ವಿಷಯದ ವಿವರಗಳಿಗೆ ದಾಟಿರಿ

ಜನವರಿ 5, 2016

6

ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ

‍ನಿಲುಮೆ ಮೂಲಕ

ಇತ್ತೀಚೆಗೆ, ಲೇಖಕ ರೋಹಿತ್ ಚಕ್ರತೀರ್ಥ ಅವರ ಕಥಾಸಂಕಲನಕ್ಕೆ ಹಿರಿಯ ಲೇಖಕರಾದ ಬೊಳುವಾರ ಮಹಮ್ಮದ್ ಕುಂಞ್ ಯವರು ಮುನ್ನುಡಿ ಬರೆದಿರುವ ವಿಷಯವಾಗಿ ಫೇಸ್ಬುಕ್ಕಿನಲ್ಲಿ ವಾದ-ವಿವಾದಗಳು ನಡೆಯುತ್ತಿವೆ.ಅದಕ್ಕೆ ಪ್ರತಿಕ್ರಿಯಿಸಿದ ಬೊಳುವಾರರು, ಮೂವತ್ತು ವರ್ಷಗಳ ಹಿಂದೆ ಬರೆದಿದ್ದ “ಮುಸ್ಲಿಮನಾಗಿರುವುದೆಂದರೆ…” ಲೇಖನವನ್ನು ನೆನೆಸಿಕೊಂಡರು.ಆ ಲೇಖನದ ಕುರಿತಾಗಿ ಕಥೆಗಾರರು ಮತ್ತು ವಿಜಯವಾಣಿಯ ಅಂಕಣ ಬರಹಗಾರರಾದ ಪ್ರೇಮಶೇಖರ ಅವರು ತಮ್ಮ ವಾಲ್ನನಲ್ಲೊಂದು ಅಭಿಪ್ರಾಯ ಹಾಕಿದ್ದರು.ಆ ಅಭಿಪ್ರಾಯದ ಕುರಿತು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಅವರು “ಪ್ರೇಮಶೇಖರ ಅವರೇ, ನಿಮ್ಮಲ್ಲಿ ಲೇಖನ ಇದ್ದರೆ ಮತ್ತೊಮ್ಮೆ ಓದಿ. ಯಾವುದು ಬದಲಾಗಿದೆ? ಮುಸ್ಲಿಮರನ್ನು ಹಿಂದುತ್ವವಾದಿಗಳು ನೋಡುವ ಯಾವ ದೃಷ್ಟಿ ಬದಲಾಗಿದೆ ಎಂದು ಒಂದೊಂದಾಗಿ ಹೇಳಿಬಿಡಿ” ಎಂದಿದ್ದರು.ಪ್ರೇಮಶೇಖರ ಅವರು ಅಮೀನರಿಗೆ ಕೊಟ್ಟ ಉತ್ತರ ಇಲ್ಲಿದೆ… ಜೊತೆಗೆ ಬೊಳುವಾರರ ಹಳೇ ಲೇಖನದ ಪ್ರತಿಯೂ ಇದೆ – ನಿಲುಮೆ

– ಪ್ರೇಮ ಶೇಖರ ಅವರ ಮೊದಲ ಅಭಿಪ್ರಾಯ 

ಮುಸ್ಲಿಮನಾಗಿರುವುದೆಂದರೆ.. ಬೊಳುವಾರುಬೊಳುವಾರರು “ಸುಧಾ” ಸಾಪ್ತಾಹಿಕದಲ್ಲಿ “ಮುಸ್ಲಿಮನಾಗಿರುವುದೆಂದರೆ…” ಎಂಬ ಲೇಖನ ಬರೆದು ಮೂವತ್ತನಾಲ್ಕೂವರೆ ವರ್ಷಗಳಾಗುತ್ತಾ ಬಂದಿವೆ. ಈ ಆವಧಿಯಲ್ಲಿ ನೇತ್ರಾವತಿಯಲ್ಲಿ ಅದೆಷ್ಟು ನೀರು ಹರಿದಿದೆ! ಹಾಗೆಯೇ ಬೊಳುವಾರರು ಬೆಳೆಯುತ್ತಾ ಹೋಗಿದ್ದಾರೆ, ಅದು ಅವರ ಹೆಗ್ಗಳಿಕೆ. ಆದರೆ ಅದಕ್ಕೆ ವಿರುದ್ಧವಾಗಿ, ಆ ಲೇಖನವನ್ನು ಅಂದು ಓದಿದವರು ಅಲ್ಲೇ ಉಳಿದುಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಸಾಂಸ್ಕೃತಿಕ ವಾತಾವರಣ ಅಧಃಪಾತಾಳಕ್ಕಿಳಿಯುತ್ತಿದೆ.

ಮೂವತ್ತೂ ದಾಟದ ಆ ದಿನಗಳಲ್ಲಿ ಬೊಳುವಾರರು ಬರೆದ, ವೈಚಾರಿಕತೆಗಿಂತಲೂ ಭಾವನಾತ್ಮಕತೆಗೆ ಒತ್ತುಕೊಟ್ಟಿದ್ದ, ಆ ಲೇಖನದಲ್ಲಿ ಒಳ್ಳೆಯ ಒಳನೋಟಗಳಿದ್ದಂತೇ ಉಪಖಂಡದ ಇತಿಹಾಸದ ಬಗ್ಗೆ, ದೇಶವಿಭಜನೆಯ ಬಗ್ಗೆ ಹಲವು ತಪ್ಪುಗ್ರಹಿಕೆಗಳೂ ಇದ್ದವು. ಭಾರತಕ್ಕೆ ಮುಸ್ಲಿಮರ, ನಂತರ ಬ್ರಿಟಿಷರ ಆಗಮನದ ಸ್ವರೂಪದ ಬಗ್ಗೆ, ದೇಶವಿಭಜನೆಯ ಬಗ್ಗೆ ಬೊಳುವಾರದ ತಿಳುವಳಿಕೆಗಳಲ್ಲಿ ಅಸ್ಪಷ್ಟತೆಯಿತ್ತು. ನನಗೆ ತಕ್ಷಣಕ್ಕೆ ನೆನಪಾಗುವುದು ಇದು- “ಪಾಕಿಸ್ತಾನ ಬೇಕೇ ಬೇಡವೇ ಎಂದು ಒಂದು ಜನಮತಗಣನೆ ನಡೆಯಿತಂತೆ, ಆದರೆ ಅಂಥದು ನಡೆದ ಬಗ್ಗೆ ನನ್ನ ತಂದೆಯವರಿಗೆ ಗೊತ್ತೇ ಇಲ್ಲ” ಎಂಬುದಾಗಿ ಬೊಳುವಾರರು ಬರೆದಿದ್ದರು. ವಾಸ್ತವವೆಂದರೆ ಬೊಳುವಾರರ ತಂದೆಯವರಿಗೆ ಆ ಜನಮತಗಣನೆಯ ಬಗ್ಗೆ ಗೊತ್ತಾಗಿ ಅವರದರಲ್ಲಿ ಭಾಗಿಯಾಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಂಥದೊಂದು ಆಯ್ಕೆ ಎದುದಾದದ್ದು ಗಡಿನಾಡು ಪ್ರಾಂತ್ಯ ಮತ್ತು ಸಿಲ್ಹೆಟ್ (ಈಗ ಬಾಂಗ್ಲಾದೇಶದಲ್ಲಿದೆ) ಜಿಲ್ಲೆಯ ಜನತೆಗೆ ಮಾತ್ರ. ದೇಶವಿಭಜನೆಯ ನಿಜವಾದ ಆರೋಪಿಗಳಾದ ಮುಸ್ಲಿಂ ಲೀಗ್‍ ಮತ್ತು ಬ್ರಿಟಿಷರ ಪಾತ್ರವನ್ನು ಕಡೆಗಣಿಸಿ ಪರಿಸ್ಥಿತಿಯ ಕೈಗೊಂಬೆಯಾದ ಕಾಂಗ್ರೆಸ್‍ನ ಪಾತ್ರವನ್ನು ದೊಡ್ಡದಾಗಿ ತೋರಿಸುವ ಪ್ರಯತ್ನವೂ ಆ ಲೇಖನದಲ್ಲಿತ್ತು. ಕೋಮುವಾದದ ಉಗಮದ ಬಗೆಗೂ ಅಂಥದೇ ತಪ್ಪುತಿಳುವಳಿಕೆಯ ಭಾವನಾತ್ಮಕ ವಿವರಣೆಗಳಿದ್ದವು. ಅಂಥದೊಂದು ತಪ್ಪುಗ್ರಹಿಕೆಯನ್ನು ಎರಡುವಾರಗಳ ನಂತರ ಸಮುದ್ರಮಧನ ವಿಭಾಗದಲ್ಲಿ ಪ್ರಜ್ಞಾವಂತ ಓದುಗರೊಬ್ಬರು “ಮುಸ್ಲಿಂ ಲೀಗ್ ಯಾವಾಗ ಸ್ಥಾಪನೆಯಾಯಿತು, ಆರ್‌ಎಸ್‌ಎಸ್ ಯಾವಾಗ ಸ್ಥಾಪನೆಯಾಯಿತು ಎಂದು ನೋಡಿದರೆ ಯಾವುದು ಯಾವುದಕ್ಕೆ ಪ್ರತಿಕ್ರಿಯೆ ಎಂದು ತಿಳಿಯುತ್ತದೆ” ಎಂಬುದಾಗಿ ಹೇಳುವುದರ ಮೂಲಕ ಬೊಳುವಾರರಿಗೆ ಈ ದೇಶದ ಚರಿತ್ರೆಯ ಒಂದು ಸತ್ಯವನ್ನು ಮನಗಾಣಿಸಲು ಪ್ರಯತ್ನಿಸಿದ್ದರು. ನಂತರ ಬೊಳುವಾರದು ಬೆಳೆಯುತ್ತಾ ಹೋದರು. ಐದೇ ತಿಂಗಳಲ್ಲಿ “ದೇವರುಗಳ ರಾಜ್ಯದಲ್ಲಿ” ಎಂಬ ಅದ್ಭುತ ಕಥೆ ರಚಿಸಿದರು. ಅವರ ಬೆಳವಣಿಗೆಯ ಓಟ ಇನ್ನೂ ಸಾಗಿದೆ. ನನಗವರು ಅನುಕರಣೀಯವಾಗುವುದು, ಈ ನಾಡಿಗೆ ಅವರು ಮುಖ್ಯವಾಗುವುದು ಈ ಕಾರಣಕ್ಕಾಗಿ.

ದುರಂತವೆಂದರೆ ಆ ಲೇಖನವನ್ನು ಅಂದು ಓದಿದವರು ಅದನ್ನೇ ಪವಿತ್ರಗ್ರಂಥವೆಂದು ಇಂದಿಗೂ ನಂಬಿಬಿಟ್ಟಿದ್ದಾರೆ. ಅದರಾಚೆಗೆ ಬೆಳೆಯುವ ಪ್ರಯತ್ನವನ್ನೇ ಅವರು ಮಾಡಿಲ್ಲ. ತಾವೂ ಬೆಳೆಯಲಿಲ್ಲ, ಕರ್ನಾಟಕವನ್ನೂ ಬೆಳೆಯಲು ಬಿಡುತ್ತಿಲ್ಲ. ಬೊಳುವಾರರನ್ನೂ ಅಂದಿನ ದಿನಗಳಿಗೇ ಕಟ್ಟಿಹಾಕಲು ನೋಡುತ್ತಿದ್ದಾರೆ. ನಮ್ಮ ಬೊಳುವಾರರನ್ನೂ, ನಮ್ಮ ನಾಡನ್ನೂ, ನಮ್ಮ ಸಾಂಸ್ಕೃತಿಕ ಚಿಂತನೆಯನ್ನೂ ಈ ಪ್ರತಿಗಾಮಿಗಳಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.

*** *** ***

ಅಮೀನ್ ಮಟ್ಟು ಅವರಿಗೆ ಪ್ರೇಮಶೇಖರ ಅವರು ಬರೆದ ಪ್ರತಿಕ್ರಿಯೆ

ತಮ್ಮ ಬರಹದ ಪ್ರಾರಂಭದಲ್ಲಿ ಅಮೀನ್ ನನ್ನ ಬಗ್ಗೆ ಬರೆಯುತ್ತಾ “ಪ್ರೇಮಶೇಖರ ಎಂಬವರು (ಇವರ್ಯಾರು ಎಂದು ನಿಜಕ್ಕೂ ನನಗೆ ಗೊತ್ತಿಲ್ಲ)…” ಎಂದು ಹೇಳುತ್ತಾರೆ. ಅಂತ್ಯ ಸಮೀಪಿಸುತ್ತಿದ್ದಂತೇ ನನ್ನನ್ನು ನೇರವಾಗಿ ಉದ್ದೇಶಿಸಿ “…ಪುರಾವೆಗಳು ಬೇಕಿದ್ದರೆ ನಿಮ್ಮ ನಾಯಕರುಗಳ ಭಾಷಣಗಳನ್ನು ಕೇಳಿ ಇಲ್ಲವೆ ನಿಮ್ಮ ಗುಂಪಿನ ಗೆಳೆಯರ ಫೇಸ್ ಬುಕ್ ವಾಲ್ಗಳ ಮೇಲೆ ಒಮ್ಮೆ ಕಣ್ಣಾಡಿಸಿ” ಎಂದು ಸಲಹೆ ಕೊಡುತ್ತಾರೆ! ಇವರೆಡೂ ಹೇಳಿಕೆಗಳ ನಡುವಿರುವ ವಿರೋಧಾಭಾಸವನ್ನು ಗಮನಿಸಿದಾಗ ಅಮೀನರನ್ನು ನಾನು ಗಂಭೀರವಾಗಿ ಪರಿಗಣಿಸಬೇಕೇ, ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ವಿನಿಯೋಗಿಸಬೇಕೇ ಎಂಬ ಪ್ರಶ್ನೆಗಳು ನನ್ನನ್ನು ಕಾಡಿದ್ದುಂಟು. ಆದರೂ ಉತ್ತರಿಸುವ ನಿರ್ಧಾರ ಮಾಡಿದೆ, ಬೌದ್ಧಿಕತೆಗೆ, ಒಟ್ಟಾರೆ ಜೀವನಮೌಲ್ಯಗಳಿಗೆ ಸಂಬಂಧಿಸಿದಂತೆ ಅಮೀನರಿಗೆ ಉಪಯೋಗವಾಗುವಂತಹ ಒಂದೆರಡು ಮಾತುಗಳನ್ನು ಹೇಳುವುದು ನನ್ನ ಜವಾಬ್ದಾರಿಯಾಗಿರಬಹುದೇನೋ ಎನಿಸಿದ್ದರಿಂದ ಹಾಗೂ ಆ ಜವಾಬ್ದಾರಿಯಿಂದ ನಾನು ನುಣುಚಿಕೊಳ್ಳಬಾರದು ಎನಿಸಿದ್ದರಿಂದ. ಅದರ ಪ್ರಕಾರ ಉತ್ತರಿಸುತ್ತಿದ್ದೇನೆ, ಯಾವ ವೈರುಧ್ಯ, ವಿರೋಧಾಭಾಸವೂ ಇಲ್ಲದೇ ನೇರವಾಗಿ, ಸ್ಪಷ್ಟವಾಗಿ.

ಪ್ರಿಯ ಶ್ರೀ ದಿನೇಶ್ ಅಮೀನ್,

ನೀವು ಯಾರೆಂದು ನನಗೆ ಗೊತ್ತಿದೆ. ನೀವು ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಎಂದು ತಿಳಿದ ಮೇಲೆ ಅಂತಹ ಜವಾಬ್ಧಾರಿಯುತ ಸ್ಥಾನದಲ್ಲಿರುವ ನಿಮ್ಮ ಬಗ್ಗೆ ಕುತೂಹಲ ಉಂಟಾಗಿ ಓದಲು ಸಿಕ್ಕಿದ ನಿಮ್ಮ ಲೇಖನಗಳನ್ನು ಆಸಕ್ತಿ ವಹಿಸಿ ಓದತೊಡಗಿದೆ. ಜತೆಗೇ, ಫೇಸ್ಬುಕ್ನಲ್ಲಿ ನಾವಿಬ್ಬರೂ ಗೆಳೆಯರಾಗಿರುವ ಕಾರಣ ಆಗಾಗ ನಿಮ್ಮ ಸ್ಟೇಟಸ್ಗಳನ್ನೂ ನೋಡುತ್ತಾ ಬಂದೆ. ಮಾತುಗಳು, ಫೇಸ್ಬುಕ್ ಸ್ಟೇಟಸ್ಗಳೂ ಸೇರಿದಂತೆ ನಿಮ್ಮ ಕೆಲವು ಚಟುವಟಿಕೆಗಳು- ಟಿವಿಯೊಂದರಲ್ಲಿ “ನಿಲುಮೆ”ಯ ರಾಕೇಶ್ ಶೆಟ್ಟಿಯವರ ಜತೆಗಿನ ನಿಮ್ಮ ವಾಗ್ವಾದ, ಪುರಭವನದ ಮುಂದೆ ಗೋಮಾಂಸ ತಿಂದು ಪ್ರತಿಭಟಿಸುವ ಕಾರ್ಯಕ್ರಮದಲ್ಲಿ ತಮ್ಮ ಭಾಷಣ- ಇತ್ಯಾದಿ ಸಹಾ ಗಮನಿಸಿದೆ. ಇವೆಲ್ಲವುಗಳ ಆಧಾರದ ಮೇಲೆ ನಿಮ್ಮ ಒಂದು ಸ್ಥೂಲ ಚಿತ್ರವನ್ನು ಕಟ್ಟಿಕೊಳ್ಳಲು ನನಗೆ ಸಾಧ್ಯವಾಗಿದೆ. ಆ ಚಿತ್ರ ಒಳ್ಳೆಯದೇನಲ್ಲ. ಅದನ್ನು ನಿಮಗೆ ಸಾರ್ವಜನಿಕವಾಗಿ ಹೇಳುವ ಸ್ಯಾಡಿಸ್ಟ್ ಉದ್ದೇಶದಿಂದ ಈ ಮಾತುಗಳನ್ನು ನಾನಿಲ್ಲಿ ಬರೆಯುತ್ತಿಲ್ಲ. ನೀವು ನನಗೆ ಗೊತ್ತು ಎಂದು ಹೇಳಿದ ಮೇಲೆ ಹೇಗೆ ಗೊತ್ತು ಎಂದೂ ಹೇಳುವ ಅಗತ್ಯವಿದೆ ಎಂದು ನಾನು ತಿಳಿದಿದ್ದೇನೆ. ಹಾಗಾಗಿ ನಿಮ್ಮ ನಡೆನುಡಿಯಿಂದಲೇ ನನಗೆ ದೊರಕಿರುವ ನಿಮ್ಮ ಚಿತ್ರವನ್ನೂ, ಅದರ ಬಗ್ಗೆ ನನ್ನ ಅನಿಸಿಕೆಗಳನ್ನೂ ಇಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

• ನಿಮ್ಮ ಅಧ್ಯಯನ ಸೀಮಿತ, ಪರಿಣಾಮವಾಗಿ ಈ ನಾಡಿನ ಸಮಾಜೋ-ಧಾರ್ಮಿಕ ಇತಿಹಾಸ ಹಾಗೂ ವರ್ತಮಾನದ ಬಗ್ಗೆ ನಿಮ್ಮ ತಿಳುವಳಿಕೆಯೂ ಸೀಮಿತ ಎನ್ನುವುದನ್ನು ನಿಮ್ಮ ಬರಹಗಳು ಹೇಳುತ್ತವೆ.
• ಒಂದು ಪ್ರದೇಶದ ಒಂದಿಡೀ ವರ್ಗಕ್ಕೆ ಯಾವ ಹಿಂಜರಿಕೆಯೂ ಇಲ್ಲದೇ ಸಾರ್ವಜನಿಕವಾಗಿ ನೀವು ಇಟ್ಟ ಒಂದು ಹೆಸರು; ನಿಮಗಾಗದವರನ್ನು ಹೀಗಳೆಯಲು ಫೇಸ್ಬುಕ್ನಲ್ಲಿ, ಎಲ್ಲರಿಗೂ ಕಾಣುವಂತೆ, ನೀವು ಬಳಸುವ ಪದಗಳು- ಇವುಗಳು ಸಭ್ಯತೆಯ ಅರಿವು ನಿಮಗೆ ಇರಬೇಕಾದಷ್ಟಿಲ್ಲ ಎಂದು ಸೂಚಿಸುತ್ತವೆ. ಸಭ್ಯ, ತಾತ್ವಿಕ ಸಂವಾದಕ್ಕೆ ಹೊರತಾದ ಪದವೊಂದು ನನ್ನ ಬಗೆಗಿನ ನಿಮ್ಮ ಸ್ಟೇಟಸ್ನಲ್ಲೂ ಕಾಣಿಸಿಕೊಂಡಿದೆ. ಯಾವುದೇ ಸಂವಾದಕ್ಕೆ, ಚರ್ಚೆಗೆ ತೊಡಗುವಾಗ ಅಂತಹ ಪದಗಳೇ ಹೊಳೆಯುವಂತೆ ನಿಮ್ಮ ಮನಸ್ಸನ್ನು ನೀವು ತರಬೇತಿಗೊಳಿಸಿಬಿಟ್ಟಿದ್ದೀರಿ ಅನಿಸುತ್ತದೆ. ವಯಸ್ಸಿಗೆ, ಸ್ಥಾನಕ್ಕೆ ತಕ್ಕ ಗಾಂಭೀರ್ಯವನ್ನು ಬೆಳೆಸಿಕೊಳ್ಳುವುದರಲ್ಲಿ ನೀವು ವಿಫಲರಾಗಿದ್ದೀರಿ. ಇದು ನಿಮ್ಮ ಬಗ್ಗೆ ಇತರರಲ್ಲಿ ಗೌರವ ಭಾವನೆಯನ್ನುಂಟು ಮಾಡುವುದಿಲ್ಲ.
• ಎಲ್ಲರಿಗೂ ಸಮಾನವಾಗಿರಬೇಕಾದ ಸರ್ಕಾರದ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ, ಜನತೆ ನೀಡುವ ತೆರಿಗೆಯ ಹಣದಲ್ಲಿ ಸಂಬಳ ಪಡೆಯುವ ನೀವು ವೈಚಾರಿಕವಾಗಿ ಒಂದು ನಿರ್ದಿಷ್ಟ ಸೈದ್ಧಾಂತಿಕ ಗುಂಪು ಹಾಗೂ ರಾಜಕೀಯವಾಗಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷದೊಡನೆ ಗುರುತಿಸಿಕೊಳ್ಳುವ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿದ್ದೀರಿ. ಇದು “ಅನೈತಿಕ” ಎಂದು ನೀವಿನ್ನೂ ಗುರುತಿಸಿಲ್ಲ! ಹಾಗೆಂದು ನಿಮಗೆ ಹೇಳುವ ಬಂಧುಮಿತ್ರರಾರೂ ನಿಮಗಿಲ್ಲವೇ? ಅಥವಾ ಕೊನೇಪಕ್ಷ ಆ ಹುದ್ದೆಯಲ್ಲಿರುವವರೆಗಾದರೂ ನೀವು ಈ ನೀತಿಯಿಂದ ದೂರವಿರಬೇಕೆಂದು ಮುಖ್ಯಮಂತ್ರಿಗಳೇ ನಿಮಗೆ ‘ಸಲಹೆ’ ನೀಡಿದರೆ ಒಳಿತು. ನಿಮ್ಮ ಹಿತದ ದೃಷ್ಟಿಯಿಂದಲೇ ಅದು ಮುಖ್ಯ. ಯಾಕೆಂದರೆ ಪ್ರಸಕ್ತ ಕರ್ನಾಟಕ ಸರ್ಕಾರ ಅನುಸರಿಸುತ್ತಿರುವ ಹಲವಾರು ಪಕ್ಷಪಾತಿ ನಿಲುವುಗಳ, ತೆಗೆದುಕೊಂಡಿರುವ ಹಲವಾರು ಪಕ್ಷಪಾತಿ ನಿರ್ಣಯಗಳ ಹಿಂದೆ ನಿಮ್ಮ ‘ಸಲಹೆ’ ಇರಬಹುದೆಂದು ನಾಡಿನ ಜನತೆ ಭಾವಿಸಲು ಅವಕಾಶವಿದೆ.

ನೀವು ಎತ್ತಿರುವ ವಿಷಯಕ್ಕೆ ಬರೋಣ.

ನಾನು ಮೊದಲೇ ಹೇಳಿದಂತೆ ಬೊಳುವಾರು ಮಹಮದ್ ಕುಂಞ್ ಮೂವತ್ತೂ ದಾಟದ ವಯಸ್ಸಿನಲ್ಲಿ ಬರೆದ ಲೇಖನದಲ್ಲಿ ವೈಚಾರಿಕತೆಗಿಂತಲೂ ಭಾವುಕತೆ ಅತಿಯಾಗಿತ್ತು.ನಂತರ ಭಾವುಕ ಯುವಕ ಬೊಳುವಾರರು ಶ್ರೀಘ್ರವಾಗಿ ತಮ್ಮ ಅರಿವನ್ನು ವಿಸ್ತರಿಸಿಕೊಂಡರು, ಪ್ರಬುದ್ಧರಾಗುತ್ತಾ ನಡೆದರು. ಆದರೆ ನೀವು, ನಿಮ್ಮ ಮಾತುಗಳಲ್ಲೇ ವ್ಯಕ್ತವಾಗಿರುವಂತೆ, ಅದಾವುದನ್ನೂ ಮಾಡದೇ, ಬೊಳುವಾರರು ಬರೆದಿಟ್ಟು ಮುಂದೆ ಹೊರಟುಹೋದ ಆ ಲೇಖನದಲ್ಲಿರುವುದನ್ನೇ ಅಂತಿಮ ಸತ್ಯವೆಂದು ತಿಳಿದು, ಮೂರೂವರೆ ದಶಕಗಳವರೆಗೆ ಅದನ್ನೇ ನಿಮ್ಮ ಬದುಕಿನ ತಾತ್ವಿಕತೆಯ ತಳಹದಿಯನ್ನಾಗಿಸಿಕೊಂಡು ಈಗ ಆ ಬಗ್ಗೆ ನನ್ನ ಜತೆ ಚರ್ಚೆಗಿಳಿದಿದ್ದೀರಿ! ಈ ಬಗ್ಗೆ ಅಳುವುದೋ, ನಗುವುದೋ ನನಗೆ ತಿಳಿಯುತ್ತಿಲ್ಲ. ಮನಸ್ಸಿದ್ದಿದ್ದರೆ, ಪ್ರಯತ್ನಿಸಿದ್ದರೆ ನೀವೇ ಉತ್ತರಗಳನ್ನು ಪಡೆದುಕೊಳ್ಳಬಹುದಾಗಿತ್ತು. ನಿಮ್ಮ ಜೀವನದ ಬಹುದೊಡ್ಡ ಭಾಗವನ್ನು ವ್ಯರ್ಥವಾಗಿ ಕಳೆದುಬಿಟ್ಟಿರಲ್ಲ ದಿನೇಶ್ ಅಮೀನ್!

ತಮ್ಮ ಲೇಖನದಲ್ಲಿ ಬೊಳುವಾರರು ಎತ್ತಿರುವ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರಿಸುವುದರ ಬದಲು ಒಟ್ಟಾರೆಯಾಗಿ, ಸಮಗ್ರವಾಗಿ ಉತ್ತರಿಸುವುದು ಸೂಕ್ತ ಎಂದು ನನ್ನ ಭಾವನೆ.

ಮೊದಲಿಗೆ, ಮುಖ್ಯವಲ್ಲದ ಪ್ರಶ್ನೆಯೊಂದಕ್ಕೆ ಇಲ್ಲೇ ಉತ್ತರಿಸಿ ಅದನ್ನು ಮರೆತುಬಿಡೋಣ. ಪಾಕಿಸ್ತಾನದ ಕ್ರೀಡಾವಿಜಯಗಳಿಗೆ ಕೆಲವು ಮುಸ್ಲಿಮರು ಸಂಭ್ರಮಿಸುವ ಪ್ರಕರಣಗಳು ದೇಶದ ವಿವಿದೆಡೆ, ನಮ್ಮ ಕರ್ನಾಟಕದಲ್ಲೂ ಸಹಾ ಘಟಿಸಿವೆ. ಅಂತಹ ಇತ್ತೀಚಿನ ಘಟನೆ ಎರಡು ವರ್ಷಗಳ ಹಿಂದೆ ೨೦೧೪ರ ಮಾರ್ಚ್ ಮೊದಲವಾರದಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆದಾಗ ಘಟಿಸಿತು. ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನಿ ತಂಡ ಸಾಧಿಸಿದ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿ ಮೀರತ್ನ ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾಲಯದ ಮದನ್ ಲಾಲ್ ಧಿಂಗ್ರಾ ಹಾಸ್ಟೆಲ್ನಲ್ಲಿದ್ದ ೬೫ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರು. ಅವರ ವಿರುದ್ಧ ಉತ್ತರ ಪ್ರದೇಶ ಪೋಲಿಸರು ದೇಶದ್ರೋಹದ ಆಪಾದನೆ ಹೊರಿಸಲು ಮುಂದಾಗಿದ್ದರು. (ಉತ್ತರ ಪ್ರದೇಶದಲ್ಲಿರುವುದು ಸಮಾಜವಾದಿ ಪಕ್ಷದ ಸರಕಾರ ಎಂಬುದು ನಿಮಗೆ ಗೊತ್ತೇ ಇದೆ.)

ಇನ್ನು ಮುಖ್ಯ ವಿಷಯಗಳಿಗೆ ಬರೋಣ.
ಪ್ರವಾದಿ ಮಹಮದ್ರ ಬದುಕಿನ ಕೊನೆಯ ಎಂಟು ವರ್ಷಗಳಲ್ಲಿ ತುಂಬಿಹೋಗಿರುವುದು ಸಶಸ್ತ್ರ ಘರ್ಷಣೆಗಳ ಸರಣಿ. ಪೈಗಂಬರರು ಇಸ್ಲಾಂ ಧರ್ಮದ ಸ್ಥಾಪಕರಷ್ಟೇ ಅಲ್ಲ, ಖೊರೇಶ್ ಬುಡಕಟ್ಟಿನ ನಾಯಕತ್ವದ ಅರಬ್ ಸಾಮ್ರಾಜ್ಯದ ಸ್ಥಾಪಕರೂ ಸಹಾ ಎನ್ನುವುದು ಐತಿಹಾಸಿಕ ಸತ್ಯ. ಅವರ ಜೀವಿತಾವಧಿಯಲ್ಲಿ ಬಹುತೇಕ ಕತ್ತಿಯ ಸಹಾಯದಿಂದ ಮತ್ತು ಸ್ವಲ್ಪಮಟ್ಟಿಗೆ ಅರಬ್ ಬುಡಕಟ್ಟುಗಳ ನಡುವಿನ ಹೊಕ್ಕುಬಳಕೆಗಳ ಮೂಲಕ ಮದೀನಾ ಪಟ್ಟಣದಾಚೆಗಿನ ಅರೇಬಿಯಾ ಪರ್ಯಾಯದ್ವೀಪಕ್ಕೆ ಹರಡಿದ ಅರಬ್ ಸಾಮ್ರಾಜ್ಯ ಕ್ರಿ. ಶ. ೬೩೨ರಲ್ಲಿ ಅವರು ಕಾಲವಾದ ಮೇಲೆ ಕೇವಲ ಒಂದೇ ತಲೆಮಾರಿನಲ್ಲಿ ಕತ್ತಿಯ ಮೂಲಕ ಸಿರಿಯಾ, ಇರಾಕ್, ಪ್ಯಾಲೆಸ್ತೈನ್ಗಳಿಗೆ ಹಬ್ಬಿತು. ಜತೆಗೆ ಅದು ಪೂರ್ವದಲ್ಲಿ ಸುಮಾರು ಒಂಬೈನೂರು ವರ್ಷಗಳ ಇತಿಹಾಸವಿದ್ದ ಪರ್ಶಿಯಾದ ಸಸಾನಿದ್ ಸಾಮ್ರಾಜ್ಯವನ್ನು ಧೂಳೀಪಟಗೊಳಿಸಿದ್ದಲ್ಲದೇ ಪಶ್ಚಿಮದಲ್ಲಿ ತುರ್ಕಿಯನ್ನು ಆಕ್ರಮಿಸಿಕೊಂಡು ವಿಖ್ಯಾತ ಬೈಜಾಂಟೈನ್ ಸಾಮ್ರಾಜ್ಯವನ್ನು ಕಾನ್ಸ್ಟಾಂಟಿನೋಪಲ್ ನಗರಕ್ಕಷ್ಟೇ ಸೀಮಿತಗೊಳಿಸಿತು. ಮುಂದುವರೆದು ಅದು ಈಜಿಪ್ಟ್, ಕ್ಯುರೇನೇಯ್ಕಾ (ಲಿಬಿಯಾ), ಕಾರ್ಥೇಜ್ (ಟ್ಯುನೀಸಿಯಾ) ಸೇರಿದಂತೆ ಇಡೀ ಉತ್ತರ ಆಫ್ರಿಕಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಜಿಬ್ರಾಲ್ಟರ್ ಮೂಲಕ ಸ್ಪೇನ್ ಸೇರಿ ಅಲ್ಲಿನ ವಿಸಿಗೋಥ್ ರಾಜ್ಯವನ್ನು ಪದಾಕ್ರಾಂತಗೊಳಿಸಿಕೊಂಡು, ನಂತರ ಪಿರನೀಸ್ನಾಚೆಗಿನ ಫ್ರಾನ್ಸ್ ಗೂ ಕಾಲಿಟ್ಟಿತು.

ಅರಬ್ ಸಾಮ್ರಾಜ್ಯವಾದದ ವೇಗ ವಿಶ್ವ ಇತಿಹಾಸದಲ್ಲಿ ಅದ್ವಿತೀಯ. ರೋಮನ್ ಸಾಮ್ರಾಜ್ಯ ತನ್ನ ಗರಿಷ್ಟ ಮೇರೆಗಳನ್ನು ತಲುಪಲು ತೆಗೆದುಕೊಂಡದ್ದು ಪೂರ್ತಿ ಎರಡು ಶತಮಾನಗಳು. ಆದರೆ ಅರಬ್ ಸಾಮ್ರಾಜ್ಯವಾದ ಕೇವಲ ಒಂದೆರಡು ತಲೆಮಾರುಗಳ ಆವಧಿಯಲ್ಲಿ ಇದನ್ನು ಸಾಧಿಸಿತು. ಪ್ರವಾದಿ ಮಹಮದ್ರ ಕಾಲಾನಂತರದ ಒಂದು ಶತಮಾನಕ್ಕೂ ಕಡಿಮೆ ಆವಧಿಯಲ್ಲಿ ಪಶ್ಚಿಮದ ಅಟ್ಲಾಂಟಿಕ್ ತೀರದಿಂದ ಪೂರ್ವದ ಸಿಂಧೂ ನದಿಯವರೆಗಿನ ವಿಶಾಲ ಪ್ರದೇಶದಲ್ಲಿ ಅರಬ್ ಶಾಸನವಿತ್ತು. ಇಲ್ಲಿನ ಇಡೀ ಜನಸಮುದಾಯವನ್ನು ಇಸ್ಲಾಂಗೆ ಮತಾಂತರಗೊಳಿಸಲು ಅರಬ್ಬರು ತೆಗೆದುಕೊಂಡ ಕಾಲ ಮೂರು ಶತಮಾನಗಳು. ಈ ಮತಾಂತರದ ಜತೆಗೇ ಪೂರ್ವದಲ್ಲಿ ಇರಾಕ್ನಿಂದ ಹಿಡಿದು ಪಶ್ಚಿಮದಲ್ಲಿ ಮೊರಾಕ್ಕೋವರೆಗಿನ ವಿಶಾಲ ಪ್ರದೇಶದಲ್ಲಿನ ಎಲ್ಲ ಪ್ರಮುಖ ಭಾಷೆಗಳನ್ನೂ ಮೂಲೆಗೊತ್ತಿ ಅರೇಬಿಕ್ ಅನ್ನು ಜನಭಾಷೆಯನ್ನಾಗಿಸಿದ ಮತ್ತು ಅರಬ್ ಜೀವನವಿಧಾನವನ್ನು ಸಾರ್ವತ್ರಿಕಗೊಳಿಸಿದ ಈ ಪ್ರಕ್ರಿಯೆ ಒಂದು ಅರ್ಥದಲ್ಲಿ ಮಧ್ಯಕಾಲದಲ್ಲಿ ಘಟಿಸಿದ ಮಿನಿ ಜಾಗತೀಕರಣ. ಇದನ್ನು ಪಾಕಿಸ್ತಾನದ ವಿದ್ವಾಂಸ ಅನ್ವರ್ ಶೇಖ್ ಕರೆಯುವುದು “ಇಸ್ಲಾಂ ಎಂದರೆ ಅರಬ್ ಸಾಮ್ರಾಜ್ಯವಾದ… ಅರಬೀಕರಣ” ಎಂದು.

ಮಹಮದರ ಜೀವಿತಾವಧಿಯಲ್ಲೇ ಅಂದರೆ ಕ್ರಿ.ಶ. ೬೧೨ರಲ್ಲೇ ಕೆಲ ಅರಬ್ ವರ್ತಕರು ಕೇರಳದ ತ್ರಿಸ್ಸೂರ್ ಜಿಲ್ಲೆಯ ಕೊಡಂಗಲ್ಲೂರಿನಲ್ಲಿ ಮಸೀದಿಯೊಂದನ್ನು ಕಟ್ಟಿದರು. ಹೀಗೆ, ಪರಧರ್ಮೀಯರಿಂದ ತುಂಬಿದ್ದ, ತಮ್ಮ ರಾಜಕೀಯ ಅಧಿಕಾರ ಹಾಗೂ ಸೇನಾ ಹಿಡಿತದಲ್ಲಿಲ್ಲದ ದೂರದ ನಾಡೊಂದರಲ್ಲಿ ತಮ್ಮ ಧರ್ಮವನ್ನು ಬಹಿರಂಗವಾಗಿ ಆಚರಿಸುವ ಅವಕಾಶ ಮತ್ತು ಸ್ವಾತಂತ್ರ್ಯ ಮುಸ್ಲಿಂ ಸಮುದಾಯಕ್ಕೆ ಮೊಟ್ಟಮೊದಲು ದೊರೆತದ್ದು ಬಹುಶ: ಭಾರತದಲ್ಲಿ, ಹಿಂದೂ ಭಾರತದಲ್ಲಿ. ಹೀಗಿದ್ದರೂ, ಭಾರತಕ್ಕೆ ಇಸ್ಲಾಂ ದೊಡ್ಡ ಬಗೆಯಲ್ಲಿ ಕಾಲಿಟ್ಟದ್ದು ವರ್ತಕರ ಮೂಲಕ ಅಲ್ಲ, ದಾಳಿಯ ಮೂಲಕ. ಕ್ರಿ.ಶ. ೭೧೧-೧೨ರಲ್ಲಿ ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಸಿಂಧ್ ಮೇಲೆ ದಾಳಿಯೆಸಗಿ ಆಕ್ರಮಿಸಿಕೊಂಡು ಅದನ್ನು ದಮಾಸ್ಕರ್-ಕೇಂದ್ರಿತ ಅರಬ್ ಸಾಮ್ರಾಜ್ಯದ ಭಾಗವಾಗಿಸಿದ. ಪರಿಣಾಮವಾಗಿ ಅಲ್ಲಿ ವ್ಯಾಪಕ ಮತಾಂತರ ಜರುಗಿತು. ನಂತರ ಅಲ್ಲಿ ಅರಬ್ ಶಾಸನ ಅಂತ್ಯಗೊಂಡರೂ ಅಲ್ಲಿ ತಲೆಯೆತ್ತಿದ ಸ್ಥಳೀಯ ಮುಸ್ಲಿಂ ಅರಸರು ಇಸ್ಲಾಂನ ಬೆಳವಣಿಗೆ ನಿರಾತಂಕವಾಗಿ ಸಾಗುವಂತೆ ನೋಡಿಕೊಂಡರು. ಕ್ರಿಶ್ಚಿಯನ್ನರಿಗೂ, ಹಿಂದೂಗಳಿಗೂ ಇರುವ ಪ್ರಮುಖ ವ್ಯತ್ಯಾಸವೊಂದನ್ನು ನಾನಿಲ್ಲಿ ನಿಮಗೆ ಹೇಳಲೇಬೇಕು. ಅವಕಾಶ ದೊರೆತೊಡನೇ ಸ್ಪೇಯ್ನ್ ಮತ್ತು ದಕ್ಷಿಣ ಫ್ರಾನ್ಸ್ನ ಕ್ರಿಶ್ಚಿಯನ್ನರು ಮುಸ್ಲಿಂ ಆಡಳಿತವನ್ನು ಕಿತ್ತೊಗೆದುಬಿಟ್ಟರು. ಆದರೆ ಅಂತಹ ಅವಕಾಶವಿದ್ದಾಗ್ಯೂ ಹಿಂದೂಗಳು ಹಾಗೆ ಮಾಡಲಿಲ್ಲ ಬಯಸಿದ್ದರೆ ಬಲಾಢ್ಯ ರಾಷ್ಟ್ರಕೂಟರು ಸಿಂಧ್ನ ಮುಸ್ಲಿಂ ಆಡಳಿತವನ್ನು ಚಣದಲ್ಲಿ ಹೊಸಕಿಬಿಡಬಹುದಾಗಿತ್ತು. ಆದರೆ ಹಾಗೆ ಮಾಡಹೋಗದೇ ಸಿಂಧ್ನ ಮುಸ್ಲಿಂ ಅರಸರನ್ನು ಸಾಮಂತರಾಗಿಸಿಕೊಂಡು ಅವರಿಂದ ಕಪ್ಪವನ್ನಷ್ಟೇ ಸ್ವೀಕರಿಸಿದರು!

ಇನ್ನು ಪಾಕಿಸ್ತಾನದ ಸ್ಥಾಪನೆ, ಅನಂತರದ ಬೆಳವಣಿಗೆಗಳು- ಈ ಬಗೆಗಿನ ಪ್ರಶ್ನೆಗಳಿಗೆ ಬರೋಣ.
ಕಳೆದೊಂದು ಸಹಸ್ರಮಾನದ ದೀರ್ಘ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿ ಹೇಳುವುದಾದರೆ ಅಲ್ಪಸಂಖ್ಯಾತ ಮುಸ್ಲಿಂ ರಾಜಕೀಯ ಅಧಿಕಾರವನ್ನು ಅದೆಷ್ಟೋ ಪಟ್ಟು ದೊಡ್ಡದಾಗಿದ್ದ ಪರಧರ್ಮೀಯ ಸಮುದಾಯವೊಂದು ಮಾನ್ಯ ಮಾಡಿದ್ದೂ ಭಾರತದಲ್ಲೇ. ಪರ್ಶಿಯಾ, ತುರ್ಕಿ, ಲೆವಾಂಟ್, ಉತ್ತರ ಆಫ್ರಿಕಾಗಳಲ್ಲಿ ಅನ್ಯಧರ್ಮಗಳನ್ನು ಸಂಪೂರ್ಣವಾಗಿ ನಾಶಮಾಡಿ ಇಸ್ಲಾಂ ಅನ್ನು ಸಾರ್ವತ್ರಿಕಗೊಳಿಸಿದಂತೆ ಭಾರತದಲ್ಲಿ ಮಾಡದೇಹೋದದ್ದು ಮುಸ್ಲಿಂ ಅರಸರುಗಳ ಹೆಗ್ಗಳಿಕೆಯೇನಲ್ಲ, ಪರಧರ್ಮ ಸಹಿಷ್ಣುತೆಯೂ ಅಲ್ಲ. ಸಾರಾಸಗಟು ಮತಾಂತರವನ್ನು ಕೈಗೊಳ್ಳದಿರುವುದು ಅವರಿಗೆ ಒಂದು ಸಾಮರಿಕ ಅಗತ್ಯವಾಗಿತ್ತು. ಉಳಿದೆಲ್ಲಾ ಕಡೆ ಇಸ್ಲಾಮಿಕ್ ಪ್ರಭುತ್ವಗಳಿಗೆ ಅಪಾಯವೊದಗಿದ್ದು ಇಸ್ಲಾಮೇತರರಿಂದ. ಆದರೆ ಭಾರತದ ಮುಸ್ಲಿಂ ರಾಜಮನೆತನಗಳಿಗೆ ಕಂಟಕಪ್ರಾಯರಾಗಿದ್ದದ್ದು ಪರ್ಶಿಯಾ, ಅಫ್ಘಾನಿಸ್ತಾನ್ ಹಾಗೂ ಮಧ್ಯ ಏಶಿಯಾದ ಮುಸ್ಲಿಂ ಸಾಮ್ರಾಜ್ಯಗಳು. ಅವುಗಳ ವಿರುದ್ಧ ಸಮರ್ಥವಾಗಿ ಸೆಣಸಬೇಕಾದರೆ ಭಾರತದಲ್ಲಿ ಯಾವುದೇ ತೀವ್ರ ಪ್ರತಿರೋಧ ತಲೆಯೆತ್ತದಂತೆ ನೋಡಿಕೊಳ್ಳಬೇಕಾದ್ದು ಭಾರತೀಯ ಮುಸ್ಲಿಂ ಅರಸರಿಗೆ ಅತ್ಯಗತ್ಯವಾಗಿತ್ತು. ಅವರ ಹಿಂದೂ-ಪ್ರೇಮದ ಹಿಂದಿದ್ದದ್ದು ಇದು. ಈ “ಸುವರ್ಣ ನೀತಿ”ಯನ್ನು ಧಿಕ್ಕರಿಸಿದ ಔರಂಗಜೇಬ ಕೊನೆಗೆ ಏನಾದ ಮತ್ತು ಮೊಘಲ್ ಸಾಮ್ರಾಜ್ಯವನ್ನು ಯಾವ ಗತಿಗೆ ತಂದ ಎನ್ನುವುದನ್ನು ಇತಿಹಾಸ ಅನುಮಾನಕ್ಕೆಡೆಯಿಲ್ಲದಂತೆ ದಾಖಲಿಸಿದೆ.

ಹೊರಗಿನ ಮುಸ್ಲಿಂ ಸೇನೆಗಳ ವಿರುದ್ಧದ ಭಾರತೀಯ ಮುಸ್ಲಿಂ ಅರಸರ ಸಂಘರ್ಷದಲ್ಲಿ ಹಿಂದೂಗಳು ಸಕ್ರಿಯವಾಗಿ ಸಹಕರಿಸಿದರು. ಇಂಥದೇ ಸಹಕಾರ ಮುಸ್ಲಿಂ ಅರಸರಿಗೆ ಐಬೀರಿಯಾ ಹಾಗೂ ಬಾಲ್ಕನ್ಗಳಲ್ಲಿ ದೊರೆಯಲಿಲ್ಲ. ಹೀಗಾಗಿ ಅವರು ಅಲ್ಲಿಂದ ಕಾಲ್ತೆಗೆಯಬೇಕಾಯಿತು. ಅಂತಿಮವಾಗಿ ಭಾರತದಲ್ಲಿ ಮುಸ್ಲಿಂ ಆಡಳಿತವನ್ನು ಕೊನೆಗಾಣಿಸಿದ್ದು ಭಾರತೀಯ ಮುಸ್ಲಿಮೇತರರಲ್ಲ, ಯೂರೋಪಿಯನ್ನರು.

ರಾಜಕೀಯ ಅಧಿಕಾರ ಕಳೆದುಕೊಂಡು, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲಾರದೇ, ಪಾಶ್ಚಿಮಾತ್ಯ ವಿದ್ಯಾಭ್ಯಾಸವನ್ನು ದೂರವಿಟ್ಟು, ಹಲವು ದಶಕಗಳವರೆಗೆ ಸ್ವನಿರ್ಮಿತ ಚಿಪ್ಪಿನೊಳಗೆ ಅಡಗಿಕೊಂಡ ಭಾರತೀಯ ಮುಸ್ಲಿಂ ಸಮುದಾಯ ಅಲ್ಲಿಂದ ಹೊರಬಂದದ್ದು ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಸರ್ ಸೈಯದ್ ಅಹಮದ್ ಖಾನ್ ಅವರು ಮಹಮ್ಮಡನ್ ಎಜುಕೇಶನ್ ಮೂವ್ಮೆಂಟ್ ಅನ್ನು ಚಾಲನೆಗೊಳಿಸಿದಾಗ. ಇದರ ಅನುಗುಣವಾಗಿ ಪಾಶ್ಮಿಮಾತ್ಯ ಶಿಕ್ಷಣವನ್ನು ಗಳಿಸಿಕೊಳ್ಳತೊಡಗಿದ ಮುಸ್ಲಿಂ ಸಮುದಾಯ ಮೊದಲು ಬೇಡಿಕೆಯಿತ್ತದ್ದು ಬ್ರಿಟಿಷ್ ಭಾರತೀಯ ಆಡಳಿತಾಂಗದಲ್ಲಿ ತನಗೆ ಮೀಸಲಾತಿಗಾಗಿ. ಉತ್ತರ ಭಾರತದ ಶ್ರೀಮಂತ ನವಸಾಕ್ಷರ ಮುಸ್ಲಿಮರನ್ನೊಳಗೊಂಡ “ಶಿಮ್ಲಾ ಡೆಪ್ಯುಟೇಷನ್” ಈ ಬೇಡಿಕೆಯನ್ನು ಲಾರ್ಡ್ ಮಿಂಟೋ ಮುಂದಿಟ್ಟದ್ದು ೧೯೦೬ರಲ್ಲಿ. ಹಿಂದೂಮಹಾಸಾಗರದತ್ತ ರಶಿಯನ್ನರ ಧಾಪುಗಾಲನ್ನು ತಡೆಗಟ್ಟಲು ಮುಸ್ಲಿಂ ಬಹುಸಂಖ್ಯಾತ ಪಶ್ಚಿಮ ಭಾರತದಲ್ಲಿ ಪ್ರತ್ಯೇಕ ರಾಜಕೀಯ ವ್ಯವಸ್ಥೆಯೊಂದರ ನಿರ್ಮಾಣಕ್ಕಾಗಿ ಆಗಷ್ಟೇ ಹಂಚಿಕೆ ಹಾಕಿದ್ದ ಬ್ರಿಟಿಷರು ಶಿಮ್ಲಾ ಡೆಪ್ಯುಟೇಷನ್ನ ಬೇಡಿಕೆಯನ್ನು ತಮ್ಮ ಉದ್ದೇಶ ಸಾಧನೆಗಾಗಿ ಉಪಯೋಗಿಸಿಕೊಂಡರು. ಇದರ ಪರಿಣಾಮವಾಗಿ ಆರಂಭವಾದ ಮುಸ್ಲಿಂ-ಬ್ರಿಟಿಶ್ ಸಹಕಾರದ ಕೂಸು ಮುಸ್ಲಿಂ ಲೀಗ್. ಆ ಪಕ್ಷ ದೆಹಲಿ, ಉತ್ತರ ಪ್ರದೇಶ, ಬಾಂಬೆಗಳ ಮೇಲುವರ್ಗದ ಮುಸ್ಲಿಮರಿಂದಲೇ ತುಂಬಿತ್ತು. ಪಾರಂಪರಿಕವಾಗಿ ಶ್ರೀಮಂತರಾಗಿದ್ದ, ಜತೆಗೇ ಆಗಷ್ಟೇ ಪಾಶ್ಚಿಮಾತ್ಯ ವಿದ್ಯಾಭ್ಯಾಸಕ್ಕೆ ತೆರೆದುಕೊಂಡಿದ್ದ ಅವರಿಗೆ ಪ್ರತ್ಯೇಕ ರಾಷ್ಟ್ರದ ಕಲ್ಪನೆ, ಅದರ ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಬ್ರಿಟನ್ನಿನ ಸಹಕಾರದ ಪೂರ್ಣ ಆಶ್ವಾಸನೆ, ಮುಸ್ಲಿಂ ರಾಷ್ಟ್ರದಲ್ಲಿ ತಮ್ಮ ಶ್ರೀಮಂತಿಕೆ ಹಾಗೂ ವಿದ್ಯಾಭ್ಯಾಸಗಳಿಂದಾಗಿ ತಾವು ಗಳಿಸಿಕೊಳ್ಳಬಹುದಾದ ಸ್ಥಾನಮಾನಗಳು- ಎಲ್ಲವೂ ಆಪ್ಯಾಯಮಾನವಾಗಿ ಕಂಡವು. ಹೀಗೆ ಬ್ರಿಟಿಷ್ ಆಳರಸರ ಸಾಮ್ರಾಜ್ಯಶಾಹೀ ಹಂಚಿಕೆ ಹಾಗೂ ಅಗತ್ಯಗಳೊಂದಿಗೆ ಉತ್ತರ ಭಾರತದ ಮುಸ್ಲಿಂ ಸಮುದಾಯದ ಉಚ್ಛವರ್ಗದ ರಾಜಕೀಯ, ಆರ್ಥಿಕ ಲಾಲಸೆಗಳು ಮೇಳೈಸಿದವು. ಉಪಖಂಡದಲ್ಲಿ ತಮ್ಮ ರಾಜಕೀಯ ಅಧಿಕಾರವನ್ನು ಕೊನೆಗೊಳಿಸಿದ್ದ ಬ್ರಿಟಿಷರ ಜತೆಗೇ ಮುಸ್ಲಿಂ ಸಮುದಾಯ ಕೈಜೋಡಿಸಿ, ಶತಮಾನಗಳ ಕಾಲ ತಮ್ಮ ಅಧಿಕಾರವನ್ನು ಮಾನ್ಯಮಾಡಿ ಸಹಕರಿಸಿದ್ದ ಹಿಂದೂಗಳ ವಿರುದ್ಧವೇ ಘರ್ಷಣೆಗಿಳಿಯಿತು. ತನ್ನ ಕೃತ್ಯಕ್ಕೆ ಅದು ಮುಂದೊಡ್ಡಿದ ತರ್ಕವೇ ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ ಸಹಬಾಳ್ವೆ ನಡೆಸಲಾಗದು ಎನ್ನುವ “ದ್ವಿರಾಷ್ಟ್ರ ಸಿದ್ಧಾಂತ”. ಈಗ ಮಹಾಮಹಾ ವಿಚಾರವಾದಿಗಳಿಂದ ಹಿಡಿದು ಒಬ್ಬ ಬೀದಿಯಲ್ಲಿ ಹೋಗುವ ದಾಸಯ್ಯನೂ ಅಗತ್ಯವಿರಲೀ ಇಲ್ಲದಿರಲೀ ಎಗ್ಗಿಲ್ಲದೇ ಉದುರಿಸುವ “ಕೋಮುವಾದ” ಎಂಬ ನುಡಿಮುತ್ತು ಸಂಕೇತಿಸುವ ಬಹುತೇಕ ಅನಾಚಾರಗಳೂ ಈ ದೇಶದಲ್ಲಿ ಜನ್ಮ ತಾಳಿದ್ದು ಹೀಗೆ.

ಹೀಗೆ ದೇಶವಿಭಜನೆಯೆಂಬ ದುರಂತ ನಾಟಕದ ಪ್ರಮುಖ ಪಾತ್ರಧಾರಿಗಳಾದ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ತಮ್ಮ ಸ್ವಾರ್ಥಪರ ಉದ್ದೇಶಗಳನ್ನು ಮರೆಮಾಚಿ ಇಡೀ ಬೆಳವಣಿಗೆಗಳಿಗೆ ಧಾರ್ಮಿಕ ಆಯಾಮ ಕೊಟ್ಟು ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ರಾಜ್ಯದಲ್ಲಿ ಸಹಬಾಳ್ವೆ ನಡೆಸಲಾಗದು ಎಂದು ಘೋಷಿಸಿದ “ದ್ವಿರಾಷ್ಟ್ರ ಸಿದ್ಧಾಂತ”ವನ್ನು ಮುಂದೊಡ್ಡಿ ಭಾರತೀಯರನ್ನಷ್ಟೇ ಅಲ್ಲ ಇಡೀ ವಿಶ್ವವನ್ನು ಅಡ್ಡದಾರಿಗೆಳೆದವು. ಮುಸ್ಲಿಂ ಲೀಗ್ನ ಸ್ವಾರ್ಥಪರ ನೀತಿಗಳನ್ನು ಗುರುತಿಸಿ ನಿರಾಕರಿಸಿದ ಕೋಟ್ಯಂತರ ಮುಸ್ಲಿಮರಂತೇ ಅದರ ಸುಳ್ಳನ್ನು ಸತ್ಯವೆಂದು ನಂಬಿದ ಕೋಟ್ಯಂತರ ಅಮಾಯಕ ಮುಸ್ಲಿಮರೂ ಇಲ್ಲಿದ್ದರು. ಅವರಿಗೆ ಪಾಕಿಸ್ತಾನ ಸ್ವರ್ಗಸದೃಶವಾಗಿ ಕಂಡದ್ದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿಯೇ ದೇಶವಿಭಜನೆಯ ಸಮಯದಲ್ಲಿ ಭಾರತವಾಗಿಯೇ ಉಳಿದ ಪ್ರದೇಶಗಳಿಂದ ಪಾಕಿಸ್ತಾನಕ್ಕೆ ಹೋಗಿ ನೆಲೆಸಲು ಬಯಸಿದ ಮುಸ್ಲಿಮರ ಸಂಖ್ಯೆ ಸಾಕಷ್ಟಿತ್ತು. ದೂರ, ವೆಚ್ಚ, ಪ್ರಯಾಣ ಸಾಧನಗಳ ಕೊರತೆ ಹಾಗೂ ಗಡಿಪ್ರದೇಶಗಳಲ್ಲಿನ ಅಗಾಧ ಹಿಂಸಾಚಾರ ಉಂಟುಮಾಡಿದ ಭಯದಿಂದಾಗಿ ಹೆಚ್ಚಿನವರ ಬಯಕೆ ಈಡೇರದೇ ಅವರು ಅನಿವಾರ್ಯವಾಗಿ ಈ ದೇಶದಲ್ಲೇ ಉಳಿಯುವಂತಾಯಿತು.

ಯಶಸ್ವಿಯಾಗಿ ಪಾಕಿಸ್ತಾನ ತಲುಪಿದವರು ಮತ್ತು ಅಲ್ಲಿಗೆ ಹೋಗಲಾಗದೇ ಇಲ್ಲೇ ಉಳಿದು ಪರಿತಪಿಸಿದವರಿಗೆ ಆ ಗಳಿಗೆಯಲ್ಲಿ ಅರಿವಿಗೆ ಬಾರದ ದಾರುಣ ಸತ್ಯವೊಂದಿತ್ತು. ವಾಸ್ತವವಾಗಿ ಮುಸ್ಲಿಂ ಲೀಗ್ಗೆ ಇಸ್ಲಾಮಿನ ಬಗೆಗಾಗಲೀ ಸಾಮಾನ್ಯ ಮುಸ್ಲಿಮರ ಬಗೆಗಾಗಲೀ ಯಾವ ಕಾಳಜಿಯೂ ಇರಲಿಲ್ಲ. ಅದಕ್ಕೆ ಬೇಕಾಗಿದ್ದುದು ತನ್ನ ರಾಜಕೀಯ ಅಧಿಕಾರಕ್ಕಾಗಿ ಒಂದಷ್ಟು ನೆಲ ಅಷ್ಟೇ. ಈ ಸತ್ಯ ನಮಗೆ ಗೋಚರವಾಗುವುದು ಪಾಕಿಸ್ತಾನಕ್ಕಾಗಿ ಮುಸ್ಲಿಂ ಲೀಗ್ ಬೇಡಿದ ಪ್ರದೇಶಗಳನ್ನು ನೋಡಿದಾಗ. ಅದರ ಬೇಡಿಕೆಯ ಪಟ್ಟಿಯಲ್ಲಿದ್ದ ಪ್ರದೇಶಗಳು ಪಶ್ಚಿಮದಲ್ಲಿ ಬಲೂಚಿಸ್ತಾನ, ಸಿಂಧ್, ವಾಯುವ್ಯ ಗಡಿನಾಡು ಪ್ರಾಂತ್ಯ, ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ ಮತ್ತು ಇಂದಿನ ಹರಿಯಾನಾ, ಹಿಮಾಚಲ್ ಪ್ರದೇಶ್ ಸೇರಿದಂತೆ ಹಿಂದಿನ ಇಡೀ ಪಂಜಾಬ್ ಪ್ರಾಂತ್ಯ, ಪೂರ್ವದಲ್ಲಿ ಕಲ್ಕತ್ತಾ ಸೇರಿದಂತೆ ಇಡೀ ಬಂಗಾಲ, ಇಡೀ ಪೂರ್ವೋತ್ತರ ರಾಜ್ಯಗಳು, ಜತೆಗೆ ಪೂರ್ವ ಪಶ್ಚಿಮಗಳನ್ನು ಸೇರಿಸಲು ಉತ್ತರ ಪ್ರದೇಶ ಮತ್ತು ಬಿಹಾರಗಳ ಉತ್ತರ ಭಾಗಗಳನ್ನು ಸೇರಿಸಿ ಎಳೆದ ಒಂದು ಪಟ್ಟೆ. ತಾನು ಬೇಡಿಕೆಯಿತ್ತ ಪ್ರದೇಶಗಳೆಲ್ಲವೂ ಮುಸ್ಲಿಂ ಲೀಗ್ಗೆ ಸಿಕ್ಕಿದ್ದರೆ ಪಾಕಿಸ್ತಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗುತ್ತಿದ್ದರು! ಇನ್ನೂ ಮುಂದುವರೆದು ಹೇಳುವುದಾದರೆ ಬ್ರಿಟಿಷರು ಅಂತಿಮವಾಗಿ ಕೊಟ್ಟ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳನ್ನು “truncated and moth-eaten” (ತುಂಡರಿಸಲ್ಪಟ್ಟ ಮತ್ತು ಹುಳು ತಿಂದ) ಎಂದು ಹೀಗಳೆದ ಮಹಮದ್ ಆಲಿ ಜಿನ್ನಾ ಹತ್ತಿರದ ಉದಯಪುರ, ಜೈಪುರ ಮುಂತಾದ ದೇಶೀಯ ಸಂಸ್ಥಾನಗಳನ್ನು ಪಾಕಿಸ್ತಾನಕ್ಕೆ ಸೇರಿಸಿಕೊಳ್ಳಲು ಸಂಚುಹೂಡಿದರು. ಅವರ ಪ್ರಯತ್ನಗಳು ಯಶಸ್ವಿಯಾಗಿದ್ದರೆ ರಾಜಧಾನಿ ಜೈಪುರ ಸೇರಿದಂತೆ ಈಗಿನ ರಾಜಾಸ್ಥಾನದ ಬಹುತೇಕ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿರುತ್ತಿದ್ದವು. ಇದರ ಜತೆಗೆ ಹಿಂದೂ ಬಹುಸಂಖ್ಯಾತ ಹೈದರಾಬಾದ್ ಮತ್ತು ಜುನಾಘಡಗಳನ್ನು ತನ್ನದಾಗಿಸಿಕೊಳ್ಳಲು ಪಾಕಿಸ್ತಾನ ಹೂಡಿದ ತಂತ್ರಗಳನ್ನೂ ನೆನಪಿಸಿಕೊಳ್ಳಬೇಕು.

ಮುಸ್ಲಿಂ ಲೀಗ್ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಜತೆ ಶಾಮೀಲಾಗಿ ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡಿತು ಎಂಬ ಆಘಾತಕಾರೀ `ರಹಸ್ಯ’ ಪಾಕಿಸ್ತಾನ ಸ್ಥಾಪನೆಯಾಗುತ್ತಿದ್ದಂತೇ ಬಯಲಾಯಿತು. “ದ್ವಿರಾಷ್ಟ್ರ ಸಿದ್ದಾಂತ”ವನ್ನು ಮುಂದೊಡ್ಡಿ, ಮುಸ್ಲಿಮರ ಹಿತರಕ್ಷಣೆಯ ಕೂಗು ಹಾಕಿ, ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ಮಾಣಕ್ಕಾಗಿ ತಕರಾರು ತೆಗೆದು ಅದು ಯಶಸ್ವಿಯಾಗಿ ಪಾಕಿಸ್ತಾನ ನಿರ್ಮಾಣವಾದ ಮರುಗಳಿಗೆಯಲ್ಲೇ ಲೀಗ್ನ ನಾಯಕರು ರಾಗ ಬದಲಾಯಿಸಿದರು. ಅವರ ಪಾಕಿಸ್ತಾನದಲ್ಲಿ ಸಾಮಾನ್ಯ ಮುಸ್ಲಿಮರಿಗೆ ಸ್ಥಾನವಿರಲಿಲ್ಲ. ಪಾಕಿಸ್ತಾನದ ಮೊದಲ ಪ್ರಧಾನಮಂತ್ರಿಯಾದವರು ಯುನೈಟೆಡ್ ಪ್ರಾವಿನ್ಸ್ (ಈಗಿನ ಉತ್ತರ ಪ್ರದೇಶ)ದ ಶ್ರೀಮಂತ ಮನೆತನವೊಂದಕ್ಕೆ ಸೇರಿದ್ದ ಲಿಯಾಖತ್ ಅಲಿ ಖಾನ್. ಭಾರತದಿಂದ ಪ್ರವಾಹದಂತೆ ಹರಿದುಬರುತ್ತಿದ್ದ ಮುಸ್ಲಿಂ ನಿರಾಶ್ರಿತರ ಬಗ್ಗೆ ತಿರಸ್ಕಾರ ತೋರುತ್ತಾ ಅವರು “ಪೂರ್ವ ಪಂಜಾಬ್ನ ಮುಸ್ಲಿಮರ ಹೊರತಾಗಿ ಯುನೈಟೆಡ್ ಪ್ರಾವಿನ್ಸ್ ಸೇರಿದಂತೆ ಬೇರಾವ ಪ್ರದೇಶಗಳ ಮುಸ್ಲಿಮರಿಗೂ ಪಾಕಿಸ್ತಾನದಲ್ಲಿ ಸ್ಥಳ ಇಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು! ಅಷ್ಟೇ ಅಲ್ಲ, ಪಾಕಿಸ್ತಾನ ಒಂದು ಧರ್ಮಾಧಾರಿತ ರಾಷ್ಟ್ರವಾಗುವುದು ತಮ್ಮ ಆಶಯವಲ್ಲ ಎಂದು ರಾಷ್ಟ್ರದ ಸೃಷ್ಟಿಕರ್ತ ಜಿನ್ನಾ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಆಗಸ್ಟ್ ೧೨, ೧೯೪೭ರಂದು ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿನ ತಮ್ಮ ಮೊಟ್ಟಮೊದಲ ಅಧ್ಯಕ್ಷೀಯ ಭಾಷಣದಲ್ಲಿ ನವರಾಷ್ಟ್ರದ ರಾಜನೀತಿಯ ಬಗ್ಗೆ ಹೇಳುತ್ತಾ “ಪಾಕಿಸ್ತಾನ ಒಂದು ಧರ್ಮನಿರಪೇಕ್ಷ ಹಾಗೂ ಆಧುನಿಕ ರಾಷ್ಟ್ರವಾಗಿ ಉಗಮಿಸಬೇಕು” ಎಂದು ಘೋಷಿಸಿದರು. ಮುಂದುವರೆದು ಅವರು “…ನೀವು ಯಾವುದೇ ಕೋಮಿಗೆ ಸೇರಿರಲಿ ನೀವೆಲ್ಲರೂ ಈ ರಾಷ್ಟ್ರದಲ್ಲಿ ಸಮಾನ ಹಕ್ಕುಗಳು, ಸವಲತ್ತುಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ ಪ್ರಜೆಗಳು… ನೀವು ಮಂದಿರಗಳಿಗೆ, ಮಸೀದಿಗಳಿಗೆ ಅಥವಾ ಇನ್ನಾವುದೇ ಪವಿತ್ರಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಿ… ಇದು ಸರಕಾರದ ಕಾರ್ಯಕಲಾಪಗಳಿಗೆ ಯಾವುದೇ ವಿಧದಲ್ಲೂ ಸಂಬಂಧಿಸಿರುವುದಿಲ್ಲ… ನಾವೆಲ್ಲರೂ ಒಂದೇ ರಾಷ್ಟ್ರದ ಪ್ರಜೆಗಳು, ಸಮಾನ ಪ್ರಜೆಗಳು ಎಂಬ ಮೂಲಭೂತ ತತ್ವದ ಆಧಾರದ ಮೇಲೆ ನಾವು ಮುಂದಡಿ ಇಡುತ್ತಿದ್ದೇನೆ…” ಎಂದು ಘೋಷಿಸಿದರು. ಅಲ್ಲಿಯವರೆಗೆ ಹಿಂದೂಗಳನ್ನೂ ಮುಸ್ಲಿಮರನ್ನೂ ಪ್ರತ್ಯೇಕ “ರಾಷ್ಟ್ರ”ಗಳು ಎಂದು ಉಲ್ಲೇಖಿಸುತ್ತಿದ್ದ ಜಿನ್ನಾ ಈಗ ಅವೆರಡನ್ನೂ ಕೇವಲ ಬೇರೆ ಬೇರೆ “ಕೋಮು”ಗಳು ಎಂದು ಕರೆದರು!

ಈ ಬೆಳವಣಿಗೆಗಳು ಕೆಲವು ಮುಸ್ಲಿಮರಿಗೆ ಸತ್ಯದ ಅರಿವು ಮೂಡಿಸಿ ಅವರನ್ನು ಪಾಕಿಸ್ತಾನದಿಂದ ವಿಮುಖವಾಗಿಸಿದರೂ ಹೆಚ್ಚಿನವರಿಗೆ ಈ ಸತ್ಯದರ್ಶನಕ್ಕಾಗಿ ಮತ್ತಷ್ಟು ಪುರಾವೆಗಳು ಬೇಕಾಗಿದ್ದವು. ಆ ಪುರಾವೆಗಳನ್ನು ಭಾರತ ಮತ್ತು ಪಾಕಿಸ್ತಾನಗಳೆರಡೂ ಒದಗಿಸಿದವು. ಪ್ರಜಾಪ್ರಭುತ್ವದ ವೈಫಲ್ಯ ಹಾಗೂ ಅದು ತಂದ ರಾಜಕೀಯ ಅವ್ಯವಸ್ಥೆ, ಅರ್ಥಿಕ ಅಧೋಗತಿ ಮತ್ತು ಎಂಬತ್ತರ ದಶಕದಿಂದ ಆರಂಭಗೊಂಡ ಭಯೋತ್ಪಾದನೆ, ಉಗ್ರವಾಗತೊಡಗಿದ ಶಿಯಾ – ಸುನ್ನಿ ವೈಷಮ್ಯ ಪಾಕಿಸ್ತಾನದಲ್ಲಿ ನೆಮ್ಮದಿಯ ಬದುಕು ಅಸಾಧ್ಯ ಎಂಬ ಅಭಿಪ್ರಾಯವನ್ನು ಭಾರತೀಯ ಮುಸ್ಲಿಮರಲ್ಲಿ ಬಿತ್ತಿದವು. ಇದೆಲ್ಲಕ್ಕಿಂತಲೂ ಆಘಾತಕಾರಿಯಾದ ಸುದ್ಧಿ ಮತ್ತೊಂದಿತ್ತು. ಪಾಕಿಸ್ತಾನದ ನಿರ್ಮಾಣದಲ್ಲಿ ಮತ್ತು ಅದರ ಪ್ರಾರಂಭಿಕ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದವರು ಈಗಿನ ಭಾರತದ ಪ್ರದೇಶಗಳಿಂದ ವಲಸೆಹೋದ ಮುಸ್ಲಿಮರು. ದುರಂತವೆಂದರೆ ಅವರನ್ನು ತಮ್ಮವರೆಂದು ಸ್ಥಳೀಯರು ಇಂದಿಗೂ ಒಪ್ಪಿಕೊಂಡಿಲ್ಲ. ಇಂದಿಗೂ ಅವರನ್ನು “ಮೊಹಾಜಿರ್” ಅಂದರೆ ನಿರಾಶ್ರಿತರು ಎಂದು ಕರೆಯಲಾಗುತ್ತದೆ. ಅವರ ವಿರುದ್ಧ ಹಿಂಸಾಚಾರ ರಾಷ್ಟ್ರದ ಎಲ್ಲೆಡೆ, ಮುಖ್ಯವಾಗಿ ಕರಾಚಿ ನಗರದಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ. ಭಾರತಕ್ಕೆ ಹಿಂತಿರುಗಿಹೋಗಿ ಎಂದು ಅವರಿಗೆ ಹೇಳಲಾಗುತ್ತದೆ. ಅವರ ಹಿತರಕ್ಷಣೆಗೆಂದೇ ಹುಟ್ಟಿಕೊಂಡ ರಾಜಕೀಯ ಪಕ್ಷ ಮೊಹಾಜಿರ್ ಕ್ವಾಮಿ ಇತ್ತೆಹಾದ್. ಅದರ ನಾಯಕ ಅಲ್ತಾಫ್ ಹುಸೇನ್ ವಿರೋಧಿಗಳಿಗೆ ೧೯೮೩ರಷ್ಟು ಹಿಂದೆಯೇ ನೀಡಿದ ತಿರುಗೇಟು ಇಂದಿಗೂ ಪ್ರಸ್ತುತ: “ಪಾಕಿಸ್ತಾನವನ್ನು ನಿರ್ಮಿಸಿದವರು ನಾವು. ಭಾರತಕ್ಕೆ ಹಿಂತಿರುಗಿ ಎಂದು ನೀವು ನಮಗೆ ಹೇಳುತ್ತಿದ್ದೀರಿ. ಆಯಿತು, ಹೋಗುತ್ತೇವೆ. ಹೋಗುವಾಗ ಪಾಕಿಸ್ತಾನವನ್ನೂ ಜತೆಗೆ ಕೊಂಡೊಯ್ಯುತ್ತೇವೆ.”

ಪಾಕಿಸ್ತಾನದಲ್ಲಿನ ಈ ಬೆಳವಣಿಗೆಗಳು ಆ ದೇಶ ತಮ್ಮ ಕನಸಿನ ಸ್ವರ್ಗವಲ್ಲ ಎನ್ನುವ ದಾರುಣ ಸತ್ಯವನ್ನು ನಲವತ್ತೇಳರಲ್ಲಿ ಅಲ್ಲಿಗೆ ಬಯಸಿದರೂ ಹೋಗಲಾಗದೇ ನಿರಾಶೆಗೊಂಡಿದ್ದ ಬಹುತೇಕ ಭಾರತೀಯ ಮುಸ್ಲಿಮರಲ್ಲಿ ಮೂಡಿಸಿದವು. ಜತೆಗೆ, ಜಾತ್ಯತೀತ ಮಾರ್ಗ ಹಿಡಿದ ಭಾರತದಲ್ಲಿ ನೆಮ್ಮದಿ ಹಾಗೂ ನಿರ್ಭೀತಿಯಿಂದ ತಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಹೇರಳ ಅವಕಾಶಗಳಿವೆ ಎನ್ನುವುದನ್ನು ಮನಗಂಡ ಅವರಲ್ಲಿ ಪಾಕಿಸ್ತಾನದ ಬಗೆಗಿನ ಪ್ರೀತಿ ಕರಗತೊಡಗಿತು.

“ವಿಪುಲ ಅವಕಾಶಗಳ ಭಾರತವನ್ನು ತೊರೆದು ಗೊಂದಲಮಯ ಪಾಕಿಸ್ತಾನಕ್ಕೆ ಹೋಗಿ ಮೊಹಾಜಿರ್ ಎಂಬ ಹೀನಾಯ ಹಣೆಪಟ್ಟಿ ಹಚ್ಚಿಸಿಕೊಳ್ಳಲು ಯಾವ ವಿವೇಕಿ ತಾನೆ ಇಷ್ಟಪಡುತ್ತಾನೆ?” ನಲವತ್ತೇಳರಲ್ಲಿ ಗಡಿಯ ಸನಿಹಕ್ಕೆ ಹೋದರೂ ಪಾಕಿಸ್ತಾನ ಸೇರಲಾಗದೆ ನಿರಾಸೆಯಿಂದ ಕೊರಗುತ್ತಾ ಹಿಂದಕ್ಕೆ ಬಂದ ಭೂಪಾಲ್ನ ಮುಸ್ಲಿಂ ಕುಟುಂಬವೊಂದರ ಹಿರಿಯ ಸದಸ್ಯರೊಬ್ಬರು ೧೯೯೭ರಲ್ಲಿ ಹೇಳಿದ ಈ ಮಾತುಗಳು ನನ್ನ ಕಿವಿಯಲ್ಲಿನ್ನೂ ಗುಂಯ್ಗುಡುತ್ತಿವೆ. ಮುಂದುವರೆದು ಅವರು “ಭಾರತದಲ್ಲೇ ಉಳಿದ ಬಗ್ಗೆ ನನಗೆ ಈಗ ಅತೀವ ನೆಮ್ಮದಿಯೆನಿಸುತ್ತಿದೆ” ಎಂದು ಹೇಳಿದರು. ಇಂಥದೇ ಮಾತುಗಳನ್ನು ಸಾಮಾನ್ಯ ಮುಸ್ಲಿಮರಿಂದ ಹಿಡಿದು ಈ ದೇಶದ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಗಣ್ಯ ಮುಸ್ಲಿಮರು ಹೇಳುತ್ತಾರೆ. ಮುಸ್ಲಿಂ ಬಹುಸಂಖ್ಯಾತ ದೇಶಗಲಲ್ಲಿರುವ ಮುಸ್ಲಿಮರಿಗಿಂತಲೂ ಇಲ್ಲಿನ ಮುಸ್ಲಿಮರು ನೆಮ್ಮದಿಯಿಂದಿದ್ದಾರೆ, ನಿರಾರಂಕವಾಗಿ ತಮ್ಮ ಧರ್ಮವನ್ನು ಆಚರಿಸುತ್ತಾರೆ ಎಂದು ದೇಶದ ಒಳ-ಹೊರಗಿನ ಮುಸ್ಲಿಮರು ಹೇಳುತ್ತಿದ್ದಾರೆ. ಅದನ್ನೆಲ್ಲಾ ನಿರ್ಲಕ್ಷಿಸಿ ಮುಸ್ಲಿಮರಿಗೆ ಇಲ್ಲಿ ಕಡುಕಷ್ಟ ಎಂದು ಹೇಳುತ್ತಿರುವವರು ನಿಮ್ಮಂತಹ ಮುಸ್ಲಿಮೇತರರು! ಎಲ್ಲೋ ಅಪರೂಪಕ್ಕೆ ಅಕ್ಬರುದ್ದೀನ್ ಒವೈಸಿಯಂಥವರಿಂದ ಕೇಳುವ ಅಪಸ್ವರಗಳಿಗೆ ನೀವು ಧ್ವನಿವರ್ಧಕಗಳಾಗುತ್ತೀರಿ. ಹೀಗಾಗಿ ಆ ಉತ್ಪ್ರೇಕ್ಷಿತ ಕೊರಗುಗಳು ದೊಡ್ಡದಾಗಿ ಎಲ್ಲೆಡೆ ಕೇಳಿಸುತ್ತವೆ!

ಭಾರತೀಯ ಮುಸ್ಲಿಮರು ತಮಗೋಸ್ಕರ ಪಾಕಿಸ್ತಾನವನ್ನು ಸೃಷ್ಟಿಸಿಕೊಂಡರು, ಕಾಂಗ್ರೆಸ್ನ ಸಹಕಾರದಿಂದ ಭಾರತದಲ್ಲಿಯೂ ಸವಲತ್ತುಗಳನ್ನು ಪಡೆದುಕೊಂಡರು. ಸೌದಿ ಅರೇಬಿಯಾದ ಪತ್ರಿಕೆಯೊಂದು ಹತ್ತಿರ ಹತ್ತಿರ ಎರಡು ದಶಕಗಳ ಹಿಂದೆಯೇ ಹೇಳಿದಂತೆ ಭಾರತೀಯ ಮುಸ್ಲಿಮರ ಬದುಕು ಪಾಕಿಸ್ತಾನೀ ಮುಸ್ಲಿಮರ ಬದುಕಿಗಿಂತಲೂ ಉತ್ತಮವಾಗಿದೆ ಮತ್ತು ಸುನ್ನಿಗಳಿರಲಿ, ಶಿಯಾಗಳಿರಲಿ ಅವರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರವಿದೆ. ಶಿಕ್ಷಣ, ಉದ್ಯೋಗದಲ್ಲಿ ಅವರಿಗೆ ಇರುವ ಕೊರತೆಗಳಿಗೆ ಕಾರಣ ಇನ್ನೂ ಪೂರ್ಣವಾಗಿ ಮುಖ್ಯವಾಹಿನಿಗೆ ಬರಲಿಚ್ಚಿಸದೇ ಚಿಪ್ಪಿನೊಳಗೇ ಉಳಿಯುವ ಅವರ ಮನೋಭಾವವೇ ಹೊರತು ಈ ದೇಶದ ವ್ಯವಸ್ಥೆ ಅಥವಾ ಹಿಂದೂಗಳ ನೀತಿಗಳು ಕಾರಣವಲ್ಲ. ವಾಸ್ತವಾಂಶ ಹೀಗಿದ್ದೂ ನಿಮ್ಮಂಥವರಿಂದ ಅವರ ಉತ್ಪ್ರೇಕ್ಷಿತ ಕೊರಗಿನ ಕೂಗು ನಿಲ್ಲುತ್ತಿಲ್ಲ. ಇದರಿಂದಾಗಿ ಈ ದೇಶದಲ್ಲಿ ಕಡೆಗಣಿಸಲ್ಪಡುತ್ತಿವವರು ದಲಿತರು. ಮೊದಲಿಗೆ ಮುಸ್ಲಿಂ ಸಮುದಾಯದ ಪಾಕಿಸ್ತಾನ್ ಬೇಡಿಕೆಯ ಅಬ್ಬರ, ಸ್ವಾತಂತ್ರಾನಂತರ ನಿಮ್ಮಂಥವರಿಂದಾಗಿ ಹೊಸಹೊಸ ಆಯಾಮಗಳನ್ನು ಪಡೆದುಕೊಂಡ ಅದರ ಉತ್ಪ್ರೇಕ್ಷಿತ ಕೊರಗುಗಳು ಮತ್ತವುಗಳು ರಾಷ್ಟ್ರೀಯ ಚರ್ಚೆಯಲ್ಲಿ ಪಡೆದುಕೊಂಡ ಮುಂಚೂಣಿ ಸ್ಥಾನದಿಂದಾಗಿ ಶತಮಾನಗಳಿಂದ ನಿಜವಾಗಿಯೂ ನೊಂದಿದ್ದ ದಲಿತರ ಉದ್ಧಾರ ನಿಧಾನಗೊಂಡಿತು. ಒಂದು ಪ್ರದೇಶದಲ್ಲಿ ಬಹುಸಂಖ್ಯಾತರಾಗದೇ, ದೇಶದ ಎಲ್ಲೆಡೆ ಹರಡಿಹೋಗಿದ್ದರಿಂದಾಗಿ ಬ್ರಿಟಿಷ್ ರಾಜಕೀಯ-ರಾಜತಾಂತ್ರಿಕ-ಸಾಮರಿಕ ಅಗತ್ಯಗಳಿಗೆ ಅವರ ಉಪಯೋಗ ಏನೇನೂ ಇರಲಿಲ್ಲ. ಹೀಗಾಗಿ ಬ್ರಿಟಿಷ್ ಸತ್ತೆಯಿಂದ ಅವರು ನಿರ್ಲಕ್ಷಿತಗೊಂಡರು. ಮುಸ್ಲಿಮರಂತೆ ಸಂಘಟಿತರಾಗಿ ಹೋರಾಡುವ ಸಾಮರ್ಥ್ಯವನ್ನೂ ದಲಿತರು ಪ್ರದರ್ಶಿಸದ ಹಾಗೂ ಸೂಕ್ತ ನಾಯಕತ್ವದ ಕೊರತೆಯ ಕಾರಣ ಸ್ವತಂತ್ರ ಭಾರತದಲ್ಲೂ ಅವರ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ನಿಮ್ಮಂಥವರು ಮುಸ್ಲಿಂ ಸಮುದಾಯದ ಕೊರಗಿನ ದನಿಯನ್ನು ಕುಗ್ಗಿಸದ ಹೊರತು ದಲಿತ ದನಿ ರಾಷ್ಟ್ರಮಟ್ಟದಲ್ಲಿ ಮುಂಚೂಣಿಗೆ ಬರಲಾರವು.

ಇನ್ನು ನಿಮ್ಮ ಕಲ್ಪನೆಯ ಒಂದು ‘ಅಪಾಯ’ದ ಬಗ್ಗೆ ಒಂದು ಮಾತು: ಅದನ್ನು ನೀವು ಹಿಂದುತ್ವವಾದ ಎಂಬ ಹೆಸರಿನಿಂದ ಕರೆಯುತ್ತೀರಿ. ಇದೇನೆಂದು ನೋಡೋಣ. ೧೯೮೯ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಅರಂಭವಾದ ಸರಿಸುಮಾರಿಗೇ ರಾಷ್ಟ್ರದಾದ್ಯಂತ ಚರ್ಚಿತವಾದ ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಹಿನ್ನೆಲೆಯೊಂದಿಗೆ ಈ ಹಿಂದುತ್ವವಾದದ ಕೂಗೆದ್ದಿತು. ತನಗಿದ್ದ ಸೀಮಿತ ಬೆಂಬಲದಿಂದಾಗಿ ದೇಶಕ್ಕೆ ಮಾರಕವಾಗುವಂತೆ ಬೆಳೆಯುವುದು ಈ ‘ಹಿಂದುತ್ವವಾದ’ಕ್ಕೆ ಸಾಧ್ಯವೇ ಇರಲಿಲ್ಲ. ಹಾಗೆ ಬೆಳೆಸುವ ಉದ್ದೇಶವೂ ಭಾರತೀಯ ಜನತಾಪಕ್ಷ ಹಾಗೂ ಅದರ ಮುಂಚೂಣಿಯಲ್ಲಿದ್ದ ಎಲ್. ಕೆ. ಅದ್ವಾನಿಯವರಿಗಿರಲಿಲ್ಲ. ಇಡೀ ‘ಹಿಂದುತ್ವವಾದ’ದ ಹಿಂದಿದ್ದದ್ದು ಬಿಜೆಪಿಯ ಹಾಗೂ ಅದ್ವಾನಿಯವರ ತಾತ್ಕಾಲಿಕ ಅವಕಾಶವಾದಿ ರಾಜಕಾರಣವಷ್ಟೇ ಹೊರತು ಬೇರೇನೂ ಅಗಿರಲಿಲ್ಲ. ಈ ಅಭಿಪ್ರಾಯವನ್ನು ಸ್ಪಷ್ಟಗೊಳಿಸುವ ನಂತರದ ಇತಿಹಾಸದಲ್ಲಿ ದಾಖಲಾಗಿರುವಂತೆ ೧೯೯೮ರಲ್ಲಿ ಸಹಯೋಗಿಗಳೊಂದಿಗೆ ಸೇರಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹೊತ್ತಿಗೆ ನೀವು ವರ್ಣಿಸುವಂತಹ ಅದರ ಹಿಂದುತ್ವವಾದ ಮೂಲೆಗೆ ಸರಿದಿತ್ತು ಮತ್ತು ಆರುವರ್ಷಗಳ ಎನ್ಡಿಎ ಅಧಿಕಾರಾವಧಿಯಲ್ಲಿ ಅದೆಂದೂ ಮುಂಚೂಣಿಗೆ ಬರಲೇ ಇಲ್ಲ. ಆದರೆ ದುರಂತವೆಂದರೆ ನೀವೂ ಸೇರಿದಂತೆ ಈ ದೇಶದ ಮಾಧ್ಯಮದ ಮತ್ತು ವಿಚಾರವಾದಿಗಳ ಒಂದು ದೊಡ್ಡ ವರ್ಗ ಹಾಗೂ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಕಳೆದ ಎರಡೂವರೆ ದಶಕಗಳಿಂದಲೂ ಇದನ್ನೊಂದು ದೇಶದ ಮುಂದಿರುವ ಭಾರಿ ಕಂಟಕದಂತೆ ಚಿತ್ರಿಸುತ್ತಲೇ ಬಂದಿವೆ.

ಹಿಂದುತ್ವವಾದವನ್ನು ಬಿಜೆಪಿ ಮರೆತರೂ ಜನತೆ ಅದನ್ನು ಒಂದುಕ್ಷಣವೂ ಮರೆಯದಂತೆ ನೋಡಿಕೊಂಡಿವೆ. ಇವುಗಳ ಆರ್ಥಿಕ ಹಾಗೂ ವೈಯುಕ್ತಿಕ ಲಾಲಸೆ ಮತ್ತು ರಾಜಕೀಯ ಲಾಭಗಳ ಲೆಕ್ಕಾಚಾರದ ದುರಂತಮಯ ಅಂತಿಮ ಪರಿಣಾಮವೆಂದರೆ ಬಹುಸಂಖ್ಯಾತರಲ್ಲಿ ಮೂಡಿರುವ ಅಭದ್ರತೆಯ ಭಾವ. ಶತಮಾನಗಳವರೆಗೆ ಮುಸ್ಲಿಂ ಅಧಿಪತ್ಯವನ್ನು ಒಪ್ಪಿಕೊಂಡು, ಸಹಕಸಿಕೊಂಡು, ಕೊನೆಗೆ ಅವರು ಕೇಳಿದಾಗ ಅವರಿಗೊಂದು ದೇಶವನ್ನೂ ಕೊಟ್ಟು, ಇಲ್ಲೇ ಉಳಿದವರಿಗೆ ಎಲ್ಲ ಸವಲತ್ತುಗಳನ್ನೂ ನೀಡಿ ತಮ್ಮ ನಡುವೆ ಸ್ವತಂತ್ರವಾಗಿ ನೆಲೆಸಿ ಬೆಳೆಯುವಂತೆ ಅವಕಾಶ ಕಲ್ಪಿಸಿದ್ದರೂ ಮುಸ್ಲಿಮರನ್ನು ನಾವು ‘ಡಿಸ್ಕ್ರಿಮಿನೇಟ್’ ಮಾಡುತ್ತಿಲ್ಲ ಎಂದು ಹಿಂದೂಗಳು ಕಟಕಟೆಯಲ್ಲಿ ನಿಂತು ಹೇಳಬೇಕಾದ ಪರಿಸ್ಥಿತಿ ಬಂದಿದೆ! ಅವರನ್ನು ಈ ಸ್ಥಿತಿಗೆ ದೂಡಿದವರು ಮುಸ್ಲಿಮರಲ್ಲ, ನೀವು ಮತ್ತು ನಿಮ್ಮಂತ ಮುಸ್ಲಿಮೇತರರು. ನಿಮ್ಮ ಹಿಡನ್ ಅಜೆಂಡಾ ಏನಿದೆಯೋ ನನಗೆ ಗೊತ್ತಿಲ್ಲ. ಆದರೆ ಇದರ ಮುಂದಿನ ಪರಿಣಾಮ ಏನು ಗೊತ್ತೇ? ಬಹುಸಂಖ್ಯಾತರಲ್ಲಿ ಅಭದ್ರತಾ ಭಾವನೆ ಉಂಟಾಗುತ್ತದೆ ಮತ್ತು ಇದು ಅಲ್ಪಸಂಖ್ಯಾತರಿಗೆ ಒಳ್ಳೆಯ ಸುದ್ಧಿಯೇನಲ್ಲ. ಅಂತಿಮವಾಗಿ ನೀವು ಸಾಧಿಸುವುದು ಅಲ್ಪಸಂಖ್ಯಾತರ ನೆಮ್ಮದಿಯ ಬದುಕನ್ನು ಅಂತ್ಯಗೊಳಿಸಿಬಿಡುವುದು ಅಷ್ಟೇ. ನಿಮ್ಮನ್ನು ನೋಡಿದರೆ ದುರ್ಯೋಧನನ ಜತೆಗಿದ್ದು, ಅವನ ಹಿತೈಷಿಯಂತೆ ನಡೆದುಕೊಂಡ ಶಕುನಿಯ ನೆನಪಾಗುತ್ತದೆ. ಶಕುನಿ ಅಂತಿಮವಾಗಿ ಸಾಧಿಸಿದ್ದೇನು ಎನ್ನುವುದು ನಮ್ಮ ಮುಸ್ಲಿಂ ಬಾಂಧವರಿಗೆ ಗೊತ್ತೇ ಇದೆ.

ಕೊನೆಯ ಮಾತು: ನಮ್ಮ ವಿಚಾರಗಳು ಏನೇ ಆಗಿರಲಿ, ನಮ್ಮನಮ್ಮ ನಡುವಿನ ಮನುಷ್ಯಪ್ರೀತಿಗೆ ಅವು ಅಡ್ಡಿಯಾಗುವುದಿಲ್ಲ, ಆಗಬಾರದು ಕೂಡಾ. ಯಾಕೆಂದರೆ ಎಡವೋ ಬಲವೋ ನಡುವೋ ಆಗುವುದಕ್ಕೆ ಮೊದಲು, ಮೂಲಭೂತವಾಗಿ ನಾವೆಲ್ಲಾ ಮನುಷ್ಯರು. ನಮ್ಮ ನಿಲುವುಗಳು ಬದಲಾಗಬಹುದು, ಆದರೆ ನಮ್ಮ ಮೂಲಸ್ವರೂಪ ಎಂದಿಗೂ ಬದಲಾಗುವುದಿಲ್ಲ. ಹೀಗಾಗಿ ಒಬ್ಬ ಮನುಷ್ಯನಾಗಿ ನಿಮ್ಮ ಬಗ್ಗೆ ನನಗೆ ಗೌರವವಿದೆ, ಪ್ರೀತಿಯಿದೆ. ನಾನು ಇಷ್ಟು ಸಮಯ ತೆಗೆದುಕೊಂಡು ನಿಮಗೆ ಇಷ್ಟೆಲ್ಲಾ ಹೇಳಹೊರಟಿರುವುದು ಅದರಿಂದಾಗಿಯೇ.

ಮೂವತ್ತು ದಾಟಿರುವ ರೋಹಿತ್ ಚಕ್ರತೀರ್ಥರನ್ನು ನೀವು ಪಡ್ಡೆ ಹುಡುಗ ಎಂದು ಕರೆದು ಅವರ ಮಾತುಗಳನ್ನು ತಿರಸ್ಕರಿಸುತ್ತೀರಿ. ಮೂವತ್ತು ದಾಟರದಿದ್ದ ಬೊಳುವಾರರು ಬರೆದ ಲೇಖನವನ್ನು ಅಂತಿಮ ಸತ್ಯವೆಂದು ನಂಬಿ ಅದರ ಆಧಾರದ ಮೇಲೆ ನಿಮ್ಮ ಬದುಕಿನ ತಾತ್ವಿಕತೆಯನ್ನು ರೂಪಿಸಿಕೊಳ್ಳುತ್ತೀರಿ. ನಿಮ್ಮ ಈ ತಪ್ಪನ್ನು ನಿಮಗೆ ಅರಿವು ಮಾಡಿಕೊಡುವುದು ದೈವಿಕ ನಿಯಮವಾಗಿದ್ದಿರಬೇಕು. ಅದಕ್ಕೇ ಇಂದು ಬೊಳುವಾರರೂ, ಚಕ್ರತೀರ್ಥರೂ ಜತೆಯಾಗಿ ನಿಮ್ಮೆದುರು ನಿಂತಿದ್ದಾರೆ. ಬದುಕಿನ ಒಂದು ಮುಖ್ಯ ತಿರುವಿನಲ್ಲಿ ನೀವು ನಿಂತಿದ್ದೀರಿ. ಈಗ ಎದುರಿಗಿರುವ ಸವಾಲಿಗೆ ಯಾವ ಬಗೆಯಲ್ಲಿ ಉತ್ತರಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಮುಂದಿನ ಬದುಕಿನ ಸಾರ್ಥಕತೆ ನಿರ್ಧಾರವಾಗುತ್ತಿದೆ. ಇದು ನಿಮ್ಮ ಬದುಕಿನ ನಿರ್ಣಾಯಕ ಗಳಿಗೆ. ಒಂದೆಡೆ ತಣ್ಣಗೆ ಕೂತು ನಿಮ್ಮ ಇದುವರೆಗಿನ ಬದುಕನ್ನು ವಿಮರ್ಶಿಸಿಕೊಳ್ಳಿ. ಆ ಕಾರಣದಿಂದಾಗಿ ನೀವು ಸ್ವಲ್ಪಕಾಲ ಸಾರ್ವಜನಿಕ ಬದುಕಿನಿಂದ ದೂರ ಉಳಿದರೂ ಪರವಾಗಿಲ್ಲ. ಅದರ ಅಂತಿಮ ಪರಿಣಾಮ ಒಳ್ಳೆಯದೇ ಆಗಿರುತ್ತದೆ. ವಿವೇಕದಿಂದ, ಧೈರ್ಯದಿಂದ ಮುಂದುವರೆಯಿರಿ. ನಾನು ನಿಮ್ಮ ಜತೆಗಿದ್ದೇನೆ, ಈ ನಾಡಿನ ಅಗಣಿತ ಒಳ್ಳೆಯ ಮನಸ್ಸುಗಳು ನಿಮ್ಮ ಜತೆ ಇವೆ. ಮತ್ತೇನು ಬೇಕು ಅಮೀನ್?

ನಿಮಗೆ ಒಳ್ಳೆಯದಾಗಲಿ.
ಪ್ರೇಮಶೇಖರ

ಚಿತ್ರಕೃಪೆ : ದಿನೇಶ್ ಅಮೀನ್ ಮಟ್ಟು

6 ಟಿಪ್ಪಣಿಗಳು Post a comment
  1. ಜನ 5 2016

    ತುಂಬಾ ಮಹತ್ವದ ಲೇಖನ ಸರ್. ನಿಮ್ಮ ಚರಿತ್ರೆಯ ಜ್ಞಾನ ಅಪೂರ್ವವಾದದ್ದು. ದಿನೇಶ್ ಅಮೀನ್ ಮಟ್ಟು ತರಹದ ಜನ ಇನ್ನಾದರೂ ಇತಿಹಾಸವನ್ನು ತಿಳಿದುಕೊಂಡು ತಮ್ಮ ಅಭಿಪ್ರಾಯಗಳನ್ನು ಸಾರುವುದು ಒಳ್ಳೆಯದು … ಕೇರಳದ ಕೊಡುಂಗಲ್ಲೂರ್ ನ ಚೇರಮನ್ ಜುಮ್ಮಾ ಮಸೀದಿ ಕಟ್ಟಿಸಿದ್ದು ಕ್ರಿ.ಶ. ೬೧೨ ರಲ್ಲಿ ಎಂದು ಬರೆದಿದ್ದೀರಿ ವಾಸ್ತವದಲ್ಲಿ ಅದನ್ನು ಕಟ್ಟಿಸಿದ್ದು ಕ್ರಿ.ಶ. ೬೨೯ ರಲ್ಲಿ. (ವಿಕಿಪೀಡಿಯ ಲಿಂಕ್ ಅನ್ನು ಕೆಳಗೆ ಕೊಟ್ಟಿದ್ದೇನೆ.) ….

    ಉತ್ತರ
  2. Mallappa
    ಜನ 5 2016

    ನೀವು ಹೇಳಿರುವ ಇತಿಹಾಸ ಸತ್ಯ ನಮ್ಮ ಸಹೋದರರಾದ ಮುಸ್ಲಿಂ ಬಂಧುಗಳು ತಮ್ಕ ಕಣ್ಣು ತೆರೆಯಲು ಉಪಯೋಗಿಸಿದರೆ ನಾವು ನೀವೆಲ್ಲ ನೆಮ್ಮದಿಯ ಬದುಕು ಕಾಣುವಂತಾಗುತ್ತದೆ. ಅದೆಷ್ಟೋ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಜನಾಂಗದವರಿದ್ದೂ ಅಲ್ಪ ಸಂಖ್ಯೆಯಲ್ಲಿರುವವರಿಗೆ ಸಮಾಜದಲ್ಲಿ ಸಮಾನ ಅವಕಾಶವನ್ನು ನೀಡಿರುವದು ಇತಿಹಾಸದಲ್ಲಿ ಹುಡುಕಿದರೆ ಅದು ಬಹುಶಃ ಭಾರತದಲ್ಲಿ ಮಾತ್ರ. ಈಗಲಾದರೂ ತೋಳ ಕುರಿಯ ನ್ಯಾಯ ಬಿಟ್ಟು ಎಲ್ಲರೊಡನೆ ನೆಮ್ಮದಿಯ ಬದುಕಿಗೆ ನಾಂದಿ ಹಾಡಲಿ

    ಉತ್ತರ
  3. Anonymous
    ಜನ 6 2016

    ಅಮೀನ ಮಟ್ಟು ಅವರು ಪಾಪ ನಮ್ಮ ನಡುವೆ ಸಂತನಂತಿರುವ ಮಹಾ ಮುಜುಗುರದ ಮನುಷ್ಯ ದೇವನೂರ ಮಹಾದೇವ ಅವರಿಗೆ ಮೀನು ಖಾದ್ಯ ತಿನ್ನಿಸಿ ಖುಶಿ ಪಡುತ್ತಿದ್ದಾರೆ, ಇಲ್ಲಿ ನೀವು ಅವರ ಸಂತೋಷವನ್ನು ಹಾಲು ಮಾಡುತ್ತಿದ್ದೀರಿ! ಛೆ!

    ಉತ್ತರ
  4. WITIAN
    ಜನ 7 2016

    “ನಿಮ್ಮ ಅಧ್ಯಯನ ಸೀಮಿತ, ಪರಿಣಾಮವಾಗಿ ಈ ನಾಡಿನ ಸಮಾಜೋ-ಧಾರ್ಮಿಕ ಇತಿಹಾಸ ಹಾಗೂ ವರ್ತಮಾನದ ಬಗ್ಗೆ ನಿಮ್ಮ ತಿಳುವಳಿಕೆಯೂ ಸೀಮಿತ ಎನ್ನುವುದನ್ನು ನಿಮ್ಮ ಬರಹಗಳು ಹೇಳುತ್ತವೆ”….ಮುಂದುವರಿದು…”ಒಂದು ಪ್ರದೇಶದ ಒಂದಿಡೀ ವರ್ಗಕ್ಕೆ ಯಾವ ಹಿಂಜರಿಕೆಯೂ ಇಲ್ಲದೆ ಸಾರ್ವಜನಿಕವಾಗಿ ನೀವು ಇಟ್ಟ ಒಂದು ಹೆಸರು, ನಿಮಗಾಗದವರನ್ನು ಹೀಗಳೆಯಲು ಫೇಸ್ಬುಕ್ನಲ್ಲಿ, ಎಲ್ಲರಿಗೂ ಕಾಣುವಂತೆ ನೀವು ಬಳಸುವ ಪದಗಳು-ಇವುಗಳು ಸಭ್ಯತೆಯ ಅರಿವು ನಿಮಗೆ ಇರಬೇಕಾದಷ್ಟಿಲ್ಲ ಎಂದು ಸೂಚಿಸುತ್ತವೆ”.. ಅಬ್ಬಾ! ಮರ್ಯಾದಸ್ಥರಿಗೆ ಇದಕ್ಕಿಂತಲೂ ಹೆಚ್ಚಿನ ಅವಮಾನ ಬೇಕಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಗಂಧ ತೇಯುವವರಲ್ಲ.ಅವರ ಜತೆ ಗುದ್ದಾಡಲು ಹೋಗಬಾರದು! ಈ ಮಾತನ್ನು ಹೇಳಲೂ ಕೂಡಾ ಆಳವಾದ ಅಧ್ಯಯನ ಬೇಕಾಗುತ್ತದೆ. ಪ್ರೇಮಶೇಖರರೇ ಈ ಮಾತನ್ನು ಹೇಳಲು ಸಾಧ್ಯ!

    ಉತ್ತರ

Trackbacks & Pingbacks

  1. ಬೊಳುವಾರರ “ಮುಸ್ಲಿಮನಾಗಿರುವುದೆಂದರೆ…” ಲೇಖನದ ಸುತ್ತ ಒಂದು ಚರ್ಚೆ- ಭಾಗ೨ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments