ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್…
– ನಾಗೇಶ ಮೈಸೂರು
ಕಾರನ್ನು ಟ್ರಾಫಿಕ್ಕಿನ ಚಕ್ರವ್ಯೂಹದ ನಡುವೆಯೆ ಹೇಗೇಗೊ ತೂರಿಸಿಕೊಂಡು, ಹೆಚ್ಚು ಕಡಿಮೆ ಕಾಲ್ನಡಿಗೆಯಷ್ಟೆ ವೇಗದಲ್ಲಿ ತೆವಳುತ್ತ, ಕೊನೆಗು ಟ್ರಾಫಿಕ್ಕಿಲ್ಲದ ದೊಡ್ಡ ಮುಖ್ಯ ರಸ್ತೆಗೆ ತಂದಾಗ ನಿರಾಳತೆಯ ನಿಟ್ಟುಸಿರು ಬಿಟ್ಟೆ. ಇದು ಇನ್ನೂ ಪಯಣದ ಆರಂಭ; ಹೊರಟಿರುವ ಗಮ್ಯದ ಕಡೆಗೆ ಇನ್ನು ಎಂಟು ಗಂಟೆಗಳ ದೂರವಿದೆ. ಕೇರಳದ ಇಂಜಿನಿಯರಿಂಗ್ ಕಾಲೋಜೊಂದರಲ್ಲಿ ನಮ್ಮ ಕಂಪನಿಗೆ ಕಾಲೇಜಿನಿಂದ ನೇರ ಅಭ್ಯರ್ಥಿಗಳನ್ನು ಆಯ್ದುಕೊಳ್ಳಲು ಕ್ಯಾಂಪಸ್ ಇಂಟರ್ವ್ಯೂ ಸಲುವಾಗಿ ಹೊರಟಿದ್ದು… ಜತೆಯಲ್ಲಿರುವ ಕೇಶವ ನಾಯರ್ ಎಂಬೆಡೆಡ್ ಸಾಫ್ಟ್ ವೇರ್ ವಿಭಾಗದಲ್ಲಿರುವ ಮ್ಯಾನೇಜರನಾದರು,ಅವನ ಪರಿಚಯ ಅಷ್ಟಾಗಿಲ್ಲ… ಬಹುಶಃ ಈ ಟ್ರಿಪ್ಪಿನ ನಂತರ ಸ್ವಲ್ಪ ಹೆಚ್ಚಿನ ಪರಿಚಯವಾಗಬಹುದು… ಜತೆಗೆ ಮಾನವ ಸಂಪನ್ಮೂಲ ವಿಭಾಗದಿಂದ ಬಂದಿರುವ ಜಾನಕಿ ದೇವಿ.
ಮಧ್ಯೆ ಊಟ ತಿಂಡಿ ಕಾಫಿ ಎಂದು ಬ್ರೇಕ್ ಕೊಟ್ಟು, ಮತ್ತೆ ಹಾಗೂ ಹೀಗು ತಾಕಲಾಡುತ್ತ ಗಮ್ಯ ತಲುಪುವ ಹೊತ್ತಿಗೆ ಕತ್ತಲಾಗಿ ಹೋಗಿತ್ತು. ಇಂಟರ್ವ್ಯೂವ್ ಇದ್ದದ್ದು ಮರುದಿನವಾದ ಕಾರಣ ಅಲ್ಲೆ ಕಾಲೇಜು ಹಾಸ್ಟೆಲಿನ ಗೆಸ್ಟ್ ರೂಮಿನಲ್ಲಿ ರಾತ್ರಿ ಬಿಡಾರಕ್ಕೆ ವ್ಯವಸ್ಥೆಯಾಗಿತ್ತು. ಜಾನಕಿ ಇದರಲ್ಲೆಲ್ಲಾ ಕಿಲಾಡಿ. ಕಂಪನಿಯ ಕೆಲಸವೆ ಆದರು ಸುಮ್ಮನೆ ಹೋಟೆಲ್ಲು ವೆಚ್ಚವೇಕೆ ವ್ಯರ್ಥ ಮಾಡಬೇಕು ಎಂದು ಕಾಲೇಜಿನ ಗೆಸ್ಟ್ ರೂಮಲ್ಲಿ ಇರುವ ವ್ಯವಸ್ಥೆ ಮಾಡಿಬಿಟ್ಟಿದ್ದಾಳೆ.. ಹೇಗೂ ಅವರೂ ಇಲ್ಲವೆನ್ನುವಂತಿಲ್ಲ.. ಅಲ್ಲಿ ಸೊಳ್ಳೆ ಕಾಟ ಹೆಚ್ಚಾದ ಕಾರಣ , ರಾತ್ರಿ ಸೊಳ್ಳೆ ಬತ್ತಿ ಹಚ್ಚಿ ಮಲಗಿದರೆ ಸಾಕು, ಮನೆಯಲ್ಲಿದ್ದ ಹಾಗೆ ಅನಿಸಿ ಒಳ್ಳೆ ನಿದ್ದೆ ಬರುತ್ತೆ.. ಹೋಟೆಲ್ ರೂಮಿನದೇನು ಮಹಾ..? ಆ ಕಿಷ್ಕಿಂದದಲ್ಲಿ ಇರುವುದಕ್ಕಿಂತ ಇದೆ ವಾಸಿ ಎಂದು ದಾರಿಯಲ್ಲಿ ಸುಮಾರು ಆರೇಳು ಸಲ ಹೇಳಿದ್ದಾಳೆ – ಬಹುಶಃ ನಾವು ಮಾನಸಿಕವಾಗಿ ಅಲ್ಲಿರಲು ಸಿದ್ದರಾಗಿರಲಿ ಅಂತಿರಬೇಕು..
ಆದರೆ ಅದರಲ್ಲಿ ಸ್ವಲ್ಪ ಅತಿ ಎನಿಸಿದ್ದು ಮಾತ್ರ ರಾತ್ರಿಯೂಟದ ವ್ಯವಸ್ಥೆ.. ಹೇಗು ಕಾರಿತ್ತಾಗಿ ಸಿಟಿಯ ಯಾವುದಾದರು ಊಟದ ಹೋಟೆಲ್ಲಿಗೆ ಹೋಗಿ ಬರಬಹುದಿತ್ತು… ಅದು ಸಿಟಿಯಿಂದ ದೂರ ಎಂದು ಹೇಳಿ ಅಲ್ಲೆ ಹಾಸ್ಟೆಲಿನ ವೆಜಿಟೇರಿಯನ್ ಊಟವೆ ಓಕೆ ಎಂದು ಹೇಳಿ ಅಲ್ಲೆ ತಿನ್ನುವ ಹಾಗೆ ಮಾಡಿಬಿಟ್ಟಿದ್ದಳು..! ಅದೇ ಮೊದಲ ಬಾರಿಗೆ ನನಗೆ ಅಭ್ಯಾಸವಿಲ್ಲದ ಆ ಅನ್ನ ತಿಂದು, ನೀರಿನ ಬದಲಿಗೆ ನೀಡಿದ ವಿಶೇಷ ಬಣ್ಣದ ಕೇರಳದ ಟ್ರೇಡ್ ಮಾರ್ಕ್ ದ್ರವ ಪಾನೀಯ ಕುಡಿಯುವಂತಾಗಿತ್ತು.. ಆದರೂ ಆ ನೀರಿನ ಪಾನೀಯ ಮಾತ್ರ ಏನೊ ಚೇತೋಹಾರಿಯಾಗಿದೆ ಅನಿಸಿ ಎರಡೆರಡು ಬಾರಿ ಹಾಕಿಸಿಕೊಂಡು ಕುಡಿದಿದ್ದೆ.. ಪ್ರಯಾಣದ ಆಯಾಸಕ್ಕೊ, ಏನೊ ಸೊಳ್ಳೆ ಬತ್ತಿ ಹಚ್ಚಿ ಮಲಗುತ್ತಿದ್ದ ಹಾಗೆ ಮಂಪರು ಕವಿದಂತಾಗಿ ಗಾಢವಾದ ನಿದ್ದೆ ಬಂದುಬಿಟ್ಟಿತ್ತು , ಹೊಸ ಜಾಗವೆನ್ನುವ ಪರಿವೆಯಿಲ್ಲದೆ..