ದೇವರ ಪಟದ ಹಿಂದಿನ ಸೈಟು ಮಾರಾಟಕ್ಕಿದೆ!
– ರೋಹಿತ್ ಚಕ್ರತೀರ್ಥ
ನಮ್ಮ ಹಳ್ಳಿಮನೆಗಳ ಪಡಸಾಲೆಗಳ ನಾಲ್ಕೂ ಸುತ್ತು ಗೋಡೆಗಳಲ್ಲಿ ಚೌಕಟ್ಟಿನ ಪಟಗಳು ತೂಗಾಡುತ್ತಿದ್ದವು. ಧ್ಯಾನಾಸಕ್ತನಾಗಿ ಉನ್ಮೀಲಿತ ನೇತ್ರನಾದ ನೀಲಕಂಠ ಶಿವ, ಸಿಂಹವಾಹಿನಿ ದುರ್ಗೆ, ಸ್ಟುಡಿಯೋದಲ್ಲಿ ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟಂತಿರುವ ರಾಮಭದ್ರ ಮತ್ತವನ ಅವಿಭಕ್ತ ಸಂಸಾರ, ಹೆಂಡತಿಯಿಂದ ಕಾಲೊತ್ತಿಸಿಕೊಂಡು ಹಾವಿನ ಮೇಲೆ ಸುಖಾಸೀನನಾಗಿರುವ ಮಹಾವಿಷ್ಣು – ಹೀಗೆ ಒಂದು ರೀತಿಯಲ್ಲಿ ಜಗತ್ತಿನ ಮುಕ್ಕೋಟಿ ದೇವತೆಗಳೆಲ್ಲ ಈ ಮನೆಯಲ್ಲೇ ಝಂಡಾ ಹೂಡಿದ್ದಾರೆಂಬ ಭಾವನೆ ತರಿಸುವ ಪಟಗಳ ಚಿತ್ರಶಾಲೆಯಾಗಿತ್ತು ನಮ್ಮ ಪಡಸಾಲೆ. ದೇವರ ಭಯ ಮತ್ತು ಅದಕ್ಕಿಂತ ಮಿಗಿಲಾಗಿ, ಕೈ ಜಾರಿ ಬಿದ್ದು ಫಳಾರನೆ ಒಡೆದೇ ಹೋದರೆ ಬೆನ್ನು ಮುರಿಯಲಿದ್ದ ಅಜ್ಜನ ಭಯದಿಂದಾಗಿ ನಾವು ಈ ದೇವರ ಸಹವಾಸಕ್ಕೇ ಹೋಗುತ್ತಿರಲಿಲ್ಲ. ಆದರೆ ಆಗೀಗ ಆ ಪಟಗಳೆಡೆಯಲ್ಲಿ ಚಿಕ್‍ಚಿಕ್ ಚೀಂವ್ ಎಂಬ ದನಿ ಬಂದಾಗ ಮಾತ್ರ ಸ್ಟೂಲ್ ಹತ್ತಿ ಅಲ್ಲೇನಿದೆ ಎಂದು ಇಣುಕುವ ಕುತೂಹಲ ಚಿಗುರುತ್ತಿತ್ತು. ಅಲ್ಲಿ ನಮಗೆ ಕಾಣಿಸುತ್ತಿದ್ದುದು ಪುಟಾಣಿ ಗುಬ್ಬಚ್ಚಿಗಳ ಸಂಸಾರ. ದೇವರ ಪಟವನ್ನು ನಲವತ್ತೈದು ಡಿಗ್ರಿ ವಾರೆಯಾಗಿ ನೇತಾಡಿಸುತ್ತಿದ್ದುದರಿಂದ ಆ ಸಂದಿ ತಮ್ಮ ಮನೆ ಕಟ್ಟಲಿಕ್ಕೆಂದೇ ಮನುಷ್ಯ ಮಾಡಿಟ್ಟ ಏರ್ಪಾಟು ಎಂದು ಗುಬ್ಬಚ್ಚಿಗಳು ಬಗೆಯುತ್ತಿದ್ದವೋ ಏನೋ. ಉಗ್ರ ನರಸಿಂಹನಂಥ ಕಡುಕೋಪಿಷ್ಠ ದೇವರ ಪಟದ ಹಿಂದೆಯೂ ಅವು ನಿರಾತಂಕವಾಗಿ ತಮ್ಮ ಸಂಸಾರದ ಗುಡಾರ ಬಿಚ್ಚಿಕೊಳ್ಳುತ್ತಿದ್ದವು. ಮತ್ತಷ್ಟು ಓದು