ವಿಷಯದ ವಿವರಗಳಿಗೆ ದಾಟಿರಿ

ಮೇ 13, 2016

2

ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ….

‍ನಿಲುಮೆ ಮೂಲಕ

-ಶ್ರೀನಿವಾಸ ರಾವ್

vidyaranya

||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ

           ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. ‘ವಿದ್ಯಾಶಂಕರ ಪಾದಪದ್ಮಾರಾಧಕ’ ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ.

ವಿದ್ಯಾರಣ್ಯರು! ಶೃಂಗೇರಿಯ 12ನೇ ಪೀಠಾಧಿಪತಿಗಳೆಂದು ನೆನೆಸಿಕೊಳ್ಳುವುದಕ್ಕಿಂತಲೂ ಹೆಚ್ಚು ನಮ್ಮ ಮನಸ್ಸು, ಪ್ರಜ್ನಾವಂತ ಸಮಾಜ ಅವರನ್ನು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೊಂದಿಗೇ ಗುರುತಿಸುತ್ತೆ. ಸನ್ಯಾಸಾಶ್ರಮವನ್ನು ಲೋಕವಿಮುಖ, ನಿವೃತ್ತಮಾರ್ಗ, ಪಾರಮಾರ್ಥಿಕಕ್ಕಷ್ಟೇ ಸೀಮಿತ ಎಂದು ಕಾಣಲಾಗುತ್ತದೆ. ಧರ್ಮ ರಕ್ಷಣೆಗಾಗಿ ಸಾತ್ವಿಕ ಮಾರ್ಗವನ್ನು ಹೊರತುಪಡಿಸಿ ಕ್ಷಾತ್ರಗುಣವನ್ನು ಪ್ರಚೋದಿಸುವ ಯತಿಗಳನ್ನು ಕಾಣುವುದು ಅಪರೂಪ. ಅಂತಹ ಅಪರೂಪದ ಸಾಲಿಗೆ ವಿದ್ಯಾರಣ್ಯರು ಸೇರುತ್ತಾರೆ. ಶೃಂಗೇರಿಯಲ್ಲಿ ಅವರು ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷ ಮಾತ್ರ. ಸನಾತನ ಧರ್ಮದ ಮೌಲ್ಯವುಳ್ಳ ಸಾಮ್ರಾಜ್ಯ ಸ್ಥಾಪನೆಯಲ್ಲಿ ವಿದ್ಯಾರಣ್ಯರ ಕೊಡುಗೆ ಅನನ್ಯವಾದದ್ದು.  ಹಾಗೆಂದು ಆ ಸಾಮ್ರಾಜ್ಯ ಸ್ಥಾಪನೆಯ ಹಾದಿಯೇನು ಸುಗಮವಾಗಿರಲಿಲ್ಲ. ದಕ್ಷಿಣ ಭಾರತದ ಮೇಲೆ ಮೊದಲ ಬಾರಿಗೆ ದಂಡಯಾತ್ರೆ ಕೈಗೊಂಡ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ (1296-1316) ಕ್ರೌರ್ಯ, ಹಿಂದೂ ರಾಜ್ಯಗಳ ಅಧಃಪತನ, ದೇವಾಲಯಗಳ ನಾಶ, ಮಸೀದಿಗಳ ನಿರ್ಮಾಣ, ಮತಾಂತರ ಮೊದಲಾದ ದೌರ್ಜನ್ಯಗಳೇ ಮೊದಲಾದ ಹೀನ ಕೃತ್ಯಗಳೊಂದಿಗೆ ಪರ್ಯವಸಾನ ಕಂಡಿತು. ಮುಂದೆ, ಖಿಲ್ಜಿ ವಂಶಸ್ಥರು ಅಳಿದು ಮಹಮ್ಮದ್-ಬಿನ್-ತುಘಲಕ್ ನ ಆಳ್ವಿಕೆ ಬಂತಾದರೂ (1325- 1351) ದುರಾಕ್ರಮಣ, ಅತ್ಯಾಚಾರ-ಅನಾಚಾರಗಳಿಗೆ, ಹಿಂದೂ ದೊರೆಗಳ ಮೇಲಿನ ದಬ್ಬಾಳಿಕೆ, ದೌರ್ಜನ್ಯಕ್ಕೆ ಯಾವುದೇ ರೀತಿಯಲ್ಲೂ ಕೊರತೆ ಉಂಟಾಗಲಿಲ್ಲ. ಒಟ್ಟಾರೆ ಸನಾತನ ಧರ್ಮದ ಮೇಲೆ ಬಲವಾದ ಪೆಟ್ಟು ಬಿದ್ದಿತ್ತು.

ವಿದ್ಯಾರಣ್ಯರು ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಬೇಕೆಂದು ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ಹಿಂದೂರಾಜರು ಅಕ್ಷರಶಃ ನಾಮಾವಶೇಷವಾಗಿದ್ದರು.  ದಕ್ಷಿಣದ ರಾಜಮನೆತನಗಳೂ ಸಂಪೂರ್ಣವಾಗಿ ನಿಸ್ತೇಜವಾಗಿದ್ದವು, ಕ್ಷಾತ್ರ ಗುಣ ಸಂಪೂರ್ಣವಾಗಿ ಕುಗ್ಗಿತ್ತು. ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿದರೂ, ಆ ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೆಸುವ ಪ್ರಭುವೇ ಇರಲಿಲ್ಲ. ಅಂಥಹ ವ್ಯಕ್ತಿಯನ್ನು ತಯಾರು ಮಾಡಬೇಕಿತ್ತು. ಇವೆಲ್ಲವನ್ನೂ ಒಗ್ಗೂಡಿಸುವ ಹೊತ್ತಿಗೆ ಸಂಪತ್ತಿನ ಕೊರತೆಯೂ ಯಥೇಚ್ಛವಾಗಿತ್ತು. ಇಂತಹ ನಿರ್ಜೀವ ಸ್ಥಿತಿಯಲ್ಲಿದ್ದ ಪ್ರದೇಶದಲ್ಲಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಅಸಾಮಾನ್ಯ ಸಂಗತಿ. ಇನ್ನು ಸ್ಥಾಪಿತವಾಗಿ ಅಲ್ಪಕಾಲದಲ್ಲೇ ಪರಕೀಯರ ಆಕ್ರಮಣವನ್ನು ಮೆಟ್ಟಿ, ರಾಷ್ಟ್ರದ ಜನತೆಗೆ ಸುವರ್ಣ ಯುಗವನ್ನು ಪರಿಚಯಿಸಿ, ಸುಮಾರು 310 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯ ಆಳ್ವಿಕೆ ನಡೆಸಿತ್ತು ಎಂದರೆ ಅದಕ್ಕಾಗಿ ಮಾರ್ಗದರ್ಶನ ನೀಡಿದ ವಿದ್ಯಾರಣ್ಯರ ದೂರದೃಷ್ಠಿತ್ವದ ಬಗ್ಗೆ ಹೆಮ್ಮೆ ಎನಿಸುತ್ತದೆ.

ಭಾರತದಲ್ಲಿ ಇಂದಿಗೂ ಶ್ರೇಷ್ಠ ಆಡಳಿತಕ್ಕೆ ಎರಡು ಉಪಮೇಯಗಳನ್ನು ಕೊಡುವ ರೂಢಿಯಿದೆ. ಒಂದು ಯುಗಯುಗಗಳಷ್ಟು ಹಳೆಯ ಕಾಲದ ರಾಮರಾಜ್ಯ, ಮತ್ತೊಂದು ನಮ್ಮದೇ ಯುಗದ ಸ್ವಲ್ಪ ಪುರಾತನ ಕಾಲಘಟ್ಟದ ‘ಸುವರ್ಣಯುಗ’ದ ವಿಜಯನಗರ ಸಾಮ್ರಾಜ್ಯ. ರಾಮರಾಜ್ಯ ಎಂದರೆ ಹೀಗೇ ಇದ್ದಿರಬಹುದು ಎಂದು ಸುವರ್ಣಯುಗದ ಜನರು ಹೇಳಿಕೊಳ್ಳುತ್ತಿದ್ದರೇನೋ, ಅಷ್ಟರಮಟ್ಟಿಗೆ ವಿಜಯನಗರ ಸಾಮ್ರಾಜ್ಯ, ಸಂಪತ್ತು, ಸಂಸ್ಕೃತಿಯ ಶ್ರೀಮಂತಿಕೆಗೆ ಅನ್ವರ್ಥವಾಗಿರುವುದು ಇತಿಹಾಸ ಪ್ರಸಿದ್ಧ. ಆದ್ದರಿಂದಲೇ ವಿಜಯನಗರ ಸಾಮ್ರಾಜ್ಯವಳಿದರೂ, ಭೌತಿಕವಾಗಿ ವಿದ್ಯಾರಣ್ಯರು ಇಲ್ಲದೇ ಅದೆಷ್ಟೋ ದಶಕಗಳು ಕಳೆದರೂ ಶ್ರೇಷ್ಠ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರ ಯೋಗದಾನ ಇಂದಿಗೂ ಅವರನ್ನು ನೆನೆಸಿಕೊಳ್ಳುವಂತೆ ಮಾಡಿದೆ. ಇಷ್ಟಕ್ಕೂ ಧರ್ಮಕ್ಕೆ ಗ್ಲಾನಿ ಬಂದಾಗವಲ್ಲದೇ ಆ ಯಾವ ಯತಿಗಳು ತಾನೇ ವೇದ-ಶಾಸ್ತ್ರ, ಪಾರಮಾರ್ಥಿಕ ಜೀವನವನ್ನು ಬಿಟ್ಟು, ಸಾಮ್ರಾಜ್ಯ ಕಟ್ಟುವುದಕ್ಕೆ ಕುರುಬ ಯುವಕರಲ್ಲಿ ಕ್ಷಾತ್ರ ಗುಣವನ್ನು ತುಂಬಿ ಪ್ರಚೋದಿಸುತ್ತಾರೆ ಹೇಳಿ? ಧರ್ಮ ರಕ್ಷಣೆ ಎಂದಾಗಲೆಲ್ಲಾ ನಾವು ಸಾಮಾನ್ಯವಾಗಿ ಸನಾತನ ಧರ್ಮದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಉದ್ಧರಿಸಿದ ಆದಿ ಶಂಕರಾಚಾರ್ಯರನ್ನು ಮಾತ್ರ ಬಹುಬೇಗನೆ ನೆನೆಯುತ್ತೇವೆ. ಅದು ನಮ್ಮ ಕರ್ತವ್ಯ ಕೂಡ. ಆದರೆ ಕಾಲ ಉರುಳಿದಂತೆ ಇಸ್ಲಾಮ್ ಬರ್ಬರತೆ ತುತ್ತಾಗಿದ್ದ ಸನಾತನ ಧರ್ಮದ ಉಳಿವಿಗೆ  ಸಾಮ್ರಾಜ್ಯ ಸ್ಥಾಪನೆಯ ತುರ್ತು ಅಗತ್ಯವನ್ನು ಮನಗಂಡು, ಪರಕೀಯರ ದಾಳಿಗೆ ಸಿಲುಕಿ ನಶಿಸುತ್ತಿದ್ದ ಧರ್ಮವನ್ನು ಉಳಿಸಿದ ಯತಿವರೇಣ್ಯ ವಿದ್ಯಾರಣ್ಯರು ಗೌಣವಾಗಿ ನಮ್ಮ ಮನಸಿನಲ್ಲಿದ್ದಾರೆಯೇ ಹೊರತು ಯಾರಾದರೂ ಅವರನ್ನು ಸ್ಮರಿಸಿಕೊಳ್ಳುವ ಸಾರ್ವಜನಿಕರು ಆಚರಿಸುವ ದಿನವಿದೆಯೇ? ವಿದ್ಯಾರಣ್ಯರನ್ನು ಸ್ಮರಿಸುವುದೂ ನಮ್ಮ ಆದ್ಯ ಕರ್ತವ್ಯಗಳಲ್ಲಿ ಒಂದು.

ಧರ್ಮದ ಉಳಿವಿಗಾಗಿ ಬ್ರಹ್ಮ-ಕ್ಷತ್ರ ಸಾಮರಸ್ಯವನ್ನು ನಮ್ಮ ಸನಾತನ ಧರ್ಮ ಪದೇ ಪದೇ ಸಾರಿದೆ. ಪಾಂಡವರು ಜಯಗಳಿಸುವ ಮೂಲಕ ಧರ್ಮದ ಪುನರುತ್ಥಾನಕ್ಕೆ ಶ್ರೀಕೃಷ್ಣ ಪರಮಾತ್ಮ, ಮಗಧ ಸಾಮ್ರಾಜ್ಯದಲ್ಲಿ ಯವನರ ದಾಳಿ ಮೇರೆ ಮೀರಿ ವೈದಿಕ ಧರ್ಮಕ್ಕೆ ಚ್ಯುತಿಬಂದಾಗ ಚಂದ್ರಗುಪ್ತನ ಮೂಲಕ ಇತಿಹಾಸ ಪ್ರಸಿದ್ಧ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಾಣಕ್ಯ ಈ ಎರಡು ಪ್ರಕರಣಗಳನ್ನು ಹೊರತುಪಡಿಸಿದರೆ ಧರ್ಮದ ಉಳಿವಿಗಾಗಿ ಇತಿಹಾಸ ಎಂದಿಗೂ ಮರೆಯದ ಸಾಮ್ರಾಜ್ಯವೊಂದರ ಉಗಮಕ್ಕೆ ಗುರುವೊಬ್ಬರು ಕಾರಣೀಭೂತರಾದ ಉದಾಹರಣೆ ಸಿಗುವುದು ವಿದ್ಯಾರಣ್ಯರಲ್ಲಿ ಮಾತ್ರ. ವಿದ್ಯಾರಣ್ಯರು-ವಿಜಯನಗರ ಸಾಮ್ರಾಜ್ಯದ ಬಳಿಕ ಈವರೆಗೂ ಅವರಂತಹ ಮಹಾಪುರುಷರು ನಮ್ಮ ನಾಡಿನಲ್ಲಿ ಜನಿಸಿಲ್ಲವಾದ್ದರಿಂದ ಧರ್ಮ ರಕ್ಷಣೆಯ ದೃಷ್ಟಿಯಿಂದ ವಿದ್ಯಾರಣ್ಯರ ಸ್ಥಾನವು ಶಂಕರಾಚಾರ್ಯರಷ್ಟೇ ಮಹತ್ವ, ಶಂಕರಿಗಷ್ಟೇ ಎರಡನೆಯದಾಗಿದೆ. ಶಂಕರರು ಸನಾತನ ಧರ್ಮ ಸಂಕಟದಲ್ಲಿದ್ದಾಗ ಧರ್ಮವನ್ನು ಉದ್ಧರಿಸಲು ಅವತರಿಸಿದರು. ವಿದ್ಯಾರಣ್ಯರು ಹಿಂದೂ ಸಾಮ್ರಾಜ್ಯ ಸಂಕಟದಲ್ಲಿದ್ದಾಗ, ಸನಾತನ ಸಾಮ್ರಾಜ್ಯವನ್ನು ಉದ್ಧರಿಸಲು ಅವತರಿಸಿದರು. ಕಾಲಘಟ್ಟಗಳು ಬೇರಾದರೂ ಸಾಧಿಸಿದ ಕಾರ್ಯಗಳು ಒಂದೇ.

ಪರಾಶರಮಾಧವೀಯ, ವ್ಯವಹಾರ ಮಾಧವೀಯ ಬೃಹದಾರಣ್ಯಕ ಭಾಷ್ಯವಾರ್ತಿಕಸಾರದಂತಹ ಭಾಷ್ಯಗಳು, ವೇದಾಂತ ಪಂಚದಶೀ ಜೀವನ್ಮುಕ್ರಿವಿವೇಕದಂತಹ ಗ್ರಂಥಗಳೂ ಸೇರಿದಂತೆ ಅವರು ರಚಿಸಿದ ಅದೆಷ್ಟೋ ಗ್ರಂಥಗಳು, ಭಾಷ್ಯಗಳ ಬಗ್ಗೆ ತಿಳಿಸಿದರೆ ಅವರೊಬ್ಬ ಅದ್ಭುತ ಪಂಡಿತರು, ವಿದ್ವಾಂಸರೆಂಬುದು ತಿಳಿಯುತ್ತದೆ. ಆದರೆ ವಿಜಯನಗರ ಸಾಮ್ರಾಜ್ಯೋದಯಕ್ಕೆ ಬೆಂಬಲವಿತ್ತ ಹೊಯ್ಸಳ ಸಾಮ್ರಾಜ್ಯದ ಮೂರನೆ ಬಲ್ಲಾಳ, ತುಳುನಾಡಿನ ಶ್ರೀವೀರಕೆಕ್ಕಾಯಿತಾಯಿ, ಕಂಪಿಲ ಸಾಮ್ರಾಜ್ಯದ ಅರಸರು ಮುಂತಾದ ಅನೇಕ ಪ್ರಮುಖರನ್ನು ಅವರವರ ಪ್ರಾಂತೀಯ ಅಭಿಮಾನಗಳಿಗೆ ಅತೀತರಾಗಿ ವಿಜಯನಗರ ಸಾಮ್ರಾಜ್ಯದ ಉಗಮಕ್ಕೆ ದುಡಿಯುವಂತೆ ಮಾಡಿದ ವಿದ್ಯಾರಣ್ಯರು, ರಕ್ತಪಾತವಿಲ್ಲದೇ ಸಾಮ್ರಾಜ್ಯವನ್ನು ಗೆಲ್ಲುವ ಚಾಣಕ್ಯನನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಸಾಮ್ರಾಜ್ಯವೊಂದನ್ನು ಸ್ಥಾಪನೆ ಮಾಡುವುದಕ್ಕಿಂತ ಅತ್ಯಲ್ಪ ಕಾಲದಲ್ಲೇ ಅಳಿಯದಂತೆ ಎಚ್ಚರ ವಹಿಸುವುದೂ ಸವಾಲಿನ ವಿಷಯವೇ. ಅಧಿಕಾರ ಕೈಗೆ ಬಂದರೆ ಸಾಕು ಸೋದರ ಕಲಹ-ದಾಯಾದಿ ಮಾತ್ಸರ್ಯಗಳಲ್ಲಿ ಸಾಮ್ರಾಜ್ಯಗಳು ನಿರ್ನಾಣವಾಗಿರುವ ಅದೆಷ್ಟೋ ಉದಾಹರಣೆಗಳಿವೆ. ವಿಜಯನಗರದ ಅರಸ ಹರಿಹರ ಮತ್ತವನ ನಾಲ್ಕು ಸಹೋದರರ ನಡುವೆ ಸಾಮರಸ್ಯ ತುಂಬಿ, ಅದೇ ನಾಲ್ಕು ಸಹೋದರರನ್ನು ಪೂರ್ವ, ಪಶ್ಚಿಮ ಉತ್ತರದ ಗಡಿಗಳಲ್ಲಿ ದೃಢರಕ್ಷಣೆಗಾಗಿ ವಿನಿಯೋಗಿಸಿದ ವಿದ್ಯಾರಣ್ಯರು ಓರ್ವ ಅಪೂರ್ವ ರಾಜಗುರುಗಳಾಗಿಯೂ ವಿಜೃಂಭಿಸಿದರು. ಸ್ವತಃ ಅದ್ವೈತಿಗಳಾಗಿ, ಸಾಮ್ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ತಮ್ಮ ಮತವನ್ನು ಸಾಮ್ರಾಜ್ಯದ ಮೇಲೆ ಹೇರುವುದಾಗಲೀ, ಪರಮತ ಖಂಡನೆಯಾಗಲಿ ಮಾಡದೇ ಇದ್ದದ್ದು  ವಿದ್ಯಾರಣ್ಯರ ಉದಾರ ಧಾರ್ಮಿಕ ನೀತಿ ಹಾಗೂ ಹೃದಯ ವೈಶಾಲ್ಯಗಳನ್ನು ಸ್ಪಷ್ಟವಾಗಿಸುತ್ತವೆ.

ಬಹಮನಿ ಸಾಮ್ರಾಜ್ಯಸ್ಥಾಪಕ ಜಾಫರ್ ಖಾನ್ ಅಲ್ಲಾವುದ್ದೀನ್ ಹಸನ್ ಗಂಗೂ ಬಹಮನಿ ಎಂಬ ಹೆಸರಿನಲ್ಲಿ ಗದ್ದುಗೆಯೇರಿದಾಗ ವಿದ್ಯಾರಣ್ಯರ ಸಲಹೆ ಮೇರೆಗೆ ಬುಕ್ಕ ರಾಯ ಸ್ನೇಹಾಭಿಮಾನ ಸೂಚಕವಾಗಿ ಅಮೂಲ್ಯಮಾಣಿಕ್ಯವನ್ನು ಕಳಿಸಿಕೊಟ್ಟಿದ್ದ. ಇದು ವಿದ್ಯಾರಣ್ಯ ಪ್ರಣೀತ ವಿಜಯನಗರ ಸಾಮ್ರಾಜ್ಯದ ಹೃದಯ ವೈಶಾಲ್ಯತೆಯೂ ಹೌದು. ಪರಮತ ಖಂಡಿಸದೇ ಇರುವುದರಿಂದ ಸನಾತನ ಧರ್ಮವನ್ನು ಮೇಲೆ ಅವಹೇಳನ ಮಾಡುವುದು, ಪ್ರಹಾರ ಮಾಡುವುದು ಅತಿ ಸುಲಭದ ಕೆಲಸವಾಗಿದೆ ಆದ್ದರಿಂದಲೇ ಇಂದಿಗೂ ಹಿಂದೂಗಳಲ್ಲಿ ಕಂಡುಬರುವ ದೌರ್ಬಲ್ಯವೂ ಹೌದೆಂದು ತೋರುತ್ತದೆ. ಆದರೆ ಎಂತಹ ಸ್ಥಿತಿಯಲ್ಲೂ ಪರಮತ ಖಂಡನೆಗೆ ಅವಕಾಶ ನೀಡದ ಯತಿಶ್ರೇಷ್ಠ ವಿದ್ಯಾರಣ್ಯರ ತತ್ವಗಳು ಲೋಕಮಾನಿತ, ಪ್ರಶ್ನಾತೀತ. ಇನ್ನು ಭಾರತದ ರಾಜಪ್ರಭುತ್ವ-ಧರ್ಮವೆಂದರೆ ಮೂಲಭೂತವಾದಿಗಳೆಂಬ ಹಣೆಪಟ್ಟಿ ಕಟ್ಟಿಬಿಡುತ್ತಾರೆ. ರಾಜರನ್ನು ಶೋಷಣೆಯ ಪ್ರತೀಕವೆಂದೇ ಪುಕಾರು ಹಬ್ಬಿಸಲಾಗಿದೆ. ಅರಸನಾದವನು ಧರ್ಮಕ್ಕೆ ಅತೀತನಲ್ಲ, ಸಾಮ್ರಾಜ್ಯ ಬರಿಯ ಮರ್ತ್ಯರಾಜರದಲ್ಲವೆಂದು ಹೇಳಲು ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ರಾಜಮುದ್ರೆಯನ್ನು ವಿರೂಪಾಕ್ಷನ ಹೆಸರಿನಲ್ಲೇ ರೂಪಿಸಿದರು. ಈ ಮೂಲಕ ರಾಜನೂ ಧರ್ಮದ ಚೌಕಟ್ಟಿನಲ್ಲೇ ಇರಬೇಕೆಂದು ಸಾರಿದರು. ಇನ್ನು ವಿಜಯನಗರ ಸಾಮ್ರಾಜ್ಯದ ವರಾಹಲಾಂಛನ ಮತ್ತು ವಿರೂಪಾಕ್ಷಾಂಕಿತಗಳು ಹರಿಹರ ಸಮನ್ವಯಕ್ಕೆ ಸುಂದರ ನಿದರ್ಶನ. ಸಾಮ್ರಾಜ್ಯದಲ್ಲಿ ಹರಿಹರರ ಸಮನ್ವಯವಿದ್ದ ಮೇಲೆ ಶೈವ ವೈಷ್ಣವ ಮತಗಳ ಕಲಹ ಎಲ್ಲಿಂದ ಬರಬೇಕು? ಶಾಸ್ತ್ರ, ವೇದ  ವಾಂಗ್ಮಯವೂ, ಸಾಮ್ರಾಜ್ಯ ಸ್ಥಾಪನೆ ಹೀಗೆ ಅದೆಷ್ಟು ಆಯಾಮಗಳಿಂದ ನೋಡಿದರು, ವಿದ್ಯಾರಣ್ಯರು ಯತಿಶ್ರೇಷ್ಟರಾಗಿ ಮಾತ್ರವಲ್ಲದೇ ಪ್ರತಿಯೊಬ್ಬರಿಗೂ ಆದರ್ಶ ಪುರುಷರಾಗಿ ಕಾಣುತ್ತಾರೆ. ವಿಜಯನಗರ ಸಾಮ್ರಾಜ್ಯವನ್ನು ಕೇವಲ ಒಂದು ಸಾಮ್ರಾಜ್ಯವನ್ನಾಗಿ ನಿರ್ಮಿಸದೇ ಭಾರತೀಯರ ರಾಜಕೀಯ-ಆರ್ಥಿಕ ಪುನರುತ್ಥಾನದ ಸಾಮ್ರಾಜ್ಯವನ್ನಾಗಿಸಿದ ವಿದ್ಯಾರಣ್ಯರದ್ದು ವರ್ಣನೆಗೆ ನಿಲುಕದ ಆದರ್ಶ ವ್ಯಕ್ತಿತ್ವ.

ವಿಪರ್ಯಾಸವೆಂದರೆ, ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದ್ದು ಇದೇ ವಿದ್ಯಾರಣ್ಯರಾ ? ಎಂಬ ಪ್ರಶ್ನೆಗಳೂ ಈಗಾಗಲೇ ಉದ್ಭವಿಸಿಯಾಗಿದೆ. ಚಿತ್ತ ಸ್ವಾಸ್ಥ್ಯವನ್ನು ಕಳೆದುಕೊಂಡವರು ಮಾತ್ರ ಇಂತಹ ಅಸಂಬದ್ಧ ಪ್ರಶ್ನೆಗಳನ್ನು ಮುಂದಿಡಲು ಸಾಧ್ಯ. ಸುವರ್ಣಯುಗವನ್ನು ಕಂಡ ಭವ್ಯ ಸಾಮ್ರಾಜ್ಯ ಅಧಃಪತನಗೊಳ್ಳಲು, ಸುಂದರ ಶಿಲ್ಪಕಲಾಕೃತಿಗಳು ನಾಶವಾಗಲು ಇದೇ ಶೈವ-ವೈಷ್ಣವರ ಕಲಹ ಕಾರಣ ಎಂದು ಕೆಲವರು ಷರಾ ಎಳೆದು ಸುಳ್ಳು ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇಂತಹ ಆಧುನಿಕ ಇತಿಹಾಸಕಾರರು ವಿದ್ಯಾರಣ್ಯರನ್ನು ಮರೆಸುವ ಜೊತೆಗೇ ಏನೆಲ್ಲಾ ಮಾಡಿದರು. ನಮ್ಮ ಸೂಪ್ತಪ್ರಜ್ನೆಯಿಂದ ವಿದ್ಯಾರಣ್ಯರನ್ನು ನಿಧಾನವಾಗಿ ಜಾರಿಸಿದರೆ, ವಿಜಯನಗರ ಸ್ಥಾಪನೆ ಮಾಡಿದ ವಿದ್ಯಾರಣ್ಯರು ಇವರೇನಾ? ಎಂದು ಪ್ರಶ್ನೆ ಮಾಡುತ್ತಿರುವವರು,  ನಾಳೆ ವಿಜಯನಗರ ಸಾಮ್ರಾಜ್ಯವೂ ಸೇರಿದಂತೆ  ವಿದ್ಯಾರಣ್ಯರೂ ಕಾಲ್ಪನಿಕ, ನಿಜವಾಗಿ ಅಂತಹ ವ್ಯಕ್ತಿಗಳೇ ಇರಲಿಲ್ಲ ಎಂದೂ ಷರಾ ಎಳೆಯುತ್ತಾರೆ ಎಚ್ಚರ.

(ಚಿತ್ರ ಕೃಪೆ:http://www.sringeri.net)

2 ಟಿಪ್ಪಣಿಗಳು Post a comment
 1. ಮೇ 14 2016

  ನಿಮ್ಮ ಕಡೆಯ ವಾಕ್ಯ ಬಹಳ ಮಾರ್ಮಿಕವಾದದ್ದು. ಇದನ್ನೇ ಕಮ್ಮುನೆಷ್ಟರು,ಕಾಂಗಿಗಳು,ದೇಶದ್ರೋಹಿಗಳು, ಹೊರದೇಶಗಳಿಂದ ಬರುವ ಎಂಜಲುಕಾಸಿಗೆ ನಾಲಿಗೆ ಒಡ್ಡಿ ಇತಿಹಾಸ ತಿರುಚುವ ಎಲ್ಲರೂ ಮಾಡುತ್ತಿರುವುದು. ಇದೇ ಕಾರಣಕ್ಕಾಗಿ ಬ್ರಾಹ್ಮಣನಿಂದನೆಯ ಕರ್ಯಕ್ರಮವನ್ನೂ ವ್ಯವಸ್ಥಿತವಾಗಿ ಬೆಳೆಸಲಾಗುತ್ತಿದೆ. ಇದಕ್ಕೆ ದೇಶದಲ್ಲಿರುವ ಪಟ್ಟಭದ್ರ ಕ್ರಿಶ್ಚಿಯನ್ ಸಂಸ್ಥೆಗಳೂ,ಮುಸಲ್ಮಾನ ಸಂಸ್ಥೆಗಳು ಬೇನಾಮಿ ಹಣ ತೊಡಗಿಸುತ್ತಿವೆ.

  ಉತ್ತರ
 2. ಮುರಳೀಧರ ಕುಲಕರ್ಣಿ
  ಮೇ 20 2021

  ಶ್ರೀ ಶ್ರೀ ಜಗದ್ಗುರು ವಿದ್ಯಾರಣ್ಯರ ಬಗ್ಗೆ ಹಾಗೂ ಅಂದಿನ ರಾಜಕೀಯದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಹಕರಿಸಿ. ಶ್ರೀ ಶ್ರೀ ಶ್ರೀ ವಿದ್ಯಾರಣ್ಯ ಜಗದ್ಗುರು ಗೋಳನ್ನು ಮುಖ್ಯ ವಾಹಿನಿಗೆ ತರುವ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಇದೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments