ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 29, 2016

18

ಬಣ್ಣದ ಬದುಕಿಗೆ ಮರುಳಾಗುವ ಮುನ್ನ

‍ನಿಲುಮೆ ಮೂಲಕ

– ರಾಜೇಶ್ ನರಿಂಗಾನ

Sad_Brown_Eyes_With_Tears-6ಕಳೆದ ವಾರ ನಮ್ಮ ಕಂಪೆನಿಯ ಮಾರ್ಕೆಟಿಂಗ್ ವಿಸ್ತರಣೆಗಾಗಿ ಪೂಂಜಾಲಕಟ್ಟೆಗೆ ಹೋಗಿದ್ದೆ. ಮೊದಲೇ ಬಿರುಬಿಸಿಲು. ಬಸ್ಸಿನಿಂದ ಇಳಿಯುತ್ತಿದ್ದಂತೆ ಅಲ್ಲೇ ಬಸ್ ಸ್ಟ್ಯಾಂಡ್ ಪಕ್ಕದಲ್ಲಿದ್ದ ಅಂಗಡಿಗೆ ಹೋಗಿ ಎಳನೀರು ಕುಡಿದು ಹೊರಬಂದಾಗ ಬಸ್ ಸ್ಟ್ಯಾಂಡ್’ನಲ್ಲಿ ಒಬ್ಬಾಕೆ ಮೂವತ್ತು ಮೂವತ್ತೈದರ ಹರೆಯದ ಮಹಿಳೆ ನಾನು ಹೋಗಬೇಕಾಗಿದ್ದ ಗೇರುಬೀಜದ ಕಾರ್ಖಾನೆಯ ಕಡೆಯಿಂದ ಬರುತ್ತಿದ್ದರು. ತನ್ನ ಕೈಯಲ್ಲಿ ಒಂದು ಪುಟ್ಟ ಮಗುವನ್ನು ಎತ್ತಿಕೊಂಡಿದ್ದರೆ, ಇನ್ನಿಬ್ಬರು ಮಕ್ಕಳು ನಡೆದುಕೊಂಡು ಬಸ್ ಸ್ಟ್ಯಾಂಡ್ ನ ಕಡೆಗೆ ಬರುತ್ತಿದ್ದರು. ಅವರು ನನ್ನ ಕಣ್ಣಿಗೆ ಹತ್ತಿರವಾಗುತ್ತಿದ್ದಂತೆ ಆಕೆಯನ್ನು ಎಲ್ಲೋ ನೋಡಿದ ನೆನಪು ಕಾಡತೊಡಗಿತು. ಕಡೆಗೂ ನೆನಪು ಮರುಕಳಿಸಿತು… ಹೌದು…!!!! ಅದು ಅವಳೇ…..!!!!!! ಈಗ ಮತ್ತಷ್ಟು ನೆನಪಾಯಿತು. ನನ್ನ ನೆನಪು ಹತ್ತು ವರ್ಷಗಳ ಹಿಂದಕ್ಕೆ ಹೋಯಿತು…..

ನಮ್ಮೂರಿನ ಗುತ್ತಿನ ಮನೆ ಎಂದರೆ ಅದು ಸುಬ್ಬಣ್ಣ ಶೆಟ್ರ ಮನೆ. ಆ ಮನೆಯು ನಮ್ಮ ಗ್ರಾಮದ ದಾನಶೂರನ ಮನೆ ಎಂದೇ ಪ್ರಸಿದ್ಧವಾಗಿತ್ತು. ಯಾರೇ ಮನೆ ಬಾಗಿಲಿಗೆ ಬಂದರೂ ಸುಬ್ಬಣ್ಣ ಶೆಟ್ರು ಇಲ್ಲ ಎಂದು ಹೇಳಿದ ಪ್ರಸಂಗವೇ ಇದ್ದಿಲ್ಲವಂತೆ. ಕೈಗೆ ಸಿಕ್ಕಿದ್ದನ್ನು ದಾನ ಮಾಡುವ ಧಾರಾಳ ಮನಸ್ಸಿನವರು ಎಂದು ನಮ್ಮೂರಿನವರು ಈಗಲೂ ಅವರನ್ನು ಪೂಜಿಸುತ್ತಾರೆ. ಕೆಲವರ ಮನೆಯಲ್ಲಂತೂ ಅವರ ಫೋಟೋ ಇಟ್ಟು ಪೂಜಿಸುತ್ತಾರೆ. ಅವರ ಧರ್ಮಪತ್ನಿ ಪುಷ್ಪಕ್ಕೆ. ಗಂಡನಿಗೆ ತಕ್ಕ ಹೆಂಡತಿ. ಎಲ್ಲರಿಗೂ ಅವರು ಪ್ರೀತಿಯ ಅಕ್ಕೆ. ನಮಗೆಲ್ಲರಿಗೂ ಅವರು ಸಾಕಿದಮ್ಮ. ನಮ್ಮ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದುದರಿಂದ ನಾವು (ಎರಡು ಮೂರು ಮನೆ ಮಕ್ಕಳು) ತಿಂದು ಬೆಳೆದಿದ್ದೆಲ್ಲಾ ಅದೇ ಗುತ್ತಿನ ಮನೆಯಲ್ಲಿ. ಅಂಥಹ ದೈವ ಸ್ವರೂಪಿ ದಂಪತಿಗಳ ಏಕಮಾತ್ರ ಮುದ್ದಿನ ಮಗಳು ಶೈನಿ.. ನಮ್ಮೆಲ್ಲರ ಚೈನಕ್ಕ. ಶೈನಿ ಎಂಬ ಪದದ ಅರ್ಥ ನಮಗೆ ಅರಿವಿಗೆ ಬಂದಾಗ ಅವರಿಗೆ ಶೈನಿ ಎಂಬ ಹೆಸರು ಇಟ್ಟಿದ್ದು ಸರಿಯಾಗಿಯೇ ಇದೆ ಎಂದು ಅನ್ನಿಸಿತ್ತು. ಚೈನಕ್ಕ ನನಗಿಂತ ಐದು ವರ್ಷ ದೊಡ್ಡವರು. ತಂದೆ ತಾಯಿಯಂತೆ ಆಕೆಯೂ ಕೂಡ ಮೃದು ಸ್ವಭಾವದವರು, ಮಾತಿನ ಮಲ್ಲಿ. ಆಗರ್ಭ ಶ್ರೀಮಂತಿಕೆಯಿದ್ದರೂ ನಮ್ಮೊಂದಿಗೆ ಯಾವಾಗಲೂ ನಿಗರ್ವಿಯಾಗಿಯೇ ಇರುತ್ತಿದ್ದರು. ವರ್ಷಗಳು ಉರುಳುತ್ತಿದ್ದವು.. ನಾನು ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದೆ. ಚೈನಕ್ಕ ಮಂಗಳೂರಿನ ಯಾವುದೋ ಕಾಲೇಜಿನಲ್ಲಿ ಓದುತ್ತಿದ್ದಳು. ಆಗ ಒಂದು ದುರ್ಘಟನೆ ಆ ಗುತ್ತಿನ ಮನೆಯಲ್ಲಿ ನಡೆದುಹೋಯಿತು. ಯಾರೂ ಆ ಘಟನೆಯನ್ನು ಕನಸಿನಲ್ಲಿಯೂ ಊಹಿಸಿಯೇ ಇರಲಿಲ್ಲ. ಆ ಘಟನೆಯನ್ನು ಕಂಡು ಊರಿಗೆ ಊರೇ ದಂಗಾಗಿಬಿಟ್ಟಿತು.

ಪ್ರತಿನಿತ್ಯ ಕಾಲೇಜಿಗೆ ಹೋಗಿ ಬರುತ್ತಿದ್ದ ನಮ್ಮ ಚೈನಕ್ಕ ಆ ದಿನ ಕಾಲೇಜಿನಿಂದ ಮರಳಿ ಬರಲೇ ಇಲ್ಲ. ಸುಬ್ಬಣ್ಣ ಶೆಟ್ರು ಇದ್ದಬಿದ್ದ ಕಡೆಯೆಲ್ಲಾ ಹುಡುಕಿದರು, ಸಂಬಂಧಿಕರಿಗೆ ಫೋನ್ ಮಾಡಿ ವಿಚಾರಿಸಿದರು (ಆ ಕಾಲದಲ್ಲಿ ನಮ್ಮ ಊರಲ್ಲಿ ಫೋನ್ ಇದ್ದುದ್ದು ಸುಬ್ಬಣ್ಣ ಶೆಟ್ರ ಮನೆಯಲ್ಲಿ ಮಾತ್ರ). ಆಕೆಯ ಸುಳಿವೇ ಸಿಗಲಿಲ್ಲ. ಕೊನೆಯ ಯಾವ ದಾರಿಯೂ ಕಾಣದೇ ಹೋದಾಗ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಪೋಲೀಸ್ ಠಾಣೆಯನ್ನು ಹತ್ತಿದ್ದರು. ಪೋಲೀಸ್ ಕಂಪ್ಲೇಂಟ್ ಕೊಟ್ಟು ಏನಾದರೂ ಸುಳಿವು ಸಿಗುತ್ತಾ ಎಂದು ಹತಾಶ ಆಶಾಭಾವದಿಂದ ಕಾಯುತ್ತಿದ್ದರು. ನಾಲ್ಕು ದಿನ ಕಳೆದರೂ ನಮ್ಮ ಚೈನಕ್ಕ ನಾಪತ್ತೆಯಾದುದರ ಸುಳಿವೇ ಸಿಗಲಿಲ್ಲ. ಇತ್ತ ಪುಷ್ಪಕ್ಕೆ ಇದೇ ಕಾರಣಕ್ಕೆ ಕೊರಗಿ ಕೊರಗಿ ಹಾಸಿಗೆ ಹಿಡಿದರು. ಅವರಿಗೆ ಮೊದಲೇ ಹೃದಯ ಸಂಬಂಧಿ ಕಾಯಿಲೆಯಿತ್ತು.

ಈ ನಾಪತ್ತೆ ಪ್ರಕರಣದ ಜಾಡು ಹಿಡಿದು ಹೊರಟ ಪೋಲೀಸರು ಐದನೇ ದಿನದಂದು ಮಹತ್ವದ ಸುಳುವೊಂದನ್ನು ಕಲೆ ಹಾಕಿದರು. ಚೈನಕ್ಕ ನಾಪತ್ತೆಯಾದ ದಿನವೇ ಅವರು ಕಲಿಯುತ್ತಿದ್ದ ಕಾಲೇಜಿನ ಹುಡುಗನೊಬ್ಬನೂ ನಾಪತ್ತೆಯಾಗಿದ್ದಾನೆ ಎಂದು ಮಂಗಳೂರಿನ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ಪೋಲೀಸರು ಹೇಳಿದರು. ಆದರೆ ಈಗವರು ಎಲ್ಲಿದ್ದಾರೆ ಎಂಬ ಸುಳಿವು ಮಾತ್ರ ಪೋಲೀಸರಿಗೆ ಸಿಗಲಿಲ್ಲ.

ಮಗಳು ಮತ್ತೆ ಬರಬಹುದು ಎಂದು ಸುಬ್ಬಣ್ಣ ಶೆಟ್ಟರು ಕಾದು ಕುಳಿತರು, ಮಗಳು ವಾಪಸ್ ಬಂದರೆ ಗ್ರಾಮದ ದೈವ ಮಲರಾಯನಿಗೆ ಧರ್ಮನೇಮ ಕೊಡುತ್ತೇನೆ ಎಂದು ಹರಕೆ ಹೊತ್ತರು. ಊಹುಂ!!!! ಮಗಳ ಸುಳಿವೇ ಇಲ್ಲ. ಇತ್ತ ಪುಷ್ಪಕ್ಕೆಯ ಆರೋಗ್ಯ ದಿನೇ ದಿನೇ ಕ್ಷೀಣಿಸತೊಡಗಿತು. ಆಗ ಸುಬ್ಬಣ್ಣ ಶೆಟ್ರ ದೂರದ ಸಂಬಂಧಿ ವಕೀಲರೊಬ್ಬರು ನಾಪತ್ತೆಯಾದ ಶೈನಿಯನ್ನು ಪತ್ತೆ ಮಾಡಿ ಕರೆದುಕೊಂಡು ಬರುವಂತೆ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಹಾಕಿದರು. ಕೋರ್ಟು ಪೋಲೀಸರಿಗೆ ಆದಷ್ಟು ಬೇಗ ಪತ್ತೆ ಮಾಡುವಂತೆ ತಾಕೀತು ಮಾಡಿ ದಿನ ಗಡುವು ನೀಡಿತು.

ಹೈಕೋರ್ಟಿನ ತಾಕೀತಿನ ಕಾರಣದಿಂದಾಗಿ ಪೋಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡರು. ಕೊನೆಗೂ ಪ್ರಕರಣದ ಜಾಡನ್ನು ಬೇಧಿಸಿಯೇ ಬಿಟ್ಟರು. ನಾಪತ್ತೆಯಾದ ಶೈನಿಯ ಜೊತೆ ಅವರ ಕಾಲೇಜಿನ ಹುಡುಗನನ್ನು ಕೇರಳದ ಪೊನ್ನಾಣಿಯಿಂದ ಕರೆದುಕೊಂಡು ಕೋರ್ಟಿನ ಕಟಕಟೆ ಹತ್ತಿಸಿದ್ದರು. ಈ ವಿಚಾರ ತಿಳಿದ ಸುಬ್ಬಣ್ಣ ಶೆಟ್ಟರು ದಂಗಾಗಿ ಹೋದರು. ಆದರೂ ಮಗಳು ಮನೆಗೆ ಬರಬಹುದು ಎಂಬ ಆಶಾಭಾವನೆಯಿಂದ ಬೆಂಗಳೂರಿಗೆ ಹೊರಡಲು ತಯಾರಾದರು. ಇತ್ತ ಮಗಳನ್ನು ಕಾಣುವ ಹಂಬಲದಿಂದ ಪುಷ್ಪಕ್ಕೆ ಕೂಡ ಬೆಂಗಳೂರಿಗೆ ಬರುತ್ತೇನೆಂದು ಹಠ ಹಿಡಿದರು. ಯಾರೆಷ್ಟೇ ಸಮಾಧಾನ ಹೇಳಿದರೂ ಅಕ್ಕೆ ಕೇಳಲೇ ಇಲ್ಲ. ಕೊನೆಗೆ ಸುಬ್ಬಣ್ಣ ಶೆಟ್ರು ಪುಷ್ಪಕ್ಕೆಯನ್ನು ಕರೆದುಕೊಂಡು ಬೆಂಗಳೂರಿಗೆ ಹೊರಟರು.

ಹೈಕೋರ್ಟಿನ ಆವರಣ. ಜೀವನದಲ್ಲಿ ಮೊತ್ತಮೊದಲ ಬಾರಿಗೆ ಕೋರ್ಟಿನ ಆವರಣಕ್ಕೆ ಇಬ್ಬರೂ ಕಾಲಿಟ್ಟಿದ್ದರು. ಮನಸ್ಸಿನಲ್ಲಿ ದುಗುಡ, ಮಗಳನ್ನು ಕಾಣುವ ತವಕ ಇಬ್ಬರಲ್ಲೂ ಮನೆಮಾಡಿತ್ತು. ಕೊನೆಗೂ ತಮ್ಮ ಮುದ್ದಿನ ಮಗಳು ಶೈನಿಯನ್ನು ಕಾಣುವ ಸಮಯ ಬಂದೇ ಬಿಟ್ಟಿತು. ಕೋರ್ಟಿನ ವ್ಯಕ್ತಿ ಶೈನಿ…. ಸಿದ್ದೀಕ್…… ಎಂದು ಮೂರು ಬಾರಿ ಕೂಗಿದರು. ಶೈನಿ ಕೋರ್ಟಿನ ಕಟಕಟೆಗೆ ತನ್ನ ಗಂಡನ ಸಮೇತ ಬಂದುನಿಂತಳು. ಆಕೆಯನ್ನು ನೋಡಿದ ತಕ್ಷಣವೇ ಪುಷ್ಪಕ್ಕೆ ಮೂರ್ಛೆ ಹೋದರು. ಸುಬ್ಬಣ್ಣ ದಂಗಾಗಿ ತಮ್ಮ ತಲೆಯ ಮೇಲೆ ಕೈಯಿಟ್ಟು ಕುಳಿತು ಕಣ್ಣೀರಿಡತೊಡಗಿದರು. ನಮ್ಮೆಲ್ಲರ ಪ್ರೀತಿಯ ಚೈನಕ್ಕ ಬುರ್ಖಾದೊಳಗೆ ಬಂಧಿಯಾಗಿದ್ದರು. ಆಕೆಯ ಕಣ್ಣು ಮಾತ್ರ ಕಾಣುತ್ತಿತ್ತು. ಮೂರ್ಛೆ ಹೋದ ಪುಷ್ಪಕ್ಕೆ ಸಾವರಿಸಿಕೊಂಡು ವಾಪಸ್ಸು ಸ್ಥಿತಿಗೆ ಮರಳಿದರು. ನ್ಯಾಯಾಧೀಶರು ಆಕೆಯಲ್ಲಿ ಯಾರೊಂದಿಗೆ ಜೀವಿಸಲು ಇಚ್ಛಿಸುತ್ತೀಯ ಎಂದು ಕೇಳಿದರು. ಆಕೆ ಎದುರಿನ ಕಟಕಟೆಯಲ್ಲಿ ನಿಂತಿದ್ದ ವ್ಯಕ್ತಿಯ ಕಡೆ ಕೈ ತೋರಿಸಿದಳು. ಆತನೇ ಆಕೆಯನ್ನು ಮೋಡಿ ಮಾಡಿದ್ದ ವ್ಯಕ್ತಿ  ಸಿದ್ದೀಕ್. ಇದನ್ನು ಕಂಡಾಕ್ಷಣ ಅಮ್ಮ ಪುಷ್ಪಕ್ಕೆಗೆ ಆಕಾಶವೇ ತಲೆಯ ಮೇಲೆ ಬಿದ್ದಂಗಾಯಿತು. ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಮ್ಮ ಹೃದಯಘಾತಕ್ಕೆ ಒಳಗಾದರು. ನೋಡು ನೋಡುತ್ತಿದ್ದಂತೆ ಅಮ್ಮನ ಪ್ರಾಣಪಕ್ಷಿ ಕೋರ್ಟಿನ ಆವರಣದಲ್ಲೇ ಹಾರಿಹೋಯಿತು. ಸುಬ್ಬಣ್ಣ ಶೆಟ್ರ ಮನಸ್ಸಿಗೆ ಸಿಡಿಲಿಗಿಂತಲೂ ಮಿಗಿಲಾದ ಆಘಾತವಾಯಿತು. ಒಂದು ಕಡೆ ಮುದ್ದಿನ ಮಗಳು ಗುರುತಿಲ್ಲದ ಯಾವನೋ  ಅನ್ಯಮತೀಯನ ಜೊತೆ ಹೋಗುತ್ತಿದ್ದ ದೃಶ್ಯ, ಇನ್ನೊಂದೆಡೆ ತನ್ನ ಪ್ರೀತಿಯ ಪತ್ನಿಯ ನಿರ್ಜೀವ ದೇಹ. ಎರಡೆರಡು ಆಘಾತವನ್ನು ಅದ್ಯಾವ ಮನುಷ್ಯ ತಾನೇ ಸಹಿಸಿಕೊಂಡಾನು? ಇತ್ತ ಹೊತ್ತು ಹೆತ್ತ ತನ್ನ ತಾಯಿಯ ಶವದ ಮುಂದೆಯೇ ಹೋದರೂ ಮಗಳ ಕರುಳು ಚುರುಕ್ಕೆನ್ನಲಿಲ್ಲ. ತನ್ನ ತಾಯಿಯೇ ಅಲ್ಲ ಎಂಬಂತೆ ತನಗೇನೂ ಸಂಬಂಧವೇ ಇಲ್ಲ ಎಂದುಕೊಂಡು ಹೊರಟೇ ಬಿಟ್ಟಳು ಶೈನಿ…

ತನ್ನ ಧರ್ಮಪತ್ನಿಯ ಶವವನ್ನು ತೆಗೆದುಕೊಂಡು ಹತಾಶಭಾವದಿಂದ ಊರಿನತ್ತ ಮರಳಿದರು ಸುಬ್ಬಣ್ಣ. ಇಡೀ ಊರಿಗೆ ಊರೇ ಕಣ್ಣೀರಿಡುತ್ತಿದೆ. ಮರ್ಯಾದಸ್ಥ ಮನೆತನದ ಹೆಣ್ಣುಮಗಳೊಬ್ಬಳು ಈ ರೀತಿ ಮಾಡಿದ್ದಕ್ಕೆ ಇಡೀ ಊರು ಆಕೆಗೆ ಹಿಡಿಶಾಪ ಹಾಕುತ್ತಿದೆ. ಪುಷ್ಪಕ್ಕೆಯ ದೇಹ ಪಂಚಭೂತಗಳಲ್ಲಿ ಲೀನವಾಯಿತು. ಹದಿಮೂರು ದಿನಗಳ ನಂತರ ತನ್ನ ಪ್ರೀತಿಯ ಪತ್ನಿಯ ಉತ್ತರಕ್ರಿಯೆಯ ಜೊತೆಗೆ ತನ್ನ ಮಗಳ ಉತ್ತರಕ್ರಿಯೆಯನ್ನು ಮಾಡಿ ತಮ್ಮ ಪಾಡಿಗೆ ಅವಳು ಸತ್ತು ಹೋದಳು ಎಂದು ಕೈ ತೊಳೆದು ಬಿಟ್ಟರು ಸುಬ್ಬಣ್ಣ ಶೆಟ್ರು.

ಇದಾದ ಒಂದು ವರ್ಷದ ಒಳಗೆ ಪತ್ನಿಯ ಅಗಲಿಕೆಯ ನೋವು ತಾಳಲಾರದೇ ಸುಬ್ಬಣ್ಣ ಶೆಟ್ರೂ ಕೂಡ ಕೊರಗಿ ಕೊರಗಿ ಇಹಲೋಕ ತ್ಯಜಿಸಿದರು. ಕಾಲಚಕ್ರ ಉರುಳಿತು. ಈ ಘಟನೆ ಗ್ರಾಮದ ಜನರ ಮನಸ್ಸಿನಿಂದ ನಿಧಾನವಾಗಿ ಅಳಿಯಿತು. ಆದರೂ ನನ್ನ ಮನಸ್ಸಿನಲ್ಲಿ ಚೈನಕ್ಕ ಈಗ ಎಲ್ಲಿದ್ದಾಳೆ? ಹೇಗಿದ್ದಾಳೆ? ಎಂಬ ಕೆಲವೊಂದು ಪ್ರಶ್ನೆಗಳು ಹಾಗೆಯೇ ಉಳಿದಿದ್ದವು. ಪಿ.ಯು.ಸಿ ಓದುತ್ತಿದ್ದ ಸಮಯದಲ್ಲಿ ವ್ಯಾಪಕವಾಗಿ ಕೇಳಿಬಂದ ‘ಲವ್ ಜಿಹಾದ್’ ಎಂಬ ಮೋಹದ ಮೋಸಕ್ಕೆ ಚೈನಕ್ಕ ಕೂಡ ಬಲಿಯಾಗಿರುವಳೇ ಎಂಬ ಅನುಮಾನ ಕಾಡತೊಡಗಿತು. ಛೇ…ಛೇ… ಇಲ್ಲಪ್ಪ ಆಕೆ ಈಗಲೂ ಸುಖವಾಗಿರಬಹುದು ಎಂದು ತನ್ನನ್ನು ತಾನೇ ಸಮಾಧಾನಪಡಿಸುತ್ತಿದ್ದೆ. ಆದರೂ ಮನಸ್ಸಿನ ಮೂಲೆಯಲ್ಲಿ ಈ ದುಗುಡವಂತೂ ಇದ್ದೇ ಇತ್ತು.

ವಾಸ್ತವಕ್ಕೆ ಮರಳಿದೆ. ಎದುರುಗಡೆ ಆ ಮಹಿಳೆ ತನ್ನ ಮಕ್ಕಳೊಂದಿಗೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಳು. ಇನ್ನಷ್ಟು ಹತ್ತಿರದಿಂದ ಆಕೆಯನ್ನು ಗಮನಿಸಿದೆ. ಈಗಂತೂ ಪಕ್ಕಾ ಆಯಿತು. ಆಕೆ ಬೇರಾರೂ ಅಲ್ಲ. ನಮ್ಮ ಸುಬ್ಬಣ್ಣ ಶೆಟ್ರ ಮಗಳು ಶೈನಿಯೇ… ನಮ್ಮ ಪ್ರೀತಿಯ ಚೈನಕ್ಕನೇ.. ಒಂದು ಕಾಲದಲ್ಲಿ ದಿನಕ್ಕೆ ಎರಡು ಜೊತೆ ಬಟ್ಟೆ ಧರಿಸಿ ರಾಣಿಯ ಹಾಗೆ ಮೆರೆಯುತ್ತಿದ್ದ ಶೈನಿ ಇಂದು ಬಣ್ಣ ಮಾಸಿದ ಒಂದು ಸೀರೆಯಲ್ಲಿದ್ದಾಳೆ. ಪ್ರತಿನಿತ್ಯ ಶೈನ್ ಆಗುತ್ತಿದ್ದ ಶೈನಿಯ ಮುಖ ಬಾಡಿಹೋಗಿದೆ. ಕಂಕುಳಲ್ಲಿ ಒಂದು ಪುಟ್ಟ ಮಗು ಅಳುತ್ತಿತ್ತು. ಇನ್ನೆರಡು ಮಕ್ಕಳು ಸಿಂಬಳ ಸುರಿಸುತ್ತಾ ಅಂಗಡಿಯ ಮುಂದೆ ಇದ್ದ ತಿನಿಸುಗಳನ್ನು ಆಸೆಯಿಂದ ನೋಡುತ್ತಿದ್ದವು. ಆಕೆ ಮಾತ್ರ ತನ್ನ ಬೆವರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ ಅಸಹಾಯಕ ಸ್ಥಿತಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು.

ಇವೆಲ್ಲವನ್ನೂ ನೋಡುತ್ತಿದ್ದ ನನ್ನ ಮನಸ್ಸು ಕರಗಿಹೋಯಿತು. ಜೀವನದಲ್ಲಿ ಏನೆಲ್ಲಾ ಆಗಬಹುದು ಎಂಬುವುದಕ್ಕೆ ಜ್ವಲಂತ ಉದಾಹರಣೆ ನಮ್ಮ ಚೈನಕ್ಕ ಆಗಿದ್ದರು ಹೋಗಿ ಆಕೆಯ ಮುಂದೆ ನಿಂತುಕೊಂಡೆ. ಆಕೆಗೆ ನನ್ನ ಗುರುತು ಹಿಡಿಯುವುದಕ್ಕೆ ಒಂದಿನಿತೂ ಸಮಯ ಬೇಕಿರಲಿಲ್ಲ. ಎಷ್ಟೇ ಆದರೂ ಒಂದು ಕಾಲದಲ್ಲಿ ಒಟ್ಟಿಗೆ ಆಡಿ ಬೆಳೆದವರು ಅಲ್ಲವೇ..???? ‘ರಾಜೂ…….’ ಅಂದುಬಿಟ್ಟರು. ಕಣ್ಣೀರು ಧಾರಾಕಾರವಾಗಿ ಹರಿಯಿತು. ಹಿಂದೆ ಆಕೆ ಕಣ್ಣೀರಿಟ್ಟ ಒಂದು ದಿನವೂ ನಾನು ನೋಡಿರಲಿಲ್ಲ. ನನ್ನ ಕಣ್ಣಲ್ಲೂ ನೀರು ತುಂಬಿತು. ಏನು ಮಾತನಾಡಬೇಕೆಂದೇ ತೋಚಲಿಲ್ಲ. ಆಗ ನನ್ನ ಮೊಬೈಲ್ ರಿಂಗಿಣಿಸಿತು. ನೋಡಿದರೆ ಕಂಪೆನಿಯಿಂದ ಕರೆ ಬಂದಿತ್ತು. ಮಾತನಾಡಿ ಕರೆ ಕಡಿತಗೊಳಿಸುವ ಒಳಗೆ ಆಕೆಯ ಬಸ್ಸು ಬಂದಿತ್ತು. ಚೈನಕ್ಕ ತನ್ನ ಮಕ್ಕಳೊಂದಿಗೆ ಬಸ್ಸನ್ನು ಹತ್ತುವ ಅವಸರದಲ್ಲಿದ್ದರು. ಏನಾದರಾಗಲಿ… ಇಂದಿನ ಕೆಲಸ ಪೆಂಡಿಂಗ್ ಆದರೂ ಪರವಾಗಿಲ್ಲ, ಚೈನಕ್ಕನ ಜೀವನ ಯಾಕೆ ಹೀಗಾಯಿತು ಎಂದು ತಿಳಿಯುವ ಕುತೂಹಲದಿಂದ ನಾನೂ ಬಸ್ ಹತ್ತಿಬಿಟ್ಟೆ. ಬಸ್ಸು ಬಿ.ಸಿ.ರೋಡಿಗೆ ಇದ್ದುದರಿಂದ ಲಾಸ್ಟ್ ಸ್ಟಾಪ್ ಟಿಕೆಟ್ ತಗೊಂಡೆ. ಬಸ್ಸು ಜಕ್ರಿಬೆಟ್ಟುವಿಗೆ ಬಂದಾಗ ಆಕೆ ಬಸ್ಸಿನಿಂದ ಇಳಿದು ಸರಸರನೆ ತನ್ನ ಮನೆ ಕಡೆ ಮಕ್ಕಳೊಂದಿಗೆ ಹೊರಟೇಬಿಟ್ಟಳು.

ನಾನು ಅದೇ ಬಸ್ಸಿನಲ್ಲಿದ್ದೆ ಎಂಬುವುದನ್ನು ಆಕೆ ಗಮನಿಸಿರಲಿಲ್ಲ. ನಾನೂ ಇಳಿದು ಆಕೆಯನ್ನು ಹಿಂಬಾಲಿಸಿ ಹೋದಾಗಲೇ ಆಕೆಗೆ ಗೊತ್ತಾಗಿದ್ದು. ಆಕೆಯ ಮನೆ ಗುಡಿಸಲಿನಂತಿತ್ತು. ಅರಮನೆಯಂಥ ಗುತ್ತಿನ ಮನೆಯಲ್ಲಿ ಹಾಯಾಗಿ ಇರುತ್ತಿದ್ದ ನಮ್ಮ ಚೈನಕ್ಕ ಈಗ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದಾರೆಂದು ನಂಬುವುದಕ್ಕು ಸಾಧ್ಯವಿರಲಿಲ್ಲ. ಕೊನೆಗೂ ಮಾತನಾಡಿದೆ. ಏನಾಯಿತು? ಎಂದು ಕೇಳಿದೆ. ತನ್ನ ನರಕ ಸದೃಶ ಜೀವನದ ದೃಶ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು ಚೈನಕ್ಕ. ಮದುವೆಯಾದ ತಕ್ಷಣವೇ ಹೆಸರಿನ ಜೊತೆಗೆ ವೇಷ ಭೂಷಣವೂ ಬದಲಾಗಿದ್ದು, ಸಿದ್ದೀಕನ ಬಣ್ಣದ ಮಾತುಗಳಿಗೆ ಮರುಳಾಗಿ ಪಟ್ಟ ಕಷ್ಟಗಳು, ಮದುವೆಯಾದ ವರ್ಷದ ಒಳಗಾಗಿ ಹೆತ್ತ ಮಗು, ಜೀವನದಲ್ಲಿ ಅನ್ನಕ್ಕೆ ಪಟ್ಟ ಕಷ್ಟ. ತನಗಿಂತ ಮೊದಲೇ ಸಿದ್ದೀಕ ಆತನ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದು, ಮತ್ತೆ ಜೀವನ ಸಂತಸದಲ್ಲಿ ಇರಬಹುದು ಎಂಬ ಕಾರಣಕ್ಕೆ ಇನ್ನೆರಡು ಮಕ್ಕಳನ್ನು ಐದು ವರ್ಷದ ಒಳಗೇ ಹೆತ್ತಿದ್ದು, ನಂಬಿಕೊಂಡು ಬಂದ ಗಂಡ ಐದೇ ವರ್ಷಕ್ಕೆ ಕೈಬಿಟ್ಟು ಶಾಶ್ವತವಾಗಿ ದೂರ ಹೋಗಿದ್ದು, ತನ್ನ ಮತ್ತು ಮಕ್ಕಳ ಹೊಟ್ಟೆಪಾಡಿಗಾಗಿ ಗೇರುಬೀಜದ ಕಾರ್ಖಾನೆಯಲ್ಲಿ ದುಡಿಯೋಕೆ ಹೋಗುವುದು ಎಲ್ಲವನ್ನು ಒಂದೇ ಉಸಿರಿನಲ್ಲಿ  ಹೇಳಿ ಮುಗಿಸಿದರು. ಆಕೆಯ ಕಣ್ಣೀರಿನ ಜೊತೆಗೆ ನನ್ನ ಕಣ್ಣಲ್ಲೂ ನೀರು ತುಂಬಿಬಂತು. ಏನು ಹೇಳಬೇಕೆಂದೇ ತೋಚಲಿಲ್ಲ. ಮಾತೇ ಹೊರಡಲಿಲ್ಲ ಎಂದು ಹೇಳಿದರೂ ತಪ್ಪಿಲ್ಲ. ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಂಡ ನಮ್ಮ ಚೈನಕ್ಕನ ಈಗಿನ ಸ್ಥಿತಿಯನ್ನು ಕಂಡು ಮರುಕ ಪಡುವುದೊಂದೇ ಸಾಧ್ಯವಾಗಿತ್ತು. ಇಷ್ಟೆಲ್ಲಾ ಆದಾಗ ಚಿಕ್ಕ ಮಗು ಹಸಿವಿನಿಂದ ಅಳೋಕೆ ಪ್ರಾರಂಭ ಮಾಡಿತು. ಆಕೆ ಹಿಂದಿನ ದಿನ ಮಾಡಿಟ್ಟಿದ್ದ ತಂಗಳನ್ನವನ್ನು ಮಗುವಿಗೆ ನೀಡಿದಳು. ಪುಷ್ಪಕ್ಕೆ ಆಕೆಗೆ ಮೂರು ಹೊತ್ತು ಬಿಸಿಬಿಸಿ ಅಡುಗೆ ಮಾಡಿ ಬಡಿಸುತ್ತಿದ್ದ ದಿನಗಳು ಪಕ್ಕನೆ ಕಣ್ಣೆದುರು ಹಾದುಹೋಯಿತು.

ಇಷ್ಟೆಲ್ಲ ಆಗುವಾಗ ಸೂರ್ಯ ನನ್ನ ನೆತ್ತಿಯ ಮೇಲಿದ್ದ. ನನ್ನ ಜೇಬಿನಲ್ಲಿದ್ದ ಒಂದಿಷ್ಟು ಹಣವನ್ನು ಆಕೆಯ ದೊಡ್ಡ ಮಗನ ಕೈಯಲ್ಲಿತ್ತು ವಾಪಸ್ ಬಂದೆ. ಮತ್ತೆ ಫೀಲ್ಡ್ ವರ್ಕ್’ಗೆ ತೆರಳಲು ಮನಸ್ಸಾಗಲಿಲ್ಲ. ನೇರವಾಗಿ ರೂಮಿಗೆ ಬಂದೆ. ಜೀವನದಲ್ಲಿ ಎಷ್ಟೆಲ್ಲ ಇದ್ದರೂ ಏನು ಫಲ? ನೆಮ್ಮದಿಯೊಂದಿಲ್ಲದಿದ್ದರೆ ಎಂಬ ಹಿರಿಯರ ಮಾತುಗಳು ಅದೆಷ್ಟು ಸತ್ಯ ಅಲ್ಲವೇ…? ತುಂಬು ಯೌವನದ ಸಮಯದಲ್ಲಿ ಆಕರ್ಷಣೆ, ವಯೋ ಸಹಜ ಬಯಕೆ, ಕಾಣುವ ಬಣ್ಣ ಬಣ್ಣದ ಲೋಕ, ಆಡುವ ಬಣ್ಣದ ಮಾತುಗಳಿಗೆ ಅದೆಷ್ಟೋ ಯುವಕ ಯುವತಿಯರು ಬಲಿಯಾಗಿದ್ದಾರೆ. ಇನ್ನು ಅದೆಷ್ಟು ಯುವತಿಯರು ಬಲಿಯಾಗಲಿರುವರೋ…??? ಅವರಿಗೆಲ್ಲಾ ಬುದ್ಧಿ ಹೇಳುವವರು ಯಾರು.? ಎಂಬುವುದನ್ನೆಲ್ಲಾ ಯೋಚಿಸುತ್ತಾ ರೂಮಿನಲ್ಲಿ ಮಲಗಿದವನಿಗೆ ಅದ್ಯಾವಾಗ ನಿದ್ರೆಯ ಜೊಂಪು ಹತ್ತಿತ್ತೋ ಗೊತ್ತಾಗಲಿಲ್ಲ. ಎಚ್ಚರವಾದಾಗ ಮಾತ್ರ ಚೈನಕ್ಕನ ಜೀವನವೇ ಕಣ್ಣಿಗೆ ಕಾಣುತ್ತಿತ್ತು…

18 ಟಿಪ್ಪಣಿಗಳು Post a comment
  1. suresh's avatar
    suresh
    ಮಾರ್ಚ್ 29 2016

    ತುಂಬಾ ಚೆನ್ನಾಗಿದೆ…..ಈ ತರಾ ಬಾಳು ಹಾಳು ಮಾಡಿಕೊಂಡಿರುವವರನ್ನು ನಾನೂ ಕೂಡ ಕಣ್ಣಾರೆ ಕಂಡಿದ್ದೇನೆ…ಆ ವಯಸ್ಸಿನಲ್ಲಿ ಆಗುವ ತಪ್ಪುಗಳಿಗೆ ಕ್ಷಮೆಯೇ ಇರುವುದಿಲ್ಲ.

    ಉತ್ತರ
  2. ತುಂಬಾ ಬೇಸರದ ವಿಚಾರ

    ಉತ್ತರ
  3. H S Nagaraja Bhat's avatar
    H S Nagaraja Bhat
    ಮಾರ್ಚ್ 29 2016

    ನಮ್ಮ ಹೆಣ್ಣುಮಕ್ಕಳಿಗೆ ಇಂಥಹ ಅದೆಷ್ಟೋ ಪಾಠಗಳು ಕಣ್ಣ ಮುಂದಿವೆ. ಆದರೆ ಬಣ್ಣದ ಮಾತಿಗೆ, ಮೊಬೈಲ್ ಕರೆನ್ಸಿಗೆ, ಎಸ್ಸೆಮ್ಮೆಸ್ ಸಂದೇಶಗಳಿಗೆ ಮರುಳಾಗುವುದು ಮಾತ್ರ ನಿರಂತರವಾಗಿರುವುದು ಖೇದಕರ.

    ಉತ್ತರ
  4. Prashanth's avatar
    Prashanth
    ಮಾರ್ಚ್ 29 2016

    ಇಂಥದ್ದನ್ನು ಕಣ್ಣಾರೆ ಕಂಡು ಕೊರಗಿದ್ದೆನೆ, ಹೆತ್ತವರ ಕಣ್ಣೀರು ಆರ್ಥವಾಗದವರಿಗೆ ಅನಾಹುತವೇ ಗತಿ …ಬೇರೇನು ದಾರಿಯಿಲ್ಲ

    ಉತ್ತರ
  5. chethan's avatar
    chethan
    ಮಾರ್ಚ್ 29 2016

    Super reality

    ಉತ್ತರ
  6. Yogananda Malnad's avatar
    Yogananda Malnad
    ಮಾರ್ಚ್ 29 2016

    nammaponuleg buddi barpuji ye

    ಉತ್ತರ
  7. mallikarjun's avatar
    ಮಾರ್ಚ್ 29 2016

    ella hanebaraha

    ಉತ್ತರ
  8. Dhananjaya's avatar
    Dhananjaya
    ಮಾರ್ಚ್ 29 2016

    ಹೆತ್ತವರನ್ನು ನೋಯಿಸಿದವರಿಗೆ ಸುಖವಾಗಿ ಬಾಳಲು ಆ ಭಗವಂತ ಬಿಡೋದಿಲ್ಲ ಅನ್ನೋದಕ್ಕೆ ಒಂದು ಜೀವಂತ ಉದಾಹರಣೆ…..

    ಉತ್ತರ
  9. Shivu V Gowda's avatar
    Shivu V Gowda
    ಮಾರ್ಚ್ 29 2016

    ee love Jihad ge nanna dikara

    ಉತ್ತರ
  10. OM's avatar
    OM
    ಮಾರ್ಚ್ 29 2016

    HODIRI HALAGI

    ಉತ್ತರ
  11. viewsofvenkat's avatar
    venkatanasankata
    ಮಾರ್ಚ್ 30 2016

    ಇಂತಹ ಘಟನೆಗಳು ಸಾಕಷ್ಟು ನಡೆದಿವೆ. ಆದರೂ ನಮ್ಮ ಹೆಣ್ಣು ಮಕ್ಕಳು ಜಾಗೃತಿ ವಹಿಸುತ್ತಿಲ್ಲ. ನಾವು ಹೇಳಿದರು ಕೇಳುವ ಮನಸ್ಥಿತಿಯಲ್ಲಿ ಅವರಿಲ್ಲ. ಪರಿಸ್ಥಿತಿ ಕೈ ಮೀರಿದ ಮೇಲೆ ತಪ್ಪಿನ ಅರಿವಾಗುತ್ತದೆ. ಇಂತಹವರು ಸಮಾಜದ ಮುಖ್ಯ ವಾಹಿನಿಗೆ ಬಂದು ತನಗಾದ ಅನ್ಯಾಯದ ವಿರುದ್ಧ ಹೋರಾಡಬೇಕು. ನೀಚ ಮನಸ್ಥಿತಿಯ ಮೋಸಗಾರರನ್ನು ಶಿಕ್ಷೆಗೆ ಗುರಿಪಡಿಸಬೇಕು. ಆಗಲಾದರೂ ಇವೆಲ್ಲ ನಿಯಂತ್ರಣಕ್ಕೆ ಬರಲಿದೆ.

    ಉತ್ತರ
  12. deepu's avatar
    deepu
    ಮಾರ್ಚ್ 30 2016
  13. rocky's avatar
    rocky
    ಮಾರ್ಚ್ 30 2016

    thande thaye galige mosamadidre kastapadlebekagathe adre intha jivana nama yava hindu hinumakaligu beda.

    ಉತ್ತರ
  14. Sujithraaj's avatar
    Sujithraaj
    ಏಪ್ರಿಲ್ 3 2016

    ನಮ್ಮ ಅಕ್ಕ_ತಂಗಿ ಲೆಗ್ ಆತ್ ಬೇಗ ಬುದ್ದಿ ಬರ್ಪುಜೀ ಅಣ್ಣಾ,,ದಾದನಾ ಪನ್ಪೆರ್ ಅತೇ ತನ್ನ ಪೀOಕನ್ದಡಿಕ್ ನೀರ್ ಬನ್ನಗ ಮಾತ್ರ ಗೊತ್ತಾಪುನ ಪಂದ್….ಅಂಚ ಆತ್oಡ್ ನಮ್ಮ ಪರಿಸ್ತಿತಿ..

    ಉತ್ತರ
  15. ಸಂಜೋತಾ's avatar
    ಏಪ್ರಿಲ್ 4 2016

    ಎಲ್ಲವು ಹೀಗೆ ಇರುತ್ತದೆ ಅಂತ ಹೇಳಲಾಗುವುದಿಲ್ಲ. ಆದರೆ ನಿಜವಾದ ಪ್ರೀತಿಯನ್ನು ಗುರುತಿಸುವ ಬುದ್ದಿವಂತಿಕೆ ಇರಬೇಕಷ್ಟೇ.

    ಉತ್ತರ
  16. Murali Anand's avatar
    ಏಪ್ರಿಲ್ 13 2016

    ಸಂಜೋತಾ AVARE SARIYAGI HELUDRI…………

    ಉತ್ತರ

Trackbacks & Pingbacks

  1. ಬಣ್ಣದ ಬದುಕಿಗೆ ಮರುಳಾಗುವ ಮುನ್ನ | kordatta's Blog

Leave a reply to ಸಂಜೋತಾ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments