ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 9, 2016

5

ಸಾಯದ ಹೊರತು ನಿಮಗವನ ಹೆಸರು ಕೂಡ ಗೊತ್ತಿರುವುದಿಲ್ಲ…

‍ನಿಲುಮೆ ಮೂಲಕ

ರೋಹಿತ್ ಚಕ್ರತೀರ್ಥ
beggar-made-store-owner-cryಅವನೊಬ್ಬನಿದ್ದ. ತನ್ನ ಮನೆಯ ಒಂದು ಭಾಗದಲ್ಲಿ ಅಂಗಡಿ ಇಟ್ಟುಕೊಂಡಿದ್ದ. ಪ್ರತಿದಿನ ಬೆಳಗ್ಗೆ ಮನೆಯ ಒಳಗಿಂದ ಷಟರ್ ತೆಗೆದು ಅಂಗಡಿ ತೆರೆಯುತ್ತಿದ್ದ. ಆದರೆ ಪ್ರತಿದಿನ ಆ ಕಬ್ಬಿಣದ ಬಾಗಿಲನ್ನು ಮೇಲಕ್ಕೆ ಸರಿಸುವಾಗ ಆತನ ಕಣ್ಣಿಗೆ ಮೊದಲು ಬೀಳುತ್ತಿದ್ದದ್ದು, ಅಂಗಡಿಯ ಎದುರಿಗೇ ಮಲಗಿರುತ್ತಿದ್ದ ಒಬ್ಬ ಭಿಕ್ಷುಕ. ಕೆದರಿದ, ಎಣ್ಣೆ ಕಾಣದ ತಲೆಕೂದಲು, ಬಣ್ಣಗೆಟ್ಟ ಮುಖ, ಹಲವು ದಿನಗಳಿಂದ ಸ್ನಾನ ಕಾಣದ ಮೈ, ಹರಿದ ಪ್ಯಾಂಟು, ಪುಟ್ಟಮಕ್ಕಳು ಗೀಚಿದಂತಿರುವ ನೂರೆಂಟು ಗೆರೆಗೀಟುಗಳಿಂದ ಕೂಡಿದ ಹರಕುಮುರುಕು ಅಂಗಿ, ಪ್ರಕ್ಷಾಲನವಿಲ್ಲದೆ ರಸಿಕೆಕಟ್ಟಿದ ಕೆಂಡಗಣ್ಣು, ಬಾಯಿ ತೆರೆದರೆ ಬ್ರಹ್ಮಾಂಡದರ್ಶನ. ಅಂಥ ಒಬ್ಬ ಭಿಕಾರಿ ತನ್ನ ಅಂಗಡಿಯೆದುರು ಅಪಶಕುನದಂತೆ ಕೈಕಾಲು ಮುದುರಿಕೊಂಡು ನಿದ್ದೆ ಹೊಡೆಯುವುದನ್ನು ನೋಡಿ ಅಂಗಡಿಯ ಮಾಲಿಕನಿಗೆ ನಖಶಿಖಾಂತ ಕೋಪ ಬಂದುಬಿಡುತ್ತಿತ್ತು. “ಕತ್ತೇ ಭಡವಾ” ಎಂದು ಗಟ್ಟಿಯಾಗಿ ಕಿರುಚುತ್ತಿದ್ದ. ಆತನ ಗಂಟಲಿಗೆ ಬೆಚ್ಚಿಬಿದ್ದೆದ್ದ ಭಿಕ್ಷುಕ ಕಂಗಾಲಾಗಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ.

ಆದರೆ ಅದು, ಒಂದು ದಿನದ ಮಟ್ಟಿಗೆ ಮಾತ್ರ. ಮರುದಿನ ಅಂಗಡಿ ಬಾಗಿಲು ತೆರೆಯುವಾಗ ಭಿಕ್ಷುಕನ ಸವಾರಿ ಅಲ್ಲಿ ಹಾಜರಿರುತ್ತಿತ್ತು. ಮತ್ತೆ ಮಾಲಿಕನ ಅರಚಾಟ ನಡೆಯುತ್ತಿತ್ತು. ಈ ಕ್ರಮ ಒಂದು ದಿನವೂ ತಪ್ಪದಂತೆ ನಡೆದುಕೊಂಡು ಬರುತ್ತಿತ್ತು. ಕೆಲವೊಮ್ಮೆ ಮಾಲೀಕ ದೊಡ್ಡ ದೊಣ್ಣೆ ಎತ್ತಿಕೊಂಡು ಬಂದು ಭಿಕ್ಷುಕನಿಗೆ ಬಾರಿಸುತ್ತಿದ್ದ. ಪೆಟ್ಟು ತಿಂದ ಭಿಕ್ಷುಕ ನೋವಿನಿಂದ ಕೈಕಾಲು ಬಡಿದುಕೊಂಡು ಓಡಿಹೋಗುತ್ತಿದ್ದ. ಇನ್ನು ಕೆಲವೊಮ್ಮೆ ಮಾಲೀಕ ಒಂದು ಬಕೆಟ್ ತಣ್ಣಗೆ ನೀರು ತಂದು ಈತನ ಮೈಮೇಲೆ ಸುರಿಯುತ್ತಿದ್ದ. ಮತ್ತೆ ಕೆಲವೊಮ್ಮೆ ಬೂಟು ಹಾಕಿಕೊಂಡು ಬಂದು ಮಲಗಿ ಗೊರಕೆ ಹೊಡೆಯುತ್ತಿದ್ದವನನ್ನು ಒದ್ದದ್ದೂ ಉಂಟು. ಒಮ್ಮೆ, ಅಂಗಡಿಯ ಬಾಗಿಲು ತೆಗೆಯುವಾಗ, ಮೂತ್ರವಿಸರ್ಜನೆಯ ವಾಸನೆ ಮಾಲೀಕನ ಮುಖಕ್ಕೆ ಹೊಡೆಯಿತು. ಈ ದರಿದ್ರ ಮನುಷ್ಯ ಇಲ್ಲಿ ಮಲಗುವುದು ಮಾತ್ರವಲ್ಲದೆ ತನ್ನ ದೇಹಬಾಧೆಗಳನ್ನೂ ತೀರಿಸಿಕೊಳ್ಳುತ್ತಾನೆಂದು ಅವತ್ತು ಅವನಿಗೆ ಮೈಯೆಲ್ಲ ಉರಿದಿತ್ತು. ಕೈಗೆ ಸಿಕ್ಕಿದ್ದನ್ನೆಲ್ಲ ಆ ಭಿಕ್ಷುಕನ ಮೇಲೆ ಎತ್ತಿಹಾಕಿ ತನ್ನ ಕೋಪ ತೋರಿಸಿದ್ದ.

ಅದೊಂದು ದಿನ, ಮಾಲೀಕ ಅಂಗಡಿ ತೆರೆಯುತ್ತಿದ್ದ. ಇವತ್ತೂ ಈ ದರಿದ್ರನನ್ನು ಒದ್ದು ಎಬ್ಬಿಸಿ ಓಡಿಸಬೇಕಲ್ಲಪ್ಪ ಎಂದು ಮನಸ್ಸಲ್ಲೇ ಹೇಳಿಕೊಂಡು ಬಾಗಿಲನ್ನು ಪೂರ್ತಿ ಚಾಪೆಯಂತೆ ಸುರುಳಿ ಸುತ್ತಿ ಮೇಲಕ್ಕೆತ್ತಿದರೆ, ಎದುರಿಗೆ ಅಂದು ಭಿಕ್ಷುಕ ಇರಲಿಲ್ಲ! ಅರರೆ, ಎಂಥಾ ವಿಚಿತ್ರ ಅನ್ನಿಸಿತು ಮಾಲೀಕನಿಗೆ. ಸುತ್ತ ನೋಡಿದ. ಅತ್ತಿತ್ತ ಕಣ್ಣಾಡಿಸಿದ. ನಿಜವೋ ಕನಸೋ ಎಂದು ಖಾತರಿಪಡಿಸಿಕೊಳ್ಳಲು ಕಣ್ಣುಜ್ಜಿದ, ಮೊಣಕೈ ಚಿವುಟಿಕೊಂಡ. ಕನಸಲ್ಲ, ವಾಸ್ತವವೇ! ಭಿಕ್ಷುಕ ಇರಲಿಲ್ಲ. “ಏನು ಹಾಗೆ ಹುಡುಕ್ತಿದಿಯೋ ಹುಚ್ಚಪ್ಪ! ಪಾಪ, ಆ ಭಿಕ್ಷುಕನನ್ನು ದಿನಾ ಗೋಳಾಡಿಸಿಕೊಂಡಿದ್ದೆಯಲ್ಲೋ. ಇವತ್ತು ಅವನು ಹೋಗೇಬಿಟ್ಟಿದ್ದಾನೆ” ಎಂದಳು ಪಕ್ಕದ ಅಂಗಡಿಯ ವೃದ್ಧೆ. ಹೋಗೇಬಿಟ್ಟ? ಅಂದರೆ, ಎಲ್ಲಿಗೆ, ಎಲ್ಲಿಗೆ ಹೋದ? ವೃದ್ಧೆ ಉತ್ತರಿಸಲಿಲ್ಲ. ಸುಮ್ಮನೆ ನಕ್ಕು ತನ್ನ ಕೆಲಸದಲ್ಲಿ ತೊಡಗಿಕೊಂಡಳು. ಆದರೆ ಮಾಲೀಕನಿಗೆ ಕುತೂಹಲ ಕೆರಳಿಬಿಟ್ಟಿತ್ತು. ಈ ಭಿಕ್ಷುಕ ಎಲ್ಲಿಹೋದ ಎಂದು ಅತ್ತಿತ್ತ ಹುಡುಕಿದಾಗ ಆತನಿಗೆ ತಕ್ಷಣ ಏನೋ ಹೊಳೆಯಿತು. ಕತ್ತೆತ್ತಿ ಮೇಲೆ ನೋಡಿದ. ಅಂಗಡಿಯ ಎದುರಲ್ಲಿ ತಾನೇ ಅಳವಡಿಸಿದ್ದ ಸಿಸಿಟಿವಿ ಅವನಿಗೆ ಕಣ್ಣುಹೊಡೆಯಿತು. ಕೂಡಲೇ ಅಂಗಡಿಯ ಒಳಗೋಡಿ, ಕಂಪ್ಯೂಟರ್ ಚಾಲೂ ಮಾಡಿ, ಸಿಸಿಟಿವಿಯಲ್ಲಿ ದಾಖಲಾಗಿದ್ದ ಚಿತ್ರಗಳನ್ನು ಪರದೆಯ ಮೇಲೆ ಬಿಡಿಸತೊಡಗಿದ.

ಸಿಸಿಟಿವಿ ಅಳವಡಿಸಿದ್ದನಷ್ಟೆ. ಆದರೆ ಅದನ್ನು ಬಳಸುವ ಪ್ರಮೇಯ ಅವನಿಗೆಂದೂ ಬಂದಿರಲಿಲ್ಲ. ಅವನ ಅಂಗಡಿಯಲ್ಲಿ ಅದುವರೆಗೆ ಯಾವ ಕಳ್ಳತನವೂ ನಡೆದಿರಲಿಲ್ಲ. ಅಂಗಡಿ ಎದುರು ಯಾವ ಗಲಭೆಯೂ ಆಗಿರಲಿಲ್ಲ. ಹಾಗಾಗಿ ಸಿಸಿಟಿವಿಯಲ್ಲಿ ಅದನ್ನು ಅಳವಡಿಸಿದ ದಿನದಿಂದ ಶೇಖರಗೊಂಡಿದ್ದ ಮಾಹಿತಿಗಳೆಲ್ಲ ಹಾಗೇ ಇದ್ದವು. ಮಾಲೀಕ, ಅವುಗಳನ್ನು ತನ್ನ ಕಂಪ್ಯೂಟರ್ ಪರದೆಯ ಮೇಲೆ ಇಳಿಸಿಕೊಂಡು ಒಂದೊಂದಾಗಿ ನೋಡಬೇಕೆಂದುಕೊಂಡು ಕೂತ. ಹಿಂದೆ ಆಗಿಹೋದ ಭೂತವೆಲ್ಲ ಅವನೆದುರು ಈಗ ವರ್ತಮಾನದಂತೆ ತೆರೆದುಕೊಳ್ಳುತ್ತಿತ್ತು.

ತನ್ನ ಅಂಗಡಿಯ ಎದುರಿನ ಚಾಪೆಯಷ್ಟುದ್ದದ ಜಾಗವನ್ನು ಭಿಕ್ಷುಕ ರಾತ್ರಿಹೊತ್ತು ಗುಡಿಸಿ ಮಲಗುವುದನ್ನು ಕ್ಯಾಮೆರ ತೋರಿಸಿತು. ನೂರಾರು ಜನ ಓಡಾಡುವ ಆ ದಾರಿಯಲ್ಲಿ ಬಿದ್ದ ಬಾಟಲಿ, ಕಾಗದ, ಪ್ಲಾಸ್ಟಿಕ್ ಕವರುಗಳು ಎಲ್ಲವನ್ನೂ ಹುಡುಕಿತೆಗೆದು ಕಸದ ಬುಟ್ಟಿಗೆ ಹಾಕಿಬಂದು, ನೆಲವನ್ನು ಸ್ವಚ್ಛಗೊಳಿಸಿ ಭಿಕ್ಷುಕ ಮಲಗುತ್ತಿದ್ದ. ಮಾಲೀಕನಿಗೆ ಅವನನ್ನು ಕಂಪ್ಯೂಟರ್ ಪರದೆಯಲ್ಲಿ ಕಾಣುವಾಗಲೂ ಸ್ವಲ್ಪ ಸಿಟ್ಟೇ ಬಂತು. ಸಣ್ಣದಾಗಿ ಅವನ ಮೇಲೆ ಕಿರುಚಾಡಬೇಕು ಅನ್ನಿಸಿತು. ಆದರೆ, ತನ್ನ ಅಂಗಡಿಯೆದುರಿನ ಜಾಗವನ್ನು ಧರ್ಮಾರ್ಥ ಸ್ವಚ್ಛ ಮಾಡಿಟ್ಟನಲ್ಲ ಎಂದು ಒಂದು ಬಗೆಯ ಸಮಾಧಾನವೂ ಆಯಿತು. ಪರದೆಯ ಮೇಲಿನ ವಿಡಿಯೋ ಮುಂದುವರಿದಂತೆ, ಅಲ್ಲಿ ಕೆಲವು ದಿನ ರಾತ್ರಿ, ಒಬ್ಬ ಹೆಂಗಸು – ಹೆಂಗಸಲ್ಲ, ಹದಿಹರೆಯದ ಹುಡುಗಿ, ಒಂದು ಕವರ್‍ನಲ್ಲಿ ಊಟ ಕಟ್ಟಿಸಿಕೊಂಡು ಬಂದು ಈತನಿಗೆ ಪ್ರೀತಿಯಿಂದ ಕೊಟ್ಟು ಹೋಗುತ್ತಿದ್ದುದು ಕಾಣಿಸಿತು. ಭಿಕ್ಷುಕ ಅದನ್ನು ಪಡೆದು ಕೃತಜ್ಞತೆ ಅರ್ಪಿಸುತ್ತಿದ್ದ. ಕೆಲವೊಮ್ಮೆ ಆಕೆಯ ಪ್ರತೀಕ್ಷೆಯಲ್ಲಿರುತ್ತಿದ್ದ; ಇನ್ನು ಕೆಲವೊಮ್ಮೆ ನೀರು ಕುಡಿದು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮಲಗುತ್ತಿದ್ದ. ಅದನ್ನು ನೋಡುತ್ತಿದ್ದ ಹಾಗೆ ಮಾಲೀಕನಿಗೆ ಪಾಪಪ್ರಜ್ಞೆ ಕಾಡತೊಡಗಿತು. ಆ ಹುಡುಗಿ, ಪ್ರಾಯಶಃ ತನ್ನ ಪಾಕೆಟ್ ದುಡ್ಡು ಉಳಿಸಿ ಭಿಕ್ಷುಕನಿಗೆ ಊಟ ತಂದುಕೊಟ್ಟು ಹೋಗುತ್ತಿದ್ದಿರಬಹುದು. ಆಕೆಯ ಸೇವೆಯ ಹತ್ತನೇ ಒಂದು ಭಾಗದಷ್ಟನ್ನೂ ತಾನು ಮಾಡಿಲ್ಲವಲ್ಲ ಅನ್ನಿಸಿತು. ಅಂಗಡಿಯೆದುರು ಬಂದುಹೋಗುವ ಯಾವ ಭಿಕ್ಷುಕನಿಗೂ ಆತ ಒಂದು ರುಪಾಯಿಯನ್ನೂ ಪ್ರೀತಿಯಿಂದ ಹಾಕಿದ್ದಿಲ್ಲ. ಎಲ್ಲೋ ಕೆಲವೊಮ್ಮೆ ಮಾತ್ರ ಮಾರಲು ಇಟ್ಟಿದ್ದ ಬ್ರೆಡ್ಡು ಹಾಳುಬಿದ್ದು ಬೂಜು ಹಿಡಿದಾಗ ಅದನ್ನು ಹೋಗಿಬರುವ ಭಿಕ್ಷುಕರಿಗೆ ಕೊಟ್ಟು ಕೈ ತೊಳೆದುಕೊಂಡಿದ್ದ.

ಕಂಪ್ಯೂಟರ್ ಪರದೆಯ ಮೇಲೆ ಚಿತ್ರ ಓಡುತ್ತಲೇ ಇತ್ತು. ಒಮ್ಮೆ ಕುಡಿದು ತೂರಾಡುತ್ತ ಬಂದ ಯಾವನೋ ಯುವಕ, ಈ ಅಂಗಡಿಯ ಬಾಗಿಲ ಮೇಲೇ ಉಚ್ಚೆ ಹೊಯ್ಯಲು ನಿಂತಾಗ ಭಿಕ್ಷುಕ ಅವನನ್ನು ಓಡಿಸಿದ್ದ. ಇನ್ನೊಮ್ಮೆ ಇಬ್ಬರು ಕಳ್ಳರು ಬಂದು ಅಂಗಡಿಯ ಬಾಗಿಲು ಮುರಿಯಲು ಯತ್ನಿಸಿದ್ದಾಗ ಅವರಿಗೂ ಭಿಕ್ಷುಕನಿಗೂ ನಡುವೆ ದೊಡ್ಡ ಕಾಳಗವೇ ನಡೆದುಹೋಗಿತ್ತು. ಭಿಕ್ಷುಕ ಸೀಟಿ ಹಾಕಲು ತೊಡಗಿದ ಮೇಲೆ ಎಲ್ಲೋ ಬೀಟ್ ಮೇಲಿದ್ದ ಪೊಲೀಸ್ ಓಡಿಬರುವುದನ್ನು ನೋಡಿ ಆ ಕಳ್ಳರು ಅಲ್ಲಿಂದ ಕಾಲು ಕಿತ್ತಿದ್ದರು. ಆದರೆ, ಹೋಗುವ ಮೊದಲು, “ಮತ್ತೊಮ್ಮೆ ಬರ್ತೇವೆ, ಬಿಡೋಲ್ಲ ನಿನ್ನ!” ಎಂದು ಆವಾಜ್ ಹಾಕಿ ಹೋಗಿದ್ದರು. ಅದಾಗಿ ಎರಡು ರಾತ್ರಿಗಳಲ್ಲಿ ಭಿಕ್ಷುಕ ಮಲಗಲೇ ಇಲ್ಲ. ಇಡೀ ರಾತ್ರಿ ಎಚ್ಚರಿದ್ದು ಕೂತೇ ಇದ್ದ. ಇನ್ನೇನು ನಸುಕು ಹರಿಯುತ್ತದೆನ್ನುವಾಗ ಅವನಿಗೆ ನಿದ್ದೆ ಅದೆಷ್ಟು ಎಳೆದೆಳೆದು ಬರುತ್ತಿತ್ತೆಂದರೆ, ಮೇಲಿಂದ ಮೇಲೆ ಆಕಳಿಸಿ ಅಲ್ಲೇ ಅಡ್ಡಾಗುತ್ತಿದ್ದ. ಮಾಲೀಕನಿಗೆ ನಾಲ್ಕೈದು ದಿನಗಳ ಹಿಂದಿನ ಮುಂಜಾನೆ ನೆನಪಿಗೆ ಬಂತು. ಅಂದು ಆತ ಕೋಲಿನಿಂದ ಮೆಲ್ಲನೆ ಚುಚ್ಚಿದರೂ ಭಿಕ್ಷುಕನಿಗೆ ಎಚ್ಚರಾಗಿರಲಿಲ್ಲ. ಮಾಡ್ತೀನಿ ತಡಿ ನಿನಗೆ ಅಂದವನೇ ಒಂದಿಡೀ ಬಕೆಟ್ ಕೊರೆಯುವ ತಣ್ಣೀರನ್ನು ಅವನ ಮೇಲೆ ಸುರುವಿಬಿಟ್ಟಿದ್ದ. ಆ ಘಟನೆ ನೆನೆಸಿಕೊಂಡು ಇಡೀ ದಿನ ತಾನು ನಕ್ಕಿದ್ದೂ ನೆನಪಿಗೆ ಬಂತು. ಆದರೆ ಈಗ ಮಾತ್ರ ಆ ಘಟನೆ ಅವನನ್ನು ಮುಳ್ಳಿನಂತೆ ಚುಚ್ಚತೊಡಗಿತು. ಕೊರಳ ಸೆರೆ ಉಬ್ಬಿತು. ಕಣ್ಣಲ್ಲಿ ಹನಿಯೊಂದು ತುಳುಕಾಡಿತು.

ಸಿಸಿಟಿವಿಯ ಮುಂದಿನ ದೃಶ್ಯಾವಳಿಯಲ್ಲಿ ಕಳೆದೆರಡು ದಿನಗಳ ಚಿತ್ರಿಕೆಗಳಿದ್ದವು. ಕಳ್ಳರಿಗಾಗಿ ಮೂರ್ನಾಲ್ಕು ದಿನ ನಿದ್ದೆಬಿಟ್ಟು ಕಾದ ಭಿಕ್ಷುಕ ಅಂದು ನಿದ್ದೆ ಮಾಡಿದ. ಆದರೆ, ಅದೇ ಸಮಯ ಸಾಧಿಸಿ ಕಳ್ಳರು ಮತ್ತೆ ಬಂದಿದ್ದರು. ನಿದ್ದೆಯಿಂದೆದ್ದ ಭಿಕ್ಷುಕ ಅವರ ಜತೆ ಮತ್ತೆ ಜಗಳಕ್ಕೆ ಬಿದ್ದಿದ್ದ. ಆದರೆ ಈ ಬಾರಿ ಅವರು ಸರ್ವಸಿದ್ಧತೆ ಮಾಡಿಕೊಂಡೇ ಬಂದಿದ್ದರು. ಜಗಳದ ನಡುವಲ್ಲಿ ಅವರಲ್ಲೊಬ್ಬ ತನ್ನ ಸೊಂಟದಿಂದ ಚಾಕು ತೆಗೆದು ಒಂದೇ ಕ್ಷಣದಲ್ಲಿ ಭಿಕ್ಷುಕನ ಹೊಟ್ಟೆಗೆ ಬೀಸಿಬಿಟ್ಟಿದ್ದ. ಭಿಕ್ಷುಕ ಕೂಗಲೂ ಆಗದೆ ನಿಲ್ಲಲೂ ಆಗದೆ ಹೊಟ್ಟೆಯನ್ನು ಅವುಚಿ ಹಿಡಿದು, ಕಣ್ಣುಕತ್ತಲೆ ಬಂದಂತೆ ತಿರುಗುತ್ತ, ಆದರೂ ನೆತ್ತರ ಕಲೆ ನೆಲದ ಮೇಲೆ ಬೀಳದಂತೆ ಜಾಗ್ರತೆ ಮಾಡುತ್ತ, ಕಾಲೆಳೆದುಕೊಂಡು ಹೋಗಿಬಿಟ್ಟಿದ್ದ. ಅದಾದ ನಂತರ ಕ್ಯಾಮೆರದಲ್ಲಿ ಕಂಡದ್ದು ಇದೇ ಮಾಲಿಕನ ಮುಖ. ಬೆಳಗ್ಗೆ ಅಂಗಡಿ ಬಾಗಿಲು ತೆರೆದು ಇಲ್ಲದ ಭಿಕ್ಷುಕನಿಗಾಗಿ ಕುತೂಹಲದಿಂದ ಹುಡುಕುತ್ತಿದ್ದ ಇದೇ ಮಾಲೀಕನ ಮುಖ.

ಸಿಸಿಟಿವಿಯ ಚಿತ್ರಿಕೆ ಅಲ್ಲಿಗೆ ನಿಂತಿತ್ತು. ಹೇಳಬೇಕಾದ್ದನ್ನೆಲ್ಲ ಅದು ಯಾವ ಹಿನ್ನೆಲೆ ಸಂಗೀತವೂ ಇಲ್ಲದೆ ಹೇಳಿಬಿಟ್ಟಿತ್ತು. ಮಾಲೀಕ ಈಗ ಅಲ್ಲಿ ಕಲ್ಲಿನಂತೆ ಕೂತಿದ್ದ. ಕೈಕಾಲುಗಳೆಲ್ಲ ಥಂಡಿಗಟ್ಟಿಹೋಗಿದ್ದವು. ಕಣ್ಣಲ್ಲಿ ಧಾರಾಕಾರ ಮುಂಗಾರು ಮಳೆ. ತಲೆಯಿಡೀ ಧಿಂ ಎಂದು ಸುತ್ತುತ್ತಿತ್ತು. ಆ ಭಿಕ್ಷುಕನನ್ನು ಹುಡುಕಬೇಕು. ಊರಿಡೀ ತಿರುಗಾಡಿದರೂ ಪರವಾಯಿಲ್ಲ. ಅದೆಷ್ಟೇ ಖರ್ಚಾದರೂ ಪರವಾಯಿಲ್ಲ, ಅವನನ್ನು ಬದುಕಿಸಬೇಕು. ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ, ಹಾಲುಹಣ್ಣು ತಿನ್ನಿಸಿ ಒಂದು ಥ್ಯಾಂಕ್ಸ್ ಹೇಳಬೇಕು ಎಂದು ಮನಸ್ಸು ತೀವ್ರವಾಗಿ ಬಯಸಲು ತೊಡಗಿತು. ಆದರೆ, ಕಳ್ಳರು ಬೀಸಿದ ಚಾಕುವಿನ ಹೊಡೆತ ಹೇಗಿತ್ತೆಂದರೆ, ಆತ ಬದುಕುಳಿದಿರುವ ಸಂಭವ ಬಹಳ ಕಡಿಮೆ ಎಂದೂ ಮನಸ್ಸು ಹೇಳುತ್ತಿತ್ತು. ಎಷ್ಟೋ ಸಲ ನಾವು ಕಂಡದ್ದನ್ನಷ್ಟೇ ಸತ್ಯ ಅಂದುಕೊಂಡುಬಿಡುತ್ತೇವೆ. ಆದರೆ, ನಮ್ಮ ಕಣ್ಣಿಗೆ ಬೀಳದ ಒಂದು ಆಯಾಮವೂ ಅದಕ್ಕಿದ್ದೀತು; ಇದ್ದೇ ಇರಬೇಕು ಎಂಬುದನ್ನು ಅವಕಾಶವಾದಿಗಳಾಗಿ ಮರೆಯುತ್ತೇವೆ ಎಂಬುದನ್ನು ಸೂಚ್ಯವಾಗಿ ಬಿಂಬಿಸುವ ಈ ಕತೆಯನ್ನು ನನಗೆ ಹೇಳಿದವನು, ಕಾಶ್ಮೀರದ ಕಣಿವೆಯಲ್ಲಿ ಸದ್ಯಕ್ಕೆ ಐವತ್ತೈದರ ಹರೆಯದಲ್ಲಿರುವ; ಅದರೂ ದುರ್ಗಮ ದಾರಿಗಳಲ್ಲಿ ಕಾರೋಡಿಸುತ್ತ ಜೀವನ ಸಾಗಿಸುವ ಚಿಂಬಾ ಎಂಬ ಲಡಾಖಿ.

ಅವನ ಏಕೈಕ ಮಗ ಯೋಧನಾಗಿದ್ದನಂತೆ. ಜಮ್ಮುವಿನಲ್ಲಿ ಉಗ್ರರೊಂದಿಗೆ ನಡೆದ ಭೀಕರ ಕಾಳಗವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಎರಡು ವಾರ ಸಾವು-ಬದುಕಿನ ನಡುವೆ ಹೋರಾಡಿ ಕೊನೆಯುಸಿರೆಳೆದನಂತೆ. ಮಹಾನ್ ಸ್ವಾಭಿಮಾನಿಯಾದ ಚಿಂಬಾ, ತನ್ನ ಮಗನ ಸಾವಿಗೆ ಪ್ರತಿಯಾಗಿ ಕೇಂದ್ರ ಸರಕಾರ ಕೊಟ್ಟ ಧನಸಹಾಯವನ್ನು ಒಂದು ಪೈಸೆಯೂ ಮುಟ್ಟದೆ ಹಳ್ಳಿಯ ಶಾಲೆಯೊಂದಕ್ಕೆ ದಾನ ಮಾಡಿದ್ದ. ಈಗ, ಟ್ಯಾಕ್ಸಿ ಓಡಿಸಿ ಜೀವನ ಸಾಗಿಸುತ್ತಿದ್ದ. ಚಿಂಬಾ ಹೇಳಿದ ಕತೆಯ ಕೊನೆಯ ಸಾಲು: ನಿಮ್ಮ ಮನೆ ಕಾಯುವ, ಅದಕ್ಕಾಗಿ ನಿಮ್ಮ ಎಲ್ಲ ಬಯ್ಗುಳ, ಹೊಡೆತ, ದೌರ್ಜನ್ಯಗಳನ್ನೂ ಸಹಿಸಿಕೊಂಡು ಮಗುಮ್ಮಾಗಿರುವ ಇನ್ನೊಬ್ಬ ಭಿಕ್ಷುಕ ಯಾರು ಗೊತ್ತಾ? ಈ ದೇಶದ ಸೈನಿಕ. ಅವನೂ ಅಷ್ಟೇ ಕಣ್ರೀ, ಸತ್ತ ಮೇಲಷ್ಟೇ ನಿಮಗೆ ನೆನಪಾಗುತ್ತಾನೆ. ಅಲ್ಲಿಯವರೆಗೆ ಅವನ ಹೆಸರೂ ಗೊತ್ತಿರುವುದಿಲ್ಲ ನಿಮಗೆ.
ಚಿಂಬಾ ಹೇಳಿದ ಮಾತು ಮತ್ತೆಮತ್ತೆ ನೆನಪಾಗುವಂಥ ಘಟನೆಗಳು ಈ ದೇಶದಲ್ಲಿ ನಡೆಯುತ್ತಿವೆಯಲ್ಲ, ಸಂಕಟವಾಗುತ್ತದೆ.

ಮೇಲಿನ ಕತೆಗೆ ಸಂಬಂಧಪಟ್ಟಂತೆ ಶಾರ್ಟ್ ಮೂವಿಯೊಂದಿದೆ. ಇಲ್ಲಿ ನೋಡಬಹದು ಭಿಕ್ಷುಕ ಮತ್ತು ಅಂಗಡಿ

5 ಟಿಪ್ಪಣಿಗಳು Post a comment
  1. suresh's avatar
    suresh
    ಮಾರ್ಚ್ 9 2016

    ಸೂಪರ್ ಸರ್……ನಿಜಕ್ಕೂ ಕತೆ ತಾನಾಗೇ ಓದಿಸಿಕೊಂಡು ಹೋಯಿತು…..ಇದೇ ಒಬ್ಬ ಬರಹಗಾರನಿಗೆ ಇರುವ ತಾಕತ್ತು….ರೋಹಿತ್ ಅವರೇ ನಿಮ್ಮ ಎಲ್ಲ ಬರಹಗಳನ್ನು ಓದುತ್ತಿರುತ್ತೇನೆ. ಇದು ತುಂಬಾ ಹಿಡಿಸಿತು.

    ಉತ್ತರ
  2. UNIVERSAL's avatar
    hemapathy
    ಮಾರ್ಚ್ 9 2016

    ಈ ಸತ್ಯಕಥೆ ಚೆನ್ನಾಗಿ ಮೂಡಿ ಬಂದಿದೆ. ಲೇಖಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ನಾನಿಲ್ಲಿ ಹೇಳುವುದೇನೆಂದರೆ, ಸ್ವಾರ್ಥ ನಮ್ಮ ಮಾನವೀಯತೆಯನ್ನು ಕೊಲ್ಲುತ್ತದೆ. ನಮಗೂ ಸಾವು ಕಾದಿದೆ ಎಂಬುದನ್ನು ನಾವು ನೆನಪಿಸಿಕೊಳ್ಳುವುದೇ ಇಲ್ಲ. ಸಾಮಾನ್ಯ ತಿಳಿವಳಿಕೆಯೊಂದನ್ನು ಬಿಟ್ಟು ಮಿಕ್ಕೆಲ್ಲಾ ಜ್ಞಾನವನ್ನೂ ನಾವು ಉಪಯೋಗಿಸಿಕೊಳ್ಳುತ್ತೇವೆ. ಕಾಮನ್ ಸೆನ್ಸೇ ಇಲ್ಲದೇ ಹೋದ ಮೇಲೆ ಮಿಕ್ಕೆಲ್ಲ ಜ್ಞಾನಗಳಿದ್ದರೂ ಅವುಗಳಿಂದ ಯಪಯೋಗವೇ ಇಲ್ಲ. ಇದೇ ಮಾನವರನ್ನು ತರ್ಕವಿಲ್ಲದ ಸ್ವಾರ್ಥಿಗಳನ್ನಾಗಿ ಮಾಡಿಬಿಟ್ಟಿದೆ. ಮಾನವೀಯತೆಯೇ ಇಲ್ಲದಿದ್ದ ಮೇಲೆ ಮಾನವರಾಗಿದ್ದು ಏನು ಪ್ರಯೋಜನ?! ತಮ್ಮ ಸಾಕಷ್ಟು ಕಥೆಗಳನ್ನು ಒಂದು ಕಡೆ ಸಂಗ್ರಹಿಸಿಟ್ಟುಕೊಂಡಿದ್ದೇನೆ.

    ಉತ್ತರ
  3. mallikarjun's avatar
    ಮಾರ್ಚ್ 9 2016

    thanku sir

    ಉತ್ತರ
  4. Mallappa's avatar
    Mallappa
    ಮಾರ್ಚ್ 10 2016

    ಛೆ, ಅದೇನು ಅಂತ ಬರೆದಿರುವಿರಿ ಮಹಾರಾಯರೆ. ಕಣ್ಣಲ್ಲಿ ನೀರು ಜಿನುಗುತ್ತಿರುವುದು.ಅದಕ್ಕೇ ಗೊತ್ತಿದ್ದೋ ಗೊತ್ತಿಲ್ಲದೆಯೊ ಯಾರಿಗೇ ಆಗಲಿ ತೊಂದರೆ ಕೊಡಬಾರದು

    ಉತ್ತರ
  5. venkataramana.h.r.'s avatar
    ಮಾರ್ಚ್ 11 2016

    ಬಹಳ ಮನೋಜ್ಙ ವಿಷಯ.

    ಉತ್ತರ

Leave a reply to venkataramana.h.r. ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments