ಮನೆಯೊಂದು ಮೂರು ಬಾಗಿಲು…..
– ಮು ಅ ಶ್ರೀರಂಗ
೧. ಕೃಷ್ಣರಾಜಸಾಗರ ಆಣೆಕಟ್ಟು ಕಟ್ಟುವಾಗಲಿಂದ ಹಿಡಿದು ಇಲ್ಲಿಯತನಕ ನೂರು ವರ್ಷಗಳಿಗೂ ಮೀರಿ ಕಾವೇರಿ ನದಿ ನೀರಿನ ಹಂಚಿಕೆ ಮತ್ತಿತರ ವಿಷಯಗಳ ಗಲಾಟೆ ತಮಿಳುನಾಡು (ಅಂದಿನ ಮದ್ರಾಸ್ ರಾಜ್ಯ) ಮತ್ತು ನಮ್ಮ ನಡುವೆ ಇದೆ. ಶಾಸಕಾಂಗ, ನ್ಯಾಯಾಂಗ, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ ಹೀಗೆ ಅನೇಕ ವಿಷಯಗಳು ಹೆಣೆದುಕೊಂಡಿರುವ ಒಂದು ಸಮಸ್ಯೆ ಸಿನಿಮಾನಟರ, ಬುದ್ಧಿಜೀವಿಗಳ, ಸಾಹಿತಿಗಳ ಮೆರವಣಿಗೆ, ಅಬ್ಬರದ, ಆಕ್ರೋಶದ ಒಂದು ಹೇಳಿಕೆಯಿಂದ ಬಗೆ ಹರಿಯುತ್ತವೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಕೆಲವು ಪ್ರಚಾರಪ್ರಿಯ ಸಾಹಿತಿಗಳು ಗೋಕಾಕ್ ಚಳುವಳಿಯ ಉದಾಹರಣೆ ಕೊಟ್ಟು ಈಗಲೂ ಹಾಗೆ ಮಾಡಿದರೆ ರಾತ್ರಿ ಕಳೆದು ಬೆಳಗಾಗುವುದರವೊಳಗೆ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂಬ ಹೇಳಿಕೆಕೊಡುತ್ತಿದ್ದಾರೆ. ಆದರೆ ಗೋಕಾಕ್ ವರದಿಯ ಅನುಷ್ಠಾನ ಕಟ್ಟುನಿಟ್ಟಾಗಿ ಜಾರಿಯಾಗಿದೆಯೇ? ಇತ್ತೀಚಿಗೆ ತಾನೇ ಸುಪ್ರೀಂ ಕೋರ್ಟಿನಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡುವುದು ತಪ್ಪು ಎಂದು ಹೇಳಿ ‘ಮಾತೃ ಭಾಷೆ’ಗೆ ನಮ್ಮ ಸಂವಿಧಾನದ ಪ್ರಕಾರ ಬೇರೆ ವ್ಯಾಖ್ಯಾನ ನೀಡಿದೆ. ಖಾಸಗಿ ಶಾಲೆಗಳ ಒಕ್ಕೂಟದ ವಾದಕ್ಕೆ ಜಯ ಸಿಕ್ಕಿದೆ. ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ; ಮುಚ್ಚುತ್ತಿವೆ ಅಥವಾ ಮೂರ್ನಾಲಕ್ಕು ಶಾಲೆಗಳನ್ನು ಒಟ್ಟುಗೂಡಿಸಿ ಹಾಗೂ ಹೀಗೂ ಉಸಿರಾಡುವಂತೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯ ಜಾರಿಯೂ ಪೂರ್ಣಪ್ರಮಾಣದಲ್ಲಿ ಜಾರಿಯಾಗಲು ಸಂವಿಧಾನ, ನ್ಯಾಯಾಂಗದ ವಿಧಿಗಳ ಪ್ರಕಾರ ಆಗುತ್ತಿಲ್ಲ. ಇದೇನು ನಮ್ಮನ್ನಾಳುತ್ತಿರುವ, ಆಳಿದ ಸರ್ಕಾರಗಳ ‘ರಾಜಕೀಯ ಇಚ್ಚಾಶಕ್ತಿ’ಯ ಕೊರತೆಯೋ ಅಥವಾ ಆ ವರದಿಗಳಲ್ಲಿನ ಕೊರತೆಯೋ ತಿಳಿಯದಾಗಿದೆ. ಮತ್ತಷ್ಟು ಓದು