ವಿಷಯದ ವಿವರಗಳಿಗೆ ದಾಟಿರಿ

Archive for

14
ಸೆಪ್ಟೆಂ

ವೀರಶೈವ ಸಂಪ್ರದಾಯ: ಕೆಲವು ಒಗಟುಗಳು

 – ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.

ಕರ್ನಾಟಕದಲ್ಲಿ ವೀರಶೈವ ಸಮುದಾಯವು ಹಲವಾರು ಚರ್ಚೆಗೆ ಒಳಪಟ್ಟಿದೆ. ತಮ್ಮ ಅಸ್ಮಿತೆಯ ಹುಡುಕಾಟಕ್ಕಾಗಿ ಶತಮಾನಗಳಿಂದ ಹೆಣಗಾಡುತ್ತಿರುವಂತೆ ಈ ಸಮುದಾಯ ಮೇಲ್ನೋಟಕ್ಕೆ ಕಂಡುಬಂದರೂ ಸಹ ಅದು ಭಾಗಶಃ ಸತ್ಯವಾದುದು. ಕಾರಣ, ಸಮುದಾಯಗಳೇ ಸ್ವಯಂ ಪ್ರೇರಣೆಯಿಂದ ತಮಗೊಂದು ಅಸ್ಮಿತೆ ಬೇಕೆಂಬ ಹಂಬಲದಿಂದ ನಡೆಸಿರುವ ಹೋರಾಟದಂತೆ ಅದು ಗೋಚರಿಸುವುದಿಲ್ಲ. ಬದಲಿಗೆ, ಸಮುದಾಯದ ನಾಯಕರುಗಳು, ವಿದ್ವಾಂಸರು, ರಾಜಕೀಯ ನೇತಾರರು, ಹಾಗೂ ಸಾಹಿತಿಗಳು ಇಂತಹ ಹೋರಾಟದ ಮಂಚೂಣಿಯಲ್ಲಿರುವುದು ಕಣ್ಣಿಗೆ ಕಾಣುವ ಸತ್ಯ. ಅವರ ಹೋರಾಟ ಅಸ್ಮಿತೆಗಾಗಿಯೋ ಅಥವಾ ಮತ್ಯಾವುದಾದರೂ ಉದ್ದೇಶಕ್ಕಾಗಿಯೋ ಎಂಬುದನ್ನು ಅರ್ಥೈಸಿಕೊಳ್ಳುವ ಮುನ್ನ ಆ ಸಮುದಾಯದ ಕುರಿತು ಯಾವ ನೆಲೆಗಳಲ್ಲಿ ಚರ್ಚೆಗಳಾಗಿವೆ ಎಂಬುದನ್ನು ನೋಡಬೇಕಾಗುತ್ತದೆ.

ಪ್ರಸ್ತುತ ಲೇಖನದಲ್ಲಿ ವೀರಶೈವ ಸಮುದಾಯದ ಕುರಿತ ವಿವರಣೆಗಳನ್ನು ಪರೀಶಿಲಿಸುವ ಮೂಲಕ ಆ ಸಮುದಾಯವು ನಮ್ಮ ಅರ್ಥಗ್ರಹಿಕೆಗೆ ಬರಲು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಈವರೆಗಿನ ವಿವರಣೆಗಳನ್ನು ಮೆಲುಕುಹಾಕಿದರೆ, ಅವುಗಳು ಪರಸ್ಪರ ವಿರುದ್ಧವಾಗಿಯೂ, ವಿಭಿನ್ನವಾಗಿಯೂ ಮತ್ತು ಕೆಲವು ಬಾರಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿಯಲ್ಲಿ ನಿರೂಪಿತವಾಗಿರುವುದು ಗೋಚರಿಸುತ್ತದೆ. ಅಂದರೆ ಸ್ಪಷ್ಟವಾಗಿ ಅದೊಂದು ಒಗಟಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಆ ಒಗಟಿನ ಸ್ವರೂಪವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಲಾಗುವುದು. ವೀರಶೈವ ಅಧ್ಯಯನಗಳು ಹಲವು ಆಯಾಮಗಳಲ್ಲಿ ವಿವಿಧ ಬಗೆಯಲ್ಲಿ ವೀರಶೈವರನ್ನು ನಿರೂಪಿಸುತ್ತವೆ. ಅಂತಹ ಚರ್ಚೆಗಳಲ್ಲಿ ಬಹುಮುಖ್ಯ ವಿಷಯವೆಂದರೆ, ವೀರಶೈವರನ್ನು ಎರಡು ರೀತಿಯಲ್ಲಿ ಗುರುತಿಸುತ್ತಿರುವುದಾಗಿದೆ. ಅಂದರೆ ವೀರಶೈವ ಧರ್ಮವು ಹಿಂದೂ ಧರ್ಮದ ಭಾಗವೆಂದು ಒಂದು ಗುಂಪು ಪ್ರತಿಪಾದಿಸಿದರೆ, ಅದಕ್ಕೆ ಪ್ರತಿಯಾಗಿ, ವೀರಶೈವ ಧರ್ಮ ಹಿಂದೂ ಧರ್ಮವನ್ನು ಪ್ರತಿಭಟಿಸಿ ಹುಟ್ಟಿರುವ ಧರ್ಮವಾಗಿದ್ದು, ಇದು ಪ್ರತ್ಯೇಕವಾದ ಸ್ವತಂತ್ರವಾದ ಧರ್ಮವಾಗಿದೆ ಎಂದು ಇನ್ನೊಂದು ಗುಂಪು ಪ್ರತಿಪಾದಿಸುತ್ತದೆ. ಈ ಎರಡು ರೀತಿಯ ಚಿಂತನೆಗಳನ್ನು ಹಲವಾರು ಚಿಂತಕರು ವಿಭಿನ್ನ ನೆಲೆಗಳಲ್ಲ್ಲಿ ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. Read more »

11
ಸೆಪ್ಟೆಂ

ನಿಮಗೆ ನಮಸ್ಕಾರ

– ತೇಜಸ್ವಿನಿ ಹೆಗಡೆ,ಬೆಂಗಳೂರು

ಕೆ.ಎಸ್ ನರಸಿಂಹ ಸ್ವಾಮಿಕೆ.ಎಸ್.ನರಸಿಂಹ ಸ್ವಾಮಿಯವರ ಕವನಗಳ ಕಡೆ ನನ್ನ ಗಮನ ಮೊತ್ತ ಮೊದಲ ಬಾರಿ ಹೋಗಿದ್ದು ನಾನು ಹೈಸ್ಕೂಲ್‍ನಲ್ಲಿದ್ದಾಗ. ಅವರ ಪ್ರಥಮ ಕವನ ಸಂಕಲನವಾದ `ಮೈಸೂರು ಮಲ್ಲಿಗೆ’ಯ ಕವಿತೆಗಳನ್ನು ಬಳಸಿಕೊಂಡು, ಅದೇ ಸಂಕಲನದ ಶೀರ್ಷಿಕೆ ಹಾಗೂ ಸುಮಧುರ ಸಂಗೀತದೊಂದಿಗೆ ಹೊರಬಂದ ಜನಪ್ರಿಯ ಕನ್ನಡ ಚಲಚಿತ್ರವನ್ನು ನೋಡಿದ ಮೇಲೇ! ಆವರೆಗೂ ಈ ಕವಿಯ ಹೆಸರು ಕೇಳಿದ್ದೆನಾದರೂ, ಹೆಚ್ಚು ಓದಿರಲಿಲ್ಲ. `ಮೈಸೂರು ಮಲ್ಲಿಗೆ’ ಕನ್ನಡ ಚಲನಚಿತ್ರದಲ್ಲಿ `ದೀಪವು ನಿನ್ನದೆ ಗಾಳಿಯೂ ನಿನ್ನದೇ ಆರದಿರಲಿ ಬೆಳಕು…’ ಅನ್ನೋ ಹಾಡನ್ನು ಸುಧಾರಾಣಿ ಕಣ್ತುಂಬಿಕೊಂಡು ಹಾಡಿದ್ದು ಕಂಡು ನನ್ನ ಕಣ್ಣೂ ಒದ್ದೆಯಾಗಿತ್ತು. ಚಿತ್ರದಲ್ಲಿ ಬರುವ ಘಟನೆಯ ತೀವ್ರತೆಗೂ ಮೀರಿ ಕೆ.ಎಸ್.ಎನ್ ಅವರ ಆ ಹಾಡು ನನ್ನ ಎದೆ ತಟ್ಟಿ, ಬೇರಾವುದೋ ಘಟ್ಟಕ್ಕೆ ಕೊಂಡೊಯ್ದು, ಮುಂದೆ ಅವರ ಇನ್ನಷ್ಟು ಕವಿತೆಗಳ ಓದುವಿಕೆಗೆ ಕಾರಣವಾಗಿತ್ತು. ಹಾಗಿತ್ತು ಆ ಕವಿತೆಯ ಸಾಹಿತ್ಯದ ಶಕ್ತಿ! ಚಲನಚಿತ್ರದಲ್ಲಿ ಒಂದು ಸೀಮಿತ ಘಟನೆಗಷ್ಟೇ ಈ ಹಾಡನ್ನು ಬಳಸಿಕೊಳ್ಳಲಾಗಿದ್ದು, ಅದರಿಂದಾಗಿ ಒಂದು ನಿರ್ಧಿಷ್ಟ ಪರಿಮಿತಿಯ ಅರ್ಥ ಪಡೆದುಕೊಂಡ ಈ ಅದ್ಭುತ ಕವಿತೆಯನ್ನು ಯಾವೆಲ್ಲಾ ಆಯಾಮದಲ್ಲಿ ಅರ್ಥೈಸಿಕೊಳ್ಳಬಹುದು, ಈ ಕವಿತೆಯ ಒಳಾರ್ಥ ಅದೆಷ್ಟು ತೀವ್ರವಾಗಿದೆ ಎಂಬುದನ್ನೆಲ್ಲಾ ಚಿಂತಿಸಿದಾಗ ಹೊಳೆದ ಅರ್ಥಗಳು ಇಲ್ಲಿವೆ. ನಾನಿಲ್ಲಿ ಅವರ ಎರಡು ಸುಂದರ ಕವಿತೆಗಳನ್ನು ವಿಶ್ಲೇಷಿಸುವ ದೊಡ್ಡ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ. ಇದು ನನ್ನ ಸೀಮಿತ ಪರಿಮಿತಿಗೆ ದಕ್ಕಿದ್ದು ಎಂಬುದನ್ನೂ ಮೊದಲೇ ಹೇಳಿಬಿಡುತ್ತಿರುವೆ.

ಕೆ.ಎಸ್.ನ ಅವರ ಹುಟ್ಟು, ವಿದ್ಯಾಭ್ಯಾಸ, ವೃತ್ತಿ, ಪ್ರವೃತ್ತಿ, ಅವರ ಸಂಕಲನಗಳ ವಿವರಣೆ, ಅವರ ಅಸೀಮ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳು, ಪ್ರಶಸ್ತಿಗಳು ಎಲ್ಲವೂ ಸವಿವರವಾಗಿ ಎಲ್ಲೆಡೆ ಲಭ್ಯವಿವೆ. ಅವರ `ಮೈಸೂರು ಮಲ್ಲಿಗೆ’, `ಉಂಗುರ’, `ದೀಪದ ಮಲ್ಲಿ’ ಇತ್ಯಾದಿ ಸಂಕಲನಗಳಲ್ಲಿರುವ ಕವಿತೆಗಳೆಲ್ಲಾ ಭಾವಗೀತೆಗಳಾಗಿದ್ದು, ನವೋದಯ ಶೈಲಿಯಲ್ಲಿವೆ. `ತೆರೆದ ಬಾಗಿಲು’ ಸಂಕಲನದಿಂದ ಅವರು ನವ್ಯ ಶೈಲಿಗೆ ಹೊರಳಿದ್ದನ್ನು ಗುರುತಿಸಬಹುದಾಗಿದೆ. ಅವರೇ ಹೇಳಿಕೊಂಡಂತೆ ಅವರು ಬರೆದದ್ದರಲ್ಲಿ ಹೆಚ್ಚಿನವು ದಾಂಪತ್ಯ ಗೀತೆಗಳು. ಅವರನ್ನು ಪ್ರೇಮ ಕವಿ, ಒಲವಿನ ಕವಿ ಎಂದೆಲ್ಲಾ ಹೊಗಳಿದರೂ, ಅವರದ್ದು ದಾಂಪತ್ಯದ ಚೌಕಟ್ಟಿನೊಳರಳಿದ ಪ್ರೇಮದ ಲಾಲಿತ್ಯ ಎನ್ನಬಹುದು. ಜನಪದದ ಸೊಗಡು, ಅಲ್ಲಿಯ ಮಣ್ಣಿನ ಕಂಪು, ಪುಟ್ಟ ಗಂಡ-ಹೆಂಡಿರ ಬೆಚ್ಚನೆಯ ಪ್ರೀತಿ, ವಿರಹ, ಶಾನುಭೋಗರ ಮಗಳ ಚೆಲುವು ಆಹಾ ಎಲ್ಲವೂ ಸೊಗಸು, ಸುಂದರ, ಆಹ್ಲಾದಕರ! ಅವರ ಆ ಕವಿತೆಗಳನ್ನೋದುವಾಗ ಆಗುವ ರಸಾನುಭೂತಿ ಅನಿರ್ವಚನೀಯ! ಹಾಗಾಗಿಯೇ ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನ ಅತಿ ಹೆಚ್ಚು ಜನಪ್ರಿಯತೆ ಪಡೆಯಿತು, ಈಗಲೂ ಜನರ ಮನೆ-ಮನಗಳಲ್ಲಿ ಹಾಡಾಗಿದೆ.

Read more »

10
ಸೆಪ್ಟೆಂ

ಸುಳ್ಸುದ್ದಿ : ಉದ್ಯಮಿಗಳಿಬ್ಬರ ದೇವರ ಕೋಣೆಗಳು ಇನ್ನು ಮುಜರಾಯಿ ಇಲಾಖೆಯ ವಶಕ್ಕೆ!!

– ಪ್ರವೀಣ್ ಕುಮಾರ್ ಮಾವಿನಕಾಡು

Nilume Sulsuddi - Mujarayi Ilakheಹೂವು,ಹಣ್ಣು,ಅಗರಬತ್ತಿ,ಕರ್ಪೂರ ಮುಂತಾದ ಪೂಜಾ ಸಾಮಗ್ರಿಗಳ ಖರೀದಿಯ ಲೆಕ್ಕ ಪತ್ರಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ನೀಡಿ ಬೆಂಗಳೂರಿನ ಇಬ್ಬರು ಉದ್ಯಮಿಗಳ ಪೂಜಾ ಗೃಹಗಳನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ! ಉದ್ಯಮಿಗಳ ವಿರುದ್ದ ಅವರ ಹೆಂಡತಿ ಹಾಗೂ ಮಕ್ಕಳಿಂದ ಸಲ್ಲಿಕೆಯಾಗಿರುವ ದೂರುಗಳ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲನೆ ನಡೆಸಿದ ನಂತರ ಮುಂದಿನ ಕ್ರಮಗಳು ಜರುಗಲಿವೆ.ಈ ಬಗ್ಗೆ ಈಗಾಗಲೇ ಇಲಾಖೆಯ ಕಾನೂನು ತಜ್ಞರಿಂದ ಅಭಿಪ್ರಾಯ ನಿರೀಕ್ಷಿಸಲಾಗುತ್ತಿದ್ದು,ಅವರಿಂದ ಶಿಫಾರಸು ಬಂದ ನಂತರ ಇಲಾಖೆಯ ಆಯುಕ್ತರು ಅಗತ್ಯ ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಮುಜರಾಯಿ ಸಚಿವರು ತಿಳಿಸಿದರು.
ಇದಕ್ಕೂ ಮುನ್ನ ಒಬ್ಬ ಉದ್ಯಮಿಯ ಪತ್ನಿ,ತನ್ನ ಪತಿ ನನ್ನನ್ನು ತುಂಬಾ ಹಣ ಖರ್ಚಾಗುತ್ತದೆ ಎನ್ನುವ ಕಾರಣವೊಡ್ಡಿ ಶಾಪಿಂಗ್ ಗೆ ಕರೆದು ಕೊಂಡು ಹೋಗುವುದಿಲ್ಲ, ಆದರೆ ಪ್ರತೀ ತಿಂಗಳೂ ಸಂಕಷ್ಟ ಹರ ಗಣಪತಿ ವ್ರತಕ್ಕಾಗಿ ಸಾವಿರಾರು ರೂ.ಖರ್ಚು ಮಾಡುತ್ತಾರೆ.ಜೊತೆಗೆ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದರೆ ಅದನ್ನೂ ಕೊಡುತ್ತಿಲ್ಲ ಎಂದು ದೂರು ದಾಖಲಿಸಿದ್ದರು.

ಇನ್ನೊಬ್ಬ ಉದ್ಯಮಿಯ ಪುತ್ರ,ನನ್ನ ತಂದೆ ತುಂಬಾ ಹಣ ಖರ್ಚಾಗುತ್ತದೆ ಎಂದು ನನ್ನ ಬಹು ದಿನದ ಬೇಡಿಕೆಯಾದ ಸೈಕಲ್ ಕೊಡಿಸಿರಲಿಲ್ಲ.ಆದರೆ ಮೊನ್ನೆ ಮೊನ್ನೆ ವರಮಹಾ ಲಕ್ಷ್ಮಿ ಹಬ್ಬಕ್ಕೆ ಸುಮಾರು ಹತ್ತು ಸಾವಿರ ರೂ.ಗಳಿಗಿಂತಾ ಹೆಚ್ಚು ಹಣ ಖರ್ಚು ಮಾಡಿದ್ದಾರೆ ಮತ್ತು ಇದ್ಯಾವುದಕ್ಕೂ ಸರಿಯಾದ ಲೆಕ್ಕ ಪತ್ರವನ್ನೂ ಇಟ್ಟಿಲ್ಲ ಎಂದು ದೂರು ದಾಖಲಿಸಿದ್ದನು.
Read more »

9
ಸೆಪ್ಟೆಂ

ಅಂಬೇಡ್ಕರ್ ಮತ್ತು ಮಾರ್ಕ್ ವಾದ

– ಡಾ. ಜಿ. ಭಾಸ್ಕರ ಮಯ್ಯ

ಅಂಬೇಡ್ಕರ್-ಕಾರ್ಲ್ ಮಾರ್ಕ್ಸ್ಬಹಳ ಕಾಲದಿಂದಲೂ ಬುದ್ಧಿಜೀವಿಗಳ ವಲಯದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್ ವಾದದ ಬಗೆಗೆ ಚರ್ಚೆಯಿದೆ. ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಬುದ್ಧಿಜೀವಿಗಳು ಅಂಬೇಡ್ಕರರ ಕೊಡುಗೆ ಮತ್ತು ಭಾರತದ ಇತಿಹಾಸದಲ್ಲಿ ಅವರ ಸ್ಥಾನಮಾನಗಳ ಕುರಿತು ಸ್ಪಷ್ಟವಾಗಿ ಚರ್ಚಿಸಿದ್ದಾರೆ. ಈ ಕುರಿತು ಬಿ.ಟಿ. ರಣದಿವೆಯವರ “ಜಾತಿ ಮತ್ತು ವರ್ಗ” ಕೃತಿಯನ್ನು ನೋಡಬಹುದು. ಆದರೆ, ಬಹಳಷ್ಟು ಇತರೇ ಬುದ್ಧಿಜೀವಿಗಳಿಗೆ ಅಂಬೇಡ್ಕರ್ ಅವರು ಮಾರ್ಕ್ಸ್ ವಾದಕ್ಕೆ ಅತಿನಿಕಟ ಎಂತಲೊ ಅಥವಾ ಅಂಬೇಡ್ಕರ್‍ರದ್ದೇ ನಿಜವಾದ ಮಾರ್ಕ್ಸ್ ವಾದ ಎಂತಲೊ ಭ್ರಮೆಯಿದೆ.

ಇತ್ತೀಚೆಗೆ ವಿಜಯಕರ್ನಾಟಕದಲ್ಲಿ ಬರಗೂರು ರಾಮಚಂದ್ರಪ್ಪನವರ “ಕೆರಳಿದ ಕರುಳ ಧ್ವನಿ ಅಂಬೇಡ್ಕರ್” ಎಂಬ ಲೇಖನ ಪ್ರಕಟವಾಗಿದೆ. ಇಲ್ಲಿಯೂ ಅಂತಹ ಒಂದು ವಿಲಕ್ಷಣ ಭ್ರಮಾಪ್ರಯತ್ನವನ್ನು ನೋಡಬಹುದು. ಈ ಕುರಿತು ಒಂದು ಚರ್ಚೆ ಪ್ರಸ್ತುತ ಲೇಖನದ ಉದ್ದೇಶ. ಮೊದಲಿಗೆ ಬರಗೂರರು ಅಂಬೇಡ್ಕರರ ಮೂರು ಹೇಳಿಕೆಗಳನ್ನು (ಅವುಗಳಲ್ಲಿ 2, 3 ಮಾರ್ಕ್ಸ್ ವಾದವನ್ನು ಎತ್ತಿ ಹಿಡಿಯುತ್ತವೆ) ಉಲ್ಲೇಖಿಸಿ ಅದರ ಮೇಲೆ ತಮ್ಮ ಚರ್ಚೆಯನ್ನು ಆರಂಭಿಸುತ್ತಾರೆ.

ಗಾಂಧೀಜಿ ವರ್ಗರಹಿತ ಸಮಾಜದ ಪ್ರತಿಪಾದಕರಲ್ಲ
ಗಾಂಧೀಜಿಯವರ ಕುರಿತು ಬರಗೂರು “ಆರಂಭದಲ್ಲಿ ಜಾತಿವರ್ಣಗಳನ್ನು ತಮ್ಮದೇ ವ್ಯಾಖ್ಯಾನದ ಮೂಲಕ ಸಮರ್ಥಿಸುತ್ತಿದ್ದ ಗಾಂಧೀಜಿ ಆನಂತರ ಜಾತಿ ಮತ್ತು ವರ್ಗರಹಿತ ಸಮಾಜದ ನಿರ್ಮಾಣವನ್ನು ಪ್ರತಿಪಾದಿಸಿದರು” ಎಂದಿದ್ದಾರೆ. ಜಗತ್ತಿನ ಯಾವ ಮಾರ್ಕ್ಸ್ ವಾದಿಯೂ ಮೈಮರೆತು ಕೂಡಾ ಗಾಂಧೀಜಿ ವರ್ಗರಹಿತ ಸಮಾಜದ ಪ್ರತಿಪಾದಕರು ಎಂದು ಹೇಳಿಲ್ಲ. ಏಕೆಂದರೆ ಗಾಂಧೀಜಿ ಎಂದೂ ವರ್ಗರಹಿತ ಸಮಾಜ ನಿರ್ಮಾಣದ ಕನಸು ಕಂಡಿಲ್ಲ. ಭಾರತದ ಅತ್ಯುನ್ನತ ಮಟ್ಟದ ಮಾರ್ಕ್ಸ್ ವಾದಿಗಳಾದ ಡಾಂಗೆ, ಯಶ್‍ಪಾಲ್,ಇಎಂಎಸ್ ನಂಬೂದಿರಿ ಪಾಡ್-ಎಲ್ಲರೂ ಗಾಂಧೀಜಿಯ ಒಟ್ಟು ಐತಿಹಾಸಿಕ ಪಾತ್ರ ಬಂಡವಾಳಿಗರ ವರ್ಗವನ್ನು ಹೇಗೆ ಪ್ರತಿನಿಧಿಸುತ್ತಿತ್ತು ಎಂಬುದನ್ನೇ ವಿಶದೀಕರಿಸಿದ್ದಾರೆ. ಗಾಂಧೀಜಿಯವರ ಅತ್ಯಂತ ಯಥಾರ್ಥ
ಮೌಲ್ಯಮಾಪನವನ್ನು ಇಎಂಎಸ್ ತಮ್ಮ “ಗಾಂಧಿ ಎಂಡ್ ಹಿಸ್ ಇಸಮ್” ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ನನಗನ್ನಿಸುವಂತೆ ಬಹಳಷ್ಟು ಬುದ್ಧಿಜೀವಿಗಳಿಗೆ “ವರ್ಗ” ಎಂಬ ವಿಶೇಷ ಪದದ ಅರ್ಥವೇ ತಿಳಿದಿಲ್ಲ! ಅದರಿಂದಾಗಿಯೇ ಇಂತಹ ಅವಾಂತರಗಳು ಉಂಟಾಗುತ್ತವೆ.

Read more »

4
ಸೆಪ್ಟೆಂ

ಕನ್ನಡಿಯಲ್ಲಿ ಮುಖನೋಡಿಕೊಳ್ಳಿ ಬುದ್ಧಿಜೀವಿಗಳೇ

– ರಾಕೇಶ್ ಶೆಟ್ಟಿ

ವಿಧ್ವಂಸಕತೆಕಳೆದ ಭಾನುವಾರ ಕಲ್ಬುರ್ಗಿಯವರ ಹತ್ಯೆಯ ಸುದ್ದಿ ತಿಳಿದಾಗ ಆಘಾತವಾಯಿತು.ಹತ್ಯೆ ಯಾವ ಕಾರಣಕ್ಕಾಗಿದೆಯೋ ಅದು ತನಿಖೆಯಿಂದ ಹೊರಬರಲಿದೆ.ಆದಷ್ಟು ಬೇಗ ತನಿಖೆಯಾಗಿ ಸತ್ಯಹೊರಬಂದು ಅವರ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು.ಕಲ್ಬುರ್ಗಿಯವರ ಐಡಿಯಾಲಜಿಗಳೇನೇ ಇದ್ದಿರಬಹುದು,ಆದರೆ ಅವರು ಈ ನಾಡಿನ ಸಂಶೋಧನಾ ಕ್ಷೇತ್ರದ ಪ್ರಮುಖ ವಿದ್ವಾಂಸರಲ್ಲೊಬ್ಬರಾಗಿದ್ದವರು.ಅವರ ಕೊಲೆ ಸಹಜವಾಗಿಯೇ ನಾಡಿನ ವೈಚಾರಿಕ ವಲಯದ ಆಕ್ರೋಶಕ್ಕೆ ಕಾರಣವಾಯಿತು.ಕ್ರೋಧ-ಆಕ್ರೋಶಕ್ಕೊಳಗಾದ ಮನಸ್ಸಿನಿಂದ ಒಳಿತಿಗಿಂತ ಹಾನಿಯೇ ಹೆಚ್ಚು ಎಂಬ ಮಾತಿನಂತೆ,ಈ ಘಟನೆಯ ಸುತ್ತ ದೊಡ್ಡವರು ಎನಿಸಿಕೊಂಡವರ ವರ್ತಿಸಿದ ರೀತಿಯೇ ಉದಾಹರಣೆ.ಸೂತಕದ ಮನೆಯಲ್ಲಿ ಸಂಭ್ರಮಿಸುವುದು ಎಷ್ಟು ವಿಕೃತವೋ,ಅದೇ ರೀತಿ ಸೂತಕದ ಮನೆಯಲ್ಲಿ ಸಂಯಮ ಕಳೆದುಕೊಳ್ಳುವುದು ಹಾಗೂ ರಾಜಕೀಯ ಮಾಡುವುದೂ ಸಹ!

ಮಾಧ್ಯಮಗಳಲ್ಲಿ ಹತ್ಯೆಯ ಸುದ್ದಿ ಹೊರಬರುತಿದ್ದಂತೆ ನಾಡಿನ ಕೆಲವು ಬುದ್ಧಿಜೀವಿಗಳು,ಇದೊಂದು ವೈಚಾರಿಕ ಕಾರಣಕ್ಕೇ ಆದ ಹತ್ಯೆ ಎಂಬಂತೆ ತೀರ್ಪುಕೊಡಲಾರಂಭಿಸಿದರು.ಬುದ್ಧಿಜೀವಿ,ಪ್ರಗತಿಪರರ ಗುಂಪಿನ ಈ ನಡೆ ಅವರ ಜೊತೆಯೇ ಗುರುತಿಸಿಕೊಳ್ಳುವ ಕೆಲವರಿಗೆ ಯಾವ ರೀತಿ ರೇಜಿಗೆ ಹುಟ್ಟಿಸಿತು ಎಂಬುದಕ್ಕೆ,ಪ್ರಜಾವಾಣಿಯಲ್ಲಿ ನಟರಾಜ್ ಹುಳಿಯಾರ್ ಅವರು ಬರೆದ ಲೇಖನವೇ ಸಾಕ್ಷಿ. ಲೇಖನದಲ್ಲಿ ದಾಖಲಿಸಿರುವಂತೆ, “ಇಂತ ಸಮಯದಲ್ಲಿ ನಾವು ಸ್ಟ್ರಾಟರ್ಜಿ ಮಾಡ್ಬೇಕ್ರಿ” ಎಂದು ಒಬ್ಬರು ಹೇಳಿದರು ಅಂದರೇ ಕರ್ನಾಟಕದ ಬುದ್ಧಿಜೀವಿ ವಲಯ ಬಂದು ನಿಂತಿರುವುದೆಲ್ಲಿ? ಇದನ್ನು ಸಾವಿನ ಮನೆಯ ರಾಜಕಾರಣ ಮಾಡುವ ಇವರನ್ನು ರಾಜಕಾರಣಿಗಳು ಎನ್ನೋಣವೆಂದರೆ, ನಮ್ಮ ರಾಜ್ಯದಲ್ಲಿ ಬಹಳಷ್ಟು ಸಹೃದಯಿ ರಾಜಕಾರಣಿಗಳಿದ್ದಾರೆ ಮತ್ತು ಖುದ್ದು ಈ ಕೇಸಿನಲ್ಲಿ ಅವರೇ ಎಲ್ಲೂ ರಾಜಕೀಯ ಮಾಡಿಲ್ಲ.ಆದರೆ ನಮ್ಮ ಬುದ್ದಿಜೀವಿ ವಲಯ ಮಾತ್ರ ರಾಜ್ಯದಲ್ಲಿ “ವೈಚಾರಿಕ ಅಸಹನೆ” ಹೆಪ್ಪುಗಟ್ಟಿದೆ ಎಂದು ಕೂಗಿಕೊಳ್ಳುತ್ತಿದೆ.
Read more »

4
ಸೆಪ್ಟೆಂ

ಮಹದಾಯಿ : ಜನರ ದಾರಿ ತಪ್ಪಿಸುವುದು ಕಾಂಗ್ರೆಸ್‌ಗೆ ಶೋಭೆಯೇ?

– ವೃಷಾಂಕ್ ಭಟ್,ದೆಹಲಿ

ಮಹದಾಯಿಕಳಸಾ-ಬಂಡೂರ ಕಾಲುವೆಗೆ ಮಹದಾಯಿ ನೀರು ಹರಿಸಲು ಪ್ರಧಾನಿಯೊಬ್ಬರೇ ಶಕ್ತರು ಎಂಬ ರಾಜಕೀಯ ಸುಳ್ಳನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ತಿಳಿದೋ ತಿಳಿಯದೆಯೋ ಮಾಧ್ಯಮಗಳು ಕೂಡ ಹೆಚ್ಚು ಕಡಿಮೆ ಇದೇ ಸುಳ್ಳನ್ನು ಪ್ರಸಾರ ಮಾಡುತ್ತಿದೆ. ಮಹದಾಯಿ ಸಮಸ್ಯೆ ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಕಾಂಗ್ರೆಸ್ ಪಾಲಿಗಿದು ರಾಜಕೀಯ ಅವಕಾಶ. ಮಹದಾಯಿ ಸಮಸ್ಯೆ ಜೀವಂತವಾಗಿದ್ದಷ್ಟು ದಿನವೂ ರಾಜ್ಯದ ಜನರ ಮನಸ್ಸಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುತ್ತದೆ ಎಂಬುವುದು ಸಿದ್ಧರಾಮಯ್ಯ ಮತ್ತವರ ಹೈಕಮಾಂಡ್‌ಗೆ ತಿಳಿಯದ ವಿಷಯವಲ್ಲ. ಹಾಗಾಗಿ ಮಹದಾಯಿ ಸಮಸ್ಯೆ ಬಹೆಗರಿಯುವುದು ರಾಜ್ಯ ಸರ್ಕಾರಕ್ಕೇ ಬೇಕಿಲ್ಲ. ಸಮಸ್ಯೆ ಬಗೆಹರಿಸಲು ನಿಜಕ್ಕೂ ಸಾಧ್ಯವಿದೆಯೆಂದಾದರೆ ಅದು ಕಾಂಗ್ರೆಸ್‌ಗೆ ಮಾತ್ರ. ಮಹದಾಯಿ ಪ್ರಕರಣ ಸಂಬಂಧ ನ್ಯಾಯಾಧಿಕರಣ ರಚನೆಯಾದ ಬಗೆ ಮತ್ತು ಅದರಲ್ಲಿ ಕಾಂಗ್ರೆಸ್ ಪಾತ್ರ ಎಷ್ಟಿದೆ ಎಂಬುದನ್ನು ನೋಡೋಣ.

1) ಜುಲೈ 2002 : ಅಂತಾರಾಜ್ಯ ನದಿ ನೀರು ವ್ಯಾಜ್ಯ-1956 ಅಡಿಯಲ್ಲಿ ಮಹದಾಯಿ ನ್ಯಾಯಾಧಿಕರಣ ರಚಿಸುವಂತೆ ಗೋವಾ ಸರ್ಕಾರ ಕೇಂದ್ರಕ್ಕೆ ಮನವಿ ನೀಡಿತ್ತು. ಆದರೆ ಕೇಂದ್ರವು ಆ ಕೂಡಲೇ ನ್ಯಾಯಾಧಿಕರಣ ರಚಿಸಲಿಲ್ಲ.ಆಗಿದ್ದದ್ದು ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ.
2) ಏ.4-2006: ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸುತ್ತಾರೆ. ಆದರೆ ಅಂದು ಗೋವಾ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಪ್ರತಾಪ್ ಸಿಂಗ್ ರಾಣೆ ನ್ಯಾಯಾಧಿಕರಣ ರಚನೆಯಾಗಲೇ ಬೇಕು ಎಂದು ಹಠ ಹಿಡಿಯುತ್ತಾರೆ. ಆ ಮೂಲಕ ಮಾತು ಕತೆಯ ಉದ್ದೇಶ ವಿಫಲ.
Read more »

3
ಸೆಪ್ಟೆಂ

ಸುಳ್ಸುದ್ದಿ : ಹಿಂದೂಪರ ಸಂಘಟನೆಗಳಿಂದಲೇ ಇನ್ನು ಬುದ್ಧಿಜೀವಿಗಳ ರಕ್ಷಣೆ !!

– ಪ್ರವೀಣ್ ಕುಮಾರ್ ಮಾವಿನಕಾಡು

ಖಾಲಿ ತಲೆರಾಜ್ಯದಲ್ಲಿ ವಿಚಾರವಾದಿಯೆಂದು ಹೇಳಿಕೊಳ್ಳುವ ಯಾವುದೇ ವ್ಯಕ್ತಿಗೆ ಏನೇ ಆದರೂ ಅದಕ್ಕೆ ಯಾವುದೇ ಆಧಾರವಿಲ್ಲದೆಯೂ ಹಿಂದೂಪರ ಸಂಘಟನೆಗಳೇ ನೇರ ಹೊಣೆ ಹೊರಬೇಕಾಗಿದ್ದು, ಇದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಂದೂಪರ ಸಂಘಟನೆಗಳೇ ನೇರವಾಗಿ ಅವರುಗಳ ರಕ್ಷಣೆಯ ಹೊಣೆಯನ್ನು ಹೊರಲು  ಮುಂದಾಗಿವೆ!

ಎಲ್ಲಿ ಯಾರಿಗೆ ಏನೇ ಆಗಲೀ,ಸ್ಥಳಕ್ಕೆ ಪೊಲೀಸರು ಬರುವ ಮುನ್ನವೇ ಉಳಿದ ಬುದ್ಧಿಜೀವಿಗಳು ಮತ್ತು ಕೆಲವು ಪಕ್ಷಗಳು ಹಿಂದೂಪರ ಸಂಘಟನೆಗಳನ್ನೇ ಹೊಣೆ ಮಾಡಿ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿಯಾಗಿರುತ್ತದೆ! ಆದ್ದರಿಂದ ಹಿಂದೂ ಸಂಘಟನೆಗಳಿಗೆ ಈ ಬುದ್ಧಿಜೀವಿಗಳು ‘ಬದುಕಿದ್ದರೂ ಕಷ್ಟ-ಸತ್ತರೂ ಕಷ್ಟ’ ಎಂಬಂತಾಗಿದೆ. ಈ ಸಂಕಟದಿಂದ ಪಾರಾಗಲು ಈ ಬೇಜವಬ್ದಾರಿ ಅವರುಗಳ ಒಂದು ಕೂದಲೂ ಕೊಂಕದಂತೆ ರಕ್ಷಣೆ ಮಾಡುವ ಜವಾಬ್ಧಾರಿಯನ್ನು ಇನ್ನು ಮುಂದೆ ನಮ್ಮ ಸಂಘಟನೆಗಳೇ ಹೊರಲಿವೆ ಎಂದು ಹೆಸರು ಹೇಳಲಿಚ್ಚಿಸದ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಬ್ಬರು ತಿಳಿಸಿದರು.

“ವಿಚಾರವಾದಿಗಳ ರಕ್ಷಣಾ ಪಡೆ” ಎನ್ನುವ ಗಟ್ಟಿಮುಟ್ಟಾದ ಯುವಕರ ತಂಡವೊಂದನ್ನು ರಚಿಸಿದ್ದು,ಸುಮಾರು 2000 ಯುವಕರಿಗೆ ಈ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ.ಇನ್ನು ಕೆಲವೇ ದಿನಗಳಲ್ಲಿ ಅವರನ್ನು ವಿಚಾರವಾದಿಗಳ ರಕ್ಷಣೆಗೆ ನೇಮಿಸಲಾಗುತ್ತದೆ.ಹಿರಿಯ “ಮಾಜಿ ಪತ್ರಕರ್ತ,ಹಾಲಿ ಬುದ್ದಿಜೀವಿ ಕಮ್ ರಾಜಕಾರಣಿ”ಯೊಬ್ಬರು ನೀಡಿದ, ಪ್ರಾಣಾಪಾಯವನ್ನೆದುರಿ -ಸುತ್ತಿರುವ ವಿಚಾರವಾದಿಗಳ ಜ್ಯೇಷ್ಠತಾ ಪಟ್ಟಿಯನ್ನಾಧರಿಸಿ ಮೇಲ್ವರ್ಗದ ಬುದ್ಧಿಜೀವಿಗಳಿಂದ ಹಿಡಿದು ಅತ್ಯಂತ ಕೆಳ ಹಂತದ ಬುದ್ಧಿಜೀವಿಗಳವರೆಗೂ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

Read more »

2
ಸೆಪ್ಟೆಂ

ಸಂಲೇಖನಾ-ಸಂಥರಾ ಆತ್ಮಹತ್ಯೆಯೆ?

– ಡಾ| ಜಿ. ಭಾಸ್ಕರ ಮಯ್ಯ

ಸಲ್ಲೇಖನ ವ್ರತಇತ್ತೀಚೆಗೆ ರಾಜಸ್ತಾನ್ ಹೈಕೋರ್ಟ್ “ಸಂಲೇಖನಾ-ಸಂಥರಾ”ವನ್ನು ಕಾನೂನು ಬಾಹಿರಗೊಳಿಸಿರುವ ವಿಚಾರ ಜೈನ ಸಮುದಾಯದ ಸಾತ್ವಿಕ ಆಕ್ರೋಶಕ್ಕೆ ಕಾರಣವಾಗಿದೆ. ಜನಸಂಖ್ಯೆಯಲ್ಲಿ 1 ಶೇ.ದಷ್ಟೂ ಇರದ ಜೈನ ಸಮುದಾಯದ ಧಾರ್ಮಿಕ ಆಚರಣೆಯ ಮೇಲೆ ಇದು ನಿಜಕ್ಕೂ ತಾಲಿಬಾನ್ ಮಾದರಿಯ ವ್ಯವಹಾರವಾಗಿದೆ. ನಮ್ಮ ಮಾನವ ಹಕ್ಕು ಹೋರಾಟಗಾರರು ಹಾಗೂ ಪ್ರಾಣಿದಯಾ ಸಂಘದ ಮಹಾಮಹಿಮರಿಗೆ ಇರುವುದು ಕುರುಡು ಸಿದ್ಧಾಂತ ಪ್ರೀತಿ ಹೊರತು ಮಾನವ ಪ್ರೀತಿಯಲ್ಲ. ತಮ್ಮಷ್ಟಕ್ಕೆ ತಾವಿದ್ದು, ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ ಹಾಗೂ ನೀಡುತ್ತಿರುವ ಜೈನ ಸಮುದಾಯಕ್ಕೆ ನೋವುಂಟು ಮಾಡುವ ಈ ಕೆಲಸ ನಿಜಕ್ಕೂ ನೀಚತನದ್ದಾಗಿದೆ.

ನಾನೀಗ ಈ ಆಚರಣೆಯ ಸಂಕ್ಷಿಪ್ತ ವಿವರವನ್ನು ನೀಡುತ್ತೇನೆ:-
ಈ ಆಚರಣೆಯನ್ನು ಜೈನ ದಿಗಂಬರ ಪರಂಪರೆಯಲ್ಲಿ “ಸಂಲೇಖನಾ” ಎಂತಲೂ ಶ್ವೇತಾಂಬರದಲ್ಲಿ “ಸಲ್ಲೇಖನಾ” ಎಂತಲೂ ಕರೆಯುತ್ತಾರೆ. ಇದು ಜೈನರ ಹಲವಾರು ವ್ರತಗಳಲ್ಲಿ ಅತಿಶ್ರೇಷ್ಠವಾದ ವ್ರತರಾಜ.ಸಂಲೇಖನಾ ಮನಸ್ಸಿನ ಸಾಧನೆಯ ಒಂದು ಉಚ್ಚತಮ ಆಧ್ಯಾತ್ಮಿಕ ಸ್ಥಿತಿ.

ಮರಣದ ವಿಧಗಳು: ಮರಣಗಳಲ್ಲಿ ಪ್ರಮುಖವಾಗಿ ಎರಡು ವಿಧ. ಬಾಲ ಮರಣ ಮತ್ತು ಪಂಡಿತ ಮರಣ.ಇದನ್ನು ಇನ್ನೊಂದು ಬಗೆಯಲ್ಲಿ-ಅಕಾಮ ಮರಣ (ವಿವೇಕ ರಹಿತ, ಹಲವು ಬಾರಿ) ಹಾಗೂ ಸಕಾಮ ಮರಣ(ವಿವೇಕ ಸಹಿತ, ಒಂದೇ ಬಾರಿ) ಎಂತಲೂ ಕರೆಯುತ್ತಾರೆ.”ಗುಮ್ಮಟಸಾರ”ದ ಪ್ರಕಾರ ಬಾಲ ಮರಣವು ಚ್ಯುತ ಮತ್ತು ಚ್ಯಾವಿತವೆಂದು ಎರಡು ಬಗೆ. ಚ್ಯುತವೆಂದರೆ ಆಯುಷ್ಯ ತೀರಿದ ಬಳಿಕ ಬರುವ ಸಾವು. ಚ್ಯಾವಿತವೆಂದರೆ ವಿಷ, ರಕ್ತಕ್ಷಯ, ಧಾತುಕ್ಷಯ ಶಸ್ತಾಘಾತ, ಅಗ್ನಿದಾಹ,ಜಲದಿಂದ ಬರುವ ಸಾವು. ಇನ್ನೊಂದು ಬಗೆಯ ಮರಣಕ್ಕೆ ‘ತ್ಯಕ್ತ’ ಎನ್ನುತ್ತಾರೆ. ತ್ಯಕ್ತವೆಂದರೆ ರೋಗದಿಂದಉಂಟಾದ ಅಸಾಧ್ಯ ಮಾರಣಾಂತಿಕ ಪರಿಸ್ಥಿತಿಯಲ್ಲಿ ವಿವೇಕದಿಂದ ಶರೀರ ತ್ಯಾಗ ಮಾಡುವುದು.
Read more »

1
ಸೆಪ್ಟೆಂ

ಎಷ್ಟೂ ಅಂತ ಮಾನಸಿಕ ಮಾಲಿನ್ಯ ಹರಡುತ್ತೀರಿ?

– ಜೆಬಿಆರ್ ರಂಗಸ್ವಾಮಿ

ದೇಜಗೌನಮ್ಮ ಸಾಹಿತ್ಯಲೋಕದ ದೇವೇಗೌಡರಾದ ಮಾನ್ಯ ದೇ.ಜವರೇಗೌಡರು ಕ್ರೈಸ್ತರ ಸಭೆಯಲ್ಲಿ ಮಾತಾಡಿದ್ದಾರೆ. ಅಸಮಾನತೆ ಬೋಧಿಸುವ ಹಿಂದೂ ಧರ್ಮದ ಮೇಲೆ ಕೊಂಚವೂ ಗೌರವವಿಲ್ಲವಂತೆ.ಅದು ಧರ್ಮವೇ ಅಲ್ಲವೆಂದು ‎ಕಿಡಿಕಾರಿದರಂತೆ‬! 25 ವರ್ಷದಿಂದ ಕ್ರಿಸ್ತನನ್ನು ಪೂಜಿಸುತ್ತಿದ್ದಾರಂತೆ ! ಕ್ರಿಸ್ತ ಮಾತ್ರ ಸಮಾನತೆಯನ್ನು ಸಾರಿದ್ದಾರಂತೆ. ಹಿಂದೂಧರ್ಮದವರಿಗೆ ತಾರತಮ್ಯವನ್ನು ಬಿಡಲೂ ಮನಸ್ಸಿಲ್ಲವಂತೆ . . .ಅಂತ ಅದೇನೇನೋ ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ. ( ಪ್ರಜಾವಾಣಿ 30-08-2015 )

ಅವರಿಗೆ ಹಿತವೆನಿಸಿದರೆ ಯೇಸುವನ್ನೋ ಮತ್ತೊಬ್ಬರನ್ನೋ ಆರಾಧಿಸಿಕೊಳ್ಳಲಿ.ಅದು ಅವರ ವೈಯುಕ್ತಿಕ.ಅದನ್ನು ಕಟ್ಟಿಕೊಂಡು ಏನೂ ಆಗಬೇಕಾಗಿಲ್ಲ.ಆದರೆ ಆ ಸಭೆಯಲ್ಲಿ ಅನಗತ್ಯವಾಗಿ ಹಿಂದೂಧರ್ಮವನ್ನು ಹೀಗೆಳೆದು ಮಾತಾಡುವ ಅಗತ್ಯವಿತ್ತೇ? ನೂರುವರ್ಷದ ಬದುಕಿನಲ್ಲಿ ಏನೇನೋ ಓದಿರುವ ಅವರಿಗೆ,ಪ್ರಪಂಚದ ‎ಎಲ್ಲ‬ ‎ಧರ್ಮಗಳಲ್ಲೂ‬ ಅಸಮಾನತೆ,ಕ್ರೌರ್ಯ,ಮೂಢಾಚರಣೆಗಳು ‎ಇರುವುದು‬ ತಿಳಿದೇ ಇಲ್ಲವೇ? ಸರ್ವರನ್ನೂ ಸಮಾನವಾಗಿ ಕಾಣುವ ತತ್ವಬೋಧೆ,ಮೌಲ್ಯಗಳು ಎಲ್ಲಧರ್ಮಗಳಲ್ಲೂ ಇದೆ. ನಿಜ.ಆದರೆ ಅವೇ ಮೌಲ್ಯ ಸಿದ್ಧಾಂತಗಳನ್ನು ‎ಅವು‬ ‎ಇರುವ‬ ‎ಹಾಗೆಯೇ‬ ‎ಸರ್ವರೆಲ್ಲರೂ‬ ‎ಸಮಾನವಾಗಿ‬ ‎ಆಚರಿಸಬಲ್ಲ‬ ‎ಒಂದೇ‬ ‎ಒಂದು‬ ‎ಧರ್ಮ‬ ‎ಯಾವುದಾದರೂ‬ ‎ಈ‬ ‎ಭೂಲೋಕದಲ್ಲಿದೆಯೇ‬?

Read more »

1
ಸೆಪ್ಟೆಂ

ಒಂದು ಸಾವಿನ ಸುತ್ತ ಬುದ್ಧಿಜೀವಿಗಳ ಭೂತಕುಣಿತ

– ರೋಹಿತ್ ಚಕ್ರತೀರ್ಥ

ಭೂತಕಲ್ಬುರ್ಗಿಯವರ ಸಾವು ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಯಾರೋ ಇಬ್ಬರು ಅಪರಿಚಿತರು ಬೈಕ್‍ನಲ್ಲಿ ಮನೆವರೆಗೆ ಬಂದು ತಾವು ನಿಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಕಲ್ಬುರ್ಗಿ ಎದುರು ಬಂದು ನಿಂತು ಅವರ ಹಣೆಯ ಸಹಸ್ರಾರಕ್ಕೆ ಗುರಿಯಿಟ್ಟು ಗುಂಡು ಹೊಡೆದು ಪರಾರಿಯಾದರು. ಕ್ಷಣಮಾತ್ರದಲ್ಲಿ ಕಲ್ಬುರ್ಗಿ ನೆಲಕ್ಕುರುಳಿದರು. ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಸುದ್ದಿ ಭಾನುವಾರದ ಮುಂಜಾನೆ ಹತ್ತೂವರೆ ಹೊತ್ತಿಗೆಲ್ಲ ರಾಜ್ಯಾದ್ಯಂತ ಸಂಚಲನ ಹುಟ್ಟಿಸಿತು. ಕೊಲೆ ಯಾಕಾಗಿ ಆಗಿದೆ, ಯಾರು ಮಾಡಿದ್ದಾರೆ ಎನ್ನುವುದರ ಕುರಿತು ಯಾರಿಗೂ, ಪೋಲೀಸರಿಗೂ ಮಾಹಿತಿ ಇರಲಿಲ್ಲ. ಆದರೆ, ಕೊಲೆ ನಡೆದು ಅರ್ಧತಾಸಿನಲ್ಲೇ ಈ ಕೊಲೆಯನ್ನು ಪೂರ್ವದಲ್ಲೇ ನಿಯೋಜಿಸಿದ್ದವರಂತೆ ಹತ್ತುಹಲವು ಸಾಹಿತಿಗಳು, ಪಂಡಿತರು ಮಾಧ್ಯಮಗಳಲ್ಲಿ ಕಾಣಿಸಿಕೊಂಡು “ಇದಕ್ಕೆ ಸಂಘಪರಿವಾರವೇ ಕಾರಣ. ಕಲ್ಬುರ್ಗಿಯವರ ವಿಚಾರವನ್ನು ಸಹಿಸಿಕೊಳ್ಳಲಾಗದೆ ಶೂಟ್ ಮಾಡಿ ಉಸಿರು ನಿಲ್ಲಿಸಿದ್ದಾರೆ” ಎಂದು ಹೇಳತೊಡಗಿದರು. ಬರಗೂರು ರಾಮಚಂದ್ರಪ್ಪ ಟಿವಿ ಜೊತೆಗೆ ಮಾತಾಡುತ್ತ ಎಷ್ಟೊಂದು ಕರಾರುವಾಕ್ಕಾಗಿ ಈ ಕೊಲೆಯ ವಿವರಗಳನ್ನು ಕೊಟ್ಟರೆಂದರೆ ಅವರೇ ಸಂಘಿಗಳ ಜೊತೆ ಕೂತು ಈ ಕೊಲೆಯನ್ನು ರೂಪಿಸಿದ್ದರೋ ಎಂಬ ಅನುಮಾನ ನೋಡುಗನಿಗೆ ಬರಬೇಕು, ಹಾಗಿತ್ತು! ಅತ್ತ ದೊಡ್ಡ ಬುದ್ಧಿಜೀವಿಗಳು ಟಿವಿ ಮಾಧ್ಯಮದಲ್ಲಿ ತಮ್ಮ ಚಿಂತನೆ ಹರಿಯಬಿಡುತ್ತಿದ್ದರೆ ಇತ್ತ ಮರಿ ಬುದ್ಧಿಜೀವಿಗಳು ಫೇಸ್‍ಬುಕ್ ಮತ್ತು ಟ್ವಿಟ್ಟರ್ ಮಾಧ್ಯಮಗಳಲ್ಲಿ ಸಂಘಪರಿವಾರ ಮತ್ತು ಕೋಮುವಾದಿಗಳನ್ನು ಹೀಯಾಳಿಸತೊಡಗಿದರು. ಕೆಲವರು ಕಲ್ಬುರ್ಗಿಯನ್ನು ಕೊಂದವನು ಆಧುನಿಕ ಗೋಡ್ಸೆ ಎಂದರು. ಸಂಜೆಯ ಹೊತ್ತಿಗೆ ಮತ್ತೆ ಟೌನ್‍ಹಾಲಿನೆದರು ಸೇರಿದ್ದ ಪ್ರಗತಿಪರ ಮತ್ತು ತಳಸ್ಪರ್ಶಿ ಚಿಂತಕರಿಗೆ ಯಾರು ಕೊಲೆಗಾರ ಎನ್ನುವುದು ರುಪಾಯಿಗೆ ಹದಿನಾರಾಣೆ ಸ್ಪಷ್ಟವಾಗಿತ್ತು!

Read more »