ಭಾರತದಲ್ಲಿ ವಿದ್ಯಾರ್ಥಿ ಆಂದೋಲನಗಳು – ಒಂದು ವಿಮರ್ಶೆ
– ಬಿ.ಜಿ.ಕುಲಕರ್ಣಿ,ಸಹಾಯಕ ಪ್ರಾಧ್ಯಾಪಕರು
ರಾಜ್ಯಶಾಸ್ತ್ರ ವಿಭಾಗ,ಬಸವಪ್ರಭು ಕೋರೆ ಪದವಿ ಮಹಾವಿದ್ಯಾಲಯ,ಚಿಕ್ಕೋಡಿ, ಜಿ.ಬೆಳಗಾವಿ
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರಮುಖವಾದ ಪಾತ್ರವಹಿಸಿರುವದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಸ್ವಾತಂತ್ರ್ಯ ನಂತರ ಶಿಕ್ಷಣ ಸುಧಾರಣೆಯ ರೂಪುರೇಷೆಗಳನ್ನು ಸಿದ್ಧಪಡಿಸುವಾಗ ಕೂಡ ಅವರು ಗಮನಾರ್ಹವಾದ ಪ್ರಭಾವವನ್ನು ಬೀರಿದ್ದಾರೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಕೂಡ ವಿದ್ಯಾರ್ಥಿಗಳ ರಾಜಕೀಯ ಚಟುವಟಿಕೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿವೆ. 1975-77ರ ತುರ್ತುಪರಿಸ್ಥಿತಿಯ ಅವಧಿಯನ್ನು ಹೊರತುಪಡಿಸಿ ಉಳಿದೆಲ್ಲ ಸಂದರ್ಭಗಳಲ್ಲಿಯೂ ವಿದ್ಯಾರ್ಥಿ ಸಂಘಟನೆಗಳು ತುಂಬಾ ಸಕ್ರೀಯವಾಗಿರುವದನ್ನು ನಾವು ಕಾಣಬಹುದಾಗಿದೆ. ರಾಜ್ಯಶಾಸ್ತ್ರದ ಆಧುನಿಕ ಪರಿಕಲ್ಪನೆಗಳಾದ ಸ್ವಾತಂತ್ರ್ಯ,ಸಮಾನತೆ ಮತ್ತು ಸಹೋದರತ್ವದ ಮಹತ್ವವನ್ನು ಸಾಮಾನ್ಯ ಜನರಲ್ಲಿ ಈ ವಿದ್ಯಾರ್ಥಿ ಸಂಘಟನೆಗಳು ಮೂಡಿಸಿವೆ. ರಾಜಕೀಯ ಅಭಿವೃದ್ಧಿ ಮತ್ತು ಆಧುನೀಕರಣ ಪ್ರಕ್ರಿಯೆಯ ಅಧ್ಯಯನ ಮಾಡುವಾಗ ವಿದ್ಯಾರ್ಥಿ ರಾಜಕೀಯವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಜಾಗತಿಕ ಮಟ್ಟದಲ್ಲಿ ಇಂದು ವಿದ್ಯಾರ್ಥಿ ಚಳುವಳಿಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿ ಕ್ರಿಯಾಶೀಲತೆಯ ಬಗ್ಗೆ ಇಲ್ಲಿ ಚರ್ಚಿಸುವದು ಸೂಕ್ತ.
ಕ್ರಾಂತಿಕಾರಿ ಚಳವಳಿಗಳು ಯಾವತ್ತೂ ಆದರ್ಶಗಳನ್ನು ಹೊಂದಿರುವ ಹಾಗು ಅವುಗಳನ್ನು ಅನುಷ್ಠಾನಗೊಳಿಸಬೇಕೆಂಬ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳ ಬೆಂಬಲವನ್ನು ಬಯಸುತ್ತವೆ. ಅದಕ್ಕಾಗಿಯೇ ಸಿ. ರೈಟ್ ಮೀಲ್ಸ್ ಎಂಬ ವಿದ್ವಾಂಸರು “ಹೊಸ ಕ್ರಾಂತಿಕಾರಿ ಚಳವಳಿಗೆ ಬುದ್ಧಿಜೀವಿಗಳು ಹಾಗು ವಿದ್ಯಾರ್ಥಿಗಳು ಮಾತ್ರ ಒಂದು ಭದ್ರವಾದ ಅಡಿಪಾಯ ಹಾಕುತ್ತಾರೆ” ಎಂದಿದ್ದಾರೆ. ಇವರ ವಿಚಾರಗಳಿಗೆ ಪೂರಕವಾಗಿ ಎಸ್.ಎಮ್.ಲಿಪ್‍ಸೆಟ್ “ಭವಿಷ್ಯತ್ತಿನ ರಾಜಕೀಯವನ್ನು ವಿಶ್ಲೇಷಣೆ ಮಾಡುವಾಗ ವಿದ್ಯಾರ್ಥಿಗಳನ್ನು ಕಡೆಗಣಿಸುವುದು ಮಹಾ ಪ್ರಮಾದಕ್ಕೆ ದಾರಿ ಮಾಡಿ ಕೊಡುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೆಯೇ ಲೀಬ್‍ಮ್ಯಾನ್ ವಾಕರ್ ಮತ್ತು ಗ್ಲೇಜರ್ ಜಗತ್ತಿನಾದ್ಯಂತ ಶಾಂತಿ ಕದಡುವ, ಸಾಂಪ್ರದಾಯಿಕ ಮೌಲ್ಯಗಳನ್ನು ಹಾಗು ಅಸ್ತಿತ್ವದಲ್ಲಿರುವ ಸರಕಾರಗಳನ್ನು ಪ್ರಶ್ನಿಸುವ ಎರಡೇ ಎರಡು ಗುಂಪುಗಳೆಂದರೆ ಬುದ್ಧಿಜೀವಿಗಳು ಮತ್ತು ವಿದ್ಯಾರ್ಥಿಗಳು” ಎಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ.