ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 28, 2016

11

ಮರೆತೇಬಿಟ್ಟಿರುವ ನವಿಲುಗರಿ ಮರಿ ಹಾಕಿದೆಯೋ ಏನೋ!

‍ನಿಲುಮೆ ಮೂಲಕ

-ರೋಹಿತ್ ಚಕ್ರತೀರ್ಥ

12421710_10208313626414840_70687296_nಅದೊಂದು ಅನೂಹ್ಯ ಪ್ರಪಂಚ. ನನ್ನ ಅಜ್ಜಿ ವಾರ, ಎರಡು ವಾರಕ್ಕೊಮ್ಮೆ ಅಲ್ಲಿ ಹೋಗುವುದಿತ್ತು. ಶ್ರಾದ್ಧಕ್ಕೆ ಗಿಂಡಿಗಳು ಬೇಕಾದವೆಂದೋ ಭರಣಿಯಲ್ಲಿಟ್ಟ ಉಪ್ಪಿನಕಾಯಿ ಖರ್ಚಾಯಿತೆಂದೋ ಅಥವಾ ದಿನದಲ್ಲಿಪ್ಪತ್ತೈದು ಗಂಟೆ ಬೇಡುತ್ತಿದ್ದ ಕೆಲಸಗಳು ಅಂದು ತುಸು ಬೇಗನೆ ಮುಗಿದು ಜೇಡರ ಬಲೆ ತೆಗೆಯುವುದಕ್ಕೆ, ಬಾವಲಿಗಳ ಹಿಕ್ಕೆ ತೆಗೆದು ಹೊರಹಾಕುವುದಕ್ಕೆ ಸಮಯ ಮಿಕ್ಕಿತೆಂದೋ, ಅಂತೂ ಅಲ್ಲಿಗೆ ಹೋಗಲು ಯಾವುದಾದರೊಂದು ಕಾರಣ ಅಜ್ಜಿಗೆ ಸಿಕ್ಕರೆ ನಮಗೆ ಸ್ವರ್ಗದ ಬಾಗಿಲು ತೆರೆದುಕೊಂಡಷ್ಟೇ ಖುಷಿ. “ಅಜ್ಜಿ, ನಾನೂ ಬತ್ತೆ” ಅಂತಿದ್ದೆವು. ನಮ್ಮ ವಿನಂತಿಗೆ ಪ್ರತಿಯಾಗಿ ಆಕೆಯಿಂದ ಅರ್ಧಗಂಟೆ ಪ್ರವಚನ ಹೇಳಿಸಿಕೊಂಡು, ಕೋಪದಿಂದ ಮುಖ ಊದಿಸಿಕೊಂಡರೆ ಅದೂ ಒಂದು ಲಾಭವೇ. ಯಾಕೆಂದರೆ ಅಷ್ಟೆಲ್ಲ ಬಯ್ದು ಗುಡ್ಡೆ ಹಾಕಿ ಕೊನೆಗೆ ನಮ್ಮ ಗಂಟುಮುಖ ನೋಡಲಾಗದೆ ಮೊಸರವಲಕ್ಕಿ ಮಾಡಿ ತಿನ್ನಿಸಿ, “ಬಾ ಬಾ ಆದರೆ ಹನುಮಂತನ ಹಾಗೆ ಕುಣೀಬೇಡ ಅಲ್ಲಿ” ಎಂಬ ಎಚ್ಚರಿಕೆ ಕೊಟ್ಟು ಒಯ್ಯುತ್ತಿದ್ದಳು ಆಕೆ ಆ ಅಟ್ಟವೆಂಬ ನಿಗೂಢ ವಿಸ್ಮಯ ಪ್ರಪಂಚಕ್ಕೆ.
ಅಟ್ಟವೇ? ಹಾಗೆಂದರೇನು? ಎಂದು ಕೇಳುವ ಕಾಲ ಬಂದಿದೆ. ನಮ್ಮದೀಗ ಡಬ್ಬಲ್ ತ್ರಿಬ್ಬಲ್ ಬೆಡ್‍ರೂಮ್ ಮನೆಗಳ ಕಾಲ. ಅಪಾರ್ಟ್‍ಮೆಂಟ್‍ಗಳಲ್ಲಿ ಡ್ಯುಪ್ಲೆಕ್ಸ್ ಮನೆಗಳನ್ನು ಮಾಡಿಕೊಳ್ಳಬಹುದು, ಆದರೆ ಅಲ್ಲಿ ಅಟ್ಟವಿರುವುದಿಲ್ಲ. ಸ್ವತಂತ್ರ ಮನೆಗಳಲ್ಲಿ ಗರಾಜುಗಳಿರುತ್ತವೆ, ಅಟ್ಟವಲ್ಲ. ಅಟ್ಟದಲ್ಲಿರುತ್ತಿದ್ದ ವಸ್ತುಗಳನ್ನೆಲ್ಲ ಆಧುನಿಕ ಮನೆಗಳು ಗೇಟ್ ದಾಟಿಸಿ ಕೈತೊಳೆದುಕೊಂಡಿವೆ. ತನ್ನಷ್ಟಕ್ಕೆ ಮೂಲೆಯಲ್ಲಿ ಮನೆ ಮಾಡಿಕೊಂಡಿರುವ ಜೇಡನ ಐದಿಂಚು ಬಲೆಗೂ ಜಾಗ ಕೊಡಬಾರದೆಂಬ ಅಚ್ಚಬಿಳಿಯ ಸ್ವಚ್ಛ ಮನೆಗಳಲ್ಲಿ ಅಟ್ಟದ ಸಾಮಾನುಗಳಿಗೆಲ್ಲಿ ಜಾಗವಿದ್ದೀತು! ಹಾಗಾಗಿ ಅಟ್ಟ ಮತ್ತದರ ವೈಭವ ಗತಕಾಲ ಸೇರಿ ವರ್ಷಗಳೇ ಆದವು. ನಮ್ಮ ಅಜ್ಜಿಮನೆಗಳಲ್ಲಿ ಅಟ್ಟಗಳಿರುತ್ತಿದ್ದವು. ಡುಬ್ಬದ ಒಂಟೆಯಂತೆ ಅಥವಾ ಮರಿಕಪ್ಪೆಯನ್ನು ಬೆನ್ನೇರಿಸಿಕೊಂಡ ಹಿರಿಕಪ್ಪೆಯಂತೆ ಕಾಣುವ ಈ ಅಟ್ಟದ ಮನೆಗಳನ್ನು ಊರಲ್ಲಿ ಉಪ್ಪರಿಗೆ ಮನೆ ಎನ್ನುವುದು ವಾಡಿಕೆ. ಎಲ್ಲ ಮನೆಗಳ ಅಟ್ಟಗಳೂ ಸರ್ವಸಾಧಾರಣ ಒಂದೇ ಬಗೆಯವಾದರೂ ಅವಕ್ಕೆ ಮನೆಮಂದಿಯಲ್ಲದೆ ಹೊರಗಿನವರಿಗೆ ಪ್ರವೇಶವಿರಲಿಲ್ಲ. ಇಪ್ಪತ್ತೆಂಟನ್ನಾಡುವ ಕ್ಲಬ್ಬಿನ ಮಂದಿ ತಂತಮ್ಮ ಕೈಯ ಇಸ್ಪೀಟೆಲೆಗಳನ್ನು ಜೋಪಾನ ಮಾಡಿಕೊಂಡ ಹಾಗೆ ನಮ್ಮೂರ ಜನ ತಮ್ಮ ಅಟ್ಟಗಳ ಖಾಸಗಿತನವನ್ನು ಕಾಪಾಡಿಕೊಳ್ಳುತ್ತಿದ್ದರು.

 
12910416_10208313621974729_1658361780_nಆ ಅಟ್ಟಕ್ಕೊಂದು ಏಣಿ. ಹೆಚ್ಚಾಗಿ ಅದು ಮನೆಯ ಅಷ್ಟೇನೂ ಹೊಕ್ಕುಬಳಕೆಯಿಲ್ಲದ ಒಂಟಿಮೂಲೆಯಲ್ಲಿ ಊಧ್ರ್ವಮುಖಿಯಾಗಿ ನಿಂತಿರುತ್ತಿದ್ದ ಅನಾಥಜೀವಿ.  ಅಟ್ಟದ  ಏಣಿಗೆ  ಎತ್ತರೆತ್ತರದ   ಪಾವಟಿಗೆಗಳು.  ಹತ್ತಡಿ  ಎತ್ತರದ ಏಣಿಗಿದ್ದುದು  ಆರೋ  ಏಳೋ ಮೆಟ್ಟಿಲುಗಳಷ್ಟೆ. ಹಾಗಾಗಿ ಎಳೆಮಕ್ಕಳಿಗೆ   ಈ   ಏಣಿಯನ್ನು   ಕಂಡರೆ ಹೊಟ್ಟೆಯುಬ್ಬರಿಸಿಕೊಂಡು    ಮಲಗಿದ   ಕುಂಭಕರ್ಣನನ್ನು ನೋಡಿದ ಅನುಭವವಾಗುತ್ತಿತ್ತು. ಇಂಥ ಏಣಿಯನ್ನು ಸಮುದ್ರ ಹಾರಿದ ಹನುಮಂತನಂತೆ ದಡಬಡ ಹತ್ತಿ ಅಟ್ಟಕ್ಕೆ ಹೋಗುತ್ತಿದ್ದ ಹಿರಿಯರನ್ನು  ಕಂಡರೆ  ಮಕ್ಕಳಿಗೆ  ಅಸೂಯೆ ಮತ್ತು  ಆಶ್ಚರ್ಯ.  ಹಿರಿಯರು ಯಾಕೆ, ತಾನೂ ಏಣಿ ಹತ್ತುವುದರಲ್ಲಿ ಕಡಿಮೆಯಿಲ್ಲ  ಎಂದು  ಅವರ  ಸಮಕ್ಕೆ  ನೆಗೆಯುತ್ತ ಜಿಗಿಯುತ್ತಿದ್ದ  ಬೆಕ್ಕನ್ನು  ಕಂಡರೆ  ನಮಗೆ  ನಾವು  ಬೆಕ್ಕಾಗಿ ಹುಟ್ಟಬಾರದಿತ್ತೇ  ಎಂಬ  ಸಂಕಟ!  ಭೀಮನ ತೋಳಿನಂಥ ಈ  ಮರದ   ಪಾವಟಿಗೆಗಳನ್ನು ಹಾರಿ ಅದ್ಯಾವಾಗ ಅಟ್ಟವೆಂಬ ಆಕಾಶವನ್ನು ನೋಡಿಯೇವೋ ಎಂದು ಹಲುಬುತ್ತಿದ್ದೆವು, ನಿಡುಸುಯ್ಯುತ್ತಿದ್ದೆವು. ಅಟ್ಟ ಹತ್ತಲು ಕಲಿಸದೆ ಬೆಟ್ಟ ಹತ್ತು ಎಂದರೆ? – ಎಂದು ನಮ್ಮೂರುಗಳ ಕಡೆ ಗಾದೆಮಾತೇ ಇದೆ. ಅಟ್ಟ ಹತ್ತುವುದು ಕೌಮಾರ್ಯ ಕಳೆದು ಹದಿಹರೆಯ ಶುರುವಾದದ್ದರ ಸಂಕೇತ ಎಂಬಷ್ಟರ ಮಟ್ಟಿಗೆ ಅದು ಹುಡುಗರಿಗೆ  ಸವಾಲಿನ  ಸಂಗತಿಯಾಗಿತ್ತು.  ಅಟ್ಟ ಹತ್ತಿದ ಮೇಲೆ ಏಣಿ ಒಗೆದಂತೆ – ಎಂಬುದು ಇನ್ನೊಂದು ಗಾದೆ. ಅದು ನೆಲ ಮತ್ತು ಅಟ್ಟಗಳ ನಡುವಿನ ಅಗಾಧ ಅಂತರವನ್ನು ನಮಗೆ ಅಭಿನಯಿಸಿ   ಹೇಳುತ್ತಿದ್ದ  ವಿಶಿಷ್ಟ ಗಾದೆಮಾತು.  ಸಂಬಂಧಗಳನ್ನು  ಕತ್ತರಿಸಿಕೊಳ್ಳಬಾರದೆಂಬ  ಎಚ್ಚರ  ಮತ್ತು ಸೂಕ್ಷ್ಮವನ್ನು ತಿಳಿಸಿಕೊಡುತ್ತಿದ್ದದ್ದು ಆ ಗಾದೆ ಮತ್ತು ಅಟ್ಟದ ಏಣಿ.

 
ಅಟ್ಟ ಹತ್ತಲು ನಾವೆಲ್ಲ ಯಾಕೆ ಆಸೆ ಪಡುತ್ತಿದ್ದೆವೆಂದರೆ, ಮನೆಯೊಳಗೆ ಯಾವುದಾದರೂ ವಸ್ತುವನ್ನು ಹುಡುಕಿ ಕೊನೆಗೆ ಸಿಗದಾಗ ಬರುತ್ತಿದ್ದ ಮಾತು – ಅಟ್ಟದಲ್ಲಿರಬಹುದು, ನೋಡಿಕೊಂಡು ಬಾ, ಎಂದು. ಅಂದರೆ ಎಲ್ಲೂ ಸಿಗದ ಅಮೂಲ್ಯ ಸಂಗತಿಗಳೆಲ್ಲ ಆ ಕಾಣದ ಲೋಕದಲ್ಲಿರುತ್ತವೆಂಬ ನಂಬಿಕೆ ನಮ್ಮಂಥ ಅಮಾಯಕರದ್ದು! ಅದಕ್ಕೆ ಸರಿಯಾಗಿ ಮನೆಯಲ್ಲಿ ವಿಶೇಷವೇನಾದರೂ ಜರುಗುವುದಿದ್ದರೆ ಹಿರಿಯರು ಅಟ್ಟದಿಂದ ಒಂದಷ್ಟು ತಾಮ್ರದ ಸಾಮಾನುಗಳನ್ನು, ಯಜ್ಞಕ್ಕೆ ಬೇಕಾಗುವ ಸಮಿಧೆ ಕಡ್ಡಿಗಳನ್ನು ಇಳಿಸಿ ತರುತ್ತಿದ್ದರು. ಹೊಲಗದ್ದೆ ಇದ್ದವರ ಮನೆಗಳಲ್ಲಿ ಧಾನ್ಯ, ತರಕಾರಿಗಳ ಬೀಜಗಳನ್ನು ಸುರಕ್ಷಿತವಾಗಿ ಅಟ್ಟದಲ್ಲಿಡುತ್ತಿದ್ದರು. ಪುರೋಹಿತ ಕುಟುಂಬಗಳ ಮನೆಗಳಲ್ಲಿ ತಾಮ್ರಪತ್ರಗಳು, ಓಲೆಗರಿಗಳು, ಪೂರ್ವಸೂರಿಗಳ ಕಾಗದಪತ್ರಗಳು ಸುರಕ್ಷಿತವಾಗಿರುತ್ತಿದ್ದದ್ದು ಅಟ್ಟಗಳಲ್ಲಿಯೇ. ವರ್ಷಕ್ಕೊಮ್ಮೆ ಇವುಗಳನ್ನು ಹೊರತೆಗೆದು ದೂಳು ಮಸಿ ಕೊಡವಿ, ಸ್ವಲ್ಪ ಬಿಸಿಲಿಗಿಟ್ಟು ಬೂಜು ಬರದಂತೆ ಸಂಸ್ಕಾರಗೊಳಿಸಿ ಮತ್ತೆ ಹಿಂದಿನಂತೆಯೇ ಕಟ್ಟಿ ಅಟ್ಟಕ್ಕೆ ಸೇರಿಸುತ್ತಿದ್ದರು ಅಜ್ಜಯ್ಯ. ಆಗೆಲ್ಲ ಏಣಿಯ ಬುಡದಲ್ಲಿ ನಿಂತು ಈ ಅಮೂಲ್ಯ ಭಂಡಾರವನ್ನು ಅಜ್ಜಯ್ಯನ ಕೈಯಿಂದ ಕೆಳಗಿಳಿಸಿಕೊಳ್ಳುವ, ಮತ್ತೆ ಹತ್ತಿಸುವ ಲೋಕೋತ್ತರವಾದ ಕಾರ್ಯ ನಮ್ಮ ಪಾಲಿಗೆ ಬರುತ್ತಿತ್ತು. ಅದನ್ನೇ ಮಹತ್ಸಾಧನೆ ಎಂಬಂತೆ ಮಾಡಿ ಇಡೀ ದಿನ ಗತ್ತಿನ ಅಮಲಲ್ಲಿ ಬೀಗುತ್ತಿದ್ದೆವು.

 

ಮೊದಲ ಬಾರಿಗೆ ಅಜ್ಜಯ್ಯನೊಂದಿಗೆ ಈ ಏಣಿಯ ಒಂದೊಂದೇ ಪಾವಟಿಗೆಗಳನ್ನು ಹುಷಾರಾಗಿ ಹತ್ತಿ ಅಟ್ಟವೆಂಬ ನಸುಗತ್ತಲೆ ಲೋಕಕ್ಕೆ ಹೋದಾಗ ಕಣ್ಣುಕತ್ತಲೆ ಹೋಗಿತ್ತು ನನಗೆ! ಹಿಂದೆ ನೋಡಬೇಡವೋ ಮರೀ, ತಲೆತಿರುಗಿ ಬಿದ್ದೀಯ! ಮುಂದಿನ ಮೆಟ್ಟಿಲುಗಳನ್ನಷ್ಟೇ ನೋಡುತ್ತ ಒಂದೇ ಉಸಿರಲ್ಲಿ ಹತ್ತಿಬಿಡು ಎನ್ನುತ್ತ ಸಮಾಧಾನದಿಂದ ಕೈಹಿಡಿದು  ಮೇಲೇರಿಸುತ್ತ  ಅಜ್ಜಯ್ಯ  ಅಟ್ಟ  ಹತ್ತಿಸಿಬಿಟ್ಟಿದ್ದರು.  ಮೋರ್ಚರಿಯಲ್ಲಿ  ಬಿಳಿಬಟ್ಟೆ  ಹೊದೆಸಿ  ಮಲಗಿಸಿದ  ಶವಗಳಂತೆ  ಅಲ್ಲಿನ ಒಂದೊಂದೂ ಅಜ್ಜಿಯ ಸೀರೆಯನ್ನೋ  ಅಜ್ಜನ  ಶಲ್ಯವನ್ನೋ  ಹೊದ್ದು  ಉಸರೆತ್ತದೆ ಮಲಗಿದ್ದದ್ದನ್ನು ಕಂಡಾಗ ಒಂದು ಕ್ಷಣ ಉಸಿರು ನಿಂತುಬಿಟ್ಟಿತ್ತು. ಕೊನೆಗೆ ನಿಧಾನವಾಗಿ ಮುಸುಕುಗಳನ್ನು ಬದಿಗೆ ಸರಿಸಿ  ನೋಡುತ್ತಾ  ಹೋದಾಗ  ನನಗೆ ಒಂದೆಡೆ ಸಿಕ್ಕಿದ್ದು ಪುಸ್ತಕಗಳ ಮೂಟೆ. ಹಲವು ವರ್ಷಗಳ ಹಿಂದಿನ ವನಿತಾ ಎಂಬ ಮಾಸಿಕದ ಸಂಚಿಕೆಗಳು, ಹಳೆಯ ಚಂದಮಾಮಗಳು, ಪ್ರಜಾಮತದ ಮಾರಗಲದ ಸೈಜಿನ ಪ್ರತಿಗಳು, ಈಗಷ್ಟೇ ಎತ್ತಿಕಟ್ಟಿದ್ದಾರೆಂಬಷ್ಟು ಫ್ರೆಶ್ ಆಗಿದ್ದ ಇಲ್ಲಸ್ಟ್ರೇಟೆಡ್ ವೀಕ್ಲಿಯ ಪ್ರತಿಗಳು ಎಲ್ಲವೂ ಸಿಕ್ಕಾಗ ಕೋಲಾರದಲ್ಲಿ ಚಿನ್ನವನ್ನು ಎಡತಾಕಿದ ಪ್ರವಾಸಿಯಷ್ಟೇ ಖುಷಿಯಿಂದ ಕುಣಿದುಬಿಟ್ಟಿದ್ದೆ! ಇವನ್ನೆಲ್ಲ ಯಾರು ಓದುತ್ತಿದ್ದರು? ಯಾರಿಲ್ಲಿ ತಂದಿಟ್ಟರು? ನನ್ನ ಅಜ್ಜನ ಮನೆಯಲ್ಲಿ ಬಾಳಿಹೋದ ಅಮ್ಮ, ಚಿಕ್ಕಮ್ಮಂದಿರು, ಮಾವಂದಿರು ಇವನ್ನೆಲ್ಲ ಓದುತ್ತಿದ್ದರಾ ಎಂದು ಒಂದುಕ್ಷಣ ಆಶ್ಚರ್ಯವಾಗಿತ್ತು. ಇಷ್ಟೊಳ್ಳೆಯ ಓದುವ ಹವ್ಯಾಸ ಇತ್ತೆಂಬ ಗತವನ್ನು ನೆನಪಿಸುವ ಯಾವ ಲಕ್ಷಣವನ್ನೂ ನಾನವರಲ್ಲಿ ಕಂಡಿರಲೇ ಇಲ್ಲ ಅದುವರೆಗೆ! ಅಜ್ಜನನ್ನು ಕಾಡಿಬೇಡಿ ಅವನ್ನೆಲ್ಲ ಅವುಚಿಹಿಡಿದು ಅಟ್ಟದಿಂದ ಇಳಿಸಿ ಮನೆತುಂಬಿಸಿಕೊಂಡಿದ್ದೆ. ಬೇಸಿಗೆ ರಜೆಗೆ ಅಜ್ಜಿಮನೆಗೆ ಹೋದಾಗೆಲ್ಲ ನನ್ನನ್ನು ಮೊದಲು ಸೆಳೆಯುತ್ತಿದ್ದದ್ದು ಅಟ್ಟವೇ.  ಅಲ್ಲಿ  ಇನ್ನೂ  ಏನೇನೆಲ್ಲ  ಇವೆಯೋ  ಎಂಬ ಕುತೂಹಲವಂತೂ ಕಡೆವರೆಗೆ  ಉಳಿದೇಇತ್ತು.  ವರ್ಷಗಳು  ಸರಿದಂತೆ,  ಅಟ್ಟ  ಹತ್ತಿದಾಗ ತಲೆಗೆ ಜಂತಿ ತಾಗೀತೆಂದು ಎಚ್ಚರ ಮಾಡುವಷ್ಟು ಎತ್ತರ ಬೆಳೆದ ಮೇಲೆ ಒಂದು ದಿನ, ಆ  ಏಣಿಯನ್ನು  ಕಂಡಾಗ  ಅದರ  ಗಾತ್ರ  ಇಳಿದಂತೆ  ಕಾಣಿಸಿತು.  ಇಷ್ಟೊಂದು  ಕುಬ್ಜ ಏಣಿಯನ್ನೇ ಬ್ರಹ್ಮರಥವೆಂಬಷ್ಟು ಬೃಹತ್ತಾಗಿ ಕಲ್ಪಿಸಿಕೊಳ್ಳುತ್ತಿದ್ದೆವಲ್ಲ ಎನ್ನಿಸಿ ನಗು ಬಂದಿತ್ತು.

 
ಕಂಚಿನ ಮೂರ್ತಿಗಳು, ತಾಮ್ರದ ತಪ್ಪಲೆಗಳು, ಆಧುನಿಕತೆಯ ಬೀಸಿಗೆ ಬೆದರಿ ಬದಿಸರಿದ ಅಲ್ಯುಮಿನಿಯಂ ಪಾತ್ರೆಯ ಚಹಾದಷ್ಟು ಬಿಸಿ ನೆನಪುಗಳು, ಬೆಕ್ಕಿನ ಸಂಸಾರ ಬೆಚ್ಚನೆ ಮಲಗಿದ್ದ ಗುರುತುಗಳು, ಮರದ ಮೊರ, ಕೊಳಗಗಳು,  ಮಸಿಹಿಡಿದ ಪ್ಲಾಸ್ಟಿಕ್ ಡಬ್ಬಿಗಳು, ಸೌತೆಕಾಯಿಗಳನ್ನು ತೂಗಿಸುತ್ತಿದ್ದದ್ದರ ನೆನಪಿಗೆ ಈಗಲೂ ನೇತಾಡುವ ಖಾಲಿ ಉರುಳುಗಳು  ಮತ್ತು   ಇವೆಲ್ಲಕ್ಕೆ  ವಿಚಿತ್ರ  ಕಾಂತಿ ತರುತ್ತಿದ್ದ ಗಾಜಿನ ಬೆಳಕಿಂಡಿಗಳು – ಅಟ್ಟವೆನ್ನುವ ಲೋಕ ಮೊಗೆದುಕೊಡುವ ನೆನಪುಗಳೆಷ್ಟೋ! ಈಗಲೂ ಬೇಸಿಗೆ ಬಂದಾಗೆಲ್ಲ ಬಂದುಹೋಗುವ ಸ್ಮರಣೆಗಳ ಮಾಲೆಯಲ್ಲಿ ಅಟ್ಟವೂ ಇರುತ್ತದೆ. ಅಲ್ಲಿ ಮುಚ್ಚಿಟ್ಟಿದ್ದ ಪುಸ್ತಕಗಳ ನಡುವೆ ಸಿಕ್ಕಿಸಿದ್ದ ನವಿಲುಗರಿ  ಇನ್ನೂ  ಬಣ್ಣ  ಮಾಸದೆ  ಹಾಗೇ  ಉಳಿದಿರಬಹುದೆ? ಒಂದಕ್ಕೇ ಇರಲು ಬೇಸರವಾಗಿ ಮೆತ್ತಗೆ ಒಂದು ಮರಿ ಇಟ್ಟಿರಬಹುದೆ? ಎಂಬ ಯೋಚನೆ ಹಾದುಹೋಗುತ್ತದೆ. ಧಾರವಾಡದಲ್ಲಿ ದ.ಬಾ. ಕುಲಕರ್ಣಿಯವರ ಪುಸ್ತಕದಂಗಡಿ, ಟಿ.ಡಿ. ಶಿವಲಿಂಗಯ್ಯನವರ ಸಾಹಿತ್ಯ ಮಂದಿರ, ಬೆಟಗೇರಿ ಕೃಷ್ಣಶರ್ಮರ “ಜಯಂತಿ”, ಪಾಪು ಅವರ “ಪ್ರಪಂಚ” – ಇವೆಲ್ಲ ಸಾಹಿತ್ಯ ಲೋಕದ ಅಗಸೆ ಬಾಗಿಲುಗಳು. ಸುಭಾಸ ರಸ್ತೆಯಲ್ಲಿದ್ದ ಮನೋಹರ ಗ್ರಂಥಮಾಲೆಯ ಅಟ್ಟ ಮಾತ್ರ ಪ್ರಬುದ್ಧ ಸಾಹಿತಿಗಳ ಕಾವ್ಯ ಕಥಾ ವಿನೋದಗಳ ದಂತಗೋಪುರ – ಎಂದು ಚಂದ್ರಶೇಖರ ಪಾಟೀಲರು ಒಂದೆಡೆ ಬರೆದದ್ದುಂಟು. ಮನೋಹರ ಗ್ರಂಥಮಾಲೆಯ ಅಟ್ಟವೂ ನನ್ನ ಅಜ್ಜಿಮನೆಯ ಅಟ್ಟದಷ್ಟೇ ನಿಬಿಡವಾಗಿತ್ತೆ ನಿಗೂಢವಾಗಿತ್ತೆ ಎನ್ನುವುದೆಲ್ಲ ಗೊತ್ತಿಲ್ಲ; ಜಿಬಿ ಜೋಷಿಯವರ ಮರಿಮೊಮ್ಮಗನ ಕಾಲಕ್ಕೆ ಸೇರಿದ ಆಧುನಿಕನಾದ ನನಗೆ ಆ ಅಟ್ಟ ಎಂದೂ ಏರಲಾರದ ದಂತಗೋಪುರವಾಗಿಯೇ ಉಳಿದುಬಿಟ್ಟಿದೆ.

11 ಟಿಪ್ಪಣಿಗಳು Post a comment
  1. ಮಾರ್ಚ್ 28 2016

    ಈ ಅಟ್ಟವೆಂಬ ಲೋಕದಲ್ಲಿ ನಾವು ಕಳೆದು ಹೋಗುವಷ್ಟು ಉತ್ತಮವಾಗಿದೆ ಲೇಖನ. ನನಗೂ ಈ ಅನುಭವ ಕಳ್ಳಬೆಕ್ಕಿನಂತೆ ಅಜ್ಜಿಯ ಹಿಂದೆ ಅಟ್ಟ ಏರಿದಾಗ ಆಗಿದೆ. ಓದಿ ತುಂಬಾ ಖುಷಿ ಆಯಿತು. ಧನ್ಯವಾದಗಳು.

    ಉತ್ತರ
  2. ರಾಮಚಂದ್ರ ಭಟ್
    ಮಾರ್ಚ್ 28 2016

    ಓದುತ್ತಾ ಹೋದ ಹಾಗೆ ನನ್ನ ಬಾಲ್ಯ ನೆನಪಾಯಿತು,ತುಂಬಾ ಸುಂದರವಾದ ನೈಜ ವಿವರಣೆ,ಧನ್ಯವಾದಗಳು ರೋಹಿತ್ ಸರ್.

    ಉತ್ತರ
  3. ಮಾರ್ಚ್ 28 2016

    sarala vishyada sahaja sundara niroopane . Thumbaa chennagide

    ಉತ್ತರ
  4. Shalini G. Bhat.
    ಮಾರ್ಚ್ 28 2016

    ನನ್ನ ಬಾಲ್ಯ ನೆನಪಾಯಿತು,ತುಂಬಾ ಸುಂದರವಾದ ನೈಜ ವಿವರಣೆ,ಧನ್ಯವಾದಗಳು. ರೋಹಿತ್ ಸರ್.

    ಉತ್ತರ
  5. Naveen gangotri
    ಮಾರ್ಚ್ 28 2016

    ತುಂಬ ಖುಷಿ ಪಡಿಸಿದ ಲೇಖನ 🙂

    ಉತ್ತರ
  6. Yogananda Malnad
    ಮಾರ್ಚ್ 28 2016
  7. jahnavi
    ಮಾರ್ಚ್ 28 2016

    ಒಳ್ಳೆಯ ಬರಹ..ಇನ್ನೂ ಸ್ವಲ್ಪ ಬೇಕೆನಿಸಿತು. ಅಮ್ಮ ಮಾಡಿದ ಪಾಯಸ ಸ್ವಲ್ಪೇ ರುಚಿ ನೋಡಲು ಕೊಟ್ಟ ಹಾಗಿದೆ.:-)

    ಉತ್ತರ
  8. ಏಪ್ರಿಲ್ 4 2016

    ವಿವರಣೆ ತುಂಬಾ ಸೊಗಸಾಗಿದೆ. ನಿಮ್ಮೂರಿನ ಅಟ್ಟಕ್ಕೆ ನಾವು ಹೋಗಿ ಬಂದಂತಾಯಿತು 🙂

    ಉತ್ತರ
  9. RDHA
    ಏಪ್ರಿಲ್ 6 2016

    NIJAVAGALU THUMBA CHENNAGIDE NAMMA MANEYA ATTA NEANAPAYITHU EEGELLA YARA MANEYALLU ATTA IRUVUDILLA.

    ಉತ್ತರ
    • RADHA
      ಏಪ್ರಿಲ್ 6 2016

      DHANYAVADAGALU HOSA VARSHADA HARDIKA SHUBHASHAYAGALU. RADHA.YELAHANKA

      ಉತ್ತರ
  10. ಕಿಶೋರ್
    ಜೂನ್ 1 2016

    ಹಳೆಮನೆಯ ಅಟ್ಟವನ್ನು ಹೊಸದಾಗಿ ನೆನಪಿಸುವಂತಹ ಲೇಖನ….
    ನಮ್ಮ ಮನೆಯ ಅಟ್ಟದ ಅನುಭವವನ್ನು ನೀಡುವಂತಹ ಸಾಲುಗಳು… ಧನ್ಯವಾದಗಳು ರೋಹಿತ್ ಸರ್…

    ಉತ್ತರ

ನಿಮ್ಮದೊಂದು ಉತ್ತರ umavallish6 ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments