ವಿಷಯದ ವಿವರಗಳಿಗೆ ದಾಟಿರಿ

Archive for

28
ಫೆಬ್ರ

ಬರ್ನಾಲ್ ಗೋಸ್ವಾಮಿ

– ರೋಹಿತ್ ಚಕ್ರತೀರ್ಥ

“ನೀನು, ನಿನ್ನಂಥವರು ಈ ವಿಶ್ವವಿದ್ಯಾಲ17-Arnab-Goswamiಯದಲ್ಲಿ ಸೇರಿಕೊಂಡು ಗಬ್ಬೆಬ್ಬಿಸುತ್ತಿದ್ದೀರಿ. ಉಗ್ರಗಾಮಿಗಳ ಪರವಾಗಿ ಘೋಷಣೆ ಕೂಗುವಾಗ ನಿನಗೆ ಆತ್ಮಸಾಕ್ಷಿ ಚುಚ್ಚಬೇಕಾಗಿತ್ತು. ಆದರೆ ಅದರ ಲವಲೇಶವೂ ನಿನಗೆ ಇರುವ ಹಾಗಿಲ್ಲ. ಹೇಳು, ನಿನ್ನಂಥ ದೇಶದ್ರೋಹಿಗಳಿಗೆ ನಾವ್ಯಾಕೆ ತೆರಿಗೆ ದುಡ್ಡು ಕಟ್ಟಿ ಓದಿಸಬೇಕು? ಅಲ್ಲಿ ಹದಿನೈದು ಸಾವಿರ ಅಡಿ ಎತ್ತರದಲ್ಲಿ, ಮೈನಸ್ 50 ಡಿಗ್ರಿ ಉಷ್ಣಾಂಶದಲ್ಲಿ ನಿಂತು ದೇಶ ಕಾಯುತ್ತಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಇಂದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಅವರ ಬದಲು ನಿನ್ನಂಥವರು ಇಂದು ದೇಶದ ದಾರಿತಪ್ಪಿದ ಯುವಕರಿಗೆ ರೋಲ್ ಮಾಡೆಲ್ ಆಗುತ್ತಿದ್ದೀರಲ್ಲ, ದುರಂತ! ದುರಂತ ಇದು!” ಎಂದು ಅಬ್ಬರಿಸುತ್ತಿದ್ದನಾತ. ಹಾಗೆ ಭಾರತದ ಎಲ್ಲ ದೇಶಭಕ್ತರ ಪರವಾಗಿ ಆತ ಗುಡುಗುತ್ತಿದ್ದರೆ ಉತ್ತರಿಸಬೇಕಿದ್ದ ಉಮರ್ ಖಾಲಿದ್‍ನಿಗೆ ಉಸಿರುಕಟ್ಟಿದಂತಾಗಿತ್ತು. “ಬಾಯ್ತೆಗೆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುತ್ತೀರಿ. ನಿಮ್ಮ ಸ್ವಾತಂತ್ರ್ಯ ಕೂಡ ಸೆಲೆಕ್ಟಿವ್. ಬೇಕಾದವರ ಪರವಾಗಿ ಮಾತಾಡಲು ಮಾತ್ರ ಅದನ್ನು ಬಳಸುತ್ತೀರಿ. ಅದೇ ನಿಮ್ಮ ಶತ್ರುಗಳ ಪರವಾಗಿ ಬೇರೆಯವರು ಮಾತಾಡಿದಾಗ ಅವರ ಮೇಲೆ ಹಲ್ಲೆಗೆ ಮುಂದಾಗುತ್ತೀರಿ. ಬೆಂಕಿಬಿತ್ತು ನಿಮ್ಮ ಸ್ವಾತಂತ್ರ್ಯಕ್ಕೆ!” ಎಂದು ಆತ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರೆ ಗಲಭೆ ಎಬ್ಬಿಸಿದ್ದ ವಿದ್ಯಾರ್ಥಿಗಳ ಪರ ವಾದಿಸಲು ಬಂದಿದ್ದ ಮಂದಿ ಬಾಲ ಸುಟ್ಟ ಬೆಕ್ಕಿನಂತಾಗಿದ್ದರು.

       ಅವನು ಅರ್ಣಬ್ ಗೋಸ್ವಾಮಿ. ಚುಟುಕಾಗಿ ಹೇಳಬೇಕೆಂದರೆ ಕರ್ಣಪಿಶಾಚಿ. ಟೈಮ್ಸ್ ನೌ ಎಂಬ ಆಂಗ್ಲ ಸುದ್ದಿವಾಹಿನಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಆತನ “ನ್ಯೂಸ್ ಅವರ್” ಕಾರ್ಯಕ್ರಮ ಪ್ರಸಾರವಾಗುತ್ತದೆ. ಇದರ ವಿಶೇಷತೆಯೇನೆಂದರೆ ಕಾರ್ಯಕ್ರಮದ ಮೊದಲ ಐದು ನಿಮಿಷದಲ್ಲಿ ಅರ್ಣಬ್ ಅಂದಿನ ಚರ್ಚೆಯ ಪ್ರಮುಖ ವಿಷಯ ಏನು ಎಂಬುದನ್ನು ತಿಳಿಸುತ್ತಾನೆ. ನಂತರದ ಐವತ್ತೈದು ನಿಮಿಷ ಸುಮಾರು ಹತ್ತು-ಹನ್ನೆರಡು ಜನ ತಾರಕ ಸ್ವರದಲ್ಲಿ ವಾಕ್ಸಮರ ನಡೆಸಿಕೊಳ್ಳುತ್ತಾರೆ. ಒಟ್ಟಿಗೆ ತಂದುಹಾಕಿದರೆ, ಕೇವಲ ಎರಡೇ ನಿಮಿಷದಲ್ಲಿ ಅವರೆಲ್ಲರೂ ಪರಸ್ಪರರನ್ನು ಗುದ್ದಿ ನೆಲಕ್ಕೆ ಕೆಡವಿ ಚೂರಿ ಹಾಕಿ ಬೆಂಕಿ ಕೊಟ್ಟುಕೊಂಡು ಸರ್ವನಾಶವಾಗುತ್ತಾರೆ ಅನ್ನಿಸುವಷ್ಟು ಭೀಕರವಾಗಿ ಅವರೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ನ್ಯೂಸ್ ಅವರೋ ನಾಯ್ಸ್ ಅವರೋ ಎಂಬ ಗೊಂದಲ ಕಾರ್ಯಕ್ರಮದ ಪ್ರತಿ ವೀಕ್ಷಕನಲ್ಲಿ ಮೂಡುವಂತಿರುತ್ತದೆ. ಶಬ್ದವನ್ನು ಡೆಸಿಬಲ್‍ಗಳಲ್ಲಿ ಅಳೆಯುತ್ತಾರೆ; ಕರ್ಕಶತೆಯನ್ನು ಅರ್ಣಬ್ ಎಂಬ ಮಾನದಲ್ಲಿ ಅಳೆಯುತ್ತಾರೆ ಎಂಬ ಜೋಕಿದೆ. ಆತನ “ನೇಷನ್ ವಾಂಟ್ಸ್ ಟು ನೋ” ಎಂಬ ಪದಪುಂಜ ಬಹಳ ಪ್ರಸಿದ್ಧ. ದೇಶಕ್ಕೆ ಖಂಡಿತಾ ಬೇಕಾಗಿಲ್ಲ; ಉತ್ತರ ಬೇಕಾಗಿರುವುದು ನಿನಗೆ ಮಾತ್ರ. ಹಾಗಾಗಿ ನಿನ್ನ ರೆಡಿಮೇಡ್ ಡೈಲಾಗನ್ನು ಬದಲಾಯಿಸಿ ಅರ್ಣಬ್ ವಾಂಟ್ಸ್ ಟೂ ನೋ ಅನ್ನು ಮಾರಾಯ ಎಂದು ಹೇಳಿದವರುಂಟು. ಈತ ರಾಜಕೀಯದ ಹಲವು ಆಷಾಢಭೂತಿ ಮುಖಗಳನ್ನು ಹೊರಗೆಳೆದ; ಹಲವರ ನಿಜಬಣ್ಣ ಬಯಲು ಮಾಡಿದ; ಇಂಥವರು ಮಾಧ್ಯಮದಲ್ಲಿ ಬೇಕು ಎನ್ನುವವರದ್ದು ಒಂದು ಗುಂಪಾದರೆ ಈತನಿಂದಾಗಿಯೇ ಮಾಧ್ಯಮದ ಪಾವಿತ್ರ್ಯ ಹೋಯಿತು; ಅರಚಾಟ – ದೋಷಾರೋಪಣೆಗಳೇ ಸಂವಾದವೆನ್ನುವ ಭ್ರಮೆ ಹಿಡಿಸಿ ಆರೋಗ್ಯಕರ ಚರ್ಚೆಯನ್ನು ಹಳ್ಳ ಹಿಡಿಸಿದ ಭೂಪನೀತ ಎನ್ನುವವರಿದ್ದಾರೆ. ನೀವು ಒಪ್ಪುತ್ತೀರೋ ಬಿಡುತ್ತೀರೋ, ಅದು ಅರ್ಣಬ್‍ನಿಗೆ ಮುಖ್ಯವಲ್ಲ. ವಿಮರ್ಶಕರು “ಅದೊಂದು ಡಬ್ಬಾ ಸಿನೆಮ” ಎಂದು ಹುಯಿಲೆಬ್ಬಿಸಿದರೂ ಮುನ್ನೂರು ಕೋಟಿ ಬಾಚುವ ಸಲ್ಮಾನ್‍ಖಾನ್ ಸಿನೆಮಗಳಂತೆ ಅರ್ಣಬ್‍ನ ಟಿವಿ ಕಾರ್ಯಕ್ರಮ. ಹಾಗಾಗಿ ಟೀಕಾಕಾರರತ್ತ ಅವನದ್ದು ಡೋಂಟ್ ಕೇರ್.

ಮತ್ತಷ್ಟು ಓದು »