ವಿಷಯದ ವಿವರಗಳಿಗೆ ದಾಟಿರಿ

ಜೂನ್ 19, 2016

4

ಅಪ್ಪನ ಪತ್ರ

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

Untitled58

ಮಗನನ್ನು ಬದುಕಿನ ಬೆಟ್ಟ ಹತ್ತಿ ತೋರಿಸುವ ಅಪ್ಪ
ಪ್ರೀತಿಯ ಅಶ್ವಿನ್,
ಬಹಳ ದಿನಗಳಿಂದ ನಿನಗೆ ಪತ್ರ ಬರೆದಿರಲಿಲ್ಲ. ಬರೆದು ಹೇಳುವಂಥಾದ್ದೇನೋ ಬಹಳ ಇತ್ತೆನ್ನೋಣ. ಆದರೆ, ನನ್ನ ಪತ್ರಗಳಿಂದ ನಿನ್ನ ಓದಿಗೆಲ್ಲಿ ಕಿರಿಕಿರಿಯಾದೀತೋ ಅಂತ ಸ್ವಲ್ಪ ಸಮಯ ಪೆನ್ನಿಗೂ ಅಂಚೆಯಣ್ಣನಿಗೂ ವಿಶ್ರಾಂತಿ ಕೊಟ್ಟಿದ್ದೆ. ಅಂದ ಹಾಗೆ, ಪರೀಕ್ಷೆ ಹೇಗೆ ಮಾಡಿದ್ದೀಯ? ನಿನ್ನಮ್ಮ ಇಲ್ಲಿ ಮೂರು ಹೊತ್ತು ಕೈ ಮುಗಿಯುವ ರಾಘವೇಂದ್ರ ಸ್ವಾಮಿಗಳಿಗೆ ನೀನು ನಿರಾಸೆ ಮಾಡುವುದಿಲ್ಲವೆಂದು ನಂಬುತ್ತೇನೆ!

ಕಳೆದ ಸಲ ಕಾಗದ ಬರೆದಾಗ, ನಿನ್ನ ಇಷ್ಟದ ಹತ್ತು ಸಿನೆಮದ ಹೆಸರು ಹೇಳು, ಬಿಡುವಾದಾಗ ನೋಡುತ್ತೇನೆ ಎಂದು ಹೇಳಿದ್ದಿ. ಒಳ್ಳೆಯ ಯೋಚನೆಯೇ. ಆದರೆ, ನನಗೆ ನನ್ನ ತಾರುಣ್ಯದಲ್ಲಿ ರುಚಿಸಿದ್ದ ಸಿನೆಮಗಳು ನಿನಗೂ – ಈ ಜಸ್ಟಿನ್ ಬೀಬರನ ಕಾಲದಲ್ಲೂ ರುಚಿಸುತ್ತವೋ? ದೃಢವಾಗಿ ಹೇಳಲಾರೆ! ಅದಕ್ಕೇ, ಹತ್ತು ಚಿತ್ರಗಳ ಪಟ್ಟಿ ಕೊಟ್ಟು ನಿನ್ನನ್ನು ಗೋಳು ಹುಯ್ದುಕೊಳ್ಳುವುದಕ್ಕಿಂತ ಕೇವಲ ಒಂದು ಸಿನೆಮದ ಬಗ್ಗೆ ಮಾತ್ರ ನಿನ್ನ ಜೊತೆ ಮಾತಾಡೋಣ ಅಂದುಕೊಂಡಿದ್ದೇನೆ. ಇದು ಇಷ್ಟವಾದರೆ, ಉಳಿದವುಗಳ ಬಗ್ಗೆ ಚರ್ಚಿಸಬಹುದು. “ಪೋಸ್ಟ್ ಮೆನ್ ಇನ್ ದ ಮೌಂಟನ್ಸ್” ಎಂದು ಇದರ ಹೆಸರು. ಚೀನೀ ಭಾಷೆಯ, ಆದರೆ ನಮ್ಮ ದೇಶದ ಯಾವುದೇ ಹಳ್ಳಿಯಲ್ಲೂ ನಡೆಯಬಹುದಾದ ಚಿತ್ರ ಇದು. ಹೆಸರೇ ಹೇಳುವಂತೆ, ಪರ್ವತದ ತಪ್ಪಲಿನ ಒಂದು ಹಳ್ಳಿಗೆ ಅಂಚೆ ಬಟವಾಡೆ ಮಾಡುವ ಇಬ್ಬರು ಅಂಚೆಯಾಳುಗಳ ಕತೆ ಇದು. ಈ ಕತೆಯ ಮಹತ್ವ ಅರಿವಾಗಬೇಕಾದರೆ ನೀನು ಕಾಲಯಂತ್ರದಲ್ಲಿ ಕನಿಷ್ಠ ನಲವತ್ತು ವರ್ಷ ಹಿಂದೆ ಹೋಗಬೇಕಾಗುತ್ತದೆ! 1980ರ ಆಸುಪಾಸಿನಲ್ಲಿ ಮಲೆನಾಡಿನಲ್ಲಿದ್ದ ಹಳ್ಳಿ ಅದು ಅಂದುಕೋ. ನಗರದ ಯಾವ ಕನಸು-ಆಶೋತ್ತರಗಳನ್ನೂ ತನ್ನೊಳಗೆ ಬಿಟ್ಟುಕೊಳ್ಳದ ಆ ಹಳ್ಳಿಯಲ್ಲಿ ಒಂದು ಹಿಡಿ ಅಕ್ಕಿ ಬೇಕಾದರೂ ಐದು ಮೈಲಿ ನಡೆದು ಕಮ್ತಿಯರ ಅಂಗಡಿಗೆ ಹೋಗಬೇಕು. ದಿನಕ್ಕೆರಡು ಸಲ ಬಂದುಹೋಗುವ ಬಸ್ಸೇ ಒಂದು ಲಕ್ಷುರಿ ಅವರಿಗೆ. ನದಿಗೆ ಸೇತುವೆ ಇಲ್ಲ; ಶಾಲೆಗೆ ಹೆಂಚುಗಳಿಲ್ಲ; ಕಡಿದಾದ ಗುಡ್ಡಕ್ಕೆ ಮೆಟ್ಟಿಲುಗಳಿಲ್ಲ; ಮನೆಗಳಿಗೆ ಕರೆಂಟಿಲ್ಲ; ಪತ್ರಿಕೆ-ಟಿವಿಗಳಿಲ್ಲ; ಏನೆಂದರೆ ಏನೂ ಇಲ್ಲದ – ಹೊರಜಗತ್ತಿನ ಜೊತೆ ಯಾವೊಂದು ಸಂಪರ್ಕವೂ ಇಲ್ಲದ; ಆದರೆ ಹಚ್ಚಹಸಿರಿನ ಕಂಬಳಿ ಹೊದ್ದು ಬೆಚ್ಚನೆ ಮಲಗಿದ ಅದ್ಭುತ ಮಲೆನಾಡಿನ ಬೆಟ್ಟದ ತಪ್ಪಲು ಅದು. ವಾರಕ್ಕೊಮ್ಮೆಯೋ ಹದಿನೈದು ದಿನಕ್ಕೊಮ್ಮೆಯೋ ಪತ್ರಗಳ ಮೂಟೆಯನ್ನು ಬೆನ್ನಲ್ಲಿ ಹೊತ್ತುಬರುವ ಅಂಚೆಪೇದೆಯೇ ಅವರ ಪಾಲಿಗೆ ದೇವದೂತ! ಅವನೊಬ್ಬನೇ ಅವರ ಹಳ್ಳಿಯನ್ನು ಹೊರಜಗತ್ತಿನೊಂದಿಗೆ ಬೆಸೆಯುವ ಸ್ನೇಹಸೇತು!

MCDPOIN EC001ಆದರೆ, ಈಗ ಈ ಅಂಚೆಯಣ್ಣನಿಗೆ ವಯಸ್ಸಾಗಿದೆ. ಕಾಲಲ್ಲಿ ಹಿಂದಿನ ಕಸುವಿಲ್ಲ. ಬೆಟ್ಟ ಹತ್ತಿ ಇಳಿಯುವುದು ದುಸ್ಸಾಹಸವಾಗುತ್ತಿದೆ. ಇನ್ನೂ ಎಷ್ಟು ವರ್ಷಾಂತ ಈ ಬೆಟ್ಟ ಹತ್ತಿಳಿಯುವ ಕೆಲಸ ಮಾಡಲಾದೀತು ಎಂದು ಇಲಾಖೆಯಲ್ಲಿ ದುಮ್ಮಾನ ತೋಡಿಕೊಳ್ಳುತ್ತಾನೆ. ಮೇಲಧಿಕಾರಿಗಳು, ಅವನಿಗೆ ಅಕಾಲಿಕ ನಿವೃತ್ತಿ ಕೊಟ್ಟು, ಅವನ ಮಗನನ್ನು ಈ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಪೋಸ್ಟ್ ಮ್ಯಾನ್ ಎಂದರೆ ಸಮವಸ್ತ್ರ, ಸರಕಾರೀ ಸಂಬಳ, ಭತ್ಯೆ, ಮರ್ಯಾದೆ ಎಂದೆಲ್ಲ ಬಗೆಬಗೆಯ ಕನಸುಗಳನ್ನು ಕಟ್ಟಿಕೊಂಡಿರುವ ಮಗನಿಗೂ ಈ ನೌಕರಿಯ ಮೇಲೆ ಅಮಿತ ಅಭಿಮಾನ ಇರುವಂತಿದೆ. 24ರ ಈ ಹುಡುಗ ತನ್ನ ಉದ್ಯೋಗ ಶುರುಮಾಡುವ ಮೊದಲ ದಿನ, ಬಹಳ ಉತ್ಸಾಹದಿಂದ ಹೊರಡುತ್ತಾನೆ. ಆದರೆ, ಅವನಿಗೆ ಸಾಥ್ ಕೊಡಬೇಕಿದ್ದ ಸಾಕುನಾಯಿ ಮಾತ್ರ ಅವನೊಡನೆ ಹೋಗಲು ಸುತಾರಾಂ ಕೇಳುವುದಿಲ್ಲ. ಇಷ್ಟು ವರ್ಷ ತನ್ನ ಯಜಮಾನನೊಡನೆ ಬೆಟ್ಟದ ತಪ್ಪಲಿನ ಹಳ್ಳಿಗಳಿಗೆ ಹೋಗಿಬರುತ್ತಿದ್ದ ಅದಕ್ಕೆ ಇಂದು ಈ ಹುಡುಗನೊಡನೆ ಹೋಗಬೇಕಾಗಿದೆ; ತಂದೆಯ ನೌಕರಿ ಮಗನಿಗೆ ಬಂದಿದೆ ಎಂದು ಗೊತ್ತಿದ್ದರೆ ತಾನೆ! ನಾಯಿಗೆ ಇಷ್ಟು ವರ್ಷ ಅಲೆದಾಡಿ ಬಂದ ದಾರಿ ಸರಿಯಾಗಿ ಗೊತ್ತಿದೆ. ಆದರೆ, ಮೊದಲ ಬಾರಿ ಪಾದಯಾತ್ರೆಗೆ ಹೊರಟಿರುವ ಮಗರಾಯನಿಗೆ ಅವೆಲ್ಲ ಏನೂ ತಿಳಿದಿಲ್ಲ! ಕೊನೆಗೆ, ತಂದೆಯೇ, ಇದು ಕೊನೆಯ ಸಲ ಎನ್ನುವಂತೆ ಮತ್ತೆ ಹೊರಡುತ್ತಾನೆ. ಅವನ ಜೊತೆ ನಾಯಿಯೂ ಹೊರಡುತ್ತದೆ. ಅಪ್ಪ-ಮಗ-ನಾಯಿ ಮೂರು ಜನ ಮೂರು ರಾತ್ರಿ-ಎರಡು ಹಗಲುಗಳ ಯಾತ್ರೆ ಶುರುಮಾಡುತ್ತಾರೆ. ಆ ಮೂರು ದಿನದಲ್ಲಿ ಏನೇನು ನಡೆಯುತ್ತದೆ ಎನ್ನುವುದೇ ಸಿನೆಮದ ಕಥಾವಸ್ತು.

Postmen in the mountains 4ಈ ಜಗತ್ತಿನಲ್ಲಿ ಅಪ್ಪ ಎಂಬ ವಸ್ತುವಿಗೆ ದೇವರು ತುಂಬ ಕಷ್ಟ ಕೊಟ್ಟಿದ್ದಾನಪ್ಪ. ಒಂಬತ್ತು ತಿಂಗಳು ಹೆತ್ತು ಹೊರುವುದು ಯಾರು? ಅಮ್ಮ. ಆಮೇಲೆ ಮೊಲೆಯೂಡಿಸಿ ಜೋಗುಳ ಹಾಡಿ ಆಡಿ ಕುಣಿಸುವವರು? ಅಮ್ಮ. ಮಗುವಿನ ಬೇಕುಬೇಡಗಳಿಗೆಲ್ಲ ಕರಗಿ ನೀರಾಗಿ ಸ್ಪಂದಿಸುವವರು? ಅಮ್ಮ. ಇವೆಲ್ಲ ಕೆಲಸಗಳನ್ನು ಸರಾಗವಾಗಿ ಮಾಡಲುಬೇಕಾದ ಶಕ್ತಿ, ಜಾಣ್ಮೆಯನ್ನು ಹೆಂಗಸಿಗೆ ಕಲಿಸಿಕೊಟ್ಟ ದೇವರು ಗಂಡಿಗೇನು ಉಳಿಸಿದ್ದಾನೆ? ಈ ಗಂಡಿಗೆ ತನ್ನದೇ ಮಗುವನ್ನು ಹೇಗೆ ಹಿಡಿಯಬೇಕೆಂದು ಗೊತ್ತಿರೋದಿಲ್ಲ. ತೊಟ್ಟಿಲು ತೂಗುವಾಗ ಹಾಡಲು ಕೂಡ ಬರೋದಿಲ್ಲ. ಅಮ್ಮನಷ್ಟು ಸರಾಗವಾಗಿ ಪ್ರೀತಿ ಉಕ್ಕಿದಾಗೆಲ್ಲ ಅಪ್ಪಿಸೆಳೆದು ಮುತ್ತಿಡುವ ಧೈರ್ಯವೂ ಅವನಿಗಿಲ್ಲ! ಸಂಸಾರದಲ್ಲಿ ಅವನೊಬ್ಬ ಪರಕೀಯ. ಅವನ ಮುಖ ನೋಡಿದರೆ, ಒರಟು ಕೈಯ ಅಪ್ಪುಗೆಗೆ ಸಿಕ್ಕರೆ ಸ್ವಂತ ಮಗು ಕೂಡ ಅಪ್ಪ ಎಂಬ ವಿನಾಯಿತಿ ತೋರಿಸದೆ ಕಿಟಾರನೆ ಕಿರುಚಿಕೊಳ್ಳುತ್ತದೆ! ಮೊದಮೊದಲು ಮಗುವಿಗೆ ಈ ಮನುಷ್ಯ ಮನೆಯಲ್ಲಿ ಯಾಕೆ ಇದ್ದಾನೆ, ಅವನಿಗೂ ತನ್ನ ಹಾಲುಣಿಸುವ ಅಮ್ಮನಿಗೂ ಏನು ಸಂಬಂಧ ಎಂದು ಕೂಡ ಗೊತ್ತಿರುವುದಿಲ್ಲ! ದಿನದ ಹೆಚ್ಚುಹೊತ್ತು ಹೊರಗೆ ದುಡಿಯುವ ಅಪ್ಪನಿದ್ದರಂತೂ ಮಕ್ಕಳು ಅವನಿಂದ ಇನ್ನೂ ದೂರಾಗುತ್ತವೆ. ಅವನು ಮನೆಯಲ್ಲಿರುವಷ್ಟು ಹೊತ್ತು ಅವನ ಕಣ್ಣುತಪ್ಪಿಸಿಕೊಂಡು ಓಡಾಡುತ್ತವೆ. ತಮ್ಮ ಸೂಕ್ಷ್ಮಗುಟ್ಟುಗಳನ್ನು ಅವನ ಜೊತೆ ಹಂಚಿಕೊಳ್ಳಬೇಕೆಂದು ಅವಕ್ಕೆಂದೂ ಅನಿಸುವುದಿಲ್ಲ. ಹಾಗಂತ ಅವರ ನಡುವೆ ಭಿನ್ನಾಭಿಪ್ರಾಯ ಇರುವುದಿಲ್ಲ. ಮಗ ಅಪ್ಪನನ್ನು ಎಷ್ಟು ಗೂಢವಾಗಿ ಪ್ರೀತಿಸುತ್ತಿರುತ್ತಾನೋ ಅಪ್ಪನೂ ತನ್ನ ಮಗನ ಮೇಲೆ ಸಾಕುಸಾಕೆನಿಸುವಷ್ಟು ಕಾಳಜಿ ಇಟ್ಟಿರುತ್ತಾನೆ. ಅಪ್ಪ-ಮಕ್ಕಳ ಸಂಬಂಧ ಹೀಗೆ ಒಂದು ವಿಚಿತ್ರ ರೀತಿಯಲ್ಲಿ ರೂಪು ಪಡೆಯುತ್ತಿರುತ್ತದೆ. “ಬೆಟ್ಟದ ಮೇಲಿನ ಅಂಚೆಪೇದೆಗಳು” ಚಿತ್ರದಲ್ಲೂ ಆಗುವುದು ಹಾಗೆಯೇ. ಅಪ್ಪನನ್ನು ಬೆನ್ನ ಮೇಲೆ ಹೊತ್ತು ಹಳ್ಳ ದಾಟುತ್ತಿರುವಾಗ ಮಗ, “ತನ್ನ ಅಪ್ಪನನ್ನು ಹೊರಬಲ್ಲವನಾದಾಗ ಮಗ ದೊಡ್ಡವನಾದ ಎನ್ನುತ್ತಾರೆ. ನಾನು ಚಿಕ್ಕವನಿದ್ದಾಗ ಅಪ್ಪ ಇಷ್ಟೂದ್ದ ಕಾಣುತ್ತಿದ್ದ. ಅಬ್ಬಾ ಇವನನ್ನು ಎಂದಾದರೂ ಎತ್ತಲು ಸಾಧ್ಯವಾದೀತೇ ಎಂದು ಯೋಚಿಸುತ್ತಿದ್ದೆ! ಆದರೆ ಹದಿಹರೆಯಕ್ಕೆ ಕಾಲಿಡುವ ಹೊತ್ತಿಗೆ ಅಪ್ಪನಿಗಿಂತ ಎತ್ತರ ಬೆಳೆದುಬಿಟ್ಟೆ!” ಎಂದುಕೊಳ್ಳುತ್ತಿರುವಾಗಲೇ, ಬೆನ್ನಮೇಲೆ ಕೂತ ಅಪ್ಪ, “ಇವನ ಕತ್ತಿನಲ್ಲಿ ಎಂದೋ ಆಗಿರಬಹುದಾದ ಗಾಯವನ್ನು ನಾನು ಇದುವರೆಗೂ ನೋಡೇ ಇರಲಿಲ್ಲವಲ್ಲ” ಎಂದು ಅಚ್ಚರಿಪಡುತ್ತಿರುತ್ತಾನೆ. ಹಳ್ಳ ದಾಟಿ ಈಚೆ ಬದಿಗೆ ಬರುವಷ್ಟರಲ್ಲಿ ಇಬ್ಬರ ಹೃದಯಗಳೂ ಕರಗಿ ನೀರಾಗಿ ಬೆಲ್ಲದ ಪಾಕದಂತೆ ಹರಿಯುತ್ತಿವೆ. “ಹೋಗಪ್ಪ, ನೀನು ಅಂಚೆಯ ಚೀಲದಷ್ಟೂ ಭಾರವಾಗಿಲ್ಲ” ಎನ್ನುತ್ತಾನೆ ಮಗ. ಮಗನ ಮುಖ ತಪ್ಪಿಸಿ ಮತ್ತೆಲ್ಲೋ ನೋಡುತ್ತ ಆ ಅಪ್ಪ ಕಣ್ಣೀರೊರೆಸಿಕೊಂಡಾಗ, ನೋಡುಗನ ಗಂಟಲು ಉಬ್ಬಿಬರದಿದ್ದರೆ ಕೇಳು!

ಮಗನೊಬ್ಬನನ್ನೇ ಕಳಿಸಿ ತಾನು ಮನೆಯಲ್ಲಿ ಉಳಿಯಲು ನಿರ್ಧರಿಸಿದಂತೆ ನಟಿಸುವ ಅಪ್ಪ, ನಿಜವಾಗಿ ನೋಡಿದರೆ, ತಾನೂ ಮಗನ ಜೊತೆ ಹೋಗಿಬರಬೇಕೆಂದು ಹಂಚಿಕೆ ಹಾಕಿದ್ದ ಎನ್ನುವುದು ನಮಗೆ ಗೊತ್ತಾಗುವುದು, ಒಂದು ಪತ್ರವನ್ನು ಅವನು ತನ್ನಲ್ಲೇ ಉಳಿಸಿಕೊಂಡು ಕೊನೆಗೆ ಅದನ್ನು ಅಜ್ಜಿಯೊಬ್ಬಳಿಗೆ ತಲುಪಿಸಲು ಹೋದಾಗಲೇ. ಅಜ್ಜಿಯ ಮಗ ನಗರದ ಯುನಿವರ್ಸಿಟಿಯಲ್ಲಿ ಕಲಿತ ಮೇಲೆ ಇತ್ತ ಒಂದು ಸಲವೂ ತಲೆ ಹಾಕಿಲ್ಲ. ಸ್ವಂತ ತಂದೆ ತೀರಿಕೊಂಡಾಗಲೂ ಸಂಸ್ಕಾರ ಮಾಡಲು ಊರಿಗೆ ಬಂದಿಲ್ಲ. ಅಂತಹ ಮಗ ಪ್ರತಿ ಸಲವೂ ಪತ್ರ ಬರೆದು ವಿಚಾರಿಸುತ್ತಿದ್ದಾನೆಂದು ಅಜ್ಜಿಯನ್ನು ನಂಬಿಸಿ ಸುಳ್ಳುಸುಳ್ಳೇ ಖಾಲಿ ಕಾಗದವನ್ನು ಓದಿ, ಆಕೆಗೆ ಸಮಾಧಾನ ಹೇಳುವ ಅಪ್ಪ, ಒತ್ತಾಯಪಡಿಸಿ ತನ್ನ ಮಗನಲ್ಲೂ ಕಾಗದ ಓದಲು ಹೇಳುತ್ತಾನೆ. ಇಡೀ ಚಿತ್ರದಲ್ಲಿ ಕೇವಲ ಐದು ನಿಮಿಷದಲ್ಲಿ ಛಕ್ಕನೆ ಬಂದುಹೋಗುವ ಈ ದೃಶ್ಯ ತನ್ನಷ್ಟಕ್ಕೇ ಒಂದು ಕಾವ್ಯದಂತಿದೆ. ಸಂಸ್ಕೃತಿಯನ್ನು ಒಂದು ತಲೆಮಾರು ತನ್ನ ಮುಂದಿನದಕ್ಕೆ ಹೇಗೆ ವರ್ಗಾಯಿಸಬೇಕೆಂಬುದನ್ನು ಇದಕ್ಕಿಂತ ಚೆನ್ನಾಗಿ ಯಾವ ಮಹಾತ್ಮನೂ ವಿವರಿಸಿದ್ದನ್ನು ನಾನು ನೋಡಿಲ್ಲ. ದಾರಿಯ ಮಧ್ಯೆ ಒಂದು ಹಳ್ಳಿಯಲ್ಲಿ ಉಳಿದುಕೊಳ್ಳಬೇಕಾದಾಗ, ಅಲ್ಲಿನ ಒಂದು ಮುಗ್ಧ ಹುಡುಗಿಯನ್ನು ತಂದೆ ತನ್ನ ಮಗನಿಗೆ ಪರಿಚಯ ಮಾಡಿಸುತ್ತಾನೆ. ಅವರಿಬ್ಬರೂ ಮದುವೆಯಾಗಬೇಕೆಂದು ಅವನ ಆಸೆ. ಅವನ ಹೆಂಡತಿ ಕೂಡ ಇಂಥಾದ್ದೇ ಒಂದು ಪ್ರಯಾಣದಲ್ಲಿ ಅವನಿಗೆ ಪರಿಚಯವಾದ ಬೆಟ್ಟದ ಹುಡುಗಿಯೇ. ಮಗ ಆ ಹಳ್ಳಿಹುಡುಗಿಯ ಜೊತೆ ಖುಷಿಖುಷಿಯಾಗಿ ಓಡಾಡಿಕೊಂಡಿರುವುದನ್ನು ನೋಡಿದಾಗ ತಂದೆಗೆ ಸಮಾಧಾನವಾಗುತ್ತದೆ. ಅಂತೂ ಅವಳನ್ನು ಮೆಚ್ಚಿದ್ದಾನೆ, ಮದುವೆಗೆ ಒಪ್ಪಿಸುವುದೇನೂ ಕಷ್ಟವಲ್ಲ ಎಂದುಕೊಂಡು, ನಡೆಯುತ್ತ ಹೋಗುತ್ತಿರುವಾಗ ಮದುವೆಯ ಪೀಠಿಕೆ ಹಾಕುತ್ತಾನೆ. Postmen in the mountains 2“ಹುಡುಗಿಯೇನೋ ಒಳ್ಳೆಯವಳೇ.. ಆದರೆ..” ಎಂದು ಮಗ ರಾಗ ತೆಗೆಯುತ್ತಾನೆ. ರಾಗವೇನೋ ಎಳೆದ, ಆದರೆ ಯಾವ ಕಾರಣಕ್ಕೆ ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಮಾತ್ರ ಹುಡುಗ ಹೇಳುವುದಿಲ್ಲ. ಕೊನೆಗೂ ಒತ್ತಾಯಪಡಿಸಿ ಕೇಳಿದಾಗ, “ಆ ಹುಡುಗಿ ನನಗೆ ಇಷ್ಟ; ಆದರೆ ಅವಳನ್ನು ಮದುವೆಯಾದರೆ ಆಕೆ ತನ್ನ ಈ ತವರನ್ನು ಬಿಟ್ಟು ಬರಬೇಕಾಗುತ್ತಲ್ಲ? ಅಮ್ಮನಂತೆ ಬೆಟ್ಟದಿಂದ ಇಳಿದು ನಮ್ಮೂರಲ್ಲಿ ಉಳಿದುಹೋಗಬೇಕಾಗುತ್ತಲ್ಲ ಅಂತ ಚಿಂತೆ ನನಗೆ” ಎನ್ನುತ್ತಾನೆ. ಅಪ್ಪ ಮೂಕನಾಗುತ್ತಾನೆ. ಇರಲಿ! ಪೂರ್ತಿ ಕತೆ ಹೇಳುತ್ತಾಹೋದರೆ ನಿನಗೆ ಚಿತ್ರ ನೋಡುವ ಉತ್ಸಾಹವಾದರೂ ಉಳಿಯುತ್ತೋ ಇಲ್ಲವೋ! ಪ್ರಯಾಣಗಳು ಮನುಷ್ಯರನ್ನು ಹೆಚ್ಚು ಹತ್ತಿರ ತರುತ್ತವೆ, ಅವರೊಳಗನ್ನು ತೋರಿಸುತ್ತವೆ; ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುವುದು ಸುಳ್ಳಲ್ಲ. ನಮ್ಮಲ್ಲಿ ಅದಕ್ಕೇ, ಮದುವೆಯಾದ ನವದಂಪತಿ ಹನಿಮೂನ್ ಹೋಗ್ತಾರಲ್ಲ! ಇಲ್ಲಿ ಅಂಚೆಪೇದೆಗಳು ಕೂಡ ಅಂಥಾದ್ದೊಂದು ಹನಿಮೂನ್‍ಅನ್ನು ಮೊದಲ ಬಾರಿಗೆ ಅನುಭವಿಸುತ್ತಿದ್ದಾರೆ ಎನ್ನಬಹುದು. ಅಪ್ಪ-ಮಗ ಇಬ್ಬರೂ ತಮ್ಮ ದೂರದೂರದ ಪಂಜರಗಳಿಂದ ಬಿಡಿಸಿಕೊಂಡು ಬಂದು ಒಂದಾಗುವ ಅದ್ಭುತವನ್ನು ಕೇವಲ ಬೆಟ್ಟ ಹತ್ತಿ ಇಳಿಯುವ ಮೂರು ದಿನದ ಕತೆಯಲ್ಲಿ ಹೇಳಿಮುಗಿಸಿರುವ ನಿರ್ದೇಶಕ ಒಬ್ಬ ಅದ್ಭುತ ಅಪ್ಪನೋ ಮಗನೋ ಆಗಿರಲೇಬೇಕು!

ಕೊನೆಯದಾಗಿ ಒಂದು ಮಾತು: ಇದು ಲೋಕದ ಎಲ್ಲ ಅಪ್ಪ-ಮಕ್ಕಳ ಸಿನೆಮ; ಆದ್ದರಿಂದ ನನ್ನ-ನಿನ್ನ ಸಿನೆಮವೂ ಹೌದು. “ನೋಡು” ಎಂದು ಪ್ರತ್ಯೇಕವಾಗಿ ಒತ್ತಾಯಿಸಬೇಕಿಲ್ಲ ತಾನೆ!
– ನಿನ್ನ ಅಪ್ಪ.

4 ಟಿಪ್ಪಣಿಗಳು Post a comment
 1. ಜೂನ್ 19 2016

  bahal chennagide sir

  ಉತ್ತರ
 2. K.Sreepathybhat
  ಜೂನ್ 21 2016

  Excellent story.

  ಉತ್ತರ
 3. ಜೂನ್ 21 2016

  ನಾನು DVD ಆರ್ಡರ್ ಮಾಡಿದೆ! ತುಂಬಾ ದುಬಾರಿ,ಆದರೂ ರೋಹಿತರ ನಿರೂಪಣೆ ಓದಿ,ಮಾಡದೆ ಇರಲಾಗಲಿಲ್ಲ!

  ಉತ್ತರ
 4. Jayatheertha Joshi
  ಜೂನ್ 22 2016

  Greatly presented and the bonding between Dad and son on their thoughts are seamless. “ಸಣ್ಣ ಬೀಜದ ಒಳಗೆ ತಾನೆ ವೃಕ್ಷ ಮಲಗಿಹುದು” ಅನ್ನುವ ಸಾಲುಗಳು ನೆನಪಾಗುತ್ತವೆ.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments