವು ಜನರ ಮೇಲೆ ಕೇಸ್ ಹಾಕಿ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಬಗ್ಗುಬಡಿಯಲು ನೋಡಿದ್ದು ಇನ್ನೂ ಹಸಿರಾಗಿದೆ. ಈಗಲೂ ಅಷ್ಟೆ, ಭಗವಾನ್ ಆಯ್ಕೆಯನ್ನು ಪ್ರಶ್ನಿಸಿ ಸಾತ್ವಿಕ ಹೋರಾಟ ಮಾಡುತ್ತಿರುವವರ ಧೈರ್ಯ ಕುಂದಿಸಲು ಇವರು ಪತ್ರಿಕೆಗಳನ್ನು ಬಳಸಿಕೊಳ್ಳತೊಡಗಿದ್ದಾರೆ. ಇಲ್ಲಿ ಸರಕಾರವನ್ನು ಪ್ರಶ್ನಿಸಿದವನು ಖಳನಾಗುತ್ತಾನೆ; ದುಷ್ಕರ್ಮಿಯಾಗುತ್ತಾನೆ! ಭಗವಾನ್ ಮೇಲೆ ಕೇಸು ದಾಖಲಾದ ಮೇಲೆ, ಸರಕಾರ ಅವರಿಗೆ ಗನ್‍ಮ್ಯಾನ್ ಸೌಲಭ್ಯ ಒದಗಿಸುತ್ತದೆ! ಭಗವಾನ್, ಕರ್ನಾಟಕದಿಂದ ಪಾರಾಗಿ ಕೇರಳ ರಾಜ್ಯಕ್ಕೆ ಹೋಗಲು ಸರಕಾರವೇ ಮುಂದೆ ನಿಂತು ಸಹಕರಿಸುತ್ತದೆ. ಇದು ಇಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕಿಂತ ಜಂಗಲ್ ರಾಜ್ ಎಷ್ಟೋ ಪರವಾಯಿಲ್ಲ ಎನ್ನಬಹುದು!
ಬಹುಶಃ ನಮ್ಮ ರಾಜ್ಯ ಸರಕಾರಕ್ಕೆ ಕೋಮುಸೌಹಾರ್ದ ಬೇಕಾಗಿಲ್ಲ. ರಾಜ್ಯದಲ್ಲಿ ಹೇಗಾದರೂ ಮಾಡಿ ಒಂದು ಕೋಮುಗಲಭೆ ಎಬ್ಬಿಸಬೇಕು ಮತ್ತು ಅದಕ್ಕೆ ಹಿಂದೂಗಳನ್ನೂ ಬಿಜೆಪಿಯನ್ನೂ ಕೇಂದ್ರ ಸರಕಾರವನ್ನೂ ಗುರಿಯಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂದು ರಾಜ್ಯ ಸರಕಾರ ಭಾವಿಸಿದಂತಿದೆ. ಜಾತಿದ್ವೇಷ, ಧರ್ಮದ್ವೇಷದ ಹೇಳಿಕೆಗಳನ್ನು ನಿರಂತರ ಹೇಳುವ ಭಗವಾನ್‍ರಿಗೆ ಸರಕಾರವೇ ಮುಂದೆ ನಿಂತು ಪೋಲೀಸ್ ರಕ್ಷಣೆ ಒದಗಿಸುತ್ತಿದೆ. ಭಗವಾನ್ ಮೇಲೆ ದಾಖಲಾಗಿರುವ ಹಲವು ಪೋಲೀಸ್ ಕೇಸುಗಳನ್ನು ತಣ್ಣಗಾಗಿಸಲಾಗಿದೆ. ಇದು ಸರ್ವಾಧಿಕಾರವಲ್ಲದೆ ಬೇರೇನೂ ಅಲ್ಲ. ಕಲ್ಬುರ್ಗಿ ಕೊಲೆ ನಡೆದಾಗ ಒಬ್ಬ ತರುಣ ಟ್ವೀಟ್ಟರ್‍ನಲ್ಲಿ 140 ಅಕ್ಷರ ಬರೆದುಕೊಂಡ ಎಂಬ ವಿಷಯಕ್ಕೇ ಅವನನ್ನು ಬಂಧಿಸಿ ಪೋಲೀಸ್ ಟ್ರೀಟ್‍ಮೆಂಟ್ ಕೊಡುವ ಸರಕಾರ, ವರ್ಷಗಳಿಂದ ನೂರಾರು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟರೂ ಭಗವಾನ್ ಯಾವುದೇ ವಿಚಾರಣೆಗೆ ಗುರಿಯಾಗದಂತೆ ನೋಡಿಕೊಳ್ಳುತ್ತಿದೆ. ಇದು ಕುಂಭಕರ್ಣನನ್ನು ಸಾಕಿದ ರಾವಣರಾಜ್ಯದ ಕತೆಗಿಂತ ಬೇರೆಯಾಗಿದೆಯೇ? ಮಾತೆತ್ತಿದರೆ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ಸಮಾನತೆಗಳ ಬಗ್ಗೆ ಭಾಷಣ ಬಿಗಿಯುವ ಸರಕಾರದ ನಾಯಕರು ಭಗವಾನ್‍ಗೆ ನೀಡಿರುವ ಸವಲತ್ತುಗಳ ಬಗ್ಗೆ ಯಾವ ಸ್ಪಷ್ಟೀಕರಣ ಕೊಡುತ್ತಾರೆ?
ಸರಕಾರೀ ಕಚೇರಿಗಳು, ಇಲಾಖೆಗಳು, ಶಿಕ್ಷಣಸಂಸ್ಥೆ, ನಿಗಮ, ಪ್ರಾಧಿಕಾರ ಮತ್ತು ಮಾಧ್ಯಮ ರಂಗಗಳಲ್ಲಿ ಹಿಂದೂ ಭಾವನೆಗಳನ್ನು ತುಳಿಯುವ ಮನಸ್ಥಿತಿ ಇರುವ ವ್ಯಕ್ತಿಗಳನ್ನೇ ಚಾಣಾಕ್ಷತನದಿಂದ ತುಂಬಿಸುತ್ತಿರುವ ಸರಕಾರ, ತನ್ನನ್ನು ಹೊಗಳುವ, ಬೆಂಬಲಿಸುವ, ಬಹುಪರಾಕ್ ಎನ್ನುವವರ ಬಳಗವನ್ನು ಬೆಳೆಸುತ್ತಿದೆ. ಇದು ಏಕಚಕ್ರಾಧಿಪತ್ಯದ ಲಕ್ಷಣ. ಸರಕಾರೀ ಕಚೇರಿಗಳೂ ಇಲಾಖೆಗಳೂ ಸದ್ಯಕ್ಕೆ ಬುದ್ಧಿಜೀವಿಗಳ ಒಡ್ಡೋಲಗಗಳಾಗಿವೆ. ಇವರು ಮಾಡುತ್ತಿರುವ ರಾಜಕೀಯವಂತೂ ಅತ್ಯಂತ ಹೊಲಸು. ಸ್ವಜಾತಿಗೇ ಮೊದಲ ಮಣೆ. ದಲಿತ, ಅಹಿಂದ ಇತ್ಯಾದಿ ಪದಗಳನ್ನು ಉದುರಿಸಿದರೆ ಸಾಕು ಮಾನ-ಸನ್ಮಾನ. ತಾನು ಪ್ರಗತಿಪರ, ತಳಸ್ಪರ್ಶಿ ಹೋರಾಟಗಾರ ಎಂದು ಬಿಂಬಿಸಿಕೊಂಡರೆ ಸಾಕು, ಅವರಿಗೆ ಹಾರತುರಾಯಿ. ಕನ್ನಡಪ್ರಭದಂಥ ಪತ್ರಿಕೆಯಲ್ಲಿ ಬಲಪಂಥೀಯ ಚಿಂತನೆಗಳಿಗೂ ಜಾಗ ಕೊಡುತ್ತಿದ್ದ ವಿಶ್ವೇಶ್ವರ ಭಟ್ಟರಂಥ ಸಂಪಾದಕರು ಅನಿವಾರ್ಯವಾಗಿ ಕೆಲಸ ಬಿಡಬೇಕಾದಾಗ ಕರ್ನಾಟಕದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರು “ಈಗ ಕನ್ನಡಪ್ರಭ ಓದುವಂತಾಗಿದೆ” ಎಂದು ನಿಟ್ಟುಸಿರುಬಿಡುತ್ತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅಂದರೆ, ಇವರಿಗೆ ತಮ್ಮದಲ್ಲದ ಯಾವುದೇ ವಿಚಾರಧಾರೆಗಳನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ.ಇಂಥ ಒಂದು ಸರ್ವಾಧಿಕಾರಿ ಸರಕಾರದ ವಿವಿಧ ಯೋಜನೆಗಳಲ್ಲಿ ಇಂಥ ಅಕಾಡೆಮಿ ಪ್ರಶಸ್ತಿಗಳೂ ಬರುತ್ತವೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ, ನಾವು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಪಟ್ಟಿಯನ್ನು ಹೇಗೆ ವಿರೋಧಿಸುತ್ತೇವೋ ಹಾಗೆಯೇ ಅದಕ್ಕೆ ಬೆಂಗಾವಲಾಗಿ ನಿಂತಿರುವ ಸರಕಾರದ ಡಿಕ್ಟೇಟರ್‍ಶಿಪ್ ಅನ್ನೂ ವಿರೋಧಿಸುತ್ತೇವೆ. ನಮ್ಮ ಹೋರಾಟ ಯಾವುದೇ ಒಂದು ವ್ಯಕ್ತಿಗೆ ಸೀಮಿತವಾದದ್ದಲ್ಲ.
ಹೋರಾಟ ಯಾರಿಂದ?
ನಾವು ಹುಟ್ಟುಹಾಕಿರುವ ಹೋರಾಟ ಸಂಪೂರ್ಣವಾಗಿ ಜನಪರ. ಜನರಿಂದಲೇ ಹುಟ್ಟಿರುವ ಆಂದೋಲನ ಇದು. ನಾವು ಯಾರನ್ನೂ ಈ ಆಂದೋಲನದಲ್ಲಿ ಕೈಜೋಡಿಸಲು ಬಲವಂತಪಡಿಸಿಲ್ಲ. ಸಮಾಜದ ಗಣ್ಯವ್ಯಕ್ತಿಗಳು ನಮ್ಮ ಜೊತೆ ಕೈ ಜೋಡಿಸಿದರೆ ಅದಕ್ಕೆ ನಮ್ಮ ಬೆಂಬಲ ಇದೆ. ಪತ್ರಿಕೆಗಳು, ಟಿವಿ ಚಾನೆಲ್‍ಗಳು ಇದು ತಮ್ಮ ಜವಾಬ್ದಾರಿಯೂ ಹೌದು ಎಂದು ಅರಿತು ನಮ್ಮ ಹೋರಾಟಕ್ಕೆ ಬೆಂಬಲ ಕೊಟ್ಟರೆ ಅದನ್ನು ಸ್ವಾಗತಿಸುತ್ತೇವೆ. ಆದರೆ, ಇದರಲ್ಲಿ ಪಾಲ್ಗೊಂಡಿರುವ ಯಾರಿಗೂ ರಾಜಕೀಯ ಹಿತಾಸಕ್ತಿಗಳು ಇಲ್ಲ. ಪ್ರಗತಿಪರರು, ಬುದ್ಧಿಜೀವಿಗಳು ಸಂಶಯಪಡುವಂತೆ ಹಿಡನ್ ಅಜೆಂಡಗಳು ಇಲ್ಲ. ಸಾಹಿತ್ಯ ಅಕಾಡೆಮಿ ಅಪಾತ್ರರಿಗೆ ಪ್ರಶಸ್ತಿಗಳನ್ನು ದಾನ ಮಾಡಿದೆ; ಅದನ್ನು ತಡೆಹಿಡಿಯಬೇಕು ಮತ್ತು ಇಡೀ ಪಟ್ಟಿಯನ್ನು ಪರಿಷ್ಕರಿಸಬೇಕು – ಇದಷ್ಟೇ ನಮ್ಮ ಬೇಡಿಕೆ.ಅತ್ಯಂತ ಧನಾತ್ಮಕ ತಿರುವು ಏನೆಂದರೆ, ಕನ್ನಡದ ಪ್ರಸಿದ್ಧ ಲೇಖಕರೂ ಗಣ್ಯವ್ಯಕ್ತಿಗಳೂ ಇದೀಗ ತಮ್ಮ ಮೌನ ಮುರಿದು “ನೀವು ಮಾಡುತ್ತಿರುವ ಹೋರಾಟ ಸರಿದಾರಿಯಲ್ಲಿ ನಡೆಯುತ್ತಿದೆ” ಎಂಬ ಪ್ರೋತ್ಸಾಹದ ಮಾತುಗಳನ್ನು ಆಡತೊಡಗಿದ್ದಾರೆ. ಅದು ನಮಗೂ ಉತ್ಸಾಹ, ಪ್ರೇರಣೆ ಕೊಟ್ಟಿದೆ. ಹೋರಾಟದ ದಾರಿಯಲ್ಲಿ ಇಂತಹ ತಣ ್ಣೀರ ಚಿಲುಮೆಗಳಿರುವುದು ಚೇತೋಹಾರಿ.
ಮುಂದೇನು?
ನಾವು ನಮ್ಮ ಹೋರಾಟವನ್ನು ತಾತ್ವಿಕ ಅಂತ್ಯ ಕಾಣುವವರೆಗೂ ನಿಲ್ಲಿಸುವುದಿಲ್ಲ. ಭಗವಾನ್ ಮತ್ತು ಉಳಿದ ಅಪಾತ್ರರ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ. ಪ್ರಜೆಗಳಿಂದ ಆಯ್ಕೆಯಾಗಿ ಹೋದ ಸರಕಾರದ ಶಿಶುವಾಗಿರುವ ಸಾಹಿತ್ಯ ಅಕಾಡೆಮಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುವುದೇ ಇಲ್ಲವೆಂದು ಪಟ್ಟು ಹಿಡಿದರೆ ಅದನ್ನು ರಾಜ್ಯಪಾಲರು ಮತ್ತು ಕೇಂದ್ರದ ಗಮನಕ್ಕೂ ತರುವುದು ನಮ್ಮ ಮುಂದಿನ ಹೆಜ್ಜೆ. ಏನೇ ಇರಲಿ, ಸರ್ವಾಧಿಕಾರವನ್ನು ಅಂತ್ಯಗೊಳಿಸಬೇಕು; ಈ ಸರಕಾರಕ್ಕೆ ತಾನು ಜನರಿಂದ ಆಯ್ಕೆಗೊಂಡು ಹೋಗಿರುವ ಸಂಸ್ಥೆ ಎನ್ನುವುದರ ನೆನಪು ಮಾಡಿಸಬೇಕು. ಅದಾಗುವವರೆಗೆ ವಿರಮಿಸೆವು.
ಚಿತ್ರ ಸೌಜನ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಜಾಲತಾಣ ಹಾಗೂ ಮುಕ್ತ ಅಂತರ್ಜಾಲ
ವಸಾಹತುಪ್ರಜ್ಞೆಯ ಪ್ರಾಯೋಜಿತ ಪಂದ್ಯಾವಳಿಗಳು – ಭಾಗ ೨
– ವಿನಾಯಕ ಹಂಪಿಹೊಳಿ
ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ, ಪುರೋಹಿತ v/s ಭಕ್ತ, ಆರ್ಯ v/s ದ್ರಾವಿಡ … – ಭಾಗ ೧
ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ, ಪುರೋಹಿತ v/s ಭಕ್ತ, ಆರ್ಯ v/s ದ್ರಾವಿಡ … – ಭಾಗ ೨
ಇದೇ ಪ್ರಶ್ನೆಯು ಪುರೋಹಿತ ಮತ್ತು ಭಕ್ತನ ನಡುವಿನ ಯುದ್ಧಕ್ಕೂ ಅನ್ವಯವಾಗುತ್ತದೆ. ಹಾಗೊಂದು ವೇಳೆ ಅಷ್ಟೊಂದು ಅಸಹನೆ/ಶೋಷಣೆಗಳು ಇದ್ದರೆ ಜಾತಿಜಾತಿಗಳ ನಡುವೆ ಯುದ್ಧವೇ ಜರುಗಿ ಎಲ್ಲ ಜಾತಿಗಳೂ ನಾಶವಾಗಬೇಕಿತ್ತು. ಆದರೆ ಎಲ್ಲ ಜಾತಿಗಳೂ ಒಂದೇ ಹಳ್ಳಿಯಲ್ಲಿ ತಮ್ಮಷ್ಟಕ್ಕೆ ತಾವಿರುವದು ಏಕೆ? ಈ ಎಲ್ಲ ಪ್ರಕ್ರಿಯೆಗಳನ್ನು ಈ ಸಿದ್ಧಾಂತವು ವಿವರಿಸಿಲ್ಲ.
ಆದರೂ ಬ್ರಿಟೀಷರು ನೀಡಿದ ವಸಾಹತುಪ್ರಜ್ಞೆಯನ್ನು ಶಿರಸಾ ಹೊತ್ತುಕೊಂಡು ಅವರ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದೇವೆ. ಜಾತಿಗೊಂದು, ಕೇರಿಗೊಂದು, ಊರಿಗೊಂದು ಭಾಷಾವೈವಿಧ್ಯತೆಯಿರುವಲ್ಲಿ ಯೂರೋಪಿನಂತೆ ಭಾಷಾವಾರು ಪ್ರಾಂತ್ಯಗಳನ್ನು ಮಾಡಿಕೊಂಡಿದ್ದೇವೆ. ಇಡೀ ಸಹಸ್ರಮಾನದಲ್ಲಿ ಎಂದೂ ನಡೆಯದ ಮಹಾಪ್ರಾಣಗಳ ಅಗತ್ಯತೆಯ ಕುರಿತ ಚರ್ಚೆಗಳು ಈಗೀಗ ನಡೆಯುತ್ತಿವೆ. ಕನ್ನಡಿಗರಿಗೆ ಎಂದಿಗೂ ವಿರುದ್ಧವಾಗಿ ಕಾಣದ, ಕರ್ನಾಟಕದ ೫ ವೀರಶೈವ ಪೀಠಗಳು ಪ್ರಗತಿಪರರ ದೃಷ್ಟಿಯಲ್ಲಿ, ಏಕಾಏಕೀ ಶರಣ ಚಳುವಳಿಗೆ ವಿರುದ್ಧವಾದ ಬೆಳವಣಿಗೆಗಳಾಗಿಬಿಟ್ಟಿವೆ. ಕರ್ನಾಟಕ ಸಂಗೀತವನ್ನು ವಿರೋಧಿಸುವ ಅಂಶಗಳು ಜಾನಪದ ಸಂಗೀತದಲ್ಲಿ ಎಲ್ಲೆಲ್ಲಿ ಕಂಡುಬಂದಿವೆ ಎಂಬ ಚಿತ್ರವಿಚಿತ್ರ ಸಂಶೋಧನೆಗಳು ಬರುತ್ತಿವೆ. ಆರ್ಯ-ದ್ರಾವಿಡ ವಾದದಲ್ಲಿನ ದೋಷಗಳ ಕುರಿತು ಚರ್ಚೆ ಶುರುಮಾಡಿದರೂನೂ, ಅದು ಪುರೋಹಿತಶಾಹಿಯ ಹುನ್ನಾರವಾಗಿಬಿಡುತ್ತದೆ.
ಇವೆಲ್ಲದಕ್ಕೂ ಮುಖ್ಯವಾಗಿ ಪಾಶ್ಚಿಮಾತ್ಯರು ನಮ್ಮಲ್ಲಿ ಯಾವೆಲ್ಲ ವೈರುಧ್ಯಗಳನ್ನು ಕಂಡರೋ, ಅವುಗಳನ್ನು ವಿವರಿಸಲು ಆಧರಿಸಿದ ಆರ್ಯ-ದ್ರಾವಿಡ ಸಿದ್ಧಾಂತದ ಬುಡಕ್ಕೇ ಇಂದು ವಿಜ್ಞಾನ ಕೊಡಲಿ ಪೆಟ್ಟನ್ನು ನೀಡಿದೆ. ಜೈವಿಕವಾಗಿ, ಭೌತಿಕವಾಗಿ ಇಂದು ಸಿಗುವ ಎಲ್ಲ ವೈಜ್ಞಾನಿಕ ಸಾಕ್ಷಿಗಳು ಈ ಸಿದ್ಧಾಂತವನ್ನು ಕಸದ ಬುಟ್ಟಿಗೆ ಎಸೆದಿವೆ. ಸರಸ್ವತಿ ನದಿಯ ಅಸ್ತಿತ್ವ, ದ್ವಾರಕೆಯ ಅವಶೇಷಗಳು, ಮುಂತಾದ ಭೌತಿಕ ಸಾಕ್ಷಿಗಳು ಒಂದೆಡೆಯಾದರೆ, ಡಿ.ಎನ್.ಎ. ಆಧಾರಿತ ವಲಸೆಯ ವರದಿಗಳನ್ನು ಹೇಳುವ ಜೈವಿಕ ಸಾಕ್ಷಿಗಳು ಇನ್ನೊಂದೆಡೆ. ಹೀಗಾಗಿ ವೈಜ್ಞಾನಿಕವಾಗಿ ಸಾಬೀತಾಗದ ಈ ಆರ್ಯರ ವಲಸೆಯಾಗಲೀ, ಅದರ ಆಧಾರದ ಮೇಲೆ ಹೇಳಲಾಗುವ ಅನುಭವಕ್ಕೇ ಬಾರದ ಸಾಮಾಜಿಕ ವೈರುಧ್ಯ, ಚಳುವಳಿಗಳು ಶಾಲೆಗಳಲ್ಲಿ ಕಲಿಯಲೂ ಯೋಗ್ಯವಲ್ಲ. ಕಲಿಸಲೂ ಯೋಗ್ಯವಲ್ಲ.
ವಸಾಹತುಪ್ರಜ್ಞೆಯ ಪ್ರಾಯೋಜಿತ ಪಂದ್ಯಾವಳಿಗಳು – ಭಾಗ ೧
– ವಿನಾಯಕ ಹಂಪಿಹೊಳಿ
ಸಂಸ್ಕೃತ v/s ಆಡುಭಾಷೆ, ಶಾಸ್ತ್ರೀಯ v/s ಜಾನಪದ, ಪುರೋಹಿತ v/s ಭಕ್ತ, ಆರ್ಯ v/s ದ್ರಾವಿಡ … – ಭಾಗ ೧
ಕ್ರಿ.ಶ. ೧೪೦೦ರ ತನಕ ಬೈಬಲ್ಲಿನ ಹಳೇ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಗಳು ಹಿಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಇದ್ದವು. ಆಕ್ಸಫರ್ಡ್ ಪ್ರೊಫೆಸರ್ ಆಗಿದ್ದ ಜಾನ್ ವಿಕ್ಲಿಫ್ ಎಂಬಾತನು ೧೩೮೦ರಲ್ಲಿ ಮೊದಲ ಬಾರಿಗೆ ಬೈಬಲ್ಲಿನ ಇಂಗ್ಲೀಷ್ ಭಾಷಾಂತರವನ್ನು ಮಾಡಿದ್ದ ಎಂದು ಹೇಳಬಹುದು. ಇದಕ್ಕಿಂತ ಹಿಂದೆಯೂ ಭಾಷಾಂತರಗಳಾಗಿರಬಹುದಾದರೂ ಐತಿಹಾಸಿಕ ಸಾಕ್ಷ್ಯವಾಗಿ ಇದೊಂದು ದೊರಕುತ್ತದೆ. ಇದು ಪೋಪನ ಕೋಪಕ್ಕೆ ಗುರಿಯಾಗಿ, ವಿಕ್ಲಿಫ್ ತೀರಿಕೊಂಡಾಗ ಆತನ ಎಲುಬುಗಳನ್ನು ಪುಡಿ ಮಾಡಿಸಿ ಪೋಪ್ ನದಿಯಲ್ಲಿ ಹಾಕಿಸಿದ್ದ ಎಂದು ಕಥೆ.
ವಿಕ್ಲಿಫ್ ನಂತರ ಆತನ ಅನುಯಾಯಿಯಾದ ಜಾನ್ ಹಸ್ ಎಂಬಾತನು ವಿಕ್ಲಿಫ್ ಯೋಚನೆಗಳನ್ನು ಇನ್ನಷ್ಟು ಪ್ರಚುರಪಡಿಸಿದನು. ಪ್ರತಿಯೋರ್ವನಿಗೂ ಆತನ ಮಾತೃಭಾಷೆಯಲ್ಲಿ ಬೈಬಲ್ಲನ್ನು ಓದಲು ಅವಕಾಶ ನೀಡಬೇಕು ಎಂಬುದು ಆತನ ಆಗ್ರಹವಾಗಿತ್ತು. ಲ್ಯಾಟಿನ್ನೇತರ ಭಾಷೆಯಲ್ಲಿ ಬೈಬಲ್ಲಿನ ಪ್ರತಿಯನ್ನು ಹೊಂದಿದ್ದರೆ ಮರಣದಂಡನೆ ವಿಧಿಸುವದಾಗಿ ಹೇಳಿದ್ದ ಚರ್ಚಿನ ನಿರ್ಧಾರವನ್ನು ವಿರೋಧಿಸಲು ಜನರಿಗೆ ಕರೆಯಿತ್ತಿದ್ದನು. ೧೪೧೫ರಲ್ಲಿ ಆತನನ್ನು ವಿಕ್ಲಿಫ್ ನ ಇಂಗ್ಲೀಷ್ ಬೈಬಲ್ಲಿನ ಪ್ರತಿಗಳೊಂದಿಗೆ ಜೀವಂತವಾಗಿ ಸುಡಲಾಯಿತು. ಆತನ ಕೊನೆಯ ಮಾತುಗಳು “ಯಾರ ಸುಧಾರಣೆಯ ಕರೆಯನ್ನು ತುಳಿಯಲಾಗದೋ ಅಂತ ಮನುಷ್ಯನೊಬ್ಬನನ್ನು ದೇವನು ಬೆಳೆಸುವನು” ಎಂದು ಪ್ರತೀತಿ.
೧೪೫೦ರಲ್ಲಿ ಪ್ರಿಂಟಿಂಗ್ ಪ್ರೆಸ್ ಕಂಡುಹಿಡಿದ ಜೊಹನ್ ಗುಂಟನ್ಬರ್ಗ್ ಲ್ಯಾಟಿನ್ನಿನಲ್ಲಿದ್ದ ಬೈಬಲ್ಲಿನ ಮೊದಲ ಪ್ರತಿಯನ್ನು ತಂದನು. ಇದು ಪ್ರೊಟೆಸ್ಟಂಟ್ ಸುಧಾರಣೆಗೆ ಮೊದಲ ಅಡಿಗಲ್ಲಾಯಿತು. ನಂತರ ಎರಾಸ್ಮಸ್ ಅದರಲ್ಲಿನ ತಪ್ಪುಗಳನ್ನು ಸರಿಪಡಿಸಿ ಇನ್ನೊಂದು ಮುದ್ರಿತ ಪ್ರತಿಯೊಂದನ್ನು ತಂದನು. ೧೪೯೦ರಲ್ಲಿ ಥೊಮಸ್ ಲಿನೇಕರ್ ಬೈಬಲ್ಲಿನ ಭಾಷಾಂತರದ ಪರವಾಗಿ ವಾದಿಸಿದನು. ೧೪೯೬ರಲ್ಲಿ ಜಾನ್ ಕೋಲೆಟ್ ಎಂಬ ಇನ್ನೊಬ್ಬ ಆಕ್ಸಫರ್ಡ್ ಪ್ರೊಫೆಸರ್ ಹೊಸ ಒಡಂಬಡಿಕೆಯನ್ನು ಇಂಗ್ಲೀಷಿನಲ್ಲಿ ಭಾಷಾಂತರಿಸಲು ಯತ್ನಿಸಲು ಚರ್ಚು ಅದನ್ನು ವಿರೋಧಿಸಿತು. ಅಷ್ಟರೊಳಗಾಗಲೇ ವಿಲಿಯಮ್ ಟಿಂಡೇಲ್ ಎಂಬ ಸುಧಾರಣಾ ಚಳುವಳಿಗಾರರ ಮುಖಂಡ ಮೊದಲ ಬಾರಿಗೆ ಹೊಸ ಒಡಂಬಡಿಕೆಯನ್ನು ಇಂಗ್ಲೀಷಿನಲ್ಲಿ ಮುದ್ರಿಸಿದನು. ಹೀಗಾಗಿ ಆತನನ್ನು ಇಂಗ್ಲೀಷ್ ಭಾಷೆಯ ಆರ್ಕಿಟೆಕ್ಟ್ ಎಂದೂ ಕರೆಯಲಾಗುತ್ತದೆ. ಈ ಎಲ್ಲ ಬೆಳವಣಿಗೆಗಳನ್ನು ಚರ್ಚ್ ವಿರೋಧಿಸುತ್ತಲೇ ಬಂದಿತು.
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲವೂ ಇತ್ತೆನ್ನುವ ವ್ಯಾಮೋಹವೇಕೆ ?
– ಶಿವಕುಮಾರ ಪಿ.ವಿ. ಕುವೆಂಪು ವಿಶ್ವವಿದ್ಯಾನಿಲಯ.
ಭಾರತೀಯ ಸಮಾಜವು ಅನಿಷ್ಟಗಳ ಆಗರವೆಂದು ಜರಿಯುತ್ತಾ ಇಡೀ ಸಮಾಜವನ್ನೇ ಬದಲಾಯಿಸಬೇಕೆಂದು ಪಶ್ಚಿಮದ ಸಮಾಜವನ್ನು ಮಾದರಿಯಾಗಿಟ್ಟುಕೊಳ್ಳುವ ವಾದವು ಒಂದೆಡೆಯಿದೆ. ಇದಕ್ಕೆ ಪ್ರತಿಯಾಗಿ, ಮತ್ತೊಂದೆಡೆ, ಭಾರತದಲ್ಲಿ ಎಲ್ಲವೂ ಇತ್ತು ಎಂದು ಅದರ ಸಾಂಸ್ಕೃತಿಕ ಶ್ರೇಷ್ಠತೆಯನ್ನು ಸಾರುವ ವಾದವೂ ಇದೆ. ಆದರೆ, ಈ ಎರಡನೆಯ ವಾದವು ಇಲ್ಲಿನ ಸಾಂಸ್ಕೃತಿಕ ಶ್ರೇಷ್ಠತೆಯನ್ನು ತೋರಿಸುವ ಭರದಲ್ಲಿ ಇಲ್ಲಿನ ಪರಿಕಲ್ಪನೆಗಳನ್ನು ಪಾಶ್ಚಾತ್ಯ ತತ್ವಗಳ ಮೂರನೇ ದರ್ಜೆಯ ನಕಲುಗಳನ್ನಾಗಿ ಮಾಡಿ ಸಾಂಸ್ಕೃತಿಕ ಅನನ್ಯತೆಗೇ ಸಂಚಕಾರ ತರುತ್ತಿದೆ. ಇದನ್ನು ಭಾರತದಲ್ಲಿ ಸೆಕ್ಯುಲರಿಸಂನ ಚರ್ಚೆಯ ಒಂದು ದೃಷ್ಟಾಂತದ ಮೂಲಕ ನೋಡಿದರೆ ಹೆಚ್ಚು ಸ್ಪಷ್ಟವಾಗಬಹುದು.
ಕೆಲವರು ವಿಶ್ವಕ್ಕೆ ಸೆಕ್ಯುಲರಿಸಂ ಅನ್ನು ಮೊದಲು ಪರಿಚಯಿಸಿದ್ದೇ ಭಾರತ ಎಂಬ ವಾದವನ್ನು ಮುಂದಿಡುತ್ತಿದ್ದಾರೆ. ಅವರ ಪ್ರಕಾರ ಸೆಕ್ಯುಲರಿಸಂ ವಸುದೈವ ಕುಟುಂಬಕಂ, ಸರ್ವೇಜನಾಃ ಸುಖಿನೋ ಭವಂತು ಎಂಬ ರೂಪದಲ್ಲಿ ಬಹಳ ಹಿಂದೆಯೇ ಭಾರತದಲ್ಲಿತ್ತು. ಅದನ್ನು ಯಾವುದೋ ಕಾಲಘಟ್ಟದಲ್ಲಿ ಪಾಶ್ಚಿಮಾತ್ಯರು ತೆಗೆದುಕೊಂಡುಹೋಗಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಆದರೆ, ಈಗ ಪಾಶ್ಚಿಮಾತ್ಯರ ಸೆಕ್ಯುಲರಿಸಂನ್ನು ಭಾರತದಲ್ಲಿ ಅಳವಡಿಸಿಕೊಂಡಿರುವುದರಿಂದ ನಮ್ಮ ಆಚರಣೆಗಳೆಲ್ಲ ದಮನಕ್ಕೆ ಒಳಗಾಗುತ್ತಿವೆ. ಆದ್ದರಿಂದ ನಮಗೆ ನೈಜ ಸೆಕ್ಯುಲರಿಸಂ ಬೇಕೆಂಬುದು ಅವರ ಕಾಳಜಿ. ಇಂಥ ಹೇಳಿಕೆಗಳನ್ನು ಕೇಳಿದಾಗ ಎರಡು ಪ್ರಶ್ನೆಗಳು ಏಳುತ್ತವೆ: ಸೆಕ್ಯುಲರಿಸಂ ಹಾಗೂ ವಸುದೈವ ಕುಟುಂಬಕಂ, ಸರ್ವೇಜನಾಃ ಸುಖಿನೋ ಭವಂತು ಇವು ಒಂದೇ ಅರ್ಥ ಸೂಚಿಸುತ್ತವೆಯೇ? ಒಂದೇ ಅರ್ಥವನ್ನು ಸೂಚಿಸದಿದ್ದರೆ ತೊಂದರೆಯೇನು? ಮತ್ತಷ್ಟು ಓದು
ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ
– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು ‘ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು’ ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೆ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ ‘ಸಾಹಸ ಸಿಂಹ’ ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ ಐಡೆಂಟಿಟಿ ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಲು, ಬಂಧನ, ಸುಪ್ರಭಾತ, ಲಾಲಿಯಂಥ ಭಾವಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಂಡರು. ಹೀಗೆ ಪ್ರಯತ್ನಿಸದೆ ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ ಬ್ರ್ಯಾಂಡ್ ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತುಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ನಮ್ಮೊಡನಿದ್ದರೆ ಅವರನ್ನು ನಾವು ಒಬ್ಬ ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್, 18) ವಿಷ್ಣುವರ್ಧನ್ ತಮ್ಮ 65 ನೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ…
– ಡಾ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ
ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಗುಚ್ಛವು ಪದೇ ಪದೇ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಕಲಬುರ್ಗಿಯವರಂತಹ ಹಿರಿಯ ವಿದ್ವಾಂಸರ ಹತ್ಯೆಯ ನಂತರ ಸಂಶೋಧಕರು ಹಾಗೂ ವಿಚಾರವಂತರು ದಿಙ್ಮೂಢರಾಗಿದ್ದಾರೆ. ಇದೊಂದು ಖಂಡನೀಯ ಕೃತ್ಯವಾಗಿದೆ.
ಸಂಶೋಧನೆಗಳನ್ನು ನಡೆಸುವುದೇ ಹೊಸ ವಿಷಯಗಳನ್ನು ತಿಳಿದುಕೊಳ್ಳಲಿಕ್ಕೆ. ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುವುದೂ ಸಂಶೋಧನೆಯ ಒಂದು ಭಾಗ. ಆದರೆ ಈ ಕೆಲಸಕ್ಕೆ ಪ್ರಾಣ ತೆರಬೇಕೆ? ಇದು ತುಂಬಾ ಅನಾರೋಗ್ಯಕರ ಹಾಗೂ ಅಪಾಯಕರ ಬೆಳವಣಿಗೆ. ಈ ಸಂದರ್ಭದಲ್ಲಿ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದಾಗಿ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪದೇ ಪದೇ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯ ಚರ್ಚೆಗೆ ಬರುತ್ತಿದೆ. ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿರ್ದಿಷ್ಟವಾಗಿ ಏನು? ಇಂಥ ಭೀಕರ ಸ್ವರೂಪದ ಘಟನೆಗಳನ್ನು ಅದರ ಪರಿಧಿಗೆ ತರಬಹುದೆ ಎಂಬ ಕುರಿತು ಪರಿಶೀಲಿಸುವ ಜರೂರು ಇದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ನಿರ್ದಿಷ್ಟವಾಗಿ ಏನು ಎಂಬುದರ ಕುರಿತು ನಾವು ಊಹೆಗಳನ್ನು ಮಾಡುವ ಅಗತ್ಯವಿಲ್ಲ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಏನೆಂಬುದನ್ನು ತಿಳಿಸುತ್ತದೆ. ಅದರ ಪ್ರಕಾರ, ಪ್ರಜಾಪ್ರಭುತ್ವವು ಜನಾಭಿಪ್ರಾಯದ ಮೇಲೆ ನಿಂತಿರುವುದರಿಂದ ಪ್ರಭುತ್ವದ ನಿರ್ಬಂಧವಿಲ್ಲದೇ ವ್ಯಕ್ತಿಯೊಬ್ಬನು ಅಭಿಪ್ರಾಯಗಳನ್ನು ತಳೆಯಲು, ಮಾಹಿತಿಗಳನ್ನು ಹಾಗೂ ತನ್ನ ವಿಚಾರಗಳನ್ನು ಸಂವಹನೆ ಮಾಡಲು ಅವನಿಗೆ ಹಕ್ಕನ್ನು ನೀಡಲಾಗಿದೆ. ಅಂದರೆ ಅದು ಕಾನೂನಿನ ನಿರ್ಬಂಧಕ್ಕೆ ಬರುವುದಿಲ್ಲ. ಈ ಅಭಿವ್ಯಕ್ತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಪಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸುವುದು ಮಾತ್ರ ಈ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಪತ್ರಿಕಾ ಸ್ವಾತಂತ್ರ್ಯವು ಈ ಕಾರಣದಿಂದ ಮಹತ್ವ ಪಡೆದುಕೊಳ್ಳುತ್ತದೆ.
ಈ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಭುತ್ವ ಮತ್ತು ನಾಗರಿಕನ ನಡುವೆ ಇರುವ ಸಂಬಂಧ, ಅಂದರೆ ಪ್ರಜಾಪ್ರಭುತ್ವವು ಪ್ರಜೆಯೊಬ್ಬನಿಗೆ ನೀಡುವ ಭರವಸೆಯಾಗಿದೆ. ಆದರೆ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳನ್ನು ಪ್ರಭುತ್ವವು ಹಾಕಬಹುದು: ರಾಷ್ಟ್ರೀಯ ಏಕತೆ ಹಾಗೂ ಸುರಕ್ಷತೆಯ ರಕ್ಷಣೆಗಾಗಿ, ಅವ್ಯವಸ್ಥೆ ಹಾಗೂ ಅಪರಾಧವನ್ನು ತಡೆಗಟ್ಟಲಿಕ್ಕಾಗಿ, ಆರೋಗ್ಯ ಹಾಗೂ ಸದಾಚಾರಗಳನ್ನು ರಕ್ಷಿಸಲು, ಇತರರ ಹಕ್ಕನ್ನು ರಕ್ಷಿಸಲು, ಇತ್ಯಾದಿ ಕಾರಣಗಳಿಗೆ ಅದನ್ನು ಪ್ರಭುತ್ವವು ಹತ್ತಿಕ್ಕಬಹುದು. ಒಬ್ಬ ನಾಗರಿಕನ ಅಭಿವ್ಯಕ್ತಿಯು ಈ ಮೇಲಿನ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎಂಬುದಾಗಿ ನಿದರ್ಶಿಸಿದರೆ ಪ್ರಭುತ್ವವು ತಾನು ನೀಡಿದ ಈ ಸ್ವಾತಂತ್ರ್ಯವನ್ನು ಮಿತಗೊಳಿಸಬಹುದು.
ಅಂದರೆ ಸಮುದಾಯಗಳ ಭಾವನೆಯನ್ನು ನೋಯಿಸಿದ ಬರಹಗಳನ್ನು ನಿಷೇಧಿಸುವುದು, ಭಾಷಣ ಮಾಡದಂತೆ ನಿರ್ಬಂಧಿಸುವುದು ಇತ್ಯಾದಿ. ಆದರೆ ಆ ಹಕ್ಕನ್ನು ಪ್ರಭುತ್ವವೇ ಮೊಟಕು ಮಾಡಬೇಕೇ ವಿನಾ ಇತರ ಪ್ರಜೆಗಳಲ್ಲ. ನೀಡುವುದು ಪ್ರಭುತ್ವವಾಗಿರುವುದರಿಂದ ಈ ಸ್ವಾತಂತ್ರ್ಯವನ್ನು ಕಿತ್ತುಕೊಂಡರೆ ಅದು ಪ್ರಭುತ್ವದಿಂದಲೇ ಆಗಬೇಕು. ಒಬ್ಬ ನಾಗರಿಕನು ಮತ್ತೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ನಾವು ನಡೆಸುವ ಚರ್ಚೆಗಳಲ್ಲಿ ಬಹುತೇಕ ಘಟನೆಗಳು ಅದರ ವ್ಯಾಪ್ತಿಯೊಳಗೇ ಬರುವುದಿಲ್ಲ.
ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಣ್ಣಿಸಲಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸುಳ್ಳೆ ಎಂಬ ಪ್ರಶ್ನೆ ಏಳಬಹುದು. ಇಂಥ ಘಟನೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆ ಎಂದು ತಪ್ಪುತಪ್ಪಾಗಿ ಗುರುತಿಸುವುದರಿಂದ ಅವುಗಳ ಪರಿಹಾರವೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಈ ಹಕ್ಕನ್ನು ಅನುಷ್ಠಾನಕ್ಕೆ ತಂದಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚೆಚ್ಚು ಪ್ರಾಶಸ್ತ್ಯ ಸಿಗುವ ಬದಲು ಅಭಿವ್ಯಕ್ತಿ ಹೆಚ್ಚೆಚ್ಚು ಕಷ್ಟವಾಗುತ್ತಿರುವಂತಿದೆ. ಅಡ್ಡಾದಿಡ್ಡಿಯಾಗಿ ಮಾತನಾಡುವವರೂ, ಅದಕ್ಕೆ ಕೆರಳುವವರೂ, ಜೀವ ಬೆದರಿಕೆ ಹಾಕುವವರೂ, ಪೊಲೀಸ್ ರಕ್ಷಣೆಯನ್ನು ಪಡೆಯುವವರೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ. ಈ ಚಂದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕಲಮನ್ನು ನಮ್ಮ ಸಂವಿಧಾನಕ್ಕೆ ಸೇರಿಸಿಕೊಳ್ಳಲಾಗಿದೆಯೆ? ಎರಡು ಸಾಧ್ಯತೆಗಳಿವೆ: ಒಂದೋ ಅಭಿವ್ಯಕ್ತಿ ಸ್ವಾತಂತ್ರ್ಯವೇ ಶಾಂತಿ ಸುರಕ್ಷತೆಗೆ ಕುತ್ತು ತರುತ್ತಿದೆ, ಇಲ್ಲವೇ ಇವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಘಟನೆಗಳೇ ಅಲ್ಲ. ನನ್ನ ಪ್ರಕಾರ ಎರಡನೆಯ ಸಾಧ್ಯತೆಯೇ ಸಂಭವನೀಯ. ಹಾಗಾಗಿ ಅವನ್ನು ಬೇರೆ ಬೇರೆ ಸ್ವರೂಪದ ಸಮಸ್ಯೆಗಳನ್ನಾಗಿ ಗುರುತಿಸುವುದು ಅವುಗಳ ಪರಿಹಾರಕ್ಕೆ ನಿರ್ಣಾಯಕ. ಹಾಗೆ ಗುರುತಿಸದಿರುವುದರಿಂದಲೇ ಅವು ಬಿಗಡಾಯಿಸುತ್ತಿವೆ. ಹತ್ಯೆ ಮಾಡುವ ಪೃವೃತ್ತಿ ಹೆಚ್ಚಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯ ಎಂಬ ನಿಟ್ಟಿನಲ್ಲಿ ಚರ್ಚೆ ನಡೆದರೆ ಅದಕ್ಕೆ ಪರಿಹಾರಗಳು ಗೋಚರಿಸಬಹುದು. ಇಂಥ ಅನೇಕ ಹತ್ಯೆಗಳು ಈಗಾಗಲೇ ನಡೆದರೂ ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿಕ್ಕೆ ಏಕೆ ಆಗಿಲ್ಲ?
ಯಾರೋ ಒಬ್ಬರು ಯಾವುದೋ ಜಾತಿಯ, ಮತದ, ಆಚರಣೆಯ ಕುರಿತು ಮಾಡಿದ ಪ್ರಚೋದನಕಾರಿ ಹೇಳಿಕೆಗಳಾಗಿರಬಹುದು ಅಥವಾ ಅಂಥ ಹೇಳಿಕೆಗಳಿಗೆ ಪ್ರತಿಯಾಗಿ ಬರುವ ಹಿಂಸಾತ್ಮಕ ಪ್ರತಿಕ್ರಿಯೆಗಳಿರಬಹುದು, ಅವಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಣ್ಣ ನೀಡಿದರೆ ದಾರಿ ತಪ್ಪುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲಿ ಬರುವ ಹೇಳಿಕೆಗಳು ಸರ್ವ ಜನಾಭಿಪ್ರಾಯ ಅಥವಾ ಹಿತಾಸಕ್ತಿಗೆ ಸಂಬಂಧಿಸಿರಬೇಕು. ಖಾಸಗಿ ಹೇಳಿಕೆಗಳು, ಕೆಲವು ಗುಂಪು, ಜಾತಿಗಳ ಸ್ವಾರ್ಥ, ಪೂರ್ವಗ್ರಹಪೀಡಿತ ಹೇಳಿಕೆಗಳು, ಅಜ್ಞಾನದಿಂದ ಮಾಡುವ ಹೇಳಿಕೆಗಳು ಇತ್ಯಾದಿಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಬಿಂಬಿಸಿದರೆ ಜನಾಭಿಪ್ರಾಯದ ಹೆಸರಿನಲ್ಲಿ ಸರ್ಕಾರದ ದಾರಿ ತಪ್ಪಿಸುವ ಕೆಲಸ ಆಗುತ್ತದೆ ಅಷ್ಟೆ. ಆದರೆ ಇಂದು ನಾವು ನೋಡುವುದೇನು? ಇಂಥವನ್ನೆಲ್ಲ ಯಾವಾಗಲೂ ವಿಚಾರವಾದಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾತ್ರವೇ ಧಕ್ಕೆ ತರುವ ಘಟನೆಗಳಾಗಿ ಬಿಂಬಿಸಲಾಗುತ್ತದೆ. ಅದೂ ಅವರೇ ತಿಳಿಸುವಂತೆ ಧಕ್ಕೆ ತರುವವರೆಲ್ಲ ಮತಾಂಧರು ಹಾಗೂ ಸಂಪ್ರದಾಯವಾದಿಗಳು. ಹಾಗಾದರೆ ಸಂಪ್ರದಾಯಸ್ಥರು ಹಾಗೂ ಮತಶ್ರದ್ಧೆಯುಳ್ಳವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ವಯವಾಗುವುದಿಲ್ಲವೆ? ಉದಾಹರಣೆಗೆ, ದೇವಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ತಪ್ಪಿಲ್ಲ ಎನ್ನುವುದು ವಿಚಾರವಾದಿಯೊಬ್ಬನ ಸ್ವಾತಂತ್ರ್ಯವಾದರೆ, ಅದನ್ನು ಅಷ್ಟೇ ಕೆಟ್ಟದಾಗಿ ವಿರೋಧಿಸುವುದು ಸಂಪ್ರದಾಯವಾದಿಯ ಸ್ವಾತಂತ್ರ್ಯವೇಕಲ್ಲ?
ಇದನ್ನು ಗಮನಿಸಿದಾಗ ಕೆಲವು ವಿಚಾರವಾದಿಗಳು ತಮ್ಮ ಐಡಿಯಾಲಜಿಯನ್ನು ಮುಂದೊತ್ತಲು ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಮಂತ್ರವನ್ನು ಬಳಸುತ್ತಿದ್ದಾರೆ ಎಂದೆನಿಸುತ್ತದೆ. ಇದು ಎಲ್ಲಿಗೆ ಬಂದು ನಿಂತಿದೆಯೆಂದರೆ ಅವರು ಆಡುವ ಮಾತುಗಳು ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ದೃಷ್ಟಾಂತಗಳು ಎಂಬಂತೆ ಚರ್ಚೆಯಾಗುತ್ತದೆ. ಅವರ ಮಾತುಗಳು ಅವರು ನಂಬಿದ ರಾಜಕೀಯ ಐಡಿಯಾಲಜಿಗಳ ಪ್ರತಿಪಾದನೆಗಳು ಅಷ್ಟೆ. ಇಂಥ ಪ್ರತಿಪಾದನೆಗಳಿಗೆ ವಿರೋಧಿ ಐಡಿಯಾಲಜಿಗಳಿಂದ ಅದೇ ನೆಲೆಯಲ್ಲಿ ಪ್ರತಿಕ್ರಿಯೆ ಬರುವುದು ಸ್ವಾಭಾವಿಕ. ಅಂಥ ಪ್ರತಿಕ್ರಿಯೆಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬುದಾಗಿ ಬಿಂಬಿಸಿ ಅವುಗಳನ್ನು ಅಕ್ರಮಗೊಳಿಸಲಾಗುತ್ತದೆ. ನಿಜವಾಗಿಯೂ ನೋಡಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಇಂಥ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ. ಇಂಥ ಪ್ರಚೋದನಕಾರಿ ಮಾತುಗಳಿಂದ ಯಾವ ಜನಾಭಿಪ್ರಾಯ ಅಥವಾ ಸಮುದಾಯಗಳ ಹಿತಾಸಕ್ತಿಯನ್ನು ಅವರು ಪ್ರತಿನಿಧಿಸುತ್ತಾರೆ? ಆ ಸಮುದಾಯಗಳ ಲೋಕದಲ್ಲಂತೂ ಇವರ್‍್ಯಾರೂ ಪ್ರಸ್ತುತತೆ ಪಡೆದಂತೆ ಕಾಣುವುದಿಲ್ಲ. ಇದರ ಒಂದೇ ಪರಿಣಾಮವೆಂದರೆ ಸಾಮಾಜಿಕ ಸಂಘರ್ಷ ಹಾಗೂ ಅಶಾಂತಿ. ಹಾಗಾಗಿ ಇಂಥ ಉದಾಹರಣೆಗಳಲ್ಲಿ ಮುಖ್ಯವಾಗುವುದು ನಮ್ಮ ಸಂಸ್ಕೃತಿ, ಸಮಾಜದ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುವವರು ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ, ಶಿಸ್ತುಬದ್ಧವಾಗಿ ತಮ್ಮ ತಿಳಿವಳಿಕೆಯನ್ನು ಹೊಂದಿದ್ದಾರೆ ಎಂಬ ಪ್ರಶ್ನೆ.
ಅಂದರೆ ಕಲಬುರ್ಗಿಯವರ ನಿರ್ದಿಷ್ಟ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆ ನಡೆಸುವ ಬದಲು ಸಂಶೋಧನೆಯೊಂದನ್ನು ಮಂಡಿಸುವ ಹಾಗೂ ಖಂಡಿಸುವ ಕ್ರಮವೇನು ಎಂಬುದರ ಕುರಿತು ಚರ್ಚೆ ನಡೆಸಿದರೆ ಉಪಯುಕ್ತವಾಗಬಹುದು. ಬಹುಶಃ ಇಂಥ ತಿಳಿವಳಿಕೆಯನ್ನು ಹೆಚ್ಚೆಚ್ಚು ಬೆಳೆಸಿದಷ್ಟೂ ಸಂಶೋಧನೆಗೆ ಸಂಬಂಧಿಸಿದ ಸಂಘರ್ಷಗಳು ಕಡಿಮೆಯಾಗಬಹುದು. ನಮಗೆ ಯಾರ ಹೇಳಿಕೆಯ ಕುರಿತಾದರೂ ಅಸಮ್ಮತಿ ಇದ್ದರೆ, ಅದು ತಪ್ಪು ಎಂದೆನಿಸಿದರೆ ಅದರ ಮಿತಿಯನ್ನು ನಿದರ್ಶಿಸಿ ತೋರಿಸಿ ಮನದಟ್ಟಾಗುವಂತೆ ನಮ್ಮ ವಾದವನ್ನು ಮಂಡಿಸುವುದು ಸಂಶೋಧನಾ ಮಾರ್ಗ ಅಥವಾ ಅದು ಸಮಾಜಕ್ಕೆ ಅಪಾಯಕಾರಿ, ಕೆಲವರ ಹಿತಕ್ಕೆ ಧಕ್ಕೆ ತರುತ್ತದೆ ಎಂದೆನಿಸಿದರೆ, ಅದನ್ನೂ ಸಂಶೋಧನೆಯ ಮೂಲಕವೇ ನಿದರ್ಶಿಸಿ ತೋರಿಸಬೇಕಾಗುತ್ತದೆ.
ಅಂದರೆ ಸಂಶೋಧನೆಯಲ್ಲಿ ತಪ್ಪುಗಳು ಬೌದ್ಧಿಕವಾಗಿ ಪರಿಹರಿಸಬಲ್ಲ, ಪರಿಹರಿಸಬೇಕಾದ ಸಮಸ್ಯೆಗಳಾಗಿವೆಯೇ ವಿನಾ, ಸಂಶೋಧನಾ ಕೇಂದ್ರಗಳನ್ನು ಮುಚ್ಚಿಸುವ, ಸಂಶೋಧಕರ ಬರವಣಿಗೆಯನ್ನೇ ನಿಲ್ಲಿಸುವ ಸಮಸ್ಯೆಗಳಲ್ಲ. ಅಂಥ ಸಂಶೋಧನೆಗಳಿಗೆ ಅನೈತಿಕ, ಅಮಾನವೀಯ ಎಂದು ಹಣೆಪಟ್ಟಿ ಅಂಟಿಸಿಬಿಟ್ಟರೆ, ಸಂಶೋಧಕರ ಉದ್ದೇಶಗಳನ್ನೇ ಶಂಕಿಸಿಬಿಟ್ಟರೆ, ಅವರು ಎತ್ತಿದ ಪ್ರಶ್ನೆಗಳನ್ನು ಉತ್ತರಿಸಿದ ಹಾಗಾಗುವುದಿಲ್ಲ ಹಾಗೂ ಅದನ್ನು ಅಭಿವ್ಯಕ್ತಿ ಸಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದೂ ಮತ್ತೊಂದು ಮೋಸ.
ಅಂದರೆ ಇಂಥ ಮಾರ್ಗವನ್ನು ಯಾರಾದರೂ ತುಳಿದ ಕ್ಷಣದಲ್ಲೇ ಸಂಶೋಧನಾ ಕ್ಷೇತ್ರಕ್ಕೆ ಹೊರತಾದ ವಿಧಾನದಿಂದ ಅದನ್ನು ಎದುರಿಸಲು ತೊಡಗಿರುತ್ತಾರೆ. ಅಲ್ಲಿಂದಲೇ ಸಂಶೋಧಕರನ್ನು ಹಿಂಸಿಸುವ ಕೆಲಸ ಪ್ರಾರಂಭವಾಗುತ್ತದೆ. ಬಹುಶಃ ಕೊಲೆಗಡುಕರು ಕೂಡ ಇದೇ ಕೆಲಸಕ್ಕೆ ಮತ್ತೊಂದು ಅತಿಗೆ ಹೋಗುತ್ತಾರೆ.
ಕೃಪೆ : ಪ್ರಜಾವಾಣಿ
ಗೋಮಾಂಸ ನಿಷೇಧ : ಜೈನರನ್ನು ಅಲ್ಪಸಂಖ್ಯಾತರು ಎಂದು ಒಪ್ಪಿಕೊಳ್ಳಲಾಗುತ್ತಿಲ್ಲವೇ..?
– ಪ್ರವೀಣ ಕೊಂಬೆಮನೆ
ಜೈನ ಸಮುದಾಯದವರ ಪರ್ಯೂಶನ್ ವ್ರತ ಪ್ರಯುಕ್ತ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿರುವುದು ಎಲ್ಲಿರಿಗೂ ಗೊತ್ತಿರುವ ವಿಷಯವೇ.! ಆದ್ರೆ ಸ್ನೇಹಿತರೇ.. ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಜೈನರ ಎದುರು ರಸ್ತೆಯಲ್ಲಿ ಚಿಕನ್ ಸುಟ್ಟು ಪ್ರತಿಭಟನೆ ನಡೆಸುವ ಮೂಲಕ ಅತಿರೇಕದ ವರ್ತನೆ ತೋರಿಸಿದೆ. ಮಹಾರಾಷ್ಟ್ರದಲ್ಲಿ ಜೈನರು ಸಭೆ ಸೇರಿದ ಪ್ರದೇಶದ ತೀರಾ ಹತ್ತಿರದಲ್ಲಿಯೇ ಆ ಸಮುದಾಯದ ಎದುರಿಗೇ ಮಾಂಸ ಸುಡುವ ಮೂಲಕ ನವ ನಿರ್ಮಾಣ ಸೇನೆ ಅತೀ ಧೂರ್ತತನ ಪ್ರದರ್ಶಿಸಿದೆ. ಆದರೆ ಜೈನರು ಇದನ್ನೆಲ್ಲಾ ಕಡೆಗಣಿಸಿ ಮೌನವಾಗಿ ಅಲ್ಲಿಂದ ಹೊರ ನಡೆದಿದ್ದಾರೆ.
ಸಾವಿರಾರು ವರ್ಷಗಳಿಂದ ಜೈನ ಸಮುದಾಯದಲ್ಲಿ ಆಚರಣೆಯಲ್ಲಿ ಬಂದ ಸಲ್ಲೇಖನಾ ವ್ರತವನ್ನು ಈ ಹಿಂದೆ ಆತ್ಮಹತ್ಯೆ ಎನ್ನುವ ಮೂಲಕ ಜೈನರ ಆಚರಣೆಗಳಿಗೆ ತೊಂದರೆ ನೀಡಲಾಯಿತು. ಈಗ ಜೈನರು ಮಾಂಸಾಹಾರಿಗಳಲ್ಲ, ಗೋ ಮಾಂಸ ಭಕ್ಷಣೆಗೆ ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ಅವರ ಎದುರು ಮಾಂಸಗಳನ್ನಿಟ್ಟು ಸುಡುವುದು, ಸಾರ್ವಜನಿಕವಾಗಿ ಮಾಂಸ ಮಾರಾಟ ಮಾಡುವುದು ಮಾಡಲಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಭಾರತದ ನ್ಯಾಯಾಲಯವೂ ಸೇರಿದಂತೆ ವಿವಿಧ ರೀತಿಯಲ್ಲಿ ಜೈನರ ಧಾರ್ಮಿಕ ಹಕ್ಕುಗಳನ್ನು ತುಳಿಯಲಾಗುತ್ತಿದೆಯೇ..? ಎನ್ನುವ ಅನುಮಾನಕ್ಕೆ ಕಾರಣವಾಗಿದೆ.